ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಳಿಗೆ ರಸಗಳಿಗೆ - ಹರಟೆ ಮತ್ತೊಂದು ಲೆಕ್ಕ

By Super
|
Google Oneindia Kannada News

'ಅವರೀಗ ಹೆಚ್ಚುಕಡಿಮೆ ಮಾತ್ರೆಗಳ ಫಳ್ಹಾರದಿಂದಲೇ ಬದುಕೋದು!' - ತೀರಾ ಕಾಯಿಲೆಗೊಳಗಾಗಿ ಕಟ್ಟುನಿಟ್ಟಿನ ಪಥ್ಯದಲ್ಲಿ , ಮೂರ್ಹೊತ್ತೂ ಮಾತ್ರೆಗಳನ್ನು ತಿನ್ನಬೇಕಾದವರ ದುರ್ದೈವದ ಬಗ್ಗೆ ಹೇಳುವಾಗ ಬರುವ ಮಾತಿದು. ಮಾತ್ರೆಗಳು ನಮ್ಮ ಜೀವನವನ್ನು ಎಷ್ಟು ವ್ಯಾಪಿಸಿವೆಯೆಂದರೆ ಕಾಯಿಲೆ ಸಣ್ಣದಿರಲಿ ದೊಡ್ಡದಿರಲಿ ಅಥವಾ ಕಾಯಿಲೆಯೇ ಇಲ್ಲದಿರಲಿ ಒಮ್ಮೆಯಾದರೂ ಇದುವರೆಗೂ ಮಾತ್ರೆ ಸೇವಿಸದವರು ಸಿಗುವುದು ಬಹಳ ಕಷ್ಟವೇನೊ. ವ್ಯಂಗ್ಯವಾದರೂ ಕಟುಸತ್ಯವೆಂದರೆ ಇಂದು ಅತಿ ಜನಜನಿತ 'ಟಾಪ್‌ ತ್ರೀ' ಆಹಾರ ಗುಂಪುಗಳಲ್ಲಿ ಮಾತ್ರೆಗಳೂ ಒಂದು. (ಉಳಿದೆರಡು ಯಾವುವಿರಬಹುದು? ನಿಮ್ಮ ಊಹೆ ಸರಿ, ಐಸ್‌ಕ್ರೀಂ ಮತ್ತು ಚಾಕೋಲೇಟ್‌!)

ಈಗಿನ ಕಾಲದಲ್ಲಿ ಪ್ರತಿಯಾಂದಕ್ಕೂ ಮಾತ್ರೆಗಳ ಸಿದ್ಧೌಷಧವಿದೆ. 'ಮಗು ಹುಟ್ಟದಂತೆ ಮಾತ್ರೆ'ಯಿಂದ ಆರಂಭಿಸಿ, ಹುಟ್ಟಿದ ಮಗು ಆರೋಗ್ಯವಾಗಿ ಬೆಳೆದು ದೊಡ್ಡದಾಗಿ ಮುಂದೆ ವೃದ್ಧಾಪ್ಯವನ್ನು ಮುಂದೂಡುವವರೆಗೂ ಮಾತ್ರೆಗಳಿವೆ. ಬಕ್ಕತಲೆ ನಿವಾರಣೆಗೆ ಮಾತ್ರೆ, ತಲೆಯಾಳಗೆ ಬೈಹುಲ್ಲು ತುಂಬಿಕೊಳ್ಳದಂತೆ ಮಾತ್ರೆ. ಟೆನ್ಷನ್‌ ಹೆಚ್ಚಾಗದಂತೆ ಮಾತ್ರೆ, ಎಲ್ಲರ ಅಟೆನ್ಷನ್‌ ಗಳಿಸುವಂತಾಗಲೂ ಮಾತ್ರೆ. ಸಂಕೀರ್ಣ ಕಾಯಿಲೆಗಳಿದ್ದಾಗ ನಾಲ್ಕೈದು ನಮೂನೆಯ ಮಾತ್ರೆಗಳನ್ನು ಬೇರೆಬೇರೆ ಫ್ರೀಕ್ವೆನ್ಸಿಯಲ್ಲಿ ತೆಗೆದುಕೊಳ್ಳಬೇಕಾಗಿ ಬಂದರೆ ಯಾವಾಗ ಯಾವ ಮಾತ್ರೆ ಎಂದು ನಿರ್ಧರಿಸುವಲ್ಲೇ ಸಣ್ಣ ತಲೆನೋವು ಕಾಣಿಸಿಕೊಂಡು ಆರನೇ ವಿಧದ ಮಾತ್ರೆ ಬೇಕಾದೀತು! ಮತ್ತೆ ಕೆಲವೊಮ್ಮೆ ಕಾಯಿಲೆ ಗುಣವಾಗಲಿಕ್ಕೆ ಇಂಜೆಕ್ಷನ್‌, ಆ ಇಂಜೆಕ್ಷನ್‌ನ ನೋವು ಕಡಿಮೆಯಾಗಲಿಕ್ಕೆ ಮಾತ್ರೆ!

ಮೆಡಿಕಲ್‌ ರೆಪ್‌ಗಳು ಕೊಟ್ಟಿಡುವ ಫ್ರೀ ಸ್ಯಾಂಪಲ್‌ಗಳಿಂದಲೊ ಅಥವಾ ಫಾರ್ಮೆಸಿ ಕಂಪೆನಿಗಳೊಂದಿಗಿನ ಒಡಂಬಡಿಕೆಯಿಂದಲೊ ಅಥವಾ ಮಾತ್ರೆ ಬರೆದುಕೊಟ್ಟರೇ ಕಾಯಿಲೆ ವಾಸಿಯಾಗುವುದು ಎಂಬ ರೋಗಿಯ ವಿಶ್ವಾಸದಿಂದಲೋ ಒಟ್ಟಿನಲ್ಲಿ ವೈದ್ಯರಿಗೂ ಪ್ರತಿಯಾಂದಕ್ಕೂ ಮಾತ್ರೆಗಳನ್ನು ಶಿಫಾರಸು ಮಾಡುವ ಚಟ. Rx ಕೆಳಗೆ ವೈದ್ಯಲಿಪಿಯಲ್ಲಿ ಏನೋ ಗೀಚಿದ ಚೀಟಿಯಲ್ಲಿ 1-0-1 (ಬೆಳಿಗ್ಗೆ ಒಂದು, ರಾತ್ರೆ ಒಂದು) ಎಂತಲೋ 0-0-1 (ರಾತ್ರೆ ಮಾತ್ರ ಒಂದು) ಅಂತಲೋ ಮಾತ್ರೆಗಳ ಪ್ರಿಸ್ಕಿೃಪ್ಷನ್‌ ಇದ್ದರೇನೆ ರೋಗಿಗೂ ಸಮಾಧಾನ. ಇನ್ನು ಸ್ವಂತ ಚಿಕಿತ್ಸೆಗೆ ತೊಡಗಿ ಯಾವ್ಯಾವುದೋ ಮಾತ್ರೆಗಳನ್ನು ತಿಂದು ಅವಘಡ ಮಾಡಿಕೊಂಡವರೆಷ್ಟಿಲ್ಲ ? ಕ್ರೀಡಾಳುಗಳು ಉದ್ದೀಪನ ಮಾತ್ರೆಗಳನ್ನು ಸೇವಿಸಿ ಸಿಕ್ಕಿಬಿದ್ದಿಲ್ಲ ? ನಿದ್ದೆ ಮಾತ್ರೆಗಳನ್ನು ವಿಪರೀತ ಸೇವಿಸಿ ಚಿರನಿದ್ರೆ ಮಾಡಿದವರಿಲ್ಲ ? ಓಹ್‌, ಮಾತ್ರೆಗಳದಂತೂ ಸೀರಿಯಸ್‌ ವಿಚಾರ ಹೌದಾದರೂ ಇಲ್ಲಿ ನಮ್ಮದು ಬರೀ ಹರಟೆ, ಮತ್ತೊಂದು ಜಾಣ್ಮೆಲೆಕ್ಕ ಅಷ್ಟೆ.

ಚಿಕ್ಕಮಕ್ಕಳಿಗೆ ಅಪಸ್ಮಾರ-ಬಾಲಗ್ರಹ ಇತ್ಯಾದಿ ರೋಗಗಳು ಬರದಂತೆ 'ಚಿಹ್ನೆ'ಮಾತ್ರೆಯನ್ನು ಅರೆದು ಕುಡಿಸುವ ಕ್ರಮ ಈಗಲೂ ಕರಾವಳಿಯ ಗ್ರಾಮೀಣ ಪ್ರದೇಶಗಳಲ್ಲಿದೆ. ಅಮಾವಾಸ್ಯೆ, ಹುಣ್ಣಿಮೆ ಅಥವಾ ಪ್ರತಿ ಭಾನುವಾರ - ಹೀಗೆ ನೆನಪಿಟ್ಟುಕೊಳ್ಳಲು ಸುಲಭವಾಗುವಂತೆ ಈ ಮನೆಮದ್ದಿನ ಆವರ್ತನ. ನಾಗರೀಕತೆ ಕಾಲಿಟ್ಟಿರುವ ಹಳ್ಳಿಗಳಲ್ಲಿ ಚಿಕ್ಕಮಕ್ಕಳಿಗೆ ಮೂಳೆಗಳ ಆರೋಗ್ಯಕಾಗಿ ಕ್ಯಾಲ್ಸಿಯಂ ಸಾಂಡೋಜ್‌ ಮಾತ್ರೆಗಳನ್ನೂ ದಿನಕ್ಕೊಂದರಂತೆ ಜಗಿಯಲು ಕೊಡುವುದು ಇದೆ. ಸ್ಯಾಂಡೋಜ್‌ ಮಾತ್ರೆಗಳ ಡಬ್ಬಿಯೇ ಒಂದು ಆಟಿಗೆಯಿದ್ದಂತೆ! ಮಾತ್ರೆಗಳ ವಿಷಯದಲ್ಲೂ ನೋಡಿ - ಮಕ್ಕಳ ಆರೋಗ್ಯದ ಕಾಳಜಿಯುಳ್ಳ ಹಿರಿಯರು ನಿಯಮಿತವಾಗಿ ಮಾತ್ರೆಗಳನ್ನು ಮಕ್ಕಳಿಗೆ ತಿನ್ನಿಸಿದಂತೆಯೇ, ಅವು ವಿಧೇಯ ಮಕ್ಕಳಾಗಿ ದೊಡ್ಡವರಾದ ಮೇಲೆ ವೃದ್ಧ ಅಜ್ಜ-ಅಜ್ಜಿಯರಿಗೆ, ತಂದೆ-ತಾಯಿಗಳಿಗೇ ವೇಳೆಗನುಸಾರವಾಗಿ ಕ್ಲುಪ್ತವಾಗಿ ಔಷಧಿ ಕೊಡಿಸುವಂಥವರಾಗುತ್ತಾರೆ. ಊಟದ ನಂತರ ಅಜ್ಜನಿಗೆ ಮಾತ್ರೆ, ಜತೆಗೆ ಬಿಸಿನೀರಿನ ಲೋಟ ತಂದುಕೊಡುವ ಜಾಣ ಮೊಮ್ಮಕ್ಕಳಿರುವ ಮನೆಗಳಿರಲಿಲ್ಲವೆ? ಅವು ಅವಿಭಕ್ತ ಕುಟುಂಬಗಳ ದಿನಗಳು.

ಪುರಾತನ ಭಾರತೀಯ ಆಯುರ್ವೇದ ಪದ್ಧತಿಯ ಧನ್ವಂತರಿ, ಕಸ್ತೂರಿ, ಆಮೋದಿನಿ ಇತ್ಯಾದಿ ನಮಗೆಲ್ಲ ಗೊತ್ತಿರುವ ಹೆಸರುಗಳ ಅಥವಾ ಚಂದ್ರಪ್ರಭ, ಸೂರ್ಯಪ್ರಭ, ಮಾನಸಾಮೃತ, ನವಾಯಾಸ, ಸ್ವರ್ಣಾನಂದ ಇತ್ಯಾದಿ ವಿಶೇಷ ಆಕರ್ಷಕ ಹೆಸರುಗಳ ಮಾತ್ರೆಗಳ ಬಗ್ಗೆ ಕೇಳಿಗೊತ್ತಿರಬಹುದು. ಕಸ್ತೂರಿಮಾತ್ರೆಯಂತೂ ಎಷ್ಟು ಸಸಾರವೆಂದರೆ ಬಸ್‌ಸ್ಟಾಂಡ್‌ಗಳಲ್ಲಿ ಬಸ್ಸಿನ ಪ್ರಯಾಣಿಕರಿಗೆ ಕಸ್ತೂರಿಮಾತ್ರೆ, ಹಲ್ಲುನೋವಿನ ಔಷಧಿ ಮಾರುವ ದೃಶ್ಯವನ್ನು ನಾವೆಲ್ಲ ಕಂಡವರೇ. ಆಯುರ್ವೇದದಲ್ಲಿ (ಸಂಸ್ಕೃತ ಭಾಷೆಯಲ್ಲಿ) ಮಾತ್ರೆಗಳಿಗೆ 'ಗುಲಿಕಾ' ಎನ್ನುವುದು. ಅದರ ಕನ್ನಡ ರೂಪವೇ ಗುಳಿಗೆ. ಹಿಂದಿಯಲ್ಲಿ ಗೋಲಿ. ಗೋಲಾಕಾರದ್ದು , ಸಣ್ಣ ಗಾತ್ರದ್ದು ಆದ್ದರಿಂದ ಗುಲಿಕಾ.

ಇನ್ನೊಂದು ವೈದ್ಯಪದ್ಧತಿಯಾದ ಹೋಮಿಯೋಪತಿಯಲ್ಲಂತೂ ಯಾವುದೇ ಕಾಯಿಲೆಗೂ ಒಂದೇ ರೀತಿ ಕಾಣುವ ಮಾತ್ರೆಗಳು. ಅವೆಲ್ಲ ಸಣ್ಣಸಣ್ಣ ಬಿಳಿ ಮಣಿಗಳಂತೆ ಇರುತ್ತವೆ. ಅಲೋಪತಿ ಅಥವಾ 'ಇಂಗ್ಲಿಷ್‌ ಮೆಡಿಸಿನ್‌'ನಲ್ಲಿ ಮಾತ್ರ ವಿವಿಧ ಆಕಾರದ ವಿವಿಧ ಬಣ್ಣಗಳ ಮಾತ್ರೆಗಳು. ಅವನ್ನು ಗೋಲಿ ಎಂದು ಕರೆಯುವುದು (ವಿಕ್ಸ್‌ ಕಿ ಗೋಲಿ ಲೊ... ಖಿಚ್‌ಖಿಚ್‌ ದೂರ್‌ ಕರೊ...?) ಸರಿಯಲ್ಲವೇನೊ ಅಂತ ನನ್ನ ಅನಿಸಿಕೆ. ಚಪ್ಪಟೆಯಾಕಾರ, ಚೌಕಾಕಾರ ಇತ್ಯಾದಿ ಹೊಸಹೊಸ ನಮೂನೆಯ ಮಾತ್ರೆಗಳು ಬಂದ ಮೇಲೆ ಬಹುಷಃ ಇಂಗ್ಲೀಷಲ್ಲೂ 'ಪಿಲ್ಸ್‌'ನ ಬದಲು 'ಟಾಬ್ಲೆಟ್‌' ಪದ ಬಂತು. ಇನ್ನೂ ಮುಂದುವರೆದು 'ಕ್ಯಾಪ್ಸೂಲ್ಸ್‌' ಬಂದುವು. ವಿಷಯ ಮಾತ್ರ ಅದೇ - ಔಷಧಿಯ ಅತಿಸಾಂದ್ರ, ಘನೀಕೃತ, ಸಂಕ್ಷಿಪ್ತ ರೂಪ.

ಅಲೋಪತಿ ಮಾತ್ರೆಗಳ ಹೆಸರುಗಳದೊಂದು ವೈಶಿಷ್ಟ್ಯವಿರುತ್ತದೆ. ನಮಗೆ ಪರಿಚಿತವಿರುವ ಹೆಚ್ಚಿನ ಮಾತ್ರೆಗಳ ಹೆಸರು ನೋಡಿ: ಆಸ್ಪಿರಿನ್‌, ಅನಾಸಿನ್‌, ಕೋಲ್ಡರಿನ್‌, ನೊವಾಲ್ಜಿನ್‌, ಬ್ರುಫೆನ್‌, ಕ್ಲೊರೊಕ್ವಿನ್‌, ಸಾರಿಡೋನ್‌, ಒವಮಿನ್‌ (ಕಾರು-ಬಸ್ಸು ಪ್ರಯಾಣದಲ್ಲಿ ವಾಂತಿಯಾಗದಂತೆ ಈ ಮಾತ್ರೆ ತಗೋಳ್ತಾರಲ್ಲ ಕೆಲವರು?) - ಎಲ್ಲವೂ 'ನ್‌' ಎಂದು ಮುಕ್ತಾಯವಾಗುವ ಹೆಸರುಗಳನ್ನು ನೋಡಿದರೆ ಇಳಂಗೋವನ್‌, ವೇಲಾಯುಧನ್‌, ನೆಡುಮಾರನ್‌ ಇತ್ಯಾದಿ ತಮಿಳು ಹೆಸರುಗಳಂತೆ ಕೇಳಿಸುವುದಿಲ್ಲವೇ? ಅಥವಾ ಇನ್ನೂ ಸ್ವಲ್ಪ ಸ್ಟ್ರಾಂಗ್‌ ಮಾತ್ರೆಗಳಾದರೆ ವೀರಪ್ಪನ್‌, ಪ್ರಭಾಕರನ್‌... (ಬಿನ್‌ ಲಾಡೆನ್‌ ಸಹ!?). ಹೈದರಾಬಾದ್‌ನಲ್ಲಿ ನನ್ನೊಬ್ಬ ಸ್ನೇಹಿತನಿದ್ದ ಭಾಸ್ಕರನ್‌ ಎಂಬುವವ (ಮೂಲ, ತಮಿಳುನಾಡಿನ ತಿರುಚಿರಾಪಳ್ಳಿ). ಆತ ಭಾರತೀಯ ಬಾಹ್ಯಾಕಾಶ ವಿಭಾಗದ ಅಂಗಸಂಸ್ಥೆಯಾದ 'ಎಡ್ರಿನ್‌' (Advanced Data Research Institute)ನಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ನಾನು ಹೇಳುತ್ತಿದ್ದುದುಂಟು - ಏನಯ್ಯಾ ನಿನ್ನ ಹೆಸರೂ ನಿನ್ನ ಕಂಪೆನಿಯ ಹೆಸರೂ ಒಳ್ಳೇ ಮಾತ್ರೆಗಳ ಹೆಸರಿನಂತಿದೆಯಲ್ಲ ಎಂದು. ಅಂದಹಾಗೆ ನನ್ನ ಮಗರಾಯನ ಹೆಸರು - ಸೃಜನ್‌ :-)

ಮಾತ್ರೆಗಳ ಬಗ್ಗೆ ಲಘುಹರಟೆಯಲ್ಲಿ ಇನ್ನೂ ಎರಡು ಬೇರೆಯದೇ ಆದ, ವೈದ್ಯಕೀಯ ಕ್ಷೇತ್ರಕ್ಕೆ ಏನೇನೂ ಸಂಬಂಧವಿರದ ಮಾತ್ರೆಗಳ ಬಗ್ಗೆಯೂ ಪ್ರಸ್ತಾಪಿಸಬೇಕು. ಅವೇ ಸಾಹಿತ್ಯ ಮತ್ತು ಸಂಗೀತದಲ್ಲಿ ಬರುವ 'ಮಾತ್ರೆ'ಗಳು. ಈಗಿನ ಕಾಲದಲ್ಲಿ ಬಿಡಿ, ಕವಿಗಳೆಲ್ಲ ಮುಕ್ತಛಂದಸ್ಸಿನ ಪದ್ಯಗಳನ್ನೇ ಬರೆಯೋದು. ಹಿಂದಾದರೆ ಪದ್ಯರಚನೆಯಲ್ಲಿ ಗುರು-ಲಘು ಮಾತ್ರೆಗಳದು ಪ್ರಧಾನ ಭೂಮಿಕೆ. ಗುರುಲಘು ಮೂರಿರೆ ಮನ ಗಣ, ಗುರುಲಘು ಮೊದಲಲ್ಲಿ ಬರೆ ಭಯಗಣ... ಎಂದು ಪರೀಕ್ಷೆಯಲ್ಲಿ ಪ್ರಶ್ನೆಯ ಭಯದಿಂದಾದರೂ ಕಂಠಪಾಠ ಮಾಡಿದ್ದ ದಿನಗಳು ನಿಮಗೆ ನೆನಪಿರಬಹುದು. ಸಂಗೀತದಲ್ಲಿ ಮಾತ್ರೆ ಬರೋದು ತಾಳದ ವಿಚಾರ ಬಂದಾಗ. ತಕಿಟ ತಕಧಿಮಿ ತಾಳದ ಅತಿ ಸಣ್ಣ ಯುನಿಟ್‌ ಎಂದರೆ ಒಂದು ಮಾತ್ರಾ ಕಾಲ. ತಾಳವಾದ್ಯಗಳಲ್ಲಿ ಹೊಸಹೊಸ ಪ್ರಯೋಗ ಮಾಡುವವರು ಅರ್ಧ, ಮುಕ್ಕಾಲು, ಮೂರನೇ ಒಂದು ಮಾತ್ರಾ ಕಾಲದಷ್ಟು ನಿಖರತೆಯ ತಾಳಗಳನ್ನೂ ಸೃಷ್ಟಿಸಿದ್ದಾರಂತೆ.

ಇರಲಿ, ಮತ್ತೆ 'ಆರೋಗ್ಯವೇ ಭಾಗ್ಯ'ದ ಮಾತ್ರೆಗಳ ವಿಷಯಕ್ಕೆ ಬರೋಣ. ಇಲ್ಲೊಂದು ಜಾಣ್ಮೆಲೆಕ್ಕ ಇದೆ. ಮಾತ್ರೆಗಳ ಬಗೆಗಿನ ಈ ಲೆಕ್ಕ ಬಿಡಿಸಲಿಕ್ಕಾಗುತ್ತದೊ ನೋಡಿ. ಇದು ಪಿಲ್ಸ್‌ಬರಿ ಆಟ್ಟಾ ಅಲ್ಲ , ಬರೀ ಪಿಲ್ಸ್‌ ಆಟ!

ಶಾರೀರಿಕವಾಗಿಯೂ, ಮಾನಸಿಕವಾಗಿಯೂ ಅತ್ಯಂತ ಆರೋಗ್ಯವಂತರು ನೀವು. ಆದರೂ ಯಾವುದೋ ಒಂದು ದುರದೃಷ್ಟದಿಂದ ಒಮ್ಮೆ ಮಾತ್ರ ಕಾಯಿಲೆಗೊಳಗಾದಿರಿ ಎಂದಿಟ್ಟುಕೊಳ್ಳೋಣ. (ಅಯ್ಯೋ ಹಾಗೆನ್ನಬೇಡಿ ಮಾರಾಯ್ರೆ ದಯವಿಟ್ಟು. ಮರಮುಟ್ಟಿ touchwood?) ಮಾತ್ರೆಗಳ ಫಳ್ಹಾರ ಮಾಡುವ ಪರಿಸ್ಥಿತಿ ನಿಮಗೆ ಬಂತು. ರಾತ್ರೆ ಊಟದ ನಂತರ ಮಲಗುವ ಮುನ್ನ 'ಸಿಲ್ಡೆನಾಫಿಲ್‌' ಅನ್ನುವ ಒಂದು ಮಾತ್ರೆ ಮತ್ತು 'ಸಿಟ್ರೇಟ್‌' ಅನ್ನುವ ಒಂದು ಮಾತ್ರೆ- ಇವೆರಡನ್ನೂ ಒಟ್ಟೊಟ್ಟಿಗೆ ತೆಗೆದುಕೊಳ್ಳಬೇಕೆಂದು ನಿಮಗೆ ವೈದ್ಯರು ಶಿಫಾರಸು ಮಾಡಿದ್ದಾರೆ. ಈ ಮಾತ್ರೆಗಳ ಬಗ್ಗೆ ಬೇಕಾದ ವಿಶೇಷ ಜಾಗರೂಕತೆಯೆಂದರೆ ಎರಡನ್ನೂ ಒಟ್ಟಿಗೇ ಸೇವಿಸಬೇಕು. ಸಿಲ್ಡೆನಾಫಿಲ್‌ ಆಗಲೀ ಸಿಟ್ರೇಟ್‌ ಆಗಲೀ ಒಂದುದಿನಕ್ಕೆ ಒಂದಕ್ಕಿಂತ ಹೆಚ್ಚು ಸೇವಿಸಿದರೂ ತೊಂದರೆಯೇ. ಒಂದು ಇಲ್ಲದೆ ಇನ್ನೊಂದನ್ನು ಮಾತ್ರ ಸೇವಿಸಿದರೂ ತೊಂದರೆಯೇ. ಒಟ್ಟಿನಲ್ಲಿ ಅಲ್ಟ್ರಾ ಕೇರ್‌ಫುಲ್‌ ಆಗಿರಬೇಕು ಹೇಗಿದ್ದರೂ.

ಇಂತಿರಲು ಒಮ್ಮೆ, ರಾತ್ರಿ ಊಟವಾದ ಮೇಲೆ ನೀವು ಸಿಲ್ಡೆನಾಫಿಲ್‌ ಬಾಟ್ಲಿಯಿಂದ ಒಂದು ಮಾತ್ರೆಯನ್ನೂ ಸಿಟ್ರೇಟ್‌ ಬಾಟ್ಲಿಯಿಂದ ಇನ್ನೊಂದು ಮಾತ್ರೆಯನ್ನೂ ಅಂಗೈಗೆ ಹಾಕಿಕೊಳ್ಳಲು ಹೊರಟಿದ್ದೀರಿ. ಸಿಲ್ಡೆನಾಫಿಲ್‌ ಮಾತ್ರೆಯನ್ನು ಕೈಗೆ ಉದುರಿಸಿ ಬಾಟ್ಲಿಯನ್ನು ಯಥಾಸ್ಥಾನದಲ್ಲಿ ಇಟ್ಟಿದ್ದೀರಿ. ಹಾಗೆಯೇ ಸಿಟ್ರೇಟ್‌ನದೂ ಕೂಡ. ಆದರೆ ಅಕಸ್ಮಾತ್ತಾಗಿ ಏನಾಗಿದೆಯೆಂದರೆ ಸಿಟ್ರೇಟ್‌ನ ಎರಡು ಮಾತ್ರೆಗಳು ಅಂಗೈಗೆ ಬಂದಿವೆ. ದಿನನಿತ್ಯದ ಅಭ್ಯಾಸ ಆದ್ದರಿಂದ ಮಾತ್ರೆಗಳನ್ನು ಅಂಗೈಯಲ್ಲಿ ಹಾಕಿಕೊಳ್ಳುವಾಗ ನೀವು ಅಷ್ಟಾಗಿ ಗಮನಿಸಲಿಲ್ಲ. ಒಂದು ಸಿಲ್ಡೆನಾಫಿಲ್‌ ಮಾತ್ರೆ, ಮತ್ತೆರಡು ಸಿಟ್ರೇಟ್‌ ಮಾತ್ರೆಗಳು ಒಟ್ಟುಸೇರಿವೆ. ಬಣ್ಣ, ಆಕಾರ, ಗಾತ್ರ, ತೂಕ - ಯಾವುದೇ ವಿಧದಲ್ಲೂ ಸಿಲ್ಡೆನಾಫಿಲ್‌ ಮಾತ್ರೆಗೂ ಸಿಟ್ರೇಟ್‌ ಮಾತ್ರೆಗೂ ವ್ಯತ್ಯಾಸ ಅನ್ನೋದು ಒಂಚೂರೂ ಇಲ್ಲ.

ಇಲ್ಲಿರುವುದು ಸಮಸ್ಯೆ. ಈಗ ನೀವೇನು ಮಾಡಬಲ್ಲಿರಿ? ಆ ಮಾತ್ರೆಗಳೋ ಅತ್ಯಂತ ದುಬಾರಿ. ಹಾಗಾಗಿ ವೇಸ್ಟ್‌ ಮಾಡುವಂತಿಲ್ಲ. ಯಾವ ಮಾತ್ರೆ ಯಾವುದು ಅಂತ ಗೊತ್ತಿಲ್ಲವಾದ್ದರಿಂದ ವಾಪಾಸ್‌ ಬಾಟ್ಲಿಗಳಿಗೆ ಹಾಕುವಂತೆಯೂ ಇಲ್ಲ. ವೈದ್ಯರು ಶಿಫಾರಿಸಿದ ಡೋಸ್‌ ಆ ರಾತ್ರಿಗೆ ಸಿಗದಿದ್ದರೆ ನಿಮ್ಮ ಕಾಯಿಲೆ ಉಲ್ಬಣವಾಗಬಹುದು. ಅಂಥ ಪರಿಸ್ಥಿತಿಯಲ್ಲಿ ಕರಾರುವಾಕ್ಕಾಗಿ ಒಂದು ಸಿಲ್ಡೆನಾಫಿಲ್‌ + ಒಂದು ಸಿಟ್ರೇಟ್‌ ಮಾತ್ರೆಯ ಡೋಸ್‌ ನಿಮ್ಮ ಹೊಟ್ಟೆ ಸೇರುವಂತೆ, ಅಂಗೈಗೆ ಬಿದ್ದ ಈ ಮೂರು ಮಾತ್ರೆಗಳು ವೇಸ್ಟಾಗದಂತೆ ಹೇಗೆ ನಿಭಾಯಿಸುವಿರಿ? ನಿಮ್ಮ ಆರೋಗ್ಯದ ಪ್ರಶ್ನೆ, ನಿಮ್ಮ ಹಣಕಾಸಿನ ಪ್ರಶ್ನೆ, ನಿಮ್ಮ ಬುದ್ಧಿಮತ್ತೆಯ ಪ್ರಶ್ನೆಯೂ ಹೌದು. ಏನು ನಿಮ್ಮುತ್ತರ, ಎಷ್ಟು ಮಾತ್ರೆಗಳ ಕಾಲದಲ್ಲಿ ಉತ್ತರ ಕಂಡುಕೊಂಡು ಬರೆಯುತ್ತೀರಿ, ನೋಡೋಣ. ವಿಳಾಸ

English summary
Vichitranna 96 : Columnist Srivathasa Joshi writes on The omnipresent pills (tablets, capsules)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X