• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾರ್ಟ್‌ ಏಕೆ ಆರ್ಟ್‌ ಮತ್ತು ಸೈನ್ಸ್‌ನಲ್ಲಿ ಭಿನ್ನವಾಗಿದೆ?

By Staff
|
Srivathsa Joshi *ಶ್ರೀವತ್ಸ ಜೋಶಿ

I Love You...ನಾಡಿದ್ದು ಶನಿವಾರ ಫೆಬ್ರವರಿ 14. ಪ್ರೇಮಿಗಳ ದಿನ. ಈಗಾಗಲೇ ವಾತಾವರಣದಲ್ಲಿ ದಟ್ಟವಾಗಿ ಗೋಚರಿಸತೊಡಗಿದೆ ‘ಪ್ರೇಮಜ್ವರ’ (ಅದರಲ್ಲಿ ಅಸಲಿ ಎಷ್ಟು , ನಕಲಿ ಎಷ್ಟು ದೇವನೊಬ್ಬನೇ ಬಲ್ಲ). ‘ವ್ಯಾಲೆಂಟೈನ್ಸ್‌ ಡೇ’ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ ವಿಚಿತ್ರಾನ್ನದ ವಿಶ್ಲೇಷಣೆ ‘ಹೃದಯದ ಚಿತ್ರಕ್ಕೇಕೆ ಆ ಆಕಾರ ಬಂತು?’ ಎಂಬ ಜಿಜ್ಞಾಸೆಯ ಮೇಲೆ.

ಜೀವಶಾಸ್ತ್ರ ಅಧ್ಯಯನದಲ್ಲಿ ಡ್ರಾಯಿಂಗ್‌ ಶೀಟ್‌ ಮೇಲೆ ಬಿಡಿಸುವಾಗಿನ ಹೃದಯದ ಆಕಾರವೇ ಬೇರೆ; ಪ್ರೀತಿ-ಪ್ರೇಮ-ಪ್ರಣಯವನ್ನು ಸಂಕೇತಿಸುವಾಗ ಬರೆಯುವ ಹೃದಯದ ಆಕಾರವೇ ಬೇರೆ. ಗ್ರೀಟಿಂಗ್‌ ಕಾರ್ಡ್‌ಗಳಲ್ಲಿ ಹೃದಯದ ಚಿತ್ರ ನೋಡಿದ್ದೀರಿ, ಅಷ್ಟೇಕೆ ಇಸ್ಪೀಟ್‌ ಎಲೆಗಳಲ್ಲಿನ ಹಾರ್ಟ್ಸ್‌ ಹೇಗಿರುತ್ತದೆ ಗೊತ್ತು ನಿಮಗೆ. ಹಾರ್ಟ್‌ ಆಕಾರದ ಚಾಕಲೇಟ್‌, ಬಿಸ್ಕತ್ತು ತಿಂದಿದ್ದೀರಿ. ಪ್ರಭುದೇವನ ಸಿನೆಮಾಗಳಲ್ಲಿ, ಮೈಕೇಲ್‌ ಜಾಕ್ಸನ್‌ನ ವಿಡಿಯಾಗಳಲ್ಲಿ ಕಂಪ್ಯೂಟರ್‌ ಅನಿಮೇಷನ್‌ ವಿರಚಿತ ಪಿಂಕ್‌ ಕಲರ್‌ ಹಾರ್ಟ್‌-ಮುತ್ತುಗಳು ಪ್ರಿಯಕರನ ಕಣ್ಣು, ಮೂಗು, ಕಿವಿ, ಬಾಯಿಗಳಿಂದ ಪ್ರಿಯತಮೆಯೆಡೆಗೆ ಹಾರಾಡುವುದನ್ನು ಕಂಡಿದ್ದೀರಿ. ಅದೇಕೆ ಸೈನ್ಸ್‌ನ ಹಾರ್ಟ್‌ಗೂ ಆರ್ಟ್‌ನ ಹಾರ್ಟ್‌ಗೂ ವ್ಯತ್ಯಾಸ ಬಂತು?

Passionate Swans

ಮಾನವಶರೀರದೊಳಗಿನ ಹೃದಯ, ಅಪಧಮನಿ, ಅಭಿಧಮನಿಗಳೆಲ್ಲ ಆಕಾರದಲ್ಲಿ ಹೇಗಿರುತ್ತವೆ ಎಂಬುದು ಪ್ರಾಚೀನ ಕಾಲದವರಿಗೆ ಗೊತ್ತಿರಲಿಲ್ಲ ; ಹಾಗೆ ನೋಡಿದರೆ ನಮಗೆ ಗೊತ್ತಿರುವ ಹೃದಯದ ವೈಜ್ಞಾನಿಕ ಆಕಾರ ತೀರಾ ಇತ್ತೀಚಿನದು. ಆದರೆ ಕಲಾತ್ಮಕವಾಗಿ ಹೃದಯದ ಆಕಾರ ಶತಮಾನಗಳಷ್ಟು ಹಿಂದಿನಿಂದಲೇ ಬಂದಿದೆ! ಈ ವಿಷಯದ ಬಗ್ಗೆ ಅಂತರ್ಜಾಲದಲ್ಲಿ ವಿಹರಿಸಿದಾಗ ಸಿಗುವ ಮಾಹಿತಿಗಳನ್ನು ‘ಹೃದಯಸಾಕ್ಷಿ’ಯಾಗಿ ಅವಲೋಕಿಸೋಣವೇ?

ಮೊಟ್ಟಮೊದಲ ಥಿಯರಿಯ ಪ್ರಕಾರ ಮನುಜಕುಲದ ಸೃಷ್ಟಿಯ ಆದಿಯಲ್ಲಿ, ಆಡಮ್‌ ಮತ್ತು ಈವ್‌ ಮಾತ್ರ ಇದ್ದಾಗ ಅವರಿಬ್ಬರು ತಂತಮ್ಮ ಮಾನವನ್ನು ಮುಚ್ಚಲು ಬಳಸಿದ ಎಲೆಯ ಆಕಾರವನ್ನು ಪ್ರೀತಿಯ ಸಂಕೇತವಾಗಿ ಬಳಸಿಕೊಳ್ಳಲಾಯಿತು. ಕಾಲಕ್ರಮೇಣ ಹೃದಯವೇ ಪ್ರೀತಿಯ ಸ್ರೋತವೆಂಬ ನಂಬಿಕೆ ಗಟ್ಟಿಯಾದ ಮೇಲೆ ಹೃದಯವನ್ನು ಅದೇ ಎಲೆಯ ಆಕಾರದಲ್ಲಿ ಚಿತ್ರಿಸುವುದು ಆರಂಭವಾಯಿತು. ಇಷ್ಟಕ್ಕೂ ಆ ಎಲೆ ಯಾವ ಸಸ್ಯದ್ದು ಎಂಬ ಕುತೂಹಲ ಮೂಡುವುದು ಸಹಜ. ನಮಗೆಲ್ಲ ಗೊತ್ತಿರುವ, ಬೇಸಿಗೆಯಲ್ಲಿ ನಾವು ತಂಬುಳಿ ಮಾಡಲು ಉಪಯೋಗಿಸುವ ‘ಒಂದೆಲಗ’ (ಬ್ರಾಹ್ಮಿ) ಇರಲಿಕ್ಕಿಲ್ಲ. ಏಕೆಂದರೆ ಒಂದೆಲಗದಿಂದ ಆಡಮ್‌ ಆಗಲೀ ಈವ್‌ ಆಗಲೀ ಮಾನ ಮುಚ್ಚಿಕೊಳ್ಳುವುದು ಸಾಧ್ಯವಾಗುವ ಪ್ರಮೇಯವೇ ಇಲ್ಲ. ಅದು ಕೊನೆಪಕ್ಷ ಅಂಗೈಯಗಲದ ಎಲೆಯಾಗಿದ್ದಿರಬೇಕು.

Passionate Swans‘ಎಲೆ ಥಿಯರಿ’ಯಂತಹದೇ ಸಸ್ಯಶಾಸ್ತ್ರ ಮೂಲದ ಇನ್ನೊಂದು ವಿಶ್ಲೇಷಣೆ ಇದೆ. ಕ್ರಿಸ್ತಪೂರ್ವ 7ನೇ ಶತಮಾನದಲ್ಲಿ ಉತ್ತರ ಆಫ್ರಿಕಾದ ಕೈರಿನ್‌ ಪ್ರಾಂತದಲ್ಲಿ ಹುಲುಸಾಗಿ ಬೆಳೆಯುತ್ತಿದ್ದ ಸಿಲ್ಫಿಯಮ್‌ ಎಂಬ ಸಸ್ಯದ ಉಲ್ಲೇಖ ಬರುತ್ತದೆ. ಈಗ ಈ ಸಸ್ಯಪ್ರಭೇದ ನಶಿಸಿ ಹೋಗಿದೆ. ಸಿಲ್ಫಿಯಮ್‌ ಸಸ್ಯದ ಕೋಡುಗಳಲ್ಲಿನ, ಬಡೇಸೋಪನ್ನು ಹೋಲುವ ಬೀಜಗಳು ಒಂದು ನಮೂನೆಯಲ್ಲಿ ಉದ್ದೀಪನ ಶಕ್ತಿಯನ್ನು ಕೊಡುತ್ತವೆಯೆಂಬ ನಂಬಿಕೆಯಿತ್ತು. ಸಿಲ್ಫಿಯಮ್‌ ವಾಣಿಜ್ಯಬೆಳೆಯಾಗಿ ಕೈರಿನ್‌ ಪ್ರಾಂತವನ್ನು ಶ್ರೀಮಂತಗೊಳಿಸಿತ್ತಂತೆ. ಕೈರಿನ್‌ನಲ್ಲಿ ಸಿಕ್ಕಿದ ಆ ಕಾಲದ ನಾಣ್ಯದಲ್ಲೂ ಸಿಲ್ಫಿಯಮ್‌ ಕೋಡಿನ ಚಿತ್ರವಿದೆ! ಉದ್ದೀಪನ ಸಾಮರ್ಥ್ಯದ ಸಿಲ್ಫಿಯಮ್‌ ಕೋಡುಗಳ ಆಕಾರವನ್ನೇ ಪ್ರೀತಿ-ಪ್ರೇಮದ ಸೆಲೆಯಾದ ಹೃದಯವನ್ನು ಚಿತ್ರಿಸುವಾಗ ಬಳಸುವುದು ಆರಂಭವಾಯಿತು ಎನ್ನುತ್ತದೆ ಇನ್ನೊಂದು ವಾದಸರಣಿ.

ಸಸ್ಯಶಾಸ್ತ್ರದಿಂದ ಪ್ರಾಣಿಶಾಸ್ತ್ರದೆಡೆಗೆ ಬಂದರೆ, ಕಪ್ಪೆಯ ಹೃದಯದ ಆಕಾರ ನಮ್ಮ ‘ಲವ್‌ ಸಿಂಬಲ್‌’ಅನ್ನು ಹೋಲುತ್ತದೆಯೆನ್ನುತ್ತಾರೆ. ಕಾಲೇಜಲ್ಲಿ ಬಯಾಲಜಿ ಲ್ಯಾಬೊರೆಟರಿಯಲ್ಲಿ ಕಪ್ಪೆಯನ್ನು ಡಿಸೆಕ್ಷನ್‌ ಮಾಡಿದ ದಿನಗಳು ನಿಮ್ಮಲ್ಲಿ ಕೆಲವರಿಗೆ ನೆನಪಿರಬಹುದು. ಕಪ್ಪೆಯ ಹೃದಯವು ಮಾನವ ಹೃದಯಕ್ಕೆ ತುಂಬಾ ಹೋಲಿಕೆಯುಳ್ಳದ್ದು ಆದ್ದರಿಂದಲೇ ಬಯಾಲಜಿಯಲ್ಲಿ ಫ್ರಾಗ್‌ ಡಿಸೆಕ್ಷನ್‌ ಮಾಡಿಸುವುದು. ಕಪ್ಪೆಯ ಹೃದಯ ಆಕಾರವೇ ಮನುಷ್ಯನ ಹೃದಯದ ಆರ್ಟಿಸ್ಟಿಕ್‌ ರೂಪಕ್ಕೆ ಬಂದಿದೆ ಎನ್ನುವ ಥಿಯರಿ ಅಲ್ಲಿಗೆ ಬಲವಾಗುತ್ತದೆ.

Hearty Love of two Hearts...ಪಕ್ಷಿಸಂಕುಲದಿಂದ ಏನಾದರೂ ಈ ಬಗ್ಗೆ ಮಾಹಿತಿ ಸಿಕ್ಕಿದೆಯೇ? ಖಂಡಿತವಾಗಿ! ಪ್ರೇಮಪತ್ರಗಳ ರವಾನೆಗೆ ನಳ-ದಮಯಂತಿಯರಿಂದ ಸಮೇತ ಬಳಕೆಯಾದ ಹಂಸಗಳು ಪುರಾಣಗಳಲ್ಲಿ, ಚರಿತ್ರೆಯಲ್ಲಿ ಪ್ರೇಮದ ಸಂಕೇತವಾಗಿ ಚಿತ್ರಿತವಾಗಿವೆ. ಹಂಸಗಳ ಪ್ರೇಮ ಗಾಢವಾದುದು. ಒಮ್ಮೆ ಜೋಡಿಯಾದ ಹಂಸಗಳು ಜೀವನಪರ್ಯಂತ ‘ದಂಪತಿ’ಯಾಗೇ ವಾಸಿಸುತ್ತವೆ ಎನ್ನುತ್ತಾರೆ. ಪ್ರಣಯ ಸಮಯದಲ್ಲಿ ಹೆಣ್ಣು-ಗಂಡು ಹಂಸಗಳು ಪರಸ್ಪರ ಅಭಿಮುಖವಾದಾಗ, ಪ್ರೀತಿಯಿಂದ ಒಂದಕ್ಕೊಂದು ಚುಂಬಿಸಿದಾಗ, ಅವುಗಳ ಕೊಕ್ಕು ಮತ್ತು ಕತ್ತುಗಳಿಂದ ಯಾವ ಆಕಾರ ಮೂಡುತ್ತದೆ ಗಮನಿಸಿ. ಚಿತ್ರವನ್ನು ನೋಡಿದರೆ ನಿಮಗೆ ಅಲ್ಲಿ ನಮ್ಮ ಹಾರ್ಟ್‌ನ ಆರ್ಟ್‌ ರೂಪ ಗೋಚರಿಸುವುದಿಲ್ಲವೇ?

ಹಂಸಗಳ ಜೋಡಿಯಂತೆಯೇ, ಮನುಷ್ಯರಲ್ಲೂ ಗಂಡು-ಹೆಣ್ಣಿನ ಚುಂಬನ ಭಂಗಿಯಲ್ಲಿ ಹೃದಯದ ಆಕಾರ ಮೂಡುವುದನ್ನು ಖಾತ್ರಿಪಡಿಸಿದವರಿದ್ದಾರೆ. ಇಲ್ಲಿನ ರೇಖಾಚಿತ್ರವನ್ನು (‘ಉತ್ಸವ್‌’ ಹಿಂದಿ ಚಲನಚಿತ್ರದಲ್ಲಿ ರೇಖಾ-ಶೇಖರ್‌ ಸುಮನ್‌ ಚುಂಬನದ ಚಿತ್ರವಲ್ಲ!) ನೋಡಿ. ಪ್ರೇಮಪ್ರವಾಹ ಉಕ್ಕಿಹರಿವ ಎರಡು ಹೃದಯಗಳ ನಡುವೆ ಒಂದು ಕಲಾತ್ಮಕ ಹೃದಯದಾಕೃತಿ ಕಂಡುಬರುವುದಿಲ್ಲವೇ? ಇಷ್ಟಾದ ಮೇಲೂ ಹಾರ್ಟ್‌ನ ಆರ್ಟ್‌ ರೂಪಕ್ಕೆ ಅರ್ಥವಿಲ್ಲವೆಂದರೆ ಹೇಗೆ?!

Natures message of Hearty Love...ಇಂತಹ ರಂಜನೀಯ, ರೋಚಕ ವಿವರಣೆಗಳು ಸಿಗುತ್ತವೆ ಪ್ರೀತಿಯ ಸಂಕೇತವಾದ ಹೃದಯದ ಕಲಾತ್ಮಕ ಆಕಾರದ ಬಗ್ಗೆ. ಒಂದನ್ನೂ ಅಲ್ಲಗಳೆಯುವಂತಿಲ್ಲವಾದರೂ ವೈಜ್ಞಾನಿಕವಾಗಿ ಹೃದಯದ ಆಕಾರ ಹೇಗಿದೆ ಎನ್ನುವುದು ನಮಗೀಗ ಗೊತ್ತಿರುವುದರಿಂದ ಈ ವಾದಸರಣಿಗಳನ್ನೆಲ್ಲ ‘ಹೃದಯದ ಚರಿತ್ರೆ’ ಎಂದಷ್ಟೇ ಒಪ್ಪಬೇಕಾಗುತ್ತದೆ. ಎಷ್ಟೆಂದರೂ ಆಸಕ್ತಿಯ, ಕುತೂಹಲಕರ, ಹೊಸಹೊಸ ವಿಷಯಗಳನ್ನು ತಿಳಿದುಕೊಳ್ಳುವ ಹೃದಯವೈಶಾಲ್ಯವುಳ್ಳವರಲ್ಲವೇ ನಾವೆಲ್ಲ? ಅದೂ ಹಾರ್ಟ್‌ಗೆ ಸಂಬಂಧಪಟ್ಟದ್ದು ಹಾರ್ದಿಕವಾಗಲೇಬೇಕಲ್ಲವೆ?

* * *

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more