ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಂಗಿನಕಾಯಿಗೆ ಜುಟ್ಟು ಶೃಂಗಾರ!

By ಶ್ರೀವತ್ಸ ಜೋಶಿ
|
Google Oneindia Kannada News

ನೀರಿಗೆ ನೈದಿಲೆ ಶೃಂಗಾರ, ಊರಿಗೆ ಅರಮನೆಯೇ ಶೃಂಗಾರ, ಸಮುದ್ರಕೆ ತೆರೆಯೇ ಶೃಂಗಾರ, ನಾರಿಗೆ ಗುಣವೇ ಶೃಂಗಾರ, ಗಗನಕೆ ಚಂದ್ರಮನೇ ಶೃಂಗಾರ, ಕೂಡಲಸಂಗನ ಶರಣರ ನೊಸಲಿಗೆ ವಿಭೂತಿಯೇ ಶೃಂಗಾರ...’ ಎಂದ ಬಸವಣ್ಣನವರು ತನ್ನ ವಚನದಲ್ಲಿ ಇನ್ನೂ ಒಂದು ಉಪಮೆಗೆ ಅವಕಾಶವಿರುವುದಾದರೆ 'ತೆಂಗಿನಕಾಯಿಗೆ ಜುಟ್ಟೇ ಶೃಂಗಾರ...’ ಎನ್ನುತ್ತಿದ್ದರೋ ಏನೊ.

ಯಾಕೆ? ಸ್ವಲ್ಪ ಯೋಚಿಸಿ. ವಿದ್‌ ಜುಟ್ಟು ವರ್ಸಸ್‌ ವಿದೌಟ್‌ ಜುಟ್ಟು ತೆಂಗಿನಕಾಯಿಗಳ ಪೈಕಿ ಯಾವುದರ ಬಗ್ಗೆ ನಮಗೆ ಹೆಚ್ಚು ಗೌರವ ಮೂಡುತ್ತದೆ? ಸತ್ಯನಾರಾಯಣ ಪೂಜೆಯಲ್ಲಿ 'ಕಲಶ’ವಾಗಿ ಫಳಫಳ ಹೊಳೆಯುವ ಬೆಳ್ಳಿ ಅಥವಾ ತಾಮ್ರದ ತಂಬಿಗೆ, ಅದರಲ್ಲಿ ಪವಿತ್ರ ಜಲ, ಮೇಲೆ ಮಾವಿನ ಎಲೆಗಳು ಮತ್ತದರ ಮೇಲೆ ಊರ್ಧ್ವವಾಗಿ ಇರಿಸಿದ 'ಜುಟ್ಟಿರುವ ತೆಂಗಿನಕಾಯಿ’ - ಅದೊಂದು ಪೂಜ್ಯ ಭಾವದ ಪರಮಸಂಕೇತವಲ್ಲವೇ? ಅದೇ ಜಾಗದಲ್ಲಿ ಜುಟ್ಟಿರದ ತೆಂಗಿನಕಾಯಿಯನ್ನು ಕಲ್ಪಿಸಲಿಕ್ಕೂ ಸಾಧ್ಯವಾಗದು, ಅದು ಜಮ್ಮುಕಾಶ್ಮೀರವಿಲ್ಲದ ಭಾರತದ ನಕ್ಷೆಯಂತೆ ತೀರಾ ಆಭಾಸಕರವಾಗಿ ಕಾಣಬಹುದು. ಅಲ್ಲೇ ಇರೋದು ಜುಟ್ಟಿನ ಗತ್ತು , ಗಾಂಭೀರ್ಯ, ಗಮ್ಮತ್ತು , ಶ್ರೇಷ್ಠತೆ!

Coconut Juttu .... :) - Special story by Srivathsa Joshi

ತೆಂಗಿನಕಾಯಿಗೆ ದೈವಿಕತೆಯನ್ನು, ಪಾವಿತ್ರ್ಯವನ್ನು ಕೊಡುವುದರಲ್ಲಿ ಜುಟ್ಟಿನ ಪಾತ್ರ ಪ್ರಮುಖವಾದುದು. ನಮ್ಮ ತಂದೆಯವರು ಹೇಳುತ್ತಿದ್ದರು (ಮತ್ತು ಹಾಗೆಯೇ ಆಚರಿಸುತ್ತಿದ್ದರು):- ಭೂತಗಳಿಗೆ, ದೈವಗಳಿಗೆ, ಮತ್ತಿತರ ಪೈಶಾಚಿಕ ಶಕ್ತಿಗಳಿಗೆ ಕೋಲ ನೇಮ ಇತ್ಯಾದಿ ಸೇವೆಗಳಲ್ಲಿ ತೆಂಗಿನಕಾಯಿ ಅರ್ಪಿಸುವಾಗ ಅದಕ್ಕೆ ಜುಟ್ಟು ಇರಕೂಡದು. ಆದರೆ ದೇವತಾಪೂಜೆಯಲ್ಲಿ ಜುಟ್ಟು ಇರದ ತೆಂಗಿನಕಾಯಿಯನ್ನು ಬಳಸಲೇಬಾರದು. ನೈವೇದ್ಯ ಸಮರ್ಪಣೆಗಾಗಿ ತೆಂಗಿನಕಾಯಿಯನ್ನು ಒಡೆಯುವವರೆಗೂ ಅದಕ್ಕೆ ಜುಟ್ಟು ಇರಬೇಕು. ಒಡೆದ ಮೇಲೆ ಮಾತ್ರ ಹೋಳನ್ನು ಜುಟ್ಟು ತೆಗೆದು ಇಡಬೇಕು.

Coconut with tuft is an essential pooja itemಪೂಜೆ-ಪುರಸ್ಕಾರ-ಪುಣ್ಯಾಹವಾಚನಗಳಲ್ಲಿ, ಮದುವೆ-ಮುಂಜಿ-ಗೃಹಪ್ರವೇಶವೇ ಮೊದಲಾದ ಶುಭಕಾರ್ಯಗಳಲ್ಲಿ, ಅಷ್ಟೇಕೆ ಫಲತಾಂಬೂಲವಾಗಲೀ ಬಾಗಿನವಾಗಲೀ ನೀಡಿ ಗೌರವ ಸಮರ್ಪಣೆಯಲ್ಲಿ ಸಹ ಜುಟ್ಟು ಇರುವ ತೆಂಗಿನಕಾಯಿಯೇ ಬೇಕು. ಜುಟ್ಟಿದ್ದರಷ್ಟೇ ಸಾಲದು, ಆ ತೆಂಗಿನಕಾಯಿಯನ್ನು 'ವಿದ್‌ ರೆಸ್ಪೆಕ್ಟ್‌ ಟು ಜುಟ್ಟು’ (ಅಕ್ಷರಶಃ) ಹೇಗೆ ಹಿಡಿದುಕೊಳ್ಳಬೇಕು, ಹೇಗೆ ಇಡಬೇಕು ಅನ್ನೋದೂ ಇಂಪಾರ್ಟೆಂಟ್‌. ಬಾಗಿನ ಕೊಡುವ ಕ್ರಮವನ್ನೇ ತೆಗೆದುಕೊಳ್ಳಿ, ನಮ್ಮ ಕರಾವಳಿ ಕಡೆಯಾದರೆ ಬಾಗಿನದಲ್ಲಿ ತೆಂಗಿನಕಾಯಿಯ ಜುಟ್ಟು ನಮ್ಮ ಕಡೆಗೆ ಇರಬೇಕು, ಅದೇ ಬೆಂಗಳೂರು-ಮೈಸೂರು ಪ್ರದೇಶಗಳಲ್ಲಿ ಕೆಲವರು ಬಾಗಿನದಲ್ಲಿ ತೆಂಗಿನಕಾಯಿಯ ಜುಟ್ಟು ಬಾಗಿನ ಸ್ವೀಕರಿಸುವವರ ಕಡೆಗಿರಬೇಕು ಅನ್ನುತ್ತಾರೆ. ಅಂತೂ ಜುಟ್ಟೂ ಮುಖ್ಯ, ಅದರ ಒರಿಯೆಂಟೇಶನ್ನೂ ಅಷ್ಟೇ ಮುಖ್ಯ. ಮದುವೆಯಲ್ಲಿ, ವರನ ಕೈಯಲ್ಲಿ ಅಲಂಕೃತ ತೆಂಗಿನಕಾಯಿಯನ್ನಿಟ್ಟು ಮಂಟಪಕ್ಕೆ ಕರೆತರುವಾಗಲೂ ಅದೇ ಪದ್ಧತಿ. ಆದರೆ ಆ ಸನ್ನಿವೇಶದಲ್ಲಿ ತೆಂಗಿನಕಾಯಿಯ ಜುಟ್ಟಿಗಿಂತಲೂ ತನ್ನ 'ಬದುಕಿನ ಸರ್ವಸ್ವದ ಜುಟ್ಟು’ ಅಳಿಯ ಮಹಾಶಯನ ಹಿಡಿತಕ್ಕೆ ಸಿಗದಂತೆ ರಕ್ಷಿಸುವುದು ಕನ್ಯಾಪಿತೃವಿನ ಹೈ-ಪ್ರಯಾರಿಟಿ ಚಿಂತನೆಯಾಗುತ್ತದಿರಬಹುದು!

ಇಲ್ಲಿ ಅಮೆರಿಕದಲ್ಲಿನ ಇಂಡಿಯನ್‌/ಮೆಕ್ಸಿಕನ್‌/ಕೊರಿಯನ್‌ ಗ್ರೋಸರಿ ಸ್ಟೋರ್‌ಗಳಲ್ಲಿ ಸುಲಿದಿಟ್ಟ ಇಡೀ ತೆಂಗಿನಕಾಯಿ ಧಾರಾಳವಾಗಿ ಸಿಗುತ್ತವೆ; ಅವು ಜುಟ್ಟು ಗಿಟ್ಟು ಇಲ್ಲದೆ ಬೋಳಾಗಿರುತ್ತವೆ. ತಲಾ 50 ಅಥವಾ 60 ಸೆಂಟ್ಸ್‌ ಬೆಲೆ. ಆದರೆ ಜುಟ್ಟು ಇರುವ ತೆಂಗಿನಕಾಯಿ ಸಿಗಬೇಕಿದ್ದರೆ 'ಪಟೇಲ್‌ ಬ್ರದರ್ಸ್‌’ನಂಥ ಪಕ್ಕಾ ಗುಜ್ಜು ಅಂಗಡಿಗಳಿಗೇ ಹೋಗಬೇಕು. ಅಲ್ಲಿ ದಿನಬಳಕೆಗಾಗಿ ಜುಟ್ಟುರಹಿತ ತೆಂಗಿನಕಾಯಿಗಳ ಬುಟ್ಟಿಯಂತೂ ಇದ್ದೇ ಇರುತ್ತದೆ, ಜತೆಯಲ್ಲೇ ವಿಶೇಷ ಬೇಡಿಕೆಯ ಮೇರೆಗೆ ಪ್ರೀಮಿಯಂ ದರದಲ್ಲಿ ಜುಟ್ಟಿರುವ ತೆಂಗಿನಕಾಯಿಯ ಲಭ್ಯತೆಯೂ ಇದೆ! ವಿದೌಟ್‌ ಜುಟ್ಟು 60 ಸೆಂಟ್ಸ್‌ ಆದರೆ ವಿದ್‌ ಜುಟ್ಟು ಹತ್ತಿರಹತ್ತಿರ ಒಂದು ಡಾಲರ್‌ ಬೆಲೆ!

ಜುಟ್ಟಿನಿಂದಾಗಿ ತೆಂಗಿನಕಾಯಿಯ ಮೌಲ್ಯ ವೃದ್ಧಿಯಾಗುತ್ತದಾದರೆ ಜುಟ್ಟಿಗೇ ಬೆಲೆಯಿದೆಯೆಂದಾಯ್ತಲ್ಲ ? ಖಂಡಿತವಾಗಿಯೂ! ತೆಂಗಿನಕಾಯಿಯಿಂದ ಬೇರ್ಪಟ್ಟ ಜುಟ್ಟು ಸಹ ಅಮೂಲ್ಯವೇ, ಅಟ್‌ಲೀಸ್ಟ್‌ ನಮ್ಮ ಕರಾವಳಿಯಲ್ಲಂತೂ ಹೌದು. ಟೆಫ್ಲಾನ್‌ ನಾನ್‌ಸ್ಟಿಕ್‌ ಕಾವಲಿಗಳಿನ್ನೂ ಚಾಲ್ತಿಯಲ್ಲಿರದಿದ್ದ ಹಿಂದಿನಕಾಲದ ದಿನಗಳಲ್ಲಿ, ದೋಸೆಯ ಕಾವಲಿಗೆ ಪ್ರತಿ ಸಲವೂ ಹಿಟ್ಟು ಹೊಯ್ಯುವ ಮೊದಲು ಸ್ವಲ್ಪ ಎಣ್ಣೆಪಸೆ ಹರಡಿ ಆಮೇಲೆ ದೋಸೆ ಮಾಡುವ ಕ್ರಮ ತಾನೆ? ನಮ್ಮೂರ ಮನೆಗಳಲ್ಲಿ ಅಮ್ಮ ಅಜ್ಜಿಯಂದಿರು, ಬಿಸಿ ಕಾವಲಿಯ ಮೇಲೆ ಎಣ್ಣೆಯನ್ನು ಹರಡಲು ತೆಂಗಿನಕಾಯಿಯ ಜುಟ್ಟನ್ನು ಬಳಸುತ್ತಿದ್ದುದು ನನಗೀಗಲೂ ನೆನಪಿದೆ. ಇತರ ಅಡುಗೆಗೆ ಹೇಗೂ ತೆಂಗಿನಕಾಯಿ ಒಡೆಯುವುದಿರುವಾಗ ಅದರ ಜುಟ್ಟನ್ನು ತೆಗೆದು ದೋಸೆಕಾವಲಿಯ ಆಯಿಲ್‌ಸ್ಪ್ರೆಂಡಿಂಗ್‌ ಅಗತ್ಯಕ್ಕೆ ಅದನ್ನು ಬಳಸುತ್ತಿದ್ದ ನಮ್ಮ ಹಿರಿಯರ ಜಾಣ್ಮೆಯನ್ನು ನಿಜವಾಗಿಯೂ ಮೆಚ್ಚಬೇಕು! ನೈಸರ್ಗಿಕ ಬಣ್ಣಗಳನ್ನಷ್ಟೇ ಉಪಯೋಗಿಸಿ ಪೈಂಟಿಂಗ್‌ ಮಾಡುವ ಕಲಾವಿದರೊಬ್ಬರು ನನಗೆ ಗೊತ್ತು. ಅವರ ಕುಂಚವೂ ನೈಸರ್ಗಿಕವೇ - ತೆಂಗಿನಕಾಯಿಯ ಜುಟ್ಟು!

ಮತ್ತೆ, ಇಂಚಿಂಚೂ ಉಪಯೋಗವಾಗುವ ತೆಂಗಿನಮರಕ್ಕೆ ’ಕಲ್ಪವೃಕ್ಷ’ ಎಂಬ ಹಿರಿಮೆ, ತೆಂಗಿನಕಾಯಿಗೆ 'ಶ್ರೀ ಫಲ’ ಎಂಬ ಬಿರುದು ಬಂದದ್ದು ಸುಮ್ಮನೆಯಾ?

ಜುಟ್ಟಿನ ಹಿಂದೊಂದು ಗುಟ್ಟು!

Coconut tuft finds different use too!ತೆಂಗಿನಕಾಯಿಯನ್ನು (ಸಿಪ್ಪೆ ಸುಲಿದಿಟ್ಟದ್ದು) ಎರಡು ಹೋಳುಗಳಾಗಿ ಒಡೆದು ಅದನ್ನು ನಾವು ಉಪಯೋಗಿಸುವುದಷ್ಟೆ ? ಆದರೆ ತೆಂಗಿನಕಾಯಿ ಒಡೆಯೋದಂದ್ರೆ ಬಾಳೆಹಣ್ಣು ಸುಲಿದಷ್ಟು ಸುಲಭವಿಲ್ಲ. ಕತ್ತಿ ಅಥವಾ ಕಬ್ಬಿಣದ ಸರಳಿನಿಂದ ಡಬ್‌ ಡಬ್‌ ಡಬ್‌ ಎಂದು ಬಡಿದೂ ಬಡಿದೂ ಕೊನೆಗೂ ಅಸಮಪ್ರಮಾಣದ ಓರೆಕೋರೆ ಹೋಳುಗಳೇ ನಮ್ಮ ಪ್ರಯತ್ನದ ಫಲವಾಗೋದು. ತೆಂಗಿನಕಾಯಿಯನ್ನು ಎರಡು ಪರ್ಫೆಕ್ಟ್‌ ಹೋಳುಗಳಾಗಿ ಒಡೆಯೋದಕ್ಕೆ ಒಂದು ಸುಲಭಸೂತ್ರವಿದೆ ಅನ್ನುವ ಸಂಗತಿ ಗೊತ್ತೇ ನಿಮಗೆ? ಆ ಸೂತ್ರ ಸುಲಭವಾಗಿ ಗೊತ್ತಾಗದಂತೆ ಮುಚ್ಚಿಟ್ಟು ರಕ್ಷಿಸಲಿಕ್ಕೇ ಅದಕ್ಕೆ ಜುಟ್ಟು ಇರೋದು!

ತೆಂಗಿನಕಾಯಿಯ ಜುಟ್ಟು ತೆಗೆದಾಗ ಅಲ್ಲಿ ಅದರ ಮೂರು ಕಣ್ಣುಗಳು ಇರುತ್ತವಲ್ಲ , ಚೆನ್ನಾಗಿ ಗಮನಿಸಿದರೆ ಅವುಗಳಲ್ಲಿ ಎರಡು ಕಣ್ಣುಗಳು ಸ್ವಲ್ಪ ಅಂತರ್ಮುಖಿಯಾಗಿಯೂ ಇನ್ನುಳಿದದ್ದು ಸ್ವಲ್ಪ ವಿಭಿನ್ನವಾಗಿಯೂ ಇರುತ್ತದೆ (ಮುಕ್ಕಣ್ಣ ಎಂದು ಈಶ್ವರನಿಗೂ ತೆಂಗಿನಕಾಯಿಗೂ ಒಗಟಿನಲ್ಲಿ ಹೋಲಿಕೆ ಬರೋದು ಇಲ್ಲಿಯೇ). ಮೂರು ಕಣ್ಣುಗಳಿರುವಂತೆಯೇ ತೆಂಗಿನಕಾಯಿಗೆ ಮೂರು ರೇಖಾಂಶಗಳೂ ಇರುತ್ತವೆಯನ್ನೋದೂ ನಿಮಗೆ ಗೊತ್ತು. ಪ್ರತಿಯಾಂದು ಕಣ್ಣಿಂದ ಆರಂಭವಾಗಿ ಉಳಿದೆರಡು ಕಣ್ಣುಗಳ ನಡುವಿಂದ ಆ ರೇಖೆಗಳು ಇರುತ್ತವೆ. ತೆಂಗಿನಕಾಯಿಯ ಮೂರನೇ ಕಣ್ಣಿಂದ (ಉಳಿದೆರಡಕ್ಕಿಂತ ತುಸು ಭಿನ್ನವಾಗಿರುವಂಥದು) ಹೊರಡುವ ರೇಖೆಯ (ಅಂದರೆ ಸಮಾನಕಣ್ಣುಗಳ ನಡುವಿನದು) ಮಧ್ಯಬಿಂದುವಿನ ಮೇಲೆ ನಿಮ್ಮ ಕತ್ತಿಯ ಪ್ರಹಾರ ಬಿತ್ತೋ, ಒಂದೇ ಏಟಿಗೆ ಕಾಯಿ ಎರಡು ಹೋಳಾಗುತ್ತದೆ! ತೆಂಗಿನಕಾಯಿಯ ಮರ್ಮಸ್ಥಾನ ಆ ಬಿಂದು!

ನೆಕ್ಸ್ಟ್‌ ಟೈಮ್‌ ನೀವು ಕೊಕೊನಟ್‌ ಬ್ರೇಕುವಾಗ ಈ ಟಿಪ್ಪನ್ನು ಅಥವಾ ಹಿಂಟನ್ನು ಟ್ರೆೃಯಿಸಿ ನೋಡಿ.

* * *

ತೆಂಗಿನಮರ, ತೆಂಗಿನಕಾಯಿ, ಅಷ್ಟೇ ಏಕೆ ಎಳ್ನೀರಿನ ಕುರಿತಾಗಿ ಸಹ ನೀವು ಲೇಖನ-ಪ್ರಬಂಧ-ಮಾಹಿತಿಗಳನ್ನೋದಿದ್ದಿರಬಹುದು. ಆದರೆ ತೆಂಗಿನಕಾಯಿಯ ಜುಟ್ಟಿನ ಬಗ್ಗೆ ಈ ಲಘುಹರಟೆ ಅನನ್ಯ. ಏಕೆಂದರೆ ವಿಚಿತ್ರಾನ್ನದಲ್ಲಿ ಯಾವುದೂ ಅಲ್ಲ ನಗಣ್ಯ.

ನಿಮ್ಮ ಅನುಭವ, ಅನಿಸಿಕೆಗಳಿಗೆ ಆದರದ ಸ್ವಾಗತ. ವಿಳಾಸ - [email protected]

English summary
Coconut Tuft : A infotainment article on Coconut Juttu (Tuft) by Srivathsa Joshi, Vichitranna Columnist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X