ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಯಲ್ಲಿ ನೀರೂರಬಹುದು, ಇದು ನೀರುದೋಸೆ!

By ಶ್ರೀವತ್ಸ ಜೋಶಿ
|
Google Oneindia Kannada News

ಕೈಲಾಸದಲ್ಲಿ ಪಾಪ (ಅಂದರೆ ಪಾರ್ವತಿ ಮತ್ತು ಪರಮೇಶ್ವರ) ಸಂವಾದಗಳು ಆಗಾಗ ನಡೆಯುತ್ತಲೇ ಇರುತ್ತವೆ. ಪಾರ್ವತಿಗೆ ಸದಾ (ಬಹುತೇಕವಾಗಿ ಅವು ಸಾದಾ ಕೂಡ) ಒಂದಲ್ಲ ಒಂದು ಸಂದೇಹ ಬರೋದು, ಮತ್ತು ಅದಕ್ಕೆ ಪರಮೇಶ್ವರನಿಂದ (ಸದಾಶಿವನಿಂದ) ಸೀದಾಸಾದಾ ಸಮಾಧಾನ ಸಿಗೋದು - ಇದು most common thing in day-to-day activities at Kailasa. ಒಂದು ಉದಾಹರಣೆ ಹೇಳಬೇಕೆಂದರೆ, ವಿಷ್ಣುವಿನ ಒಂದು ಸಾವಿರ ಹೆಸರುಗಳಿಗೆ ಸಮಾನವಾದ ಒಂದೇ ಹೆಸರು ಯಾವುದಾದರೂ ಇದೆಯಾ? ಅಂತ ಪಾರ್ವತಿ ಒಮ್ಮೆ ಪರಶಿವನಲ್ಲಿ ಕೇಳಿದ್ದಳು. ತನ್ನ RAM (Random Access Memory)ಯನ್ನುಪಯೋಗಿಸಿ ಪರಮೇಶ್ವರನು ಥಟ್ಟನೆ ಉತ್ತರಿಸಿದ್ದ : 'ರಾಮ್‌". ಸಹಸ್ರನಾಮತತ್ತುಲ್ಯಂ ರಾಮನಾಮ ವರಾನನೆ... ಎಂಬ ಆ ಉತ್ತರದಿಂದ ಪಾರ್ವತಿಗೆ ಅದ್ಭುತ ಸಮಾಧಾನ; ಸಹಸ್ರನಾಮ ಹೇಳುವುದಕ್ಕೆ ತನಗೊಂದು ಶಾರ್ಟ್‌ಕಟ್‌ ವಿಧಾನ ಸಿಕ್ಕಿದ ಅತೀವ ಆನಂದ.

ಹೀಗೆ ಒಂದು ಫೈನ್‌ ಮಾರ್ನಿಂಗ್‌ ಪಾರ್ವತಿಗೆ ಹೊಸದೊಂದು ಕುತೂಹಲ ಬಂತು. ಇನ್‌ಫಾಕ್ಟ್‌ ಆ ಕುತೂಹಲ ಬಂದದ್ದು ಕೈಲಾಸದ ಕಿಚನ್‌ನಲ್ಲವಳು ಸದಾಶಿವನ ಸಾದಾ ಬ್ರೇಕ್‌ಫಾಸ್ಟ್‌ಗಾಗಿ ಸೆಟ್‌ದೋಸೆ ಮಾಡುತ್ತ ಇರುವಾಗ. ಏನೂಂದ್ರೆ, ಉದ್ದಿನಬೇಳೆ ಅಂದರೆ ತಾಮಸ ಆಹಾರ ಅನ್ನುತ್ತಾರಲ್ಲ , ಮತ್ತೆ ಉದ್ದಿನಬೇಳೆ ಇಲ್ಲದೆ ದೋಸೆಯೇ ಆಗುವುದಿಲ್ಲವಲ್ಲ ! ಉದ್ದಿನಬೇಳೆ ಉಪಯೋಗಿಸದೇ ದೋಸೆ ಮಾಡುವ ಸುಲಭ ವಿಧಾನವೇನಾದರೂ ಇದೆಯೇ ಎಂಬುದು ಪಾರ್ವತಿಯ ಜಿಜ್ಞಾಸೆ. ಯಥಾಪ್ರಕಾರ ಪರಮೇಶ್ವರನಲ್ಲಿ ಆಕೆ ಮೊರೆಯಿಟ್ಟಳು, ತನ್ನ ಡೌಟ್‌ ಕ್ಲಾರಿಫಿಕೇಷನ್‌ಗೆ.

Neer Dosa : Mouthwatering dish from Dakshina Kannada

ಆಗ ಈಶ್ವರ ಉವಾಚ...

'ಪ್ರಿಯೇ, ಭೂಲೋಕದಲ್ಲಿ ಜಂಬೂದ್ವೀಪದ ಭರತಖಂಡದ ಭಾರತದೇಶದ ಗೋದಾವರಿಯ ದಕ್ಷಿಣತೀರದಲ್ಲಿ ಪರಶುರಾಮ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದ ಕರಾವಳಿಯ ಸುಂದರ ಪ್ರದೇಶದಲ್ಲಿ ದಕ್ಷಿಣಕನ್ನಡ ಜಿಲ್ಲೆಯಿದೆ. ದಕ್ಷಿಣಕನ್ನಡವನ್ನೀಗ ಆಡಳಿತದನುಕೂಲಕ್ಕಾಗಿ ಸ್ವಲ್ಪಭಾಗವನ್ನು ಉಡುಪಿ ಎಂಬ ಪ್ರತ್ಯೇಕ ಜಿಲ್ಲೆಯನ್ನಾಗಿಯೂ ಇನ್ನುಳಿದದ್ದನ್ನು ದಕ್ಷಿಣಕನ್ನಡವೆಂದೂ ವಿಂಗಡಿಸಿದ್ದಾರೆ. ಆದರೂ ಸಾಂಸ್ಕೃತಿಕವಾಗಿ ಉಭಯಜಿಲ್ಲೆಗಳ ಜನ 'ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ"ಯೆಂದೇ ಗುರುತಿಸಿಕೊಳ್ಳುತ್ತಾರೆ...."

ಪಾರ್ವತಿ: ರೀ, ಇದೇನ್ರಿ, ದೋಸೆ ಬಗ್ಗೆ ಹೇಳ್ತೇನೆ ಅಂತ ಜಿಯಾಗ್ರಫಿ ಲೆಕ್ಚರ್‌ ಶುರು ಮಾಡಿದ್ರಲ್ಲ...?

ಪರಶಿವ: Be calm and listen carefully...

ಪಾ: ಆಯ್ತು, ಆದರೆ ಸಾಧ್ಯವಾದಷ್ಟು ಕನ್ನಡದಲ್ಲಿ ಮಾತಾಡಿ, ದಯವಿಟ್ಟು.

ಪ: ಹಾಗೆಯೇ ಆಗಲಿ. ನಾನೇನಂತಿದ್ದೆ? Yes, ಕರ್ನಾಟಕ ಕರಾವಳಿಯ ಜನರ ಬಗ್ಗೆ ಅವರ ಸಂಸ್ಕೃತಿ ಆಹಾರ ಆಚಾರವಿಚಾರಗಳ ಬಗ್ಗೆ ಹೇಳ್ತಿದ್ದೆ. ಅಲ್ಲಿನ ಜನರು ಒಂದು ವಿಧದ ದೋಸೆ ಮಾಡ್ತಾರೆ ನೋಡು, ಅದಕ್ಕೆ ಉದ್ದಿನಬೇಳೆಯೇ ಬೇಕಾಗಿಲ್ಲ!

ಪಾ: ಅಂದ್ರೇ, ಬರೀ ಅಕ್ಕಿಯನ್ನಷ್ಟೇ ರುಬ್ಬಿ ಹಿಟ್ಟು ಮಾಡೋದಾ?

Neer Dosa : Mouthwatering dish from Dakshina Kannada

ಪ: Exactly! ಅಕ್ಕಿ ಮತ್ತು ನೀರು - ಇಷ್ಟೇ ಇರೋದು ದೋಸೆಹಿಟ್ಟಿನಲ್ಲಿ. ಅದೂ ಹೇಗೆ ಗೊತ್ತಾ, ಅಕ್ಕಿ ಹಿಟ್ಟು ತುಂಬ ತೆಳುವಾಗಿದ್ದು ಅಲ್‌ಮೋಸ್ಟ್‌ ನೀರಿನಂತೆಯೇ ಇರುವುದರಿಂದ ಆ ದೋಸೆಗೆ 'ನೀರ್‌ ದೋಸೆ" ಅಂತಲೇ ಹೆಸರು!

ಪಾ: Wow! Wonderful!! Quite Interesting!!

ಪ: ನೋಡು, ನನಗೆ ಕನ್ನಡದಲ್ಲೇ ಮಾತಾಡಿ ಅಂತ ಜಬರ್ದಸ್ತಿ ಮಾಡಿ ನೀನು ಹೀಗೆ ಇಂಗ್ಲೀಷಲ್ಲಿ ಎಕ್ಸ್‌ಕ್ಲಮೇಷಿಸಬಹುದೇ?

ಪಾ: ಹೋಗ್ಲಿ ಬಿಡಿ, ಕನ್ನಡವೋ ಇಂಗ್ಲಿಷೋ ಆಚೆಗಿರ್ಲಿ, ನನಗೆ ನೀರ್‌ದೋಸೆಯೆ ಬಗ್ಗೆ ಇನ್ನೂ ಹೇಳಿ ಪ್ರಾಣಕಾಂತಾ...

ಪ: ಆಯ್ತು ಪ್ರಾಣವಲ್ಲಭೆ, ಮೊದಲು ನಿನಗೆ ನೀರುದೋಸೆಯ ಸಿಂಪಲ್‌ ರೆಸಿಪಿಯನ್ನು ಹೇಳಿಬಿಡ್ತೇನೆ. ಬೇಕಿದ್ರೆ ಬರೆದುಕೋ.

ಪಾ: ಹೇಳಿ ನಾಥಾ...

ಪ: ಮೂರು ಕಪ್‌ ಬೆಳ್ತಿಗೆ ಅಕ್ಕಿಯನ್ನು ನಾಲ್ಕೈದು ಗಂಟೆಗಳ ಕಾಲವಾದರೂ ನೀರಲ್ಲಿ ನೆನೆಸಿಡಬೇಕು. ಆಮೇಲೆ ಅದನ್ನು ನುಣ್ಣಗೆ ರುಬ್ಬಿಕೊಳ್ಳಬೇಕು (ಕಡೆಯುವ ಕಲ್ಲು ಇದ್ದರೆ ಒಳ್ಳೇದು, ಇನ್ನೇನು ಮಾಡೋಣ ಈಗ ನಮ್ಮ ಭಕ್ತಾದಿಗಳೆಲ್ಲ ಮಿಕ್ಸರ್‌ಗ್ರೈಂಡರನ್ನೇ ಬಳಸ್ತಾರೆ). ರುಬ್ಬುವಾಗಲೇ ಒಂದು ಹಿಡಿ ತೆಂಗಿನಕಾಯಿ ತುರಿ ಸೇರಿಸಿದರೂ ಒಳ್ಳೆಯದೇ. ಹಿಟ್ಟು ನೀರಿನಂತೆ ತೆಳುವಾಗಿರಬೇಕು ಹೌದಾದರೂ ನೀರು ಹಾಕುವಾಗ ಸ್ವಲ್ಪ ಜಾಗ್ರತೆ ಬೇಕು ಅಂತಿಟ್ಟುಕೋ.

ಪಾ: ಹೇ ಜಗದೀಶ್ವರಾ, ಈ ದೋಸೆಗೆ ಉಪ್ಪು ಸಹ ಬೇಡವೇ?

ಪ: ಓಹ್‌, ಉಪ್ಪಿಲ್ಲದೆ ಹೇಗೆ? ಚಿಟಿಕೆ ಉಪ್ಪನ್ನು ಹಿಟ್ಟಿಗೆ ಸೇರಿಸಲೇಬೇಕು!

ಪಾ: ಸರಿ, ಕಡಿದ ಹಿಟ್ಟನ್ನು ರಾತ್ರೆಯಿಡೀ ಫರ್ಮೆಂಟಿಸಲಿಕ್ಕೆ ಇಡಬೇಕೆ?

ಪ: ಅಲ್ಲಿ ಮಲಗಿದೆ ಬಿಂದು! ನೀರುದೋಸೆಯ ಹಿಟ್ಟನ್ನು ಹುಳಿಯಾಗಲಿಕ್ಕೆ ಇಡಲಿಕ್ಕಿಲ್ಲ, ಇಡಬಾರದು. ರುಬ್ಬಿದ ಕೂಡಲೇ ದೋಸೆ ಮಾಡಲಿಕ್ಕೆ ಅಡ್ಡಿಯಿಲ್ಲ. ಒಲೆಯ ಮೇಲೆ ಕಾವಲಿಯಿಟ್ಟು , ಚೆನ್ನಾಗಿ ಎಣ್ಣೆ ಹಚ್ಚಿ, ಸೌಟಿಂದ ಹಿಟ್ಟನ್ನು ಕಾವಲಿಗೆ ಹಾಕುವಾಗಲೇ ಅದು ತೆಳು ಹಿಟ್ಟಾದ್ದರಿಂದ ಕಾವಲಿಯಲ್ಲಿಡೀ ಹರಡಿಕೊಳ್ಳುತ್ತದೆ. ನಿಜ ಹೇಳಬೇಕಂದ್ರೆ ನೀರುದೋಸೆಯ ಹಿಟ್ಟು ಹಾಕುವಾಗ ಸೌಟನ್ನು ಕಾವಲಿಗೆ ತಾಗಿಸಲೇಬಾರದು! ಮುಚ್ಚಳ ಇಟ್ಟು, ಸ್ವಲ್ಪವೇ ಹೊತ್ತಲ್ಲಿ ತೆರೆದು ದೋಸೆ-ಸಟ್ಟುಗದಿಂದ, ಡೆಲಿಕೇಟಾದ ದೋಸೆಯನ್ನು ಕಾವಲಿಯಿಂದ ತೆಗೆಯಬೇಕು. ಮಗುಚಿ ಬೇಯಿಸುವುದು ಬೇಡಾ.

ಪಾ: ನನಗೆ ಇನ್ನೆರಡು ಡೌಟ್ಸ್‌ ಇವೆ. ಒಂದನೇದಾಗಿ ನಾನ್‌-ಸ್ಟಿಕ್‌ ಕಾವಲಿ ಉಪಯೋಗಿಸಬಹುದೇ? ಎರಡನೆಯದಾಗಿ, ಅಷ್ಟು ಡೆಲಿಕೇಟಾದ, ತೆಳುವಾದ ದೋಸೆ ಒಂದರಮೇಲೆ ಒಂದು ಇಟ್ಟಾಗ ಅವೆಲ್ಲ ಅಂಟಿಕೊಳ್ಳೋದಿಲ್ವೇ?

ಪ: ನೀರುದೋಸೆಗೆ ನಾನ್‌-ಸ್ಟಿಕ್‌ ಕಾವಲಿ ಚೆನ್ನಾಗಾಗೋದಿಲ್ಲ. ಅಷ್ಟೇ ಅಲ್ಲ, ನಿಮ್ನ ಮಸೂರದ ಆಕಾರದ ಕಾವಲಿ (ಬಾಂಡ್ಲೆ ದೋಸೆಗೆ ಬಳಸೋದು), ಅಥವಾ ಸುತ್ತಲೂ ರಕ್ಷಣಾಗೋಡೆಯಿಲ್ಲದ ಫ್ಲಾಟ್‌-ತವಾ ಸಹ ಸರಿಯಾಗೋದಿಲ್ಲ. ಚಪ್ಪಟೆಯಾದ ಆದರೆ ತಡೆಗೋಡೆಯಿರುವ ಕಾವಲಿಯೇ ಪ್ರಶಸ್ತವಾದುದು. ಅಷ್ಟಾಗಿಯೂ ನೀರುದೋಸೆ ಎಷ್ಟು ನಾಜೂಕಿನದು ಎಂದರೆ ಮೊದಲ ಒಂದೆರಡು ದೋಸೆ ಸರಿಯಾಗಿ ಇಡಿಯಾಗಿ ಕಾವಲಿಯಿಂದ ಎಬ್ಬಿಸಲಿಕ್ಕಾಗುತ್ತದೆಯೆಂಬ ಗ್ಯಾರಂಟಿಯಿಲ್ಲ !

ಪಾ: ಅದು ನಿರೀಕ್ಷಿತವೇ. ಹೊಸದಾಗಿ ಕಲಿಯುವವರಿಂದಂತೂ ಖಂಡಿತಾ ಒಂದಿಷ್ಟು ಹಿಟ್ಟು ವೇಸ್ಟಾಗುತ್ತದೊ ಏನೊ...

ಪ: ಏನೂ ಮಾಡೊಕ್ಕಾಗೊಲ್ಲ. ಸೈಕಲ್‌ ಬಿಡೋದನ್ನು ಕಲಿಯುವವರು ಮೊದಲದಿನವೇ ಮುಖ್ಯರಸ್ತೆಯಲ್ಲಿ ಬಿಡಲಿಕ್ಕಾಗುತ್ತದೆಯೇ? ಒಂದೆರಡು ಸಲವಾದರೂ ಮೊಣಕೈ-ಮೊಣಕಾಲು ತರಚಿಕೊಂಡ ನಂಟರವೇ ಅವರು ಸೈಕಲ್‌ಪ್ರವೀಣರಾಗೋದಲ್ವೆ? ಹಾಗೇಯೆ ಈ ನೀರ್‌ದೋಸೆಯ ವಿಚಾರ ಕೂಡ!

ಪಾ: ಶಂಭೋ ಶಂಕರಾ... ನೀವು ನನಗೆ ತೋರಿಸಿದ ಚಿತ್ರದಲ್ಲಿ ನೀರುದೋಸೆ ತ್ರಿಕೋನಾಕಾರದಂತಿದೆಯಲ್ಲ ?

ಪ: ಮಂಕೇ, ನೀರುದೋಸೆಯನ್ನು ಕಾವಲಿಯಿಂದ ತೆಗೆಯುವಾಗಲೇ ಅಥವಾ ತೆಗೆದ ನಂತರ ಕಾಲು-ಮಡಚಿ, ಅಂದರೆ ಮೊದಲು ಅರ್ಧಕ್ಕೆ ಮಡಚಿ ಇನ್ನೊಮ್ಮೆ ಅದರರ್ಧಕ್ಕೆ ಮಡಚಿ ಇಡೋದು ಕ್ರಮ. ಆಗ ಅದು ಈ ಆಕಾರಕ್ಕೆ ಬರೋದು.

ಪಾ: ಅದ್ಸರಿ, ನೀರುದೋಸೆಗೆ ಜತೆಯಲ್ಲಿ ತಿನ್ನಲು ವ್ಯಂಜನಗಳೇನಾದರೂ...?

ಪ: ಒಳ್ಳೇ ಮಾತು. ಮಾಮೂಲಿ ದೋಸೆಯಂತೆ ಚಟ್ನಿ, ಸಾಂಬಾರ್‌ ಇತ್ಯಾದಿಯೆಲ್ಲ ಸರಿಹೋಗುತ್ತೆ ನೀರ್‌ದೋಸೆ ಜತೆಗೆ. ಸಾತ್ವಿಕ ಆಹಾರ ತಿನ್ನುವ ನನ್ನ ಭಕ್ತರು ಬಾಳೆಹಣ್ಣಿನ ಸೀಕರಣೆಯ ಜತೆಗೆ ನೀರ್‌ದೋಸೆ ಸವಿಯುತ್ತಾರೆ. ಅಥವಾ ಬಿಸಿಬಿಸಿ ದೋಸೆಗೆ ತುಪ್ಪ ಸುರಿದು ತೆಂಗಿನಕಾಯಿತುರಿ-ಬೆಲ್ಲದ ಹೂರಣದ ಜತೆಗೂ ತಿನ್ನೋದಿದೆ. ಸ್ವಲ್ಪ ತಣ್ಣಗಾದ್ರೆ, ಒಂಚೂರು ತೆಂಗಿನೆಣ್ಣೆ ಹಾಕಿ ಮಿಡಿಮಾವಿನ ಉಪ್ಪಿನಕಾಯಿ ಜತೆಗೂ ಮೆಲ್ಲಬಹುದು. ಮಾಂಸಭಕ್ಷಕರಾದ ನನ್ನ ಗಣಗಳು ಹೇಳುವುದೇನೆಂದರೆ ಕೋಳಿ ಪಲ್ಯ (ತುಳು ಭಾಷೆಯಲ್ಲಿ ಹೇಳುವುದಾದರೆ 'ಕೋರಿ ಆಜಾದಿನೆ") ಸಹ ನೀರ್‌ದೋಸೆಗೆ ತುಂಬಾ ಲಾಯಕ್ಕಾದ ಸೈಡ್‌-ಡಿಶ್ಷು ಅಂತೆ!

ಪಾ: 'ಶಿವ ಶಿವಾ...! ನನಗೆ ಕೋಳಿ ಗೀಳಿ ಬೇಡ. ನಾನು ಸಿಹಿಯಾಗಿ ಸೀಕರಣೆನೇ ಮಾಡ್ತೇನೆ. ನಮ್ಮ ಗಣಪಂದೂ ಸ್ವೀಟ್‌ ಟೂತ್‌ (ಒಂದೂವರೆ ಮಾತ್ರ ಇರೋದಾದ್ರೂ)!

ಪ: ನಿನ್ನಿಷ್ಟ. ಇರೋ ಸಂಗ್ತಿ ನಿನಗೆ ನಾನು ಹೇಳಿದ್ದು ಅಷ್ಟೆ.

ಪಾ: ಅಂದಹಾಗೆ ಈ ತಿಂಡಿ ದಕ್ಷಿಣಕನ್ನಡ ಸ್ಪೆಷಲ್‌ ಅಂತಾದ್ರೆ, ಮೊದ್ಲೇ ಹೊಟೆಲ್‌ ಇಂಡಸ್ಟ್ರಿಯಲ್ಲಿ ಫೇಮಸ್‌ ಆಗಿರೋ ಅವ್ರು ಹೊಟೆಲ್‌ಗಳಲ್ಲೂ ನೀರ್‌ದೋಸೆ ಮಾರಾಟಕ್ಕಿಡ್ತಾರೋ ಏನೊ...

ಪ: ನಿಸ್ಸಂಶಯವಾಗಿ! ಆದರೆ ಸಾರಾಸಗಟಾಗಿ ಎಲ್ಲ ಹೊಟೆಲ್‌ಗಳಲ್ಲೂ ಅಲ್ಲ. ಅದೂ ಎಲ್ಲ ದಿನಗಳಲ್ಲು ಅಥವಾ ದಿನದ ಎಲ್ಲ ಸಮಯದಲ್ಲೂ ಅಲ್ಲ. ಹಾಗಾಗಿ, ಹೊಟೆಲಲ್ಲಿ ನೀರ್‌ದೋಸೆ ತಿನ್ನಬೇಕಿದ್ದರೆ ಸ್ವಲ್ಪ ಲಕ್‌ ಬೇಕು. ಮನೆಗಳಲ್ಲಿ ಮಾತ್ರ ಬಹುತೇಕವಾಗಿ ಆಗಾಗ ಮಾಡ್ತಾರೆ ಬೆಳಗಿನ ತಿಂಡಿಗೆ, ಸಂಜೆ ಚಾ ಜತೆ ಬಾಯಿಗೆ, ಅಥವಾ ಮನೆಗೆ ನೆಂಟರಿಷ್ಟರು ಬಂದಾಗ ಒಂದು ಮುಖ್ಯ ಮೆನು ಐಟಂ ಆಗಿ! ಇನ್ನೊಂದು ವಿಷ್ಯ ಮರೆತೆ. ದಕ್ಷಿಣಕನ್ನಡದ ಕೆಲವು ಜನಾಂಗಗಳಲ್ಲಿ ಸಣ್ಣ ಮಗುವಿನ ಹುಟ್ಟುಹಬ್ಬವನ್ನು ವರ್ಷಪೂರ್ತಿಯಾಗುವಾಗ ಮಾತ್ರವಲ್ಲದೆ ಮೊದಲು ಒಂದನೆ, ಎರಡನೆ, ಮೂರನೆ ಹೀಗೆ ಆರನೆ ತಿಂಗಳವರೆಗೂ ಪ್ರತಿತಿಂಗಳೂ ಆಚರಿಸುವ ಪದ್ಧತಿಯಿದೆ. ಮೂರನೆ ತಿಂಗಳ ಹುಟ್ಟಿದಹಬ್ಬಕ್ಕೆ ನೀರುದೋಸೆ ಮಾಡ್ತಾರೆ. ಯಾಕೆ ಗೊತ್ತಾ? ಆಗ ಮಗುವಿಗೆ ಸರಿಯಾಗಿ ಕಿವಿಕೇಳೋದಕ್ಕೆ ಶುರುವಾಗೋದು ಅಂತ ನಂಬಿಕೆ. ನೀರುದೋಸೆ ಹುಯ್ಯುವಾಗಿನ ಚುಂಯ್‌ ಚುಂಯ್‌ ಶಬ್ದವೇ ಮಗು ಕೇಳಿಸಿಕೊಳ್ಳುವ ಮೊದಲ ಶಬ್ದ! ಎಷ್ಟು ಮುದ್ದಾಗಿದೆ ನೋಡು ಆ ಕಲ್ಪನೆ?

ಪಾ: ಧನ್ಯನಾದೆ ಪ್ರಾಣಕಾಂತಾ! ನೀರುದೋಸೆಯ ಬಗ್ಗೆ ಎಷ್ಟೊಂದು ವಿವರವಾದ ಮಾಹಿತಿ ಸಿಕ್ತು ನನಗೆ! ಉದ್ದಿಲ್ಲದ ದೋಸೆಯ ಬಗ್ಗೆ ಉದ್ದವಾದ ಲೆಕ್ಚರ್‌ ಕೊಟ್ಟದ್ದಕ್ಕೆ ನಿಮಗೆ ನಾನು ಚಿರಋಣಿ. ನಾನು ನಿಜವಾದ ಧನ್ಯವಾದ ಹೇಳೋದು ನಾಳೆ ಬೆಳಿಗ್ಗೆಯ ತಿಂಡಿಗೆ ನೀರ್‌ದೋಸೆ ಮಾಡಿ ನಿಮಗೆ ಬಡಿಸುವ ಮೂಲಕವೇ!

ಪ (ಮನದಲ್ಲೇ): ಪತ್ನಿಯ ಹೊಸರುಚಿ ಪ್ರಯೋಗಗಳಿಗೆ ಗಿನಿಪಿಗ್‌ ಆಗುವ ಕರ್ಮ ಜಗದೊಡೆಯ ಜಗದೀಶ್ವರನಿಗೂ ತಪ್ಪಿದ್ದಲ್ಲ...!

(ಮುಗುಳ್ನಗುತ್ತಾ) : ಹಾಗೆಯೇ ಆಗಲಿ. ನಿನಗೂ ನಿನ್ನ ನೀರುದೋಸೆಗೂ ನೂರಾರು ಹಾರೈಕೆಗಳು!""

* * *

ಕೈಲಾಸದಲ್ಲೇ ನೀರುದೋಸೆಗೆ ತಯಾರಿ ನಡೆದಿದೆಯೆಂದ ಮೇಲೆ ನಾವು-ನೀವು ಹಿಂದೆ ನೋಡೋದೇನಿದೆ? ಇದೀಗಲೇ ಅಕ್ಕಿ ನೆನೆಸಿಡಿ. ಐದಾರು ಗಂಟೆಗಳ ತರುವಾಯ ರುಬ್ಬಿ ಒಡನೆಯೇ ನೀರುದೋಸೆ ಮಾಡಿಯೇ ಬಿಡಿ! ಪಾರ್ವತಿ-ಪರಮೇಶ್ವರರಿಗೆ ನೈವೇದ್ಯ ಮಾಡುವ ಅವಶ್ಯಕತೆಯಿಲ್ಲ (ಯಾಕಂದ್ರೆ ಅವರ ಮನೆಯಲ್ಲೂ ಅದ್ನೇ ಮಾಡ್ತಿದ್ದಾರೆ ಅನ್ನೋದು ಗೊತ್ತಲ್ಲ ?). ನೀವೇ ಆರಾಮಾಗಿ ದೋಸೆ ಮೆಲ್ಲುತ್ತ ಮಜಾ ಮಾಡಿ!

English summary
Neer Dosa : Mouthwatering dish from Dakshina Kannada by ‘Vichitranna’ columnist Srivathsa Joshi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X