ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಸರ ಪದಗಳಲ್ಲಿ ಭಕ್ಷ್ಯಭೋಜ್ಯಗಳು !

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Purandara Daasaru cooks delicious meal for offering to GOD ವಿಚಿತ್ರಾನ್ನದಲ್ಲಿ ಆಗಾಗ ಯಾವುದಾದರೂ ಪುರಾವೆ ಸಾಕ್ಷ್ಯಾಧಾರ ಪ್ರತಿಪಾದನೆಗಾಗಿ ಪುರಂದರದಾಸರನ್ನು, ಅವರು ರಚಿಸಿದ ಕೃತಿಗಳನ್ನು ಅವಲಂಬಿಸಿದ್ದುಂಟು. ಹಾಗಿರುವಾಗ ಒಂದು ಇಡೀ ಸಂಚಿಕೆಯನ್ನೇ ಆ ಮಹಾಮಹಿಮ ಸಂತನಿಗೇ ಡೆಡಿಕೇಟಿಸಿದರೆ ಹೇಗೆ ಎಂಬ ಆಲೋಚನೆ ಬಂತು. ಆದರೆ ಹಾಗಂತ ಹೇಳಿ ‘ವಿಷದ ಬಟ್ಟಲಲ್ಲಿ ಹೆಂಡತಿಯ ಮೂಗುತಿ..., ಜಿಪುಣ ವ್ಯಾಪಾರಿಯಾಗಿದ್ದವ ಪುರಂದರದಾಸರಾದ ಸಂಗತಿ’ ಇತ್ಯಾದಿ ಕಥೆ ಬ(ಕೊ)ರೆದರೆ ಅದು ಚರ್ವಿತಚರ್ವಣ ಆಗುತ್ತದೆ. ಅಥವಾ ‘ಪುರಂದರದಾಸರ ಪದಗಳಲ್ಲಿ ಪಾರಮಾರ್ಥಿಕ ಸತ್ಯ...’ (ಕುವೆಂಪು ಕಾವ್ಯದಲ್ಲಿ ಪ್ರಕೃತಿ ವರ್ಣನೆ..., ಮಲ್ಲಿಗೆ ಕವಿಯ ಕವನಗಳಲ್ಲಿ ದಾಂಪತ್ಯದ ಮಾಧುರ್ಯ... ಇತ್ಯಾದಿ ವಿಷಯಗಳಿದ್ದ ಹಾಗೆ) ಅಂತೇನಾದರೂ ಪ್ರಬಂಧ ಬರೆಯುತ್ತೇನೆಂದರೆ ಅದು ವಿಪರೀತ ಭಾರವಾಗುತ್ತದೆ. ಈ ಅಂಕಣದ ಚೌಕಟ್ಟಿಗೆ (ಹಾಗಂತ ಒಂದು ಇದ್ದರೆ?) ಹೊಂದುವಂತೆ ಬರೆಯುವುದಾದರೆ ಅತಿ ಸೂಕ್ತವಾದುದು - ದಾಸರ ಪದಗಳಲ್ಲಿ ತಿಂಡಿ ತಿನಿಸಿನ ಉಲ್ಲೇಖ!

ಓದುತ್ತ ಮನಸ್ಸಲ್ಲೇ ಮಂಡಿಗೆ ಮೆಲ್ಲುವುದು ಯಾರಿಗೆ ಬೇಡ ಹೇಳಿ? ಹಾಗಾಗಿ ಈ ವಾರದ ಭಕ್ಷ್ಯಣ is brought to you by ದಾಸರು. ದಾಸರೆಂದರೆ ಪುರಂದರ ದಾಸರಯ್ಯಾ....

ಕೃಷ್ಣನ ಗುಣಗಾನದ ನೆಪದಲ್ಲಿ ದಾಸರು ಬೆಣ್ಣೆ, ಹಾಲು, ತುಪ್ಪ, ಮೊಸರು ಮೊದಲಾದ ಹೈನು ಪದಾರ್ಥಗಳನ್ನು ತಮ್ಮ ಪದಗಳಲ್ಲಿ ಯಥೇಷ್ಟ ಬಳಸಿದ್ದಾರೆ. ಎಷ್ಟೆಂದರೆ ಪರಮಾತ್ಮನು ಒಂದು ವೇಳೆ cholesterol conscious ಅಗಿದ್ದಿದ್ದರೆ ದಾಸರಿಗೆ ಸಾಕು ನಿಲ್ಲಿಸು, ನಾನು ಡಯಟ್‌ನಲ್ಲಿದ್ದೇನೆ ಎಂದು ಕನಸಲ್ಲಾದರೂ ಬಂದು ಎಚ್ಚರಿಸುತ್ತಿದ್ದುದು ಗ್ಯಾರಂಟಿ. ಹಾಗೆ ಮಾಡಲಿಲ್ಲ ನಮ್ಮ ಪುಣ್ಯ. ಪುರಂದರದಾಸರು ಮತ್ತೂ ಮತ್ತೂ ಬೆಣ್ಣೆ ಹಚ್ಚಿದರು, ತುಪ್ಪ ಸುರಿದರು. ರುಚಿರುಚಿಯಾದ ಕೀರ್ತನೆಗಳನ್ನು ರಚಿಸಿದರು. ಅವೆಲ್ಲ ಈ ಲೇಖನಕ್ಕೆ ಕಚ್ಚಾ ಸಾಮಗ್ರಿಯಾದುವು.

ಪಾಯಸದೊಂದಿಗೆ ನಾವು ಸಾಂಪ್ರದಾಯಿಕ ಊಟ ಶುರುಮಾಡಿದಂತೆ ಮೊದಲು ಪಾಯಸದ ವಿಷಯ ನೋಡೋಣ. ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ... ಹಾಡಿನಲ್ಲಿ ಪುರಂದರದಾಸರು, ‘ಮುಪ್ಪು ಬಂದಿತಲ್ಲಾ ಪಾಯಸ ತಪ್ಪದೆ ಉಣಲಿಲ್ಲ... ತುಪ್ಪದ ಬಿಂದಿಗೆ ತಿಪ್ಪೆ ಮೇಲೆ ಧೊಪ್ಪನೆ ಬಿತ್ತಲ್ಲ...! ’ ಎಂದಿದ್ದಾರೆ. ಅದಕ್ಕಿಂತಲೂ ‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಠಲನಾಮ ತುಪ್ಪವ ಬೆರೆಸಿ ಬಾಯ ಚಪ್ಪರಿಸಿರೋ...’ ಹಾಡನ್ನೇ ತೆಗೆದುಕೊಳ್ಳಿ. ಅದರ ಚರಣಗಳಲ್ಲಿ ಪಾಯಸ ತಯಾರಿಯ ವರ್ಣನೆ ಎಷ್ಟು ಸೊಗಸಾಗಿದೆ! ಒಮ್ಮನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ... ಸುಮ್ಮನೆ ಸಜ್ಜಿಗೆ ತೆಗೆದು ಕಮ್ಮನೆ ಶಾವಿಗೆ ಹೊಸೆದು... ಹೃದಯವೆಂಬೊ ಮಡಿಕೆಯಲ್ಲಿ ಭಾವ ಎಂಬ ಹೆಸರನ್ನಿಟ್ಟು... ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು... ತಿನ್ನಬೇಕಂತೆ ಪಾಯಸವನ್ನು. ಶ್ಯಾವಿಗೆ ಹೊಸೆದು ಅಂದರೆ ಪುರಂದರ ದಾಸರಿಗೆ hand rolled noodles ಗೊತ್ತಿತ್ತು ಎಂದಾಯ್ತು. ಬ್ಯಾಂಬಿನೊ ಅಥವಾ ಸೇವರಿಟ್‌ ಬ್ರಾಂಡ್‌ನ ವರ್ಮಿಸೆಲ್ಲಿ ಗೊತ್ತಿತ್ತೊ ಇಲ್ಲವೊ ತಿಳಿದಿಲ್ಲ :-)

Purandara Daasaru - the pitamaha of Karnatic Musicಸೇವರಿಟ್‌ ಶ್ಯಾವಿಗೆ ಒತ್ತಟ್ಟಿಗಿರಲಿ. ದಾಸರ ಫೇವರಿಟ್‌ಗಳಲ್ಲಿ ಮುಖ್ಯವಾದುದು ಅತಿರಸ ಮತ್ತು ಅಪ್ಪ. ‘ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ...’ ಕೃತಿಯಲ್ಲಿ ವರ್ಣಿಸಿದಂತೆ ಅಪ್ಪ-ಅತಿರಸಗಳನ್ನು ಮೆದ್ದ ಸ್ವಾಮಿ ಅಸುರರನ್ನು ಕಾಲಲ್ಲೇ ಒದ್ದನಂತೆ! ‘ಓಡಿ ಬಾರೈ ವೈಕುಂಠಪತಿ ನಿನ್ನ ನೋಡುವೆ ಮನದಣಿ ನಾ...’ ಹಾಡಿನಲ್ಲೂ ದಾಸರು ವೈಕುಂಠಪತಿಗೆ ಎಣ್ಣೋರಿಗತಿರಸ ದಧಿ ಘೃತವೋ ರಂಗ ಎನ್ನಯ್ಯ ನಿನಗೆ ಕೊಡುವೆ ಬಾರೊ... ಎನ್ನುತ್ತಾರೆ. ಅತಿರಸ ಎಂದರೆ ಅಕ್ಕಿಹಿಟ್ಟಿಗೆ ಬೆಲ್ಲದಪಾಕ ಸೇರಿಸಿ ಬಾಳೆ ಎಲೆ ಅಥವಾ ಪ್ಲಾಸ್ಟಿಕ್‌ ಮೇಲೆ ಕೈಯಿಂದ ತಟ್ಟಿ ಅದನ್ನು ತುಪ್ಪದಲ್ಲಿ ಕರಿದು ಮಾಡುವ ಒಂದು ಕಜ್ಜಾಯ. ಅಪ್ಪ ಅಂದರೆ ಗೊತ್ತಲ್ಲ , ಏಳು ತೂತು(groove)ಗಳುಳ್ಳ ಕಾವಲಿಯಲ್ಲಿ ದೋಸೆಹಿಟ್ಟಿನದಂಥದನ್ನು ಹಾಕಿ ಮಾಡುವ ರುಚಿರುಚಿ ತಿಂಡಿ.

ಅಪ್ಪ-ಅತಿರಸದಂತೆ ಹೋಳಿಗೆ ಕೂಡ ಗೊತ್ತು ದಾಸರಿಗೆ. ಹೋಳಿಗೆ ಮಾಡುವಾಗಿನ ಕಣಕವನ್ನಲ್ಲವೇ ಅವರು ‘ಕಣಕ ಕುಟ್ಟೋವಲ್ಲಿಗೆ ಹೋಗಿ ಇಣುಕಿ ಇಣುಕಿ ನೋಡಿದಿರಿ....’ (ಡೊಂಕುಬಾಲದ ನಾಯಕರೆ ನೀವೇನಾಟವ ಆಡಿದಿರಿ... ಪದ್ಯದಲ್ಲಿ) ಉಲ್ಲೇಖಿಸಿದ್ದು ? ಆ ಹಾಡು ನಿಜವಾಗಿಯೂ ನಾಯಿಗಳನ್ನುದ್ದೇಶಿಸಿ ಬರೆದದ್ದೋ ಎಂದೇ ಅನುಮಾನ ಬರುತ್ತದೆ. ಅದರಲ್ಲೇ, ಹುಗ್ಗಿ ಮಾಡೊವಲ್ಲಿಗೆ ಹೋಗಿ ಸೌಟಿಂದ ಬಡಿಸಿಕೊಂಡು (ಅಂದ್ರೆ ಬಡಿತ ತಿಂದು) ಬಂದಿರಿ ಎಂದು ನಾಯಿಗಳ ಬಗ್ಗೆ ಮರುಕಪಡುತ್ತಾರೆ ದಾಸರು. ‘ಬಡಿಸಿಕೊಂಡು’ ಎನ್ನುವಲ್ಲಿನ wordplay ಗಮನಿಸಿ.

ಮಾನವ ಕಂಡ ಆಧುನಿಕತೆಯಲ್ಲಿ ಮೊದಲು ಬೆಲ್ಲ ಆಮೇಲೆ ಸಕ್ಕರೆ ತಯಾರಿ/ಬಳಕೆ ಬಂದದ್ದಿರಬಹುದು ಎಂದು ನಾವೆಣಿಸುತ್ತೇವೆ. ಆದರೆ ಪುರಂದರದಾಸರು ಬೆಲ್ಲಕ್ಕಿಂತ ಸಕ್ಕರೆಯನ್ನೇ ಜಾಸ್ತಿ ಉಪಯೋಗಿಸೋದು. ಭಾಗ್ಯದ ಲಕ್ಷ್ಮಿಯ ಶುಕ್ರವಾರದ ಪೂಜೆಯ ವೇಳೆಗೆ ಸಕ್ಕರೆ-ತುಪ್ಪದ ಕಾಲುವೆಯನ್ನೇ ಹರಿಸುತ್ತಾರವರು. ಆ ಕಾಲುವೆ ಹೇಗಿರಬಹುದು? ತುಂಗಭದ್ರಾ ಎಡದಂಡೆ ಕಾಲುವೆ ಅಥವಾ ಮೇಲ್ದಂಡೆ ಕಾಲುವೆಯಂತಿರಬಹುದೇ? just for imagination! ಇನ್ನೊಂದು ಮಾತು. ಕಾಲುವೆಗಳಲ್ಲಿ ತುಪ್ಪವನ್ನು ಹರಿಸಿದ ದಾಸರಿಗೆ ಆವಾಗಲೇ ಗೊತ್ತಿತ್ತೋ ಏನೊ ಮುಂದೆ ಏಡುಕೊಂಡಲವಾಡ ವೆಂಕಟರಮಣನ (ತಿರುಪತಿ) ಲಡ್ಡುಪ್ರಸಾದ ತಯಾರಿಗೆ ನಮ್ಮ ಕರ್ನಾಟಕದಿಂದಲೇ ನಂದಿನಿ ತುಪ್ಪ ಸರಬರಾಜು ಆಗುತ್ತದೆಯೆಂಬುದು. ತುಪ್ಪ-ಸಕ್ಕರೆಗಳಂತೆಯೇ ಕಲ್ಲುಸಕ್ಕರೆಯನ್ನೂ ಧಾರಾಳ ಪ್ರಮೋಟ್‌ ಮಾಡಿದ್ದಾರೆ ದಾಸರು. ‘ಕಲ್ಲುಸಕ್ಕರೆ ಕೊಳ್ಳಿರೊ...’ ಹಾಡಿನಲ್ಲಿ ಪುಲ್ಲಲೋಚನ ಶ್ರೀಕೃಷ್ಣ ನಾಮವೇ ಕಲ್ಲುಸಕ್ಕರೆಯಿದ್ದಂತೆ ಎಂದಿದ್ದಾರೆ.

ಡಯಾಬಿಟಿಸ್‌ ಶುರುವಾಗುವಷ್ಟು ಅಪಾಯಕಾರಿ ಮಟ್ಟದಲ್ಲಿ ಸಿಹಿಯನ್ನಷ್ಟೇ ತಿನಿಸಿದ್ದೇ ಪುರಂದರದಾಸರು? ಖಂಡಿತವಾಗಿಯೂ ಅಲ್ಲ ! ‘ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ ದಿವ್ಯ ಷಡುರಸಾನ್ನವಿಟ್ಟನೊ...’ ಎಂಬ ಹಾಡಿನಲ್ಲಿ ಅವರು ಫುಲ್‌ ಮೆನು ಡಿಸ್ಪ್ಲೇ ಮಾಡಿದ್ದಾರೆ. ಮೇಲಾಗಿ ಈ ರಸಪಾಕವನ್ನು ಸ್ವತಃ ಭೂದೇವಿ-ರಮಾದೇವಿಯರೇ ಸ್ವಹಸ್ತದಿಂದ ಮಾಡಿದ್ದೆಂದೂ ವರ್ಣಿಸಿದ್ದಾರೆ.

ಅರವತ್ತು ಶಾಕ ಲವಣ ಶಾಕ ಮೊದಲಾದ । ಸರಸ ಮೊಸರು ಬುತ್ತಿ ಚಿತ್ರಾನ್ನವೋ
ಪರಮ ಮಂಗಳ ಅಪ್ಪವು ಅತಿರಸ । ಹರುಷದಿಂದಲಿಯಿಟ್ಟ ಹೊಸ ತುಪ್ಪವೋ
ಹಿಡೆಯಂಬೊಡೆ ದಧಿವಡೆಯು ತಿಂಥಿಣಿ । ಒಡೆಯ ಎಡಗೆ ಒಡನೆ ಬಡಿಸಿದ
ದೃಢವಾದ ಪದಾರ್ಥಗಳನೆಲ್ಲ ಇಡಿಸಿದೆ । ಒಡೆಯ ಶ್ರೀ ಪುರಂದರ ವಿಠಲನೆ ಉಣ್ಣೊ

ಅಂದರೆ ಚಿತ್ರಾನ್ನ, ಬುತ್ತಿಯನ್ನ, ಮೊಸರನ್ನ, ಆಂಬೊಡೆ, ದಹಿವಡಾ (ತೈರ್‌ವಡೆ) ಇತ್ಯಾದಿ ಡೆಲಿಷಿಯಸ್‌ ಐಟಮ್ಸೆಲ್ಲ ಕುಕ್ಕಿಸಿದ್ದಾರೆ ಪುರಂದರದಾಸರು. ನಿಜವಾಗಿಯೂ ಗ್ರೇಟ್‌ ಅಲ್ಲವೇ? ಇನ್ನೂ ಒಂದು ಸ್ವಾರಸ್ಯಕರ ಸಂಗತಿಯೆಂದರೆ, ಭಾರತದಲ್ಲಿ ಪ್ರಪ್ರಥಮವಾಗಿ ಅಡಿಗೆಯಲ್ಲಿ ಮೆಣಸಿನ ಉಪಯೋಗ ಉಲ್ಲೇಖವಾಗಿರುವುದು ಪುರಂದರದಾಸರ ಕೃತಿಯಾಂದರಲ್ಲಿ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಒಬ್ಬ ತಜ್ಞರು ಪ್ರಕಟಿಸಿದ ಸಂಶೋಧನಾ ಪ್ರಬಂಧದಲ್ಲಿದೆ! ಅದು ದಾಸರ ಯಾವ ಕೃತಿ ಎಂಬುದನ್ನು ಮಾತ್ರ ಅದರಲ್ಲಿ ಹೇಳಿಲ್ಲ. ಅಂದಹಾಗೆ ಪುರಂದರದಾಸರು ಬದುಕಿದ್ದ ಕಾಲ ಕ್ರಿ.ಶ 1480 ರಿಂದ 1564 ಎಂದೂ ಆ ಪ್ರಬಂಧ ತಿಳಿಸುತ್ತದೆ.

ಭಗವಂತನಿಗೆ ಅರ್ಪಣೆಗೋಸ್ಕರ ಮಾತ್ರವಲ್ಲದೆ ಭಕ್ತಾದಿಗಳ ಬದುಕಿಗೆ ಬೆಳಕಾಗುವಂತೆ ಬರೆದ ಹಿತನುಡಿಯ ಪದಗಳಲ್ಲೂ ದಾಸರು ತಿಂಡಿತಿನಿಸನ್ನು ಉಲ್ಲೇಖಿಸಿದ್ದಾರೆ. ಅಂಥವುಗಳ ಪೈಕಿ ಒಂದೆರಡನ್ನು ಅವಲೋಕಿಸೋಣ.

ಜಿಪುಣಬುದ್ಧಿಯವರನ್ನು ಮೂದಲಿಸುತ್ತ ದಾಸರು ‘ಹುಗ್ಗಿಯ ತುಪ್ಪವು ಮನೆಯಾಳಗಿರಲಿಕ್ಕೆ ಗುಗ್ಗುರಿಯನ್ನವ ತಿಂದ್ಯಲ್ಲ ಪ್ರಾಣಿ... ಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂಳಿಟ್ಟು ಮತ್ತೆ ಉಪ್ಪಿಲ್ಲದೆ ಉಂಡ್ಯಲ್ಲೊ ಪ್ರಾಣಿ...’ ಎಂದಿದ್ದಾರೆ - ‘ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ ಹರಿ ಕೊಡದ ಕಾಲಕ್ಕೆ ಬಾಯಿ ಬಿಡುವಲ್ಲೊ ಪ್ರಾಣಿ...’ ಎಂಬ ಕೃತಿಯಲ್ಲಿ. ಇಂಥ ಜಿಪುಣರು ನಮ್ಮ-ನಿಮ್ಮ ದೈನಂದಿನ ವ್ಯವಹಾರಗಳಲ್ಲೂ ಬೇಕಾದಷ್ಟು ಮಂದಿ ಸಿಗುತ್ತಾರಲ್ಲವೆ? ಇದ್ದಾಗ ಅದನ್ನು ಅನುಭವಿಸಿ ಆನಂದಿಸದೆ ಅದಿಲ್ಲ ಇದಿಲ್ಲ ಎಂದು ಪರಿತಪಿಸುವ ಅಳುಮುಂಜಿಗಳಿಗೇನು ಕೊರತೆಯಿದೆಯೇ? ಇರುವುದನು ಬಿಟ್ಟು ಇಲ್ಲದುದರ ಕಡೆ ತುಡಿತ.... ಅಡಿಗರು ಅಡಿಗೆ ಮಾಡಿ ನಮಗೆ ಬಡಿಸಿದ್ದೂ ಅದೇ ತತ್ವವನ್ನಲ್ಲವೇ?

ಭಿಕ್ಷಕೆ ರಾಗಿ ತಂದೀರಾ ಎಂದು ಕೇಳುತ್ತಲೇ ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ಎಂದು ‘ರಾಗಿ’ ಪದವನ್ನುಪಯೋಗಿಸಿ ಪನ್‌ ಮಾಡಿದ್ದಾರೆ ಪುರಂದರದಾಸರು. ವಿಚಿತ್ರಾನ್ನದಲ್ಲಿ ಆಗಾಗ ಕಾಣಿಸಿಕೊಳ್ಳು(ಲ್ಲು)ವ ತಲೆಹರಟೆಯ ಪನ್‌-ಫನ್‌ ಕೂಡ ದಾಸರ ಅನುಗ್ರಹ ಹೊಂದಿದೆ ಎಂದು ಬೇರೆ ಹೇಳಬೇಕಿಲ್ಲ ತಾನೆ! ಹಾಗಿದ್ದರೆ ಈ ಅಧ್ಯಾಯದಲ್ಲೂ ಪನ್‌ಗೆ ಅವಕಾಶಕೊಡುತ್ತೀರಾದರೆ ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ ಹಾಡನ್ನೇ ಮುಂದುವರೆಸಿ, ಒಂದೊಮ್ಮೆ ಪುರಂದರದಾಸರು ನಮ್ಮ ಸಮಕಾಲೀನರಾಗಿದ್ದರೆ ಅಂದರೆ ಈಗಿನ ಜಮಾನಾದಲ್ಲಿ ನಮ್ಮೊಂದಿಗೆ ಬದುಕಿರುತ್ತಿದ್ದರೆ ರಾಗಿ ಪದ್ಯವನ್ನವರು ಹೇಗೆ ಹೇಳುತ್ತಿದ್ದರು ಎಂಬುದರೊಂದಿಗೆ ಮುಗಿಸುವಾ.

ರಾಗಿ ತಿಂದಿರಾ ನಿದ್ದೆಗೆ ರಾಗಿ ತಿಂದಿರಾ

ಮುದ್ದೆಯ ಹುಚ್ಚನು ಬಿಟ್ಟವರಾಗಿ
ಸದ್ದಿನ ಗೊರಕೆಯ ನಿಲಿಸುವರಾಗಿ
ನಿದ್ದೆಯಿಂದ ಎಚ್ಚೆತ್ತವರಾಗಿ
ಎದ್ದುನಿಂತು ಮುಂದೆ ನಡೆಯುವರಾಗಿ

ಇದೇ ಪದ್ಯವನ್ನು ಇನ್ನೂ ಸ್ವಲ್ಪ ಹೆಚ್ಚೇ ಕಂಟೆಂಪರರಿ ಮಾಡಬಹುದಾದರೆ....

ಪ್ರಧಾನಿಯಾದ ಒಬ್ಬನೇ ಒಬ್ಬ ಕನ್ನಡಿಗರಾಗಿ
ನಿಧಾನವಾದ್ರೂ ದೇಶೋದ್ಧಾರ ಕನಸ ಕಾಣುವರಾಗಿ
ಒದೆ ತಿಂದರೂ ಸೋನಿಯಮ್ಮನ ಕಾಲ್ಹಿಡಿಯುವರಾಗಿ
ಮುದದಿಂದಲಿ ಕಿಂಗ್‌ಮೇಕರ್‌ ಎಂದು ಪ್ರಸಿದ್ಧರಾಗಿ

ಸದ್ಯಕ್ಕೆ ಇದನ್ನು ಇಲ್ಲಿಗೇ ನಿಲ್ಲಿಸುವರಾಗಿ?

* * *

ಇಷ್ಟೆಲ್ಲ ಭೂರಿಭೋಜನವನ್ನೊದಗಿಸಿದ ಪುರಂದರದಾಸರ ಬಗ್ಗೆ ಓದಿದ ಮೇಲೆ ಈಗ ಒಂದು ಸಾಮಾನ್ಯಜ್ಞಾನದ ಅತಿ ಸುಲಭ ಪ್ರಶ್ನೆ ನಿಮಗೆ. ‘ಪುರಂದರದಾಸರಾಗುವ ಮೊದಲು ಆ ಜಿಪುಣ ವ್ಯಾಪಾರಿಯ ಹೆಸರು ಏನಿತ್ತು? ಅಂದರೆ ಪುರಂದರದಾಸರ ಪೂರ್ವಾಶ್ರಮದ ಹೆಸರೇನು?’

ಪ್ರಶ್ನೆಗೆ ಉತ್ತರವನ್ನು, ಹಾಗೆಯೇ ಮೃಷ್ಠಾನ್ನಭೋಜನ ಬಡಿಸಿದ್ದಕ್ಕೆ ದಾಸರಿಗೆ ಥ್ಯಾಂಕ್ಯೂ ಹೇಳುವುದಿದ್ದರೆ ಅದನ್ನೂ ನನ್ನ ವಿಳಾಸಕ್ಕೇ ([email protected]) ವಿ-ಪತ್ರಿಸಬೇಕು ಎಂದು ದಾಸರೇ ಆಣತಿಯಿತ್ತಿದ್ದಾರೆ!


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X