• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರ್ಷದ ಮೊದಲ ಸಂಚಿಕೆಯಲ್ಲಿ ಪನ್‌, ಫನ್‌, ಕಿಲಾಡಿತನಕ್ಕೆ ಕೊಂಚ ವಿರಾಮ, ಪರಮದಯಾಳು ಪರಮಾತ್ಮನ ಗುಣಗಾನ.

By Staff
|
Srivathsa Joshi *ಶ್ರೀವತ್ಸ ಜೋಶಿ

Srimannarayana‘ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ...’ ಎಂಬುದನ್ನು ಹತ್ತು ಅವತಾರಗಳ ಮೂಲಕ ಶ್ರೀಮನ್ನಾರಾಯಣನು ಮನುಕುಲಕ್ಕೆ ಪ್ರೂವ್‌ ಮಾಡಿ ತೋರಿಸಿದ್ದಾನೆ. ವಿಷ್ಣುವಿನ ಆ ಹತ್ತು ಅವತಾರಗಳನ್ನು (ಮತ್ಸ್ಯ, ಕೂರ್ಮ, ವರಾಹ, ನೃಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿ) ಕೊಂಡಾಡುವ ಕನ್ನಡ ಭಕ್ತಿಗೀತೆಗಳ ಒಂದು ಗೀತಗುಚ್ಛವೇ ಈ ವಾರದ ವಿಚಿತ್ರಾನ್ನ. ಇದು ಈ ಕ್ಯಾಲೆಂಡರ್‌ ವರ್ಷದ ಮೊದಲ ಸಂಚಿಕೆ. ಹಾಗಾಗಿ ಪನ್‌, ಫನ್‌ ಇತ್ಯಾದಿ ಕಿಲಾಡಿತನವನ್ನು ಸ್ವಲ್ಪ ಬದಿಗಿಟ್ಟು, ಪರಮದಯಾಳು ಪರಮಾತ್ಮನ ಗುಣಗಾನವನ್ನು ಮಾಡಿದರೆ ಲೋಕಕಲ್ಯಾಣವೂ ಆದಂತಾಗುತ್ತದೆಯೆಂಬ ದೃಷ್ಟಿಯಿಂದ ಇದನ್ನು ‘ಭಕ್ತಿಪ್ರಧಾನ’ವನ್ನಾಗಿ ತಯಾರಿಸಿದ್ದೇನೆ. ‘ದೇವರ ಪ್ರಸಾದ’ ಎಂಬ ಪೂಜ್ಯಭಾವ ಇದಕ್ಕೆ ಸಲ್ಲಲಿ!

* * *

‘ಉದಯರಾಗ’ ಧ್ವನಿಸುರುಳಿಯಲ್ಲಿ ವಿದ್ಯಾಭೂಷಣ ಅವರು ಹಾಡಿರುವ ವಾದಿರಾಜರ ರಚನೆಯಾಂದಿಗೆ ಕಾರ್ಯಕ್ರಮವನ್ನು ಆರಂಭಿಸೋಣ.

ಬೆಳಗು ಝಾವದಿ ಬಾರೋ ಹರಿಯೆ ನಿನ್ನ । ಚರಣ ತೊಳೆದು ಜಲವ ಪಾನ ಮಾಡುವೆ ನಾ ।। ಪ ।।

ನೀರ ಒಳಗೆ ನಿಂತುಕೊಂಬೆ ಬೆನ್ನ । ಭಾರ ಹೊತ್ತರೆ ನಗುವಳೋ ನಿನ್ನ ರಂಭೆ ।।

ಮೋರೆ ತಗ್ಗಿಸಿದರೇನೆಂಬೆ ಜಗದಿ । ನಾರಸಿಂಹನಾಗಿ ಪೂಜೆಯ ಕೊಂಬೆ ।। ಬೆಳಗು ।।

ಬಲಿಯದಾನವ ಬೇಡಿದ್ಯಲ್ಲೋ ಕ್ಷಾತ್ರ । ಕುಲವಸವರೆ ಕೊಡಲಿಯನು ಪಿಡಿದಿ ಅಲ್ಲೋ ।।

ಬಲವಂತ ನಿನಗೆದುರು ಇಲ್ಲೋ ನಿನ್ನ । ಲಲನೆಯ ತಂದು ರಾಜ್ಯವನಾಳಿದ್ಯಲ್ಲೋ ।। ಬೆಳಗು ।।

ಗೋಕುಲದೊಳು ನೀ ಇದ್ದೆಯಲ್ಲೋ ಲೋಕ । ಪಾಕು ಮಾಡಲು ಬುದ್ಧ ರೂಪನಾದ್ಯಲ್ಲೋ ।।

ಏಕೆ ಹಯವನು ಏರಿದ್ಯಲ್ಲೋ ನಮ್ಮ । ಸಾಕುವ ಹಯವದನ ನೀನೇ ಬಲ್ಯಲ್ಲೋ ।। ಬೆಳಗು ।।

Dashavataras - 10 incarnations of Vishnu* * *

ಇನ್ನು, ಪುರಂದರ ದಾಸರ ರಚನೆಯಾಂದನ್ನು ನೋಡಿ. ಧಾರವಾಡ ಆಕಾಶವಾಣಿಯ ‘ವಂದನ’ ಕಾರ್ಯಕ್ರಮವನ್ನು ಕೇಳುವ ಅಭ್ಯಾಸವಿದ್ದವರಿಗೆ ಈ ಭಕ್ತಿಗೀತೆಯ ಪರಿಚಯವಿರುತ್ತದೆ! ಈ ಭಕ್ತಿಗೀತೆಯಲ್ಲಿ, ಮೇಲ್ನೋಟಕ್ಕೆ ಯಶೋದೆ ಬಾಲಕೃಷ್ಣನ ತುಂಟಾಟಗಳ ಬಗ್ಗೆ ವರ್ಣಿಸುತ್ತಿರುವಂತೆ, ಲೂಟಿ ಮಾಡುತ್ತಿರುವ ಆತನನ್ನು ‘ಹೊತ್ತುಕೊಂಡು ಹೋಗುವಂತೆ’ ಜೋಗಿಯಾಬ್ಬನಿಗೆ ಹೇಳುತ್ತಿರುವಂತೆ ತೋರಿದರೂ ಸೂಕ್ಷ್ಮವಾಗಿ ಗಮನಿಸಿದರೆ ದಶಾವತಾರಗಳ ವರ್ಣನೆಯಿದೆ.

ಇವನ ಪಿಡಿದುಕೊಂಡು ಹೋಗೆಲೋ ಜೋಗಿ । ಇವ ನಮ್ಮ ಮಾತು ಕೇಳದೆ ಪುಂಡನಾದ ।।

ಪುಂಡನಾದ ಇವನ ಪಿಡಿದುಕೊಂಡು ಹೋಗೆಲೋ ಜೋಗಿ... ಜೋಗಿ ।। ಪ ।।

ಆಡುತಾಡುತ ಪೋಗಿ ನೀರಲಿ ಮುಳುಗಿದ । ಬೇಡವೆಂದರೆ ಬೆಟ್ಟ ಬೆನ್ನಲಿ ಪೊತ್ತ ।

ದಾಡೆಯ ಮೇಲೆ ತಾ ಧಾರುಣಿ ನೆಗಹಿದ । ನೋಡಿದವರಿಗೆ ಬಾಯ್‌ ತೆರೆದಂಜಿಸಿದ ।। ಇವನ ।।

ಹುಲ್ಲಲಿ ವಿಪ್ರನ ಕಣ್ಣು ತಿವಿದ ಬುದ್ಧಿ । ಅಲ್ಲವೆಂದರೆ ಕೈಲಿ ಕೊಡಲಿಯ ಪಿಡಿದಾ ।

ಬಿಲ್ಲು ಪಿಡಿದು ಬಲು ರಕ್ಕಸರ ಸವರಿದ । ಬಲ್ಲಿದ ಮಾವನ ಶಿರವ ಛೇದಿಸಿದ ।। ಇವನ ।।

ಬೆತ್ತಲೆ ಕುದುರೆಯ ಹತ್ತಬೇಡೆಂದರೆ । ಹತ್ತಿದನು ಈತ ಚಂದದಿಂದ ।

ಭಕ್ತವತ್ಸಲ ನಮ್ಮ ಪುರಂದರ ವಿಠಲನ । ಎತ್ತಲಾದರೂ ಕೊಂಡು ಹೋಗೆಲೋ ಜೋಗಿ ।। ಇವನ ।।

* * *

ಪುರಂದರದಾಸರದೇ ಇನ್ನೊಂದು ರಚನೆ. ವೆಂಕಟರಮಣನನ್ನು ವಿಧವಿಧವಾಗಿ ಆಹ್ವಾನಿಸುವ ರೂಪಕ. ಪುತ್ತೂರು ನರಸಿಂಹ ನಾಯಕ್‌ ಅವರ ಕಂಚಿನಕಂಠದಲ್ಲಿ ‘ದಾಸರ ಪದಗಳು’ ಧ್ವನಿಸುರುಳಿಯಿಂದ ಈ ಗೀತೆ:

ಬಾರಯ್ಯ ವೆಂಕಟರಮಣ ಭಾಗ್ಯದಾ ನಿಧಿಯೆ

ಬಾರೋ ವಿಶ್ವಂಭರನೆ ಬಾರೋ ಭಕ್ತರ ಸಲಹುವನೆ ಬಾರೋ ।। ಪ ।।

ವೇದಗೋಚರನೆ ಬಾರೋ । ಆದಿಕಚ್ಛಪನೆ ಬಾರೋ ।।

ಮೋದಸೂಕರನೆ ಬಾರೋ । ಪ್ರಹ್ಲಾದನ ಕಾಯ್ದವನೆ ಬಾರೋ ।। ಬಾರಯ್ಯ ।।

ವಾಮನ ಭಾರ್ಗವನೆ ಬಾರೋ । ರಾಮ ಕೃಷ್ಣನೆ ನೀ ಬಾರೋ ।।

ಪ್ರೇಮದಿ ಬಹೂದ್ಯನೆ ಬಾರೋ । ಸ್ವಾಮಿ ಕಲ್ಕಿ ನೀ ಬಾರೋ ।। ಬಾರಯ್ಯ ।।

ಗುರುಮಧ್ವಪತಿ ನೀ ಬಾರೋ । ವರದ ಕೇಶವನೆ ಬಾರೋ ।।

ಪರಮಾತ್ಮ ನೀ ಬಾರೋ । ಪುರಂದರ ವಿಠಲ ನೀ ಬಾರೋ ।। ಬಾರಯ್ಯ ।।

* * *

ಇನ್ನೊಂದು ಸ್ವಲ್ಪ ‘ಮಜಾ’ ಹಾಡನ್ನು ಅವಲೋಕಿಸೋಣ. ‘ಅವಳ ಗಂಡ ಹಾಗೆ... ಇವಳ ಗಂಡ ಹೀಗೆ... ನಿನ್ನ ಗಂಡ ಹೇಗೆ...?’ ಎಂಬ ಬಾವಿಕಟ್ಟೆ ಹರಟೆಯ ಹೆಂಗಳೆಯರ ‘ಸ್ವಭಾವ’(?)ವು ಸಾಕ್ಷಾತ್‌ ಪಾರ್ವತಿ ಮತ್ತು ಲಕ್ಷ್ಮಿಯರನ್ನೂ ಸಹಿತ ಹೇಗೆ ಬಿಟ್ಟಿಲ್ಲ ಎಂಬುದಕ್ಕೊಂದು ನಿದರ್ಶನ. ಇದು ರಮಾ-ಉಮಾ ಸಲ್ಲಾಪ; ಪರಸ್ಪರ ಗಂಡಂದಿರ ದೂಷಣೆ ಮಾಡಿಕೊಳ್ಳುವ ಸನ್ನಿವೇಶ ಇಲ್ಲಿದೆ. ಈ ಹಾಡಿನ ಪ್ರತಿಯಾಂದು ಸಾಲಿನಲ್ಲೂ ಪೂರ್ವಾರ್ಧವು, ಪಾರ್ವತಿ ಉವಾಚ - ಲಕ್ಷ್ಮೀಪತಿ ವಿಷ್ಣುವಿನ ಬಗ್ಗೆ ಕುಹಕರೂಪದಲ್ಲಿ. ದ್ವಿತೀಯಾರ್ಧವು ಅದಕ್ಕೆ ಲಕ್ಷ್ಮಿಯ ಸಮರ್ಥನೆ - ಪರಶಿವನ ಭೋಳೇತನವನ್ನು ಲೇವಡಿ ಮಾಡುತ್ತ. ಓದಿ, ಪುರಂದರ ದಾಸರದ್ದೇ ಈ ರಚನೆ, ದಶಾವತಾರಗಳ ಉಲ್ಲೇಖದೊಂದಿಗೆ ಸೊಗಸಾಗಿದೆ!

ತರಳೆ ರನ್ನೆ ಕಪ್ಪು ಮೈಯವ ಯಾತರ ಚೆಲುವನೇ । ಕರಿಯ ಜಟೆಯ ಜೋಗಿಗಿಂತ ಉತ್ತಮನಲವೆನೆ ।।

ಜಲಧಿಯಾಳಗೆ ವಾಸವೇನೆ ಮನೆಗಳಿಲ್ಲವೆ । ಲಲನೆ ಕೇಳು ಮಸಣಕ್ಕಿಂತ ಲೇಸು ಅಲ್ಲವೇ ।।

ಮಂದರಗಿರಿಯ ಪೊತ್ತಿಹುದು ಏನು ಚಂದವೇ । ಕಂದನ ಕೊರಳು ಕತ್ತರಿಸುವುದು ಯಾವ ನ್ಯಾಯವೇ ।।

ಮಣ್ಣನಗೆದು ಬೇರ ಮೆಲುವುದೇನು ಸಾಧುವೇ । ತನ್ನ ಕೈಯಲ್ಲಿ ಕಪಾಲ ಪಿಡಿವುದು ಯಾವ ನ್ಯಾಯವೇ ।।

ಮುತ್ತಿನ ಹಾರ ಇರಲು ಕರುಳ ಮಾಲೆಯ ಧರಿಪರೇ । ನಿತ್ಯ ರುಂಡ ಮಾಲೆಯ ಧರಿಸೋದು ಯಾವ ನ್ಯಾಯವೇ ।।

ಗಿಡ್ಡನಾಗಿ ಬೆಳೆದು ಅಳೆವುದು ಏನು ನ್ಯಾಯವೇ । ಗುಡ್ಡದ ಮಗಳ ತಂದೆಗೆ ಮುನಿಯೋದ್ಯಾವ ನ್ಯಾಯವೇ ।।

ಪಿತನ ಮಾತ ಕೇಳಿ ಮಾತೆಯ ಶಿರವನಳಿವರೇ । ಕ್ಷಿತಿಕಂಠನಾಗಿ ಇರುವುದು ಯಾವ ನ್ಯಾಯವೇ ।।

ಕೋಡಗ ಕರಡಿ ಕಪಿಗಳ ಹಿಂಡು ಬಂಧು ಬಳಗವೇ । ಕೂಡಿ ಬಂದ ಭೂತ ಬಳಗ ಜ್ಞಾತಿ ಸಂಬಂಧವೇ ।।

ಹಾವಿನ ಹೆಡೆಯ ತುಳಿವರೇನೇ ಅಂಜಿಕಿಲ್ಲವೇ । ಹಾವೇ ಮೈಯಿಗೆ ಸುತ್ತಿ ಇರಲು ಹ್ಯಾಂಗೆ ಜೀವಿಪನೇ ।।

ಬತ್ತಲೆ ಇರುವನೇನು ಅವಗೆ ನಾಚಿಕಿಲ್ಲವೇ । ಸತ್ತ ಗಜದ ಚರ್ಮ ಹೊದೆಯಲು ಹೇಸಿಕಿಲ್ಲವೇ ।

ಉತ್ತಮ ತೇಜ ಇರಲು ಧರೆಯಾಳು ಹದ್ದನು ಏರ್ವರೇ । ಎತ್ತಿನ ಬೆನ್ನು ಏರಿದವರು ಬುದ್ಧಿವಂತರೇ ।।

ಹರಿಹರರಿಗೆ ಸಾಮ್ಯವೇನೆ ಹೇಳೆ ರುಕ್ಮಿಣೀ । ಪುರಂದರ ವಿಟ್ಠಲ ಸರ್ವೋತ್ತಮ ಹೇಳು ಮನದಣಿ ।।

* * *

ಕಾರ್ಯಕ್ರಮದ ಕೊನೆಯಲ್ಲಿ ಮಂಗಲ ಗೀತೆ. ನಾವು ಪ್ರಾಥಮಿಕ ಶಾಲೆಯಲ್ಲಿದ್ದಾಗ ಪ್ರತಿ ಶುಕ್ರವಾರ ಸಂಜೆ ಕೊನೆಯ ಅವಧಿಯಲ್ಲಿ ಭಜನೆ ಇರುತ್ತಿತ್ತು. ದಶಾವತಾರ ಸ್ತುತಿಯ ಈ ಹಾಡಿನೊಂದಿಗೆ ಭಜನೆ ಕೊನೆಗೊಳ್ಳುತ್ತಿತ್ತು.

ಚಲಿಸುವ ಜಲದಲಿ ಮತ್ಸ್ಯನಿಗೆ । ಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ ।

ಧರೆಯನುದ್ಧರಿಸಿದ ವರಹವತಾರಗೆ । ತರಳೆನ್ನ ಕಾಯ್ದ ಶ್ರೀ ನರಸಿಂಹಗೆ ।। ಮಂಗಲಂ ಜಯ ।।

ಭೂಮಿಯ ದಾನವ ಬೇಡಿದಗೆ । ಆ ಮಹಾ ಕ್ಷತ್ರಿಯರ ಗೆಲಿದವಗೆ ।।

ರಾಮಚಂದ್ರನೆಂಬ ದಶರಥಸುತನಿಗೆ । ಭಾಮೆಯರರಸ ಗೋಪಾಲಕೃಷ್ಣಗೆ ।। ಮಂಗಲಂ ಜಯ ।।

ಬತ್ತಲೆ ನಿಂತಿಹ ಬೌದ್ಧ್ಯನಿಗೆ । ಉತ್ತಮಹಯವೇರಿದ ಕಲ್ಕ್ಯಗೆ ।।

ಹತ್ತವತಾರದಿ ಭಕ್ತರ ಸಲಹುವ । ಕರ್ತೃ ಶ್ರೀ ಪುರಂದರ ವಿಠಲನಿಗೆ ।। ಮಂಗಲಂ ಜಯ ।।

* * *

ನಿಮ್ಮ ಚಿಂತನೆಗೆ ಒಂದಿಷ್ಟು ಗ್ರಾಸ. ದಶಾವತಾರಗಳ ವಿವರಗಳ ಒಂದು ಇಂಗ್ಲಿಷ್‌ ಲೇಖನದಲ್ಲಿನ ಪ್ಯಾರಾಗ್ರಾಫನ್ನು ಅನಾಮತ್ತಾಗಿ ಎತ್ತಿ ತಂದಿದ್ದೇನೆ :

The chronological order from fish to amphibian (tortoise) to mammal(pig) to half man to dwarf to man is no coincidence. It follows the sequence of the theory of evolution. And Hindu mythology is not alone in this. Several centuries before Darwin formulated his theory, the Bible said that God first created the creatures of the water, then the beasts of the land and finally man in his own image. It is evident that long before it was established by science, our ancestors were aware of the evolutionary process. This is one of the offshoots of Dashavataras.

ಇದನ್ನೂ ಓದಿ, ನಿಮ್ಮ ಅಭಿಪ್ರಾಯವನ್ನು ತಿಳಿಸಿ. ವಿಳಾಸ : (srivathsajoshi@yahoo.com)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more