• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓಮಾ

By Staff
|
Srivathsa Joshi *ಶ್ರೀವತ್ಸ ಜೋಶಿ

‘8 ರಲ್ಲಿ 5ನ್ನು ಕಳೆದರೆ ಎಷ್ಟು ?’

ಹೊಸದಾಗಿ ಅಂಕಗಣಿತ ಕಲಿಯತೊಡಗಿರುವ, ಅಂದರೆ ಒಂದನೇ ಅಥವಾ ಎರಡನೇ ಕ್ಲಾಸಿನ ಮಗುವನ್ನು ಕೇಳಿ ನೋಡಿ. ‘ಮೂರು !!’ ಎಂದು ತಟ್ಟನೆ ಉತ್ತರ ಬರುತ್ತದೆ.

‘5 ರಲ್ಲಿ 8ನ್ನು ಕಳೆದರೆ ಎಷ್ಟು ?’

- ಈ ಪ್ರಶ್ನೆಗೆ, ‘ಚಿಕ್ಕಸಂಖ್ಯೆಯಲ್ಲಿ ದೊಡ್ಡ ಸಂಖ್ಯೆಯನ್ನು ಕಳೆಯಲು ಆಗುವುದಿಲ್ಲ !’ ಎಂದಷ್ಟೇ ಉತ್ತರಿಸಬಹುದು ಆ ಮಗು. ಸಣ್ಣಮಗುವಿನ ‘ನಂಬರ್‌ ಸ್ಕೇಲ್‌’ನಲ್ಲಿ ಸೊನ್ನೆ ಮತ್ತು ಅದಕ್ಕಿಂತ ಹೆಚ್ಚು ಬೆಲೆಯ ಧನಸಂಖ್ಯೆಗಳು ಮಾತ್ರ ಇರುವುದು. ಅದೇ ಮಗು ಮುಂದೆ ಆರನೇ, ಏಳನೇ ತರಗತಿ ಸೇರಿದಾಗ 5ರಲ್ಲಿ 8 ಕಳೆದರೆ ‘- 3’ ಎಂದು ಉತ್ತರಿಸುವುದನ್ನು ಕಲಿತಿರುತ್ತದೆ! ಅಂದರೆ ಕಲಿತು ಬಲಿತು ದೊಡ್ಡವರಾದಂತೆ ಸೊನ್ನೆಯ ಕೆಳ (ಅಥವಾ ಎಡ)ಭಾಗಕ್ಕೂ ಇರುವ ಮೈನಸ್‌ ಸಂಖ್ಯೆಗಳ ಪರಿಚಯ ನಮಗಾಗಿರುತ್ತದೆ.

ಅಂಕಗಣಿತದ ಈ ನಂಬರ್‌ ಸ್ಕೇಲ್‌, ನಮ್ಮ ಜೀವನದ ರೀತಿ-ನೀತಿ-ಪ್ರೀತಿಗಳಲ್ಲೂ ಅದೇ ಪ್ರಕಾರ ಟ್ರಾನ್ಸ್‌ಫಾರ್ಮ್‌ ಆಗಿರುತ್ತದೆ. ಸೊನ್ನೆಗಿಂತ ಕಡಿಮೆ ಬೆಲೆಯ ಸಂಖ್ಯೆಗಳ ಪರಿಚಯವೇ ಇಲ್ಲದ ಮಗುವಿನ ಮನಸ್ಸಿನಲ್ಲಿ , ನೆಗೆಟಿವ್‌ ಅಂದರೇನೆಂದೇ ಗೊತ್ತಿಲ್ಲದಿರುವಾಗ ಯಾವುದೇ ವಸ್ತುವಿನ ಬಗ್ಗೆ, ವ್ಯಕ್ತಿಯ ಬಗ್ಗೆ ಅಥವಾ ಕೊನೆಗೆ ತನ್ನ ಬಗ್ಗೆಯೇ Negative feeling ಅಂತ ಖಂಡಿತಾ ಇರಲಿಕ್ಕಿಲ್ಲ , ಇರುವುದೂ ಇಲ್ಲ. ಮತ್ತೆ ಪ್ರಾಯವಾದಂತೆ, ಬಾಹ್ಯ ಪ್ರಪಂಚದ ಪರಿಚಯ ಹೆಚ್ಚುಹೆಚ್ಚು ಆದಂತೆ ಮೈನಸ್‌ ಸಂಖ್ಯೆಗಳೂ ನಂಬರ್‌ ಸ್ಕೇಲಲ್ಲಿ ಇರುವುದೆಂಬ ಸಂಗತಿಯನ್ನು ನಾವು ಕಲಿಯುತ್ತೇವೆ; ಇದಕ್ಕೆ ಸಮಾನಾಂತರವಾಗಿ ಜತೆಜತೆಗೇ ಯಾವುದೋ ವಸ್ತು , ವ್ಯಕ್ತಿ ಅಥವಾ ಅಪರೂಪಕ್ಕೆ (ದುರದೃಷ್ಟದಿಂದ) ನಮ್ಮ ಬಗ್ಗೆಯೇ Negative Attitude (ನೇತ್ಯಾತ್ಮಕ ನಿಲುವು)ಗಳೂ ನಮ್ಮಲ್ಲಿ ಹುಟ್ಟಿಕೊಳ್ಳುವ ಸಾಧ್ಯತೆಗಳಿವೆ. ಒಮ್ಮೆ ಹುಟ್ಟಿತೋ, ಈ ನೆಗೆಟಿವ್‌ ಆಟಿಟ್ಯೂಡ್‌ ಎಂಬ ಕ್ಯಾನ್ಸರನ್ನು ನಿರ್ಮೂಲ ಮಾಡುವುದು ಭಾರಿ ಕಷ್ಟ .

ಒಂದಿಲ್ಲೊಂದು ಕಾರಣದಿಂದ, ಪರಿಸ್ಥಿತಿಯಿಂದ ಯಾವುದಾದರೂ ವಿಷಯದ ಬಗ್ಗೆ ಅಥವಾ ವ್ಯಕ್ತಿಯ ಬಗ್ಗೆ ನಮ್ಮಲ್ಲಿ ದ್ವೇಷ ಹುಟ್ಟಿಕೊಂಡಿರುತ್ತದೆ ಎಂದಿಟ್ಟುಕೊಳ್ಳಿ. ಆ ದ್ವೇಷವನ್ನು ಪೋಷಿಸಬೇಕಾದರೆ ನಾವು ಅದೆಷ್ಟು ಶಕ್ತಿ-ಸಂಯಮಗಳನ್ನು ವ್ಯಯಿಸಬೇಕಾಗಿರುತ್ತದೆ ನೋಡಿ. ಉದಾಹರಣೆಗೆ, ನಾವು ಭಾಗವಹಿಸುವ ಒಂದು ಸಭೆ-ಸಮಾರಂಭದಲ್ಲಿ ಅಕಸ್ಮಾತ್‌ ಆ ‘ದ್ವೇಷಿತ ವ್ಯಕ್ತಿ’ ಕಾಣಿಸಿಕೊಂಡರೆ? ಅವತ್ತಿನ ಮೂಡ್‌ ಎಲ್ಲ ಖರಾಬ್‌ ಆಗುವುದಿಲ್ಲವೇ? ಆ ವ್ಯಕ್ತಿ ನಮ್ಮ ದೃಷ್ಟಿಗೆ ಬೀಳದಂತೆ ಏನೆಲ್ಲ ಸರ್ಕಸ್‌ ಮಾಡುತ್ತೇವೆ, ಯಾಕೆ? ಆ ವ್ಯಕ್ತಿಯ ಬಗ್ಗೆ ನಾವು ತಳೆದಿರುವ ನೇತ್ಯಾತ್ಮಕ ನಿಲುವಿನಿಂದ. ಅದೇ ರೀತಿ ನಮಗಿಷ್ಟವಾಗದ ಸಂಗತಿಯೇನಾದರೂ ತಪ್ಪಿಯೂ ನೆನಪಿಗೆ ಬಂತೆಂದರೆ ಎಷ್ಟು ಇರುಸುಮುರುಸು ಅನುಭವಿಸುತ್ತೇವೆ! ಕಾರಣ ಅದೇ, ಸ್ಕೇಲ್‌ನಲ್ಲಿ ನೆಗೆಟಿವ್‌ ಸ್ಥಾನಗಳಲ್ಲಿ ನಾವು ಆ ವಿಷಯವನ್ನು ಶಾಶ್ವತವಾಗಿ ಸ್ಥಾಪಿಸಿರುವುದು!

ನಂಬರ್‌ ಸ್ಕೇಲ್‌ನಲ್ಲಿ ನೆಗೆಟಿವ್‌ನಿಂದ ಇನ್ನೂ ಬಲಭಾಗಕ್ಕೆ (ಅಥವಾ ಮೇಲ್ಭಾಗಕ್ಕೆ) ಬಂದರೆ ಸೊನ್ನೆ ಇರುವುದು ತಾನೆ? ದ್ವೇಷಿತ ವ್ಯಕ್ತಿ, ಅನಪೇಕ್ಷಿತ ಸಂಗತಿ - ಇವನ್ನೆಲ್ಲ ಮೈನಸ್‌ ವಲಯದಿಂದ ಸರಿಸಿ ‘ಸೊನ್ನೆ’ಯ ಮೇಲೆ ವರ್ಗಾಯಿಸಿದರೆ? ಊಹಿಸಿಕೊಳ್ಳಿ, ಸೊನ್ನೆ ಬೆಲೆಯದಕ್ಕೆ ನಾವು ಯಾವುದೇ ನಮೂನೆಯ ಶಕ್ತಿಯನ್ನು ವ್ಯಯಿಸಬೇಕಿಲ್ಲವಲ್ಲ ! ಇದನ್ನೇ ತಾನೆ ‘ದಿವ್ಯ ನಿರ್ಲಕ್ಷ್ಯ’ ಅನ್ನುವುದು? ಯಾವುದೇ ವಿಷಯದ ಬಗ್ಗೆಯಾಗಲೀ ವ್ಯಕ್ತಿಯ ಕುರಿತಾಗಲೀ ನಮ್ಮ ನೇತ್ಯಾತ್ಮಕ ನಿಲುವನ್ನೆಲ್ಲ ಸೊನ್ನೆಗೆ reset ಮಾಡಿಬಿಟ್ಟರೆ ಜೀವನ ನಿರುಮ್ಮಳ. ಬೆಲೆಯಿಲ್ಲದ ಸೊನ್ನೆಯ ಮೇಲೆ ಅದೆಷ್ಟು ಸಂಗತಿಗಳಿದ್ದರೇನಂತೆ, ನಮ್ಮ ಗಂಟೇನೂ ಹೋಗುವುದಿಲ್ಲವಲ್ಲ ! ಅಷ್ಟೇ ಅಲ್ಲ , ಹೀಗೆ ಉಳಿತಾಯವಾಗುವ ಶಕ್ತಿಯೆಲ್ಲ ನಮ್ಮ ಧನಾತ್ಮಕ (ಪಾಸಿಟಿವ್‌) ವಿಚಾರಗಳ ವಿನಿಯೋಗಕ್ಕೆ ಸಿಗುತ್ತದೆ!

ಹೇಳಿದಷ್ಟು , ಬರೆದಷ್ಟು , ಓದಿದಷ್ಟು ಸುಲಭವೇ ನೇತ್ಯಾತ್ಮಕ ನಿಲುವುಗಳನ್ನು ‘ಶೂನ್ಯ’ದಲ್ಲಿ ಪಾರ್ಕ್‌ ಮಾಡುವುದು? ಕಷ್ಟಸಾಧ್ಯವಿರಬಹುದು, ಆದರೆ ಅಸಾಧ್ಯವಂತೂ ಖಂಡಿತ ಅಲ್ಲ. ವ್ಯಕ್ತಿತ್ವವಿಕಸನ ಶಿಬಿರದ ನೋಟ್ಸ್‌ಗಳನ್ನು ತಿರುವಿದರೆ ಅಲ್ಲಿ ಈ ಬಗ್ಗೆ ಯಥೇಷ್ಟ ಪಾಠಗಳು ಸಿಗುತ್ತವೆ. ಆದರೆ ಅದು ನಪುಸ್ತಕದ ಬದನೆಕಾಯಿ’ ಆಗಿದ್ದರೆ ಏನು ಉಪಯೋಗ? ಆಚರಣೆಗೆ ತರುವುದರಲ್ಲಿರುವುದು ನಿಜವಾದ ವಿಕಸನ. ಮೈ-ಮನಸ್ಸುಗಳಲ್ಲಿ ತುಂಬಿರುವ ವೈಮನಸ್ಯದ ಕಮ್ಯುನಿಸ್ಟ್‌ ಕಳೆಯಂಥದನ್ನು ಬೇರುಸಹಿತ ಕಿತ್ತುಹಾಕುವುದರಲ್ಲಿನ ಪರಿಶ್ರಮ.

Ultra-positive ಆಗಿರಲು ಮತ್ತು ತನ್ಮೂಲಕ ಕ್ರಿಯಾಶೀಲ, ಸೃಜನಾತ್ಮಕ, ಶಕ್ತಿಯುತ ಮತ್ತು ಆಕರ್ಷಕ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಉಪಯೋಗಕ್ಕೆ ಬರುವ ಕೆಲವು ಅಂಶಗಳು ಇಲ್ಲಿವೆ. ಇವು ನೇತ್ಯಾತ್ಮಕದಿಂದ ಇತ್ಯಾತ್ಮಕದೆಡೆಗೆ ಪರಿವರ್ತನೆಗೆ ಅನುಕೂಲವಾಗುವ ಸೂತ್ರಗಳು.

Positive Thinking1. ನಿರಾಶಾವಾದಿಗಳ, ಅಳುಮುಂಜಿಗಳ, ದೂರುವವರ, ‘ಅನುಗಾಲವೂ ಚಿಂತೆ ಜೀವಕ್ಕೆ ಎನ್ನ...’ ಎಂದು ಕೊರಗುವವರ ಸಖ್ಯದಿಂದ ಆದಷ್ಟು ಮಟ್ಟಿಗೆ ಪ್ರತ್ಯೇಕಗೊಳ್ಳುವುದು. Positive thinking ನಮ್ಮಲ್ಲಿ ಮೂಡಬೇಕಾದರೆ ಮೊಟ್ಟಮೊದಲ ಕೆಲಸ ಅದು.

2. ಪ್ರತಿದಿನದ ಆರಂಭವನ್ನು ಮತ್ತು ಅಂತ್ಯವನ್ನು ‘ಮಾನಸಿಕ ಶಕ್ತಿಯ ಟಾನಿಕ್‌’ಅನ್ನು ಕುಡಿದೇ ಮಾಡುವುದು. ಏನೀ ಟಾನಿಕ್‌ ? ಸ್ಫೂರ್ತಿದಾಯಕ, ಆಧ್ಯಾತ್ಮದ, ಆರೋಗ್ಯಕರ, ಅಭಿವೃದ್ಧಿಯ ಪಥದ, ಗುರಿಸಾಧನೆಯ ಆಲೋಚನೆಗಳು.

3. ಸಣ್ಣದಿರಲಿ, ದೊಡ್ಡದಿರಲಿ ಸಾಧಿಸಿದ ಪ್ರತಿಯಾಂದು ಯಶಸ್ಸನ್ನೂ ದಾಖಲಿಸಿಕೊಳ್ಳುವುದು. ಆತ್ಮವಿಶ್ವಾಸ ವೃದ್ಧಿಗೆ ಇದಕ್ಕಿಂತ ಸುಲಭ ಸೋಪಾನವಿಲ್ಲ !

4. ವ್ಯಕ್ತಿತ್ವ ನಿರ್ಮಾಣದಲ್ಲಿ ಇನ್ನೊಂದು ಮಹಾಸ್ತಂಭವೆಂದರೆ ನಿಯಮಿತವಾದ ದೈಹಿಕ ವ್ಯಾಯಾಮ. ಸುಂದರ ಸುದೃಢ ಶರೀರವಷ್ಟೆ ಮನಸ್ಸಿನ ಯೋಚನೆ-ಯೋಜನೆಗಳನ್ನು ಅನುಷ್ಠಾನಕ್ಕೆ ತರಬಲ್ಲದು.

5. ಭಯ, ಚಿಂತೆ, ದೂರುವಿಕೆ ಮತ್ತು ತಪ್ಪಿತಸ್ಥ ಭಾವ - ಇವು ನಾಲ್ಕು ಮಹಾ ಅಪಾಯಕಾರಿ ಭಾವನೆಗಳು, ಪಾಸಿಟಿವ್‌ ಆಗಿರುವುದಕ್ಕೆ ತಡೆಯಾಡ್ಡುವಂಥವುಗಳು. ಇನ್ನೊಂದೆಂದರೆ ಇವು ನಾಲ್ಕೂ chain reaction ಇದ್ದಂತೆ. ನಿರೀಕ್ಷಿತ ಫಲಿತಾಂಶ ಸಿಗದಿದ್ದರೆ ಇನ್ನು ತಾನೇನೂ ಮಾಡಲಾರೆನೊ ಎಂಬ ಭಯ. ಅದರಿಂದಲೇ ಚಿಂತೆ. ಮತ್ತೂ ಮುಂದೆ ಹೋಗಿ ಯಾರನ್ನಾದರೂ ದೂರುವ ಪ್ರೇರಣೆ ; ಕೊನೆಗೆ ಅಪರಾಧಿ ಭಾವನೆ. ಅದಕ್ಕಿಂತ, ಅಂಥ ನೆಗೆಟಿವ್‌ ವಿಚಾರಗಳಿಗೆ ಮಣೆಹಾಕೋದೇ ಇಲ್ಲ ಎಂಬ ನಿರ್ಧಾರ ಒಳ್ಳೆಯದು.

6. ‘ಕ್ಷಮಯಾ ಧರಿತ್ರಿ...’ ಎಂಬಂತೆ ಕ್ಷಮಾಗುಣವನ್ನು ರೂಢಿಸಿಕೊಳ್ಳುವುದು. ಇತರರ ತಪ್ಪನ್ನು ಅಥವಾ ತನ್ನದೇ ತಪ್ಪನ್ನು ಮನ್ನಿಸಿ ಮುಂದೆ ಇದು ಮರುಕಳಿಸದು ಎಂಬ ಆಶಾವಾದ. ತಪ್ಪನ್ನು ತಿದ್ದಿಕೊಳ್ಳುವ Open mindedness.

7. ಅಷ್ಟಕ್ಕೂ ನೆಗೆಟಿವಿಟಿ ನಿರ್ಮೂಲನ ಅಸಾಧ್ಯವೆನಿಸಿದಲ್ಲಿ ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ‘ಚಿಂತಿಸುವ ಸಮಯ’ ಎಂದೇ ಒಂದೆರಡು ಗಂಟೆಗಳ ಅವಧಿಯನ್ನು ನಿಗದಿಪಡಿಸಬಹುದು. ಬೇರೆ ದಿನಗಳ ಟೈಮ್‌ಟೇಬಲ್‌ನಲ್ಲಿ ಚಿಂತೆ-ಕೊರಗುಗಳಿಗೆ ಸ್ಥಾನವೇ ಇಲ್ಲ. ಅದೇನಿದ್ದರೂ ‘ಚಿಂತೆ’ ಪೀರಿಯಡ್‌ನಲ್ಲಿ ಮಾತ್ರ.

8. ಆಸ್ತಿಕರಾಗಿದ್ದರೆ ‘ಎಲ್ಲದಕ್ಕೂ ಉನ್ನತವಾಗಿ ದೇವನೊಬ್ಬನಿದ್ದಾನೆ’ ಎಂದಾಗಲೀ ಅಥವಾ ದೇವರಲ್ಲಿ ನಂಬಿಕೆಯಿಲ್ಲದವರಾದರೆ ‘ನನ್ನೊಳಗಿನ ಸ್ಪೆಷಲ್‌ ಪವರ್‌ನಿಂದ ನೆಗೆಟಿವಿಟಿ ಹತ್ತಿಕ್ಕಬಲ್ಲೆ’ ಎಂದಾಗಲೀ ದೃಢವಾಗಿ ನಂಬಿದ್ದರೆ ಅದೇ ಒಂದು ದಿವ್ಯೌಷಧ!

9. ಕ್ರೀಡಾಳುಗಳು ನಡುನಡುವೆ ಗ್ಲೂಕೋಸ್‌ ಸೇವಿಸುವಂತೆ ನಮ್ಮ ದೈನಂದಿನ ಬದುಕಿನ ಓಡಾಟದಲ್ಲೂ ಮೂರ್ನಾಲ್ಕು ಗಂಟೆಗಳ ಅವಧಿಗೊಮ್ಮೆ ಕನಿಷ್ಠ ಐದು ನಿಮಿಷಗಳ ‘ಪಾಸಿಟಿವ್‌ ಇಂಜೆಕ್ಷನ್‌ ಬ್ರೇಕ್‌’ಗಳನ್ನು ತೆಗೆದುಕೊಳ್ಳಬೇಕು. ಆ ಅವಧಿಯಲ್ಲಿ ಮಧುರಕ್ಷಣವೊಂದರ ನೆನಪು ಮಾಡಿಕೊಳ್ಳುವುದು, ಮಿತ್ರರಿಗೊಂದು thank you ಈಮೈಲ್‌ ಕಳಿಸುವುದು, ಅಥವಾ ಸ್ಫೂರ್ತಿ ಹೆಚ್ಚಿಸುವ ಏನಾದರೂ ಲೈಟ್‌ ರೀಡಿಂಗ್‌ ಕೈಗೆತ್ತಿಕೊಳ್ಳುವುದು... ಹೀಗೆ ಮಾಡುವುದರಿಂದ ರೀಚಾರ್ಚ್‌ ಆಗುತ್ತೇವೆ; ನೆಗೆಟಿವ್‌ ಯೋಚನೆಗಳು ದಾಳಿ ನಡೆಸುವ ಸಂಭವನೀಯತೆ ಕಡಿಮೆಯಾಗುತ್ತದೆ.

10. ಸಂಕೀರ್ಣತೆ (complexity) ಎಂದರೆ ನೇತ್ಯಾತ್ಮಕ. ಸರಳತೆ (simplicity) ಎಂದರೆ ಧನಾತ್ಮಕ. ಭೌತಿಕವಾಗಿ ಮತ್ತು ಮಾನಸಿಕವಾಗಿ ರಾಶಿರಾಶಿ ಗುಡ್ಡೆಹಾಕಿದ್ದನ್ನು ವಿಂಗಡಿಸಿ ಒಪ್ಪಓರಣವಾಗಿಸುತ್ತ ಬಂದರೆ ನೆಗೆಟಿವಿಟಿ ಅರ್ಧದಷ್ಟು ಕಡಿಮೆಯಾದಂತೆಯೇ.

11. ಬಳಲಿದ ದೇಹಕ್ಕೆ ವಿಶ್ರಾಂತಿ ತಪ್ಪಿಸಿದರೆ ಇನ್ನೂ ಆತಂಕ ಹೆಚ್ಚುವುದರಿಂದ stressful ದಿನಗಳಲ್ಲಿ ಒಂದುಗಂಟೆಯಷ್ಟು ಮೊದಲೇ ನಿದ್ರಿಸುವುದು ಉತ್ತಮ. ಗೆಲುವಿನ ಕನಸುಗಳನ್ನು ಕಟ್ಟುತ್ತಲೇ ನಿದ್ದೆಹೋದರೂ ಸರಿಯೇ. ಮನಸ್ಸು-ದೇಹ-ಚೈತನ್ಯಗಳು ನಮಗೆ ಕೃತಜ್ಞವಾಗಿರುತ್ತವೆ.

12. ಗಾಂಧೀಜಿಯವರು ಅನುಸರಿಸುತ್ತಿದ್ದ ಉಪವಾಸ ವ್ರತ ಆಚರಣೆ ಗೊತ್ತಲ್ಲ ? ಅದು ಆಹಾರ ಸೇವನೆಯ ಮಟ್ಟಿಗೆ ಉಪವಾಸ. ಅದೇ ರೀತಿ ಮನಸ್ಸಿಗೆ ಹಾಕುವ ‘ಮೈನಸ್‌’ ಮೇವನ್ನು ತಪ್ಪಿಸಿ ಒಂದುದಿನದ mental fast ಆಚರಣೆ. ಆ ಅವಧಿಯಲ್ಲಿ ಗೊಣಗಾಟ, ದೂರುವಿಕೆ, ಕಾರಣ ಹುಡುಕುವಿಕೆ, ಅಪರಾಧಿ ಭಾವನೆ - ಎಲ್ಲದಕ್ಕೂ ‘ಅಪ್ಪಣೆ ಇಲ್ಲದೆ ಒಳಗೆ ಪ್ರವೇಶವಿಲ್ಲ’ ಬೋರ್ಡ್‌!

13. ನೆಗೆಟಿವ್‌ ಆಲೋಚನೆಗಳ ವಿರುದ್ಧ ಸಮರತಂತ್ರವೊಂದು ಸಿದ್ಧವಿರಬೇಕು. ಯಾವುದೇ ಕ್ಷಣದಲ್ಲಿ ನೆಗೆಟಿವಿಟಿ ಉದ್ಭವಿಸಿದರೂ, ‘ಇಲ್ಲ, ನಾನೊಬ್ಬ ಜವಾಬ್ದಾರಿಯುಳ್ಳ ವ್ಯಕ್ತಿ. ದೇವರನ್ನು ನಂಬಿ ನಾನು ಧೈರ್ಯದಿಂದ ಇದನ್ನು ಮಾಡಬಲ್ಲೆ...’ ಎಂದು ಸಂಕಲ್ಪಿಸಿ ಇದ್ದಬಿದ್ದ ಪಾಸಿಟಿವ್‌ ಅಂಶವನ್ನೆಲ್ಲ ಒಟ್ಟುಗೂಡಿಸಿದರೆ, ನೆಗೆಟಿವಿಟಿಯನ್ನು ಒದ್ದು ಝಾಡಿಸಿ ಬಿಡಬಹುದು.

14. Positive thinking ಉಳ್ಳವರ ಸಹವಾಸ, ಸ್ನೇಹವನ್ನು ಹೆಚ್ಚಿಸಿಕೊಳ್ಳಬೇಕು. ನೆಗೆಟಿವಿಟಿ ಹೇಗೆ ಅಂಟುರೋಗವೋ, ಪಾಸಿಟಿವಿಟಿ ಕೂಡ ಆರೋಗ್ಯಕರವಾಗಿ ಒಬ್ಬರಿಂದೊಬ್ಬರಿಗೆ ಹರಡಬಾರದೆಂದೇನಿಲ್ಲ. ಇನ್ನೊಬ್ಬರದನ್ನು ನೋಡಿಯಾದರೂ, ಪಾಸಿಟಿವ್‌ ಆಗಿರುವುದರಿಂದ ಅವರಿಗಾದ ಲಾಭವನ್ನು ಗಮನಿಸಿಯಾದರೂ ನಮ್ಮ ನಿಲುವಿನಲ್ಲಿ ಪಾಸಿಟಿವಿಟಿ ಹುಟ್ಟುಹಾಕಬಹುದು. ಮತ್ತೆ ನಮ್ಮನ್ನು ನೋಡಿ ಇತರರೂ ಅನುಸರಿಸಿದರೆ ಅದೆಷ್ಟು ಚೆನ್ನ !

15. ಎಲ್ಲಕ್ಕಿಂತ ಉತ್ಕೃಷ್ಟ, ಶತಸಿದ್ಧವಾದ ಮೂಲಿಕೆಯೆಂದರೆ ಗೊತ್ತೇ ಇದೆಯಲ್ಲಾ, ನಗು! ನೆಚ್ಚಿನ ಕಾರ್ಟೂನ್‌ ಫಿಲಂ ಇರಬಹುದು, ಸ್ನೇಹಿತ ಫಾರ್ವರ್ಡ್‌ ಮಾಡಿದ ಈಮೈಲ್‌ ಇರಬಹುದು, ಅಥವಾ ಸ್ವತಃ ಪೇಚಿಗೆ ಸಿಕ್ಕಿಬಿದ್ದ ಫಟನೆಯ ನೆನಪಿರಬಹುದು ಒಟ್ಟಿನಲ್ಲಿ ಸಿಂಡರಿಸಿದ ಮುಖವನ್ನು ಸಿಂಗರಿಸುವಂತೆ ಮಾಡುವ ನಗು ಮನಸ್ಸನ್ನು ಹಗುರಾಗಿಸಿ, ನಂಬರ್‌ ಸ್ಕೇಲ್‌ನಲ್ಲಿ ಮೈನಸ್‌ ಸೈಡಲ್ಲಿರುವುದೆಲ್ಲವನ್ನೂ ಶೂನ್ಯಕ್ಕೆ ತಂದುನಿಲ್ಲಿಸುವಲ್ಲಿ ಪರಿಣಾಮಕಾರಿಯಾಗಿ ನೆರವಾಗುತ್ತದೆ.

ಹಾಗಾದರೆ ಇವತ್ತಿಂದಲೇ ನಾವೆಲ್ಲರೂ, ಅಲ್ಪಸ್ವಲ್ಪ ‘ಮೈನಸ್‌’ಗಳೇನಾದರೂ ಇಟ್ಟುಕೊಂಡಿದ್ದರೂ ಅವೆಲ್ಲವನ್ನೂ ಶೂನ್ಯವಾಗಿಸೋಣವೇ? ಅಸತೋಮಾ ಸದ್ಗಮಯ... ತಮಸೋಮಾ ಜ್ಯೋತಿರ್ಗಮಯ... ಮೃತ್ಯೋರ್ಮಾ ಅಮೃತಂಗಮಯ... ಧ್ಯೇಯವಾಕ್ಯಗಳ ಮೊದಲು ‘ಮೈನಸೋಮಾ ಪ್ಲಸ್ಸೋಗಮಯ...’ ಎನ್ನೋಣವೇ?

* * *

ವ್ಯಕ್ತಿತ್ವ ವಿಕಸನ ಮಾರ್ಗದರ್ಶಿಯಾದ ಈ ರೀತಿಯ ವಿಷಯ ಸಂಗ್ರಹ ಲೇಖನಗಳು ವಿಚಿತ್ರಾನ್ನದಲ್ಲಿ ಆಗೊಮ್ಮೆ ಈಗೊಮ್ಮೆ ಸ್ವಾಗತಾರ್ಹವೇ ? ನಿಮ್ಮ ಅಭಿಪ್ರಾಯ, ಅನಿಸಿಕೆ, ಅನುಭವಗಳನ್ನು ಅವಶ್ಯವಾಗಿ ಬರೆದು ತಿಳಿಸಿ. ವಿಳಾಸ : srivathsajoshi@yahoo.com

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X