• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಬ್ಬಚ್ಚಿಗೂಡು - ಏನಿದು ನೋಡು !

By Staff
|
Srivathsa Joshi *ಶ್ರೀವತ್ಸ ಜೋಶಿ

Cover page of Gubbachchi Gooduಮಧ್ಯವರ್ತಿ (ಮಿಡ್ಲ್‌ಮ್ಯಾನ್‌) ಎಂದೊಡನೆ ಮೂಗುಮುರಿವಷ್ಟು ಕೆಟ್ಟ connotation ಬಂದಿದೆ, ಮಧ್ಯವರ್ತಿ ಎನ್ನುವ ಕಾನ್ಸೆಪ್ಟಿಗೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಆ ಕಡೆಯಿಂದಲೂ ಈ ಕಡೆಯಿಂದಲೂ ಹೀರಿ ತಾವು ಮಾತ್ರ ಬೇಳೆಬೇಯಿಸಿಕೊಳ್ಳುವ ಮಧ್ಯವರ್ತಿಗಳೇ ಹೆಚ್ಚಾಗಿರೋದು; ಅದರಿಂದಲೇ ಮಧ್ಯವರ್ತಿಗೆ ಮರ್ಯಾದೆ ಇಲ್ಲ. ಪರಿಸ್ಥಿತಿ ಇಂತಿದ್ದರೂ ಈ ವಾರದ ವಿಚಿತ್ರಾನ್ನದಲ್ಲಿ ಒಂದು ‘ಮಧ್ಯವರ್ತಿ’ ಕೆಲಸವನ್ನು ಮಾಡಲು ಹೊರಟಿದ್ದೇನೆ. ಇದು ಯಾರೊಬ್ಬರ ಒತ್ತಡದಿಂದಲಾಗಲೀ, ಲಾಭ-ನಷ್ಟಗಳ ದೃಷ್ಟಿಯಿಂದಾಗಲೀ ಮಾಡುತ್ತಿರುವ ಕೆಲಸವಲ್ಲ. ಒಂದು ಒಳ್ಳೆಯ, ರಚನಾತ್ಮಕ ವಿಷಯವನ್ನು ಅಷ್ಟೇ ಒಳ್ಳೆಯ ಸಹೃದಯ ‘ಗ್ರಾಹಕ’ರಿಗೆ ಪರಿಚಯಿಸಬೇಕೆಂಬ ಏಕೈಕ ಸದುದ್ದೇಶ ಇವತ್ತಿನ ಲೇಖನದ್ದು.

ವಿಚಿತ್ರಾನ್ನ ಓದುಗರ ಪೈಕಿ, ಮುಖ್ಯವಾಗಿ ಕರ್ನಾಟಕದಿಂದ, ಭಾರತದಿಂದ ಹೊರಗೆ ನೆಲೆಸಿರುವ ತಾಯಂದಿರು, ತಂತಮ್ಮ ಮಕ್ಕಳು ಕನ್ನಡ ಭಾಷೆ-ಸಂಸ್ಕೃತಿಗಳನ್ನು ಕಲಿಯಬೇಕೆಂಬ ತುಡಿತವುಳ್ಳವರು ತುಂಬ ಮಂದಿ ಇದ್ದಾರೆ. ದೂರದ ಊರುಗಳಲ್ಲೂ ಕನ್ನಡ ಶಿಶುಗೀತೆಗಳ ಪುಸ್ತಕಗಳು, ಕ್ಯಾಸೆಟ್‌-ಸಿಡಿಗಳು ಸಿಗುತ್ತವೆಯೇ, ಮಕ್ಕಳಿಗೋಸ್ಕರ ಕನ್ನಡ ಮ್ಯಾಗಜಿನ್‌ಗಳೇನಾದರೂ ಇವೆಯೇ ಎಂದು ತಡಕಾಡುವವರು ಇದ್ದಾರೆ. ಅವರ ಆ ಹುಡುಕಾಟ ಬಹುತೇಕ ಫಲಪ್ರದವಾಗುವುದಿಲ್ಲವೆಂಬುದೂ ಕಹಿಸತ್ಯವೇ. ಹಾಗೆಯೇ, ಅಮೆರಿಕ ಅಥವಾ ಮತ್ತಿತರ ವಿದೇಶಗಳಿಗೆ ಭೇಟಿಕೊಡುವ ಕನ್ನಡನಾಡಿನ ಮಹನೀಯರು, ಅಲ್ಲಿರುವ ಮಕ್ಕಳು-ಮೊಮ್ಮಕ್ಕಳೊಂದಿಗೆ ಮೂರ್ನಾಲ್ಕು ತಿಂಗಳು ಉಳಿಯಲು ಬರುವ ಹಿರಿಯರು ವ್ಯಕ್ತಪಡಿಸುವ ಒಂದು ಸರ್ವಸಾಮಾನ್ಯ ಅಭಿಪ್ರಾಯ ಅಥವಾ ಕಾಳಜಿಯೆಂದರೆ ಮೊದಲ ತಲೆಮಾರಿನ (ಅಂದರೆ ಭಾರತದಲ್ಲಿ ಹುಟ್ಟಿ ಬೆಳೆದು ಈಗ ಮಾತ್ರ ಇಲ್ಲಿಗೆ ಬಂದಿರುವ) ಯುವಕ-ಯುವತಿಯರೆಲ್ಲ ಕನ್ನಡ ಭಾಷೆಯನ್ನು ಮರೆತಿಲ್ಲವಾದರೂ ಮುಂದಿನ ತಲೆಮಾರಿನವರು ಕನ್ನಡವನ್ನಿಲ್ಲಿ ಉಳಿಸಿ ಬೆಳೆಸುವುದು ಕಷ್ಟಕರವೇ ಇದೆ ಎಂದು. ಅದು ಹೆಚ್ಚುಕಡಿಮೆ ನಿಜವೂ ಹೌದು.

ಒಂದುವೇಳೆ ಆಸಕ್ತಿಯಿಟ್ಟು ತಂತಮ್ಮ ಮಕ್ಕಳಿಗೆ ಕನ್ನಡ ಕಲಿಸುತ್ತೇವೆ, ಅವರಲ್ಲಿ ಕನ್ನಡ-ಕರ್ನಾಟಕದ ಬಗ್ಗೆ ಪ್ರೀತಿಯನ್ನು ಮೂಡಿಸುತ್ತೇವೆ ಎಂದು ಛಲತೊಟ್ಟ ಹೆತ್ತವರಿದ್ದರೂ (ಇದ್ದಾರೆ ತುಂಬ ಮಂದಿ, ನನಗೆ ಗೊತ್ತಿರುವಂತೆಯೇ) ಅವರಿಗೆ ಕನ್ನಡದಲ್ಲಿ ಮಕ್ಕಳ ಪುಸ್ತಕಗಳು, ಪತ್ರಿಕೆಗಳು, ಕ್ಯಾಸೆಟ್‌-ಸಿಡಿಗಳು ಸುಲಭದಲ್ಲಿ ಲಭ್ಯವಾದರೂ ಇವೆಯೇ? ಉತ್ತರ: ಇಲ್ಲ :-(

ಮೇಲೆ ಪ್ರಸ್ತಾಪಿಸಿದ ಇದಿಷ್ಟು ವಿಷಯವನ್ನು ‘ಡಿಮಾಂಡ್‌’ (ಬೇಡಿಕೆ) ಎಂದು ಲೇಬಲ್‌ ಹಚ್ಚಿ ಒಂದು ಕಡೆಗಿಡೋಣ. ಈಗ ಮುಂದಿನದನ್ನು ಓದಿ.

* * *

ಪ್ರಿಯ ಶ್ರೀವತ್ಸ ಜೋಶಿಯವರಿಗೆ, ನಮಸ್ಕಾರಗಳು.

ನಿಮಗೆ ನಾನು ಅಪರಿಚಿತ. ಆದರೆ ಚಂದ್ರಗೌಡ ಕುಲಕರ್ಣಿಯವರ ಮೂಲಕ ನಿಮ್ಮ ಬಗ್ಗೆ ತಿಳಿದುಕೊಂಡೆ.

ನಾವು ಕೆಲವು ಗೆಳೆಯರು ಸೇರಿಕೊಂಡು ಮಕ್ಕಳ ಕ್ಷೇತ್ರದಲ್ಲಿ ಒಂದಿಷ್ಟು ಏನಾದರೂ ಮಾಡಬೇಕೆಂದು ನಿರ್ಧರಿಸಿ ತೊಡಗಿಸಿಕೊಂಡವರು. ಅಂತೆಯೇ ಚಿಲಿಪಿಲಿ ಸಂಸ್ಥೆ ಹುಟ್ಟಿಕೊಂಡಿತು. ಅದರಡಿಯಲ್ಲಿ ಚಿಲಿಪಿಲಿ ಪ್ರಕಾಶನ ಪ್ರಾರಂಭಿಸಿ ಕನ್ನಡ ನಾಡಿನೊಳಗೆ ಕನ್ನಡದವರದೇ ಆದ ಒಂದು ಪತ್ರಿಕೆ ಇಲ್ಲದ್ದನ್ನು ಕಂಡು ಮಕ್ಕಳ ಪತ್ರಿಕೆ ಪ್ರಾರಂಭಿಸಲು ನಿರ್ಧರಿಸಿ ಮಾರ್ಚ್‌ 8, 2000 ದಂದು ‘ಗುಬ್ಬಚ್ಚಿ ಗೂಡು’ ಪತ್ರಿಕೆ ಜನ್ಮತಾಳಿತು. ಕಳೆದ ಐದು ವರ್ಷಗಳಿಂದ ನಿರಂತರವಾಗಿ ಪ್ರಕಟಗೊಳ್ಳುತ್ತ ಬಂದಿದೆ. ನಾಡಿನ ಹಿರಿಯರು, ಮಕ್ಕಳ ಪಾಲಕರು ಅತ್ಯಂತ ಮೆಚ್ಚಿಕೊಂಡ ಪತ್ರಿಕೆಯಾಗಿದೆ. ಕನ್ನಡ ನಾಡಿನ ಏಕೈಕ ಮಕ್ಕಳ ಪತ್ರಿಕೆಯಾಗಿ ‘ಗುಬ್ಬಚ್ಚಿ ಗೂಡು’ ನಿಂತಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತಿದೆ.

ಪತ್ರಿಕೆಯ ಬಗ್ಗೆ ಎರಡು ಮಾತು ಹೇಳುವುದಾದರೆ, ಮಕ್ಕಳ ಸುಪ್ತ ಪ್ರತಿಭೆ ಪ್ರದರ್ಶಿಸುವ ಒಂದು ವೇದಿಕೆಯಾಗಿದೆ. ಪಾಲಕರಿಗೆ ಮಕ್ಕಳ ಬೆಳೆಸುವ ಮಾರ್ಗದರ್ಶಿ ಕೈಪಿಡಿಯಾದರೆ, ಶಿಕ್ಷಕರಿಗೆ ಪ್ರತೀ ತಿಂಗಳು ಹೊಸ ಆಟ, ಕತೆ, ಪ್ರಯೋಗ, ಕವಿತೆ... ಹೀಗೆ ಹತ್ತು ಹಲವು ವಿಷಯಗಳ ‘ಕಲಿಕೆಯ ಕೈಪಿಡಿ’ಯಾಗಿ ಹೊರಹೊಮ್ಮುತ್ತಿದೆ. ಕರ್ನಾಟಕದಲ್ಲಿ ಮಕ್ಕಳ ಸಾಹಿತ್ಯ ಕುರಿತು, ಅವರ ಬಗ್ಗೆ ಕಾಳಜಿ ಕುರಿತು ಬೇರೆ ರಾಜ್ಯಗಳ ಜೊತೆ ಹೋಲಿಸಿದಾಗ ತುಂಬಾ ಹಿಂದೆ ಇರುವುದನ್ನು ಕಾಣುತ್ತೇವೆ. ಅದು ಸರಕಾರದಿಂದಲೂ ಮತ್ತು ಸಮಾಜದಿಂದಲೂ ಆಗಿದೆ. ಬರೀ ಆಪಾದನೆ ಟೀಕೆ ಮಾಡುವ ಬದಲು ಆ ನಿಟ್ಟಿನಲ್ಲಿ ಒಂದಿಷ್ಟು ಸಾಧಿಸಿ ತೋರಿಸುವ ಪ್ರಯತ್ನವನ್ನು ಕಳೆದ ಐದು ವರ್ಷದಿಂದ ಗೆಳೆಯರ ಗುಂಪು ಮಾಡುತ್ತಿದೆ.

ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಗುಬ್ಬಚ್ಚಿ ಗೂಡು ಮಾಡುತ್ತ ಬಂದಿದೆ. ಇದೇ ಜನವರಿ 9 ಹಾಗೂ 10 ಎರಡು ದಿನಗಳ ಕಾಲ ಗದಗದಲ್ಲಿ ಮೂರನೆಯ ಸಮ್ಮೇಳನ ಮಾಡಿದಾಗ 6 ಸಾವಿರ ಮಕ್ಕಳು ಕುಣಿದು ಕುಪ್ಪಳಿಸಿದರು. ಮೊದಲೆರಡು ಸಮ್ಮೇಳನಗಳನ್ನು ಧಾರವಾಡದಲ್ಲಿ ಮಾಡಲಾಗಿತ್ತು. ಮಕ್ಕಳ ಕ್ಷೇತ್ರಕ್ಕಾಗಿ ಎಲೆಮರೆಯ ಕಾಯಿಯಂತೆ ದುಡಿಯುತ್ತಿರುವ ನಾಡಿನ ಹದಿನಾಲ್ಕು (ನವೆಂಬರ 14 ರ ನೆನಪಿಗೆ) ಅವರಿಗೆ ಗೊತ್ತಿಲ್ಲದಂತೆ ‘ಶಿಕ್ಷಣ ಸಿರಿ’ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನ ಮಾಡಿ ಗೌರವಿಸಲಾಗುತ್ತ ಬಂದಿದ್ದೇವೆ. ಕಳೆದ ನಾಲ್ಕು ವರ್ಷದಿಂದ ಈ ಪ್ರಶಸ್ತಿ ನೀಡಲಾಗುತ್ತದೆ. ವರ್ಷದಲ್ಲಿ ಎರಡು ಬಾರಿ ವಿಚಾರ ಸಂಕಿರಣಗಳು. ಚಿಲಿಪಿಲಿ ಪ್ರಕಾಶನದಿಂದ 25 ಮಕ್ಕಳ ಸಾಹಿತ್ಯ ಕೃತಿಗಳ ಪ್ರಕಟಣೆ. ಇವುಗಳ ಜೊತೆಗೆ ಮಕ್ಕಳು ನಗು ನಗುತ್ತಾ ಕಲಿಯಬೇಕೆಂಬ ತತ್ವದಡಿಯಲ್ಲಿ ‘ಮಜಗಟಾ’ ಎಂಬ ಕಾರ್ಯಕ್ರಮವನ್ನು ನೀಡುತ್ತಲಿದ್ದೇವೆ. ಕನ್ನಡ ಇಂಗ್ಲಿಷ್‌ ಭಾಷೆಯ ಸೊಗಸು, ಸೊಗಡು, ಸರಳವಾಗಿಸಿದ ಗಣಿತ, ಆಡುತ್ತಲೇ ಕಲಿಯುವ ವಿಶಿಷ್ಟ ಆಟ.. ಇತ್ಯಾದಿ..

ಸಂಡೆ ಶಾಲೆ : ಶಾಲೆಯಿಂದ ಬಿಡುಗಡೆ, ಹೊಸಲೋಕದ ಸುತ್ತಾಟ, ಮೋಜು, ಹರಟೆ. ಅನುಭವ ಗಮ್ಯ ವಿಷಯಗಳಿಗೆ ಪ್ರಾಧಾನ್ಯ. ಪ್ರತಿ ಸಂಡೆ 3 ತಾಸು. 50 ಮಕ್ಕಳು ಮಾತ್ರ. ಮಕ್ಕಳಿಂದ ಅದ್ಭುತ ಪ್ರತಿಕ್ರಿಯೆ ! ಮಕ್ಕಳ ಶಿಬಿರಗಳನ್ನೂ ನಡೆಸುತ್ತಿದ್ದೇವೆ.

ಅಲ್ಲಿ ಅಮೆರಿಕದಲ್ಲಿ ನೀವೆಲ್ಲ ಕೆಲವರು ಕನ್ನಡ, ಕರ್ನಾಟಕದ ಸಂಸ್ಕೃತಿ, ಭಾಷೆ ಬಗ್ಗೆ ಅಪಾರ ಕಾಳಜಿಯುಳ್ಳವರಿದ್ದೀರೆಂಬುದನ್ನು ಚಂದ್ರಗೌಡರಿಂದ ತಿಳಿದಿರುವೆ. ಈಗ ನೀವು ಗುಬ್ಬಚ್ಚಿ ಗೂಡಿನ ನೆಲೆ ಗಟ್ಟಿಗೊಳಿಸಲು ನಮ್ಮೊಂದಿಗೆ ಕೈ ಜೋಡಿಸುವುದಾದರೆ ಖುಷಿಯೋ ಖುಷಿ! ಕನ್ನಡದ ಮಕ್ಕಳ ಬಗೆಗೆ ಅಪಾರ ಕಾಳಜಿ ಹೊಂದಿದ ಚಿಲಿಪಿಲಿ ಬಳಗದಲ್ಲಿ ನೀವುಗಳೆಲ್ಲ ಒಬ್ಬೊಬ್ಬರೂ - ದೂರದ ಊರಿಂದ - ಕೈಜೋಡಿಸಿದರೆ ನಮ್ಮ ಕೆಲಸಕ್ಕೆ ಹೊಸ ಮೆರಗು ಬರುತ್ತದೆ.

ವಂದನೆಗಳೊಂದಿಗೆ,

ಶಂಕರ ಹಲಗತ್ತಿ

ಗೌರವ ಸಂಪಾದಕರು ‘ಗುಬ್ಬಚ್ಚಿ ಗೂಡು’,

4ನೇ ಅಡ್ಡರಸ್ತೆ, ಶಿವಾನಂದ ನಗರ, ಧಾರವಾಡ - 580004

ಈಮೈಲ್‌: gubbacchigudu2000@yahoo.co.in

* * *

‘ಗುಬ್ಬಚ್ಚಿಗೂಡು’ನಂತಹ ಈ ಮೇಲಿನ ಕಾನ್ಸೆಪ್ಟನ್ನು ‘ಸಪ್ಲೈ’ (ಪೂರೈಕೆ) ಎಂದು ಲೇಬಲ್‌ ಹಚ್ಚಿ ಇನ್ನೊಂದು ಕಡೆಗಿಡೋಣ.

ಈಗ ಆಗಬೇಕಾದ್ದು ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಂವಹನ, ಸಂಚಲನ. ಇದನ್ನು ಹೇಗೆ ಸಾಧಿಸಬಹುದು?

  • ಗುಬ್ಬಚ್ಚಿಗೂಡಿಗೆ ಅಮೆರಿಕ ಮತ್ತಿತರ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಬಹುಸಂಖ್ಯೆಯಲ್ಲಿ ಚಂದಾದಾರರಾಗುವ ಉತ್ಸುಕತೆ ತೋರಿದರೆ ಈ ನಿಟ್ಟಿನಲ್ಲಿ ಗುಬ್ಬಚ್ಚಿಗೂಡಿನ ಸಂಪಾದಕ ಮಂಡಳಿ ಕಾರ್ಯಪ್ರವೃತ್ತವಾಗಬಹುದು.
  • ಬೇಡಿಕೆ ಸಾಕಷ್ಟು ಕಂಡುಬಂದರೆ ಗುಬ್ಬಚ್ಚಿಗೂಡಿನ ಸಂಚಿಕೆಗಳ ಅಂತರ್ಜಾಲ ಆವೃತ್ತಿಯನ್ನು ಆರಂಭಿಸಬಹುದು. (ಅಂತರ್ಜಾಲದಲ್ಲಿ ಈಗಿರುವ ಕನ್ನಡ ಪೋರ್ಟಲ್‌ಗಳಲ್ಲಿ, ಇತರ ವೆಬ್‌ಸೈಟ್‌ಗಳಲ್ಲಿ ಮಕ್ಕಳಿಗಂತ ಏನೇನೂ ಇಲ್ಲವೆಂಬ ಸತ್ಯವನ್ನು ಹಿರಿಯರೊಬ್ಬರು ಒಮ್ಮೆ ಪ್ರಸ್ತಾಪಿಸಿದ್ದರು. ಅದುವೆಕನ್ನಡಬಿಂದುವಾಣಿಯಲ್ಲೂ ಯಾವಾಗಲೋ ಒಮ್ಮೆ ನವಂಬರ್‌ 14ಕ್ಕೆ ಒಂದೆರಡು ಮಕ್ಕಳ-ಕವಿತೆ ಪ್ರಕಟವಾಗಿದ್ದರೆ ಅದೇ ಹೆಚ್ಚು !)
  • ಕವನ, ಕಥೆ, ಪ್ರಬಂಧ, ಹರಟೆ, ಪ್ರವಾಸಸಾಹಿತ್ಯ ಇತ್ಯಾದಿ ಬರೆಯುವ ಖಯಾಲಿಯುಳ್ಳ ಇಲ್ಲಿನ ಲೇಖಕ/ಲೇಖಕಿಯರೂ ಬಾಲ-ಓದುಗರನ್ನುದ್ದೇಶಿಸಿ ಬರೆಯಬಹುದು. ಇಲ್ಲಿನ ಮಕ್ಕಳಿಗೂ ಕನ್ನಡ ಬರವಣಿಗೆಯ ಪ್ರೋತ್ಸಾಹಕ್ಕಿದೊಂದು ವೇದಿಕೆಯಾಗಬಹುದು. ಇಲ್ಲಿನ ಪ್ರಾಕೃತಿಕ ವಿಸ್ಮಯ, ಯಾಂತ್ರಿಕ ಅಗಾಧತೆಯ ಬಗ್ಗೆ ಲೇಖನಗಳನ್ನು ಪತ್ರಿಕೆಗೆ ಬರೆದರೆ ಅಲ್ಲಿನ ಮಕ್ಕಳಿಗದು ಹೊಸತರ ಪರಿಚಯವಾಗಬಹುದು.

ಇವೆಲ್ಲ ಕೆಲವು ಸಾಧ್ಯತೆಗಳು. ಬೇಡಿಕೆ-ಪೂರೈಕೆ ನಡುವಿನ ನಿರ್ವಾತವನ್ನು ತುಂಬಬಹುದಾದ ಕೆಲವು ಅಸ್ಪಷ್ಟ ರೇಖೆಗಳು. ನನ್ನದೂ ಒಂದು ಅಳಿಲಸೇವೆಯಿರಲಿ ಇಂತಹ ರಚನಾತ್ಮಕ, ಅರ್ಥಪೂರ್ಣ ಯೋಜನೆಯಲ್ಲಿ ಎನ್ನುವ ದೃಷ್ಟಿಯಿಂದ ‘ಮಧ್ಯವರ್ತಿ’ಯಾಗಿ ವಿಚಿತ್ರಾನ್ನದ ಒಂದು ಸಂಚಿಕೆಯನ್ನು ವಿನಿಯೋಗಿಸಿದ್ದೇನೆ. ಇದನ್ನು ಗಟ್ಟಿಗೊಳಿಸುವುದು, ಫಲಾನುಭವಿಗಳಾಗುವುದು ನಾನೂ ಸೇರಿದಂತೆ ಎಲ್ಲ ಅನಿವಾಸಿ ಕನ್ನಡಿಗ ಹೆತ್ತವರಿಗೆ, ಹಿತಚಿಂತಕರಿಗೆ ಮತ್ತು ನಿಮಗೆ ಬಿಟ್ಟದ್ದು.

ಕನ್ನಡ ಬೆಳೆದು ಬೆಳಗಲಿ ಎಂಬ ಆಶಯದೊಂದಿಗೆ,

srivathsajoshi@yahoo.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more