• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನಮೋಹಕ ರಾಗ ಮೋಹನ

By Staff
|
Srivathsa Joshi *ಶ್ರೀವತ್ಸ ಜೋಶಿ

Musicnotes‘ಆವಾಹನಂ ನ ಜಾನಾಮಿ। ನ ಜಾನಾಮಿ ತವಾರ್ಚನಂ । ಪೂಜಾಂ ಚೈವ ನ ಜಾನಾಮಿ । ಕ್ಷಮಸ್ವ ಪರಮೇಶ್ವರ ।।’ - ದೇವರಪೂಜೆಯ ಮಂತ್ರಗಳಲ್ಲಿ ಹಾಗೆಂದು ಹೇಳಿಕೊಳ್ಳುತ್ತಲೇ ಪೂಜೆ ಮಾಡುತ್ತೇವಲ್ಲವೆ? ಹಾಗೆಯೇ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ನನಗೆ ಎಳ್ಳಷ್ಟೂ ಪರಿಣತಿ, ಜ್ಞಾನ, ಅನುಭವ ಇಲ್ಲದಿದ್ದರೂ ವಿಚಿತ್ರಾನ್ನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ಒಂದು ಲೇಖನವನ್ನು ಬರೆಯಹೊರಟಿದ್ದೇನೆ. ಸಂಗೀತಸಾಗರದಿಂದ ಒಂದು ‘ಕೊಡದಷ್ಟು’ ರಸಾಮೃತವನ್ನು ತಂದು ನಿಮಗೆ ‘ ಕೊಟ್ಟಷ್ಟು ’ ಸಂತೋಷ ಇನ್ನೆಲ್ಲಿ ಸಿಗಬೇಕು? ನಿಮ್ಮಲ್ಲೂ ಕರ್ನಾಟಕ ಶಾಸ್ತ್ರೀಯ ಸಂಗೀತಾಭಿಮಾನಿಗಳು, ಕಲಾವಿದರು, ಅಭ್ಯಾಸಿಗಳು, ಹವ್ಯಾಸಿಗಳು ತುಂಬ ಮಂದಿ ಇರಬಹುದು. ಅದಕ್ಕಾಗಿಯೇ ಈ ವಾರದ ವಿಚಿತ್ರಾನ್ನ ಸರಿಗಮಪ!

ನಾನು ಸಂಗೀತಾಭ್ಯಾಸ ಮಾಡಿದವನಲ್ಲ. ಶಾಸ್ತ್ರೀಯ ಸಂಗೀತದಲ್ಲಿ ನನಗೆ ಪರಿಣತಿ ಇಲ್ಲ ನಿಜ; ಆದರೆ ಆಸಕ್ತಿ-ಅಭಿಮಾನಗಳಿವೆ. ಕರ್ನಾಟಕ ಸಂಗೀತವನ್ನಾಲಿಸುವ ಹುಚ್ಚಂತೂ ಇದ್ದೇ ಇದೆ. 90ರ ದಶಕದಲ್ಲಿ ಹೈದರಾಬಾದ್‌ನಲ್ಲಿ ನಾನಿದ್ದಾಗ ಅಲ್ಲಿ ಪ್ರತಿವರ್ಷ ಡಿಸೆಂಬರ್‌ನಲ್ಲಿ ಕಲಾಸಾಗರಂ ಎಂಬ ಸಂಸ್ಥೆ ಏರ್ಪಡಿಸುತ್ತಿದ್ದ ಸಂಗೀತ ಸಪ್ತಾಹ ಕಾರ್ಯಕ್ರಮದ ವೇಳೆ ಸ್ವಯಂಸೇವಕನಾಗಿ ಕೆಲಸ ಮಾಡಿ ಕೆಲ ಸಂಗೀತ ದಿಗ್ಗಜರ ಕಛೇರಿಗಳನ್ನು ಕೇಳಿದ್ದೇನೆ. ಮೊದಲಿಂದಲೂ ನನಗೆ ಹಾಡುಗಾರಿಕೆಗಿಂತಲೂ ಇನ್ಸ್ಟ್ರುಮೆಂಟಲ್‌ ಮ್ಯೂಸಿಕ್‌ ತುಂಬ ಇಷ್ಟ - ಕಾರಲ್ಲಿ ಡ್ರೈವ್‌ ಮಾಡುವಾಗ ಕೇಳುತ್ತಿದ್ದರೂ ಇನ್ಸ್ಟ್ರುಮೆಂಟಲ್‌ ಮ್ಯೂಸಿಕ್‌. ಅದು ಒಳ್ಳೆಯ ಸ್ಟ್ರೆಸ್‌-ರಿಲೀವರ್‌ ಮತ್ತು ಅದರಿಂದ ಡಿಸ್ಟ್ರಾಕ್ಷನ್‌ ಆಗುವುದು ಕಡಿಮೆ ಎಂದು ನನ್ನ ಅನಿಸಿಕೆ.

Musicnotes

ಹೈದರಾಬಾದ್‌ನಲ್ಲಿರುವಾಗ ಒಂದು ಸಣ್ಣ ‘ ಕ್ಯಾಸಿಯೋ ಕೀಬೋರ್ಡ್‌’ ಖರೀದಿಸಿದ್ದೆ. ಅದರ ಮೇಲೆ ಕೈಯಾಡಿಸಿ ಒಂದಿಷ್ಟು ‘ ಸ್ವರ ಪ್ರಸ್ತಾರ ’ ಮಾಡಿದ್ದುಂಟು. ಆದರೆ ಅದು ಅಲ್ಲಿಗೇ ನಿಂತುಹೋಯಿತು. ನುಡಿಸಿದ್ದು ಶಾಸ್ತ್ರೀಯ ಸಂಗೀತವನ್ನಲ್ಲ; ಬರೇ ಚಿತ್ರಗೀತೆಗಳ ಟ್ಯೂನ್‌ ಅನುಕರಣೆಯ ಪ್ರಯತ್ನ. ಆವಾಗ ಹೈದರಾಬಾದಲ್ಲಿ ನನಗೆ ರಾಮದಾಸ್‌ ಕಾತ್ರೆ ಎಂಬುವವರೊಬ್ಬ ಸ್ನೇಹಿತರಿದ್ದರು. ಅವರು, ಅವರ ತಂದೆ-ತಾಯಿ ಎಲ್ಲ ಹಾರ್ಮೋನಿಯಂ ನುಡಿಸುವುದರಲ್ಲಿ ನಿಷ್ಣಾತರು. ರಾಮದಾಸ್‌ ನನಗೆ ಕೀಬೋರ್ಡ್‌ ಸಂಗೀತ ಕಲಿಸಲು ಮುಂದಾಗಿದ್ದರು. ಕಲಿಸುವ ಅವರ ಉಮೇದು, ಕಲಿಯುವ ನನ್ನ ಆಸಕ್ತಿಗಿಂತಲೂ ಹೆಚ್ಚು ! ನಾನವರಿಗೆ ಹೇಳಿದ್ದೆ - ಗಂಭೀರವಾದ ಸಂಗೀತಾಭ್ಯಾಸ ನನ್ನಿಂದಾಗಲಿಕ್ಕಿಲ್ಲ, ಫಿಲ್ಮ್‌ ಟ್ಯೂನ್ಸ್‌ ನುಡಿಸುವುದನ್ನು ಕಲಿಸಿ ಎಂದು. ಆದರೂ ಅವರು ಸ ರಿ ಗ ಮ ಪ ದ ನಿ ಸ ಮೊದಲು ಹೇಳಿಕೊಟ್ಟು ವಿದ್ಯಾಭ್ಯಾಸವನ್ನು ಸರಸ್ವತಿ ಸ್ತುತಿಯಾಂದಿಗೆ ಆರಂಭಿಸಬೇಕೆಂದು ಹೇಳಿ ‘ ವರವೀಣಾ ಮೃದುಪಾಣಿ ವನರುಹಲೋಚನ ರಾಣಿ...’ ಹಾಡನ್ನು ಕೀಬೋರ್ಡ್‌ ಮೇಲೆ ನುಡಿಸಲು ಕಲಿಸಿದರು. ಕೇವಲ ಕುತೂಹಲಕ್ಕಾಗಿ ‘ಅದು ಯಾವ ರಾಗದಲ್ಲಿದೆ?’ ಎಂದು ನಾನವರನ್ನೊಮ್ಮೆ ಕೇಳಿದ್ದೆ; ‘ ಇದು ಮೋಹನ ರಾಗ - ಕರ್ನಾಟಕ ಶಾಸ್ತ್ರೀಯ ಸಂಗೀತದ ಜನಪ್ರಿಯ ರಾಗಗಳಲ್ಲೊಂದು; ಇದನ್ನು ಕಲಿತರೆ ಕೆಲವೆಲ್ಲ ಚಿತ್ರಗೀತೆಗಳನ್ನು ನುಡಿಸುವುದನ್ನು ನೀನು ಸುಲಭವಾಗಿ ಕಲಿಯಬಲ್ಲೆ !’’ ಎಂದು ಅವರು ಹೇಳಿದ್ದರು.

‘ ವರವೀಣಾ ಮೃದುಪಾಣಿ...’ ಕರಗತವಾಗುತ್ತಿದ್ದಂತೆಯೇ ಮೋಹನರಾಗದ ಮೇಲೆ ನನಗೆ ಎಲ್ಲಿಲ್ಲದ ಆಸಕ್ತಿ ಬಂತು! ಸೈಕಲ್‌ ಬಿಡುವುದನ್ನು ಕಲಿಯುವಾಗ, ಈಜಾಡುವುದನ್ನು ಕಲಿಯುವಾಗ ಹೇಗೆ ನಮಗೊಂದು ‘ ಸಾಧಿಸಿದ ಬಿಂಕ’ಬರುವುದೋ ಹಾಗೆ. ಸ ರಿ ಗ ಪ ದ ಸ... ಸ ದ ಪ ಗ ರಿ ಸ... ಎಂದು ಮೋಹನದ ಆರೋಹಣ ಅವರೋಹಣಗಳನ್ನು ಬಾರಿಸಿದ್ದೇ ಬಾರಿಸಿದ್ದು. ಚಿಕ್ಕಂದಿನಲ್ಲಿ ನಮ್ಮನೆಯಲ್ಲಿ ಗೌರಿಪೂಜೆ, ಲಕ್ಷ್ಮೀಪೂಜೆ ಇತ್ಯಾದಿಯ ವೇಳೆ ಹೆಂಗಸರೆಲ್ಲ ‘ಶಕ್ತೀ ಪರಶಕ್ತೀ ಮುಕ್ತಿಕಾಂತಾ ಸ್ವರೂಪಿ...’ ಎಂಬ ಒಂದು ಗೀತೆಯನ್ನು ಹೇಳುತ್ತಿದ್ದರು. ಮೋಹನ ರಾಗದಲ್ಲಿ ಆ ಗೀತೆಯನ್ನು ಬಾರಿಸುವುದರಲ್ಲಿ ಶಕ್ತನಾದಾಗ ನನ್ನಷ್ಟಕ್ಕೆ ನಾನೇ ‘ಧನ್ಯೋಸಿ’್ಮ ಎಂದುಕೊಂಡೆ!

Musicnotes

ದೇವಿಸ್ತುತಿಯನ್ನೇನೋ ನುಡಿಸಿದ್ದಾಯ್ತು ಆದರೆ, ನನ್ನ ಧ್ಯೇಯ ಇದ್ದದ್ದು ಚಿತ್ರಗೀತೆ ಬಾರಿಸುವುದನ್ನು ಕಲಿಯಬೇಕಂತ. ರಾಮದಾಸ್‌ ನನಗೆ ಕನ್ನಡ ಚಿತ್ರಗೀತೆ ‘ಬಾನಲ್ಲು ನೀನೆ... ಭುವಿಯಲ್ಲು ನೀನೆ... ಎಲ್ಲೆಲ್ಲು ನೀನೆ... ನನ್ನಲ್ಲು ನೀನೆ...’ (ಚಿತ್ರ- ಬಯಲುದಾರಿ; ಸಂಗೀತ- ರಾಜನ್‌,ನಾಗೇಂದ್ರ) ಮೋಹನರಾಗದ್ದು ತುಂಬ ಸುಲಭ ಎಂದುಹೇಳಿಕೊಟ್ಟರು. ರಾಜನ್‌-ನಾಗೇಂದ್ರ ಸಂಗೀತ ನಿರ್ದೇಶನದ ಬೇರೆ ಕೆಲವು ಹಾಡುಗಳೂ ಮೋಹನರಾಗವನ್ನಾಧರಿಸಿದ್ದು ಆ ರಾಗ ಆ ಸಂಗೀತ ನಿರ್ದೇಶಕಜೋಡಿಯ ಒಂದು ಸ್ಟಾಂಪ್‌ ಎಂಬ ವಿಷಯವನ್ನೂ ಹೇಳಿದರು. ಇಳೆಯರಾಜಾ ಕೂಡ ಮೋಹನರಾಗ ಪ್ರಿಯರಾಗಿದ್ದು ಅವರ ಸಂಗೀತ ನಿರ್ದೇಶನದ ‘ ಜನ್ಮಜನ್ಮದ ಅನುಬಂಧ’ ಚಿತ್ರದ ‘ ಆಕಾಶದಿಂದ ಜಾರಿ... ಭೂಮಿಗೆ ಬಂದ ನೋಡಿ...’ ಚಿತ್ರಗೀತೆಯ ಸಂಗೀತದಲ್ಲಿ ಮೋಹನರಾಗವಿದೆ ಎಂದು ನನಗೆ ರಾಮದಾಸ್‌ ಪರಿಚಯಿಸಿದರು. ಇಳೆಯರಾಜ ಸಂಗೀತ ನಿರ್ದೇಶನದ ಸಾಗರ ಸಂಗಮಂ (ತೆಲುಗು) ಚಿತ್ರದಲ್ಲಿನ ‘ ವೇ ವೇಳ ಗೋಪೆಮ್ಮಲ ಮುವ್ವ ಗೋಪಾಲುಡೇ...’ ಹಾಡು, ಹಾಗೆಯೇ ಅಗ್ನಿನಕ್ಷತ್ರಮ್‌ (ತಮಿಳು) ಚಿತ್ರದ ‘ ನಿನ್ನು ಕೋರಿ ವರ್ಣಂ..’ ಹಾಡು - ಇವೆಲ್ಲ ಮೋಹನ ಆಧಾರಿತವೆಂಬುದು ನನಗೆ ತಿಳಿಯಲಿಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ.

ಮೋಹನರಾಗ ಹೆಚ್ಚಾಗಿ ಶೃಂಗಾರರಸ ಮತ್ತು ಭಕ್ತಿರಸ ಗಾಯನಕ್ಕೆ ಹೇಳಿಮಾಡಿಸಿದಂಥದ್ದು ಎಂದು ಎಲ್ಲೋ ಓದಿದ ನೆನಪು. ಪುರಂದರದಾಸರ ‘ ಮೆಲ್ಲ ಮೆಲ್ಲನೆ ಬಂದನೆ... ಗೋಪಮ್ಮ ಕೇಳೆ ಮೆಲ್ಲ ಮೆಲ್ಲನೆ ಬಂದನೆ...’, ಕನಕದಾಸರ ‘ ನಮ್ಮಮ್ಮ ಶಾರದೆ ಉಮಾಮಹೇಶ್ವರಿ... ನಿಮ್ಮೊಳಗಿಹನಾರಮ್ಮ...’, ಸದಾಶಿವ ಬ್ರಹ್ಮೇಂದ್ರರ ಸಂಸ್ಕೃತ ರಚನೆ ‘ ನಹಿ ರೇ ನಹಿ ಶಂಕಾ...’ ಇವೆಲ್ಲ ಮೋಹನರಾಗದಲ್ಲಿಯೇ ಇವೆ. ವಿದ್ಯಾಭೂಷಣ ಸ್ವಾಮಿಯವರ (ಈಗ ಸನ್ಯಾಸ ಬಿಟ್ಟು ಗೃಹಸ್ಥಾಶ್ರಮಕ್ಕೆ ಮರಳಿದ್ದಾರೆ) ಮೊಟ್ಟಮೊದಲ ‘ ದಾಸರ ಪದಗಳು’ ಧ್ವನಿಸುರುಳಿಯಲ್ಲಿ ಕೊನೆಯ ಹಾಡು ಪುರಂದರದಾಸರ ‘ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ...’ ಮೋಹನರಾಗ ಆಧಾರಿತ ಅತಿ ಜನಪ್ರಿಯ ಭಕ್ತಿಗೀತೆ. ವಿದ್ಯಾಭೂಷಣರ ಕಂಠಸಿರಿ ಜಗತ್ತಿಗೆ ಪರಿಚಯವಾದದ್ದೇ ಈ ಹಾಡಿನಿಂದ ಎಂದರೆ ಅತಿಶಯೋಕ್ತಿಯಲ್ಲ.

ಅದೇಕೋ ಶಾಸ್ತ್ರೀಯ ಸಂಗೀತ ಕಲಿಕೆಯ ಮೈಂಡ್‌ಸೆಟ್‌ನಲ್ಲಿ ಈ ಎಲ್ಲ ಕೃತಿಗಳನ್ನಾದರೂ ಚೆನ್ನಾಗಿ ನುಡಿಸುವುದನ್ನು ಕಲಿಯುವ ಹುಮ್ಮಸ್ಸು ನನ್ನಲ್ಲುಳಿಯಲಿಲ್ಲ. ಸಂಗೀತದ ಒಬ್ಬ ಶ್ರೋತೃವಾಗಿಯೇ ನಾನು ಮುಂದುವರಿಯಲು ಇಷ್ಟಪಟ್ಟೆ. ಆಫ್‌ ಕೋರ್ಸ್‌, ಕರ್ನಾಟಕ ಶಾಸ್ತ್ರೀಯ ಸಂಗೀತದ ಸಿಡಿ, ಕ್ಯಾಸೆಟ್‌ಗಳನ್ನು ನಾನು ಖರೀದಿಸಿದರೂ ಅದರಲ್ಲಿ ಭಕ್ತಿರಸ ಹರಿಯುವ ತ್ಯಾಗರಾಜರ ರಚನೆಗಳಾದ ‘ಭಾವನುತ ನಾ ಹೃದಯಮುನ...’ ಅಥವಾ ’ನನ್ನು ಪಾಲಿಂಪ ನಡಚಿ...’ ಇತ್ಯಾದಿ ನಿತ್ಯಹರಿದ್ವರ್ಣ ಮೋಹನರಾಗದ ಕೃತಿಗಳಿದ್ದರೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತೇನೆಂಬುದು ನಿಜ!

ಚಿತ್ರಗೀತೆ ಹುಚ್ಚಿನ ನನಗೆ ಹಿಂದಿ ಚಿತ್ರಗೀತೆಗಳಲ್ಲೂ ಮೋಹನರಾಗದ ಹಿಂದುಸ್ಥಾನಿ ರೂಪ ‘ ಭೂಪ್‌ ’ (ಅಥವಾ ಭೂಪಾಲಿ) ರಾಗವನ್ನಾಧರಿಸಿದ ಗೀತೆಗಳನ್ನು ಆಯ್ದು ತೋರಿಸಿದರು ರಾಮದಾಸ್‌. ‘ ಜ್ಯೊತಿ ಕಲಶ್‌ ಛಲ್‌ಕೆ...’, ‘ದೇಖಾ ಎಕ್‌ ಖ್ವಾಬ್‌ ತೊ ಯೆ ಸಿಲ್‌ಸಿಲೆ ಹುವೆ...’, ‘ಸಾಯಾನಾರಾ ಸಾಯಾನಾರಾ... ವಾದಾ ನಿಭಾವೂಂಗೀ ಸಾಯಾನಾರಾ...’, ‘ ಕಂಚಿ ರೆ ಕಂಚಿ ರೇ...’, ‘ಪಂಛಿ ಬನೂ ಉಡ್‌ಕೆ ಫಿರೂಂ ಮಸ್ತ್‌ ಗಗನ್‌ ಮೆ...’ ಇತ್ಯಾದಿ ಹಾಡುಗಳನ್ನು ಮೋಹನರಾಗ ಗೊತ್ತಿರುವ ನಾನು ನುಡಿಸುವುದು ತುಂಬ ಸುಲಭ ಎಂದು ಅದೆಷ್ಟು ಆಸಕ್ತಿಯಿಂದ ಹೇಳುತ್ತಿದ್ದರವರು!

ವಿಧಿವಿಪರೀತ ವಿಧಿಯಾ ಆಟ... ಎನ್ನುತ್ತಾರಲ್ಲ, ನನ್ನ ಇನ್‌ ಫಾರ್ಮಲ್‌ ಸಂಗೀತ ಗುರು ರಾಮದಾಸ್‌ ಕಾತ್ರೆ, ಅಕಾಲಮೃತ್ಯುವಿಗೀಡಾದರು. ಮುಂದೆ ಕೆಲವು ದಿನಗಳಲ್ಲಿ ನಾನೂ ಹೈದರಾಬಾದ್‌ ಬಿಟ್ಟು ಬೆಂಗಳೂರಿಗೆ ಬಂದೆ. ಕೀಬೋರ್ಡ್‌, ಚಿತ್ರಗೀತೆ ನುಡಿಸುವ ಹುಚ್ಚು - ಎಲ್ಲ ಸ್ವಲ್ಪ ಹಿಂದೆಸರಿದುವು. ಆದರೆ ಮೋಹನ ರಾಗ ಮನದಲ್ಲಿ ಅಚ್ಚಳಿಯದೆ ನಿಂತಿತು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ನನಗೆ ಚೆನ್ನಾಗಿ ಪರಿಚಯದ ಒಂದೇ ರಾಗವೆಂದರೆ ಮೋಹನ ರಾಗ ಎಂದಾಯಿತು. ಹಾಗಾಗಿಯೇ ಸಂಗೀತ ಸ್ಪೆಷಲ್‌ ಈ ವಿಚಿತ್ರಾನ್ನವೂ ‘ ಮನಮೋಹಕ ರಾಗ ಮೋಹನ’ ಎಂಬ ಶೀರ್ಷಿಕೆಯಾಂದಿಗೆ ಮೋಹನರಾಗಕ್ಕೊಂದು ಗೀತಾಂಜಲಿಯಾಗಿ, ದಿ।ರಾಮದಾಸ್‌ ಕಾತ್ರೆಯವರಿಗೊಂದು ಶೃದ್ಧಾಂಜಲಿಯಾಗಿ ಮೂಡಿ ಬಂತು!

ಪುನರುಚ್ಚರಿಸುತ್ತಿರುವುದೇನೆಂದರೆ, ಜಗದಾನಂದಕರ ಸಂಗೀತಸಾಗರದ ಅಗಾಧತೆಯೆದುರು ಅಲ್ಪಜ್ಞಾನಿಯಾದ ನಾನು ಈ ಲೇಖನದಲ್ಲಿ ಉಲ್ಲೇಖಿಸಿದ ಅಂಶಗಳಲ್ಲಿ ತಪ್ಪುಗಳೇನಾದರೂ ನುಸುಳಿದ್ದರೆ ಮನ್ನಿಸಬೇಕೆಂದು ಕೋರುತ್ತಿದ್ದೇನೆ. ಎಂದರೋ ಮಹಾನುಭಾವುಲು, ಅಂದರಿಕಿ ವಂದನಂ.

ನಿಮ್ಮ ಅನಿಸಿಕೆಗಳನ್ನು srivathsajoshi@yahoo.com ವಿಳಾಸಕ್ಕೆ ತಪ್ಪದೇ ತಿಳಿಸುವಿರಾಗಿಯೂ ನಂಬಿರುತ್ತೇನೆ.

ಪೂರಕ ಓದಿಗೆ :

ಎಲ್ಲ ಕೇಳಲಿ ಎಂದು ಅವರು ಹಾಡುವುದಿಲ್ಲ

ನತದೃಷ್ಟ ಸಂಗೀತಗಾರನ ಕುಟುಂಬಕ್ಕೆ ನೆರವು

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more