• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನಸಿನ ಮಾರ್ಗಗಳು - ಮಾರ್ಗದ ಕನಸುಗಳು

By Staff
|
Srivathsa Joshi *ಶ್ರೀವತ್ಸ ಜೋಶಿ

Ranganathittu Pakshidhamaಶೀರ್ಷಿಕೆಯನ್ನು ನೋಡಿ ಅಬ್ದುಲ್‌ ಕಲಾಂ, ನಾರಾಯಣ ಮೂರ್ತಿ ಅಥವಾ ಇನ್ನಾರಾದರೂ ಇಂತಹ ಅನುಕರಣೀಯ ಆದರ್ಶ ವ್ಯಕ್ತಿಗಳ ಭಾಷಣ, ಲೇಖನಗಳ ವಿಷಯವಿರಬಹುದು ಎಂದುಕೊಳ್ಳಬೇಡಿ. ಈ ಸಲ ಸುತ್ತು ಬಳಸಿ (ಬೆಟ್ಟಗುಡ್ಡ ಹತ್ತಿ ಇಳಿದು, ನದಿತೊರೆಗಳನ್ನು ದಾಟಿ ಎಂಬಂತೆ) ವಿಷಯಕ್ಕೆ ಬರೋಣ. ಪ್ರಬಂಧ ಲೇಖನವನ್ನು ಆ ಶೈಲಿಯಲ್ಲೂ ಮಾಡಬಹುದು; ಯಾವಾಗಲೂ ನೇರವಾಗಿ ವಿಷಯವನ್ನು ಆರಂಭಿಸಲೇಬೇಕೆಂದೇನಿಲ್ಲ , ಪೊದೆಯ ಸುತ್ತ ಬಡಿತ (ಬೀಟಿಂಗ್‌ ಅರೌಂಡ್‌ ದ ಬುಷ್‌) ಮಾಡಿ ಸ್ವಲ್ಪ ಹೆಚ್ಚುವರಿ ಮಾಹಿತಿ ಸಂಗ್ರಹಿಸಿ ಆಮೇಲೆ ಅಸಲಿ ವಿಷಯದ ಪ್ರಸ್ತಾಪ ಮಾಡಿದರೂ ನಡೆಯುತ್ತದೆ. ಸರಿ, ಆ ಧಾಟಿಯಲ್ಲಿ ಇವತ್ತಿನ ವಿಚಿತ್ರಾನ್ನ.

ಕರ್ನಾಟಕದ, ಕನ್ನಡದ ಧ್ವಜದಲ್ಲಿ ಯಾವ್ಯಾವ ಬಣ್ಣಗಳು ಇವೆ ? ನಿಮ್ಮಲ್ಲಿನ ಕನ್ನಡಾಭಿಮಾನ ತುಕ್ಕುಹಿಡಿಯದೆ ಉಕ್ಕಿಹರಿಯುತ್ತಿದ್ದರೆ ಉತ್ತರ ನಿಮಗೆ ಗೊತ್ತಿದೆ - ಕೆಂಪು ಮತ್ತು ಹಳದಿ. ಮುಂದಿನ ಪ್ರಶ್ನೆ, ಮುಖಪುಟಕ್ಕೆ ಯಾವಾಗಲೂ ಕೆಂಪುಬಣ್ಣದ ಬಾರ್ಡರ್‌ ಇರುವ ಎರಡು ಪ್ರಖ್ಯಾತ ಆಂಗ್ಲ ನಿಯತಕಾಲಿಕಗಳನ್ನು ಹೆಸರಿಸಿ. ನಿಮ್ಮ ಉತ್ತರ ‘ಟೈಮ್‌’ ಮತ್ತು ‘ಇಂಡಿಯಾ ಟುಡೇ’ ಎಂದಿದ್ದರೆ ನೀವು ಪ್ರಥಮದರ್ಜೆಯಲ್ಲಿ ತೇರ್ಗಡೆ. ಹಾಗಾದರೆ, ಯಾವಾಗಲೂ ಹಳದಿಬಣ್ಣದ ಬಾರ್ಡರ್‌ನ ಮುಖಪುಟದ ಅತಿ ಪ್ರಸಿದ್ಧ ಪತ್ರಿಕೆ ಯಾವುದು? ಇದೂ ನಿಮಗೆ ತಟ್ಟನೆ ಗೊತ್ತಿರುವ ಉತ್ತರವಾದರೆ, ನೀವು ಡಿಸ್ಟಿಂಕ್ಷನ್‌ ಕ್ಲಾಸ್‌ ಪಾಸ್‌!! ಹೌದು, ಆ ವಿಶ್ವವಿಖ್ಯಾತ ಪತ್ರಿಕೆಯೇ ‘ನ್ಯಾಷನಲ್‌ ಜಿಯೋಗ್ರಾಫಿಕ್‌’!

ಪತ್ರಿಕೆಗೆ ಹಳದಿ ಬಾರ್ಡರ್‌ ಅಷ್ಟೇ ಅಲ್ಲ, ನ್ಯಾಷನಲ್‌ ಜಿಯೋಗ್ರಾಫಿಕ್‌ ಸೊಸೈಟಿಯ ‘ಲೊಗೊ’ ಅದು. ಹಳದಿ ಬಣ್ಣದ ಒಂದು ಟೊಳ್ಳು ಆಯತ - ಪ್ರಾಯಶಃ ಅತಿ ಸುಲಭವಾಗಿ ಬಿಡಿಸಬಹುದಾದ ಲೊಗೊ - ನ್ಯಾಷನಲ್‌ ಜಿಯೋಗ್ರಾಫಿಕ್‌ನ ಎಲ್ಲ ಪ್ರಕಟಣೆಗಳ, ಟಿವಿ ಚಾನೆಲ್‌ನ, ವೆಬ್‌ಸೈಟ್‌ನ ಹೆಗ್ಗುರುತು. ನ್ಯಾಷನಲ್‌ ಜಿಯೋಗ್ರಾಫಿಕ್‌ ಸೊಸೈಟಿಯ ವರ್ಲ್ಡ್‌ ಹೆಡ್‌ಕ್ವಾರ್ಟರ್ಸ್‌ ಇರುವುದು ಇಲ್ಲಿ ವಾಷಿಂಗ್‌ಟನ್‌ ಡಿಸಿಯಲ್ಲಿ. ಜನವರಿ 27, 1888ರಂದು ಕೇವಲ 33 ಮಂದಿ (ಭೂಗೋಳಶಾಸ್ತ್ರಜ್ಞರು ಮಾತ್ರವಲ್ಲದೆ ವಕೀಲರು, ಶಿಕ್ಷಕರು, ಮಿಲಿಟರಿ ಆಫೀಸರರು, ಉದ್ದಿಮೆದಾರರು ಎಲ್ಲರೂ ಇದ್ದ ಗುಂಪು) ಸದಸ್ಯರೊಂದಿಗೆ ಆರಂಭವಾದ ಈ ಸೊಸೈಟಿಯ ಮೊಟ್ಟಮೊದಲ ಅಧ್ಯಕ್ಷ ಗಾರ್ಡಿನರ್‌ ಗ್ರೇನ್‌ ಹಬ್ಬರ್ಡ್‌ ಎಂಬಾತ (ಅವನ ಅಳಿಯನೇ ಅಲೆಕ್ಸಾಂಡರ್‌ ಗ್ರಹಾಂ ಬೆಲ್‌). ನವೆಂಬರ್‌ 1888ರಿಂದ ನ್ಯಾಷನಲ್‌ ಜಿಯೋಗ್ರಾಫಿಕ್‌ ಪತ್ರಿಕೆಯ ಪ್ರಕಟಣೆ ಆರಂಭವಾಯಿತು.

karnataka map with 27 districtsನ್ಯಾಷನಲ್‌ ಜಿಯೋಗ್ರಾಫಿಕ್‌ನ ಪರಮಭಕ್ತರು ನಿಮ್ಮಲ್ಲಿ ಅನೇಕರಿರಬಹುದು ಎಂದುಕೊಂಡಿದ್ದೇನೆ. 90ರ ದಶಕದ ಆರಂಭದಲ್ಲಿ ಭಾರತದಲ್ಲಿ ದೂರದರ್ಶನದಲ್ಲಿ ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ‘ಎಕ್ಸ್‌ಪೆಡಿಷನ್‌ ಟು ದ ಎನಿಮಲ್‌ ಕಿಂಗ್‌ಡಮ್‌’ - ಅರ್ಧಗಂಟೆಯ ಕಾರ್ಯಕ್ರಮವನ್ನು ನೋಡಲು ಕಾದುನಿಂತಿರುತ್ತಿದ್ದ ನಾನು ಮುಂದೆ ಕೇಬಲ್‌ ದಿನಗಳಲ್ಲಿ 24 ಗಂಟೆಯೂ ಪ್ರಕೃತಿಯ ಬಗ್ಗೆ ಕಾರ್ಯಕ್ರಮಗಳನ್ನು ಪ್ರಸಾರಮಾಡುವ ಡಿಸ್ಕವರಿ, ನ್ಯಾಷನಲ್‌ ಜಿಯೋಗ್ರಾಫಿಕ್‌ ಇತ್ಯಾದಿ ಚಾನೆಲ್‌ಗಳು ಲಭ್ಯವಾದಾಗ ಪಟ್ಟ ಸಂತೋಷ ಆಷ್ಟಿಷ್ಟಲ್ಲ. ಈಗಲೂ ನಮ್ಮ ಟಿವಿಯಲ್ಲಿ ನ್ಯಾಷನಲ್‌ ಜಿಯೋಗ್ರಾಫಿಕ್‌ ಚಾನೆಲ್‌ (ಮಗರಾಯನ ಮನದಣಿಸಲು ಕಾರ್ಟೂನ್‌ ಚಾನೆಲ್‌ ಬಿಟ್ಟರೆ) ಡಿಫಾಲ್ಟ್‌ ಚಾನೆಲ್‌ ಆಗಿರುವುದು. ನ್ಯಾಷನಲ್‌ ಜಿಯೋಗ್ರಾಫಿಕ್‌ ಮ್ಯಾಗಜಿನ್‌ ಕೂಡ ನನ್ನ ಫೇವರಿಟ್‌ಗಳಲ್ಲೊಂದು.

ಕನ್ನಡದಲ್ಲಿ ಒಂದುವೇಳೆ ‘ನ್ಯಾಷನಲ್‌ ಜಿಯೋಗ್ರಾಫಿಕ್‌’ ಮ್ಯಾಗಜೀನ್‌ ಪ್ರಕಟವಾಗುತ್ತಿದ್ದರೆ? ಅಥವಾ, ಪತ್ರಿಕೆಯ ಒಂದು ವಿಶೇಷಾಂಕ ಕರ್ನಾಟಕದ ಕುರಿತಾಗಿ ಬಂದರೆ ?? ನನ್ನ ಕಲ್ಪನೆಯಂತೆ ಮುಖಪುಟ ಇಲ್ಲಿನ ಚಿತ್ರದಲ್ಲಿದ್ದಂತೆ ರಾಜ-ರಾಣಿ-ರಾಕೆಟ್‌-ರೋರರ್‌ಗಳಿಂದ ಅಲಂಕೃತವಾಗಿರಬಹುದು. ಒಳಗಡೆ ಪುಟಪುಟಗಳಲ್ಲೂ ರಂಗನತಿಟ್ಟು, ಮುಳ್ಳಯ್ಯನಗಿರಿ, ಕೊಡಚಾದ್ರಿ, ಕುರಿಂಗಲ್ಲು, ಕುದುರೆಮುಖ, ಗಡಾಯಿಕಲ್ಲು, ಎಡಕುಮೇರಿ, ಶಿವನಸಮುದ್ರ, ಮಂಡಗದ್ದೆ, ಕೆಮ್ಮಣ್ಣುಗುಂಡಿ, ದೇವರಾಯನದುರ್ಗ ಇತ್ಯಾದಿ ನೈಸರ್ಗಿಕ ಆಕರ್ಷಣೆಯುಳ್ಳ ಸ್ಥಳಗಳ ಪರಿಚಯ, ಚಾರಣಕ್ಕೆ ಪ್ರಶಸ್ತವಾದ ಮಾರ್ಗಗಳ, ಜಾಗಗಳ ವಿವರಗಳು, ಪಕ್ಷಿವೀಕ್ಷಣೆಯ ಟಿಪ್ಸ್‌ ಏಂಡ್‌ ಟ್ರಿಕ್ಸ್‌; ಕುಂದಾಪುರದ ಸಮೀಪ ಮರವಂತೆಯಲ್ಲಿ ಸುಮಾರು ಮೈಲು ಉದ್ದಕ್ಕೆ ರಾಷ್ಟ್ರೀಯ ಹೆದ್ದಾರಿ 17ರ ಒಂದು ಬಾಜೂ ಅರಬೀಸಮುದ್ರ, ಇನ್ನೊಂದೆಡೆ ಸೌಪರ್ಣಿಕಾ ನದಿ ಹರಿಯುವ ನಯನಮನೋಹರ ದೃಶ್ಯದ ಸೆಂಟರ್‌ಫೋಲ್ಡ್‌ - ಹೀಗೆ ಎಲ್ಲವೂ ‘ಪ್ರಕೃತಿಯ ಮಡಿಲಿಂದ’ ನೇರವಾಗಿ ನಿಮ್ಮ ಮಸ್ತಕಕ್ಕೆ ಸರಬರಾಜು ಮಾಡುವ ಪುಸ್ತಕ! ಕಣ್ಮನ ತಣಿಸುವುದಂತೂ ಗ್ಯಾರಂಟಿ!

ಇದು ಕನಸೇ? ಸದ್ಯಕ್ಕೆ ಹೌದು. ಆದರೆ ಕನಸು ಕಾಣುತ್ತಿರುವ ನಮ್ಮ ಸ್ನೇಹಿತ ಕನ್ನಡಿಗನೊಬ್ಬನ ಮಾತುಗಳನ್ನು ಕೇಳಿ:

Fictitious cover page of Kannada National Geographic Magazine‘ನನ್ನ ಹೆಸರು ಗೌತಮ್‌. ನಾನು ಮೂಲತಃ ಉತ್ತರಕನ್ನಡ ಜಿಲ್ಲೆಯವನು. ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ. ಬೆಳೆದಿದ್ದು ಮಾತ್ರ ಹಳಿಯಾಳ, ದಾಂಡೇಲಿ, ಅಂಬಿಕಾನಗರ, ಗೇರುಸೊಪ್ಪ, ವರಾಹಿ ಇತ್ಯಾದಿ ಕಡೆಗಳಲ್ಲಿ. 20 ವರ್ಷ ಬರೀ ಕಾಡಿನ ಪರಿಸರದಲ್ಲೇ ಬೆಳೆದು ಒಂಥರ ಪ್ರಕೃತಿ ಬಗ್ಗೆ ತುಂಬ ಪ್ರೇಮ, ಕಾಳಜಿ ಬಂದಿರೋದು ಸಹಜವೇ. ಸದ್ಯಕ್ಕೆ ನಾನು ಇಲ್ಲಿ ಬೆಂಗಳೂರಲ್ಲಿ ಸಾಫ್ಟ್‌ವೇರ್‌ ಕಂಪೆನಿಯಾಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ನನ್ನ ಕನಸು ಬೇರೆಯೇ! ನನಗೆ ‘ನ್ಯಾಷನಲ್‌ ಜಿಯೋಗ್ರಾಫಿಕ್‌’ ಛಾಯಾಗ್ರಾಹಕ ಆಗಬೇಕೆಂಬ ಹೆಬ್ಬಯಕೆ. ಅದು ನಾನು ಇಲ್ಲಿ ಕೆಲಸ ಮಾಡುತ್ತಿದ್ದರೆ ಆಗುವುದಿಲ್ಲ . ಆದ್ದರಿಂದ ಒಂದು ನಮ್ಮದೇ ವ್ಯವಹಾರ (ಬಿಜಿನೆಸ್ಸ್‌) ಬೇರೆ ಇದೆ. ಅದರಿಂದ ನನ್ನ ಹಣಕಾಸು ಸರಿಯಾಗುವ ತನಕ ಇಲ್ಲಿ ಕೆಲಸ. ಆಮೇಲೆ ಸಂಪೂರ್ಣವಾಗಿ ಛಾಯಾಗ್ರಾಹಕ, ವನ್ಯಸಂರಕ್ಷಕ ಆಗುತ್ತೇನೆ. ಏನಂತೀರಿ?’

ಗೌತಮ್‌ ಅವರ ಮಾತುಗಳನ್ನೋದಿ ‘ಬೊಗಳೆ ರೀಲು’ ಎಂದು ನೀವೆಣಿಸಿದರೆ ದೊಡ್ಡ ತಪ್ಪುಮಾಡಿದಂತೆ. ಈಗಾಗಲೇ ಗೌತಮ್‌ ಮತ್ತವರ ಗೆಳೆಯರ ಬಳಗ ಸೇರಿ ಕನಸುಗಳ ಮಾರ್ಗವೊಂದನ್ನು ರೂಪಿಸಿಕೊಂಡಿದ್ದಾರೆ. ಕರ್ನಾಟಕದ ಪ್ರಕೃತಿಯಲ್ಲಿ ತಾವೆಲ್ಲ ಕಂಡದ್ದನ್ನು ಛಾಯಾಚಿತ್ರಗಳಲ್ಲಿ , ಅಕ್ಷರಗಳಲ್ಲಿ ದಾಖಲಿಸಿಟ್ಟಿದ್ದಾರೆ. ದೂರದೂರದ ಊರುಗಳಲ್ಲಿದ್ದೇ ನಮ್ಮೂರ ನಮ್ಮ ನಾಡಿನ ಕನಸು ಕಾಣುವ ನಮ್ಮೆಲ್ಲರಿಗೆ ಈ ವಿವರಗಳು ಲಭ್ಯವಾಗುವಂತೆ ಅಂತರ್ಜಾಲ ತಾಣವೊಂದನ್ನು ಹೆಣೆದಿದ್ದಾರೆ. ಯಾರಿಗೆ ಗೊತ್ತು? ಮುಂದೊಂದು ದಿನ ನಮ್ಮ ಹೆಮ್ಮೆಯ ಕನ್ನಡಿಗ ಗೌತಮ್‌ ‘ನ್ಯಾಷನಲ್‌ ಜಿಯೋಗ್ರಾಫಿಕ್‌’ ಛಾಯಾಚಿತ್ರಗಾರನಾಗಿ ಕೀರ್ತಿಗಳಿಸಿ ಒಂದು ಕರ್ನಾಟಕ-ವಿಶೇಷ ಸಂಚಿಕೆ ಬಂದರೂ ಬರಬಹುದು!

ಹಳದಿಬಣ್ಣ , ನ್ಯಾಷನಲ್‌ ಜಿಯೋಗ್ರಾಫಿಕ್‌ ಇತ್ಯಾದಿತ್ಯಾದಿ ಇಷ್ಟೆಲ್ಲ ಪೀಠಿಕೆಯ ನಂತರ ಕೊನೆಯಲ್ಲೀಗ ಮುಖ್ಯವಿಷಯ. ಭೇಟಿ ಕೊಡಿ ಗೌತಮ್‌ ಗೆಳೆಯರ ಬಳಗದ ಡ್ರೀಮ್‌ರೂಟ್ಸ್‌.ಆರ್ಗ್‌ http://www.dreamroutes.org ವೆಬ್‌ಸೈಟಿಗೆ. ಕರ್ನಾಟಕದ ರಮಣೀಯ ಪ್ರಕೃತಿಯನ್ನು ಬೊಗಸೆ ಬೊಗಸೆಯಾಗಿ ಕಣ್ಮನಗಳಲ್ಲಿ ತುಂಬಿಸಿಕೊಳ್ಳಲಿಕ್ಕೆ.

ಈ ವಾರ ಪ್ರಶ್ನೆ ಕೇಳುವ ಬದಲು ನೀವೇ ಪ್ರಶ್ನೆ ಕೇಳುವಂತೆ ಮಾಡೋಣ. ಈ ಅಂಕಣ ‘ಇಂಟರಾಕ್ಟಿವ್‌’ ಆಗಿರುವುದರಿಂದ ಅದೂ ಒಂದು ಸೊಗಸು. ಈ ಕೆಳಗಿನ ಉತ್ತರಕ್ಕೆ ಒಂದು ಒಳ್ಳೆಯ ಪ್ರಶ್ನೆಯನ್ನು ಬರೆದು ಕಳಿಸುತ್ತೀರಾ? ನಿಮ್ಮ ಪ್ರಶ್ನೆಯಲ್ಲಿ ‘‘?’’ ಚಿಹ್ನೆ ಇರದಿದ್ದರೆ ಅದು ಕ್ವಾಲಿಫೈ ಆಗುವುದಿಲ್ಲ ! ಪ್ರಶ್ನೆಯಲ್ಲಿ ಯಾವುದರ ಉಲ್ಲೇಖ ಬರಬಹುದೆಂದು ನಿಮಗೆ ಸಹಾಯಕಾರಿಯಾಗಿ ಈ ಪದಗಳನ್ನು ಒದಗಿಸಿದ್ದೇನೆ: ಮಳೆ, ಶಂಕರ್‌ನಾಗ್‌, 14, ಮಿನಿಬಸ್‌, ಸೂರ್ಯಾಸ್ತ... ಇತ್ಯಾದಿ.

ಉತ್ತರ: ಆಗುಂಬೆ.

ಪ್ರಶ್ನೆ : ?

srivathsajoshi@yahoo.com ವಿಳಾಸಕ್ಕೆ ಬರೆದು ತಿಳಿಸಿ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more