• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರಳಿಯತ್ನವ ಮಾಡು

By Staff
|
Srivathsa Joshi *ಶ್ರೀವತ್ಸ ಜೋಶಿ

‘ಪಂಚಭಕ್ಷ್ಯ ಪರಮಾನ್ನ’ ಎಂದು ನೀವು ಕೇಳಿರಬಹುದು. ಈ ವಾರದ ವಿಚಿತ್ರಾನ್ನದಲ್ಲಿ ‘ಮರಳಿ ಯತ್ನವ ಮಾಡು’ ಎಂಬ ಸೀದಾ ಸಾದಾ ಹಿತೋಪದೇಶದ ಐದು ಬೇರೆಬೇರೆ ಸ್ವಾದಗಳು. ತಮಾಷೆಯಾಂದಿಗೆ ಆರಂಭವಾಗಿ ಗಾಂಭೀರ್ಯವನ್ನು ಪಡೆಯುತ್ತ ಸಾಗುತ್ತವೆ. ಓದಿ ಅಭಿಪ್ರಾಯವನ್ನು ತಿಳಿಸಿ.

1. ಮೊಟ್ಟಮೊದಲಾಗಿ ಒಂದು ‘ಪನ್‌’:

ಶ್ರೀಲಂಕಾ ಕ್ರಿಕೆಟ್‌ ತಂಡದ ನಾಯಕ (ಸನತ್‌ ಜಯಸೂರ್ಯ ಎಂದಿರಲಿ), ಆ ತಂಡದ ಮಾರಕ ಬೌಲರ್‌ ಮುತ್ತಯ್ಯ ಮುರಳೀಧರನ್‌ಗೆ ಒಂದೂ ವಿಕೆಟ್‌ ಸಿಗದೆ ನಿರಾಸೆಯಾದಾಗ ಹೇಳುವ ಮಾತು: ‘ಮುರಳಿ ಯತ್ನವ ಮಾಡು....’’!

2. ಕಂಪ್ಯೂಟರ್‌ ಉಪಯೋಗಿಸಿ ಗೊತ್ತಿರುವ ನಿಮಗೆ ಅದರ ಪರದೆಯಲ್ಲಿ ಆಗೊಮ್ಮೆ ಈಗೊಮ್ಮೆ ಮೂಡುವ ವಿವಿಧ ಪ್ರಮಾದಸಂದೇಶ (Error Message)ಗಳು ಚಿರಪರಿಚಿತವಾಗಿವೆ. ಅವುಗಳಲ್ಲೊಂದು Abort, Retry, Ignore ಎಂಬ ಮೂರು ಆಯ್ಕೆಗಳನ್ನು ನಿಮಗೆ ಕೊಡುವ ಔದಾರ್ಯವನ್ನೂ ತೋರಿಸುತ್ತದೆ. ಅಸಲಿಗೆ ಹೇಳಬೇಕೆಂದರೆ ಆ ಮೂರೂ ಅಯ್ಕೆಗಳ ಅರ್ಥ ಒಂದೇ - ಮಾಡಬೇಕಾದ ಕೆಲಸವನ್ನು ಸುಸೂತ್ರವಾಗಿ ಮಾಡಲಾಗಿಲ್ಲ, ಮಾಡುವುದೂ ಇಲ್ಲ ಎಂದು! ಒಂದೊಮ್ಮೆ ನೀವು ‘ಮರಳಿ ಯತ್ನವ ಮಾಡು’ ಎಂದುಕೊಂಡು Retry ಗುಂಡಿಯನ್ನು ಅದುಮಿದರೂ ಮತ್ತೆ ಅದೇ ಗೋಳು. ಆಗ ನೀವು ‘ಮರಳಿ ಯತ್ನವ ಮಾಡು’ ಅನ್ನುವುದಕ್ಕಿಂತಲೂ ‘ಕೆರಳಿ ಯತ್ನವ ಮಾಡು’ ಎಂದು ಕೀಬೋರ್ಡ್‌ ಮೇಲೆ, ಮೌಸ್‌ನ ಮೇಲೆ ನಿಮ್ಮ ರೌದ್ರಾವತಾರವನ್ನು ಪ್ರದರ್ಶಿಸುವ ಉದಾಹರಣೆಗಳೂ ಇಲ್ಲದಿಲ್ಲ. ಏನಂತೀರಾ?

3. ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣನಾಗಲು ಮಾರ್ಚ್‌-ಸಪ್ಟೆಂಬರ್‌-ಮಾರ್ಚ್‌-ಸಪ್ಟೆಂಬರ್‌ ಹೀಗೆ ಮಾರ್ಚ್‌ಪಾಸ್ಟ್‌ ಮಾಡುತ್ತ ‘ಮರಳಿ ಯತ್ನವ ಮಾಡು’ತ್ತಿದ್ದ ಮಹಾಪಂಡಿತೋತ್ತಮನೊಬ್ಬನು (ಅವನಿಗೆ ಕಾಪಿಮಾಡುವ ಒಳ್ಳೆಯ ಅಭ್ಯಾಸವಾಗಲೀ, ಮಂತ್ರಿ ಮಹೋದಯರ ಶಿಫಾರಸ್ಸು ಉಪಯೋಗಿಸುವ ಸದ್ಗುಣವಾಗಲೀ ಇರಲಿಲ್ಲ) ಕೊನೆಗೂ ಪರೀಕ್ಷೆಯಲ್ಲಿ ಪಾಸಾಗಿ ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್‌ ಪಡೆದ ! ವಿಜಯಪತಾಕೆಯೋ ಎಂಬಂತೆ ಮನೆಯ ಮುಂದೆ ‘ಶ್ರೀಮಾನ್‌ ಸೋ ಏಂಡ್‌ ಸೋ... SSLC, PhD.’ ಎಂದು ಬೋರ್ಡ್‌ ಹಾಕಿಸಿಕೊಂಡ. ಯಾವ ವಿಷಯದಲ್ಲಪ್ಪಾ ಪಿಎಚ್‌ಡಿ ಮಾಡಿದೆ ಎಂದು ಕೇಳಿದರೆ, ‘ರೀ! ಪಿಎಚ್‌ಡಿ ನೂ ಇಲ್ಲ ಮಣ್ಣಾಂಗಟ್ಟಿಯೂ ಇಲ್ಲ. ಅದು SSLC,Passed with High Difficulties..!’ ಎಂದು ಕಾಲರ್‌ ಕೊಡವಿ ಹೇಳಿದ!

4. ‘ಮರಳಿ ಯತ್ನವ ಮಾಡು’ವುದಕ್ಕೆ ಪ್ರೇರೇಪಿಸುವ ಕೆಲವು ಕರಿಕೋಟುಗಳು. (ಅಂದರೆ ಅಕ್ಷರರೂಪದ ಕೊಟೇಷನ್‌ಗಳು!)

 • I have not failed. Ive just found 10,000 ways that wont work. Many of lifes failures are people who did not realize how close they were to success when they gave up.
 • Thomas A Edison
 • Smooth seas do not make skillful sailors.
 • African proverb
 • Our greatest glory is not in never failing but rising every time we fall.
 • Confucius
 • It is on our failures that we base a new and different and better success.
 • Havelock Ellis
 • The season of failure is the best time for sowing the seeds of success.
 • Paramahamsa Yogananda
 • Freedom is not worth having if it does not connote freedom to err.
 • Mahatma Gandhi

  5. ಒಂದು ಹಿಂದಿ ಕವಿತೆಯಿದೆ - ‘ಲಹರೋಂ ಸೆ ಡರ್‌ ಕರ್‌ ನೌಕಾ ಪಾರ್‌ ನಹೀ ಹೋತೀ... ಕೋಶಿಷ್‌ ಕರ್‌ನೆವಾಲೊಂಕೀ ಹಾರ್‌ ನಹೀ ಹೋತಿ...’ ಎಂಬ ಸಾಲುಗಳಿಂದ ಆರಂಭವಾಗುತ್ತದೆ. ಓದಿ ಅರ್ಥೈಸಿಕೊಂಡಾಗ ತುಂಬ ಚೆನ್ನಾಗಿದೆ, ಉತ್ಸಾಹವರ್ಧನೆಗೆ ಒಳ್ಳೇ ಟಾನಿಕ್‌ ಇದ್ದಹಾಗಿದೆ ಎಂದೆನಿಸಿತು. ಮೂಲ ಹಿಂದಿ ಕವಿತೆಯನ್ನಾಧರಿಸಿ ನಾನು ಮರಳಿ ಮರಳಿ ಯತ್ನವ ಮಾಡಿ ಮಾಡಿ, ಕೊನೆಗೂ ಇದು ಈಗ ಕವನದಂತೆ ಕಾಣುತ್ತದೆ ಎಂದು ಅನಿಸಿದ ಕೂಡಲೆ ನಿಲ್ಲಿಸಿದ ರಚನೆ ಹೀಗಿದೆ.

  ತೆರೆಯ ರಭಸಕೆ ಹೆದರಿ ಕುಳಿತರೆ ದೋಣಿ ತೀರವ ಸೇರದು

  ಮರಳಿ ಯತ್ನವ ಮಾಡುವವನಿಗೆ ಸೋಲು ಎಂಬುದು ಬಾರದು ।।

  ಸಣ್ಣ ಇರುವೆಯು ಕಾಳು ಹಿಡಿಯುತ ನಡೆಯೆ ಗೋಡೆಯನೇರುತ

  ಗುರಿಯ ತಲುಪುವ ಯತ್ನದಲ್ಲದು ಮತ್ತೆ ಬಿದ್ದಿದೆ ಜಾರುತ

  ಮನದಿ ಮೂಡಿದ ಹುರುಪು ನೀಡಿದೆ ಮತ್ತೆ ಸಾಹಸ ಮಾಡಲು

  ಬಿದ್ದು ಬಿಟ್ಟರೂ ಮತ್ತೆ ಏಳುವೆ ಎನುವ ಛಲವದು ಮೂಡಲು

  ಕೊನೆಗೂ ಇರುವೆಯ ಯತ್ನವೆಂಬುದು ನೀರ ಹೋಮವೆ ಆಗದು

  ಮರಳಿ ಯತ್ನವ ಮಾಡುವವನಿಗೆ ಸೋಲು ಎಂಬುದು ಬಾರದು ।।

  ಮೀನು ಹಿಡಿಯಲು ನೀರಿನಾಳಕೆ ಧುಮುಕಿ ಹೊರಟಿಹ ಬೆಸ್ತನು

  ಸಿಗದೆ ಏನೂ ಒಂದು ಮೀನೂ ಮರೆತು ಬಿಡುವನು ಸುಸ್ತನು

  ಶ್ರಮವ ಪಟ್ಟರೆ ಬಲೆಯ ತುಂಬಾ ಮೀನು ಸಿಗುವುದು ಖಂಡಿತ

  ದುಡಿಯಬಯಸದೆ ಕುಳಿತು ಬಿಟ್ಟರೆ ಆಗನೆಂದಿಗೂ ಪಂಡಿತ

  ಮೀನೆ ಇರಲಿ ಮುತ್ತೇ ಇರಲಿ ಶರಧಿಯಾಡಲದು ಬತ್ತದು

  ಮರಳಿ ಯತ್ನವ ಮಾಡುವವನಿಗೆ ಸೋಲು ಎಂಬುದು ಬಾರದು ।।

  ಸೋಲು ಎಂಬುದು ಅಂತ್ಯವಲ್ಲವು ಅದುವೆ ಗೆಲುವಿನ ಮೆಟ್ಟಲು

  ತಪ್ಪು ಮಾಡಲು ತಿದ್ದಿಕೊಳ್ಳುತ ಬಾಳಸೌಧವ ಕಟ್ಟಲು

  ಮಧ್ಯರಾತ್ರೆಯ ಎಣ್ಣೆಯುರಿಸುತ ಯಜ್ಞ ಮುಂದಕೆ ನಡೆಯಲು

  ಆಗದೆನ್ನುವ ಹೇಡಿಮನಸನು ಬಿಟ್ಟು ಹುರುಪನು ಪಡೆಯಲು

  ವಿಜಯಮಾಲೆಗೆ ಕೊರಳು ನೀಡಲು ಮನದಿ ಮಂಡಿಗೆ ಸಾಲದು

  ಮರಳಿ ಯತ್ನವ ಮಾಡುವವನಿಗೆ ಸೋಲು ಎಂಬುದು ಬಾರದು ।।

  ಮುಖಪುಟ / ಅಂಕಣಗಳು

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more