• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದೇ ಆಸ್ಪಿರಿನ್‌... ತಲೆನೋವಿನ ಪರಿಹಾರ...

By Staff
|
Srivathsa Joshi *ಶ್ರೀವತ್ಸ ಜೋಶಿ

Headacheಕೆಲವಾರಗಳ ಹಿಂದೆ ‘ಛಂದಸ್ಸು ಮಾಪಕ’ ತಂತ್ರಾಂಶ ಅಭಿವೃದ್ಧಿ ಯೋಜನೆಯ ಬಗ್ಗೆ ಪರಿಚಯಿಸುತ್ತ ಅದರಲ್ಲಿ ಗುರು ಲಘು ಮಾತ್ರೆಗಳು, ಯಮಾತಾರಾಜಭಾನಸಲಗಂ... ಇತ್ಯಾದಿಯನ್ನೆಲ್ಲ ಚರ್ಚಿಸಿದ್ದೆವು. ಈ ವಾರ ಮತ್ತೆ ಮಾತ್ರೆಗಳ ವಿಚಾರ! ಗಾಬರಿಯಾಗಬೇಡಿ, ಇವು ಗುರು ಲಘು ಮಾತ್ರೆಗಳಲ್ಲ, ಈ ವಾರದ ಟಾಪಿಕ್‌ ತಲೆನೋವಿನ ಮಾತ್ರೆಗಳು. ಓದಿ ನಿಮಗೆ ತಲೆನೋವು ಬರುವುದಿಲ್ಲವೆಂದು ನನ್ನ ನಂಬಿಕೆ. (ಅಂದಹಾಗೆ ತಲೆನೋವಿನ ಬಗ್ಗೆ ಸಣ್ಣದೊಂದು ಜೋಕ್‌ ಏನೆಂದರೆ, ತಲೆನೋವು ಬಂದರೆ ನಿಮಗೆ ತಲೆ ಇದೆ ಎಂಬುದನ್ನು ಅದು ಸಾಬೀತುಪಡಿಸುತ್ತದೆ!)

ಒಂದೊಮ್ಮೆ ನಿಮಗೆ ಅಸಹನೀಯ ತಲೆಸಿಡಿತ ಆರಂಭವಾಯಿತು ಎಂದಿಟ್ಟುಕೊಳ್ಳಿ (ಬೇತಾಳ ಕಥೆಗಳಲ್ಲಿ ಪ್ರಶ್ನೆಗೆ ಉತ್ತರಿಸದಿದ್ದರೆ ರಾಜಾ (ತ್ರಿ)ವಿಕ್ರಮನ ತಲೆ ಸಿಡಿದುಹೋಳಾಗುವಂತೆ). ಆಗ ಏನು ಮಾಡುತ್ತೀರಾ? ಒಂದು ಆಸ್ಪಿರಿನ್‌ ಮಾತ್ರೆಯನ್ನು ನುಂಗಿ ನೀರು ಕುಡಿಯುತ್ತೀರಿ.

Aspirin Tabletಅರೆ! ಕ್ಷಣಾರ್ಧದಲ್ಲಿ ನಿಮ್ಮ ತಲೆನೋವು ಮಾಯವಾಯಿತು! ಆದರೆ ಆಸ್ಪಿರಿನ್‌ ಗುಳಿಗೆಗಳಿಗೆ ಹೇಗೆ ಗೊತ್ತಾಯಿತು, ನಿಮಗೆ ತಲೆನೋವೇ ಇದ್ದದ್ದು ಹೊರತು ಹೊಟ್ಟೆನೋವಾಗಲೀ ಮಂಡಿನೋವಾಗಲೀ ಅಲ್ಲವೆಂದು? ಅಂಥಾ ದಿವ್ಯಜ್ಞಾನವಿದೆಯೇ ಅಷ್ಟು ಸಣ್ಣ ಗುಳಿಗೆಗಳಿಗೆ? ಬಹುಶಃ ರಕ್ತದಲ್ಲಿ ಕರಗಿಹೋದ ಆಸ್ಪಿರಿನ್‌ ಮೆದುಳಿನವರೆಗೂ ತಲುಪಿ ನೋವಿನ ತರಂಗಗಳೇಳುವುದನ್ನು ನಿಲ್ಲಿಸುತ್ತದಿರಬಹುದು... ಎಂದು ನಾವೆಲ್ಲ ಅಂದುಕೊಳ್ಳುತ್ತೇವೆ, ಅಲ್ಲವೇ?

ಆದರೆ ಆ ಥಿಯರಿ ಅಷ್ಟು ಸರಿಯಲ್ಲ. ಆಸ್ಪಿರಿನ್‌ ಹಾಗೆ ಮಾಡುವ ಇತರ ಅನೇಸ್ತೀಷಿಯಾ ಔಷಧಿಗಳಂತಲ್ಲ. ಆಸ್ಪಿರಿನ್‌ನ ಈ ವಿಶೇಷ ಶಕ್ತಿಯ ಬಗ್ಗೆ ವೈದ್ಯರು, ವಿಜ್ಞಾನಿಗಳು ತುಂಬ ಸಂಶೋಧನೆಗಳನ್ನು ನಡೆಸಿದ್ದಾರೆ. ಹಾಗೆ ನೋಡಿದರೆ ಸುಮಾರು 2500 ವರ್ಷಗಳಷ್ಟು ಹಿಂದೆಯೇ (ಹಿಪೋಕ್ರಟಿಸ್‌ನ ಕಾಲದಲ್ಲಿ) ಗ್ರೀಕರು ‘ವಿಲ್ಲೋಬಾರ್ಕ್‌’ ಮರದ ತೊಗಟೆಯನ್ನು (ಆಸ್ಪಿರಿನ್‌ನ ಪ್ರಮುಖ ರಾಸಾಯನಿಕವಾದ ‘ಸಾಲಿಸಿಲಿಕ್‌ ಆಸಿಡ್‌’ ಅದರಲ್ಲಿರುವುದರಿಂದ) ತಲೆನೋವು-ಶಮನಕಾರಿಯಾಗಿ ಬಳಸುತ್ತಿದ್ದರಂತೆ. ಆದರೆ ಆಧುನಿಕ ಜಗತ್ತಿಗೆ ಆಸ್ಪಿರಿನ್‌ಅನ್ನು ಪರಿಚಯಿಸಿದ್ದು ಜರ್ಮನಿಯ ಖ್ಯಾತ ಔಷಧ ಕಂಪೆನಿ ‘ಬಾಯರ್‌’. ಎಸಿಟೈಲ್‌ ಸಾಲಿಸಿಲಿಕ್‌ ಆಸಿಡ್‌ ಅನ್ನುವುದು ಆಸ್ಪಿರಿನ್‌ನ ಸರಿಯಾದ ರಾಸಾಯನಿಕ ಹೆಸರು. ಇಂದು ಪ್ರಪಂಚದಲ್ಲೇ ಅತ್ಯಧಿಕ ಮಾರಾಟವಾಗುವ ಜನಪ್ರಿಯ ಔಷಧಿ ಎಂದರೆ ಆಸ್ಪಿರಿನ್‌.

Aspirin, also seen is Felix Hoffmanಆಗಲೇ ಹೇಳಿದಂತೆ ಆಸ್ಪಿರಿನ್‌ ರಕ್ತದಲ್ಲಿ ಕರಗಿ ನೋವು ತಿಳಿಯದಂತೆ ಮಾಡುವ ರೀತಿಯದಲ್ಲ. ಜಾನ್‌ ವೇನ್‌ ಎಂಬ ಸಂಶೋಧಕನ ಪ್ರಕಾರ ಆಸ್ಪಿರಿನ್‌ನ ಸಮರ ನಮ್ಮ ದೇಹದಲ್ಲಿ ನಡೆಯುವುದು ಪ್ರೊಸ್ಟಗ್ಲಾಂಡಿನ್ಸ್‌ ಎಂಬ ‘ಕೊಬ್ಬು ಬೆಳೆದ’ ಆಮ್ಲಗಳ ಮೇಲೆ. ಈ ಪ್ರೊಸ್ಟಗ್ಲಾಂಡಿನ್‌ಗಳು ನೋವು ತರಿಸುವದರಲ್ಲಿ ಎತ್ತಿದ ಕೈ. ಒಂದು ನಮೂನೆಯ ಹಾರ್ಮೋನ್‌ಗಳಂತೆಯೇ ಅವುಗಳ ರೀತಿನೀತಿಯಾದರೂ ಹಾರ್ಮೋನ್‌ಗಳಂತೆ ರಕ್ತದಲ್ಲೆಲ್ಲ ಸಂಚರಿಸದೆ, ಉತ್ಪಾದನೆಯಾದ ಜಾಗದಲ್ಲೇ ಉಳಿದು ‘ಉಪದ್ರವ’ ಕೊಡುವುದು ಅವುಗಳ ಜಾಯಮಾನ. ಬೇರೆ ಜೈವಿಕ ಕ್ರಿಯಗಳಲ್ಲಿ ಭಾಗವಹಿಸಿದರೂ ಪ್ರೊಸ್ಟಗ್ಲಾಂಡಿನ್‌ಗಳ ಮುಖ್ಯ ಕೆಲಸವೆಂದರೆ ನೋವಿನ ಗ್ರಹಿಕೆಯನ್ನು ಹೆಚ್ಚಿಸುವುದು. ಅಲ್ಲಿಗೆ ಬರುತ್ತದೆ ಆಸ್ಪಿರಿನ್‌ನ ಎಸಿಟೈಲ್‌ ಸಾಲಿಸಿಲಿಕ್‌ ಆಸಿಡ್‌ ಕಣಗಳ ಸೈನ್ಯ ಪ್ರೊಸ್ಟಗ್ಲಾಂಡಿನ್‌ಗಳ ಮೇಲೆ ದಾಳಿಯಿಡಲು! (ಇರಾಕ್‌ ಮೇಲೆ ಮುಗಿಬಿದ್ದ ಅಮೆರಿಕನ್‌ ತುಕಡಿಗಳಂತೆ; ಸದ್ದಾಂ ಹೇಗೋ ತಪ್ಪಿಸಿಕೊಳ್ಳುತ್ತಾನೆ ಆ ಮಾತು ಬೇರೆ!)

ಅಷ್ಟಾಗಿಯೂ ಪ್ರೊಸ್ಟಗ್ಲಾಂಡಿನ್‌ಗಳು ಮಾಡುವುದೇನು? ನೋವು ತರಿಸುವ ಅವು ನಮಗೆ ಒಳ್ಳೆಯವಲ್ಲ ಎಂದುಕೊಂಡರೆ ತಪ್ಪು. ವಾಸ್ತವವಾಗಿ ಈ ಆಮ್ಲಗಳು ದೇಹದೊಳಗಿನ ಎಚ್ಚರಿಕೆ ಗಂಟೆಗಳಿದ್ದಂತೆ. ನೋವು, ಕಿರಿಕಿರಿ (ಖಿಚ್‌ಖಿಚ್‌?), ಊದಿಕೊಳ್ಳುವಿಕೆ, ಸೆಳೆತ - ಇವೆಲ್ಲ ದೇಹಕ್ಕೆ ಎಚ್ಚರಿಕೆಯ ‘ಗಮನ ಸೆಳೆವ ತಂತ್ರಗಳು’. ನಮಗಾದರೋ ಈ ನೋವು ಒಮ್ಮೆ ನಿವಾರಣೆಯಾದರೆ ಸಾಕು ಎಂದೆನಿಸಿರುತ್ತದೆ. ಅದಕ್ಕೇ ನಿಮಿತ್ತ ಮಾತ್ರ ತಲೆನೋವು ಬಂದರೂ ಆಸ್ಪಿರಿನ್‌ ‘ಫಳಾರ’ ಮಾಡುತ್ತೇವೆ. ನಿಜವಾಗಿ ಆಸ್ಪಿರಿನ್‌ ನೋವನ್ನಷ್ಟೇ ‘ಮರೆಸು’ವಂತೆ ಮಾಡುತ್ತದೆ ವಿನಹ ನೋವಿನ ಅಸಲೀ ಕಾರಣಕ್ಕೆ ಅದು ಔಷಧಿಯಲ್ಲ.

Chemical Structure of Aspirinಆಸ್ಪಿರಿನ್‌ನ ಇತಿಹಾಸವನ್ನು ಕೆದಕಿ ನೋಡಿದರೆ ಸಿಗುವ ಅಂಶ - 1897ರಲ್ಲಿ ಫೆಲಿಕ್ಸ್‌ ಹೊಫ್‌ಮನ್‌ ಎಂಬ ಜರ್ಮನ್‌ ರಾಸಾಯನ ಶಾಸ್ತ್ರಜ್ಞ ತನ್ನ ತಂದೆಯ ಕೀಲುನೋವಿನ ಉಪಚಾರಕ್ಕಾಗಿ ವಿವಿಧ ಕಾಂಬಿನೇಷನ್‌ಗಳನ್ನು ಪ್ರಯತ್ನಿಸುತ್ತಿದ್ದಾಗ ಎಸಿಟೈಲ್‌ ಕ್ಲೋರೈಡ್‌ ತುಂಬ ಪರಿಣಾಮಕಾರಿಯಾಗಿ ಕಂಡುಬಂತು. ಹೊಫ್‌ಮನ್‌ ತಾನು ಕೆಲಸ ಮಾಡುತ್ತಿದ್ದ ‘ಬಾಯರ್‌’ ಕಂಪೆನಿಯವರನ್ನೂ ಇಂತಹ ಪರಿಣಾಮಕಾರಿ ಔಷಧಿಯನ್ನು ಉತ್ಪಾದಿಸುವಂತೆ ಪ್ರಚೋದಿಸುವುದರಲ್ಲಿ ಯಶಸ್ವಿಯಾದ. ಬಾಯರ್‌ ಮೊದಲು ಆಸ್ಪಿರಿನ್‌ನ ಹುಡಿಯನ್ನು (ಚೂರ್ಣ) ತಯಾರಿಸಿ ಮಾರುತ್ತಿತ್ತು; 1915ರಲ್ಲಿ ಆಸ್ಪಿರಿನ್‌ ಮಾತ್ರೆಗಳು ಮಾರುಕಟ್ಟೆಗೆ ಬಂದವು. ‘ಆಸ್ಪಿರಿನ್‌’ ಹೆಸರು ಬಾಯರ್‌ ಕಂಪೆನಿಯ ಸ್ವಾಮ್ಯದಲ್ಲಿದ್ದ ಟ್ರೇಡ್‌ಮಾರ್ಕ್‌ ಆಗಿತ್ತು. ಆದರೆ ಮೊದಲ ಪ್ರಪಂಚ ಯುದ್ಧದಲ್ಲಿ ಜರ್ಮನಿಯ ಸೋಲಿನ ನಂತರ, ವಾರ್ಸಾ ಒಪ್ಪಂದದಂತೆ ‘ಆಸ್ಪಿರಿನ್‌’ ಟ್ರೇಡ್‌ ಮಾರ್ಕನ್ನೂ ಜರ್ಮನಿಯು ಫ್ರಾನ್ಸ್‌, ಇಂಗ್ಲಂಡ್‌, ರಷ್ಯಾ ಮತ್ತು ಅಮೆರಿಕಗಳಿಗೆ ಬಿಟ್ಟುಕೊಡಬೇಕಾಯಿತು.

ಆಸ್ಪಿರಿನ್‌ನಂತೆಯೇ, ಫೆಲಿಕ್ಸ್‌ ಹೊಫ್‌ಮನ್‌ ಮತ್ತು ಅವನ ಕಂಪೆನಿ ಬಾಯರ್‌ ಸೇರಿ ಇನ್ನೊಂದು ರಾಸಾಯನಿಕವನ್ನು ‘ಔಷಧಿ’ ಎಂದು ಸಂಶೋಧಿಸಿದರು. ಅದಾವುದು ಗೊತ್ತೇ? ಅನಂತರ ‘ಔಷಧಿ’ಲೇಬಲನ್ನು ಕಳಕೊಂಡು ಮಾದಕದ್ರವ್ಯ ಎಂದು ಹೆಸರಾದ ಹೆರೊಯಿನ್‌ (ರಾಸಾಯನಿಕವಾಗಿ ಡೈಆಸಿಟೈಲ್‌ ಮೋರ್ಫಿನ್‌) ! ಪ್ರಪಂಚ ಯುದ್ಧದ ನಂತರ ಎಲ್ಲ ದೇಶಗಳಲ್ಲೂ ಹೆರೊಯಿನ್‌ಅನ್ನು ‘ಅಧಿಕೃತವಾಗಿ’ ನಿಷೇಧಿಸಲಾಯಿತು. ಆಸ್ಪಿರಿನ್‌ ಮಾತ್ರ ತಲೆನೋವಿನ ಉಪಶಮನಕಾರಿಯಾಗಿ ಮಾತ್ರವಲ್ಲದೆ ಜ್ವರ, ಹಲ್ಲುನೋವು, ಸ್ನಾಯುಹಿಡಿತದಿಂದ ಹಿಡಿದು ಕ್ಯಾನ್ಸರ್‌, ಹೃದಯಾಘಾತದಂತಹ ಭೀಕರ ಪರಿಸ್ಥಿತಿಗಳಲ್ಲೂ ಉಪಯುಕ್ತ ಔಷಧಿಯಾಗಿ ಮುಂದುವರೆಯಿತು.

ಅಪೋಲೊ-11 ಬಾಹ್ಯಾಕಾಶ ನೌಕೆಯಲ್ಲಿ ವ್ಯೋಮಯಾನಿಗಳು ಒಯ್ದಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಆಸ್ಪಿರಿನ್‌ ಕೂಡ ಇತ್ತು!

*

ಇಂಜನಿಯರಿಂಗ್‌ ಪದವಿಯೋದಿ ಸಾಫ್ಟ್‌ವೇರ್‌ ಉದ್ಯೋಗದಲ್ಲಿರುವ ಇವನಿಗೆಲ್ಲಿಂದಪ್ಪಾ ಆಸ್ಪಿರಿನ್‌ ಬಗ್ಗೆ ಲೆಕ್ಚರ್‌ ಬಿಗಿಯುವಷ್ಟು ಜ್ಞಾನ ? ಎಂಬ ನಿಮ್ಮ ಪ್ರಶ್ನೆ ಸಹಜವೇ. ಮೆಡಿಕಲ್‌ ಓದುವುದಿಲ್ಲ ಎಂದು ಎಸ್ಸೆಲ್ಸಿಯಲ್ಲೇ ನಿರ್ಧರಿಸಿದ್ದ ನಾನು ಪಿಯೂಸಿಯಲ್ಲಿ ಬಯಾಲಜಿ ಸಬ್ಜೆಕ್ಟ್‌ನ ಬದಲು (ಅದು ನನಗೆ ‘ಭಯಾಲಜಿ’ ಆದ್ದರಿಂದ) ಸಂಖ್ಯಾಶಾಸ್ತ್ರವನ್ನು ಆರಿಸಿಕೊಂಡವನು. ಈಗ ಮಾತ್ರ ವಿಪರ್ಯಾಸವೆಂದರೆ ಬಯೋಟೆಕ್‌ ಕಂಪೆನಿಯಾಂದರ ಐಟಿ ಡಿವಿಜನ್‌ನಲ್ಲಿ ನನ್ನ ಉದ್ಯೋಗವಾದ್ದರಿಂದ ಮತ್ತೆ ಎನ್ಜೈಮ್‌ಗಳು, ಆಸಿಡ್‌ಗಳು, ಒಲಿಗೋನ್ಯೂಕ್ಲಿಯಯ್ಡ್‌ಗಳು... ಹೀಗೆ ‘ಜೀವ’ಶಾಸ್ತ್ರದ ಗಂಧಗಾಳಿ. ಏನು ಮಾಡಲಿ, ‘ಜೀವನ’ ಶಾಸ್ತ್ರ ಆಗಬೇಕಲ್ಲ!?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more