• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮನಾಮ ಪಾಯಸದಿ ಗೇರುಬೀಜ ಒಣದ್ರಾಕ್ಷಿ ...

By Staff
|
Srivathsa Joshi *ಶ್ರೀವತ್ಸ ಜೋಶಿ
‘ಗುಲುಗುಗ್ಗುಲು...’ ಶೀರ್ಷಿಕೆಯಡಿ ಸಂಸ್ಕೃತ ಸುಭಾಷಿತಗಳ ಬಗ್ಗೆ ಒಂದಿಷ್ಟು ಫೋಕಸಿಸಿದ ವಿಚಿತ್ರಾನ್ನ ತುಂಬ ಮಂದಿಗೆ ಇಷ್ಟವಾಗಿತ್ತು . ಓದುಗರಲ್ಲಿ ಬಹಳಷ್ಟು ಜನ ಸಂಸ್ಕೃತ ಭಾಷಾಭ್ಯಾಸವನ್ನು ಒಂದಿಲ್ಲೊಂದು ಹಂತದಲ್ಲಿ ಮಾಡಿದ್ದು ಈಗಲೂ ಸಂಸ್ಕೃತ ಎಂದೊಡನೆ ಪುಳಕಗೊಳ್ಳುವವರಿದ್ದಾರೆ ಎಂದು ನನಗೆ ಪ್ರತಿಕ್ರಿಯೆಗಳಿಂದ ತಿಳಿದುಬಂತು. ಇದಮಪಿ ಸಂಸ್ಕೃತ ವಿಷಯಸ್ಯೋಪರಿ ಅನ್ಯಮೇಕಮ್‌ ವಿಚಿತ್ರಾನ್ನ ಪ್ರಯೋಗಮ್‌। ಸ್ವೀಕರೋತು । (ಇದೂ ಕೂಡ ಸಂಸ್ಕೃತ ವಿಷಯದ ಮೇಲೆ ಒಂದು ವಿಚಿತ್ರಾನ್ನ ಪ್ರಯೋಗ. ಸ್ವೀಕರಿಸಿ).

ಬಾಲ್ಯದಲ್ಲಿ ನಾವು ಸಂಜೆಯ ಹೊತ್ತು ಆಟ-ಪಾಠಗಳೆಲ್ಲ ಮುಗಿದ ಮೇಲೆ ‘ಬಾಯಿಪಾಠ’ ಹೇಳುವ ಕ್ರಮವಿತ್ತು. (ಈಗ ಟಿವಿ, ವಿಡಿಯೋ ಗೇಮ್ಸ್‌ ಆ ವೇಳೆಯನ್ನಾಕ್ರಮಿಸಿವೆ...) ಪ್ರಭವಾದಿ 60 ಸಂವತ್ಸರಗಳು, 27 ನಕ್ಷತ್ರಗಳು, 12 ತಿಂಗಳುಗಳ ಚಾಂದ್ರಮಾನ, ಸೌರಮಾನ, ಇಂಗ್ಲೀಷ್‌, ಮುಸ್ಲಿಂ, ತುಳು ಹೆಸರುಗಳು, ಇನ್ನಿತರ ಕೋಷ್ಟಕಗಳು, ಮಗ್ಗಿಗಳು (ಮಗ್ಗ್‌ಅಪ್‌ ಮಾಡುವುದರಿಂದ ಅದಕ್ಕೆ ಮಗ್ಗಿ ಎನ್ನುವುದು???) ಮತ್ತು ಕೆಲವು ಸರಳ ಸ್ತೋತ್ರಗಳು - ಇವಿಷ್ಟು ಬಾಯಿಪಾಠದ ಕಂಟೆಂಟ್ಸ್‌. ಹಾಗೆ ಕಲಿತುದರಲ್ಲಿ ಇವತ್ತಿನ ದಿನದವರೆಗೂ ನಾನು ನೆನಪಿಟ್ಟುಕೊಂಡುಬಂದಿರುವ ಒಂದು ಸ್ತೋತ್ರವೆಂದರೆ ‘ಶ್ರೀ ರಾಮರಕ್ಷಾ’ ಸ್ತೋತ್ರ. ಅದರಲ್ಲಿ ರಾಮಧ್ಯಾನ, ರಾಮಸ್ತುತಿ, ರಾಮಮಹಿಮೆಯಲ್ಲದೆ ಸ್ವಾರಸ್ಯವೇನಾದರೂ ಇದೆಯೇ ಎಂದು ನನ್ನ ‘ಸ್ವಾರಸ್ಯ ಹುಡುಕುವ ಬುದ್ಧಿ’ಗೆ ಸಿಕ್ಕಿದ್ದನ್ನೇ ರಾಮನಾಮ ಪಾಯಸದಲ್ಲಿನ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಎಂದು ನಿಮಗೆಲ್ಲ ಪರಿಚಯಿಸಲಿಚ್ಛಿಸುತ್ತೇನೆ.

* * *

Rama Manthrava Japiso...ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ

ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮಃ

ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯ ದಾಸೋಸ್ಮ್ಯಹಂ

ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮಮಾಮುದ್ಧರ ।।

ಇದು ರಾಮರಕ್ಷಾ ಸ್ತೋತ್ರದಲ್ಲಿ ಬರುವ ಒಂದು ಶ್ಲೋಕ. ಈಗ ಈ ಶ್ಲೋಕದ ಒಂದೊಂದು ಪದಪುಂಜವನ್ನೂ ಸೂಕ್ಷ್ಮವಾಗಿ ಗಮನಿಸೋಣ. ‘ರಾಮ’ ಶಬ್ದದ ಪ್ರಥಮಾ, ದ್ವಿತೀಯಾ - ಹೀಗೆ ಎಲ್ಲ ವಿಭಕ್ತಿಗಳ ರೂಪಗಳೂ ಎಷ್ಟು ಸಹಜ-ಸುಂದರವಾಗಿ ಇದರಲ್ಲಿ ಪೋಣಿಸಲ್ಪಟ್ಟಿವೆ ನೋಡಿ!

Rama Manthrava Japiso...ರಾಮಃ (ರಾಮನು - ಪ್ರಥಮಾ) ರಾಜಮಣಿಃ ಸದಾ ವಿಜಯತೆ

ರಾಮಂ (ರಾಮನನ್ನು - ದ್ವಿತೀಯಾ) ರಮೇಶಂ ಭಜೇ

ರಾಮೇಣ (ರಾಮನಿಂದ - ತೃತೀಯಾ) ಅಭಿಹತಾ ನಿಶಾಚರಚಮೂ

ರಾಮಾಯ (ರಾಮನಿಗೆ - ಚತುರ್ಥಿ) ತಸ್ಮೈ ನಮಃ

ರಾಮಾತ್‌ (ರಾಮನ ದೆಸೆಯಿಂದ - ಪಂಚಮಿ) ನಾಸ್ತಿ ಪರಾಯಣಂ ಪರತರಂ

ರಾಮಸ್ಯ (ರಾಮನ - ಷಷ್ಠಿ) ದಾಸೋಸ್ಮ್ಯಹಂ

ರಾಮೇ (ರಾಮನಲ್ಲಿ - ಸಪ್ತಮಿ) ಚಿತ್ತಲಯಃ ಸದಾ ಭವತು ಮೇ

ಭೋ ರಾಮ (ಎಲೈ ರಾಮನೇ - ಸಂಬೋಧನಾ ಪ್ರಥಮಾ) ಮಾಮುದ್ಧರ...

ಖ್ಯಾತ ಹರಿಕಥಾ ವಿದ್ವಾಂಸ ಭದ್ರಗಿರಿ ಕೇಶವದಾಸರು ‘ಸೀತಾ ಕಲ್ಯಾಣ’ ಹರಿಕಥೆಯಲ್ಲಿ ಒಂದು ಉಪಕಥೆಯಾಗಿ, ರಾಮರಕ್ಷಾ ಸ್ತೋತ್ರದ ಈ ಕೆಳಗಿನ ಶ್ಲೋಕವನ್ನು ರಸವತ್ತಾಗಿ ಬಣ್ಣಿಸಿದ್ದಾರೆ.

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ

ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ।।

Rama Manthrava Japiso...ಶ್ರೀರಾಮನನ್ನು ಯಾರ್ಯಾರು ಯಾವ್ಯಾವ ಹೆಸರಿಂದ ಕರೆಯುತ್ತಾರೆ, ಮತ್ತು ಯಾಕೆ ಹಾಗೆ ಎಂಬ ವಿಶ್ಲೇಷಣೆ. ರಾಮಾ... ಎಂದು ಏಕವಚನದಲ್ಲಿ ಕರೆಯುವ ಅಧಿಕಾರ, ಧೈರ್ಯ ದಶರಥನಿಗೆ ಮಾತ್ರ. ರಾಮಭದ್ರ ಎಂದು ಮಮತೆಯಿಂದ ಕರೆಯುವುದು ಮಾತೆ ಕೌಸಲ್ಯೆ. ರಾಮಚಂದ್ರ ಎನ್ನುವವಳು ಸಿಂಹಾಸನವೇರಲಿದ್ದ ರಾಮನಿಗೆ ಅರ್ಧಚಂದ್ರ ಕೊಟ್ಟ ದುಷ್ಟ ಕೈಕೇಯಿ. ವೇಧಸೆ ಎಂದು ರಾಮನನ್ನು ಕರೆಯುತ್ತಿದ್ದವರು ವಸಿಷ್ಠಾದಿ ಜ್ಞಾನಿಗಳು, ಋಷಿಗಳು. ಅಯೋಧ್ಯೆಯ ಪ್ರಜೆಗಳಾದರೋ ರಾಮನನ್ನು ರಘುನಾಥ ಅಂದರೆ ರಘುಕುಲಕ್ಕೊಡೆಯ ಎಂಬ ಅರ್ಥದಲ್ಲಿ ಕರೆಯುತ್ತಿದ್ದರು. ನಾಥ ಎಂದು ರಾಮನನ್ನು ಕರೆಯುತ್ತಿದ್ದದ್ದು ಸೀತಾದೇವಿ ಮಾತ್ರ. ಏಕೆಂದರೆ ರಾಮ ಏಕಪತ್ನೀವ್ರತಸ್ಥ ತಾನೆ? ಮಿಥಿಲಾನಗರದ ಮಹಾಜನತೆ ಮಾತ್ರ ರಾಮನನ್ನು ಸೀತಾಪತೇ - ‘ನಮ್‌ ಸೀತಮ್ಮನ ಗಂಡ’ ಅಂತಲೇ ಕರೆಯುವುದು! (ಇದು ಸಾರ್ವತ್ರಿಕ ರೂಢಿ. ಉದಾಹರಣೆಗೆ ನನಗೂ ಜೋಶಿ, ಶ್ರೀವತ್ಸ, ವಿಚಿತ್ರಾನ್ನ ಅಡಿಗೆಭಟ್ಟ, ಸಾಫ್ಟ್‌ವೇರ್‌ ಎನಾಲಿಸ್ಟ್‌ - ಹೀಗೆ ವಿಧವಿಧ ಲೇಬಲ್‌ಗಳೆಷ್ಟೇ ಇದ್ದರೂ ಬೆಂಗಳೂರಲ್ಲಿ ನಮ್ಮ ಮಾವನ ಮನೆಯವರಿಗೆ ಮಾತ್ರ ನಾನು ‘ಸಹನಾಳ ಗಂಡ’!)

ಕೊನೆಯಲ್ಲಿ , ರಾಮರಕ್ಷಾ ಸ್ತೋತ್ರದ ಕೊನೆಯ ಶ್ಲೋಕದ ವೈಶಿಷ್ಟ್ಯವನ್ನು ನೋಡೋಣ:

A picture is worth thousand words... ಅನ್ನುವುದನ್ನೇ ಈಶ್ವರನು ಪಾರ್ವತಿಗೆ ರಾಮನಾಮದ ಮಹಿಮೆಯನ್ನು ಬಣ್ಣಿಸುತ್ತ , ‘ಬೇರೆ ದೇವರ ಸಾವಿರ ಹೆಸರುಗಳಿಗೆ ಸರಿಸಾಟಿಯಾದುದು ರಾಮ ಎಂಬ ಒಂದೇ ಹೆಸರು’ ಎಂದು ಹೇಳಿರುವುದು. ರಾಮರಕ್ಷಾದ ಈ ಕೊನೆಯ ಶ್ಲೋಕವು ವಿಷ್ಣುಸಹಸ್ರನಾಮದ ಫಲಶ್ರುತಿಯಲ್ಲೂ , ಪಾರ್ವತಿಯ ಪ್ರಶ್ನೆ (ವಿಷ್ಣುವಿನ ನಾಮಸ್ಮರಣೆಗೆ ಶಾರ್ಟ್‌ಕಟ್‌ ಮೆಥಡ್‌ ಯಾವುದು? ಎಂಬ ಪ್ರಶ್ನೆ)ಗೆ ಈಶ್ವರನ ಉತ್ತರ ರೂಪದಲ್ಲಿ ಬರುತ್ತದೆ.

ರಾಮ ರಾಮೇತಿ ರಾಮೇತಿ ರಮೆ ರಾಮೇ ಮನೋರಮೇ

ಸಹಸ್ರ ನಾಮ ತತ್ತುಲ್ಯಂ ರಾಮನಾಮ ವರಾನನೇ ।।

* * *

ರಾಮನಾಮ ಪಾಯಸ ರುಚಿಯಾಗಿತ್ತೇ ?

ರಾಮರಕ್ಷಾ ಸ್ತೋತ್ರದ ಪೂರ್ಣಪಾಠ, ಆಡಿಯೋ ಫೈಲ್‌ಗಳನ್ನು ಒದಗಿಸಬೇಕೇ ? ನಿಮ್ಮ ಬಳಿ ಈ ರೀತಿಯ ಸ್ವಾರಸ್ಯ ಸಂಗ್ರಹವೇನಾದರೂ ಇದೆಯೇ ? ಪತ್ರ ಬರೆದು ತಿಳಿಸಿ. ವಿಳಾಸ- srivathsajoshi@yahoo.com

ಪೂರಕ ಓದಿಗೆ-

ಕಲ್ಯಾಣ ರಾಮನಿಗಿಲ್ಲಿ ಕನ್ನಡದಲ್ಲೇ ಕೈಂಕರ್ಯ

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more