• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪ್ಪಿಯ ಚಲನಚಿತ್ರಗಳಿಗೆ ಒಂದಕ್ಷರದ ಟೈಟಲ್‌ ಇದ್ದು ಯಶಸ್ವಿಯಾಗಿದೆ ಎಂದಮೇಲೆ, ಕನ್ನಡಪತ್ರಿಕಾರಂಗದಲ್ಲಿ ಒಂದು ದಾಖಲೆ ಮಾಡಲಿಕ್ಕೋಸ್ಕರವೇ ಈ ವಾರದ ಶೀರ್ಷಿಕೆ ಮತ್ತು ವಿಷಯ ‘ಈ’! ಇಷ್ಟವಾಯ್ತೇನ್ರೀ.....ಈ ಈ !

By Staff
|
Srivathsa Joshi *ಶ್ರೀವತ್ಸ ಜೋಶಿ

E Samaya Vichitrannamaya‘ಓತ ಪ್ರೋತ ಕಟಿಪ್ರಮಾಣ...’ ಎಂಬುದೊಂದು ನಾಣ್ಣುಡಿ ಇದೆ ಸಂಸ್ಕೃತದಲ್ಲಿ. ಮೂರು ಮಂದಿ ‘ಎಮ್‌-ಕ್ಯೂಬ್‌’ಗಳು (ಮಹಾ ಮೇಧಾವಿ ಮೂರ್ಖರು) ಕಾಡಿನ ದಾರಿಯ ಮೂಲಕ ಪ್ರಯಾಣಿಸುತ್ತಿದ್ದಾಗ ಒಂದು ನದಿಯನ್ನು ದಾಟುವ ಸಂದರ್ಭ ಬಂತು. ದೋಣಿ ಇಲ್ಲ ; ಈಜಲು ಬರುವುದಿಲ್ಲ. ಹೇಗಪ್ಪಾ ದಾಟುವುದು ಎಂಬ ಸಮಸ್ಯೆ. ಮೊದಲನೆಯವನು ನದಿನೀರಿನಲ್ಲಿ ಒಂದುಕಾಲನ್ನಿಟ್ಟು, ‘ಓಹೋ... ಇದರಲ್ಲಿ ಬರೀ ಪಾದಗಳು ಮುಳುಗುವಷ್ಟೇ ನೀರಿರುವುದು. ನಾವು ಆರಾಮಾಗಿ ನದಿ ನೀರಲ್ಲಿ ನಡಕೊಂಡೇ ದಾಟಬಹುದು!’ ಎನ್ನುತ್ತಾನೆ. ಎರಡನೆಯವನು, ‘ಹಾಗಲ್ಲ ಕಣೋ, ನದಿಯ ಮಧ್ಯಭಾಗದಲ್ಲಿ ನಮ್ಮ ತಲೆಯವರೆಗೆ ಬರುವಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ನೀರಿರಬಹುದು, ಬೇಡಪ್ಪಾ ಆ ಸಾಹಸ...’ ಎಂದು ಹಿಂಜರಿಯುತ್ತಾನೆ. ಮೂರನೆಯವನು, ‘ಅದಕ್ಕೇನಂತೆ, ಒಂದೆಡೆ ಪಾದಗಳು ಮುಳುಗುವಷ್ಟು ಮಾತ್ರ, ಇನ್ನೊಂದು ಕಡೆ ತಲೆಯವರೆಗೂ ಬರುವಷ್ಟು ನೀರು. ಸರಾಸರಿ ತೆಗೆದರೆ ಸೊಂಟದವರೆಗೆ ತಾನೆ ನೀರಿರುವುದು? ಆರಾಮಾಗಿ ದಾಟಬಹುದು!’ ಎಂದು ತನ್ನ ಠರಾವನ್ನು ಮಂಡಿಸಿದ್ದಷ್ಟೇ ಅಲ್ಲ, ಮೂವರೂ ಈ ದಡದಿಂದ ಹೊಳೆನೀರಿನಲ್ಲಿ ಇಳಿಯುತ್ತಾರೆ. ಆಚೆ ದಡಕ್ಕೆ ಅವರು ತಲುಪಿದ ಸುದ್ದಿ ಶತಮಾನಗಳ ನಂತರವೂ ಇನ್ನೂ ಬಂದಿಲ್ಲ. ‘ಓತಪ್ರೋತಕಟಿಪ್ರಮಾಣ’ ಎಂಬುದು ಮಾತ್ರ ಚಿರಸ್ಥಾಯಿಯಾಗಿದೆ!

ಯಾಕೆ ಹೇಳಿದೆ ಆ ಕಥೆಯನ್ನು ?

ಮೊನ್ನೆ ಪತ್ರಿಕೆಯಾಂದರಲ್ಲಿ ಒಂದು ಸಣ್ಣಲೇಖನಕ್ಕೆ ‘ಭಾವ ಸಮುದ್ರ ಭೋರ್ಗರೆದಾಗ ಉಕ್ಕುವ ಕಂಬನಿಯ ಕೋಡಿ!’ ಎಂಬ ಉದ್ದದ ಶೀರ್ಷಿಕೆ ಕೊಟ್ಟಿದ್ದರು. ಪತ್ರಿಕೆಯ ಪುಟದ ಆರು ಕಾಲಂಗಳನ್ನಾವರಿಸಿದ್ದ ಆ ಲೇಖನಕ್ಕೆ ಪುಟವಿನ್ಯಾಸಗಾರನೂ ಉಪಸಂಪಾದಕನೂ ಸೇರಿ 19 ಅಕ್ಷರಗಳ ಅಷ್ಟುದ್ದದ ತಲೆಬರಹ ಕೊಟ್ಟು ಕೃತಾರ್ಥರಾಗಿದ್ದರು. ಇದನ್ನು ನೋಡಿದ ನನಗನಿಸಿದ್ದು, ಮುಂದಿನಸಲದ ಒಂದು ವಿಚಿತ್ರಾನ್ನ ಲೇಖನಕ್ಕೆ ಒಂದೇ ಅಕ್ಷರದ ಶೀರ್ಷಿಕೆ ಕೊಟ್ಟರೆ ಹೇಗೆ? ಎಂದು. ಯಾಕಾಗದು, ನೋಡಿ ಬಿಡುವಾ ಅದನ್ನೂ ಒಂದು ಕೈ. ಉಪ್ಪಿಯ ಚಲನಚಿತ್ರಗಳಿಗೆ ಒಂದಕ್ಷರದ ಟೈಟಲ್‌ ಇದ್ದು ಯಶಸ್ವಿಯಾಗಿದೆ ಎಂದಮೇಲೆ, ಕನ್ನಡಪತ್ರಿಕಾರಂಗದಲ್ಲಿ ಒಂದು ದಾಖಲೆ ಮಾಡಲಿಕ್ಕೋಸ್ಕರವೇ ಈ ವಾರದ ಶೀರ್ಷಿಕೆ ಮತ್ತು ವಿಷಯ ‘ಈ’.

ಈ-ಮೈಲ್‌, ಈ-ಬಿಸಿನೆಸ್‌, ಈ-ಕಾಮರ್ಸ್‌ಗಳ ಪರಿಚಯವಿರುವ ನಿಮಗೆ ‘ಈ’ ಅನ್ನುವುದು ಒಂದು ಒಳ್ಳೆಯ ಸಬ್ಜೆಕ್ಟ್‌ ಅನ್ನೋದನ್ನು ಕನ್ವಿನ್ಸಿಸಬೇಕಾದ ಅವಶ್ಯಕತೆಯಿಲ್ಲ. ಇಂಟರ್‌ನೆಟ್‌-ಕಂಪ್ಯೂಟರ್‌ಗಳ ಸಂಗತಿ ಬಿಡಿ, ಬಾಲ್ಯದಲ್ಲಿ ನಮಗೆ ಹಲ್ಲುಜ್ಜುವುದನ್ನು ಕಲಿಸುವಾಗ ಅಮ್ಮ ಹೇಳಿದ್ದು ‘ಈ... ಮಾಡು...’ ಎಂದಲ್ಲವೇ? ಅಥವಾ ಈಗಲೂ ಹುಸಿಗೋಪದ ಸೊಟ್ಟಮೂತಿಯನ್ನು ಸ್ನೇಹಿತ/ಸ್ನೇಹಿತೆ/ಒಡನಾಡಿಗೆ ನೀವು ‘ಈ...’ ಎಂದೇ ತೋರಿಸುವುದಲ್ಲವೇ? ಹಾಗಾಗಿ ‘ಈ’ ಬಗ್ಗೆ ಬರೆಯತೊಡಗಿದರೆ ಸುಲಭವಾಗಿ ಒಂದು ಬಾಣಲೆ ತುಂಬ ವಿಚಿತ್ರಾನ್ನ ತಯಾರಿಸಬಹುದು. ಹಾಗೆ ತಯಾರಿಸಿದ್ದನ್ನೇ ನಿಮ್ಮ ತಟ್ಟೆಗೆ ಬಡಿಸುತ್ತಿದ್ದೇನೆ, ರುಚಿನೋಡಿ!

* * *

E Samaya Vichitrannamayaಮೂರ್ನಾಲ್ಕು ವರ್ಷಗಳ ಕೆಳಗೆ ನಡೆದ ಈ ಕಥೆ ಒಂದು ಯುವಜೋಡಿಯದು. ಈತ ಕ್ಯಾಲಿಫೋರ್ನಿಯಾದ ಸಿಲಿಕಾನ್‌ ವ್ಯಾಲಿಯಲ್ಲಿನ ಒಬ್ಬ ಸಾಫ್ಟ್‌ವೇರ್‌ ಇಂಜನಿಯರ್‌, ಕನ್ನಡಿಗ. ಈಕೆಯದೂ ಸಾಫ್ಟ್‌ವೇರ್‌ ಫೀಲ್ಡೇ. ಆದರೆ ಭಾರತದ ಸಿಲಿಕಾನ್‌ ವ್ಯಾಲಿ ಬೆಂಗಳೂರಿನ ಒಂದು ಕಂಪೆನಿಯಲ್ಲಿ ಉದ್ಯೋಗ. ಈರ್ವರ ಪರಸ್ಪರ ಪರಿಚಯ ಆದದ್ದು ಅಂತರ್ಜಾಲದ ಮೂಲಕ. ಅದೇ, ಇಬ್ಬರೂ ‘ಹರಟೆ ಕಿಟಿಕಿ’ಯಲ್ಲಿ ಯಾ...ಹೂ ಎಂದವರು! ಈ-ಯುಗದಲ್ಲಿ (ಅಂದರೆ ಈ-ಮೈಲ್‌, ಈ-ಟಿಕೆಟ್‌, ಈ-ಬ್ಯಾಂಕಿಂಗ್‌ ಇತ್ಯಾದಿಯ ಯುಗದಲ್ಲಿ) ಅವರ ಪ್ರೀತಿ-ಪ್ರೇಮ-ಪ್ರಣಯ ಹೇಗೆ ಮುಂದುವರಿಯಿತು ಮತ್ತು ಅಚ್ಚಕನ್ನಡ ಶೈಲಿಯಲ್ಲಿ ಈ-ಕಥೆಗೆ ಕೆಲವು ಕನ್ನಡ ಚಿತ್ರಗೀತೆಗಳು ಹೇಗೆ ಹೊಂದಾಣಿಕೆಯಾದವು ಎಂಬುದನ್ನು ಓದಿ!

ಯಾಹೂ/ಎಮ್ಮೆಸ್ಸೆನ್‌ ಮೆಸ್ಸೆಂಜರ್‌ಗಳಲ್ಲಿ ಹೇರಳವಾದ ‘ಇಮೋಟಿಕಾನ್ಸ್‌’ ಬಳಕೆಯಾಂದಿಗೆ ಅವರಿಬ್ಬರ ಸುಖದುಃಖಗಳ ವಿನಿಮಯ ಚಾಲ್ತಿಯಲ್ಲಿದ್ದಾಗಿನ ಹಾಡು:

ಈ-ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ... (ಧರ್ಮಸೆರೆ)

ಅಮೆರಿಕೆಯ ಹೈ-ಫೈ ಜೀವನದ ಬಗ್ಗೆ ಅವಳೆದುರು ಆತ ಕೊಚ್ಚಿಕೊಳ್ಳುತ್ತಿದ್ದಾಗ:

ಈ-ನಾಡ ಅಂದ ಈ ತಾಣ ಚಂದ... ಈ ಸೊಬಗ ಅಂದ ಈ ನೋಟ ಚೆಂದ... (ಅಪರಿಚಿತ)

ಆಕೆಯೂ ಸ್ವಾಭಿಮಾನಿ, ದೇಶಾಭಿಮಾನಿ. ಭಾರತದ ಬಗ್ಗೆ ಗರ್ವವನ್ನು ಬಿಟ್ಟುಕೊಡಳು:

ಈ-ದೇಶ ಚೆನ್ನ ಈ ಮಣ್ಣು ಚಿನ್ನ ಎಲ್ಲೂ ನಾ ಕಾಣೆನಲ್ಲ... (ಕಾವೇರಿ)

ಜತೆಯಲ್ಲೇ, ತನ್ನ ಸ್ವಾಭಿಮಾನವನ್ನು ಮತ್ತೂ ಸ್ಫುಟವಾಗಿ ಅವನಿಗೆ ತಿಳಿಸಲು:

ಈ-ಶತಮಾನದ ಮಾದರಿ ಹೆಣ್ಣು... ಸ್ವಾಭಿಮಾನದ ಸಾಹಸಿ ಹೆಣ್ಣು... (ಶುಭಮಂಗಳ)

ಅವನಿಗೋ ಇದೆಲ್ಲ ಸ್ವಲ್ಪ ‘ಅತಿ’ ಎಂದು ಗೊತ್ತು. ಅವಳನ್ನು ಛೇಡಿಸಲಿಕ್ಕಾಗಿಯೇ:

ಈ-ಬಿಂಕ ಬಿಡು ಬಿಡು ನಾ ನಿನ್ನ ಬಲ್ಲೆನು... (ಚಂದನದ ಗೊಂಬೆ)

ಅಂತೂ ಒಂದಿಷ್ಟು ಗೊಳೋ ಹೊಯ್ದು ಅವಳ ಹೃದಯವನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗುತ್ತಾನೆ ಆತ:

ಈ-ದಿನ ಮಜಾ ಕಂಡೆನು ನಿಜಾ ಆದೆನು ರಾಜಾ... (ದೇವರ ಮಕ್ಕಳು)

ಅವಳೂ ತನ್ನ ಸ್ನೇಹವನ್ನೂ, ಜೀವವನ್ನೂ ಅವನಿಗೇ ಮುಡಿಪಾಗಿಡಲು ನಿರ್ಧರಿಸುತ್ತಾಳೆ:

ಈ-ಸ್ನೇಹ ನಿನದೇ... ಈ ಜೀವ ನಿನದೇ... (ಮಲಯಮಾರುತ)

ಅಂತರ್ಜಾಲದ ಮೂಲಕವೇ ಹೂಗುಚ್ಛ ಕಳಿಸುತ್ತಾನೆ ಆತ, ಪ್ರೇಮದ ಸಂಕೇತವಾಗಿ, ಆಕೆಗೆ:

ಈ-ಗುಲಾಬಿಯು ನಿನಗಾಗಿ... ಇದು ಚೆಲ್ಲುವ ಪರಿಮಳ ನಿನಗಾಗಿ... (ಮುಳ್ಳಿನ ಗುಲಾಬಿ)

ಹೀಗಿರಲು, ಕಥೆಯಲ್ಲೊಂದು ದುಃಖದ ಘಟನೆ. ಕರ್ನಾಟಕದ ಮಲೆನಾಡಿನ ಒಂದು ಹಳ್ಳಿಯಲ್ಲಿ ಈತನ ತಂದೆಗೆ ಯಾವುದೋ ಕಾಯಿಲೆ ಉಲ್ಬಣವಾಗಿ ಸಾವನ್ನಪ್ಪುತ್ತಾರೆ. ತಂದೆಯ ಅಂತಿಮದರ್ಶನ ಮಾಡಲು ಅಮೆರಿಕೆಯಿಂದ ಬಂದವನು ಗಳಗಳನೆ ಅಳುತ್ತಾನೆ:

ಈ-ದೇಹದಿಂದ ದೂರವಾದೆ ಏಕೆ ಆತ್ಮವೆ... ಈ ಸಾವು ನ್ಯಾಯವೆ...? (ಓಹಿಲೇಶ್ವರ)

ಇತ್ತ, ಈಕೆಗೆ ಯಾವ ಸುದ್ದಿಯೂ ಗೊತ್ತಿಲ್ಲ. ಏಕೆ ಇವನು ‘ಆನ್‌ಲೈನ್‌’ ಬರುತ್ತಿಲ್ಲ, ಈಮೈಲ್‌ ಕಳಿಸುತ್ತಿಲ್ಲ ಎಂದು ಒಂದೇ ಕಸಿವಿಸಿ. ಅವಳ ರೋದನ:

ಈ-ಮೌನವ ತಾಳೆನು... ಮಾತಾಡೆ ದಾರಿಯ ಕಾಣೆನು... (ಮಯೂರ)

ಅವನ ಕ್ಷೇಮಕ್ಕಾಗಿ ಸೈಬರ್‌ಲೋಕದಲ್ಲಿ ಲಭ್ಯವಿರುವ ದೇವಾಧಿದೇವತೆಗಳಿಗೆಲ್ಲ ಹರಕೆಹೊರುತ್ತಾಳೆ ಅವಳು:

ಈ-ಲೋಕವೆಲ್ಲ ನೀನೇ ಇರುವ ಪೂಜಾಮಂದಿರ... (ದೇವರು ಕೊಟ್ಟ ತಂಗಿ)

ಆದರೆ ‘ಡೋಂಟ್‌ ವರಿ’ ಮಾಡ್‌ಬೇಡಿ! ಆ ಸೆಂಟಿಮೆಂಟ್ಸ್‌ ಭಾಗ ಅಲ್ಲಿಗೆ ಮುಗಿಯಿತು. ತಂದೆಯನ್ನು ಕಳಕೊಂಡ ದುಃಖದಲ್ಲಿಯೇ ಅಮೆರಿಕೆಗೆ ಮರಳಿ ಮತ್ತೆ ದಿನಚರಿ ಆರಂಭಿಸುತ್ತಾನೆ ನಾಯಕ. ಈ-ಸಂಭಾಷಣೆಯ ಮೂಲಕ ಸಂಗತಿ ತಿಳಿದ ಈಕೆಯೂ ಅವನಿಗೆ ಸಾಂತ್ವನ ನೀಡುವಲ್ಲಿ ನೆರವಾಗುತ್ತಾಳೆ. ಈ-ಪ್ರೇಮ ಮುಂದುವರಿಯುತ್ತದೆ. ವರ್ಷ ಕಳೆದ ನಂತರ ಪ್ರಣಯ ಬಲಿತು ಇವರಿಬ್ಬರ ಮದುವೆ ಬೆಂಗಳೂರಲ್ಲೇ ನಡೆಯುತ್ತದೆ:

ಈ-ಬಂಧನ ಜನುಮ ಜನುಮದ ಅನುಬಂಧನ... (ಬಂಧನ)

ಅದ್ಧೂರಿ ಮದುವೆಯ ಸಮಾರಂಭದಲ್ಲಿ ಬಂಧು-ಬಾಂಧವ-ಇಷ್ಟಮಿತ್ರರೆಲ್ಲ ವಧೂವರರನ್ನು ಹರಸುತ್ತಾರೆ. ಈ-ಪ್ರೀತಿ ಈ-ಪ್ರೇಮ, ಈ-ಪ್ರಣಯ ಸಾರ್ಥಕವಾಗುತ್ತದೆ.

ಈ-ಸಮಯ ಆನಂದಮಯ... ನೂತನ ಬಾಳಿನ ಶುಭೋದಯ... (ಬಬ್ರುವಾಹನ)

ಈ-ರೀತಿಯ ಯುವಪ್ರೇಮಿಗಳು/ದಂಪತಿಗಳು ನಿಮ್ಮ ಸ್ನೇಹಿತರ/ಸಂಬಂಧಿಕರ ಸರ್ಕಲ್‌ನಲ್ಲೂ ಕೆಲವರಿರಬಹುದಲ್ಲವೇ? ನೀವೂ ಅವರನ್ನು ಮನಸಾರೆ ಹರಸಿರಬಹುದಲ್ಲವೇ?

* * *

ಕೊನೆಯಲ್ಲಿ, ಈ-ವಾರದ ಸವಾಲ್‌-ಜವಾಬ್‌. ಇದು ಕೂಡ ‘ಈ’ ಬಿಟ್ಟು ಇನ್ನೇನೂ ಅಲ್ಲ. ಅಣಕುಹಾಡು ಹೊಸೆಯುವುದರಲ್ಲಿ ನಿಮ್ಮ ಸೃಜನಶೀಲತೆಗೆ ಒಂದು ಸವಾಲು. ಪುರಂದರದಾಸರ ರಚನೆ ‘ಈ-ಪರಿಯ ಸೊಬಗಾವ ದೇವರಲಿ ನಾಕಾಣೆ... ಗೋಪಿಜನಪ್ರಿಯ ಗೋಪಾಲಗಲ್ಲದೆ...’ ಎಂಬ ಪದ್ಯ ನಿಮಗೆ ಗೊತ್ತಿರಬಹುದು. (ಆಗಲೇ ಪುರಂದರದಾಸರಿಗೂ ಈ-ಪರಿ ಅನ್ನುವುದು ತಿಳಿದಿತ್ತು ನೋಡಿ!).

ನೀವು ಮಾಡಬೇಕಾಗಿರುವುದೆಂದರೆ ನಿಮಗೆ ಪ್ರಿಯವಾದ ಯಾವುದೇ ವಸ್ತು, ವಿಷಯ, ವ್ಯಕ್ತಿ ಯನ್ನು ಉದ್ದೇಶಿಸಿ ಈ ಹಾಡಿನ ಎರಡು ಸಾಲುಗಳನ್ನು ಮಾರ್ಪಡಿಸಬೇಕು.

ಉದಾಹರಣೆಗೆ ದಟ್ಸ್‌ಕನ್ನಡ.ಕಾಂ ನಿಮ್ಮ ನೆಚ್ಚಿನ ವೆಬ್‌ಪೋರ್ಟಲ್‌ ಆಗಿರುವುದರಿಂದ ಹೀಗನ್ನಬಹುದು: ‘ಈ-ಪರಿಯ ಸೊಬಗಾವ ಪೋರ್ಟಲಲಿ ಕಾಣೆ, ಹದಿನಾರಾಣೆ... ಕನ್ನಡದ ಕಂಪಿರುವ ದಟ್ಸ್‌ಕನ್ನಡವಲ್ಲದೆ ...’ !

ಯೋಚಿಸಿ, ಎರಡು ಸಾಲುಗಳ ‘ಮಹಾಕಾವ್ಯ’ವನ್ನು ಬರೆದು srivathsajoshi@yahoo.com ವಿಳಾಸಕ್ಕೆ ಆದಷ್ಟು ಬೇಗ ಕಳಿಸಿಕೊಡಿ. ಅತ್ಯುತ್ತಮವೆನಿಸಿ ಆಯ್ಕೆಯಾದುದಕ್ಕೆ some ಭಾವನೆ ಖಂಡಿತ ಇದೆ!

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more