ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ವಿಚಿತ್ರಾನ್ನದ ತುತ್ತು ನಂಬರ್‌ ಐವತ್ತು !

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Vichitranna 50 !!! ನನಗೇ ಆಶ್ಚರ್ಯವಾಗುತ್ತದೆ -
  • ಸುಮಾರು ಒಂದು ವರ್ಷದ ಹಿಂದೆ ದಟ್ಸ್‌ಕನ್ನಡ ಸಂಪಾದಕರು, ‘ಲೈಟಾಗಿರುವ ಬರವಣಿಗೆಯ ಅಂಕಣ’ವೊಂದನ್ನು ನಡೆಸುವಂತೆ ನನ್ನ ಬಳಿ ಪ್ರಸ್ತಾಪಿಸಿದ್ದು!
  • ಈ ಐವತ್ತು ವಾರಗಳ ಕಾಲ ಪ್ರತಿ ಮಂಗಳವಾರ ಚಾಚೂ ತಪ್ಪದೆ ನಾನು ‘ವಿಚಿತ್ರಾನ್ನ’ ವನ್ನು ಬರೆದು ನಿಮಗೆಲ್ಲ ಬಡಿಸಿದ್ದು !!
  • ಐವತ್ತರಲ್ಲಿ ಹೆಚ್ಚುಕಡಿಮೆ ಎಲ್ಲವೂ ಓದುಗರಾದ ನಿಮ್ಮೆಲ್ಲರ ಮೆಚ್ಚುಗೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದು !!!
  • ಅದೆಲ್ಲಕ್ಕಿಂತಲೂ ಮುಖ್ಯವಾಗಿ, ನಿಮ್ಮಲ್ಲಿ ಅನೇಕಾನೇಕ ಮಂದಿ ವಿಚಿತ್ರಾನ್ನವನ್ನು ಉಂಡು ನಿಮಗಾದ ಸಂತೋಷವನ್ನು ಬರೆದು ತಿಳಿಸಿದ್ದು !!!!
ಇವೆಲ್ಲ ಆರೋಹಣ ಕ್ರಮದಲ್ಲಿ ಕಷ್ಟಸಾಧ್ಯವಾಗುತ್ತ , ಸಂಭವನೀಯತೆ ಕಡಿಮೆಯಾಗುತ್ತ ಹೋಗುವ ಸಂಗತಿಗಳು. ಆದರೂ ನಡೆದಿವೆ; ಅಂತರ್ಜಾಲದಲ್ಲಿ ಕನ್ನಡವನ್ನು ಓದುವ ಕನ್ನಡಿಗರು ಈ ಒಂದು ಅಂಕಣವನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ‘ಜೀವನ ಪ್ರೀತಿ’ಯ ಸರಳ ಧ್ಯೇಯದಿಂದ ಬರೆದ ಸಣ್ಣಸಣ್ಣ ಲಲಿತಪ್ರಬಂಧಗಳನ್ನು, ಅವುಗಳ ವಿಷಯವ್ಯಾಪ್ತಿಯನ್ನು, ಅವು ನೀಡಿದ ಮಾಹಿತಿ-ಮನರಂಜನೆಗಳನ್ನು ಮನಃಪೂರ್ವಕ ಮೆಚ್ಚಿದ್ದಾರೆ.

ಅದಕ್ಕೆಂದೇ ಆಶ್ಚರ್ಯವಾಗುತ್ತಿದೆ! ನಿಮ್ಮೆಲ್ಲರ ಪ್ರೋತ್ಸಾಹವನ್ನು ಕಂಡು ಬಹಳ ಸಂತೋಷವೂ ಆಗುತ್ತಿದೆ; ಇನ್ನಷ್ಟು ರುಚಿಕಟ್ಟಾಗಿ ವಿಚಿತ್ರಾನ್ನ ತಯಾರಿಸಿ ನಿಮಗೆ ಬಡಿಸಬೇಕೆಂಬ ಉತ್ಸಾಹ ಬರುತ್ತಿದೆ!

ಬನ್ನಿ, ‘ವಿಚಿತ್ರಾನ್ನ’ದ ಈ ವಿಜೃಂಭಣೆಯ ಮೇಲೊಂದು ಸಿಂಹಾವಲೋಕನ ಬೀರೋಣ.

* * *

Read Vichitranna when your head becomes chitraanna...!ಯುಗಾದಿ (ಚೈತ್ರ ಶುಕ್ಲ ಪಾಡ್ಯ), ಅಕ್ಷಯ ತದಿಗೆ (ವೈಶಾಖ ಶುಕ್ಲ ತದಿಗೆ) ಮತ್ತು ವಿಜಯದಶಮಿ (ಆಶ್ವಯುಜ ಶುಕ್ಲ ದಶಮಿ) - ಚಾಂದ್ರಮಾನ ಪಂಚಾಂಗದಲ್ಲಿ ಈ ಮೂರು ದಿನಗಳಂದು ಯಾವುದೇ ಕಾರ್ಯವನ್ನು ಆರಂಭಿಸಿದರೂ ಅದಕ್ಕೆ ಯಶಸ್ಸು ಸಿಕ್ಕೇಸಿಗುತ್ತದೆಂದು ಒಂದು ಪ್ರತೀತಿ ಇದೆ. ಕಳೆದ ವರ್ಷ ಅಕ್ಟೋಬರ್‌ 15ರಂದು ವಿಜಯದಶಮಿಯ ದಿನ ಶುಭಾರಂಭವಾದ ‘ವಿಚಿತ್ರಾನ್ನ’ ಅಂಕಣ ಇದಕ್ಕೆ ಹೊರತಲ್ಲ ಎಂದು ನಾನು (ಜ್ಯೋತಿಷ್ಯದಲ್ಲಿ ಅಂಥಾದ್ದೇನೂ ನಂಬಿಕೆಯಿರದಿದ್ದರೂ) ಈಗ ಹೇಳಬಲ್ಲೆ !

ನನಗೆ ಗೊತ್ತಿದ್ದ ಮಟ್ಟಿಗೆ ಕರ್ನಾಟಕದ ಕೆಲವು ಪ್ರದೇಷಗಳ ಜನ ಮಂಗಳವಾರ ಹೊಸದಾಗಿ ಏನನ್ನೂ ಆರಂಭಿಸುವುದಿಲ್ಲ. ಆದರೆ ವಿಚಿತ್ರಾನ್ನದ ಮಟ್ಟಿಗೆ ಮಂಗಳವಾರವೂ ಮಂಗಳಕರವೇ ಆಯಿತು ಎಂದೆನಿಸುತ್ತದೆ.

* * *

Srivathsa Joshi with S.K.Shamasundara and Vishweshwar Bhatದಟ್ಸ್‌ಕನ್ನಡ ಸಂಪಾದಕರಾದ ಶಾಮಸುಂದರ್‌ ಅದಾವ ನಂಬಿಕೆಯಿಂದ ಈ ಆಸಾಮಿ ಪ್ರತಿ ವಾರವೂ ಬರೆದು ಅಂಕಣವೊಂದನ್ನು ನಡೆಸಿಕೊಂಡು ಹೋಗಬಲ್ಲನೆಂದುಕೊಂಡರೋ ಗೊತ್ತಿಲ್ಲ . ಕನ್ನಡ ಮಾಧ್ಯಮದಲ್ಲಿ ಶಿಕ್ಷಣವೊಂದನ್ನು ಬಿಟ್ಟರೆ ಕನ್ನಡ ಕಥೆ, ಕವನ ಬರೆಯುವುದು ಇರಲಿ, ಒಂದೇ ಒಂದು ಕಾದಂಬರಿ ಓದಿ ಕೂಡ ಅಭ್ಯಾಸವಿಲ್ಲದ ನಾನು ಕನ್ನಡ ಸಾಹಿತ್ಯದಲ್ಲಿ ಪಂಡಿತನಲ್ಲವೆಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಎಡವಟ್ಟು ಎಲ್ಲಿ ಆದದ್ದೆಂದರೆ ನಾನೊಂದು ಲಘುಹರಟೆಯನ್ನು ‘ಸರಳಗನ್ನಡದಲ್ಲಿ ಪನ್‌ ಮತ್ತು ಫನ್‌’ ಎಂಬ ಶೀರ್ಷಿಕೆಯಾಡನೆ ಬರೆದು ಶಾಮ್‌ಗೆ ಕಳಿಸಿದ್ದೆ. ಅದನ್ನವರು ದಟ್ಸ್‌ಕನ್ನಡದಲ್ಲಿ ಹಾಕಲಿಲ್ಲ, ಬೇರೆಲ್ಲೋ ಉಪಯೋಗಿಸಿಕೊಂಡರು; ಆದರೆ ಈ ಪಂಡಿತನಲ್ಲದ ‘ಪನ್‌’ಡಿತನ ಕೈಯಿಂದ ದಟ್ಸ್‌ಕನ್ನಡದಲ್ಲಿ ಒಂದು ಚುರುಮುರಿ ಅಂಕಣ ಬರೆಯಿಸಬೇಕೆಂದು ಸಂಕಲ್ಪಿಸಿದರು. ಮುಂದಿನದು ನಿಮಗೆ ಗೊತ್ತಿರುವಂತೆ ಐವತ್ತು ವಾರಗಳ ಚರಿತ್ರೆ. ಇಷ್ಟಕ್ಕೂ ಆ ‘ಪನ್‌...ಫನ್‌’ ಬರಹ ಹೇಗಿತ್ತು ಎಂಬುದನ್ನು ಈಗಲಾದರೂ ನಿಮ್ಮೊಂದಿಗೆ ಹಂಚಿಕೊಳ್ಳಬೇಕಲ್ಲವೇ ? ಇದೋ ಇಲ್ಲಿದೆ.

‘ಬೆಂಗಳೂರಲ್ಲಿ ಕೆಂಗಲ್‌ ಹನುಮಂತಯ್ಯ ರಸ್ತೆ (ಡಬಲ್‌ ರೋಡ್‌) ಮೂಲಕ ಹೋಗುವಾಗ ಕೆ.ಎಸ್‌.ಆರ್‌.ಟಿ.ಸಿ ಕೇಂದ್ರ ಕಛೇರಿಯ ಬೋರ್ಡ್‌ ‘ಸಾರಿಗೆ ಭವನ’ ಎಲ್ಲರಿಗೂ ಕಾಣಿಸುತ್ತದೆ. ನನಗೂ ಕಾಣಿಸುತ್ತದೆ; ಆದರೆ ಜತೆಗೆ ನನಗದರಲ್ಲೊಂದು ಪನ್‌ ಕೂಡ ಕಾಣಿಸುತ್ತದೆ! ಸಾರಿಗೆ ಇಷ್ಟು ದೊಡ್ಡ ಭವನ ಆದರೆ ತೊವ್ವೆ, ಪಲ್ಯ, ಹುಳಿಗಳ ಗತಿಯೇನು? ಅವುಗಳಿಗೆ ಪುಟ್ಟ ಗುಡಿಸಲೇ? ದಿನಪತ್ರಿಕೆಗಳಲ್ಲಿ ಎಲ್ಲೇ ‘ಸಾರಿಗೆ ಬಸ್ಸು ಬಿದ್ದು ಐದು ಸಾವು’ ಎಂಬ ವಾರ್ತೆ ಓದಿದರೂ ಸಾರಿನ ಕೊಪ್ಪರಿಗೆಯಲ್ಲಿ ಬಸ್ಸು ಬೀಳುವ, ಈಜಾಡುವ ಚಿತ್ರವೇ ಕಣ್ಮುಂದೆ ಬರುತ್ತದೆ. ಇನ್ನೊಂದು ಪನ್‌ ಭರಿತ ಬೋರ್ಡ್‌ ನಾನು ನೋಡಿದ್ದು ಹುಬ್ಬಳ್ಳಿಯಲ್ಲಿ. ಕೇರಳ ಸ್ಪೆಷಾಲಿಟಿ ಹೊಟೇಲೊಂದರ ಬೋರ್ಡ್‌ ‘ಮಲಬಾರದವರ ಹೊಟೇಲ’! ಬಹುಶಃ ಆ ಹೋಟೇಲಲ್ಲಿ ತಿಂಡಿಗಳಿಗೆ ಖಾರ ಜಾಸ್ತಿ ಹಾಕುತ್ತಾರೆ; ತಿಂದರೆ ಮಲ ಬಾರದು? ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕವಿಡೀ ಅಂಗಡಿಮುಂಗಟ್ಟುಗಳ ಫಲಕಗಳಲ್ಲಿ ಪ್ರತಿ ಪದವೂ ‘ಅ’ಕಾರಾಂತವಾಗಿಯೇ ಇರುವುದನ್ನೂ ನಾನು ಗಮನಿಸಿದ್ದೇನೆ. ಉದಾಹರಣೆಗೆ - ‘ಮೊಹಮ್ಮದ ಅಬ್ಬೂಬಕರ ಆ್ಯಂಡ ಸನ್ಸ, ಜನರಲ ಕ್ಲಾಥ ಮರ್ಚಂಟ್ಸ, ಸ್ಟೇಷನ ರೋಡ, ಗದಗ...’

ಮಠಗಳಲ್ಲಿ , ಕಲ್ಯಾಣಮಂಟಪಗಳಲ್ಲಿ ಊಟದ ಹಾಲ್‌ಗೆ ಇರುವ ಬೋರ್ಡು - ‘ಭೋಜನ ಶಾಲೆ’. ನಮ್ಮ ಉಡುಪಿ, ದ.ಕ ಗಳಲ್ಲಿ ಭೋಜ ಎಂಬ ಹೆಸರು ಸಾಮಾನ್ಯ. (ಕವಿವರೇಣ್ಯ ಕಾಳಿದಾಸ ಆಸ್ಥಾನ ವಿದ್ವಾಂಸನಾಗಿದ್ದದ್ದು ಭೋಜರಾಜನ ಆಸ್ಥಾನದಲ್ಲಿ ಎಂಬುದು ನಿಮಗೆ ಗೊತ್ತಿದೆ). ಭೋಜನ ಶಾಲೆ ಎಂದರೆ, ಭೋಜ ‘ಅ ಆ ಇ ಈ’ ಕಲಿತದ್ದು ಅಲ್ಲಿಯೆ? ಎಂಬ ಪ್ರಶ್ನೆ ನನ್ನದು!

ಭೋಜರಾಜ, ಕಾಳಿದಾಸ ಎನ್ನುವಾಗ ನೆನಪಾಯಿತು. ಭೋಜರಾಜ ಕಾಳಿದಾಸನಿಗೆ ಕ್ಲಿಷ್ಟಕರ ಸವಾಲುಗಳನ್ನು ಒಡ್ಡಿ ಸಂಸ್ಕೃತ ಶ್ಲೋಕಗಳನ್ನು ರಚಿಸಲು ಹೇಳುತ್ತಿದ್ದ ಮತ್ತು ಕಾಳಿದಾಸ ಅಷ್ಟೇ ಲೀಲಾಜಾಲವಾಗಿ ನೀರು ಕುಡಿದಂತೆ ಅಥವಾ ಸುಲಿದಿಟ್ಟ ಬಾಳೆಹಣ್ಣನ್ನು ತಿಂದಂತೆ ವ್ಯಾಕರಣದ, ಪ್ರಾಸದ, ಛಂದಸ್ಸಿನ ಎಲ್ಲ ನಿಯಮಗಳನ್ನೂ ಪಾಲಿಸಿ ಶ್ಲೋಕ ರಚಿಸುತ್ತಿದ್ದ ! ಈಗ ನಮ್ಮ ನೆಚ್ಚಿನ ಕನ್ನಡಿಗ ಅವಧಾನಿ ಆರ್‌.ಗಣೇಶ್‌ ಅವರೂ, ಪ್ರಖ್ಯಾತ ಹನಿಗವನ ಕವಿ ಎಚ್‌.ದುಂಡಿರಾಜ್‌ ಅವರೂ ಈ ರೀತಿ ಶಬ್ದ ಸರಸ ಮಾಡುತ್ತ ಬರೆಯುವುದಿಲ್ಲವೇ, ಹಾಗೆ.

ಕನ್ನಡದಲ್ಲಿ ಕಾಗುಣಿತ ಅಕ್ಷರಗಳನ್ನು ಉಪಯೋಗಿಸದೇ (ಪೂರ್ಣ ಅಕ್ಷರ ಮಾತ್ರ; ಅದರ ಕಾಗುಣಿತ ರೂಪ ಕಾ, ಕು, ಕೆ, ಕೋ ಇತ್ಯಾದಿ ಸಲ್ಲದು) - ಅರ್ಥಪೂರ್ಣ ವಾಕ್ಯವನ್ನು ರಚಿಸಬಹುದೆ? ಎಂದು ನನಗೆ ನಾನೇ ಒಂದು ಸವಾಲು ಹಾಕಿಕೊಂಡೆ. ಒಬ್ಬ ಕಾಲ್ಪನಿಕ ರಾಜಕುಮಾರನ ಕವಿಹೃದಯವನ್ನು, ಅವನ ಪರಿಶ್ರಮವನ್ನು ಬಣ್ಣಿಸುವ ಒಂದು ವಾಕ್ಯವನ್ನು ಸೃಷ್ಟಿಸಿದೆ. ಆ ರಾಜಕುಮಾರನ ಹೆಸರು ಭರತ. ಮಗಧ ದೇಶದವನು. ಅವನ ತಂದೆ ದಶರಥ. (ಅಯೋಧ್ಯೆಯ ದಶರಥ-ಭರತರಿದ್ದಂತೆಯೇ). ಆ ರಾಜಕುಮಾರನ ಕಲೆಯ ಬಣ್ಣನೆಯ ಈ ವಾಕ್ಯ ಓದಿ. ಇದರಲ್ಲಿ ಕಾಗುಣಿತದ ಬಳಕೆಯೇ ಇಲ್ಲ!

‘ಮಗಧದ ಅರಸ ದಶರಥನ ಮಗ ಭರತನ ನವರಸದ ಸರಳ ಕವನ ಬರಹದ ಸಡಗರ ಅನವರತ; ಅವನ ಸತತ ತಪಸದ ಪರಮಫಲ’!

* * *

Srivathsa Joshi in NRI Column of Vijaya Karnatakaಶಾಮಸುಂದರ್‌ ಅವರಂತೆಯೇ ನನ್ನ ಲಘುಬರಹಗಳಿಗೆ ಉತ್ತೇಜನ ಕೊಟ್ಟ ಇನ್ನೊಬ್ಬರೆಂದರೆ ‘ವಿಜಯ ಕರ್ನಾಟಕ’ ಕನ್ನಡ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ವಿಶ್ವೇಶ್ವರ ಭಟ್‌. ದಟ್ಸ್‌ಕನ್ನಡ.ಕಾಂ ನೊಂದಿಗೆ ‘ವಿಷಯ ವಿನಿಮಯ ಮೈತ್ರಿ’ ಹೊಂದಿರುವ ಅವರು ವಿಚಿತ್ರಾನ್ನ ಅಂಕಣದ ಕೆಲವೆಲ್ಲ ಲೇಖನಗಳನ್ನು ಯಥಾವತ್ತಾಗಿ ವಿಜಯ ಕರ್ನಾಟಕದ ಭಾನುವಾರದ ಅಂಕಣ ‘ಎನ್‌ ಆರ್‌ ಐ ಕಾಲಂ’ನಲ್ಲಿ ಪ್ರಕಟಿಸಿದರು. ಕರ್ನಾಟಕದ ಉದ್ದಗಲದಿಂದ ವಿಜಯಕರ್ನಾಟಕ ಓದುಗರ ಈಮೈಲ್‌ಗಳು ನನ್ನ ಇನ್‌ಬಾಕ್ಸ್‌ನಲ್ಲಿ ಬಂದುಬಿದ್ದವು. ಮತ್ತೆ ನೋಡುತ್ತೇನಾದರೆ ಶಾಮ್‌ ಮತ್ತು ಭಟ್‌ ಇಬ್ಬರಿಗೂ ನನ್ನ ಪನ್‌-ಫನ್‌ ಬರವಣಿಗೆ ಇಷ್ಟವಾಗಲು ಕಾರಣವಿದೆ - ಅವರಿಬ್ಬರೂ ‘ಕನ್ನಡಪ್ರಭ’ ದಲ್ಲಿ ಮಹಾ‘ಪನ್‌’ಡಿತ ವೈ.ಎನ್‌.ಕೆ ಅವರ ವಂಡರ್‌ಕಣ್ಣಿನ ಗರಡಿಯಲ್ಲಿ ಒಟ್ಟಿಗೇ ಪಳಗಿದವರು!

ಶಾಮ್‌ ಮತ್ತು ಭಟ್‌ - ಇಬ್ಬರಿಗೂ ನನ್ನ ಕೃತಜ್ಞತೆ ಸಲ್ಲಲೇಬೇಕು. ‘ಪತ್ರಿಕಾವೃತ್ತಿ’ಯ ನನ್ನ ಹುಚ್ಚಿಗೆ ನೀರೆರೆಯುತ್ತ ಹುರಿದುಂಬಿಸಿದ ಇವರೀರ್ವರನ್ನು ಕಳೆದ ಡಿಸೆಂಬರ್‌ನಲ್ಲಿ ನಾನು ಬೆಂಗಳೂರಲ್ಲಿ ಭೇಟಿಯಾಗಿದ್ದಾಗಿನ ಚಿತ್ರ ಇಲ್ಲಿದೆ.

* * *

‘ವಿಚಿತ್ರಾನ್ನ’ ಬರೇ ಒಂದು ಸಾಪ್ತಾಹಿಕ ಅಂಕಣ ಮಾತ್ರವಾಗಿರದೆ ಒಂದು ದೊಡ್ಡ ವಿಶ್ವವ್ಯಾಪಿ ಸ್ನೇಹಜಾಲವನ್ನೇ ಸೃಷ್ಟಿಸಿದೆ. ಇದುವರೆಗೆ ಮುಖನೋಡಿ ಪರಿಚಯವಿಲ್ಲದಿದ್ದವರು, ಧ್ವನಿಕೇಳಿ ಗೊತ್ತಿಲ್ಲದವರು ನಮ್ಮ ಕುಟುಂಬದ ಪೈಕಿಯವರೇನೋ ಎಂಬಂತೆ ಆತ್ಮೀಯರಾಗಿದ್ದಾರೆ. ನನಗೆ ಮಾತ್ರವಲ್ಲದೆ ನನ್ನ ಪ್ರೀತಿಯ ಪತ್ನಿ ಸಹನಾ ಮತ್ತು ಮಗರಾಯ ಸೃಜನ್‌ನನ್ನೂ ತಪ್ಪದೇ ‘ಕೇಳಿದ್ದೇನೆಂದು ಹೇಳಿ’ ಎಂದು ಈಮೈಲ್‌ ಬರೆಯುತ್ತಾರೆ ಹಾಂಗ್‌ಕಾಂಗ್‌ನಿಂದ, ಟೋಕಿಯೋದಿಂದ, ಕ್ಯಾಲಿಫೋರ್ನಿಯಾದಿಂದ, ಸಿದ್ದಾಪುರದಿಂದ, ಬಾಗಲಕೋಟೆಯಿಂದ, ಚಿಕ್ಕಮಗಳೂರಿನಿಂದ ಮತ್ತು ಅಂತರ್ಜಾಲ ಹೊಕ್ಕಿರುವ ಮೂಲೆಮೂಲೆಗಳಿಂದ! ಅಂದರೆ ಇವರೆಲ್ಲ ನಮಗೀಗ ಫ್ಯಾಮಿಲಿ-ಫ್ರೆಂಡ್ಸ್‌!

ಒಂದೆರಡು ನಿದರ್ಶನಗಳು - ವಿಚಿತ್ರಾನ್ನದಲ್ಲಿ ನಿಮಗೆಲ್ಲ ಪರಿಚಯವಾದ ‘ಅಕ್ಕಿಕಾಳು ವೆಂಕಟೇಷ್‌’ ಅವರು ಮೊನ್ನೆ ಜುಲೈಯಲ್ಲಿ ಯುರೋಪ್‌ ಪ್ರವಾಸಕ್ಕೆ ಹೋದಾಗ ಇಂಗ್ಲಂಡ್‌ನಲ್ಲಿರುವ ನಮ್ಮ ಅಣ್ಣನ ಮನೆಗೂ ಭೇಟಿ ನೀಡಿದ್ದರು. ಅಲ್ಲಿ ಅವರ ‘ಅಕ್ಕಿ ಕಾಳಿನ ಮೇಲೆ ಬರಹ’ ತುಂಬಾ ಹಿಟ್‌ ಆಗಿ ಆರೇಳು ವರ್ಕ್‌ಷಾಪ್‌ಗಳನ್ನು ಅವರು ನಡೆಸಿಕೊಡಬೇಕಾಯಿತು. ಅದೇ ರೀತಿ ಇಂಗ್ಲಂಡ್‌ನಿಂದ ನಮ್ಮಣ್ಣ-ಅತ್ತಿಗೆ-ಮಕ್ಕಳು ಐರ್‌ಲ್ಯಾಂಡ್‌ನ ಡಬ್ಲಿನ್‌ಗೆ ಹೋದಾಗ ಅಲ್ಲಿ ಅವರಿಗೆ ಆತಿಥ್ಯ ನೀಡಿದ್ದು ವಿಚಿತ್ರಾನ್ನ ಓದುಗ ದೇವೇಂದ್ರ ಪ್ರಕಾಶ್‌. ಆಗಷ್ಟೇ ಡಬ್ಲಿನ್‌ನಲ್ಲಿ ನಡೆದ ಸ್ಪೆಷಲ್‌ ಒಲಿಂಪಿಕ್ಸ್‌ ವೇಳೆ ಸ್ವಯಂಸೇವಕನಾಗಿ ಕೆಲಸ ಮಾಡಿದ್ದ ದೇವೇಂದ್ರ ಪ್ರಕಾಶ್‌ ಅವರ ಮನೆ ಡಬ್ಲಿನ್‌ನ ಏರ್‌ಪೋರ್ಟ್‌ ಪಕ್ಕದಲ್ಲೇ ಇರುವುದರಿಂದ ಏರ್‌ಪೋರ್ಟ್‌-ಏರೋಪ್ಲೇನ್‌ಗಳ ಮಹಾಹುಚ್ಚಿನ ನಮ್ಮಣ್ಣನ ಮಗನಿಗೆ ಆದ ಸಂತೋಷ ಅಷ್ಟಿಷ್ಟಲ್ಲ !

ಮೊನ್ನೆಮೊನ್ನೆಯಷ್ಟೇ ಮೇರಿಲ್ಯಾಂಡ್‌ ಯುನಿವರ್ಸಿಟಿಯಲ್ಲಿ ನಡೆದ ‘ಸ್ಪೆಲ್‌ ಬೀ’ ಸ್ಪರ್ಧೆಯಲ್ಲಿ ಭಾಗವಹಿಸಲು ಮಗ ಕ್ಷಿತಿಜ್‌ನನ್ನು ಕರಕೊಂಡು ಬಂದಿದ್ದ ಕ್ಯಾಲಿಫೋರ್ನಿಯಾದ ಕನ್ನಡಿಗರಾದ, ವಿಚಿತ್ರಾನ್ನ ಓದುಗರಾದ ಶ್ರೀನಾಥ್‌ ಮತ್ತು ಲಕ್ಷ್ಮೀ ಅವರು ಸ್ಪರ್ಧೆ ಮುಗಿದ ನಂತರ ನಮ್ಮನೆಗೂ ಸೌಹಾರ್ದ ಭೇಟಿಕೊಟ್ಟಿದ್ದರು. 80 ಸ್ಪರ್ಧಿಗಳಲ್ಲಿ ಕ್ಷಿತಿಜ್‌ಗೆ ಐದನೇ ಸ್ಥಾನ ಬಂದಾಗಿನಷ್ಟೇ ಸಂತೋಷ ಅವರಿಗೆ ನಮ್ಮನ್ನೆಲ್ಲ ಭೇಟಿಯಾದದ್ದು ಕೂಡ. ಅತ್ತ ಬೆಂಗಳೂರಿನ ಮಧುಸೂದನ ಪೆಜತ್ತಾಯ ಅವರ ಮತ್ತು ನನ್ನ ನಡುವಿನ ಈಮೈಲ್‌ ವಿನಿಮಯವನ್ನು ನೋಡಿದರಂತೂ ಹತ್ತಿಪ್ಪತ್ತು ವರ್ಷಗಳಿಂದ ನಾವು ಒಬ್ಬರನ್ನೊಬ್ಬರು ಬಲ್ಲವರೇ ಎಂದೆನಿಸಬೇಕು. ಅವರ ಮನೆಯಲ್ಲಿ ಹಬ್ಬಕ್ಕೆ ಏನು ವಿಶೇಷ ಎಂದು ನನಗಿಲ್ಲಿರುವಾಗಲೇ ಗೊತ್ತಾಗುತ್ತದೆ. ಇಲ್ಲಿ ನಾನು ನೋಡಿದ ಯಕ್ಷಗಾನದ ವೀಕ್ಷಕ ವಿವರಣೆ ಮಾರನೆದಿನವೇ ಅವರಿಗೆ ತಲುಪುತ್ತದೆ! ಅಂತರಂಗ ವಿನಿಮಯಕ್ಕೆ ಅಂತರ್ಜಾಲ... ವಿಚಿತ್ರಾನ್ನ ಹೆಣೆದ ಸ್ನೇಹಜಾಲ!

ಈ-ಸ್ನೇಹಿತರೆಲ್ಲ ‘ಜೀವನ ಪ್ರೀತಿ’ ವಿಪುಲವಾಗಿರುವ ಸರಳ ಹೃದಯದ ಸಜ್ಜನರು. ಇವರ ಸ್ನೇಹ ನಮಗೆ ಸಿಕ್ಕಿದ್ದು ಸಾರ್ಥಕತೆಯ ಒಂದು ರೀತಿ. ಬಾಳ್ವೆಗೊಂದು ಸುಂದರ ನೀತಿ.

ಇನ್ನೊಂದು ಮಾತನ್ನಿಲ್ಲಿ ಹೇಳಬೇಕು. ವಿಚಿತ್ರಾನ್ನದಿಂದಾಗಿ ಕೆಲವು ‘ನೆಗೆಟಿವ್‌ ಸೈಡ್‌ ಎಫೆಕ್ಟ್ಸ್‌’ ಕೂಡ ಆಗಿವೆ. ನಾನು ನಡೆಸುತ್ತಿದ್ದ - Let us know US (http://www.geocities.com/srivathsajoshi/letusknowus.html ಈಮೈಲ್‌ ಸರಣಿ ಮತ್ತು ವೆಬ್‌ಸೈಟ್‌ ಚಟುವಟಿಕೆಗಳು ನಿಧಾನವಾಗಿವೆ ಅಥವಾ ಸ್ಥಗಿತಗೊಂಡಿವೆ. ನನ್ನ ಕನ್ನಡೇತರ ಸ್ನೇಹಿತರು ಇದನ್ನು ತೀವ್ರವಾಗಿ ಗಮನಕ್ಕೆ ತೆಗೆದುಕೊಂಡಿದ್ದಾರೆ :-( ಹಾಗೆಯೇ ನನ್ನ ಇನ್ನೊಂದು ಚಟುವಟಿಕೆಯಾದ ನಮ್ಮ ಫ್ಯಾಮಿಲಿ ನ್ಯೂಸ್‌ಲೆಟರ್‌ ‘ಖಬ್ರಿ’ಗೆ (ಇದರ ಬಗ್ಗೆಯೇ ಒಂದು ವಿಚಿತ್ರಾನ್ನ ಲೇಖನ ಸದ್ಯದಲ್ಲೇ ಬರಲಿದೆ) ಕೂಡ ಸ್ವಲ್ಪ ಕೊಡಲಿಯೇಟು ಬಿದ್ದಿದೆ :-(

ಅದೇನಿದ್ದರೂ ವಿಚಿತ್ರಾನ್ನ ಮಾತ್ರ ಆಪ್ತವಾಗಿ, ಆಪ್ಯಾಯಮಾನವಾಗಿ ಮುನ್ನಡೆದಿದೆ; ಹೀಗೇ ಮುಂದುವರಿಯುತ್ತದೆಂದು ಆಶಿಸೋಣ.

* * *

ಶಿಶುಗೀತೆಗಳು, ಪ್ರಾಥಮಿಕ ಶಾಲೆಯ ಪದ್ಯಗಳು ವಿಚಿತ್ರಾನ್ನದಲ್ಲಿ ಆಗಾಗ ಉಲ್ಲೇಖಗೊಂಡಿವೆ. ‘ಅನ್‌ಪ್ರೆಡಿಕ್ಟೆಬ್ಲೀ’ ಬೇರೆಬೇರೆ ವಿಷಯಗಳನ್ನು ಹೊತ್ತು ಬರುವ ವಿಚಿತ್ರಾನ್ನದ ‘ಸ್ಟಾಂಪ್‌’ಗಳಲ್ಲಿ ಅದೂ ಒಂದು. ಈ ಗೋಲ್ಡನ್‌ ಜುಬಿಲಿ ಸಂಚಿಕೆಯಲ್ಲೂ, ಪ್ರಾತಿನಿಧಿಕವಾಗಿ ಒಂದು ಕನ್ನಡ ಶಿಶುಗೀತೆಯನ್ನು ನೋಡೋಣ. ಒಂದರಿಂದ ಹತ್ತರವರೆಗಿನ ಅಂಕೆಗಳನ್ನು, ಲೆಕ್ಕವನ್ನು ಕಲಿಸುವ ಕಥಾರೂಪದ ಪದ್ಯ. ಎಳೆವಯಸ್ಸಿನ ಮುಗ್ಧ ಮನಸ್ಸಿಂದ ಓದಿ:

ಒಂದು ಕಾಡಿನ ಮಧ್ಯದೊಳಗೆ
ಎರಡು ಗುಹೆಗಳ ನಡುವೆ ಮಲಗಿ
ಮೂರು ಕರಡಿಗಳಾಡುತಿದ್ದುವು
ನಾಲ್ಕು ಮರಿಗಳ ಸೇರಿಸಿ ।। 1 ।।

ಐದು ಜನರಾ ಬೇಟೆಗಾರರು
ಆರು ಬಲೆಗಳನೆಳೆದು ತಂದು
ಏಳು ಕರಡಿಗಳ್ಹಿಡಿದು ನೋಡದೆ
ಎಂಟು ಹಿಡಿದೆವು ಎಂದರು ।। 2 ।।

ಒಂಬತ್ತೆಂದನು ಅವರಲೊಬ್ಬ
ಹತ್ತು ಎಂದನು ಬೇರೆಯವನು
ಎಣಿಸಿ ನೋಡಿದರೇಳೇ ಏಳು
ಇಲ್ಲಿಗೀ ಕತೆ ಮುಗಿಯಿತು...।। 3 ।।

* * *

Which Kannada Film Personalitys name comes to your mind?ನಾಲ್ಕಕ್ಷರಗಳ ಉತ್ತರದ ಪದಬಂಧಗಳು ವಿಚಿತ್ರಾನ್ನದ ಇನ್ನೊಂದು ಪ್ರಮುಖ ಆಕರ್ಷಣೆ. ಇವತ್ತಿನ ಈ ವಿಶೇಷ ಸಂಚಿಕೆಯಲ್ಲೂ ಅಂಥದ್ದೊಂದು ಇದೆ; ಇದನ್ನು ಪದಬಂಧಕ್ಕಿಂತಲೂ ‘ಚಿತ್ರಬಂಧ’ ಎನ್ನುವುದು ಸೂಕ್ತ. ಈ ಚಿತ್ರದಲ್ಲಿರುವ ಮೂರು ಭಾಗಗಳನ್ನು ಜೋಡಿಸುತ್ತ ಹೋದರೆ, ಕನ್ನಡ ಚಿತ್ರರಂಗದ ಒಬ್ಬ ಹಾಸ್ಯನಟ-ನಿರ್ಮಾಪಕ-ನಿರ್ದೇಶಕನ ಹೆಸರು ಸಿಗುತ್ತದೆ. ಯಾರದೆಂದು ನಿಮಗೆ ತಿಳಿಯಿತೇ ? ಸ್ಪರ್ಧೆ-ಬಹುಮಾನವಿಲ್ಲದಿದ್ದರೂ ನಿಮ್ಮ ಉತ್ತರವನ್ನು ತಿಳಿಯುವ ಕುತೂಹಲ ನನಗಿದೆ. ಬರೆದು ತಿಳಿಸುತ್ತೀರಾ?

* * *

ಸರಿ, ಬರೆಯುತ್ತ ಬರೆಯುತ್ತ ಈ ‘ಸ್ವಗತ’ ತುಂಬ ಉದ್ದವಾಗಿ ಹೋಯಿತು. (ಜಂಭ ಇಷ್ಟು ಸಾಕು?) ನಿಮ್ಮ ಅನಿಸಿಕೆಗಳು, ಸಲಹೆ-ಸೂಚನೆಗಳು, ಟೀಕೆ-ಟಿಪ್ಪಣಿಗಳು, ವಿಚಿತ್ರಾನ್ನದ ಮುಂದಿನ ಕಂತುಗಳಿಗೆ ವಿಷಯಗಳು ಮತ್ತು ಮೇಲಿನ ‘ಚಿತ್ರಬಂಧ’ಕ್ಕೆ ಉತ್ತರ - ಇವಿಷ್ಟರಲ್ಲಿ ಯಾವುದಾದರನ್ನು ಅಥವಾ ಎಲ್ಲವನ್ನೂ [email protected] ವಿಳಾಸಕ್ಕೆ ಕಳಿಸಿ. ಮುಂದಿನ ವಾರ ಭೇಟಿಯಾಗೋಣ.


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X