• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿನೋದಾವಳಿಯ ಈ-ಸರಪಳಿ

By oneindia staff
|
Srivathsa Joshi *ಶ್ರೀವತ್ಸ ಜೋಶಿ

E- Sarapaliಸರಪಳಿ ಅಥವಾ ಸರಪಣಿ ನಮ್ಮ ದೈನಂದಿನ ಆಗುಹೋಗುಗಳಲ್ಲಿ ಚಿರಪರಿಚಿತ ವಸ್ತು. ತೊಟ್ಟಿಲನ್ನು ತೂಗುಹಾಕಿದ ಸರಪಳಿ ಬಹುಶಃ ನಾವೆಲ್ಲ (ನಾನಂತೂ ಹೌದು!) ಜೀವನದಲ್ಲಿ ನೋಡಿದ ಮೊಟ್ಟಮೊದಲ ಸರಪಳಿ. ಅದಾದ ಮೇಲೆ ನಾಯಿಯನ್ನು ಕಟ್ಟಿದ ಸರಪಳಿ, ರೈಲುಪ್ರಯಾಣದ ವೇಳೆ ನಮ್ಮ ಸೂಟ್‌ಕೇಸ್‌ ನಮ್ಮನ್ನು ಬಿಟ್ಟು ಹೋಗದಂತೆ ಅದನ್ನು ಕೆಳಗಿನ ಬರ್ತ್‌ನ ಕಾಲುಗಳಿಗೆ ಕಟ್ಟುವ ಸರಪಳಿ, ರೈಲನ್ನು ನಿಲ್ಲಿಸಲು ಉಪಯೋಗಿಸಬಹುದಾದ ಆದರೆ ಉಪಯೋಗಿಸಬಾರದ ಸರಪಳಿ, ಸ್ವಲ್ಪ ಹಳೆಯ ಕಾಲದ ಕಕ್ಕಸುಗಳಲ್ಲಿ ಫ್ಲಷ್‌ ಮಾಡಲು ಸರಪಳಿ, ಟಿ.ವಿ ಮಹಾಭಾರತದಲ್ಲಿ ವಸುದೇವ-ದೇವಕಿಯರನ್ನು ಕಂಸನು ಕಟ್ಟಿಹಾಕಿದ ಸರಪಳಿ - ಹೀಗೆ ವಿವಿಧ ಸರಪಳಿಗಳನ್ನು ನೋಡಿರುತ್ತೇವೆ ನಾವು.

E- Sarapaliಇವೆಲ್ಲ ಭೌತಿಕ ಸರಪಳಿಗಳು. ಇನ್ನೊಂದಿದೆ - ಭಾವನಾತ್ಮಕ ಸರಪಳಿ. ಸ್ವಾತಂತ್ರ್ಯಾಪೂರ್ವದಲ್ಲಿ ನಾವು ಭಾರತೀಯರು ಬ್ರಿಟಿಷರ ದಾಸ್ಯ‘ಶೃಂಖಲೆ’ ಯಲ್ಲಿದ್ದೆವು ಎಂದು ಹೇಳುವಲ್ಲಿ ಬರುವ ‘ಶೃಂಖಲಾ’ ಸಂಸ್ಕೃತ ಪದದ ಕನ್ನಡ ರೂಪ ಸಂಕೋಲೆ (= ಸರಪಳಿ). ದಾಸ್ಯ, ಗುಲಾಮಗಿರಿಯ ಸಂಕೋಲೆ ಕಠಿಣದ್ದಾದರೆ ಸ್ನೇಹ-ಪ್ರೇಮದ ಸಂಕೋಲೆ ಆಪ್ಯಾಯಮಾನವಾದುದು. ನೆನಪಿಸಿಕೊಳ್ಳಿ ‘ಶುಭ ಮಂಗಳ’ ಚಿತ್ರದ ಶೀರ್ಷಿಕೆಗೀತೆಯ ‘ಬದುಕೇ ಸುಮಧುರ ಸ್ನೇಹ ಸಂಕೋಲೆ...’ ಎಂಬ ಸಾಲುಗಳನ್ನು. ಭೌತಿಕ, ಭಾವನಾತ್ಮಕ ಸರಪಳಿಗಳ ಹಾಗೆಯೇ ಜೈವಿಕ ಸರಪಳಿ, ಆಹಾರ ಸರಪಳಿಗಳ ಬಗ್ಗೆಯೂ ನೀವು ತಿಳಿದುಕೊಂಡಿರುತ್ತೀರಿ ಎಂದುಕೊಂಡಿದ್ದೇನೆ.

ಇನ್ನೊಂದು ನಮೂನೆಯ ಸರಪಳಿ ಇದೆ, ನನ್ನಂತೆ ‘ಶಬ್ದ ಸರಸ’ ಹುಚ್ಚಿನವರಿಗೆ ಮಾತ್ರ ಅರ್ಥವಾಗುವಂಥದ್ದು. ಕನ್ನಡ ಚಲನಚಿತ್ರಗಳ ಹೆಸರುಗಳನ್ನು ಸರಪಳಿಯಾಗಿ ಜೋಡಿಸಿ ವಾಕ್ಯ ಮಾಡುವುದು. ಒಂದೆರಡು ಉದಾಹರಣೆಗಳು - ‘ನಮ್ಮ ಮನೆ ಬೆಳಗಿದ ಸೊಸೆ ತಂದ ಸೌಭಾಗ್ಯ ಜ್ಯೋತಿ’; ‘ದೂರದ ಬೆಟ್ಟದ ಹುಲಿಯ ಹಾಲಿನ ಮೇವು’. ಇದೇ ಟೆಕ್ನಿಕನ್ನು ಬಳಸಿ, ಭಾರತದ ನಾಲ್ಕು ಪ್ರಮುಖ ಆಂಗ್ಲದಿನಪತ್ರಿಕೆಗಳನ್ನು ಹೆಸರಿಸಿ ಎಂದು ಕೇಳಿದರೆ ಸರಪಳಿಯುತ್ತರ - ‘ದ ಹಿಂದುಸ್ತಾನ್‌ ಟೈಮ್ಸ್‌ ಆಫ್‌ ಇಂಡಿಯನ್‌ ಎಕ್ಸ್‌ಪ್ರೆಸ್‌’!

E- Sarapaliಸರಿ, ಈ ಸಲದ ವಿಚಿತ್ರಾನ್ನ ಶೀರ್ಷಿಕೆಯಲ್ಲಿ ಸರಪಳಿ ಎಂಬ ಶಬ್ದವನ್ನು ಉಪಯೋಗಿಸಿದ್ದರಿಂದ ಅದಕ್ಕೆ ನ್ಯಾಯವೊದಗಿಸುವುದಕ್ಕಾಗಿ ಇಷ್ಟೆಲ್ಲ ವ್ಯಾಖ್ಯಾನ. ಆದರೆ ಅಸಲು ನಾನು ಹೇಳಹೊರಟಿರುವುದು ಈ-ಸರಪಳಿಯ ಬಗ್ಗೆ. ಅದೇ, ಸೈಬರ್‌ಲೋಕದಲ್ಲಿನ ಸರಪಳಿ. ಆದರೆ ನಿಮಗೆಲ್ಲ ಚಿರಪರಿಚಿತವಾದ ‘ಚೈನ್‌ ಮೈಲ್‌’ಗಳ (ಸರಣಿ-ಅಂಚೆಗಳು) ಒಳಿತು-ಕೆಡುಕುಗಳು, ಕನಿಷ್ಠ ಹತ್ತು ಮಂದಿಗೆ ಈಮೈಲನ್ನು ಫಾರ್ವರ್ಡಿಸುವಂತೆ ಅವುಗಳಲ್ಲಿರುವ ಧಮ್ಕಿಗಳು - ಇತ್ಯಾದಿಯ ಬಗ್ಗೆ ಮತ್ತೆ ಮತ್ತೆ ಭೈರಿಗೆಯಿಂದ ಕೊರೆಯುವ ಬದಲು, ಇತ್ತೀಚೆಗೆ ಇದೇ ನಮ್ಮ ದಟ್ಸ್‌ಕನ್ನಡ ಅಂಗಳದಲ್ಲಿ ರಚಿಸಲ್ಪಟ್ಟ ಅಪ್ಪಟ ಮನರಂಜನೆಯ ಒಂದು ಈ-ಸರಪಳಿಯೇ ಇವತ್ತಿನ ಕಥಾನಕ.

ಹಾನೆ ಮೇಲೆ ಅನುಮಂತನ ಮೆರವಣಿಗೆ...

ಕೆಲದಿನಗಳ ಹಿಂದೆ ದಟ್ಸ್‌ಕನ್ನಡದ ಕವಿತೆ ವಿಭಾಗದಲ್ಲಿ ಹಂ.ಕ.ರಾಮಪ್ರಿಯನ್‌ ಅವರು ‘ಆ ಹಾ’ ಎಂಬ ಕವನ ಬರೆದರು. ಅದರಿಂದ ಪ್ರೇರಿತರಾದ ಮೈ.ಶ್ರೀ.ನಟರಾಜ್‌ ಅವರು ತಮ್ಮ ಅಂಕಣದಲ್ಲಿ ‘ಆಹಾ ರಾಮಪ್ರಿಯ... ಹಾಹಾ ಹನುಮಂತ...’ ಎಂಬ ಲೇಖನ+ಕವನ ಬರೆದು ಬಾಲ್ಯದ ಓರಗೆಯ ಹನುಮಂತನನ್ನೂ ಅವನ ಭಾಷಾಪಾಂಡಿತ್ಯವನ್ನೂ ಉಚ್ಚಾರಣಾ ಸಾಮರ್ಥ್ಯವನ್ನೂ ನೆನೆದರು. ನಟರಾಜರ ಅಂಕಣದ ಹೆಸರೇ ಜಾಲತರಂಗ; ಸೈಬರ್‌ ಸರೋವರದಲ್ಲಿ ಅವರೆಸೆದ ಮಂಡಕ್ಕಿಯೆಬ್ಬಿಸಿದ ನವಿರುತರಂಗ ಬೆಂಗಳೂರಿನಲ್ಲಿ ಓದುಗ ಮಧುಸೂದನ ಪೆಜತ್ತಾಯ ಅವರ ಸೃಜನಶೀಲತೆ ಉಕ್ಕಿ ಹರಿಯುವುದಕ್ಕೆ ಕಾರಣವಾಯಿತು.

ಅವರು ನಟರಾಜ್‌ಗೆ ಪತ್ರ ಬರೆದು, ಸೈಬರ್‌ ಲೋಕದಲ್ಲಿ ಅವರ ಸಾಮಾನ್ಯ ಸ್ನೇಹಿತರಾದ ನನಗೂ ಪ್ರತಿ ಕಳಿಸಿದರು. ಪೆಜತ್ತಾಯರು ಬರೆದದ್ದಿಷ್ಟು:

‘ನಮಸ್ಕಾರ ಡಾಕಟ್ರೆ!

ಆಸನದ ಹೆಂಜೀ ರಸ್ತೆಯಲ್ಲಿ ಆದು ಓಗಬೇಕಾದ್ರೆ ನಿಮ್ಮ ಅನುಮಂತ ಸಿಕ್ಕೇಬುಟ್ಟ. ನಿಮ್ಮನ್ನವ ಗೆಪ್ತಿ ಇಟ್ಟಾನಂತೆ. ಹವನ ದೊಡ್ಡ ಐದನ ಉಡ್ಗ ಕೂಡಾ ಹವರ ಅಳ್ಳೀಯಾಗೆ ಹೀಮೈಲ್‌, ಹಿಂಟರ್ನೆಟ್‌ ಎಲ್ಲಾ ಮಡಗಿ ‘ಸಾಏಬ್ರ ಕೆಫೆ’ ಇಟ್ಟು ಕೊಂಡಿದ್ದಾನಂತೆ. ನಿಮ್ಮ ಹಮೇರಿಕಾ ದೇಸಕ್ಕೇನು ಈ ಜಗತ್ತಿನ ಹೆಲ್ಲಾ ದೇಸಗಳ್ಗೂ ಹೀಮೈಲ್‌ ಮಾಡೋಂಥಾ ಶ್ಹಾನೇ ಅತ್ಯಾರ್‌ ಎಲ್ಲಾ ಮಡಗ್ಯಾವ್ನಂತೆ. ನಿಮ್ಮ ಹೀಮೈಲ್‌ ಕವನಾನ ಅಳ್ಳಿಯವರ್ಗೆಲ್ಲಾ ಹೋದಿ ಏಳಿ ಖುಸೀ ಪಟ್ಟೀದ್ದಾನಂತೆ. ನೀವು ಹಿನ್ನೋಂದಫಾ ಹಮೇರಿಕಾದಿಂದ ಹೂರ್ಗೆ ಬರೋವಾಗ ನಿಮ್ಮನ್ನು ‘ನಮ್ಮೂರ್ನ ಕ್ಯಾತ ಕವಿ’ಗಳೆಂದು ‘ಊ ಆರ’ ಆಕಿ ಸಮ್ಮಾನಮಾಡಿ, ಆಸನದ ಪ್ಯಾಟೆಯ ಹೆಂಜೀ ರೋಡಿಂದ ಅಳ್ಳೀತನ್ಕಾ ನಿಮ್ಮನ್ನ ಹಾನೇಮೇಲೆ ಹಂಬಾರೀ ಕುಂಡಿರ್ಸಿ ಭಾರೀ ಮೆರವಣ್ಗೀ ಮಾಡ್ಸೋವ್ನಂತೆ!

ಅನುಮಂತನ ಭಾಷೆ ಈಗ ನಮ್ಮ ಮನೆಮಾತಾಗಿದೆ. ಇನ್ನು ಏಚ್ಚಿಗೆ ಹೇನು ಬರೆಯಲಿ?

ರಾಮಪ್ರಿಯ-ನಟರಾಜ-ಪೆಜತ್ತಾಯ - ಈ ಸರಪಳಿ ಮುಂದುವರಿಯಬೇಕಲ್ಲ ? ಮುಂದಿನ ವಿಚಾರಸರಣಿ ನನ್ನದಾದರೆ, ಅದಕ್ಕೆ ಒಗ್ಗರಣೆ ಕೊಡುವುದು ಹೀಗೆ:

ಅನುಮಂತನೇನೋ ನಟರಾಜರನ್ನು ಆಸನದ ಬೀದಿಗಳಲ್ಲಿ ಹಾನೆಯ ಮೇಲೆ ಮೆರವಣಿಗೆ ಮಾಡಿಸಿ ಕೃತಕೃತ್ಯನಾಗಬೇಕೆಂದು ಮಹದಾಸೆಯುಳ್ಳವನಾದರೂ ನಿಜವಾಗಿ ಮೆರವಣಿಗೆಯ ಗೌರವ ಸಲ್ಲಬೇಕಾದದ್ದು ಅನುಮಂತನಿಗೇ. ಏಕೆ ಗೊತ್ತೇ? ಇವತ್ತು ಕನ್ನಡದಲ್ಲಿ ಬರೆಯುವವರನ್ನು ಪ್ರೀತಿಸಿ ಗೌರವಿಸುವುದಕ್ಕಿಂತ ಹೆಚ್ಚಿಗೆ ಅವರೆಲ್ಲ ಬರೆಯುವಂತೆ ಪ್ರೇರೇಪಿಸುವ, ಪ್ರೋತ್ಸಾಹಿಸುವ ಕನ್ನಡ ಓದುಗರನ್ನು ಆದರಿಸಬೇಕು. (ಹಾಗೂ ಆಧರಿಸಬೇಕು?). ಅಂದಮೇಲೆ ಆನೆಯ ಮೇಲೆ ಕೂಡ್ರಿಸಬೇಕಾದ್ದು ಅನುಮಂತನನ್ನು.

Oil painting by Sudhaಇಗೋ ಇಲ್ಲಿದೆ, ಈ-ಸರಪಳಿಯ ಲೇಟೆಸ್ಟ್‌ ಕೊಂಡಿ. ಮೊನ್ನೆತಾನೆ ಕನ್ನಡ ಯಾಹೂಗ್ರೂಪ್‌ನ ಸಮೂಹ-ಅಂಚೆಯಲ್ಲಿ, ಸುಧಾ ಎನ್ನುವ ಕನ್ನಡತಿಯಾಬ್ಬರು ತಾವು ರಚಿಸಿದ ತೈಲವರ್ಣಚಿತ್ರಗಳನ್ನು ಸ್ಕಾನ್‌ ಮಾಡಿ ಎಲ್ಲರಿಗೂ ಈ-ಬಟವಾಡೆ ಮಾಡಿದರು. ಅದರಲ್ಲೊಂದು ಚಿತ್ರ ‘ಕರಿಯನೇರಿದ ಕೋತಿಮರಿ’. ಇದಕ್ಕಿಂತ ಪರ್ಫೆಕ್ಟಾಗಿ ಇನ್ನೇನು ಬೇಕು ‘ಹಾನೆ ಮೇಲೆ ಅನುಮಂತನ ಮೆರವಣಿಗೆ’ಗೆ? ಚಿತ್ರ ರಚಿಸಿ ನಮ್ಮೆಲ್ಲರಿಗೆ ಹಂಚಿದ ಸುಧಾ ಅವರಿಗೆ ವಂದನೆಗಳು. ಜತೆಯಲ್ಲೇ, ಮೆರವಣಿಗೆಯ ಬಗೆಗಿನ ನನ್ನೀ ಕೊರೆತವನ್ನು ಸಹಿಸಿಕೊಂಡ ನಿಮಗೆಲ್ಲರಿಗೂ.

ಅಂದಹಾಗೆ ಈ-ಸರಪಳಿಯನ್ನು ಮುಂದುವರಿಸಲು ಸೂಕ್ತ , ಸರಸ ಕೊಂಡಿಯೇನಾದರೂ ನಿಮ್ಮಲ್ಲಿದ್ದರೆ ಜರೂರು ರವಾನಿಸಿ. ವಿಳಾಸ ನಿಮಗೆ ಗೊತ್ತೇ ಇದೆ srivathsajoshi@yahoo.com

ಓದಿ-

ಆ-ಹಾ - ಎಚ್‌.ಕೆ. ರಾಮಪ್ರಿಯನ್‌

ಆಹಾ-ರಾಮಪ್ರಿಯ, ಹಾಹಾ-ಹನುಮಂತ!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more