• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಆನಂದಬಾಷ್ಪ’ದ ಗಂಭೀರ ಚಿಂತನೆ...

By Staff
|
Srivathsa Joshi *ಶ್ರೀವತ್ಸ ಜೋಶಿ

Tears ? just because you are Happy !ರಾಮಾಯಣದ ಕಥೆ ಓದುತ್ತಿದ್ದೀರಿ, ಅಥವಾ ಅದರ ಟಿ.ವಿ ಧಾರಾವಾಹಿ ರೂಪವನ್ನು ನೋಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಮಂಥರೆಯ ಕಪಟ ಉಪದೇಶಕ್ಕೆ ಪ್ರೇರಿತಳಾಗಿ ಕೈಕೇಯಿ ಇಲ್ಲ ಸಲ್ಲದ ಯೋಜನೆಗಳನ್ನು ಮಾಡಿ ದಶರಥನನ್ನು ತಲ್ಲಣಗೊಳಿಸಿ, ರಾಮ-ಸೀತೆ-ಲಕ್ಷ್ಮಣರನ್ನು ಕಾಡಿಗೆ ಅಟ್ಟಿ, ತನ್ನ ಮಗ ಭರತನಿಗೇ ಪಟ್ಟಾಭಿಷೇಕವಾಗಬೇಕೆಂದು ಹಟ ಮಾಡಿ ಏನೇನೆಲ್ಲ ಕೋಲಾಹಲ ಮಾಡುತ್ತಾಳೆ. ಇದೆಲ್ಲವನ್ನೂ ನಾವು ಮೂಕವಿಸ್ಮಿತರಾಗಿ ಓದುತ್ತೇವೆ, ನೋಡುತ್ತೇವೆ. ನಮಗೆ ಹೃದಯದಲ್ಲೇನೋ ಭಾರವಾದ ಭಾವನೆ ಸಂಚರಿಸುವುದಿಲ್ಲ ; ಕಣ್ಣೀರು ಬರುವುದಿಲ್ಲ. ಮುಂದಿನ ದೃಶ್ಯದಲ್ಲಿ ಭರತ ಕೇಕಯ ದೇಶದಿಂದ ವಾಪಸಾದವನು ಈ ಎಲ್ಲ ಘೋರ ಸಂಗತಿಗಳನ್ನು ತಿಳಿದು ತನಗೆ ಅನಾಯಾಸವಾಗಿ ದೊರೆತಿರುವ ರಾಜ್ಯವನ್ನು ಸ್ವೀಕರಿಸಲೊಪ್ಪದೆ ತನ್ನ ತಾಯಿಯನ್ನೇ ಇಷ್ಟೆಲ್ಲ ಅನಾಹುತಗಳನ್ನು ಮಾಡಿದ್ದಕ್ಕಾಗಿ ಬಯ್ಯುತ್ತಾನೆ. ಈಗಿಂದೀಗಲೇ ಕಾಡಿಗೆ ಹೋಗಿ ರಾಮ-ಸೀತೆ-ಲಕ್ಷ್ಮಣರನ್ನು ವಾಪಸ್‌ ಅಯೋಧ್ಯೆಗೆ ತಂದು ರಾಮನಿಗೇ ಪಟ್ಟಾಭಿಷೇಕ ಮಾಡಿಸುತ್ತೇನೆ ಎಂದು ತನ್ನ ಭ್ರಾತೃಪ್ರೇಮವನ್ನು ಮೆರೆಯುತ್ತಾನೆ. ಆಗ ಬರುತ್ತದೆ ನಮಗೆ ಕಣ್ಣೀರು !

‘ಶೋಲೆ’ ಚಿತ್ರದಲ್ಲಿ ಠಾಕೂರ್‌ನ ಕುಟುಂಬದವರೆಲ್ಲರನ್ನೂ ಗಬ್ಬರ್‌ಸಿಂಗ್‌ನ ಮಂದಿ ಹತ್ಯೆ ಮಾಡಿದಾಗ ಮುಗುಮ್ಮಾಗಿ ನೋಡುತ್ತೇವೆ. ಠಾಕೂರ್‌ನ ಕೈಗಳನ್ನು ಸ್ವತಃ ಗಬ್ಬರ್‌ನೇ ಕಡಿಯುವ ದೃಶ್ಯವನ್ನೂ ಸಹಿಸುತ್ತೇವೆ. ಆದರೆ ಏ.ಕೆ.ಹಾಂಗಲ್‌ ಅಭಿನಯಿಸಿದ ಅಂಧ ಮುಸ್ಲಿಮನೊಬ್ಬ ತನ್ನ ಮಗನೇ ಗಬ್ಬರ್‌ಸಿಂಗ್‌ಗೆ ಬಲಿಯಾದರೂ ಊರವರನ್ನು ಸಾಂತ್ವನ ಮಾಡಿ, ಈ ನನ್ನ ಕೋಮಲ ಬಾಲಕನ ಬದಲಾಗಿ ನಾನೇ ಸಾಯಬಹುದಿತ್ತಲ್ಲ... ಎಂದಾಗ ನಮ್ಮ ಹೃದಯಕ್ಕೆ ಆ ಮಾತು ತಟ್ಟುತ್ತದೆ. ಕಣ್ಣುಗಳು ನಮಗೆ ಗೊತ್ತಿಲ್ಲದಂತೆಯೇ ಮಂಜಾಗುತ್ತವೆ.

ಇನ್ನೂ ಒಂದು ದೃಶ್ಯ. ಮಣಿರತ್ನಂ ನಿರ್ದೇಶನದ ‘ಅಂಜಲಿ’ ಚಿತ್ರದಲ್ಲಿ ‘ಹುಚ್ಚು ಹಿಡಿದಿರುವ ಮಗಳನ್ನು ಇಟ್ಟುಕೊಂಡ ಈ ಸಂಸಾರ ನಮ್ಮ ವಠಾರದಲ್ಲಿರುವುದು ಬೇಡ, ನಮ್ಮ ಮಕ್ಕಳಿಗೂ ಹುಚ್ಚು ಹಿಡಿದುಹೋಗಬಹುದು...’ ಎಂಬ ನೆರೆಕೆರೆಯವರ ಮಾತುಗಳಿಂದ ನಮಗೆ ಬಾರದ ಕಣ್ಣೀರು, ಅದೇ ಸಭೆಯಲ್ಲಿ ದುಷ್ಟ ರೌಡಿಯಾಬ್ಬ ಎದ್ದು ನಿಂತು, ‘ನನ್ನಂಥ ಕೆಟ್ಟ ಮನುಷ್ಯನೊಬ್ಬನನ್ನು ಹಾಯಾಗಿ ಬದುಕಲು ಬಿಟ್ಟಿರುವ ನಿಮ್ಮ ವಠಾರದಲ್ಲಿ ಒಬ್ಬ ಮುಗ್ಧ ಹಸುಳೆಗೆ ಜಾಗವಿಲ್ಲವೇ? ಧಿಕ್ಕಾರ ನಿಮಗೆಲ್ಲ !’ ಎಂದಾಗ ಅದು ನಮ್ಮ ಹೃದಯವನ್ನು ತಟ್ಟುತ್ತದೆ; ಅಲ್ಲಿ ಕಣ್ಣೀರು ಬರುವ ಸಾಧ್ಯತೆಯಿದೆ.

ಅಂದರೆ, ಎಂತಹ ಕಷ್ಟ-ಕಾರ್ಪಣ್ಯಗಳನ್ನೂ ಕೇಳಿ, ಓದಿ, ನೋಡಿ ಸಹಿಸಿಕೊಳ್ಳುವ ನಮಗೆ ಆ ಕಷ್ಟದಲ್ಲೊಂದು, ದುಷ್ಟತನದಲ್ಲೊಂದು ‘ಒಳ್ಳೆಯತನ’ದ ಹೊಂಗಿರಣ ಕಂಡರೆ ಸಾಕು, ಅಳು ಬರುತ್ತದೆ. ಎಷ್ಟೋ ಸಿನೆಮಾಗಳಲ್ಲಿ ದುಃಖಕರ ದೃಶ್ಯಗಳನ್ನೆಲ್ಲ ಟೆನ್ಷನ್‌ ಮತ್ತು ಅಟೆನ್ಷನ್‌ನಿಂದ ನೋಡಿ ಸಹಿಸುವ ನಾವು ಅಲ್ಲೊಂದು ‘ಸಹಾಯಹಸ್ತ’ ಸ್ವಲ್ಪವೇ ಗೋಚರಿಸಿದರೂ ಕಣ್ಣೀರು ಸುರಿಸುತ್ತೇವೆ. ಯಾಕೆ ಹೀಗೆ? ಇದನ್ನೇ ಆನಂದಬಾಷ್ಪ ಎನ್ನುವುದೇ?

Tears of Joyಮನಃಶಾಸ್ತ್ರಜ್ಞರ ವಿಶ್ಲೇಷಣೆಯೇನೆಂದರೆ ಸುಖಾಂತ್ಯದ ಈ ಕಣ್ಣೀರು ಆನಂದದಿಂದ ಬರುವುದಲ್ಲ; ಬದಲಾಗಿ ಆವರೆಗಿನ ಕೆಟ್ಟ-ದುಷ್ಟ ಅನುಭವಗಳು ಅವಸಾನವಾಗುವುದರಿಂದ ಬರುವುದು. ವಿವರಿಸಿ ಹೇಳಬೇಕೆಂದರೆ - ವಯಸ್ಕರಾದಂತೆಲ್ಲ ನಮಗೆ ದುಃಖವನ್ನು ತಡೆದುಕೊಳ್ಳುವ, ಚಿಕ್ಕಮಗುವಿನಂತೆ ಸಣ್ಣಪುಟ್ಟದಕ್ಕೆಲ್ಲ ಕಣ್ಣೀರು ಸುರಿಸದಿರುವ ಸಾಮರ್ಥ್ಯ ಬರುತ್ತದೆ. ಆದರೆ ಈ ‘ಅದುಮಿಟ್ಟುಕೊಳ್ಳುವಿಕೆ’ಯಲ್ಲಿ ಸಾಕಷ್ಟು ಮಾನಸಿಕ ಶಕ್ತಿಯನ್ನು ತೊಡಗಿಸಿರುತ್ತೇವೆ. ಕಷ್ಟದ ಗಳಿಗೆ ಮುಗಿಯಿತು, ಇನ್ನೇನು ಒಳ್ಳೆಯದಾಗುತ್ತದೆ ಎಂಬ ಕ್ಷಣ ಬಂದಾಗ ಇದುವರೆಗೂ ಕಣ್ಣೀರನ್ನು ತಡೆಹಿಡಿದ ಶಕ್ತಿ ರಿಲೀಸ್‌ ಆಗಬೇಕು. ಇದು ನಗುವಿನ ಮೂಲಕವೂ ಆಗಬಾರದೆಂದೇನಿಲ್ಲ, ಆದರೆ ಹೆಚ್ಚಾಗಿ ಕಣ್ಣೀರ ಮೂಲಕವೇ ರಿಲೀಸ್‌ ಆಗುವುದು! ಇದೇ ಆನಂದಬಾಷ್ಪ .

ಸುಖಾಂತ್ಯಗಳು ನಮಗೆ ‘ಮಾದರಿ ಪ್ರಪಂಚ’ವೊಂದನ್ನು - ದಯೆ, ಪ್ರೀತಿ, ಸ್ನೇಹ ಹಾಯಾಗಿ ಸುಳಿದಾಡುವ ಪ್ರಪಂಚವನ್ನು - ಕ್ಷಣಿಕವಾಗಿ ತೋರಿಸುವಂತೆ ಕಾಣುತ್ತದೆ. ನಮ್ಮ ಬಾಲ್ಯದಲ್ಲಿ, ಈ ಜಗದ ಜಂಜಡಗಳೆಲ್ಲ ಇನ್ನೂ ನಮಗೆ ಪರಿಚಯವಾಗದಿದ್ದಾಗ - ಇದೆಲ್ಲ ಸಾಧ್ಯವೆಂದೇ ನಮ್ಮ ಮನಸಲ್ಲಿರುತ್ತಿತ್ತು. ಅದಕ್ಕೆಂದೇ ನೋಡಿ, ಮಕ್ಕಳಿಗೆ ಈ ತರಹ ಸುಖಾಂತ್ಯದ ಕಣ್ಣೀರು ಬರುವುದಿಲ್ಲ, ಯಾಕೆಂದರೆ ಅವರಿಗಿನ್ನೂ ಇದೊಂದು ಅಪರೂಪದ ಸಾಧ್ಯತೆ ಎಂಬ ಭಾವನೆಯಿರುವುದಿಲ್ಲ. ವಯಸ್ಕರಿಗಾದರೋ ಈ ಸುಖಾಂತ್ಯ ಒಂದು ತಾತ್ಕಾಲಿಕ ಭ್ರಮಾಲೋಕ. ಬಾಲ್ಯದ ಮುಗ್ಧತೆಗೆ ಮರಳಿದ ಅನುಭವ. ಕಣ್ಣೀರು ಬರುವುದು ವಾಸ್ತವ ಲೋಕಕ್ಕೆ (ರಿಯಲ್‌ ವರ್ಲ್ಡ್‌) ಮರಳಬೇಕಲ್ಲಾ ಎಂಬ ಆಲೋಚನೆಯಿಂದ.

ಕೇವಲ ಕಥೆ, ಸಿನೆಮಾಗಳಲ್ಲಿನ ಸುಖಾಂತ್ಯವಷ್ಟೇ ಅಲ್ಲ. ನಿಜ ಜೀವನದಲ್ಲೂ ಇಂಥ ಸಂದರ್ಭ ಬರುತ್ತದೆ. ಹತ್ತಿರದ ಸಂಬಂಧಿಕರೊಬ್ಬರಿಗೆ ಹಾರ್ಟ್‌ ಸರ್ಜರಿ ಆಗುವುದಿದೆ ಎಂದಿಟ್ಟುಕೊಳ್ಳಿ. ಅವರ ರೋಗದ ಬಗ್ಗೆ, ಅವರ ಅವಸ್ಥೆಯ ಬಗ್ಗೆ, ಆಪರೇಶನ್‌ ಥಿಯೇಟರ್‌ನಲ್ಲಿ ಅತಿ ಜಾಗೃತಾವಸ್ಥೆಯ ವಾತಾವರಣದಲ್ಲೂ ಬಾರದ ಕಣ್ಣೀರು, ಆ ಆಪರೇಷನ್‌ ಯಶಸ್ವಿಯಾಗಿ ಮುಗಿದು ರೋಗಿ ನಿರೋಗಿಯಾಗಿ ಮನೆಗೆ ವಾಪಸಾದಾಗ ಬರುತ್ತದೆ! ಅದುವರೆಗೆ ದುಃಖ, ಕಾತರ, ಆತಂಕಗಳನ್ನು ಕಟ್ಟಿಹಾಕಿದ್ದ ಸರಪಳಿಯನ್ನು ಬಿಚ್ಚಿಸಿದಾಗ, ಇನ್ನು ಈತ/ಈಕೆ ಕ್ಷೇಮವೆಂಬ ಭಾವನೆ ಬಂದಾಗ ಕಣ್ಣೀರು ಬರುತ್ತದೆ. ಇದು ಆನಂದಬಾಷ್ಪ.

ನಮ್ಮ ಮಾನಸಿಕ ಪ್ರಪಂಚದಲ್ಲಿ ನಾವೆಲ್ಲ ಸ್ವಲ್ಪವಾದರೂ ಸ್ವಾರ್ಥಿಗಳು, ಬೇಡಿಕೆಯಿಡುವವರು ಮತ್ತು ಸಹಾಯಯಾಚಕರು. ಸುಖಾಂತ್ಯದಲ್ಲಿ ನಾವು ಅಳುವುದು ನಮಗಾಗಿಯೇ ವಿನಃ ಇನ್ನೊಬ್ಬರಿಗಾಗಿ ಅಲ್ಲ. ಇದರರ್ಥ ಇನ್ನೊಬ್ಬರ ಸುಖ ಕಂಡು ಸಂತೋಷಪಡುವ ಸ್ವಭಾವ ನಮ್ಮಲ್ಲಿಲ್ಲವೆಂದಲ್ಲ. ಸುಖಾಂತ್ಯದಲ್ಲಿ ನಮಗೋಸ್ಕರ ನಾವೇ ಕಣ್ಣೀರು ಸುರಿಸುವುದು ಬದುಕಿನಲ್ಲಿ ಸರಳತೆ, ಪ್ರೀತಿ, ಸ್ನೇಹಗಳು ಸಾಧ್ಯವೆಂಬ ನಮ್ಮ ಆದರ್ಶಕಲ್ಪನೆ ಸಾಕಾರವಾದಾಗ ಮತ್ತು ಇದು ಬರೇ ಸಾಧ್ಯವಲ್ಲ, ಕಷ್ಟಸಾಧ್ಯವೆಂಬ ಸತ್ಯತೆಯ ಅರಿವಾದಾಗ !

ಕಥೆ ಓದಿದಾಗ, ಸಿನೆಮಾ ನೋಡುವಾಗ ನಾನೂ ಕಣ್ಣೀರು ಸುರಿಸುವವನೇ. ಇದು ಯಾಕೆ ಹೀಗೆ ಎಂಬ ಕುತೂಹಲದಿಂದ ಒಂದಿಷ್ಟು ಪುಸ್ತಕಗಳಲ್ಲಿ ಹುಡುಕಿ ವಿಷಯ ಸಂಗ್ರಹ ಮಾಡಿ ಇದನ್ನು ಬರೆದಿದ್ದೇನೆ. ನಿಮಗೆ ಏನನಿಸುತ್ತದೆ ಈ ವಿಷಯದ ಬಗ್ಗೆ? ನೀವು ಕಣ್ಣೀರು ಸುರಿಸಿದ್ದಿದೆಯೇ? ನಿಮ್ಮ ಅನುಭವವೇನು, ಬರೆಯಿರಿ. ವಿಳಾಸ : srivathsajoshi@yahoo.com

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more