ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹಾಸ್ಯಾಸ್ಪದ’ ಸಬ್ಜೆಕ್ಟಿನ ಸಬ್ಜೆಕ್ಟಿವ್‌ ಎಗ್‌ಜಾಮ್‌!

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

ಜನರಲ್ಲಿ ಹಾಸ್ಯಪ್ರಜ್ಞೆ ಕಡಿಮೆಯಾಗುತ್ತಿರಬಹುದು, ಆದರೆ ಹಾಸ್ಯಾಸ್ಪದ ಸಂಗತಿಗಳಿಗೆ, ವಾರ್ತೆಗಳಿಗೇನೂ ಕೊರತೆಯಿಲ್ಲ . ‘ಹಾಸ್ಯಾಸ್ಪದ’ ಎಂಬ ವಿಷಯದ ಮೇಲೆ ಎರಡೂವರೆ ಗಂಟೆ ಅವಧಿಯ, ನೂರು ಮಾರ್ಕುಗಳ ಪರೀಕ್ಷೆ ತೆಗೆದುಕೊಳ್ಳಬೇಕೆಂದರೆ? ಅಯ್ಯೋ, ಈಗಿನ ಕಾಲದಲ್ಲಿ ಎಲ್ಲ ಒಬ್ಜೆಕ್ಟಿವ್‌ ಎಕ್ಸಾಂಗಳನ್ನು ಅಟೆಂಡ್‌ ಮಾಡಿ ಮಾಡಿ ವಿವರವಾದ ಉತ್ತರಗಳನ್ನು ಬರೆಯುವುದು ಹೇಗೆಂದು ಮರೆತೇ ಹೋಗಿದೆ ಅಲ್ಲವೇ? ಚಿಂತಿಸಬೇಡಿ, ‘ಹಾಸ್ಯಾಸ್ಪದ’ ಸಬ್ಜೆಕ್ಟಿನ ಸಬ್ಜೆಕ್ಟಿವ್‌ ಎಗ್‌ಜಾಮ್‌ಗೆ ಅಣಿಯಾಗಲು, ಪರೀಕ್ಷಾಪೂರ್ವ ಸಿದ್ಧತೆಗೆ ನೆರವಾಗಲು ಇಲ್ಲಿ ಮಾದರಿ ಪ್ರಶ್ನೆಪತ್ರಿಕೆಯಾಂದನ್ನು ಉತ್ತರಗಳ ಸಮೇತ ಕೊಡಲಾಗಿದೆ. ಪರಾಂಬರಿಸುವುದು.

* * *

1) ‘ಸದ್ಯಕ್ಕೆ ಭಾರತದಲ್ಲಿ ಮಹಿಳೆಯರ ಸ್ಥಾನಮಾನ’ ಕುರಿತು ಲಘುಟಿಪ್ಪಣಿ ಬರೆಯಿರಿ.

Hasyaspada Exam !ಉ: ಭಾರತದಲ್ಲಿ ಮಹಿಳೆಯರ ಸ್ಥಾನಮಾನ ಸದ್ಯದ ಮಟ್ಟಿಗೆ ಅಷ್ಟೇನೂ ಚೆನ್ನಾಗಿಲ್ಲವೆಂದೇ ಹೇಳಬಹುದು. ರಾಷ್ಟ್ರಪತಿಯಾಗಿರುವವರ ಹೆಂಡತಿ(ರಾಷ್ಟ್ರಪತ್ನಿ?)ಯನ್ನು First Lady ಎಂದು ಕರೆಯುವುದು ವಾಡಿಕೆ. ಈಗಿನ ರಾಷ್ಟ್ರಪತಿ ಕಲಾಂ ಸಾಹೇಬರು ಬ್ರಹ್ಮಚಾರಿಗಳಾದ್ದರಿಂದ First Lady ಎಂದು ಕರೆಯಲ್ಪಡಬೇಕಾದ ಮಹಿಳೆಯೇ ಇಲ್ಲ ! ಹೋಗಲಿ ಬಿಡಿ, ಪ್ರಧಾನ ಮಂತ್ರಿಯ ಸಹಧರ್ಮಿಣಿಯನ್ನು First Lady ಎಂದು ಗೌರವಿಸೋಣವೆಂದರೆ ಈಗಿನ ಪ್ರಧಾನಿ ಅಟಲ್‌ಜೀಯವರೂ ಬ್ರಹ್ಮಚಾರಿ! ಅಂದಮೇಲೆ, ನಾರಿ ಜಾಗೃತಿಯವರು ನಡೆಸಬೇಕಾಗಿದೆ ತಯಾರಿ!ಟ

2) ‘ಯಾದವರೊಂದಿಗೆ ಬೇಟೆಗೆ ಹೋದನು ಕೃಷ್ಣನು ಕಾಡಿನಲಿ...’ - ಸಂದರ್ಭ ಸಹಿತ ವಿವರಿಸಿ (Explain with reference to context.)

ಉ: ಗಣೇಶಚೌತಿಯ ದಿನ ಮೈಕಾಸುರ ನೂರಾಹದಿನೇಳು ಬಾರಿ ಅರಚುವ ‘ಭಾದ್ರಪದ ಶುಕ್ಲದ ಚೌತಿಯಂದು...’ ಶ್ಯಮಂತಕೋಪಾಖ್ಯಾನ ಹಾಡಿನಲ್ಲಿ ಬರುವ ಸಾಲುಗಳಿವು. ಅದರೆ ಈಗಿನ ಸಂದರ್ಭಕ್ಕೆ ಸರಿಯಾಗಿ ಇದನ್ನು ಹೀಗೆ ಅಳವಡಿಸಿಕೊಳ್ಳಬಹುದು. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ವೀರಪ್ಪನ್‌ನನ್ನು ಹಿಡಿಯಲು ತಾವು ಸಹಾಯ ಮಾಡುವುದಾಗಿ ಬಿಹಾರದಿಂದ ಲಾಲೂಪ್ರಸಾದ್‌ ಯಾದವ್‌ ಮತ್ತು ಉತ್ತರಪ್ರದೇಶದಿಂದ ಮುಲಾಯಂ ಸಿಂಗ್‌ ಯಾದವ್‌ - ಇವರಿಬ್ಬರೂ ಕರ್ನಾಟಕ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣರಿಗೆ ಸಹಾಯಹಸ್ತ ನೀಡುತ್ತಾರೆಂದಿಟ್ಟುಕೊಳ್ಳೋಣ. ಆದರೆ ಅವರದೊಂದು ಷರತ್ತು ಏನೆಂದರೆ ಮುಖ್ಯಮಂತ್ರಿ ಕೃಷ್ಣ ಮತ್ತು ತಾವಿಬ್ಬರು - ಹೀಗೆ ಒಟ್ಟು ಮೂರು ಮಂದಿ ಮಾತ್ರ ಮಲೆಮಹದೇಶ್ವರ ಬೆಟ್ಟದ ಕಡೆಗೆ ವೀರಪ್ಪನ್‌-ಬೇಟೆಗೆ (ಭೇಟಿಗೆ?) ಹೋಗಬೇಕು. ಸರಿ, ಒಪ್ಪಿಗೆ ಸೂಚಿಸಿ ಮೂವರೂ ಹೊರಡುತ್ತಾರೆ.

ಮಾರನೆಯ ದಿನ ಕನ್ನಡ ದಿನಪತ್ರಿಕೆಗಳಲ್ಲಿ ಮುಖಪುಟ ಸುದ್ದಿ - ‘ಯಾದವರೊಂದಿಗೆ ಬೇಟೆಗೆ ಹೋದನು ಕೃಷ್ಣನು ಕಾಡಿನಲಿ...’!

3) ಜಗವನೆಲ್ಲ ಬೆಳಗಿಸುವ ಸೂರ್ಯನನ್ನು ಯಾವಯಾವ ಹೆಸರುಗಳಿಂದ ಕರೆಯುತ್ತಾರೆ? ನಿಮ್ಮ ಉತ್ತರವನ್ನು ಪುಷ್ಟೀಕರಿಸಿ.

Hasyaspada Exam !ಉ: ಸೂರ್ಯನಿಗೆ ಇರುವ ಹಲವು ಹೆಸರುಗಳಲ್ಲಿ ಎರಡು - ‘ದಿನಕರ’ ಮತ್ತು ‘ರವಿ’. ಇವೆರಡೂ ಒಂದೇ ಅರ್ಥವನ್ನು ನೀಡುತ್ತವೆಂದು ಹೇಗೆ ಪುಷ್ಟೀಕರಿಸಬಹುದೆಂದರೆ ನಿವೃತ್ತ ಪೊಲೀಸ್‌ ಅಧಿಕಾರಿ ಸಿ.‘ದಿನಕರ್‌’ ಬರೆದ Rajkumar - Veerappans Prize Catch ಪುಸ್ತಕದ ಕನ್ನಡ ಅವತರಣಿಕೆಯೇ ‘ರವಿ’ ಬೆಳಗೆರೆಯವರು ಬರೆದ ‘ರಾಜರಹಸ್ಯ’. ಇವರಿಬ್ಬರೂ ಕೂಡ ಡಾ।ರಾಜ್‌ ಅಪಹರಣದ ಒಳಹೊರಗುಗಳ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಆದರೆ ಈಗ ಮಾತ್ರ ಕೆಲವರು ಸೂರ್ಯನ ಮೇಲೆ ಉಗುಳುವ ಕೆಲಸದಲ್ಲಿ ತೊಡಗಿದ್ದಾರೆ.

4) ‘ಗರ ಬಡಿಯುವುದು’ ಎಂಬುದರ ಬಗ್ಗೆ ಒಂದು ಪುಟಕ್ಕೆ ಮೀರದಂತೆ ಪ್ರಬಂಧ ಬರೆಯಿರಿ.

ಉ: ಕನ್ನಡಕಸ್ತೂರಿ.ಕಾಂ ಡಿಕ್ಷನರಿ ಪ್ರಕಾರ ‘ಗರ’ ಎಂದರೆ ಪಿಶಾಚಿ, ದೆವ್ವ, ದುಷ್ಟಶಕ್ತಿ ಇತ್ಯಾದಿ. ಗರ ಬಡಿಯುವುದು ಎಂದರೆ ದೆವ್ವದ ಕಾಟ ಎಂದೂ ಹೇಳಬಹುದು. 21ನೇ ಶತಮಾನದಲ್ಲಿ ದೆವ್ವಗಳೆಲ್ಲ ಇಲ್ಲ ಬಿಡಿ, ಆದರೆ ಇಲ್ಲಿ ಅಮೆರಿಕದಲ್ಲಿ ಹೊಸದೊಂದು ನಮೂನೆಯ ಗರ ಬಡಿಯುವಿಕೆ ಶುರುವಾಗಿದೆ. ಅದೇನೆಂದರೆ,

AKKA= ಅಮೆರಿಕ ಕನ್ನಡ ಕೂಟಗಳ ಆಗರ ಎಂಬುದನ್ನು ನಾವೆಲ್ಲ ಎಲ್ಲೋ ಕೇಳಿದ್ದೇವೆ. ಇತ್ತೀಚೆಗೆ ಈ ಅಕ್ಕ ಇಬ್ಭಾಗವಾಯ್ತೆಂದೂ ಸುದ್ದಿ. ಎರಡನೆ ಅಕ್ಕ ಬಣದವರು AMMA= ‘ಅಮೆರಿಕನ್ನಡ ಮಹಿಳೆಯರ ಮತ್ತು ಮಕ್ಕಳ ಆಗರ’ ವನ್ನೂ ಆರಂಭಿಸಲಿದ್ದಾರೆಂದು ವದಂತಿ. ಹೀಗೇ ಇನ್ನೂ ಕೆಲ ಆಗರಗಳನ್ನು ನಿರೀಕ್ಷಿಸಬಹುದೆನ್ನಿಸುತ್ತದೆ.

AJJA= ಅಮೆರಿಕನ್ನಡ ಜಾಣ ಜಾಣೆಯರ ಆಗರ (ಪಿ.ಲಂಕೇಶ್‌ ತನ್ನ ಪತ್ರಿಕೆಯನ್ನು ಜಾಣಜಾಣೆಯರ ಪತ್ರಿಕೆ ಎಂದು ಗುರುತಿಸಿದ್ದರು. ಅಮೆರಿಕನ್ನಡ ಜಾಣಜಾಣೆಯರು ಎಂದರೆ ಅಕ್ಕ ಇಬ್ಭಾಗದ ವಿಷಯದಲ್ಲಿ , ‘ಅಕ್ಕ ನಿನ್ನ ಮಾತ ಕೇಳಿ... ಚಿಕ್ಕದಾಗಿ ವ್ಯಥೆಯ ಪಟ್ಟೆ... ಅಕ್ಕ ನೀನಿಬ್ಭಾಗವಾಗಿ... ದಿಕ್ಕುತೋಚದೆ ಹೋಯಿತಲ್ಲೋ....’ ಎಂದು ವ್ಯರ್ಥಾಲಾಪ ಮಾಡದವರು)

APPA= ಅಮೆರಿಕನ್ನಡ ಪಾಪ ಪಾಂಡುಗಳ ಆಗರ (‘ಪಾಪ ಪಾಂಡು’ ಈಟಿವಿ ಚಾನೆಲ್‌ನಲ್ಲಿ ಬರುವ ಒಂದು ಜನಪ್ರಿಯ ಹಾಸ್ಯ ಧಾರಾವಾಹಿ. ಮುಗ್ಧತೆಯ ಸುತ್ತ ಗಿರಕಿ ಹೊಡೆಯುವ ಕಾಮಿಡಿ. ಅಮೆರಿಕನ್ನಡಿಗರಲ್ಲೂ ಪಾಪ ಪಾಂಡುಗಳಿದ್ದಾರೆ. ಅವರೆಲ್ಲರ ಹಿತಾಸಕ್ತಿಗಳಿಗಾಗಿ ಒಂದು ಆಗರ).

AVVA= ಅಮೆರಿಕನ್ನಡ ವೀರ ವನಿತೆಯರ ಆಗರ (‘ಪ್ರಜಾಮತ’ದಲ್ಲಿ ಬರುತ್ತಿದ್ದ ಹುಬ್ಳೀಕರ್‌ ವ್ಯಂಗ್ಯಚಿತ್ರಗಳಲ್ಲಿ ಲಟ್ಟಣಿಗೆ ಹಿಡಿದು, ಸೆರಗು ಕಟ್ಟಿ , ಚಕಮಕ ಕಿವಿಯೋಲೆಗಳುಳ್ಳ ನಾರೀಮಣಿಯ ಚಿತ್ರ ‘ವೀರ ವನಿತೆ’ ಎಂದರೇನೆಂಬುದು ನಿಮ್ಮ ಕಲ್ಪನೆಗೆ ಬರಲು ಒಂದು ಸಂಕೇತ ಅಷ್ಟೆ)

ANNA= ಅಮೆರಿಕನ್ನಡ ‘ನಾನು ನನ್ನದು’ ಗಳ ಆಗರ (ಇಲ್ಲಿ ನಾನು ನನ್ನದು ಎಂದರೆ ತೋರಿಕೆಗೆ ಕನ್ನಡದ ಏಳಿಗೆಗೆ ನಾನೂ ಶ್ರಮವಹಿಸಬೇಕು, ಈ ಕರ್ತವ್ಯ ನನ್ನದೂ ಆಗಿರಬೇಕು ಎಂಬ ಮಮಕಾರ, ಆದರೆ ನಿಜವಾಗಿ ನಾನೇ ಎಲ್ಲ ನನ್ನಿಂದ ಎಲ್ಲ... ಎದುರಿಗೆ ನಿಲಬಲ್ಲ ಸರಿಸಮರಾರಿಲ್ಲ... ಎಂಬ ಅಹಂಕಾರ)!

ಈ ಎಲ್ಲ ಹೊಸ ಹೊಸ ಆಗರಗಳನ್ನು ನೋಡಿ ‘ಆಗರ ಈಗರ ಎಂದು ಧ್ಯಾನಿಸುವಾಗ ಗರ ಬಡಿದಂತಾಯ್ತೋ...’

5) ನಿಮಗಿಷ್ಟವಾಗದ ವಿಷಯದ ಬಗ್ಗೆ ಒಂದು ಕವಿತೆ ಬರೆಯಿರಿ.

ಕನ್ನಡದ ಸ್ಥಿತಿಗತಿ ಹೇಗಿದೆ ಅಮೆರಿಕದಲಿ
ಕಾರ್ಯಾಗಾರ ನಡೆಯಿತು ಬೆಂಗಳೂರಿನಲಿ
ಕಿಡಿಕಾರಿದರು ಒಬ್ಬಿಬ್ಬರು ತಮ್ಮ ಭಾಷಣಗಳಲಿ
ಕೀಟಲೆಯ ಮಾತು ಪ್ರಕಟವಾಯಿತು ಅಂತರ್ಜಾಲದಲಿ
ಕುರುಡರು ಮುಟ್ಟಿದ ಆನೆಯಂತಾಯ್ತು ಹೋಲಿಕೆಯಲಿ
ಕೂಪ ಮಂಡೂಕಗಳಂತೆ ವಟಗುಟ್ಟಿದರು ಮಾತಿನಲಿ
ಕೃತಾರ್ಥರಾದರು ಪಾಪಪ್ರಜ್ಞೆಯೆಂದು ಕರೆದು ಸರ್ಕಾಸ್ಟಿಕಲಿ
ಕೆಟ್ಟ ಉದಾಹರಣೆಯಾಯ್ತು ಕನ್ನಡಪ್ರೀತಿಯ ಅರ್ಥೈಸುವಿಕೆಯಲಿ
ಕೇಳುವ ಕಿವಿಗಳೂ ಇರಬೇಕು ಮಾತೊಂದ ಹೇಳುವವರಲಿ
ಕೈಗಳೆರಡೂ ಮುಖ್ಯ ಚಪ್ಪಾಳೆಯ ಸದ್ದಿನಲಿ
ಕೊನೆಗೊಳ್ಳಲಿ ಚರ್ಚೆ ಎಂಬಾಸೆ ಎಲ್ಲರ ಹೃದಯಗಳಲಿ
ಕೋಳಿಜಗಳವೆಂದು ಬಣ್ಣಿಸಿದರು ಸಂಪಾದಕರು ಲೇಖನಮಾಲೆಯಲಿ
ಕೌತುಕದಿಂದಲೇ ಓದಿ ತಮ್ಮದನ್ನೂ ಸೇರಿಸಿದರು ಓದುಗರು ಓಲೆಯಲಿ
ಕಂದನ ಅವಸ್ಥೆ ಕಂಡು ಮರುಗಿದಳು ಸಂಸ್ಕೃತಮಾತೆ ಮನದಲಿ
ಕಃ ಸಃ ಕನ್ನಡಿಗಃ ಎಂದಳು ಕನ್ನಡದ ಬಗ್ಗೆ ಕನಿಕರದಲಿ

* * *

ಮಾದರಿ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ನೋಡಿ ಹಾಸ್ಯಾಸ್ಪದ ವಿಷಯದ ಸಬ್ಜೆಕ್ಟಿವ್‌ ಪರೀಕ್ಷೆಗೆ ಕುಳಿತುಕೊಳ್ಳುವ ಧೈರ್ಯ ನಿಮಗೆ ಬಂದಿರಬಹುದೆಂದು ನನ್ನ ಎಣಿಕೆ. ಆದರೂ ಸದ್ಯಕ್ಕೆ ಒಬ್ಜೆಕ್ಟಿವ್‌ ಮಾದರಿಯ ಈ ಪ್ರಶ್ನೆಗೆ ಉತ್ತರಿಸಿ, ಸಾಕು.

ಪ್ರಶ್ನೆ: ಈ ಸಲದ ವಿಚಿತ್ರಾನ್ನ ಓದಿದಾಗ

ಅ) ನಗು ಬಂತು
ಆ) ಅಳು ಬಂತು
ಇ) ನಗುವುದೋ ಅಳುವುದೋ ನೀವೇ ಹೇಳಿ ಅಂತನ್ನಿಸ್ತು
ಈ) ಏನೇನೂ ಆಗಲಿಲ್ಲ

ಉತ್ತರ ಕಳಿಸಬೇಕಾದ ವಿಳಾಸ: [email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X