• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಪಿಂಗ್‌ ಕಾರ್ಟ್‌ - ಕೊಳ್ಳುಬಾಕತನದ ಬಂಡಿ

By Staff
|
Srivathsa Joshi *ಶ್ರೀವತ್ಸ ಜೋಶಿ

Shopping Cart‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ...’ ಎಂದಿದ್ದಾರೆ ಡಿವಿಜಿಯವರು. ಇಲ್ಲಿ ಅಮೆರಿಕದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಬಂಡಿಯಾಂದಿದೆ, ಅದೇ ‘ಶಾಪಿಂಗ್‌ ಕಾರ್ಟ್‌’. ವಾರಕ್ಕೊಮ್ಮೆ ಗ್ರೋಸರಿ ಸ್ಟೋರ್‌ನಲ್ಲಿ, ತಿಂಗಳಿಗೊಮ್ಮೆ ಅಥವಾ ಎರಡು ಸಲ ‘ವಾಲ್‌-ಮಾರ್ಟ್‌’ನಂತಹ ಡಿಪಾರ್ಟ್‌ಮೆಂಟಲ್‌ ಸ್ಟೋರ್‌ಗಳಲ್ಲಿ ಅಥವಾ ಸಾಮ್ಸ್‌ ಕ್ಲಬ್‌/ ಕೋಸ್ಟ್‌ಕೋನಂತಹ ರಖಂ ಮಳಿಗೆಗಳಲ್ಲಿ ಪ್ರವೇಶಿಸಿದೊಡನೆ ನಮ್ಮ ಕೈಸೇರುವ ಬಂಡಿ, ಖರೀದಿ ಮಾಡಿದ್ದನ್ನು ತುಂಬಿಸಿಕೊಳ್ಳುತ್ತ ಚೆಕ್‌ಔಟ್‌ ಮಾಡಿ ಪಾರ್ಕಿಂಗ್‌ಲಾಟ್‌ನಲ್ಲಿನ ಕಾರಿಗೆ ವರ್ಗಾಯಿಸುವವರೆಗೆ ನಮ್ಮೊಂದಿಗಿರುತ್ತದೆ. ಅಲ್ಲಿ ವಿದಾಯ ಹೇಳಿದ ಮೇಲೆ ಬಂಡಿ ನಮಗೆ ಬೇಕಾಗುವುದು ಮುಂದಿನ ಸಲದ ಶಾಪಿಂಗ್‌ ವೇಳೆಗೇ.

ಶಾಪಿಂಗ್‌ ಕಾರ್ಟ್‌ ಅನ್ನೋದು ಇಲ್ಲದಿರುತ್ತಿದ್ದರೆ ಹೇಗಿರುತ್ತಿತ್ತು ? ಓಹ್‌ ಮೈ ಗಾಡ್‌... ಮತ್ತೆ ಗ್ರೋಸರಿ ಬ್ಯಾಗ್‌ಗಳನ್ನೆಲ್ಲ ಅದ್‌ಹ್ಯಾಂಗಪ್ಪಾ ಹೊತ್ತ್‌ಕೊಂಡು ಬರೋದು...? ಗಿರಾಕಿಗಳಿಗೆ ಇಷ್ಟು ಅನುಕೂಲವಾಗಲೆಂದು ತಾನೆ ಬಂಡಿಗಳಿರುವುದು? ಎಂದು ನೀವೆನ್ನಬಹುದು. ತಾಳಿ, ಶಾಪಿಂಗ್‌ ಕಾರ್ಟ್‌ ಅನ್ನುವ ಕಾನ್ಸೆಪ್ಟ್‌ ಆರಂಭವಾದದ್ದು ನೀವೆಂದುಕೊಂಡಂತೆ ಗ್ರಾಹಕರ ಅನುಕೂಲಕ್ಕಲ್ಲ, ಬದಲಿಗೆ ಸ್ಟೋರ್ಸ್‌ ಮಾಲಿಕರ ಲಾಭಕೋರತನದ ದೂ(ದು)ರಾಲೋಚನೆಯ ಫಲವಾಗಿ ಎಂದರೆ ನಂಬುತ್ತೀರಾ? ಇಲ್ಲಿದೆ ಓದಿ ಶಾಪಿಂಗ್‌ ಕಾರ್ಟ್‌ನ ಕಥೆ.

ಕಳೆದ ಎರಡು ಮೂರು ವರ್ಷಗಳಲ್ಲಿ ಅಮೆರಿಕದಲ್ಲಿ ಆಗಿರುವಂತೆ ‘ಇಕಾನಮಿ ಡೌನ್‌ಟರ್ನ್‌’, ಈ ಹಿಂದೆ ಸುಮಾರು 70 ವರ್ಷಗಳ ಕೆಳಗೆಯೂ ಒಮ್ಮೆ ಆಗಿತ್ತು. 30ರ ದಶಕದ ಆ ‘ಡಿಪ್ರೆಷನ್‌’ ಅಮೆರಿಕದ ರಾಜಕೀಯ-ಆರ್ಥಿಕ-ಸಾಮಾಜಿಕ ಸ್ಥಿತಿಯ ನಕ್ಷೆಯಲ್ಲೊಂದು ಕಪ್ಪುಚುಕ್ಕೆ. ಜನಸಾಮಾನ್ಯರು ಆಹಾರಪದಾರ್ಥಗಳನ್ನು ಖರೀದಿಸುವಾಗ ಸಮೇತ ಅಳೆದು-ಸುರಿದು ನೋಡಿ ತೀರಾ ಅಗತ್ಯವೆನಿಸಿದ್ದನ್ನು ಮಾತ್ರ ಕೊಳ್ಳುವಂಥ ಪರಿಸ್ಥಿತಿ ಬಂದಿತ್ತು. ಗ್ರೋಸರಿ ಸ್ಟೋರ್‌ ಮಾಲೀಕರ ಆದಾಯವೆಂದರೆ ಮಾರಾಟವಾದ ವಸ್ತುಗಳ ಮುಖಬೆಲೆಯ ಮೇಲೆ ನಿರ್ಧಾರವಾಗುವ ಕಮಿಷನ್‌ ಅಷ್ಟೆ. ಗಿರಾಕಿಗಳೆಲ್ಲ ಕಡಿಮೆಬೆಲೆಯ ವಸ್ತುಗಳನ್ನಷ್ಟೇ ಆರಿಸಿದರೆ ಸಹಜವಾಗಿಯೇ ಕಮಿಷನ್‌ಗೆ ಖೋತಾ; ಸ್ಟೋರ್ಸ್‌ ಮಾಲೀಕರು ಬಾಗಿಲು ಮುಚ್ಚಬೇಕಾಗಬಹುದು. ಬಹಳಷ್ಟು ಗ್ರೋಸರಿ ಸ್ಟೋರ್ಸ್‌ ಈ ರೀತಿ ದಿವಾಳಿಯಾದುವು ಕೂಡ.

Shopping Cartಆವಾಗಿನ್ನೂ ಶಾಪಿಂಗ್‌ಕಾರ್ಟ್‌ಗಳಿರಲಿಲ್ಲ , ಆದರೆ ಕೈಯಲ್ಲಿ ಹಿಡಿದುಕೊಳ್ಳುವ ಬಾಸ್ಕೆಟ್‌ಗಳಷ್ಟೇ ಇದ್ದುವು. ಬಾಸ್ಕೆಟ್‌ ತುಂಬಿ ಹೊತ್ತುಕೊಂಡು ತಿರುಗಲು ಭಾರವೆನಿಸಿದೊಡನೆ ಗಿರಾಕಿಗಳು ಸಾಮಾನನ್ನೆಲ್ಲ ಚೆಕ್‌ಔಟ್‌ ಮಾಡಿಸಿ ಸ್ಟೋರಿಂದ ಹೊರನಡೆಯುತ್ತಿದ್ದರು. ಗಿರಾಕಿಗಳ ಈ ಲಿಮಿಟೇಷನನ್ನು ಸೂಕ್ಷ್ಮವಾಗಿ ಗಮನಿಸಿದನು, ಓಕ್ಲಹೋಮದ ಗ್ರೋಸರಿ ಸ್ಟೋರ್‌ ಒಂದರ ಮಾಲೀಕ ಸಿಲ್ವನ್‌ ಗೋಲ್ಡ್‌ಮನ್‌ ಎಂಬಾತ. 1936ರಲ್ಲಿ ತನ್ನ ಅಂಗಡಿಯ ಉದ್ಯೋಗಿ ಫ್ರೆಡ್‌ ಯಂಗ್‌ನ ನೆರವಿನೊಂದಿಗೆ ‘ಈಸಿಚೇರ್‌’ ಅನ್ನು ಹೋಲುವ ರಚನೆಯಾಂದಕ್ಕೆ ಗಾಲಿಗಳನ್ನು ಜೋಡಿಸಿ ಅದರ ಕೈಗಳೆರಡರ ಮೇಲೆ ಬಾಸ್ಕೆಟ್‌ಗಳನ್ನು ಫಿಕ್ಸ್‌ ಮಾಡಿ ಗಿರಾಕಿಗಳಿಗೆ ‘ನೀವಿದನ್ನು ಉಪಯೋಗಿಸಬಹುದು, ನಿಮ್ಮ ಖರೀದಿಗೆ ಅನುಕೂಲವಾಗುತ್ತದೆ...’ ಎಂದು ಪುಸಲಾಯಿಸಲು ನೋಡಿದ. ಆದರೆ ಆ ವಿಚಿತ್ರ ತಳ್ಳುಗಾಡಿಯನ್ನು ಜನ ಸ್ವೀಕರಿಸಲಿಲ್ಲ. ಮತ್ತೆ ಭಾರವಾದರೂ ಸೈ, ಒಂದೇ ಬಾಸ್ಕೆಟ್‌ ತುಂಬ ಖರೀದಿ ಮಾಡಿ ಹೊರಬರುವುದು ಮುಂದುವರೆಯಿತು.

ಸಿಲ್ವನ್‌ ಗೋಲ್ಡ್‌ಮನ್‌ ತನ್ನ ಪ್ರಯತ್ನವನ್ನು ಬಿಡಲಿಲ್ಲ. ಈಸಿಚೇರ್‌ನ ಮಾರ್ಪಾಡಿನ ‘ಲಟಾರಿ’ ಬಂಡಿಗಳ ಬದಲಿಗೆ ಒಳ್ಳೆಯ ಚಂದದ ಬಂಡಿಗಳನ್ನು ಮಾಡಿಸಿದ; ಈ ಬಂಡಿಗಳನ್ನು ಹೇಗೆ ಉಪಯೋಗಿಸಬಹುದೆಂದು ಗ್ರಾಹಕರಿಗೆ ತೋರಿಸಲು ಒಂದೆರಡು ಜನರನ್ನಿಟ್ಟುಕೊಂಡ. ಸ್ಟೋರ್‌ನ ಬಾಗಿಲಲ್ಲೇ ಗಿರಾಕಿಗೊಂದು ಬಂಡಿ ನೀಡಲು ಒಬ್ಬ ಸಿಬ್ಬಂದಿಯನ್ನು ನೇಮಿಸಿದ. ಈಗ ಅವನ ಯೋಜನೆ ಗ್ರಾಹಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗತೊಡಗಿತು. ಶಾಪಿಂಗ್‌ ಮಾಡುವುದೆಂದರೆ ಕಾರ್ಟ್‌ ಬೇಕೇಬೇಕು ಎನ್ನುವಷ್ಟರಮಟ್ಟಿಗೆ ಗ್ರಾಹಕರ ಪ್ರಿಫರೆನ್ಸ್‌ ಬದಲಾಯಿತು! ಸಿಲ್ವನ್‌ ಗೋಲ್ಡ್‌ಮನ್‌ನ ಕ್ಯಾಷ್‌ಬಾಕ್ಸ್‌ನಲ್ಲಿ ಲಾಭಾಂಶ ಹೆಚ್ಚಾಗತೊಡಗಿತು. ಏಕೆಂದರೆ ಒಂದೇ ಬಾಸ್ಕೆಟ್‌ನ ತುಂಬ ಸಾಮಾನನ್ನು ಖರೀದಿಸುತ್ತಿದ್ದ ಜನ ಈಗ ಬಂಡಿಯ ಅನುಕೂಲದಿಂದಾಗಿ ಹೆಚ್ಚು ಹೆಚ್ಚು ಖರೀದಿಸತೊಡಗಿದರು. ಒಂದು ನಮೂನೆಯ ಕೊಳ್ಳುಬಾಕತನ ಜನರಲ್ಲಿ ಹುಟ್ಟಿಕೊಂಡಿತು. ಗೋಲ್ಡ್‌ಮನ್‌ಗೆ ಬೇಕಾದದ್ದೂ ಅದೇ ಆಗಿತ್ತು, ಅವನ ಖಜಾನೆ ಗೋಲ್ಡ್‌ಮೈನ್‌ ಆಯಿತು! 1984ರಲ್ಲಿ ಅವನು ಸತ್ತಾಗ ಆತನ ಒಟ್ಟು ಆಸ್ತಿಯ ಮೌಲ್ಯ 400 ಮಿಲಿಯನ್‌ ಡಾಲರ್‌ಗಳಷ್ಟಾಗುವಂತಿತ್ತಂತೆ!

ಕಾರ್ಟ್‌ ದೂಡಿಕೊಳ್ಳುತ್ತ ಶಾಪಿಂಗ್‌ಮಾಡುವ ಎವರೇಜ್‌ ಗ್ರಾಹಕನೊಬ್ಬನ ಮನೋಧರ್ಮವನ್ನು ಅವಲೋಕಿಸಿ. ಮನೆಯಿಂದ ಹೊರಡುವಾಗ ಆತ/ಆಕೆ ಇಂತಿಂಥ ಐಟಂಗಳೆಲ್ಲ ಬೇಕು ಎಂದು ಪಟ್ಟಿ ಮಾಡಿಕೊಂಡು ಬಂದಿದ್ದರೂ ಪ್ರತಿಸಲವೂ ಪಟ್ಟಿಯಲ್ಲಿದ್ದದ್ದನ್ನು ಮಾತ್ರವಲ್ಲದೆ, ‘ಓ ಇದು ಚೆನ್ನಾಗಿದೆ, ಟ್ರೈ ಮಾಡೋಣವಂತೆ...’ ಎಂದೋ, ‘ಹೊಸತು’, ‘ಈಗ ಇನ್ನಷ್ಟು ಪರಿಣಾಮಕಾರಿ...’, ‘ಒಂದು ಕೊಂಡರೆ ಇನ್ನೊಂದು ಉಚಿತ...’ ಮೊದಲಾದ ಜಾಹೀರಾತುಗಳ ‘ಬಾ ನೊಣವೆ ಬಾ ನೊಣವೆ ಬಾ ನನ್ನ ಬಲೆಗೆ...’ ಮೋಡಿಗೆ ಮರುಳಾಗಿಯೋ ಅಂತೂ ಇನ್ನೂ ಒಂದಿಷ್ಟು ಸರಕನ್ನು ಅಷ್ಟು ತುರ್ತಾದ ಅಗತ್ಯವಿಲ್ಲದಿದ್ದರೂ ಬಂಡಿಯಲ್ಲಿ ತುಂಬಿಸಿಕೊಳ್ಳುತ್ತಾನೆ(ಳೆ). ಕಾರ್ಟ್‌ ಅನ್ನೋದು ಇಲ್ಲದಿರುತ್ತಿದ್ದರೆ ಆ ಹೆಚ್ಚುವರಿ ಖರೀದಿ ಆಗುತ್ತಿರಲೇ ಇಲ್ಲ!

Shopping Cart with Babyseatಕೆಲ ಚಾಣಾಕ್ಷ ವ್ಯಾಪಾರಿಗಳು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಟ್‌ಗಳಿಗೆ ‘ಬೇಬಿಸೀಟ್‌’ ಕೂಡ ಅಳವಡಿಸಿ, ‘ನೋಡಿ, ನಿಮ್ಮ ಮಗುವನ್ನು ಕಂಕುಳಲ್ಲಿಟ್ಟು ಕಾರ್ಟ್‌ ದೂಡುವ ಸರ್ಕಸ್‌ ಕೂಡ ನೀವು ಮಾಡುವುದು ಬೇಕಾಗಿಲ್ಲ... ತಕೊಳ್ಳಿ ಈ ಕಾರ್ಟ್‌, ಇಲ್ಲಿ ಹೀಗೆ ಮಗುವನ್ನಿಡಿ...’ ಎಂದು ನಗುನಗುತ್ತ ಪ್ರಲೋಭನೆಗಳನ್ನು ಮುಂದುವರಿಸಿದರು. ಅಂಗವಿಕಲ ಗ್ರಾಹಕರಿಗೆ ಬ್ಯಾಟರಿ-ಚಾಲಿತ ತಳ್ಳುಗಾಡಿಗಳು ಬಂದುವು. ಅಂತೂ ಮಂತ್ರ ಅದೊಂದೇ, ‘ಗಿರಾಕಿಯೇ ಬಾ, ಬಾ, ಇದನ್ನು ತೆಗೆದುಕೋ, ಅದನ್ನು ಖರೀದಿಸು, ಇದೂ ಇರಲಿ ಚೆನ್ನಾಗಿದೆ...!’

ನಷ್ಟ ಅನುಭವಿಸುತ್ತಿದ್ದ ಗ್ರೋಸರಿ ಸ್ಟೋರ್‌ ಮಾಲೀಕನೊಬ್ಬನ ಚಾತುರ್ಯ ಮತ್ತು ಛಲಗಳಿಂದಾಗಿ ಹುಟ್ಟಿಕೊಂಡ ಶಾಪಿಂಗ್‌ಕಾರ್ಟ್‌ ಕಾನ್ಸೆಪ್ಟು ಅಮೆರಿಕದೆಲ್ಲೆಡೆ ಮತ್ತು ಇತರ ದೇಶಗಳಿಗೂ ಹರಡಿಕೊಳ್ಳುವುದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಗ್ರೋಸರಿ ಮತ್ತು ಗೃಹಬಳಕೆಯ ಇನ್ನಿತರ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ, ಗ್ರಾಹಕನ ಖರೀದಿಯ ಚಪಲ (ಕೊಳ್ಳುಬಾಕತನ), ಲಾಭಾಂಶ ಹೆಚ್ಚಿಸಿಕೊಂಡ ಉತ್ಪಾದಕರು, ದಲ್ಲಾಳಿಗಳು ಮತ್ತು ವ್ಯಾಪಾರಿಗಳು... ಹೀಗೆ ಹಣಕಾಸು ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ತಂದಿತು ಶಾಪಿಂಗ್‌ಕಾರ್ಟ್‌ ಎಂದರೆ ಆಶ್ಚರ್ಯವಾಗುತ್ತದಲ್ಲವೆ?

ಇಂಟರ್‌ನೆಟ್‌ ಮೂಲಕ, ಮನೆಯಲ್ಲಿ ಕಂಪ್ಯೂಟರ್‌ ಮುಂದೆ ಕುಳಿತೇ ಖರೀದಿಯ ಅನುಕೂಲದ ಇ-ಕಾಮರ್ಸ್‌ ಕಳೆದ ದಶಕದಲ್ಲಿ ಆರಂಭವಾಯಿತು. ಇಲ್ಲೂ ‘ಶಾಪಿಂಗ್‌ ಕಾರ್ಟ್‌’ ಎನ್ನುವ ಟರ್ಮಿನಾಲಜಿಯೇ ಮುಂದುವರೆಯಿತು. ಮೌಸ್‌ಕ್ಲಿಕ್‌ ಮಾಡಿದರೆ ಆಯ್ತು, ನಮ್ಮ ಖರೀದಿ ಶಾಪಿಂಗ್‌ಕಾರ್ಟ್‌ಗೆ ಸೇರ್ಪಡೆಯಾಗುತ್ತದೆ. ಬಂಡಿ ದೂಡಿಕೊಂಡು ಹೋಗಬೇಕಾದ ಅವಶ್ಯಕತೆಯೂ ಇಲ್ಲಿಲ್ಲ!

ಮುಂದಿನ ಸಲ ಗ್ರೋಸರಿಶಾಪ್‌ನಲ್ಲಿ ಕಾರ್ಟ್‌ ತಳ್ಳುತ್ತಿರುವಾಗ ಅಥವಾ ಇ-ಕಾಮರ್ಸ್‌ ವೆಬ್‌ಸೈಟ್‌ನಲ್ಲಿ Add to cart ಬಟನನ್ನು ಕ್ಲಿಕ್ಕಿಸುವಾಗ ಶಾಪಿಂಗ್‌ಕಾರ್ಟ್‌ನ ಈ ಯಶೋಗಾಥೆಯನ್ನು ನೆನಪಿಸಿಕೊಳ್ಳಿ!

* * *

ಈ ಲೇಖನವೂ ಸೇರಿದಂತೆ ವಿಚಿತ್ರಾನ್ನ ಅಂಕಣದ ಬಗ್ಗೆ ನಿಮ್ಮ ಅನಿಸಿಕೆ, ಸಲಹೆ, ವಿಮರ್ಶೆಗಳನ್ನು srivathsajoshi@yahoo.com ವಿಳಾಸಕ್ಕೆ ಬರೆಯಿರಿ. ಮತ್ತೆ ಭೇಟಿ, ಮುಂದಿನ ಮಂಗಳವಾರ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more