• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಂದಕಿಂತ ಚಂದ ಛಂದಸ್ಸಿನ ಛಂದ...

By Staff
|

Poetry metre evaluator software ?ನೇರವಾಗಿ ವಿಷಯಕ್ಕೆ ಬರೋಣ. ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಬಹುಮುಖ ಪ್ರತಿಭೆಯ ಕನ್ನಡಿಗ ಡಾ। ಕೆ.ಆರ್‌.ಎಸ್‌ ಮೂರ್ತಿಯವರು (ಒಂದೆರಡು ವಿ-ಅಂಚೆಗಳ ವಿನಿಮಯದಷ್ಟು ಮಾತ್ರ ಇದುವರೆಗೆ ನನಗವರ ಪರಿಚಯ ) ‘ಕನ್ನಡ ಛಂದಸ್ಸು ಮಾಪಕ ತಂತ್ರಾಂಶ’ (Poetry metre evaluator software) ಒಂದನ್ನು ನಿರ್ಮಿಸುವ ಬೃಹತ್‌ ಯೋಜನೆಯನ್ನು ಹಾಕಿದ್ದಾರೆ. ಮೂರ್ತಿಯವರು ಈ ಬಗ್ಗೆ ಸಮಾನ ಅಭಿರುಚಿಯ (ಸಾಹಿತ್ಯ-ಸಂಗೀತ-ಕಲಾಭಿಮಾನಿ) ಇಷ್ಟಮಿತ್ರರಿಗೆ ಈಮೈಲ್‌ ಕಳಿಸಿದ್ದಾರೆ. ಮೊಟ್ಟಮೊದಲಾಗಿ ಅವರ ಈ ಆಸ್ಥೆ, ಉತ್ಸಾಹಗಳಿಗೆ ಶುಭಕಾಮನೆಗಳು. ಇಷ್ಟು ಒಳ್ಳೆಯ ಸೃಜನಶೀಲ ಚಟುವಟಿಕೆಯಾಂದು ನಡೆಯುತ್ತಿದೆ ಎಂಬ ಸುದ್ದಿಯನ್ನು ಸಂತಸದಿಂದ ಎಲ್ಲರಿಗೂ ತಿಳಿಸುವುದು ಈ ಸಲದ ವಿಚಿತ್ರಾನ್ನದ ಮುಖ್ಯ ಉದ್ದೇಶ.

ಸುದ್ದಿಯನ್ನು ತಿಳಿಸಿ ಆಯಿತು! ಇನ್ನು ಮಾಮೂಲಿ ಒಗ್ಗರಣೆ ಬೇಕಲ್ಲ, ವಿಚಿತ್ರಾನ್ನ ಅನಿಸಿಕೊಳ್ಳಲು. ಅದು ಹೀಗಿದೆ.

ಛಂದಸ್ಸುಮಾಪಕ ಸಾಫ್ಟ್‌ವೇರ್‌ನ ಟೆಸ್ಟಿಂಗ್‌ಗೋಸ್ಕರ ಛಂದಸ್ಸಿನ ನಿಯಮಗಳನ್ನು ಪಾಲಿಸದ ಮೂರ್ನಾಲ್ಕು ಕಾವ್ಯತುಣುಕುಗಳನ್ನು ಒದಗಿಸುವುದು ಈ ಮಹಾಯೋಜನೆಯಲ್ಲಿ ನನ್ನ ಅಳಿಲುಸೇವೆ ಆಗಬಹುದು ಎಂದು ನಾನು ನಿರ್ಧರಿಸಿದ್ದೇನೆ. ಆದಕ್ಕಾಗಿ ಅರೆಬರೆಯಾಗಿ ನೆನಪಿಗೆ ಬಂದ ಕುಮಾರವ್ಯಾಸನ ಕಾವ್ಯದ ಷಟ್ಪದಿಗಳ ಮಾದರಿಯಲ್ಲಿ ಸ್ಯಾಂಪಲ್‌ ಡೇಟಾ ತಯಾರಿಸಿದರಾಗಬಹುದೆಂದುಕೊಂಡೆ. ಇಲ್ಲಿನ ಷಟ್ಪದಿಗಳಲ್ಲಿ ಪಾಲಿಸಲ್ಪಟ್ಟಿರುವ ಒಂದೇ ಒಂದು ನಿಯಮವೆಂದರೆ ಪ್ರತಿ ಸಾಲಿನ ಎರಡನೆ ಅಕ್ಷರವು ಒಂದೇ ವ್ಯಂಜನದಿಂದಾಗಿರುವುದು. ಮಿಕ್ಕೆಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆಯಾದ್ದರಿಂದ ಅವೆಲ್ಲವುಗಳ ವಿಷಯದಲ್ಲಿ ಛಂದಸ್ಸುಮಾಪಕ ಸಾಫ್ಟ್‌ವೇರ್‌ ಈ ಷಟ್ಪದಿಗಳನ್ನು ಫೈಲಾಗಿಸುತ್ತದೆ!

ಏನಿದ್ದರೂ ನಿಮ್ಮ ಅವಗಾಹನೆಗಾಗಿ ಷಟ್ಪದಿಗಳು (ಮತ್ತು ಅವುಗಳ ಹಿನ್ನೆಲೆ) ಇಲ್ಲಿವೆ.

- 1 -

ಛಂದಸ್ಸು ಮಾಪಕ ತಂತ್ರಾಂಶ ಯೋಜನೆಯ ಬಗ್ಗೆ ಡಾ।ಮೂರ್ತಿಯವರ ಈಮೈಲನ್ನು ಓದಿದ ಒಬ್ಬ ಸಾಫ್ಟ್‌ವೇರ್‌ ಇಂಜನಿಯರ್‌(ಪ್ಲಸ್‌ ಸಾಹಿತ್ಯಾಭಿಮಾನಿ)ಗೆ ಮನದಲ್ಲಿ ಅನಿಸಿದ್ದು:

The Key of Chandassu !ಅಂದು ಕಲಿತಿಹ ವಿದ್ಯೆಯದು ಚಿ

ಕ್ಕಂದಿನಂದಿನ ನೆನೆವೆ ದಿನಗಳ

ಛಂದಸ್ಸು ಕಲಿಸಿದ ಪಂಡಿತರ ಬಿಳಿ ಕಚ್ಚೆಪಂಚೆಯನು...

ಇಂದು ನೋಡುವೆ ಮತ್ತೆ ಗುರುಲಘು

ಎಂದುಕೊಳ್ಳುತ ಯಗಣ ರಗಣಗ

ಳಿಂದ ಪರಿಕಿಪ ಗಣಕವಿವರದ ವಿದ್ಯುದಂಚೆಯನು...

- 2 -

ಈ ಛಂದಸ್ಸು ಮಾಪಕ ಸಾಫ್ಟ್‌ವೇರ್‌ ಬಿಡುಗಡೆಯಾದ ಮೇಲೆ ಇದುವರೆಗೆ ಅಂತರ್ಜಾಲದಲ್ಲಿ ಮುಕ್ತ ಛಂದಸ್ಸಿನ ಕವನಗಳನ್ನು ಬರೆಯುತ್ತಿದ್ದವರೆಲ್ಲ ಛಂದೋಬದ್ಧ ಕಾವ್ಯರಚನೆಗೆ ತೊಡಗುತ್ತಾರೆ:

ಅಡಗಿ ಕುಳಿತಿಹನೆನ್ನ ತನುವೊಳು ಮೈ

ಬಡಿದೆಬ್ಬಿಸಿದೆನು ಮಲಗಿರ್ಪ ಕವಿಯನು

ಪೊಡಮಡುತಲಿ ವಾಗ್ದೇವಿಗೆ ಅಕ್ಷರಾಲಂಕಾರ ಪೂಜೆಯನು...

ಎಡವಿ ಬೀಳದೆ ಮುನ್ನಡೆವ ಶಕ್ತಿಯ

ನೀಡೆನಗೆ ಛಂದಸ್ಸಿನ ನಿಯಮವೆಲ್ಲವ

ಬಿಡದೆ ಪಾಲಿಸುವಂತೆ ಸರಸತಿ ನಿನ್ನ ಬೇಡುವೆನು...

- 3 -

ಎಲ್ಲರೂ ಛಂದೋಬದ್ಧ ಕವನಗಳನ್ನು ಏಕ್‌ದಂ ಬರೆದು (ಐ ಮೀನ್‌, ಬರಹದಲ್ಲಿ ಟೈಪಿಸಿ) ಛಂದಸ್ಸು ಮಾಪಕ ತಂತ್ರಾಂಶದ ಪರೀಕ್ಷೆ ಪಾಸು ಮಾಡಿಸಿ ದಟ್ಸ್‌ಕನ್ನಡದಲ್ಲಿ ಪ್ರಕಟಣೆಗೆ ಸಂಪಾದಕರ ಈಮೈಲ್‌ ವಿಳಾಸಕ್ಕೆ ಕಳಿಸತೊಡಗಿದರೆ ಅವರ ಗತಿ ?

ಬರಹವೆಂಬೀ ಕನ್ನಡದ ಲಘು

ವರವಿರುವುದರಿಂದ ಕೇಳೈ

ಹರಿದುಬರುತಿದೆ ಕಾವ್ಯಧಾರೆಯು ವಿದ್ಯುದಂಚೆಯಲಿ...

ಕೊರೆಯುತಿಹ ಕವಿಮನದ ಗೆಳೆಯರು

ಬರಿಯ ಕೀಬೋರ್ಡಿಂದ ಬರೆಯುವ

ಪರಿಯ ನೋಡುತ ಛಲವ ಮೆಚ್ಚುವೆ ಎನ್ನ ಮನದಲ್ಲಿ...

- 4 -

ನನಗೆ ಮಾತ್ರ ಪದ್ಯಕ್ಕಿಂತ ಗದ್ಯವೇ ಒಳ್ಳೆಯದಾದ್ದರಿಂದ (ಗದ್ಯಂ ಹೃದ್ಯಂ ಎಂದ ಮುದ್ದಣ ಇನ್ಸಿಡೆಂಟಲಿ ನಮ್ಮ ಕಾರ್ಕಳ ತಾಲೂಕಿನ ನಂದಳಿಕೆಯವನು) ನಾನು ಪದ್ಯ ಬರೆಯದೆ ವಿಚಿತ್ರಾನ್ನದ ಅಡಿಗೆಯಲ್ಲೇ ತೃಪ್ತನಾಗುತ್ತೇನೆ. ಏಕೆಂದರೆ:

ರನ್ನ ಬರೆದಿಹ ಪಂಪ ಬರೆದಿಹ ಸಿರಿ

ಗನ್ನಡದಿ ಘನ ಕಾವ್ಯ ಬರೆಯುವ

ಉನ್ನತದ ಆಸೆಯೇ ಬೇಡೆನಗೆ ತುರಾಯಿ ಹಾರಗಳು...

ಪೆನ್ನು ಬಳಸದೆ pun ಬರೆವೆನು ದಟ್ಸ್‌

ಕನ್ನಡದಲಿ ಅಡಿಗಡಿಗೆ ಮಾಡುತ ವಿಚಿ

ತ್ರಾನ್ನ ಬಡಿಸುತ ಕಳೆದೆ ನಾ ನಲ್ವತ್ತು ವಾರಗಳು...

*

ಡಾ। ಕೆ.ಆರ್‌.ಎಸ್‌ ಮೂರ್ತಿ ಮತ್ತವರ ತಂಡಕ್ಕೆ ಇನ್ನೊಮ್ಮೆ ಶುಭ ಹಾರೈಸುತ್ತ ಛಂದಸ್ಸು ಮಾಪಕ ತಂತ್ರಾಂಶದ ಅವರ ಕನಸು ಶೀಘ್ರದಲ್ಲೇ ನನಸಾಗುತ್ತದೆ ಎಂದು ಆಶಿಸೋಣ. ಕೆ.ಆರ್‌.ಎಸ್‌ ನಲ್ಲಿ ಈ ವರ್ಷ ನೀರಿನಮಟ್ಟ ಕಡಿಮೆಯಾಗಿದ್ದರೂ ಡಾ।ಕೆ.ಆರ್‌.ಎಸ್‌ ಅವರ ಉಮೇದು ಬತ್ತಿಹೋಗದಿರಲಿ!

ವಿಚಿತ್ರಾನ್ನದ ಈ ತುತ್ತಿನ ರುಚಿ ಹೇಗಿತ್ತೆಂದು ತಿಳಿಸಲು srivathsajoshi@yahoo.com ವಿಳಾಸಕ್ಕೆ ಬರೆಯುತ್ತೀರಾ?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more