ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀಟಿಂಗ್‌: ಪ್ರಾಣಿಲೋಕದ ಪಾಠಗಳು

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Meeting concept begins here ಮೀಟಿಂಗ್‌ ಎಂದು ಕೇಳಿದೊಡನೆಯೇ ನಮ್ಮ ಮನಸ್ಸಿಗೆ ಒಂಥರಾ ತಾತ್ಸಾರ, ಲೇವಡಿ, ಕಾಲಹರಣ ಇತ್ಯಾದಿ ಅನುಭವವಾಗುವುದೇ ಜಾಸ್ತಿ ವಿನಹ ಮೀಟಿಂಗ್‌ನ ಗಾಂಭೀರ್ಯ, ಉದ್ದೇಶಗಳತ್ತ ಗಮನ ಕೇಂದ್ರೀಕರಣ ಕೊಂಚ ಕಷ್ಟವೇ. ಮೀಟಿಂಗ್‌ನಲ್ಲಿ ಗಂಟೆಕಟ್ಟಲೆ ‘ಟೈಮ್‌ ವೇಸ್ಟ್‌’ ಮಾಡಿ ಬರೇ ‘ಮಿನಿಟ್ಸ್‌’ ಅಷ್ಟೇ ಟಿಪ್ಪಣಿ ಮಾಡಿಟ್ಟುಕೊಳ್ಳುವುದು... ಎಂಬ ಜೋಕ್‌ ನೀವು ಕೇಳಿರಬಹುದು. ಹಾಗೆಯೇ ‘ನನಗೆ ಮೀಟಿಂಗ್‌ಗಿಂತ ಅಲ್ಲಿರಬಹುದಾದ ಈಟಿಂಗ್‌ ಮುಖ್ಯ...’ ಅನ್ನುವ ಜನವೂ ಬೇಜಾನ್‌ ಸಿಗುತ್ತಾರೆ. ಜಸ್ಪಾಲ್‌ಭಟ್ಟಿಯೂ ತನ್ನ ‘ಫ್ಲಾಪ್‌ ಷೋ’ ಹಾಸ್ಯಧಾರಾವಾಹಿಯ ಒಂದು ಕಂತನ್ನು ಮೀಟಿಂಗ್‌ ಬಗ್ಗೆಯೇ ನಿರ್ಮಿಸಿದ್ದನು; ಆ ಮೀಟಿಂಗ್‌ನಲ್ಲಿ ತೀರ್ಮಾನವಾದ ಒಂದೇ ಒಂದು ಅಂಶವೆಂದರೆ ಮುಂದಿನ ಮೀಟಿಂಗ್‌ ಯಾವ ದಿನದಂದು ಎಂದು. ನೀವೂ ಇಂಥ ಮೀಟಿಂಗ್‌ಗಳನ್ನು ನೋಡಿ ಆನಂದಿಸಿರಬಹುದು. ಹೀಗಿದೆ ಮೀಟಿಂಗ್‌ ಮಹಾತ್ಮೆ !

ನಮ್ಮ ವೃತ್ತಿಬದುಕಿನಲ್ಲಿ, ಸಮಾಜಸೇವೆಯ ಚಟುವಟಿಕೆಗಳಲ್ಲಿ, ಹವ್ಯಾಸಿ ಸಂಘಗಳ ಆಗುಹೋಗುಗಳಲ್ಲಿ - ಹೀಗೆ ಎಲ್ಲ ಕಡೆಗಳಲ್ಲೂ ಮೀಟಿಂಗ್‌ (ಮಹಾಸಭೆ) ಒಂದು ಅವಿಭಾಜ್ಯ ಅಂಗ. ಅದು ಯೋಜನೆಯಾಂದರ ಬಗ್ಗೆ ವಿಚಾರಮಂಥನ ಅಥವಾ ಮೇಧಾಮಾರುತ (‘ಬ್ರೈನ್‌ಸ್ಟೋರ್ಮಿಂಗ್‌’ಗೆ ನನ್ನ ಅನುವಾದ) ಇರಬಹುದು, ಇದುವರೆಗಿನ ಪ್ರಗತಿಯ ಬಗ್ಗೆ ಸಿಂಹಾವಲೋಕನವಿರಬಹುದು, ಅಥವಾ ಹೀಗೆಯೇ ಒಂದು ಔಪಚಾರಿಕ ಲಘುಸಂತೋಷಕೂಟವಿರಬಹುದು. ಒಟ್ಟಿನಲ್ಲಿ ನಾಲ್ಕುತಲೆ ಒಂದೆಡೆ ಕಲೆತು ಒಂದಲ್ಲ ಒಂದು ಧ್ಯೇಯೋದ್ದೇಶದ ಮೀಟಿಂಗ್‌ ಇದ್ದೇ ಇರುತ್ತದೆ.

What can be decided here ?ಕೆಲವೊಮ್ಮೆ ನೀವೇ ಮೀಟಿಂಗ್‌ ಕರೆದು ನಡೆಸುವವರಾಗಿರಬಹುದು. ನೀವು ನಿಭಾಯಿಸಲಿರುವ ಗುಂಪಿನಲ್ಲಿ ಬೇರೆಬೇರೆ ಖದರಿನ, ವರ್ಚಸ್ಸಿನ, ಪ್ರತಿಭೆಯ, ಸ್ವಭಾವದ ಜನರಿರುತ್ತಾರೆ. ಅಂತಹ ಗುಂಪನ್ನು ಮುನ್ನಡೆಸುವ ಕಾರ್ಯದಲ್ಲಿ ನಿಮ್ಮ ಯಶಸ್ಸಿಗೆ ಕೆಲವು ಸರಳಸೂತ್ರಗಳು ಇಲ್ಲಿವೆ. ಬಹಳ ಹಿಂದೆ ಯಾವುದೋ ಒಂದು ವರ್ಕ್‌ಷಾಪ್‌ನಲ್ಲಿ ನಾನು ನೋಟ್‌ಮಾಡಿಟ್ಟುಕೊಂಡ ಅಂಶಗಳಿವು. ಇವತ್ತಿನ ವಿಚಿತ್ರಾನ್ನಕ್ಕೆ ಇದು ಲಾಯಕ್ಕಾದ ಸಾಮಗ್ರಿಯಾಗಬಹುದು ಎಂದೆಣಿಸಿ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಗುಂಪಿನಲ್ಲಿರುವ ಪ್ರತಿಯಾಬ್ಬರೂ ಒಂದು ಪ್ರಾಣಿಯೆಂದು ತಿಳಿದುಕೊಳ್ಳಿ. ಈ ಕೆಳಕಂಡ ಬೇರೆಬೇರೆ ಪ್ರಾಣಿಗಳ ದಿವ್ಯದರ್ಶನ ನಿಮಗೆ ಮೀಟಿಂಗ್‌ನುದ್ದಕ್ಕೂ ಆಗುತ್ತಿರುತ್ತದೆ. ಎಲ್ಲ ಪ್ರಾಣಿಗಳನ್ನೂ ಮೀಟಿಂಗ್‌ನ ಒಟ್ಟಂದಕ್ಕೆ ಧಕ್ಕೆಯಾಗದಂತೆ ಕಾರ್ಯಸಾಧನೆಗೆ ಹೇಗೆ ಬಳಸಿಕೊಳ್ಳಬಹುದು ನೋಡಿ.

They possess their own nature, Use them1. ಹುಲಿ (ಜಗಳಗಂಟಿ ಸ್ವಭಾವ): ಅವರ ಭೋರ್ಗರೆತಕ್ಕೆ (ಗರ್ಜನೆಗೆ) ಬೆದರಬೇಡಿ. ನೇರ ಹಣಾಹಣಿಯಾಗುವುದನ್ನು ತಪ್ಪಿಸಿ. ಅವರೇಕೆ ಪಟ್ಟುಹಿಡಿದು ಕೂತಿರುತ್ತಾರೆ ಯೋಚಿಸಿ. ಬೇರೆಯವರನ್ನೂ ವಾದಕ್ಕೆ ಸೇರಿಸುವುದರ ಮೂಲಕ ಹುಲಿಗಳ ಪ್ರಭಾವವನ್ನು ತಗ್ಗಿಸಿ. ಆದರೂ ಈ ಜಗಳಗಂಟಿಗಳ ಸಾಮರ್ಥ್ಯವನ್ನು ಹೇಗೆ ಚೆನ್ನಾಗಿ ಉಪಯೋಗಿಸಿಕೊಳ್ಳಬಹುದೆಂದು ನೋಡಿ.

2. ಕುದುರೆ (ಇತ್ಯಾತ್ಮಕ, ಧನಾತ್ಮಕ ಸ್ವಭಾವ): ನಿಮಗೆ ಇವರ ಸಹಾಯ ತುಂಬ ಪ್ರಮುಖವಾದುದು. ಇಂಥವರನ್ನು ಹೆಚ್ಚುಹೆಚ್ಚಾಗಿ ಉಪಯೋಗಿಸಿಕೊಳ್ಳಿ. ಕೆಲವೊಮ್ಮೆ ಇವರು ಅನಗತ್ಯ ಸಂದರ್ಭದಲ್ಲೂ ಸಹಾಯಗುಣವನ್ನು ತೋರಿಸಬಹುದು. ಆ ಬಗ್ಗೆ ಸ್ವಲ್ಪ ಎಚ್ಚರವಹಿಸಿ. ಮೀಟಿಂಗ್‌ನ ತಾತ್ಪರ್ಯ ಮಂಡನೆಗೆ, ವಿಷಯಗಳ ಕ್ರೋಡೀಕರಣಕ್ಕೆ ಇಂಥವರನ್ನು ಬಳಸಿ.

3. ಮಂಗ (‘ಎಲ್ಲವನ್ನೂ ಬಲ್ಲೆ’ ಸ್ವಭಾವ): ಇವರ ‘ಬಲ್ಲೆ’ಯನ್ನು ಹಾಗೆಯೇ ಒಪ್ಪಿಕೊಳ್ಳಬೇಡಿ. ಇನ್ನಿತರರ ಅಭಿಪ್ರಾಯವನ್ನೂ ಪಡೆಯಿರಿ. ನೀವೇ ನಿರ್ಧಾರ ತೆಗೆದುಕೊಳ್ಳುವ ಬದಲು ಇಡೀ ಗುಂಪು ಈ ಮಂಗಗಳ ಸಂಗತಿಯನ್ನು ನೋಡಿಕೊಳ್ಳಲಿ.

4. ಕಪ್ಪೆ (‘ವಟಗುಟ್ಟುವ’ ಸ್ವಭಾವ): ಇವರ ಮಾತುಗಳಿಗೆ ಅಲ್ಲಲ್ಲಿ ಕಡಿವಾಣ ಹಾಕಿ. ವಟಗುಡುವುದಕ್ಕೆ ಸಿಗುವ ಸಮಯವನ್ನು ಕಡಿಮೆಮಾಡಿ. ಇನ್ನೂ ಮಾತು ಮುಂದುವರೆಸಿದರೆ ಸ್ನೇಹಪರವಾಗಿ ನಿಯಂತ್ರಿಸಿ. ಕಪ್ಪೆಗಳನ್ನು ನಿಧಾನಿಸಬೇಕೇ ವಿನಹ ನಿರ್ನಾಮ ಮಾಡಿಬಿಡಬೇಡಿ; ಅವುಗಳಿಂದಲೂ ಉಪಯೋಗವಿದೆ!

5. ಬೆಕ್ಕು (‘ಕಪಟಸನ್ಯಾಸಿ’ ಸ್ವಭಾವ): ಮಾರ್ಜಾಲಗಳ ಬಗ್ಗೆ ವಿಶೇಷ ನಿಗಾ ಇರಬೇಕು. ನಿಷ್ಪಕ್ಷಪಾತವಾಗಿದ್ದು, ಈ ಬೆಕ್ಕುಗಳ ಪ್ರಶ್ನೆಗಳನ್ನು ನೀವೇ ಉತ್ತರಿಸುವ ಬದಲು ಗುಂಪಿಗೇ ಎಸೆಯಿರಿ. ನಿಮ್ಮ ಅಭಿಪ್ರಾಯವನ್ನು ಮಂಡಿಸಿದರೂ ಅದಕ್ಕೆ ಗುಂಪು ಏನನ್ನುತ್ತದೆ ನೋಡಿ.

6. ಹಂದಿ (ಅಸಹಕಾರ/ತಿರಸ್ಕಾರ ಸ್ವಭಾವ): ಇವರ ಜ್ಞಾನ, ಅನುಭವಗಳನ್ನು ಗುರುತಿಸಿ ಮುಂದಕ್ಕೆ ಕರೆತನ್ನಿ. ಅವರಲ್ಲಿರುವ ಮೌಲಿಕ ವಿಚಾರಗಳಿಗೆ ಮನ್ನಣೆ ಕೊಡಿ. ಆ ವಿಚಾರಗಳಿಗಾಗಿ ಅವರನ್ನು ಗೌರವಿಸಿ.

7. ಘೕಂಡಾ (‘ದಪ್ಪ ಚರ್ಮ’ದವರು): ನಿಮ್ಮ ಗುಂಪು ಇಂಥವರೊಟ್ಟಿಗೆ ಹೊಂದಿಕೊಳ್ಳುತ್ತದೋ ನೋಡಿಕೊಳ್ಳಿ. ಒಂದುವೇಳೆ ಇವರ ವಿಚಾರಧಾರೆಗಳು ಕಾಲಹರಣ ಮಾತ್ರ ಎಂದಾದರೆ ಆ ವಿಷಯವನ್ನು ಬಿಟ್ಟು ಮುಂದುವರೆಸಿ.

8. ಜಿರಾಫೆ (ಉದ್ದಕತ್ತಿನವರು/ ಹುಬ್ಬೇರಿಸುವವರು): ಇವರುಗಳಿಗೆ ‘ಹೌದಪ್ಪ...’ ಆಗಿರುವುದಕ್ಕಿಂತ ‘ಹೌದು, ಆದರೆ....’ ಟೆಕ್ನಿಕನ್ನು ಉಪಯೋಗಿಸಿ. ಇವರ ವಿಚಾರಗಳನ್ನು ಬೇರೆ ಪದಪುಂಜಗಳಲ್ಲಿ ‘ರಿಫ್ರೇಸ್‌’ ಮಾಡಿ. ಇವರ ಯೋಚನೆಗಳ ನಿಖರತೆ ಮತ್ತು ಉಪಯುಕ್ತತೆಯನ್ನು ಇತರರಿಗೂ ತಿಳಿಸಿ. ಒಂದು ವಿಷಯದ ತಾತ್ಪರ್ಯಮಂಡನೆಗೂ ಇವರನ್ನು ಬಳಸಿಕೊಳ್ಳಬಹುದು!

9. ಇಲಿ (ಮೌನಿಗಳು): ಇವರಿಗೆ ಸುಲಭ ಪ್ರಶ್ನೆಗಳನ್ನು ಕೇಳಿ ಮಾತು ಹೊರಡುವಂತೆ ಮಾಡಬೇಕು. ಎಷ್ಟೇ ಸಣ್ಣದಾದರೂ ಇವರ ವಿಚಾರಗಳನ್ನು ಪ್ರೋತ್ಸಾಹಿಸಿ. ಅಳುಕುಸ್ವಭಾವ, ನಾಚಿಕೆ-ಮುಜುಗರ-ಉದಾಸೀನ ಪ್ರವೃತ್ತಿ ಇವರ ಮೌನಕ್ಕೆ ಕಾರಣವಾಗಿರಬಹುದು. ಇಷ್ಟಿದ್ದರೂ ಇಂಥವರನ್ನು ಸಮಯೋಚಿತವಾಗಿ ಬಳಸಿಕೊಳ್ಳುವ ಜಾಣ್ಮೆ ನಿಮಗಿರಬೇಕು.

ಹೀಗೆಯೇ ನೀವು ಭಾಗವಹಿಸುವ/ನಡೆಸುವ ಮೀಟಿಂಗ್‌ಗಳಲ್ಲಿ ಇನ್ನೂ ಬೇರೆಬೇರೆ ‘ನಮೂನೆ’ಗಳ ಜನರು ನಿಮಗೆ ಸಿಕ್ಕಿರಬಹುದು. ಬಣ್ಣಬದಲಾಯಿಸುವ ಗೋಸುಂಬೆಯಂಥವರು, ಚಾಣಾಕ್ಷ ನರಿಗಳು, ನಿಧಾನಗತಿಯ ಆಮೆಗಳು, ಹಗಲುನಿದ್ದೆಯ ಗೂಬೆಗಳು... ಇತ್ಯಾದಿತ್ಯಾದಿ. ನಿಮ್ಮ ಅನುಭವ ಸ್ವಾರಸ್ಯಗಳನ್ನೂ ಬರೆದುತಿಳಿಸಿ. ಎಲ್ಲರೊಂದಿಗೆ ಹಂಚಿಕೊಳ್ಳೋಣ. ವಿಳಾಸ: [email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X