• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿನ್ನಹ ಭೂತಕ್ಕೆ; ಹೊನ್ನಿನ ಭವಿಷ್ಯಕ್ಕೆ!

By Staff
|
Srivathsa Joshi *ಶ್ರೀವತ್ಸ ಜೋಶಿ
ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಾಣಸಿಗುವ ‘ಭೂತಾರಾಧನೆ’ಯ ಬಗ್ಗೆ ನೀವು ಕೇಳಿರಬಹುದು, ಓದಿರಬಹುದು, ‘ಭೂತ ಕೋಲ’ವನ್ನು ಪ್ರತ್ಯಕ್ಷವಾಗಿ ಅಥವಾ ಚಿತ್ರಗಳಲ್ಲಿ-ಚಲಚ್ಚಿತ್ರಗಳಲ್ಲಿ (ಇತ್ತೀಚಿನ ‘ದ್ವೀಪ’ದಲ್ಲೂ ಭೂತವೇಷ ಇತ್ತು) ನೋಡಿರಬಹುದು. ಒಂದು ರೀತಿಯ ಭಯ, ಭಕ್ತಿ ಹುಟ್ಟಿಸುವ ಸಾಮರ್ಥ್ಯ ಈ ಭೂತಾರಾಧನೆಯ ಕಲ್ಪನೆಗಿದೆ. ಭೂತ-ನಂಬಿಕೆ-ಆಚರಣೆ ಇತ್ಯಾದಿಯ ಬಗ್ಗೆ ಪ್ರಬುದ್ಧವಾದ ಪ್ರಬಂಧ ಮಂಡಿಸುವಷ್ಟು ಸಾಮಗ್ರಿ ನನ್ನ ಬಳಿ ಇಲ್ಲ ; ಆದರೂ ನನ್ನ ಸಂಗ್ರಹದಲ್ಲಿ ಸಿಕ್ಕಿದ ಒಂದು ‘ತುಳು ಭಾಷೆಯಲ್ಲಿ ಭೂತಪ್ರಾರ್ಥನೆ’ಯ ಸುತ್ತ ಈ ವಾರದ ವಿಚಿತ್ರಾನ್ನ.

ಭೂತ-ಪ್ರೇತಗಳ ಕಲ್ಪಿತ-ಕಲ್ಪನಾತೀತ ಕತೆ ಹೇಳಿ ನಿಮ್ಮನ್ನು ಹೆದರಿಸುವುದು ಉದ್ದೇಶವಲ್ಲ . ಭೂತದ ಮೇಲೆ ನನಗೆ-ನಿಮಗೆ ನಂಬಿಕೆ ಇದೆಯೇ ಇಲ್ಲವೇ ಅನ್ನುವುದೂ ಮುಖ್ಯವಲ್ಲ ; ಪರಂತು ಈ ಒಂದು ಮಾಹಿತಿಗೆ ಅನನ್ಯತೆ ಇದೆ; ವಿಚಿತ್ರಾನ್ನ ರೂಪದಲ್ಲಿ ಇದು ‘ತಿನ್ನೆಬಲ್‌’ ಎಂದು ಅಂಗೀಕರಿಸುವಿರಾಗಿ ನಿಮ್ಮ ಮೇಲೆ ನಂಬಿಕೆಯೂ ನನಗಿದೆ. ಆ ‘ಮೈಂಡ್‌ಸೆಟ್‌’ನಲ್ಲೇ ಇದನ್ನು ಓದಿ ಮುಗಿಸಿ!

‘ಭೂತಕೋಲ’ ಎಂದರೆ ಬಣ್ಣಬಣ್ಣದ ವೇಷ ಕಟ್ಟಿ ಸಾಮಾನ್ಯವಾಗಿ ಇಡೀರಾತ್ರಿ, ಗೌಜಿ ಗದ್ದಲಗಳಿಂದ ನಡೆಯುವ ಭೂತೋತ್ಸವ. ಭೂತದ ವೇಷ ಕಟ್ಟುವವನು, ದರ್ಶನಪಾತ್ರಿ, ಊರ ಮುಖ್ಯಸ್ಥ (ಹೆಬ್ಬಾರ್‌, ಗುರಿಕಾರ), ಮನೆಯ ಯಜಮಾನ - ಹೀಗೆ ವಿಶಿಷ್ಟ, ವಿಭಿನ್ನ ಭೂಮಿಕೆಗಳು ಬರುತ್ತವೆ ಭೂತಕೋಲದಲ್ಲಿ. ನೇಮ, ಬಲಿ, ಕೆಂಡಸೇವೆ - ಇವೆಲ್ಲ ಭೂತಕೋಲದ ಇನ್ನೂ ಉಗ್ರರೂಪಗಳು.

Bhootharadhaneಭೂತಕೋಲದಷ್ಟು ಜೋರಲ್ಲದ ಇನ್ನೊಂದು ಆರಾಧನೆ ಇದೆ. ಅದೇ ‘ಭೂತಗಳ ಪರ್ಬ’. ಇಲ್ಲಿ ಭೂತದ ವೇಷವಿಲ್ಲ, ಬಾಜಾಭಜಂತ್ರಿಯಿಲ್ಲ, ದರ್ಶನಪಾತ್ರಿಯೂ ಇಲ್ಲ. (ಯಕ್ಷಗಾನದಲ್ಲಿ ಬಯಲಾಟ ಮತ್ತು ತಾಳಮದ್ದಳೆ - ಇವೆರಡಕ್ಕೆ ವ್ಯತ್ಯಾಸ ಗೊತ್ತಿರಬಹುದು ನಿಮಗೆ; ಇಲ್ಲೂ ಸೇಮ್‌ ಕಾನ್ಸೆಪ್ಟ್‌). ‘ಪರ್ಬ’ ಸಾಮಾನ್ಯವಾಗಿ ಭೂತದ ಗುಡಿಯಲ್ಲಿ, ಪೂಜೆಯ ರೂಪದಲ್ಲಿ ವರ್ಷಕ್ಕೊಮ್ಮೆ ಅಥವಾ ಎರಡು ಸಲ ನಡೆಯುತ್ತದೆ. ಅಡಿಕೆಮರದ ಹೂ (ಸಿಂಗಾರ), ಎಳನೀರು, ಬಾಳೆ ಎಲೆ, ಅವಲಕ್ಕಿ, ಬೆಲ್ಲ - ಇತ್ಯಾದಿ ಮುಖ್ಯ ಪೂಜಾಪರಿಕರಗಳು. ದೇವಸ್ಥಾನದ ಪೂಜಾರಿ ಅಥವಾ ಸಣ್ಣಪುಟ್ಟ ಪುರೋಹಿತಿಕೆ ಮಾಡುವ ‘ಭಟ್ಟ’ರು ದೈವ(ಭೂತ)ಗಳಿಗೆ ಪೂಜೆ ಸಲ್ಲಿಸಿ ಮನೆಯವರೆಲ್ಲರ ಪರವಾಗಿ ಭೂತದ ಸನ್ನಿಧಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗೆ ಇದು ಸಣ್ಣಮಟ್ಟಿನ ‘ಭೂತಕೋಲ’. ಆದರೂ ಒಂದು ಮಾತು. ‘ಪರ್ಬ’ ಕ್ರಮಪ್ರಕಾರ ಗಡುವಿಗೆ ಸರಿಯಾಗಿ ನಡೆಯದಿದ್ದರೆ ಭೂತಕ್ಕೆ ಸಿಟ್ಟು ಬಂದು ಅದು ‘ಉಪದ್ರವ’ ಕೊಡಲಾರಂಭಿಸಬಹುದು! ಸೋ, ‘ಪರ್ಬ’ವನ್ನೂ ಲೈಟಾಗಿ ತೆಗೆದುಕೊಳ್ಳುವಂತಿಲ್ಲ !

ನಮ್ಮೂರಲ್ಲೊಮ್ಮೆ ಇಂತಹ ಒಂದು ‘ಪರ್ಬ’ಕ್ಕೆ ನಾನು ಹೋಗಿದ್ದೆ. ಪರ್ಬದಲ್ಲಿ ಭೂತಕ್ಕೆ ಸಲ್ಲಿಸುವ ಪ್ರಾರ್ಥನೆಯನ್ನು ಅವತ್ತು ಕೇಳಿದಾಗ ನನಗೆ ಅದು ತುಂಬ ಸುಂದರವಾಗಿ, ಅರ್ಥಪೂರ್ಣವಾಗಿ ಕಂಡುಬಂತು. ತುಳುಭಾಷೆ ಸಾಹಿತ್ಯಿಕವಾಗಿ ಶ್ರೀಮಂತವಲ್ಲದಿದ್ದರೂ ಈ ಭೂತಪ್ರಾರ್ಥನೆಯಲ್ಲಿ ‘ಅನ್ಯಥಾ ಶರಣಂ ನಾಸ್ತಿ...’ ಎನ್ನುವ ದೀನಭಾವ, ಜಗವೆಲ್ಲ ಬೆಳಕಾಗಲಿ ಎಂಬ ಸದಾಶಯ, ಮಾರ್ಮಿಕ ವಿಚಾರ ಮತ್ತು ಯಾವ ಸಂಸ್ಕೃತ ಮಂತ್ರಗಳಿಗೂ ಕಡಿಮೆಯಿಲ್ಲದಂತೆ ಒಂದು ಗಾಂಭೀರ್ಯ ಇರುವುದಾಗಿ ನನಗನಿಸಿತು. ಅವತ್ತಿನ ‘ಪರ್ಬ’ ನಡೆಸಿಕೊಟ್ಟ ಪುರೋಹಿತರು ನನಗೆ ಪರಿಚಯದವರೇ. ಪರ್ಬದ ನಂತರ ಅವರನ್ನು ಮಾತಾಡಿಸಿ ಆ ತುಳುಪ್ರಾರ್ಥನೆಯನ್ನು ಅವರ ಬಾಯಿಂದಲೇ ನಿಧಾನವಾಗಿ ಪುನರುಚ್ಚರಿಸಿ ಬರೆದುಕೊಂಡೆ.

ಸ್ವಾಮೀ ಲಕ್ಕೇಸಿರಿ... (ಪಂಜುರ್ಲಿ,...)

offering prayer to Bhoothaವರ್ಸಾದಿ ಪೋತ್‌ ಕಾಲಾದಿ ಬನ್ನಾಗಾ ಕಾಲಾದಿ ಪೋತ್‌ ವರ್ಸಾದಿ ಬನ್ನಾಗಾ ವರ್ಸೊ ಕಾಲಾದಿತಾ ಕಟ್ಲೆಡ್‌ ಆಪುನಾಂಚಿತ್ತಿನಾ ಕಾಲಾದಿ/ಪೊಸಾಬಾರೆ ಪರ್ಬೊ ಇನಿತ್ತಾ ದಿನೊಟ್ಟ್‌ ಅಸರ್ಣೇರ್‌ ಪಂಡಿತ್ತಿಂಚಿ ಅಮೃತ ಗಳಿಗೆಟ್‌ ಮಲ್ತ್‌ತ್‌ಣ್ಡ್‌.

ಆಯಿಡ್ತ್‌ ಒಂಜಿ ಥರೊತ್ತಾ ವಿಷೊ ಇತ್ತ್‌ಣ್ಡಾ ನಿಕ್ಲ್‌ ದೀವೊಣ್ದ್‌ ಅಮೃತೊನ್‌ ಕರ್ತವೆರೆ ಕುಟುಂಬೊಗ್‌, ಜಾಗೆಗ್‌ ಫಾಡ್ದ್‌ಕೊರ್ದ್‌, ಅರ್ಚಿತ್ತಿ ಥಾರಾಯಿಟ್‌, ಕುಡಾತ್ತಿ ಬೊಂಡೊಟ್‌, ಬಳಾಸ್ಸಿ ಪನ್ಯಾರೊಡ್‌, ದೀಯಿ ಹೋಮೊಡ್‌, ಫೊತ್ತಾಯಿ ದೀಪೊಡ್‌ ಈ ಪರ್ಬೊನ್‌ ಪರಿಪೂರ್ಣ ಸಂತೇಸೊಡ್‌ ಗೆತೊಂಡ್ತ್‌, ಈ ಜಾಗೆಗ್‌ ಬರ್ಪುನಾಂಚಿತ್ತಿನಾ ಕಣ್ಣ್‌ಕಟ್ಟ್‌ ಕತ್ತಲೆನ್‌ ದೂರ ಮಲ್ತ್‌ದ್‌, ನೀರ್‌ ನಿಧಿ ಫಲೊ ಬುಳೆ ಸಂತಾನ ಕುಟುಂಬೊ ಕೊರ್ದ್‌, ಹೊಟ್ಟಿಲ್ದಾ ಬಾಲೆಗ್‌, ಖಿದೆತ್ತಾ ಕಾಂಜಿ ಕೈಕಾಂಜಿಲೆಗ್‌ ಸುಖ ಸಂರಕ್ಷಣ್ಯೊ ಮಲ್ತ್‌ ಕೊರ್ದ್‌, ಕುಟ್ಟಿಗುತ್ತೊ-ಮಂಡೇಮಾರಿ-ಹೇನಾನಾಯಿಲೆನಾ ಕಾಟೊನ್‌ ದೂರ ಮಲ್ತ್‌ಕೊರ್ದ್‌, ಗಡಿಗಡಿತ್ತಾ ಮಾರಿನ್‌ ಗಡಿಗಡಿಟ್ಟೇ ನಿಜ್ಪಾದ್‌ಕೊರ್ದ್‌, ಸಾವಿರತ್ತಒಂಜಿ ಗಂಡ್‌ಗಣೊಕ್ಲೆನ್‌ ಹರ್ಪುಡ್ದ್‌, ಬರ್ಪುನಾಂಚಿತ್ತಿನಾ ಮಾರಿನ್‌ ಕಾಶೀ-ರಾಮೇಶ್ವರೋಗ್‌ ಪೋಪಿ ಸಾದಿಗ್‌ ತೇಲಾದ್‌ಕೊರ್ದ್‌, ಆಕಾಸೊಡ್ದ್‌ ಬರ್ಪುನಾಂಚಿತ್ತಿನಾಯ್ನ್‌ ಪಾತಾಳೊಗ್‌ ಹರ್ತ್‌ಕೊರ್ದ್‌, ಪಾತಾಳೊಡ್ದ್‌ ಲಾಕ್ಕುನಾಂಚಿತ್ತಿನಾಯ್ನ್‌ ಆಕಾಸೊಗ್‌ ಫಾರಾದ್‌ಕೊರ್ದ್‌, ಅಂಬರ ಲೋಕೊಡ್ದ್‌ ಅಂಬುಲಾಕ್ಕುನಾಂಚಿತ್ತಿನಾಯ್ನ್‌ ಅಂಬು ಫಾರಾದ್‌ಕೊರ್ದ್‌, ನಂಬಿಕರ್ತವೆರೆಗ್‌ ಇಂಬು ಹೋಜಾದ್‌ಕೊರ್ದ್‌, ಈ ಜಾಗೊನ್‌ ಬೆಳಗಾದ್‌ಕೊರ್ದ್‌, ಮದಿಪುಗೋ-ಮಾಯಿಗೋ, ತ್ರಾಸ್‌ಗೋ-ಬಂಗಾರ್‌ಗೋ, ಪೇರ್‌ಗೋ-ನೀರ್‌ಗೋ ಸರ್ಕ್ಯೆ ಮಲ್ತೊಂಡ್ದ್‌, ಸತ್ಯೊ ಬುಳೆಪ್ಪುಡ್ದ್‌, ಸತ್ಯೊ ನಿನೆತ್ತಿನಾಡೆ - ನಿಜೊ ಫಣ್ಯಾಡೆ ಸಾರಥಿ ಮಲ್ತ್‌ದ್‌ ನಂಬಾದ್‌ಕೊರ್ದ್‌ ಇಂಚಾನಿ ನೆಡ್ದ್‌ ಮಲ್ಲಾ ಆಟ್ಟಣೆಡ್‌ ನಿಕ್ಲೆನಾ ಬಲಿಬಾರಣೆ-ಪರ್ಬೊ-ಭೋಗೊ ನಡಾಪ್ಪಿಲೆಕ್ಕೊ, ನಿಕ್ಲೆ ಮಾಯೆ ನೆರೆಯಿಲೆಕ್ಕೊ, ಪಟ್ಟಫರಾಕ್ಯೆ ಬರ್ಪಿಲೆಕ್ಕೊ, ರಾಜ್ಯೊಬಾರ್ಲೆಕ್ಕೊ, ಕೀರ್ತಿ ಗೆತೊಣಿ ಲೆಕ್ಕೊ, ಸರ್ವೆರೆಗ್ಲಾ ಫೇರ್‌ನುಪ್ಪುತಾ ಸಾದಿ ತೋಜಾದ್‌ಕೊರ್ದ್‌, ಕೀರ್ತಿ ತೋಜಾದ್‌ ಕೊರಿಲೆಕ್ಕೊ ಸರ್ವೆರ್‌ಲಾ ಫಣ್ಪುನಾ ಫಾತೆರೊ.... ಸ್ವಾಮೀ....

ಕನ್ನಡ ಅನುವಾದ:

ಸ್ವಾಮೀ ರಕ್ತೇಶ್ವರೀ... (ಪಂಜುರ್ಲಿ, ಗುಳಿಗ, ಚೌಂಡಿ, ವಿಷ್ಣುಮೂರ್ತಿ... ಹೀಗೆ ವಿಧವಿಧ ಭೂತಗಳ ಹೆಸರುಗಳಿವೆ)

ವರ್ಷಂಪ್ರತಿಯಂತೆ ಅಥವಾ ನಿರ್ಧರಿತ ಸಮಯಕ್ಕೆ ತಕ್ಕಂತೆ ಈ ಕಾಲಾವಧಿ ಪರ್ಬವನ್ನು ಇವತ್ತಿನ ದಿನ ಅಸ್ರಣ್ಣರು (ಪುರೋಹಿತರು) ಹೇಳಿರುವ ಅಮೃತಗಳಿಗೆಯಲ್ಲಿ ನೆರವೇರಿಸಲಾಗಿದೆ. ಅದರಲ್ಲಿ ಯಾವುದೇ ರೀತಿಯ ವಿಷ (ನ್ಯೂನ)ವಿದ್ದರೂ ಅದನ್ನು ನೀವೇ ಇಟ್ಟುಕೊಂಡು ಅಮೃತವನ್ನು (ಒಳ್ಳೆಯದನ್ನು) ಈ ಭಕ್ತ ಕುಟುಂಬಕ್ಕೆ, ಜಾಗಕ್ಕೆ ಸಿಂಪಡಿಸಿ, ಅರ್ಪಿಸಲ್ಪಟ್ಟ ತೆಂಗಿನಕಾಯಿ, ಕೆತ್ತಿದ ಎಳೆನೀರು, ಬಡಿಸಿದ ಪಂಚಕಜ್ಜಾಯ, ಉರಿಸಿದ ಧೂಪ-ದೀಪಗಳಲ್ಲಿ ಈ ಪರ್ಬವನ್ನು ಪರಿಪೂರ್ಣ ಸಂತೋಷದಿಂದ ಸ್ವೀಕರಿಸಿ, ಈ ಜಾಗಕ್ಕೆ ಬರಬಹುದಾದಂತಹ ಕಣ್ಣುಕಟ್ಟು, ಕತ್ತಲೆಯನ್ನು ದೂರಗೊಳಿಸಿ, ನೀರು-ನಿಧಿ, ಫಲ, ಬೆಳೆ-ಭಾಗ್ಯ, ಸಂತಾನವನ್ನು ಕುಟುಂಬಕ್ಕೆಲ್ಲ ದಯಪಾಲಿಸಿ, ತೊಟ್ಟಿಲಲ್ಲಿರುವ ಎಳೆಗೂಸಿಗೂ, ಹಟ್ಟಿಯಲ್ಲಿರುವ ದನ-ಕರುಗಳಿಗೂ ಸಹ ಸುಖ ಸಂರಕ್ಷಣೆ ಮಾಡಿಕೊಟ್ಟು , ಕ್ಷುದ್ರಜೀವಿ-ಕಾಡುಪ್ರಾಣಿಗಳ ಉಪಟಳವನ್ನೆಲ್ಲ ದೂರಮಾಡಿ, ಗಡಿಗಳನ್ನಾಕ್ರಮಿಸುವ ಮಾರಿಗಳನ್ನು ಗಡಿಯಲ್ಲೇ ಹುಟ್ಟಡಗಿಸಿ, ಸಾವಿರದೊಂದು ಗಂಡುಗಣಗಳನ್ನು ಕಳಿಸಿ, ಬರುವಂಥ ಮಾರಿಯನ್ನು ಕಾಶಿ ಅಥವಾ ರಾಮೇಶ್ವರಕ್ಕೆ ಹೋಗುವ ಹಾದಿಗೆ ಉಡಾಯಿಸಿ, ಆಕಾಶದಿಂದ ಬರಬಹುದಾದ ಆತಂಕವನ್ನು ಪಾತಾಳಕ್ಕೆ ತಳ್ಳಿ, ಪಾತಾಳದಿಂದ ಉದ್ಭವಿಸಬಹುದಾದ ತೊಂದರೆಯನ್ನು ಆಕಾಶಕ್ಕೆ ಹಾರಿಸಿ, ಅಂಬರಲೋಕಗಳಿಂದ ಬರುವ ತೊಂದರೆಗಳನ್ನೆಲ್ಲ ಅಲ್ಲೇ ನಿವಾರಿಸಿ, ನಂಬಿದವರಿಗೆ ಇಂಬು ಕೊಡುವ ದಯೆತೋರಿ, ಈ ಜಾಗವನ್ನು ಬೆಳಗಿಸಿ, ಬಿನ್ನಹಕ್ಕೆ-ಮಾನ್ಯತೆಗೆ, ತಕ್ಕಡಿಗೆ-ಬಂಗಾರಕ್ಕೆ, ಹಾಲಿಗೆ-ನೀರಿಗೆ ಸಮಾಸಮ ಕಲ್ಪಿಸಿ, ಸತ್ಯವನ್ನು ಬೆಳೆಸಿ, ಸತ್ಯ ನುಡಿದಲ್ಲಿ ನಡೆದಲ್ಲಿ ಸಾರಥಿಯಾಗಿ ನಡೆಸಿಕೊಟ್ಟು, ಇದೇ ರೀತಿ ಇದಕ್ಕಿಂತಲೂ ದೊಡ್ಡ ತಯಾರಿಯಲ್ಲಿ ನಿಮ್ಮೆಲ್ಲರ ಬಲಿಬಾರಣೆ, ಭೋಗ, ಸೇವೆ ನಡೆಯುವಂತೆ, ನಿಮ್ಮೆ ಮಾಯೆ ಮೆರೆಯುವಂತೆ, ಹೇಳಿಕೊಂಡ ಹರಕೆ ಕೈಗೂಡುವಂತೆ, ರಾಜ್ಯವೆಲ್ಲ ಸುಭಿಕ್ಷವಾಗುವಂತೆ, ಕೀರ್ತಿಪತಾಕೆ ಹಾರುವಂತೆ, ಎಲ್ಲರಿಗೂ ಹಾಲು-ಅನ್ನಗಳಿಗೆ ದಾರಿತೋರುವಂತೆ, ಕೀರ್ತಿಯತ್ತ ನಡೆಯುವಂತೆ ಎಲ್ಲರನ್ನೂ ಅನುಗ್ರಹಿಸಬೇಕೆಂಬುದು ನಾವೆಲ್ಲ ಕೇಳಿಕೊಳ್ಳುತ್ತಿರುವ ಮಾತು. ಸ್ವಾಮೀ...

* * *

ಭೂತಾರಾಧನೆಯ ಬಗ್ಗೆ ನಿಮಗೆ ಕೆಲವು ವೆಬ್‌ಸೈಟ್‌ಗಳಲ್ಲಿ ಮಾಹಿತಿ ಸಿಗಬಹುದು (ಒಂದೆರಡನ್ನು ಪಟ್ಟಿ ಮಾಡಿದ್ದೇನೆ). ಮಂಗಳೂರು ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದಲ್ಲಿ ಆಗೊಮ್ಮೆ ಈಗೊಮ್ಮೆ ಭೂತಕೋಲದ ನಾದಸ್ವರವಾದನ, ಪಾಡ್ದನ (ಭೂತಮಹಿಮೆಯ ತುಳುಕಥನ) ಇತ್ಯಾದಿ ಪ್ರಸಾರ ಮಾಡುತ್ತಾರೆ. ಭೂತಕೋಲದ ಬಗ್ಗೆ ಕ್ಯಾಸೆಟ್‌,ಸಿಡಿಗಳೆಲ್ಲ ಬರುವಷ್ಟು ಅದು ಕಮರ್ಷಿಯಲ್‌ ಆಗದಿರುವುದು ದೈವಗಳ ಸುದೈವ !

ತುಸು ಭಿನ್ನಶೈಲಿಯಲ್ಲಿ, ವಿಶಿಷ್ಟ ವಸ್ತುವಿನೊಂದಿಗೆ ಬಂದ ಈ ವಿಚಿತ್ರಾನ್ನ ಕಂತು ನಿಮಗೆ ಇಷ್ಟವಾಯಿತೋ ಇಲ್ಲವೋ ತಿಳಿಯುವ ಕುತೂಹಲ ನನಗೆ. ದಕ್ಷಿಣಕನ್ನಡ ಅಥವಾ ಉಡುಪಿ ಮೂಲದ ಓದುಗರಿಗೆ ‘ಮಣ್ಣಿನ ವಾಸನೆ’ ಇದರಲ್ಲಿ ಕಂಡುಬಂದರೆ, ಉಳಿದವರಿಗೆ ‘ಒತ್ತಾಯದಿಂದ ಇತರ ಭಾಷೆ (ತುಳು) ಹೇರಿಕೆ’ ಎಂದು ಅನಿಸಿರಬಹುದು. ಏನಿದ್ದರೂ ನಿಮ್ಮ ಅಭಿಪ್ರಾಯವನ್ನು, ಸಲಹೆ-ಸೂಚನೆಗಳನ್ನು srivathsajoshi@yahoo.com ವಿಳಾಸಕ್ಕೆ ಬರೆದು ತಿಳಿಸಿ.

ಭೂತಾರಾಧನೆಯ ಬಗ್ಗೆ ಪೂರಕ ಮಾಹಿತಿ ನಿಮಗೆ ಇಲ್ಲಿ ಸಿಗಬಹುದು :

ವಿಶ್ವಕನ್ನಡ.ಕಾಮ್‌

ಯಕ್ಷಗಾನ.ಕಾಮ್‌

ಐಎಸ್‌ಐಎಸ್‌.ಕಾಮ್‌

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more