• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕನ್ನಡಿಗರ ನೆಲಮಾಳಿಗೆ ಗ್ರಂಥಾಲಯಗಳು!

By Super
|

ಅಮೆರಿಕೆಗೆ ಹೋಗಿ ನೆಲೆಸಿದವರೆಲ್ಲ ‘ಡಾಲರ್‌ ಲಕ್ಷ್ಮಿ'ಯನ್ನರಸಿ ಹೋದವರು, ಇಲ್ಲವೆ ಉನ್ನತ ಶಿಕ್ಷಣಕ್ಕಾಗಿ ಹೋದವರು ಅಲ್ಲಿಯ ಐಷಾರಾಮ ಜೀವನಕ್ಕೆ ಮರುಳಾಗಿ ಲಕ್ಷ್ಮೀಕಟಾಕ್ಷಕ್ಕೊಳಗಾಗಿ ಅಲ್ಲೇ ನಿಂತವರು (ಮತ್ತು ಎಲ್ಲಿ ನಿಂ ತವರು? ಎಂದು ಕೇಳಿದರೂ ತವರೂರ ಬಗ್ಗೆ, ತವರೂರ ಸಂಸ್ಕೃತಿಯ ಬಗ್ಗೆ ಮರೆತುಹೋದವರು...) ಎಂಬ ಒಂದು ತಪ್ಪು ಭಾವನೆ ಇರುತ್ತಿತ್ತು ಬಹುತೇಕ ಕರ್ನಾಟಕವಾಸಿ-ಕನ್ನಡಿಗರ ಮನದಲ್ಲಿ. ‘ಇರುತ್ತಿತ್ತು' ಎಂದು ಏಕೆ ಬರೆದೆನೆಂದರೆ ಈಗೀಗ ಕಡಿಮೆಯಾಗಿದೆ ಈ ‘ಜನರಲ್‌' ಅಭಿಪ್ರಾಯ. ಇರಲಿ, ಲಕ್ಷ್ಮೀದಾಸರ ಸಂಗತಿ, ಅವರ ಬಗ್ಗೆ ಕರುಬುವವರ ಸಂಗತಿ ಇವೆಲ್ಲ ಸ್ವಲ್ಪ ಸೆನ್ಸಿಟಿವ್‌ ವಿಷಯಗಳು. ನಾವು ಆ ಗೋಜಿಗೇ ಹೋಗುವುದು ಬೇಡ. ಅದಕ್ಕಿಂತ, ‘ಸರಸ್ವತಿ ಆರಾಧಕ'ರು - ಅದೇ, ಕನ್ನಡಪುಸ್ತಕಪ್ರಿಯರು - ಎಷ್ಟಿದ್ದಾರೆ ಅಮೆರಿಕದಲ್ಲಿ ಎಂಬ ವಿಷಯದ ಮೇಲೆ, ಮೊನ್ನೆಮೊನ್ನೆ ನವೆಂಬರ್‌ನಲ್ಲಿ ಉರಿಸಿದ (ಇನ್ನೂ ಆರಿಹೋಗಿಲ್ಲ ಎಂದು ಭಾವಿಸಿರುವ) ‘ಹಚ್ಚೇವು ಕನ್ನಡ ದೀಪ'ದ ಬೆಳಕನ್ನು ಒಂದಿಷ್ಟು ಹಾಯಿಸೋಣವೇ?

ನಾನು ಕಳೆದೆರಡು ವರ್ಷಗಳಿಂದ ಮಾತ್ರ ಇಲ್ಲಿರುವವನಾದರೂ ವಾಷಿಂಗ್‌ಟನ್‌ ಡಿಸಿ ಪರಿಸರದ ಕನ್ನಡಿಗರಲ್ಲಿ ತುಂಬ ಮಂದಿಯ ಪರಿಚಯ ಆಗಿದೆ ನನಗೆ. ಇಲ್ಲಿ ಮೂರ್ನಾಲ್ಕು ದಶಕಗಳ ಹಿಂದೆ ಕರ್ನಾಟಕದಿಂದ ಬಂದು ನೆಲೆಸಿದವರೂ, ಐದಾರು ವರ್ಷಗಳ ಹಿಂದಿನ ‘ಸಾಫ್ಟ್‌ವೇರ್‌ ಬೂಮ್‌'ನಲ್ಲಿ ಬಂದವರೂ ಎಲ್ಲ ಇದ್ದಾರೆ. ಐಷಾರಾಮದ ಜೀವನ ನಡೆಸುತ್ತಿದ್ದಾರೆ ಎಂದು ತವರೂರಿನ ಕೆಲವೇ ಮಂದಿ ಕುಹಕವಾಡಿದರೂ ಇಲ್ಲಿ ನಾನಾ ವಿಧದ ಕಷ್ಟಗಳನ್ನೂ ಎದುರಿಸಿ ಪ್ರಗತಿಸಾಧಿಸಿ ‘ಹೇಳಿಕೊಳ್ಳುವುದಕ್ಕೊಂದು ಊರು ತಲೆಯ ಮೇಲೊಂದು ಸೂರು..' ಎಂದುಕೊಳ್ಳುತ್ತಲೇ ಸ್ವಂತ ಮನೆಗಳನ್ನು ಕೊಂಡವರೂ ಬಹಳಷ್ಟು ಇದ್ದಾರೆ. ಇವರ ಮನೆಗಳಲ್ಲಿನ ಸಾಮಾನುಸಂರಂಜಾಮುಗಳಲ್ಲಿ ಅಚ್ಚ ಅಮೆರಿಕ ಜೀವನಶೈಲಿಗೆ ಬೇಕಾದ ಟ್ರೆಡ್‌ಮಿಲ್‌ಗಳಿಂದ ಹಿಡಿದು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆಳೆತ್ತರದ ಹಿತ್ತಾಳೆ/ಕಂಚಿನ ಹಣತೆಯವರೆಗೆ ಎಲ್ಲ ಇವೆ.

‘ಕನ್ನಡತನ'ದ ಕುರುಹಾಗಿ ಏನಿದೆ? ಎಂದು ಕೇಳಿ ನೋಡಿ, ಪ್ರತಿಯೋರ್ವ ಅಮೆರಿಕನ್ನಡಿಗನ ಮನೆಯಲ್ಲೂ ಒಂದಲ್ಲ ಒಂದು ಕನ್ನಡಪುಸ್ತಕವಂತೂ ಗ್ಯಾರೆಂಟಿಯಾಗಿ ಇದೆ! ಬರೀ ಒಂದೆರಡು ಕನ್ನಡಪುಸ್ತಕಗಳಲ್ಲ ಸ್ವಾಮೀ, ನನಗೆ ಗೊತ್ತಿರುವ ಇಲ್ಲಿನ ಕನ್ನಡಿಗರನೇಕರ ಮನೆಗಳ ಅಲ್ಮೀರಾಗಳಲ್ಲಿ, ಬೇಸ್‌ಮೆಂಟ್‌ನಲ್ಲಿರುವ ಷೆಲ್ಫ್‌ಗಳಲ್ಲಿ, ಡ್ರಾಯಿಂಗ್‌ರೂಮ್‌ನ ಟೀಪಾಯ್‌ ಮೇಲೆ - ಹೀಗೆ ಕನ್ನಡ ಪುಸ್ತಕಗಳ ದೊಡ್ಡ ಭಂಡಾರವೇ ಇದೆ! ಕನ್ನಡಪ್ರೀತಿ, ಪುಸ್ತಕಪ್ರೀತಿ ಮಿಳಿತವಾಗಿ ಅಭಿಮಾನದ ಆಸ್ತಿಯಾಗಿ ಬೆಳೆಸಿದ ಸ್ವಂತದ ಗ್ರಂಥಾಲಯಗಳಿವೆ! ಅವನ್ನೇ ನಾನು ‘ನೆಲಮಾಳಿಗೆ ಗ್ರಂಥಾಲಯಗಳು' ಎಂದಿದ್ದು.

ಬನ್ನಿ, ಕೆಲವು ಸ್ಯಾಂಪಲ್‌ ನೆಲಮಾಳಿಗೆ ಗ್ರಂಥಾಲಯಗಳ ‘ವರ್ಚ್ಯೂವಲ್‌-ಟೂರ್‌' ಮಾಡಿಸುತ್ತೇನೆ ನಿಮಗೆ.

ದ.ರಾ.ಬೇಂದ್ರೆಯವರ ಕಟ್ಟಾಭಿಮಾನಿಯಾದ ಡಾ।ರವಿ ಹರಪ್ಪನಹಳ್ಳಿ ಅವರ ಮನೆ ಮೇರಿಲ್ಯಾಂಡ್‌ನ ಸಿಲ್ವರ್‌ಸ್ಪ್ರಿಂಗ್‌ನಲ್ಲಿ. ಅವರ ಮನೆಯ ನೆಲಮಾಳಿಗೆ ಗ್ರಂಥಾಲಯದಲ್ಲಿ ನಿಮಗೆ ‘ಔದುಂಬರ ಗಾಥಾ' - ಅಂಬಿಕಾತನಯದತ್ತರ ಸಮಗ್ರಕಾವ್ಯದ ಆರೂ ಸಂಪುಟಗಳು ಕಾಣಸಿಗುತ್ತವೆ! ಬೇಂದ್ರೆಯವರ ಇತರ ಪುಸ್ತಕಗಳೊಂದಿಗೆಯೇ ಕುಮಾರವ್ಯಾಸನ ‘ಕರ್ಣಾಟಕ ಭರತಕಥಾ ಮಂಜರಿ'ಯೂ ಅಲ್ಲಿದೆ, ಡಿವಿಜಿಯವರ ‘ಕಗ್ಗ'ದ ಜತೆಯಲ್ಲೇ ಅದರ ಬಗೆಗಿನ ವ್ಯಾಖ್ಯಾನ ‘ಕಗ್ಗಕ್ಕೊಂದು ಕೈಗಂಟು' ಇತ್ಯಾದಿ ಪುಸ್ತಕಗಳೂ ಇವೆ.

ಮೇರಿಲ್ಯಾಂಡ್‌ ವಿಶ್ವವಿದ್ಯಾಲಯದಲ್ಲಿ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕರಾಗಿರುವ ನಾಗರಾಜ್‌ ನೀರ್ಚಲ್‌ ಅವರ ಮನೆಯ ಬೇಸ್‌ಮೆಂಟ್‌ಗೆ ಹೋಗಿ ನೋಡಿ. ಯಕ್ಷಗಾನದ ಮಹಾಹುಚ್ಚಿನ ಇವರ (ಊರು ಪುತ್ತೂರು ಸಮೀಪದ ಬೆಳ್ಳಾರೆ) ಲೈಬ್ರರಿಯಲ್ಲಿ ನೂರಾರು ಪುಸ್ತಕಗಳ ಪೈಕಿ ಬರೀ ಯಕ್ಷಗಾನಕ್ಕೆ ಸಂಬಂಧಿಸಿದ್ದೇ ಐವತ್ತಕ್ಕೂ ಹೆಚ್ಚಿವೆ!

ಇನ್ನೊಂದು ಇಂಟೆರೆಸ್ಟಿಂಗ್‌ ಪುಸ್ತಕಸಂಗ್ರಹ ಡಾ।ಕುಸುಮಾಧರ ಗೌಡ ಅವರದು. ಭಾಷೆಯ ಹುಟ್ಟು-ಬೆಳವಣಿಗೆ, ಬೇರೆ ಭಾಷೆಗಳ ಪ್ರಭಾವ - ಇವುಗಳಲ್ಲಿ ಬಹಳ ಆಸಕ್ತರಾಗಿರುವ ಡಾ।ಗೌಡ ಅವರದು ಡಿಕ್ಷನರಿ ಸ್ಪೆಷಾಲಿಟಿ. ಕಿಟ್ಟೆಲ್‌ನ ಅರ್ಥಕೋಶ ಉಂಟು ಅವರ ಮನೆಯಲ್ಲಿ. ತುಳು-ಕನ್ನಡ-ಇಂಗ್ಲಿಷ್‌ ನಿಘಂಟಿನ ದಪ್ಪದಪ್ಪದ ಎಂಟು ವಾಲ್ಯುಮ್‌ಗಳನ್ನು ಕೈಗೆಟಕುವಂತೆ ಇಟ್ಟುಕೊಂಡಿದ್ದಾರೆ ಅವರು. ತುಳು ಭಾಷೆಯ ಯಾವುದೇ ಶಬ್ದಾರ್ಥ ಬೇಕಿದ್ದರೆ ನಾನು ಅವರ ಮನೆಗೆ ಜಸ್ಟ್‌ ಒಂದು ಫೋನ್‌ಕಾಲ್‌ ಮಾಡಿದರೆ ಸಾಕು, ‘ಅರ್ಥ ಹುಡುಕಿಟ್ಟು ಆಮೇಲೆ ಫೋನ್‌ ಮಾಡಿ ಸಾಕು ಡಾಕ್ಟ್ರೆ' ಎಂದು ಹೇಳಿದರೂ ಬಿಡದೆ ಕೂಡಲೆ ನಿಘಂಟನ್ನು ತೆಗೆದು ವಿವರಣೆಯನ್ನು ಓದಿಹೇಳುವ ಅದಮ್ಯ ಉತ್ಸಾಹ ಅವರದ್ದು. ನೆನಪಿರಲಿ, ವೃತ್ತಿಯಲ್ಲಿ ಇವರು ಔಷಧಿ ಕೊಡುವ ಡಾಕ್ಟರು. ಪ್ರವೃತ್ತಿ ಭಾಷಾಭ್ಯಾಸ!

ಹಳೆತಲೆಮಾರಿನ ಕನ್ನಡಿಗ, ಉದ್ಯಮಿ, ಅರುವತ್ತು ಸಂವತ್ಸರಗಳ ಒಂದು ಚಕ್ರವನ್ನಿಡೀ ಕಂಡಿರುವ ಹಿರೀಕ ಡಾ। ಸಿದ್ದಲಿಂಗಯ್ಯ ಅವರ ಮನೆಯಲ್ಲಿರುವ ಕನ್ನಡಪುಸ್ತಕಗಳ ಸಂಖ್ಯೆ ಸಾವಿರ ದಾಟುತ್ತದೆ. ಡಾ। ಮೈ. ಶ್ರೀ ನಟರಾಜ ಅವರಂತೂ ‘ಬರೆಯುವವರೂ ಓದುವವರೂ' ಆಗಿರುವ ಅಪರೂಪದವರಲ್ಲೊಬ್ಬರು. ಇತ್ತೀಚಿನ ‘ಮಂದ್ರ'ವೂ ಸೇರಿದಂತೆ ಪರ್ವ, ಸಾರ್ಥ ಇತ್ಯಾದಿ ಎಸ್‌.ಎಲ್‌.ಭೈರಪ್ಪನವರ ಕಾದಂಬರಿಗಳೆಲ್ಲ ಅವರಲ್ಲಿವೆ. ತ.ಸು.ಶಾಮರಾಯರ ವಚನರಾಮಾಯಣ ಇದೆ, 6 ಸಂಪುಟಗಳ ಶಬ್ದಾರ್ಥ ಕೌಸ್ತುಭ ಇದೆ, ದೇವುಡು ನರಸಿಂಹಶಾಸ್ತ್ರಿಯವರ ಮಹಾ ಬ್ರಾಹ್ಮಣ/ಕ್ಷತ್ರಿಯ/ದರ್ಶನ ಸರಣಿಯ ಪುಸ್ತಕಗಳಿವೆ. ಸಂಗೀತದ ಗೀಳೂ ಇರುವ ನಟರಾಜ್‌ ಬಳಿ ‘ಕರ್ನಾಟಕ ಸಂಗೀತದ ಪಾರಿಭಾಷಿಕ ಶಬ್ದಕೋಶ'ವೂ ಇದೆ. ಇನ್ನು, ರಂಗಭೂಮಿ ಮತ್ತು ಸಾಹಿತ್ಯಗಳ ಮಹಾನ್‌ ಉಪಾಸಕರಾದ ವಿಜಯಾ ಮನೋಹರ್‌ ಕುಲಕರ್ಣಿಯವರಲ್ಲಿ ಕನ್ನಡನಾಟಕಗಳಂತೂ ಇದ್ದೇ ಇವೆ, ಜತೆಯಲ್ಲೇ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು', ‘ರಾಮಾಯಣ ದರ್ಶನಂ' ಕೂಡ ಇವೆ. ಕಾರಂತರ ‘ಮೂಕಜ್ಜಿಯ ಕನಸುಗಳು' ಇಂಗ್ಲಿಷ್‌ ಆವೃತ್ತಿ ಇದೆ. ತನಗೆ ಯಶವಂತ ಚಿತ್ತಾಲರ ಬರವಣಿಗೆ ತುಂಬ ಇಷ್ಟ ಎನ್ನುವ ಅವರು ಚಿತ್ತಾಲರ ಶಿಕಾರಿ, ಛೇದ, ಸುಳಿ, ಪುರುಶೋತ್ತಮ - ಪುಸ್ತಕಗಳನ್ನೂ ಇಟ್ಟುಕೊಂಡಿದ್ದಾರೆ.

ಇನ್ನೊಬ್ಬ ಸಾಹಿತ್ಯಪ್ರೇಮಿ ಸುರೇಶ ರಾಮಚಂದ್ರ. ಬೀಚಿಯವರ ಜತೆ ಒಡನಾಟವಿರಿಸಿಕೊಂಡಿದ್ದ ಸುರೇಶ್‌ ಬಳಿ ಬೀಚಿಲಿಖಿತ ಪುಸ್ತಕಗಳ ಪೈಕಿ ಹೆಚ್ಚಿನವು ಇವೆ. ಸಾಫ್ಟ್‌ವೇರ್‌ ಕಂಪೆನಿಯಾಂದನ್ನು ನಡೆಸುತ್ತಿರುವ ಸುರೇಶ್‌ ಎರಡು ತಿಂಗಳ ಹಿಂದೆ, ಬೆಂಗಳೂರಿಂದ ಅಮೆರಿಕೆಗೆ ಬಂದಿದ್ದ ಅವರ ಪ್ರೊಫೆಸರ್‌ ಅಶ್ವತ್ಥನಾರಾಯಣ - ಲಕ್ಷ್ಮಿ ದಂಪತಿಯಿಂದ ಕನ್ನಡ ಉಪನ್ಯಾಸಗಳನ್ನು ಮನೆಯ ಬೇಸ್‌ಮೆಂಟ್‌ನಲ್ಲೇ ಸುಮಾರು ಐವತ್ತು ಜನ ಸಾಹಿತ್ಯಾಭಿಮಾನಿ ಕನ್ನಡಿಗರ ಸಮಕ್ಷಮದಲ್ಲಿ ಏರ್ಪಡಿಸಿದ್ದರು. ಇಲ್ಲೇಕೆ ಅದನ್ನು ಪ್ರಸ್ತಾಪಿಸಿದೆನೆಂದರೆ, ಪ್ರೊ।ಅಶ್ವತ್ಥನಾರಾಯಣ ಅವರ ಬೆಂಗಳೂರಿನ ಮನೆಯಲ್ಲಿ ಸುಮಾರು 15000ಕ್ಕೂ ಹೆಚ್ಚು ಪುಸ್ತಕಗಳಿವೆಯಂತೆ! ಗುರುವಿಗೆ ತಕ್ಕ ಶಿಷ್ಯ ಸುರೇಶ್‌ ಇಲ್ಲಿ ಅಮೆರಿಕದಲ್ಲಿ ಅದನ್ನು ಸ್ವಲ್ಪವಾದರೂ ಅನುಸರಿಸುತ್ತಿದ್ದಾರೆ.

ರಾಜಧಾನಿ ಪರಿಸರದ ಈ ಕನ್ನಡಿಗರನ್ನೆಲ್ಲ ನಾನು ಕೇವಲ ಒಂದು ‘ಸ್ಯಾಂಪಲ್‌' ಆಗಿ ಉಲ್ಲೇಖಿಸಿರುವುದು. ಇವರಂತೆಯೇ, ಅಮೆರಿಕದ ಎಲ್ಲ ಭಾಗಗಳಲ್ಲಿ ನೆಲೆನಿಂತಿರುವ ಕನ್ನಡಿಗರೂ ವಿವಿಧಪ್ರಮಾಣದಲ್ಲಿ ಸ್ವಂತಗ್ರಂಥಾಲಯಗಳನ್ನು ಹೊಂದಿದವರೇ.

ಮೊನ್ನೆ ನ್ಯೂಜೆರ್ಸಿಯಲ್ಲಿ ‘ಬರಹ'ವಾಸು ಅವರ ಮನೆಗೆ ಹೋಗಿದ್ದೆ. ಅವರ ಪುಟ್ಟ ಅಪಾರ್ಟ್‌ಮೆಂಟ್‌ನಲ್ಲೂ ಕನ್ನಡಪುಸ್ತಕಗಳ ಸಂಗ್ರಹ ದೊಡ್ಡದೇ ಇದೆ! ಸಂಚಿಕೆಯಾಂದರ ರೂ 1.50 ಬೆಲೆಯಿದ್ದಾಗಿನ ‘ಅಮರಚಿತ್ರಕಥೆ'ಯಿಂದ ಹಿಡಿದು ಏಳು ಸಂಪುಟಗಳ ‘ಜ್ಞಾನಗಂಗೋತ್ರಿ'ಯಂತಹ ಬೃಹತ್‌ ಗ್ರಂಥಗಳೂ ಇವೆ. ವಾಸ್ತವವಾಗಿ ‘ಬರಹ' ತಂತ್ರಾಂಶ ರಚನೆಗೆ ಅವರಿಗೆ ಪ್ರೇರಣೆ ನೀಡಿದ್ದೇ ಬಾಲ್ಯದಿಂದಲೂ ಅವಿರತ ಕನ್ನಡಪುಸ್ತಕಗಳ ಓದು. ಶೇಷಾದ್ರಿವಾಸು ಅವರ ತಂದೆ ಕೆ.ಟಿ.ಚಂದ್ರಶೇಖರ್‌ ಅವರು ಬೆಂಗಳೂರಿಂದ ಹೊಸಹೊಸ ಪುಸ್ತಕಗಳನ್ನು ಕೊಂಡು, ಹೆಮ್ಮೆಯ ಸುಪುತ್ರನಿಗೆ ಕಳಿಸುತ್ತಲೇ ಇರುತ್ತಾರೆ. ಬರೀ ಪುಸ್ತಕವಲ್ಲ, ‘‘ವಾಸು, ಈ ಪುಸ್ತಕವನ್ನು ಬಾಲ್ಯದಲ್ಲಿ ನೀನು ಓದಿದ್ದೀಯ, ಆದರೂ ಈಗ ಇನ್ನೊಮ್ಮೆ ಓದಲು ನಿನಗೆ ಖಂಡಿತ ಇಷ್ಟವಾಗುತ್ತದೆಂದುಕೊಂಡಿದ್ದೇನೆ...'' ಎಂಬ ಆತ್ಮೀಯ-ಅಶೀರ್ವಾದದ ಕೈಬರಹವನ್ನು ಪುಸ್ತಕದಲ್ಲೇ ಮೂಡಿಸಿ ಕಳಿಸುತ್ತಾರೆ ಆ ಪೂಜ್ಯವ್ಯಕ್ತಿ!

ಮಹಾನ್‌ ಸಾಹಿತ್ಯಾಭಿಮಾನಿಗಳು ಮಾತ್ರ ದೊಡ್ಡದೊಡ್ಡ ಪುಸ್ತಕಗಳನ್ನಿಟ್ಟುಕೊಂಡಿರುತ್ತಾರೆಂದುಕೊಳ್ಳಬೇಡಿ. ಪಶ್ಚಿಮತೀರದ ಪೋರ್ಟ್‌ಲ್ಯಾಂಡ್‌ನಲ್ಲಿ ಐಬಿಎಂ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಎಕ್ಸ್‌ಪರ್ಟ್‌ ಆಗಿರುವ ನನ್ನ ‘ಬಿಡಿಟಿ ಇಂಜನಿಯರಿಂಗ್‌ ಕಾಲೇಜ್‌' ಸ್ನೇಹಿತ ಪ್ರಕಾಶ್‌ ಪ್ರತಿವರ್ಷ ಊರಿಗೆ ಹೋಗಿ ವಾಪಸಾಗುವಾಗ ಕನಿಷ್ಠ ಹತ್ತು-ಹದಿನೈದು ವಾರಗಳ ಸುಧಾ, ತರಂಗ ಸಂಚಿಕೆಗಳನ್ನು ತರುತ್ತಾನೆ. ಅಷ್ಟೇಕೆ, ಇಲ್ಲಿ ವರ್ಜೀನಿಯಾದಲ್ಲಿನ ಸಂಜಯ ರಾವ್‌ ಅವರ ಮನೆಗೆ ನ್ಯೂಜೆರ್ಸಿಯ ಯಾವುದೋ ಏಜನ್ಸಿಯಿಂದ ಈಗಲೂ ಪ್ರತಿವಾರ ಸುಧಾ ಬರುತ್ತದೆ, ತಿಂಗಳಿಗೊಂದು ‘ಚಂದಮಾಮ' ಬರುತ್ತದೆ! (‘ಚಂದಮಾಮ' ಎಂದೊಡನೆ ಬೇತಾಳ ಕತೆಗಳು - ರಾಜಾ ವಿಕ್ರಮನ ವಿಚಿತ್ರನಮೂನೆಯ ಪಾದರಕ್ಷೆಗಳು - ಹೆಗಲಲ್ಲಿ ಶವ - ಕೈಯಲ್ಲಿ ಖಡ್ಗ - ಮರಕ್ಕೆ ಜೋತುಬಿದ್ದ ಬಾವಲಿಗಳ ಚಿತ್ರ ಸುಳಿಯಿತೇ ನಿಮ್ಮ ಕಣ್ಮುಂದೆ?)

ಒಟ್ಟಿನಲ್ಲಿ ಅವರವರ ಭಾವಕ್ಕೆ ಅವರವರ ಭಕುತಿಗೆ... ತಕ್ಕಂತೆ ಪ್ರತಿಯಾಬ್ಬರಲ್ಲೂ ಕನ್ನಡಪುಸ್ತಕಗಳಿವೆ. ಅಡುಗೆ ಮಾಡುವುದನ್ನು ಕಲಿಯಲೆಂದು ತಂದ ‘ಕಡಂಬಿಲ ಸರಸ್ವತಿ ಅವರ ಅಡಿಗೆ ಪುಸ್ತಕ' ಇರಬಹುದು, ಮಕ್ಕಳಿಗೆ ಕಥೆ ಹೇಳಲೆಂದು ತಂದ ‘ಅನುಪಮಾ ನಿರಂಜನ ಅವರ ದಿನಕ್ಕೊಂದು ಕಥೆ' ಅಥವಾ ಅಂಗೈಯಗಲದ ‘ಭಾರತ ಭಾರತಿ' ಪುಸ್ತಕಗಳಿರಬಹುದು, ಮದುವೆಯಲ್ಲಿ ಉಡುಗೊರೆಯಾಗಿ ಬಂದ ‘ದಾಂಪತ್ಯ ದೀಪಿಕೆ'ಯಿರಬಹುದು, ಸಂಕಷ್ಟಚತುರ್ಥಿ, ವರಮಹಾಲಕ್ಷ್ಮಿ ವ್ರತ ಯಾವ ದಿನ ಬರುತ್ತದೆ ಎಂದು ನೋಡಿಟ್ಟುಕೊಳ್ಳಲು ತಂದ ಒಂಟಿಕೊಪ್ಪಲ್‌ ಪಂಚಾಂಗ ಇರಬಹುದು, ಪ್ರೌಢಶಾಲೆಯಲ್ಲಿರುತ್ತ ಕನ್ನಡ ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ಬಂದ ಪುಸ್ತಕವೊಂದಿರಬಹುದು, ವಿಮಾನಯಾನದ ಬೇಜಾರನ್ನು ಕಳೆಯುವುದಕ್ಕಾಗಿ ಕ್ಯಾಬಿನ್‌ಲಗ್ಗೇಜ್‌ ಬ್ಯಾಗಲ್ಲಿ ಬೆಂಗಳೂರಿಂದ ಹೊರಡುವ ಕೊನೆಘಳಿಗೆಯಲ್ಲಿ ತುರುಕಿಸಿಕೊಂಡ ಪುಸ್ತಕವಿರಬಹುದು - ಅಂತೂ ಕ್ರಮೇಣ ಪುಸ್ತಕಗಳು ಜಮೆಯಾಗುತ್ತಲೇ ಹೋಗುತ್ತವೆ; ‘ನೆಲಮಾಳಿಗೆ ಗ್ರಂಥಾಲಯ' ತನ್ನಿಂತಾನೆ ಆರಂಭವಾಗುತ್ತದೆ!

ಲೇಖನವನ್ನು ಮುಗಿಸುವ ಮುನ್ನ, ಅಮೆರಿಕನ್ನಡಿಗರಲ್ಲೇ ಅಗ್ರಶ್ರೇಯಾಂಕದ ‘ಸರಸ್ವತಿ ಆರಾಧಕ' ಶಿಕಾರಿಪುರ ಹರಿಹರೇಶ್ವರರ ಹೆಸರನ್ನು ಉಲ್ಲೇಖಿಸಲೇಬೇಕು. ಕ್ಯಾಲಿಫೋರ್ನಿಯಾದಲ್ಲಿರುವಾಗ ಅವರ ಮನೆಯ ಒಂದು ಕೋಣೆಯಿಡೀ ಪುಸ್ತಕಗಳೇ ಇದ್ದುವು. ಕಳೆದವರ್ಷ ಅಮೆರಿಕ ಜೀವನಕ್ಕೆ ವಿದಾಯ ಸಲ್ಲಿಸಿ ಮೈಸೂರಿಗೆ ಮರಳಿದಾಗ ಹಡಗಿನ ಮೂಲಕ ಲಗ್ಗೇಜನ್ನು ಸಾಗಿಸಿದ್ದು, ಒಟ್ಟು 350 ಕಾರ್ಟನ್‌ಬಾಕ್ಸ್‌ಗಳ ಪೈಕಿ 280ರಲ್ಲಿ ಪುಸ್ತಕಗಳೇ ಇದ್ದದು ್ದ! ಈಗಂತೂ ಬಿಡಿ, ಈ ಸರಸ್ವತಿ ಆರಾಧಕರು ಮೈಸೂರಿನ ಸರಸ್ವತಿಪುರಂನಲ್ಲೇ ಕನ್ನಡ ವಟವೃಕ್ಷದ ಭದ್ರಬೇರುಗಳನ್ನು ಊರಿದ್ದಾರೆ!

ಈ ಎಲ್ಲ ‘ಸರಸ್ವತಿ ಆರಾಧಕ'ರಿಗೂ ನನ್ನ ಶಿರಸಾ ಪ್ರಣಾಮಗಳು.

* * *

ಈ ವಾರ ರಸಪ್ರಶ್ನೆ ಕೇಳುತ್ತಿಲ್ಲ. ಆದರೂ ಹೆಚ್ಚುಕಡಿಮೆ ಕಡ್ಡಾಯವೇ ಎನ್ನುವಷ್ಟರಮಟ್ಟಿಗೆ ನಿಮ್ಮ ರೆಸ್ಪಾನ್ಸ್‌ ಬೇಕು. ‘ಅಮೆರಿಕನ್ನಡಿಗರ ಪುಸ್ತಕಪ್ರೀತಿ' ಅನ್ನುವುದನ್ನು ವಿಷಯದ ಚೌಕಟ್ಟಿಗಾಗಿ ಆಯ್ದುಕೊಂಡಿದ್ದೇನೆಯೇ ಹೊರತು ವಿಶ್ವವ್ಯಾಪಿ ವಿಚಿತ್ರಾನ್ನಪ್ರಿಯರೆಲ್ಲ (ಹೊರನಾಡ, ಗಡಿನಾಡ, ಒಳನಾಡ ಕನ್ನಡಿಗರೆಲ್ಲ) ಬಹುತೇಕ ಪುಸ್ತಕಪ್ರಿಯರೇ ಆಗಿರುತ್ತಾರೆಂಬುದು ನಿಸ್ಸಂಶಯ. ನೀವು ಬಹಳ ಅಭಿಮಾನ-ಮುತುವರ್ಜಿ-ಕಾಳಜಿಯಿಂದ ಇಟ್ಟುಕೊಂಡಿರುವ ಕನ್ನಡಪುಸ್ತಕವನ್ನು ಹೆಸರಿಸಿ srivathsajoshi@yahoo.com ವಿಳಾಸಕ್ಕೆ ಒಂದು ಈಮೈಲ್‌ ಬರೆಯುತ್ತೀರಾ? ಆಫ್‌ ಕೋರ್ಸ್‌ ನೀವೂ ಒಬ್ಬ ‘ನೆಲಮಾಳಿಗೆ ಗ್ರಂಥಪಾಲಕ'ರಾದರೆ ಒಂದಲ್ಲ ಕನಿಷ್ಠ ನಾಲ್ಕೈದು ಪುಸ್ತಕಗಳನ್ನಾದರೂ ತಪ್ಪದೇ ಉಲ್ಲೇಖಿಸಬೇಕೆಂದುಕೊಳ್ಳುತ್ತೀರಿ. ಹಾಗೇ ಮಾಡಿ, ಪರವಾ ಇಲ್ಲ. ಎಲ್ಲರ ‘ಪುಸ್ತಕಪ್ರೀತಿ'ಯನ್ನೂ ಕ್ರೋಢೀಕರಿಸಿ ಹೀಗೇ ಒಂದು ಇ-ಕ್ಯಾಟಲಾಗ್‌ ತಯಾರಿಸೋಣ. ಉತ್ತರಿಸಿ, ನೆರವಾಗಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vichitranna : A weekly column by Srivathsa Joshi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more