ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪ್ರದಾಯದ ಹಾಡು - ಕಣ್ಣೀರ ತೋಡು

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Kannada Vadhu ‘ಲೈಟಾಗಿರೋದನ್ನು ಬಯಸುವವರ ವಾರಾನ್ನ...’ ಎಂಬುದು ಈ ಅಂಕಣದ ಯು.ಎಸ್‌.ಪಿ (Unique Selling Proposition). ಇಲ್ಲಿಯವರೆಗೆ ಹೆಚ್ಚು ಕಡಿಮೆ ಎಲ್ಲ ಅಂಕಗಳಲ್ಲೂ ‘ತುಟಿಯಂಚಿನಲ್ಲಿ ನಗೆಮಿಂಚು’ ಮೂಡಿಸುವ ಪ್ರಯತ್ನವನ್ನೇ ಮಾಡಿದ್ದು. ಅದಕ್ಕೆ ಅಪವಾದವೆಂಬಂತೆ ಈ ವಾರ ಮಾತ್ರ ಸ್ವಲ್ಪ ‘ಸೆಂಟಿಮೆಂಟಲ್‌ ಸ್ಟಫ್‌’ ಒಂದನ್ನು ನಿಮ್ಮ ಮುಂದಿಡುತ್ತಿದ್ದೇನೆ, ಆಗಬಹುದೇ?

ಈ ಅಂಕಣವನ್ನು ಓದುವ, ಓದಿ ಪ್ರತಿಕ್ರಿಯಿಸುವ, ಉತ್ಸಾಹದಿಂದ ಸ್ಪರ್ಧೆಗಳಲ್ಲೂ ಭಾಗವಹಿಸುವ ಓದುಗರಲ್ಲಿ ಅರ್ಧದಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಜನ ಸರಳ ಮನಸ್ಸಿನ ಸದ್‌ಗೃಹಿಣಿಯರೂ, ಇಂದಿನ ಆಧುನಿಕ ಜಗತ್ತಿನ ಅವಶ್ಯಕತೆಗೆ ತಕ್ಕಂತೆ ಸಂಸಾರದ ನೊಗ ಹೊತ್ತು ವೃತ್ತಿಪರರಾಗಿ ಬೆವರು ಸುರಿಸುವ ಆತ್ಮೀಯ ಸಹೋದರಿಯರೆಲ್ಲರೂ ಇದ್ದಾರೆ. ಅವರೆಲ್ಲ ಸಂತೋಷದಿಂದಲೇ (ಸ್ವಲ್ಪ ಭಾವನಾತ್ಮಕವೆನಿಸಿದರೂ) ಇದನ್ನೋದಿ ತಮ್ಮನ್ನು, ತಂದೆ-ತಾಯಿ ಬಂಧುಬಳಗವನ್ನು, ತಮ್ಮದೇ ಮಗಳನ್ನು ಇದರೊಂದಿಗೆ ‘ಐಡೆಂಟಿಫೈ’ ಮಾಡಿಕೊಳ್ಳುತ್ತಾರೆಂದು ಎಣಿಸಿದ್ದೇನೆ.

Kodagina Vadhu being sentoffಇದೊಂದು ‘ಸಂಪ್ರದಾಯದ ಹಾಡು’. ಮದುವೆ-ಶೋಭನ-ಸೀಮಂತ ಇತ್ಯಾದಿ ಸಮಾರಂಭಗಳಲ್ಲಿ ಬೇರೆಬೇರೆ ವಿಧಿವಿಧಾನಗಳ ವೇಳೆ ಹೆಂಗಳೆಯರು ಹೇಳುವ ‘ಸಂಪ್ರದಾಯದ ಹಾಡು’ಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಮದುವೆಯ ಸಮಾರಂಭದಲ್ಲಿ ಕೊನೆಗೆ, ವಧುವನ್ನು ವರನ ಮನೆಗೆ ಕಳಿಸಿಕೊಡುವ ‘ಹೃದಯಸ್ಪರ್ಶಿ’ ಸನ್ನಿವೇಶದಲ್ಲಿ, ವಧುವಿನ ತಾಯಿಯೂ ಸೇರಿದಂತೆ ತವರು ಮನೆಯ ಹೆಂಗಳೆಯರೆಲ್ಲ ಸೇರಿ ಆಶೀರ್ವದಿಸಿ ಬೀಳ್ಕೊಡುವ ಹಾಡಿದು. ಹಾಡುವಾಗ ಸಹಜವಾಗಿಯೇ ಹಾಡುವವರೆಲ್ಲರ ಕಣ್ಣುಗಳಲ್ಲಿ ಕಾವೇರಿ-ಗೋದಾವರಿ-ಕೃಷ್ಣಾ ನದಿಗಳು ಹರಿಯತೊಡಗಿರುತ್ತವೆ. ‘ವಿದಾಯ’ದ ನೋವಿನಿಂದ ಮೂಗುಕೆಂಪಾಗಿ, ಉಕ್ಕಿ-ಬಿಕ್ಕಿ ಅಳು ಬರುತ್ತಿರುತ್ತದೆ. ಒಬ್ಬರ ಅಳುವನ್ನು ನೋಡಿಯೇ ಇನ್ನೊಬ್ಬರಿಗೆ ಅಳು ಬರುತ್ತದೆ - ಒಟ್ಟಿನಲ್ಲಿ ಅದೊಂದು touching scene.

Vadhu-Vara Returning from Kalyana Mantapಅಂತಹ ಸನ್ನಿವೇಶದ ಈ ‘ಸಂಪ್ರದಾಯದ ಹಾಡ’ನ್ನು - ನನ್ನ ಸಂಗ್ರಹದಲ್ಲಿ ಸಿಕ್ಕಿದ್ದನ್ನು - ಇಲ್ಲಿ ಯಥಾವತ್ತಾಗಿ ಕೊಟ್ಟಿದ್ದೇನೆ. ಓದಿ, ಚಿತ್ರಣ ನಿಮ್ಮ ಕಣ್ಮುಂದೆ ಸುಳಿದು ಕಣ್ಣಾಲಿಗಳಲ್ಲಿ ನೀರು ಬಂದರೂ ಬಕೆಟ್‌ಗಟ್ಟಲೆ ಕಣ್ಣೀರು ಸುರಿಸಬೇಡಿ. ಅಥವಾ, ‘ಸ್ತ್ರೀ ಅಬಲೆ; ಗಂಡನೆದುರು ಸಬ್‌ಮಿಸ್ಸೀವ್‌ ಆಗಿರಬೇಕು...’ ಎಂಬಂಥ ಚಿತ್ರಣ ಇದರಲ್ಲಿದೆ ಇತ್ಯಾದಿ ಬಂಡಾಯ ಧ್ವನಿಗಳ ಬಂಡಲ್‌ ನನ್ನ ಮೇಲೆಸೆಯಬೇಡಿ! ರಾಗವಾಗಿ, ಸರಾಗವಾಗಿ ಹಾಡುವಂಥವರಾಗಿ.

* * *

ಮೋಹದ ಮಗಳೆ ಲಾಲಿಸಿ ಕೇಳೆ
ಪ್ರೀತಿಯ ತರಳೆ ಕಂದಮ್ಮ ಕೇಳೆ ।। ಪ ।।

ಹೋಗುವೆ ನೀನು ಅಗಲುವೆ ನಾನು
ಹೇಳುವುದೇನು ಕಂದಮ್ಮ ಕೇಳೆ
ಇಂದಿನವರೆಗೆ ಇದ್ದಿಹ ಮನೆಗೆ
ಇಂದು ನೀ ಹೊರಗೆ ಹೋಗುವೆ ಸಾಗೆ ।। 1 ।।

ಮಾತೆಯ ತೆರದಿ ಅತ್ತೆಯ ನೋಡು
ತಾತನ ತೆರದಿ ಮಾವನ ನೋಡು
ಸೋದರರಂತೆ ಭಾವಂದಿರನ್ನು
ಕಾಣು ನೀ ಮಗಳೆ ಹೋಗಮ್ಮ ಸಾಗೆ ।। 2 ।।

ಮನೆಯಲಿ ಬೆಳೆದೆ ಆಡುತ ನಲಿದೆ
ಸತ್ಯದಿ ನಡೆದೆ ಸಂತಸ ಪಡೆದೆ
ಅಣ್ಣಂದಿರೊಡನೆ ತಂಗಿಯರೊಡನೆ
ಬಾಲಕರೊಡನೆ ಆಡಿದೆ ಮಗಳೆ ।। 3 ।।

ಹೋಗಿ ನೀ ಬಾರೆ ಜೀವನ ತಾರೆ
ಪತಿಮನೆ ಸೇರೆ ಸುಖ ಸುಮ್ಮನೀರೆ
ಜಗಳಾಡಬೇಡ ವಂಚಿಸಬೇಡ
ಮತ್ಸರ ಬೇಡ ಹೋಗಮ್ಮ ಸಾಗೆ ।। 4 ।।

ಪತಿಸೇವೆ ಮಾಡು ಕಷ್ಟವ ದೂಡು
ಸುಖವಾದ ಗೂಡು ಕಟ್ಟಮ್ಮ ಬೀಡು
ಮಂಗಲೆಯಾಗಿ ಕಷ್ಟವ ನೀಗಿ
ಬಾಳ್ವೆಯದಾಗಿ ಹೋಗಮ್ಮ ಸಾಗೆ ।। 5 ।।

ಮಕ್ಕಳ ಹಡೆದು ಭಾಗ್ಯವ ಪಡೆದು
ದೇವರ ನೆನೆದು ಕಂದಮ್ಮ ಬಾಳೆ
ಮಾತಿಗೆ ಮಾತು ಜಗಳಕೆ ಬೇಕು
ಬಿಡಬೇಕು ಸೋತು ಹೋಗಮ್ಮ ಸಾಗೆ ।। 6 ।।

ನಿನ್ನಯ ಪತಿಯು ನಿನಗಿನ್ನು ಜತೆಯು
ನೀನವನ ಸತಿಯು ಹೋಗಮ್ಮ ಸಾಗೆ
ಏಕಮ್ಮ ಅಳುವೆ ಕಣ್ಣೀರ ಸುರಿವೆ
ಅಳಬೇಡ ಮಗುವೆ ಹರುಷದಿ ಬಿಡುವೆ ।। 7 ।।

ನಾವೆಲ್ಲ ಸೇರಿ ಭಾಗ್ಯವ ಕೋರಿ
ಒಪ್ಪಿಸುತಿಹೆವು ಕೊಳ್ಳಿರಿ ಮಗುವ
ದೇವ ನೀ ನೋಡು ಭಾಗ್ಯವ ನೀಡು
ರಕ್ಷಣೆ ಮಾಡು ಅಳಿಸದೆ ನಗುವ ।। 8 ।।

ಹರಸುವೆ ನಿನ್ನ ಹೋಗಿ ಬಾ ಮಗುವೆ
ಮೋಹದ ಮಗಳೆ ಲಾಲಿಸಿ ಕೇಳೆ ।।

* * *

ನಿಮ್ಮ ಬಳಿ ಇಂತಹ ‘ಸಂಪ್ರದಾಯ ಹಾಡು’ಗಳಿದ್ದರೆ, ಅಥವಾ ಈ ಹಾಡಿನ ಕುರಿತು ಎರಡು ಮಾತುಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣ ಎಂದಿದ್ದರೆ ಪತ್ರ ಬರೆದು ತಿಳಿಸುವಿರಾ ? ವಿಳಾಸ : [email protected]


ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X