ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿಗಣೇಶ ಹಬ್ಬ ಸ್ಪೆಷಲ್‌ ‘ರಸಪ್ರಶ್ನೆ’!

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Ganesha ವಿಚಿತ್ರಾನ್ನದಲ್ಲಿ ಪದಬಂಡಿ, ಪದವಿನೋದ ಸ್ಪರ್ಧೆಗಳ ಭಾರೀ ಯಶಸ್ಸಿನಿಂದ ಉತ್ತೇಜಿತರಾದ ಓದುಗರು, ದಟ್ಸ್‌ಕನ್ನಡ ಸಂಪಾದಕರು ಮತ್ತು ವಿಚಿತ್ರಾನ್ನ ಅಂಕಣಕಾರ - ಹೀಗೆ ಎಲ್ಲರ ಅಪೇಕ್ಷೆಯಂತೆ ಹೊಸದೊಂದು ಪದಬಂಧವನ್ನು ವಿನ್ಯಾಸಗೊಳಿಸಲಾಗಿದೆ. ಪದಬಂಧ ಅನ್ನುವುದಕ್ಕಿಂತ ‘ರಸಪ್ರಶ್ನೆ’ ಎನ್ನೋಣ. ಗೌರಿಗಣೇಶ ಹಬ್ಬಗಳು ಬರುತ್ತಿರುವ ಸಡಗರದಲ್ಲಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳು, ಸೂಚನೆಗಳು ಇಂತಿವೆ:
  • ಎಂದಿನಂತೆಯೇ ನಾಲ್ಕಕ್ಷರದ ಉತ್ತರಗಳ ಸಂಪ್ರದಾಯವನ್ನೇ ಮುಂದುವರಿಸಲಾಗಿದೆ.
  • ಈ ಸಲ ಪ್ರತಿಯಾಂದು ಉತ್ತರಕ್ಕೂ ಒಂದೇ ಸುಳಿವು (ಕ್ಲೂ) ಕೊಡಲಾಗಿದೆ. ಆದರೆ ವಿವರಣೆ ವಿಪುಲವಾಗಿರುವುದರಿಂದ ಉತ್ತರ ಕಂಡುಕೊಳ್ಳಲು ನೀವು ಗಣೇಶನಪ್ಪನ ಸಾಹಸ (ಹರಸಾಹಸ)ವನ್ನೇನೂ ಮಾಡಬೇಕಾದ್ದಿಲ್ಲ. ಅಷ್ಟಾಗಿ ಈ ಎಲ್ಲ ಸ್ಪರ್ಧೆಗಳ ಮೂಲೋದ್ದೇಶ ‘ಮನರಂಜನೆಯಾಂದಿಗೆ ಮಾಹಿತಿ’ಯೇ ಹೊರತು ನಿಮ್ಮನ್ನು ಪರೀಕ್ಷಿಸುವುದಲ್ಲ.
  • ಹನ್ನೆರಡು ಉತ್ತರಗಳು ಮಾತ್ರವಲ್ಲದೆ, ಈ ಉತ್ತರಗಳ ಜೋಡಣೆಯಲ್ಲಿ ಕನ್ನಡ ವರ್ಣಮಾಲೆಗೆ ಸಂಬಂಧಿಸಿದಂತೆ ನಿಮಗೇನಾದರೂ ಗೋಚರಿಸಿದರೆ ಅದೇನು ಎಂಬುದನ್ನೂ ಕಡ್ಡಾಯವಾಗಿ ತಿಳಿಸಬೇಕು.
  • ನಿಮ್ಮ ಉತ್ತರಗಳನ್ನು ಬರಹ, ನುಡಿ, ಶ್ರೀಲಿಪಿ, ಕಂಗ್ಲೀಷ್‌, ಇಂಗ್ಲೀಷ್‌ - ನಿಮಗನುಕೂಲವಾದ ಯಾವುದೇ ವಿಧದಲ್ಲೂ ಕಳಿಸಬಹುದು.
  • ಸರಿಯುತ್ತರ ಕಳಿಸಿದವರ ಪಟ್ಟಿಯಿಂದ ಇಬ್ಬರು ಅದೃಷ್ಟಶಾಲಿಗಳನ್ನು ಚೀಟಿಯೆತ್ತಿ ನಿರ್ಧರಿಸಲಾಗುವುದು. ಚೀಟಿಯೆತ್ತುವ ಗೌರವವನ್ನು ಕಳೆದ ಸಲದ ಪದವಿನೋದ ವಿಜೇತೆ ರೂಪಶ್ರೀ ದತ್ತಾತ್ರಿ ಅವರಿಗೆ ವಹಿಸೋಣ. (ಹಾಗಾಗಿ ಅವರು ಸರಿಯುತ್ತರ ಕಳಿಸಿದರೂ ಹೆಸರು ಶಾಮೀಲಾಗುವುದಿಲ್ಲ).
  • ಈ ಸಲದ ಬಹುಮಾನ: 20 ಡಾಲರ್‌. ಸರಿಯುತ್ತರ ಕಳಿಸಿದ ಇಬ್ಬರಿಗೆ ತಲಾ 10 ಡಾಲರ್‌.
  • ಪ್ರಾಯೋಜಕರು : ಮಧುಸೂದನ ಪೆಜತ್ತಾಯ, ಬೆಂಗಳೂರು.
  • ಉತ್ತರಗಳೊಂದಿಗೆ ನಿಮ್ಮ ಹೆಸರು, ಊರು (ದೇಶ) ಅವಶ್ಯವಾಗಿ ತಿಳಿಸಲು ಮರೆಯಬೇಡಿ. ಸ್ಪರ್ಧೆಯಲ್ಲಿ ಗೆದ್ದರೆ ಬಹುಮಾನವನ್ನು ತಲುಪಿಸಲು ನಿಮ್ಮ ವಿಳಾಸವನ್ನು ಆಮೇಲೆ ಕೇಳಿ ಪಡೆಯಲಾಗುತ್ತದೆ.
  • ನಿಮ್ಮ ಜವಾಬುಗಳು ಭಾನುವಾರ ಆಗಸ್ಟ್‌ 31, 2003ರ ಒಳಗೆ [email protected] ವಿಳಾಸಕ್ಕೆ ತಲುಪಬೇಕು.
*

1. ಕರಾವಳಿ ಕರ್ನಾಟಕದ ಮತ್ತು ಮಲೆನಾಡಿನ ಕೆಲಭಾಗಗಳ ಜನಪದ ರಂಗಕಲೆಯ ಹೆಸರು ಕೇಳಿದೊಡನೆಯೇ ನಮಗೆಲ್ಲ, ವಿಶೇಷವಾಗಿ ಆ ಪ್ರದೇಶದಿಂದ ಬಂದವರಿಗೆ ಭಾಗವತಿಕೆ, ಚಂಡೆ ಮದ್ದಳೆ ಚಕ್ರತಾಳ, ಬಣ್ಣದವೇಷಗಳ ಸುಂದರ ಕುಣಿತ, ಮುಖಭಾವ, ಗತ್ತಿನ ಮಾತುಗಳು - ಎಲ್ಲ ನೆನಪಾಗುತ್ತವೆ. ಕೇರಳದ ಕಥಕ್ಕಳಿಯನ್ನು ಹೋಲುವ ಈ ರಂಗಕಲೆಯೇ ----

2. 1983ರಲ್ಲಿ ಕ್ರಿಕೆಟ್‌ ವಿಶ್ವಕಪ್‌ ಗೆದ್ದ ಭಾರತದ‘ಕಪಿಲ್ಸ್‌ ಡೆವಿಲ್ಸ್‌’ ತಂಡದಲ್ಲಿದ್ದ ಈ ಸ್ಪಿನ್ನರ್‌ ಚೆನ್ನಾಗಿ ಆಡಿ, ‘ಆಡಿ’ ಕಾರನ್ನು ಬಹುಮಾನವಾಗಿ ಪಡೆದ ಆಟಗಾರ. ಕ್ರಿಕೆಟ್‌ ಆಡುವುದಕ್ಕೆ ನಿವೃತ್ತಿ ಘೋಷಿಸಿದ ನಂತರ ಈಗ ಅತ್ಯುತ್ತಮ ವೀಕ್ಷಕ ವಿವರಣೆಗಾರರಲ್ಲೊಬ್ಬ. ಮುಂಬಯಿಯವರಾದರೂ ಮೂಲತಃ ಕನ್ನಡಿಗ! ಯಾರೀತ ?

3. ‘ಭದ್ರಾ ಜಲಾಶಯ ಯೋಜನೆ’ಯ ಅಣೆಕಟ್ಟು ಭದ್ರಾನದಿಗೆ ಅಡ್ಡವಾಗಿ ಇರುವುದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಒಂದು ಚಿಕ್ಕ ಹಳ್ಳಿ -----ಎಂಬಲ್ಲಿ.

4. ಗಣೇಶಹಬ್ಬದ ಸಂದರ್ಭದ ರಸಪ್ರಶ್ನೆಗಳಲ್ಲಿ ಒಂದಾದರೂ ಗಣೇಶನ ಬಗ್ಗೆ ಇರದಿದ್ದರೆ ಅವನಿಗೆ ಸಿಟ್ಟು ಬರಬಹುದು ! ಈ ಹಿಂದೆ ಚಂದ್ರನ ಮೇಲೆ ಸಿಟ್ಟುಬಂದ ಲಂಬೋದರ ತನ್ನ ದಾಡೆಹಲ್ಲೊಂದನ್ನೇ ತುಂಡರಿಸಿ ಚಂದ್ರನಿಗೆ ಹೊಡೆಯಲು ಹೊರಟಿದ್ದರಿಂದ ಅವನಿಗೆ ಬಂದ ಹೆಸರು------.

5. ಧ್ವನಿ ಕೇಳಿ ಗುರಿಯತ್ತ ಬಾಣಬಿಡುವ ವಿದ್ಯೆ, ದಶರಥನ ಹೆಗ್ಗಳಿಕೆಯಾಗಿತ್ತಾದರೂ ಶ್ರವಣಕುಮಾರನ ಸಾವಿನಿಂದಾಗಿ ಅದೇ ಅವನಿಗೆ ಮುಳುವಾಯಿತು. ------ಎಂಬ ಈ ಮಹಾನ್‌ ವಿದ್ಯೆಯ ಹೆಸರಲ್ಲೇ ಕೆಲವರ್ಷಗಳ ಹಿಂದೆ ಡಾ।ರಾಜ್‌ ಪೊಲೀಸ್‌ ಆಫೀಸರನಾಗಿ ಅಭಿನಯಿಸಿದ ಚಲಚ್ಚಿತ್ರವೂ ಬಂದು ಜಯಭೇರಿ ಗಳಿಸಿತ್ತು.

6. ‘ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ...’ ಪ್ರಾಥಮಿಕ ಶಾಲೆಯ ಕನ್ನಡ ಪಠ್ಯಪುಸ್ತಕದಲ್ಲಿದ್ದ ‘ತಿರುಕನ ಕನಸು’ ಹಾಡನ್ನು ಬರೆದ ಕವಿಯ ಹೆಸರು ಮುಪ್ಪಿನ ------.

7. ಸಚಿನ್‌ ತೆಂಡುಲ್ಕರ್‌ನಂತಹ ‘ಆಲ್‌ರೌಂಡರ್‌’ನನ್ನು ಅಥವಾ ‘ಅಲ್ಲಿ ಸಲ್ಲುವವನು ಇಲ್ಲಿಯೂ ಸಲ್ಲುತ್ತಾನೆ...’ ಎಂಬಂಥ ಬಹುಮುಖ ಪ್ರತಿಭೆಯುಳ್ಳವರನ್ನು ವರ್ಣಿಸಲು ಕನ್ನಡದ (ಸಂಸ್ಕೃತದಿಂದ ಎರವಲು ಪಡೆದದ್ದು ಎಂದು ಒಪ್ಪಿಕೊಳ್ಳೋಣ) ಪದ-----.

8. ಸೃಷ್ಟಿಯ ಆದಿಯಲ್ಲಿ ಮಧು ಮತ್ತು ಕೈಟಭರೆಂಬ ರಾಕ್ಷಸರಿಬ್ಬರು, ವೇದಗಳನ್ನು ಅಪಹರಿಸಿ ತ್ರಿಲೋಕಗಳನ್ನು ಅಲ್ಲೋಲಕಲ್ಲೋಲ ಮಾಡಿದಾಗ ಶೀಮನ್ನಾರಾಯಣನು ಆ ರಾಕ್ಷಸದ್ವಯರನ್ನು ಸದೆಬಡಿಯಲು ಧರಿಸಿದ ಅವತಾರ (ಇದು ದಶಾವತಾರಗಳ ಪೈಕಿ ಅಲ್ಲ); ಬೇಳೆ, ಅಕ್ಕಿ, ಬೆಲ್ಲ/ಸಕ್ಕರೆ, ಏಲಕ್ಕಿ, ಗೋಡಂಬಿ ಇತ್ಯಾದಿ ಎಲ್ಲವನ್ನೂ ಒಟ್ಟಿಗೇ ಬೇಯಿಸಿ ಈ ಹೆಸರಿನ ಒಂದು ಸಿಹಿಭಕ್ಶ್ಯವನ್ನೂ (ವಿಶೇಷವಾಗಿ ಮಾಧ್ವರು) ಮಾಡುತ್ತಾರೆ ------?

9. ಬೆಂಗಳೂರಿನ ಆಗ್ನೇಯ/ದಕ್ಷಿಣ ಭಾಗದ ಪ್ರದೇಶದ ತುಂಬ ಮೊದಲೆಲ್ಲ ಬಟ್ಟೆ ಒಗೆಯುವ ಅಗಸರು ಮಾತ್ರ ವಾಸಿಸುತ್ತಿದ್ದರೇ? ಆ ಪ್ರದೇಶದ ಹೆಸರು ಇಲ್ಲಿ ತಿರುಗುಮುರುಗಾಗಿದೆ. ಹೀಗೆ: ------

10. ಬೀಜಗಣಿತದಲ್ಲಿ ಅಜ್ಞಾತ ಪರಿಮಾಣವು ‘ಎಕ್ಸ್‌’ ಎಂದಿರಲಿ ಎನ್ನುವಲ್ಲಿ ‘ಎಕ್ಸ್‌’ ಎಂಬ ಆಂಗ್ಲ ಅಕ್ಷರದ ಬಳಕೆಯೇ ರೂಢಿಯಲ್ಲಿದ್ದರೂ ವೈದ್ಯಕೀಯ ಕ್ಷೇತ್ರದಲ್ಲಿ ಬಹೂಪಯೋಗಿಯಾಗಿರುವ ‘ಎಕ್ಸ್‌ ರೇ’ಗೆ ಸಮಾನಾರ್ಥಕವಾದ ಸುಂದರ ಕನ್ನಡ ಪದಪ್ರಯೋಗ ನಿಮಗೆ ಗೊತ್ತೇ-----

11. ದೀಪಾವಳಿ ಹಬ್ಬದ ಸಡಗರಗಳಲ್ಲೊಂದಾದ ತೈಲಾಭ್ಯಂಗ ನರಕಚತುರ್ದಶಿಯ ದಿನ ಬೆಳ್ಳಂಬೆಳಿಗ್ಗೆ ಆದರೂ ಚಾಂದ್ರಮಾನ ಪಂಚಾಂಗ ಪ್ರಕಾರ ಆಶ್ವಯುಜ ಕೃಷ್ಣ ಪಕ್ಷದ ಈ ತಿಥಿಯಂದು ನೀರುತುಂಬಿ ರಾತ್ರೆ ಚಂದ್ರೋದಯವಾಗುವಾಗ ತೈಲಾಭ್ಯಂಗ ಮಾಡಬೇಕೆಂದಿರುವುದು ------

12. ಈ ಚಿತ್ರವನ್ನು ನೋಡಿದೊಡನೆಯೇ ನಿಮ್ಮ ಮನಸ್ಸಿಗೆ ಹೊಳೆಯುವುದೇನು------

ಈ ಹನ್ನೆರಡು ಉತ್ತರಗಳ ಜೋಡಣೆಯ ಸೊಗಸೇನಾದರೂ ನಿಮ್ಮ ಕಣ್ಣಿಗೆ ಬಿತ್ತೇ? ಅದನ್ನೂ ಬರೆದು ತಿಳಿಸಿ. ನಿಮ್ಮ ವಿ-ಅಂಚೆಯನ್ನು ಕಳಿಸಬೇಕಾದ ವಿಳಾಸ: [email protected]

*

ನಮ್ಮೆಲ್ಲರಿಗೂ ಗೌರಿಗಣೇಶ ಹಬ್ಬ ಸಂತಸದಾಯಕವಾಗಿರಲಿ. ತಾಯಿ-ಮಗ ನಮ್ಮ ಮೊಗದ ನಗುವ ಅಳಿಸದಿರಲಿ!


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X