ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃತ್ಯುಂಜಯ ಮಂತ್ರದಲ್ಲಿ ಮುಳ್ಳುಸೌತೆ !

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

ತ್ರಿಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ ।
ಉರ್ವಾರುಕಮಿವ ಬಂಧನಾನ್‌ ಮೃತ್ಯೋರ್ಮುಕ್ಷೀಯ ಮಾಮೃತಾತ್‌ ।।
Mrityunjaya Manthra

ವೇದಗಳಲ್ಲಿ ಬರುವ ಎರಡು ಅತಿ ಪ್ರಮುಖ, ಜನಜನಿತ ಮಂತ್ರಗಳೆಂದರೆ, ಒಂದು ಗಾಯತ್ರಿ ಮಂತ್ರ ಮತ್ತು ಇನ್ನೊಂದು ಮೃತ್ಯುಂಜಯ ಮಹಾಮಂತ್ರ. ಮೃತ್ಯುಂಜಯ ಎಂದರೆ ಯಮನನ್ನೇ ಜಯಿಸಿದವ, ಅಂದರೆ ಈಶ್ವರ. ದೈಹಿಕವಾದ ಕಾಯಿಲೆಯುಳ್ಳವರು, ಮಾನಸಿಕ ನೆಮ್ಮದಿ ಕಳಕೊಂಡವರು, ಆತಂಕಕ್ಕೊಳಗಾದವರು, ವಿಪತ್ತು ಬರಬಹುದೆಂಬ ಭಯವುಳ್ಳವರು - ಇವರೆಲ್ಲ ಜಪಿಸುವುದು ಮೃತ್ಯುಂಜಯ ಮಂತ್ರ. ಅದೆಲ್ಲಿ ಮೃತ್ಯು ಗಬಕ್ಕನೆ ತಮ್ಮನ್ನು ಹಿಡಿದುಬಿಡುತ್ತದೋ ಎಂದು ಗಾಬರಿಗೊಂಡು ಶಂಭೋಶಂಕರನ ಶರಣಾಗತಿಯನ್ನರಸಿ ಉಸುರುವ ಮಂತ್ರ.

ಮಂತ್ರದ ಶಬ್ದಾರ್ಥ ಏನು ?

‘ಮೂರು ಕಣ್ಣುಗಳುಳ್ಳ (ಆಧ್ಯಾತ್ಮಿಕ - ಆಧಿಭೌತಿಕ - ಆಧಿದೈವಿಕ), ಸುಗಂಧಭರಿತ ಮತ್ತು ಪೋಷಣಾತ್ಮಕ ಗುಣಗಳುಳ್ಳ ಶಿವನು ಮೃತ್ಯುವಿನಿಂದ ನಮ್ಮನ್ನು ಪಾರು ಮಾಡಲಿ. ಹಣ್ಣಾದ ಒಂದು ಮುಳ್ಳುಸೌತೆ ಹೇಗೆ ತನ್ನಿಂತಾನೆ ಬಳ್ಳಿಯಿಂದ ಕಳಚಲ್ಪಡುತ್ತದೋ ಹಾಗೆಯೇ ಈ ಜಗದ ವ್ಯಾಮೋಹಗಳಿಂದ ನಮ್ಮನ್ನು ನಾವೇ ಪ್ರತ್ಯೇಕಿಸುವಂತಾಗಲಿ...’ ಎಂಬ ಆಶಯ ಈ ಮಂತ್ರದ ತಿರುಳು. ಇಲ್ಲೊಂದು ಸ್ವಾರಸ್ಯವಿದೆ. ಮಂತ್ರದಲ್ಲಿ ಶಿವನನ್ನು ಕೇಳುತ್ತಿರುವುದು ಒಂದೊಮ್ಮೆಗೆ ಮೃತ್ಯುವಿನ ದವಡೆಯಿಂದ ಪಾರುಮಾಡೆಂದೇ ಹೊರತು ಅಮರತ್ವವನ್ನೇ ಕೊಡು ಎಂದಲ್ಲ ! Just postpone the expiry date... ಅಷ್ಟೆ. ಹಾಗಾಗಿ ದೀರ್ಘಾಯುಷ್ಯವನ್ನು ಕೋರುವ ಮಂತ್ರ ಇದು ಎಂದರೂ ಸರಿಯೇ.

ಇದಿಷ್ಟು ಪೀಠಿಕೆ ಮತ್ತು ಮಂತ್ರದ ಪರಿಚಯ. ಮಂತ್ರದ ಬಗ್ಗೆ ಹೆಚ್ಚಿನ ಸಂಶೋಧನೆ ಅಥವಾ ನಿತ್ಯಪಠಣ ಮಾಡುವುದು-ಬಿಡುವುದು ನಿಮಗೆ ಬಿಟ್ಟದ್ದು. ನಾನು ಫೋಕಸ್‌ ಮಾಡುತ್ತಿರುವುದು ಈ ಮಂತ್ರದಲ್ಲಿ ಬರುವ ಮುಳ್ಳುಸೌತೆಯ (cucumber) ಮೇಲೆ ಮಾತ್ರ!

Mrithyunjaya‘ಉರ್ವಾರುಕ’ ಎಂದರೆ ಸಂಸ್ಕೃತದಲ್ಲಿ ಮುಳ್ಳುಸೌತೆ ಎಂದರ್ಥ (ಮರಾಠಿ ಭಾಷೆಯಲ್ಲಿ ‘ವಾಳೂಕ’ ಎಂಬುದಕ್ಕೆ ಈ ಸಂಸ್ಕೃತ ಶಬ್ದವೇ ಮೂಲವಿರಬಹುದು). ಸೌತೆ ಅಥವಾ ಆ ಪ್ರಭೇದದ ಎಲ್ಲ ತರಕಾರಿಗಳಲ್ಲೂ ಕಾಯಿ ಬೆಳೆದು ಹಣ್ಣಾಗಿ ಮಾಗಿದಾಗ ತೊಟ್ಟು ತನ್ನಿಂತಾನೆ ಬಳ್ಳಿಯಿಂದ ಪ್ರತ್ಯೇಕವಾಗುವುದು ಪ್ರಕೃತಿನಿಯಮ (ಬೆಳೆಗಾರರು ಈ ಸ್ಟೇಜ್‌ ಬರುವ ಮೊದಲೇ, ಅಂದರೆ ಕಾಯಿಯಾಗಿರುವಾಗಲೇ ಕೊಯ್ದುಬಿಡುವುದರಿಂದ ನಮಗೆ ಗೊತ್ತಾಗುವುದಿಲ್ಲ). ಹಾಗೆ ಮುಳ್ಳುಸೌತೆ ಬಳ್ಳಿಯಿಂದ ಸಪರೇಟಾಗುವುದನ್ನು, ಈ ಜಗತ್ತಿನ ವಸ್ತು-ವಿಷಯಗಳಿಂದ ನಮ್ಮನ್ನು ನಾವೇ ಪ್ರತ್ಯೇಕಿಸಿಕೊಂಡು ಹೊರಬರುವುದಕ್ಕೆ ಉಪಮೆಯಾಗಿಸಿದ್ದಾರೆ ಮಂತ್ರ ಬರೆದ ಋಷಿಗಳು. ಯಕ್ಕಶ್ಚಿತ್‌ ಮುಳ್ಳುಸೌತೆಯೂ ವೇದಗಳಲ್ಲಿ ಪ್ರಸ್ತಾಪವಾಗಬೇಕಾದರೆ ಎಷ್ಟು ಲಕ್ಕಿ ಇರಬೇಕು ನೋಡಿ!

‘ಉರ್ವಾರುಕಮಿವ ಬಂಧನಾತ್‌...’ ಎಂಬುದಕ್ಕೆ ಇನ್ನೊಂದು ನಮೂನೆಯ ವ್ಯಾಖ್ಯೆಯನ್ನು ಅರ್ಥೈಸಲು ಮಲೆನಾಡಿನ, ಕರಾವಳಿಯ ಹಳ್ಳಿಮನೆಗಳಿಗೊಮ್ಮೆ ಭೇಟಿ ಕೊಡಬೇಕು. ಬೇಸಿಗೆಯಲ್ಲಿ ಬೆಳೆದ ಮುಳ್ಳುಸೌತೆ, ಬಣ್ಣದಸೌತೆ (ಮಂಗಳೂರು ಸೌತೆ ಅನ್ನುತ್ತಾರಲ್ಲ - ಅದು), ಕುಂಬಳಕಾಯಿ, ಚೀನಿಕುಂಬಳ - ಇವನ್ನೆಲ್ಲ ಮನೆಯಲ್ಲಿ ಚಾವಡಿ ಅಥವಾ ಬೇರೆ ಗಾಳಿ-ಬೆಳಕು ಬರುವ ಕೋಣೆಯ ಛಾವಣಿಯ ತೊಲೆಗಳಿಗೆ (beams) ಒಂದೊಂದಾಗಿ ಬಾಳೆನಾರಿನ ಹಗ್ಗದಿಂದ ಅಥವಾ ಬೈಹುಲ್ಲಿಂದ ಮಾಡಿದ ಹುರಿಹಗ್ಗದಿಂದ ಕಟ್ಟಿಡುವ ಕ್ರಮ ಇತ್ತು; ಈಗಲೂ ಇದೆ ಕೆಲವು ಕಡೆ. ಹಗ್ಗದ ಕುಣಿಕೆಯ ಆಧಾರದಲ್ಲಿ ಸೌತೆಕಾಯಿ ತೊಲೆಗೆ ತೂಗಿರುತ್ತದೆ. ಮಳೆಗಾಲ ಮುಗಿಯುವವರೆಗೆ ಮನೆಯಲ್ಲಿ ತರಕಾರಿಯಾಗಿ ಉಪಯೋಗಿಸಲು ಈ ಹ್ಯಾಂಗಿಂಗ್‌ ತರಕಾರಿ ಸ್ಟೋರೇಜ್‌ ಒಳ್ಳೆಯ ಉಪಾಯ. ಇಲ್ಲೂ ಅಷ್ಟೇ, ಮೃತ್ಯುಂಜಯ ಮಂತ್ರದಲ್ಲಿ ಹೇಳಿದಂತೆ ಸೌತೆಕಾಯಿ ಯಾವುದೇ ಕ್ಷಣದಲ್ಲಿ ಹಗ್ಗ ಮುರಿದು ಕೆಳಗೆ ಬೀಳಬಹುದು! ಅದೇ ರೀತಿ, ಈ ಪ್ರಪಂಚದ ನಂಟೆಲ್ಲ ಮುಗಿದು ಆಯುಷ್ಯ ಹಗ್ಗ ತುಂಡಾಗಿ ನಮ್ಮ ಇನ್ನಿಂಗ್ಸೂ ಮುಗಿಯಬಹುದು! ಋಷಿಗಳ ಆಶ್ರಮಗಳಲ್ಲೂ ಸಹ ಈರೀತಿ ಮಳೆಗಾಲದ ಉಪಯೋಗಕ್ಕೆಂದು ಸೌತೆ-ಕುಂಬಳ ತರಕಾರಿಗಳನ್ನು ಹಗ್ಗಕಟ್ಟಿ ಸಂಗ್ರಹಿಸಿಡುತ್ತಿರುವ ಕ್ರಮವಿದ್ದಿರಬಹುದು. ಅದೇ ‘ಉರ್ವಾರುಕಮಿವ ಬಂಧನಾತ್‌’ ಎಂಬ ಉಪಮೆ ಮೂಡಲು ಕಾರಣವಾದದ್ದೂ ಇರಬಹುದು!

ಸರಿ, ಸೌತೆಕಾಯಿ ಸಂಗತಿಯನ್ನು ಒತ್ತಟ್ಟಿಗಿರಿಸಿ ಮೃತ್ಯುಂಜಯ ಮಂತ್ರದ ಬಗ್ಗೆ ಮತ್ತೆ ಇನ್ನೊಂದಿಷ್ಟು ಯೋಚಿಸೋಣ. ಅಸಲಿಗೆ ಮೃತ್ಯುವಿನ ಭಯದಿಂದ ಪಾರುಮಾಡು ಎಂದು ದೇವರಲ್ಲಿ ಯಾಕೆ ಮೊರೆಯಿಡಬೇಕು? 70ರ ದಶಕದಲ್ಲಿ ಬಂದ ಸೂಪರ್‌ಹಿಟ್‌ ಹಿಂದಿ ಸಿನೆಮಾ ‘ಆನಂದ್‌’ ನೋಡಿರಬಹುದು ನೀವು. (ಹೃಷಿಕೇಶ್‌ ಮುಖರ್ಜಿ ನಿರ್ದೇಶನ, ಅಮಿತಾಭ್‌ ಬಚ್ಚನ್‌ - ರಾಜೇಶ್‌ ಖನ್ನಾ ಅತ್ಯದ್ಭುತ ಅಭಿನಯ). ಕರುಳಿನ ಕ್ಯಾನ್ಸರ್‌ನಿಂದ ಇನ್ನು ಆರು ತಿಂಗಳಲ್ಲೇ ಸಾವನ್ನಪ್ಪುವುದಾಗಿ ಗೊತ್ತಿದ್ದರೂ ಆನಂದ್‌ (ರಾಜೇಶ್‌ ಖನ್ನಾ) ಕ್ಷಣಕ್ಷಣವೂ ಲವಲವಿಕೆಯಿಂದ ಪುಟಿಯುವ ಚೆಂಡಿನಂತೆ ಅದೆಷ್ಟು ಜೀವನೋತ್ಸಾಹದಿಂದ ‘ಬದುಕು’ತ್ತಾನೆ! ದಾರಿಯಲ್ಲಿ ಸಿಕ್ಕ ಅಪರಿಚಿತರನ್ನೂ ಸಹ ‘ಮುರಾರಿ ಲಾಲ್‌.. ಆಪ್‌ ಯಹಾ?’ ಎಂದು ಬೆನ್ನುತಟ್ಟಿ ಮಾತಿಗೇ ಆರಂಭಿಸುತ್ತಾನೆ! ಗಂಭೀರವದನ ‘ಬಾಬು ಮೊಶಾಯ್‌’ ಡಾ।ಭಾಸ್ಕರ್‌ (ಅಮಿತಾಭ್‌ ಬಚ್ಚನ್‌) ಕೂಡ ಹ ಹ್ಹ ಹ್ಹಾ... ಎಂದು ನಗುವಂತೆ ಮಾಡುವ ಆನಂದ್‌ ಒಮ್ಮೆಯಾದರೂ ಸಾವಿನ ಬಗ್ಗೆ ಚಿಂತಿಸಿದ್ದುಂಟೇ? ತನ್ನ ಸಾವು ಮುಂದೆ ಹೋಗಲಿ ಎಂದು ಪರಿತಪಿಸಿದ್ದುಂಟೇ?

ಆನಂದ್‌ನಂಥವರು ಇದ್ದಾರೆ, ಈಗಲೂ ಅಲ್ಲೊಬ್ಬರು ಇಲ್ಲೊಬ್ಬರು ಸಿಗುತ್ತಾರೆ. ಜೀವನಪ್ರೀತಿಯಲ್ಲಿ ಸ್ವತಃ ತಾವೂ ಮಿಂದು ಇತರರಿಗೂ ಖುಶಿ ಹಂಚುವುದರಲ್ಲೇ ತೊಡಗಿಸಿಕೊಂಡವರು. ಏಕೆಂದರೆ, ಆನಂದ್‌ ಚಿತ್ರದಲ್ಲೇ ಕೊನೆಗೂ ಆನಂದ್‌ ಇಹಲೋಕಕ್ಕೆ ಗುಡ್‌ಬೈ ಹೇಳಿದರೂ ಡಾ।ಭಾಸ್ಕರ್‌ ಸ್ವಗತದ ಮಾತು : ‘ಆನಂದ್‌ ಮರಾ ನಹೀ, ಆನಂದ್‌ ಮರ್ತೆ ನಹೀ । ’ ಹಾಗಾಗಿ ಮೃತ್ಯುಂಜಯ ಮಂತ್ರದ ಮೊರೆಹೊಕ್ಕವರೆಲ್ಲ, ಸಾವಿನ ಭೀತಿಯಲ್ಲೇ ಬದುಕಿನ ಆನಂದವನ್ನು ಕಳಕೊಂಡವರೆಲ್ಲ ‘ಆನಂದ್‌’ ಸಿನೆಮಾದ ಆನಂದ್‌ನನ್ನು ನೋಡಿ ಕಲಿಯಬೇಕು. ಮೃತ್ಯುಂಜಯ ಮಂತ್ರದಂಥ ಮಹಾಗಂಭೀರ ವಿಷಯದಲ್ಲೂ ಸೌತೆಕಾಯಿ ಉಲ್ಲೇಖದಂಥ ಆನಂದಕರ, ಸ್ವಾರಸ್ಯಕರ ಸಂಗತಿಗಳನ್ನು ಆನಂದಿಸಬೇಕೇ ಹೊರತು ಸಾವಿನ ಭಯದ ಕಲ್ಪನೆಯಲ್ಲಿ ಬದುಕಿನ ಸಂತಸವನ್ನು ಕಳಕೊಳ್ಳಬಾರದು! ಇದರ ಬಗ್ಗೆ ನಿಮ್ಮ ನಿಲುವೇನು?

* * *

ಇದು ಕೊ-ಇನ್ಸಿಡೆನ್ಸು ! ಮೃತ್ಯುಂಜಯ ಮಂತ್ರವು ಯಜುರ್ವೇದದ ಮೂರನೆ ಶಾಖೆಯ 60ನೇ ಮಂತ್ರ ಆಗಿರುವುದು ಮತ್ತು ಈ ವಾರದ ವಿಚಿತ್ರಾನ್ನವು 60ನೇ ಸಂಖ್ಯೆಯದಾಗಿರುವುದು ಮತ್ತು ಸಾಮಾನ್ಯವಾಗಿ ಆಸ್ತಿಕರು ಮಾಡುವ ‘60ರ ಶಾಂತಿ’ಯಲ್ಲಿ ಮೃತ್ಯುಂಜಯ ಹೋಮವೂ ಒಂದಾಗಿರುವುದು!

ಈ ವಾರದ ಪ್ರಶ್ನೆ : ಹಿಂದು ಪಂಚಾಂಗದಲ್ಲಿ 60 ಸಂಖ್ಯೆಗೆ ಏನು ಸಿಗ್ನಿಫಿಕೆನ್ಸ್‌ ? ಉತ್ತರ ನಿಮಗೆ ಗೊತ್ತಿದ್ದರೆ, ಈಗ (ಏಪ್ರಿಲ್‌ 2003 ರಿಂದ ಮಾರ್ಚ್‌ 2004ರವರೆಗೆ) ಆ 60ರ ಚಕ್ರದಲ್ಲಿನ ಎಷ್ಟನೆಯದು ಮತ್ತು ಯಾವುದು ಚಾಲ್ತಿಯಲ್ಲಿದೆ ? ಉತ್ತರ ಕಳಿಸಲು ವಿಳಾಸ : [email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X