• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿರುಕು ಬಿಟ್ಟ ಮಡಿಕೆಯ ಅಳಲು

By Staff
|
Srivathsa Joshi *ಶ್ರೀವತ್ಸ ಜೋಶಿ
ಒಂದಾನೊಂದು ಊರಿನಲ್ಲಿ ಮಂಜಣ್ಣನೆಂಬ ಒಬ್ಬ ಕೂಲಿಕೆಲಸದವನಿದ್ದನು. ತನ್ನೊಡೆಯನ ಮನೆಯ ಉಪಯೋಗಕ್ಕೆ, ದೂರದಲ್ಲಿ ಹರಿಯುತ್ತಿದ್ದ ನದಿಯಾಂದರಿಂದ ನೀರು ತರುವುದು ಅವನ ಕೆಲಸ. ಅದಕ್ಕಾಗಿ ಅವನು ಎರಡು ದೊಡ್ಡ ಮಡಿಕೆಗಳನ್ನು ಒಂದು ಉದ್ದದ ಬಿದಿರಿನ ತುಂಡಿನ ಎರಡೂ ತುದಿಗಳಿಗೆ ಹಗ್ಗದಿಂದ ಇಳಿಬಿಟ್ಟು ಆ ಬಿದಿರ ತುಂಡನ್ನು ಹೆಗಲ ಮೇಲಿರಿಸಿ ಹೊಳೆಯಿಂದ ನೀರು ಸಾಗಿಸುವ ವ್ಯವಸ್ಥೆ ಮಾಡಿಕೊಂಡಿದ್ದನು. (ರಾಮಾಯಣದಲ್ಲಿ ಬರುವ ಶ್ರವಣಕುಮಾರ ತನ್ನ ಅಂಧ ತಂದೆ-ತಾಯಿಗಳನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋದದ್ದು ಇದೇ ಪರಿಯಲ್ಲಿ ಎಂಬ ಚಿತ್ರಣ ನಿಮ್ಮ ಕಣ್ಮುಂದೆ ಸುಳಿಯಬಹುದು).

ಮಂಜಣ್ಣನ ಈ ಎರಡು ಮಡಿಕೆಗಳ ಪೈಕಿ ಒಂದು ಸ್ವಲ್ಪ ಬಿರುಕು ಬಿಟ್ಟಿತ್ತು. ಅದೇನೂ ಪೂರ್ತಿ ಒಡೆದುಹೋಗಿ ನಾಲಾಯಕ್ಕಾಗಿರಲಿಲ್ಲ , ಹಾಗಾಗಿ ಮಂಜಣ್ಣ ಅದನ್ನು ಬಿಸಾಡಿ ಬೇರೆ ಮಡಿಕೆ ಉಪಯೋಗಿಸುವ ಗೋಜಿಗೆ ಹೋಗಿರಲಿಲ್ಲ. ಆದರೂ ಮಡಿಕೆ ಬಿರುಕು ಬಿಟ್ಟದ್ದರಿಂದಾಗಿ ಏನಾಗುತ್ತಿತ್ತೆಂದರೆ ಹೊಳೆಯಿಂದ ಮನೆ ತಲುಪುವ ಹೊತ್ತಿಗೆ, ಒಂದು ಮಡಿಕೆಯಲ್ಲಿ ಕಂಠಮಟ್ಟ ನೀರು ತುಂಬಿರುತ್ತಿದ್ದರೆ ಬಿ.ಬಿ.ಮ (ಬಿರುಕು ಬಿಟ್ಟ ಮಡಿಕೆ)ಯಲ್ಲಿ ಅರ್ಧದಷ್ಟೇ ನೀರು.

A cracked pot storyಇದು ಸುಮಾರು ಒಂದೆರಡು ವರ್ಷ ಹೀಗೇ ನಡೆಯುತ್ತಿತ್ತು. ಮಂಜಣ್ಣ ಪ್ರತಿ ಸಲ ನೀರು ತರುವಾಗಲೂ ಒಂದೂವರೆ ಮಡಿಕೆಯಷ್ಟೇ ನೀರು ಮನೆ ತಲುಪುವುದು. ಇಡೀಯಾಗಿದ್ದ ಮಡಿಕೆಗೆ ಇದರಿಂದ ಒಂದು ರೀತಿಯ ಜಂಭ ಬಂದಿತ್ತು - ತಾನು ಯಾವುದಕ್ಕಾಗಿ ನಿರ್ಮಿತವಾಗಿದ್ದೇನೊ ಆ ಕೆಲಸವನ್ನು ನೂರು ಪ್ರತಿಶತ ಪರ್ಫೆಕ್ಟಾಗಿ ಮಾಡುತ್ತಿದ್ದೇನೆ ಎಂದು ಮನದಲ್ಲೇ ಅದು ಬೀಗುತ್ತಿತ್ತು. ಬಿ.ಬಿ.ಮಕ್ಕೆ ಮಾತ್ರ ಮನದಲ್ಲೇ ಕೊರಗು. ತನ್ನ ದಕ್ಷತೆ (ಎಫೀಷಿಯೆನ್ಸಿ) ಐವತ್ತು ಪ್ರತಿಶತ ಮಾತ್ರ ಇದೆಯಲ್ಲಾ , ತನ್ನ ಜನ್ಮವೇ ವ್ಯರ್ಥವಾಯಿತು ಎಂದು ಅದು ಯಾವಾಗಲೂ ಮ್ಲಾನವದನವಾಗಿರುತ್ತಿತ್ತು.

ಕೊನೆಗೂ ಒಂದು ದಿನ ಬಿ.ಬಿ.ಮ ಹೊಳೆಯ ಸಮೀಪವೇ, ನೀರು ತುಂಬಿಸಿ ಆದ ಮೇಲೆ ಮಂಜಣ್ಣನಲ್ಲಿ ತನ್ನ ಅಳಲನ್ನು ತೋಡಿಕೊಳ್ಳುವ ಧೈರ್ಯ ತಂದುಕೊಂಡಿತು. ‘ಅಯ್ಯಾ, ನನ್ನನ್ನು ಕ್ಷಮಿಸು...’ ಎಂದು ಅದು ಅಂದಾಗ ಮಂಜಣ್ಣನಿಗೆ ಆಶ್ಚರ್ಯ! ‘ಯಾಕಪ್ಪಾ ನೀನು ಅಳುತ್ತಿರುವೆ?’ ಎಂದು ಆತ ಕೇಳಲು ಬಿ.ಬಿ.ಮ ಬಿಕ್ಕುತ್ತ ಹೇಳಿತು - ‘ಕಳೆದೆರಡು ವರ್ಷಗಳಿಂದಲೂ, ನನ್ನ ಈ ಒಂದು ಬಿರುಕಿನಿಂದಾಗಿ ಅರ್ಧದಷ್ಟೇ ನೀರನ್ನು ನಿನ್ನ ಯಜಮಾನನ ಮನೆಗೆ ಸಾಗಿಸುತ್ತಿದ್ದೇನೆ. ನನ್ನ ನ್ಯೂನತೆಯಿಂದಾಗಿ ನಿನಗೂ ತೊಂದರೆ, ನೀನೂ ಹೆಚ್ಚು ಶ್ರಮವಹಿಸಬೇಕಾಗಿ ಬಂತು. ಇದು ನನಗೆ ತುಂಬ ವ್ಯಥೆ ಉಂಟುಮಾಡಿದೆ...’

ಮಂಜಣ್ಣನಿಗೂ ಮಡಿಕೆಯ ಮೇಲೆ ಮರುಕ ಹುಟ್ಟಿತು. ಅದನ್ನು ಸಮಾಧಾನ ಪಡಿಸುತ್ತ ಅವನೆಂದ - ‘ಇವತ್ತು ನಾವು ನೀರು ತೆಗೆದುಕೊಂಡು ಮನೆ ಕಡೆ ವಾಪಸಾಗುವಾಗ ದಾರಿಗುಂಟ ನೀನೊಮ್ಮೆ ಗಮನವಿಟ್ಟು ನೋಡಬೇಕು. ‘ಸರಿ, ಅವನು ಹೇಳಿದಂತೆ ಬಿ.ಬಿ.ಮ ದಾರಿಯ ಬದಿಯಲ್ಲೇನಿದೆ ಎಂದು ಇದೇ ಮೊದಲ ಸಲ ನೋಡುವ ಉತ್ಸಾಹ ತೋರಿತು. ದಾರಿಬದಿಯುದ್ದಕ್ಕೂ ಚಂದದ ಹೂಗಿಡಗಳು ಬೆಳೆದಿದ್ದುವು! ಸೂರ್ಯರಶ್ಮಿಯಲ್ಲಿ ಮಿಂದು ಮಿನುಗುತ್ತಿದ್ದ ಸುಂದರ ಹೂಗಳನ್ನು ನೋಡಿ ಅದಕ್ಕೆ ತುಂಬ ಖುಷಿಯಾಯಿತು. ಆದರೂ ಮನೆ ತಲುಪುವಾಗ ಮತ್ತೆ ಅದೇ ಮಾಮೂಲಿ ಕತೆ - ಅರ್ಧದಷ್ಟೇ ನೀರು. ಪುನಃ ಅದಕ್ಕೆ ಪಿಚ್ಚೆನಿಸಿತು.

Each of us is a cracked pot in one way or anotherಆಗ ಮಂಜಣ್ಣನೆನ್ನುತ್ತಾನೆ - ‘ಅಯ್ಯೋ ಬಿ.ಬಿ.ಮಡಿಕೆಯೇ, ಇವತ್ತು ಹೊಳೆಯಿಂದ ಬರುವಾಗ ದಾರಿಯ ಬದಿಯಲ್ಲಿ ಚಂದದ ಹೂಗಿಡಗಳನ್ನು ನೋಡಿದೆ ತಾನೆ ? ಇನ್ನೊಂದು ವಿಷಯ ನಿನ್ನ ಗಮನಕ್ಕೆ ಬಂತೇ ? ಹೂಗಿಡಗಳು ನೀನಿರುವ ಬದಿಯಲ್ಲಿ ಮಾತ್ರ ಇದ್ದುವು, ನಿನ್ನ ಜತೆಗಾರ-ಮಡಿಕೆಯ ಬಾಜೂ ಹೂಗಿಡಗಳಿರಲಿಲ್ಲ ! ಅದೇಕೆಂದರೆ ನನಗೆ ನಿನ್ನಲ್ಲಿರುವ ನ್ಯೂನತೆ/ಕೊರತೆಯ ವಿಚಾರ ಯಾವಾಗಲೋ ಗೊತ್ತಾಗಿತ್ತು. ನಾನು ಅದನ್ನೇ ಸದುಪಯೋಗಪಡಿಸಿದೆ. ನಿನ್ನ ಬಾಜೂವಿನಲ್ಲಿ ಮಾತ್ರ ನಾನು ದಾರಿಗುಂಟ ಹೂಗಿಡಗಳ ಬೀಜಗಳನ್ನು ಬಿತ್ತಿದ್ದೆ. ನೀನು ಪ್ರತಿದಿನವೂ ಅವಕ್ಕೆ ನೀರುಣಿಸಿ ಈಗ ನೋಡು ಅದೆಷ್ಟು ಚಂದದ ಹೂಗಿಡಗಳಾಗಿವೆ! ಕಳೆದೆರಡು ವರ್ಷಗಳಲ್ಲಿ ದಿನಾಲೂ ನಾನು ಈ ಹೂಗಳಲ್ಲೊಂದಿಷ್ಟನ್ನು ಕೊಯ್ದು ಒಡೆಯನ ಮನೆಯಲ್ಲಿ ಹೂಗುಚ್ಛವಿಡಲು ಮತ್ತು ಒಡೆಯನ ಮಗಳಿಗೆ ಮುಡಿಯಲು ಕೊಡುತ್ತಿದ್ದೇನೆ. ನಿನ್ನ ಬಿರುಕಿಲ್ಲದಿದ್ದರೆ ಇದು ಇಷ್ಟು ಸಲೀಸಾಗಿ ಆಗುತ್ತಿತ್ತಾ ? ನಿನ್ನ ಕೊರತೆಯನ್ನೇ ನಾನು ಹೇಗೆ ಬಂಡವಾಳವಾಗಿಸಿದೆ ನೋಡಿದೆಯಾ? ಇನ್ನಾದರೂ ನೀನು ನಿಷ್ಪ್ರಯೋಜಕನೆಂಬ ಕೊರಗನ್ನು ಬಿಟ್ಟುಬಿಡು...’’

* * *

ಇದೊಂದು ಕಟ್ಟುಕಥೆ; ಬರೆದವರಾರೋ ಗೊತ್ತಿಲ್ಲ. ಪ್ರಾಚೀನ ಭಾರತದಲ್ಲಿ (ಕೆಲವು ಹಳ್ಳಿಗಳಲ್ಲಿ ಈಗಲೂ) ‘ಬಿಷ್ಟಿ’ ಎಂದು ಕರೆಯಲ್ಪಡುತ್ತಿದ್ದ, ನೀರು ಹೊರುವ ವೃತ್ತಿಯ ಜನರಿರುತ್ತಿದ್ದರು. ತಲೆತಲಾಂತರದಿಂದ ಈ ಉದ್ಯೋಗ ಅವರಿಗೆ ಬರುತ್ತಿತ್ತು . ಬಾವಿಗಳು, ಬೋರ್‌ವೆಲ್‌ಗಳು ಬಂದ ಮೇಲೆ ಬಿಷ್ಟಿಗಳ ಪ್ರಾಮುಖ್ಯತೆ ಕಡಿಮೆಯಾಗಿರಬೇಕು. ಅಂಥ ಬಿಷ್ಟಿಯಾಬ್ಬನ ಜಾಣ್ಮೆಯ ಈ ಕಥೆ ಭಾರತದಲ್ಲೇ ಹುಟ್ಟಿದ್ದು ಈಗ ಪಾಶ್ಚಾತ್ಯ ದೇಶಗಳ ವಿಶ್ವವಿದ್ಯಾಲಯಗಳಲ್ಲಿ, ಚಿಕಿತ್ಸಾಲಯಗಳಲ್ಲಿ , ಉದ್ಯೋಗ ತರಬೇತಿಯ ವರ್ಕ್‌ಶಾಪ್‌ಗಳಲ್ಲೂ ಉಪಯೋಗವಾಗುತ್ತಿದೆ. ನನಗೆ ಇದನ್ನೋದಿ ಚೆನ್ನಾಗಿದೆಯೆಂದೂ, ವಿಚಿತ್ರಾನ್ನ ಓದುಗರೊಂದಿಗೆ ಇದನ್ನು ಹಂಚೋಣವೆಂದೂ ಅನಿಸಿ ಕನ್ನಡೀಕರಿಸಿ ಇಲ್ಲಿ ಬರೆದಿದ್ದೇನೆ. ನಿಮಗೂ (ಈ ಮೊದಲು ಇಂಗ್ಲೀಷ್‌ ರೂಪದಲ್ಲಿ ಓದಿರದಿದ್ದರೆ) ಇಷ್ಟವಾಗುತ್ತದೆಂದುಕೊಂಡಿದ್ದೇನೆ.

ಏಕೆಂದರೆ,

Each of us is a cracked pot in one way or another. But there is still no limit to the beauty we can create. ನಾವೆಲ್ಲ ಒಂದಿಲ್ಲೊಂದು ರೀತಿಯಲ್ಲಿ ಬಿರುಕು ಬಿಟ್ಟ ಮಡಿಕೆಗಳ ಗುಂಪಿಗೆ ಸೇರಿದವರೇ. ಪ್ರತಿಯಾಬ್ಬರಲ್ಲೂ ಒಂದಲ್ಲಾ ಒಂದು ಕೊರತೆ, ನ್ಯೂನತೆ ಇದ್ದೇ ಇರುತ್ತದೆ. ಒಂದೊಮ್ಮೆ ಎಲ್ಲರೂ, ಎಲ್ಲವೂ ಪರ್ಫೆಕ್ಟ್‌ ಆಗಿರುತ್ತಿದ್ದರೆ ಪ್ರಪ್ರಂಚ ಮಹಾ ಬೋರೆನಿಸುತ್ತಿತ್ತೋ ಏನೊ. ಹಾಗಾಗದೆ ಹೆಚ್ಚುಕಡಿಮೆ ಎಲ್ಲರೂ ಬಿ.ಬಿ.ಮ ಗಳಾಗಿರುವುದರಿಂದಲೇ ಜೀವನಕ್ಕೊಂದು ಅರ್ಥ, ಆಸಕ್ತಿ, ಉತ್ಸಾಹ.

ಕೊರತೆಯನ್ನೇ ಇತ್ಯಾತ್ಮಕ (positive attitude) ನಿಲುವಿನ ಒರತೆಯನ್ನಾಗಿಸುವುದರಲ್ಲಿರುವುದು ಜೀವನದ ಜಾಣ್ಮೆ !

ನೀವೇನನ್ನುತ್ತೀರಿ? ತಿಳಿಸಿ srivathsajoshi@yahoo.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more