ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಚಲ್ತಾ ಹೈ' ಮನೋಭಾವಕ್ಕೆ ನಾವು ಭಾರತೀಯರು ಕೊಕ್ಕೆ ಹಾಕುವುದೆಂದು?

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ನಾನು ಸಿಂಗಪುರಕ್ಕೆ ಹೊಸದಾಗಿ ಬಂದಾಗ ಇಲ್ಲಿನ ಕಂಪನಿಗಳಲ್ಲಿ ಗಮನಿಸಿದ ಅಂಶವೇನೆಂದರೆ, ಚೀನದ ಮತ್ತು ಭಾರತೀಯ ಮೂಲದ ಯಂತ್ರಗಳು ಮತ್ತು ಉನ್ನತ ತಂತ್ರಜ್ಞಾನದ ವಸ್ತುಗಳನ್ನು ಕೊಂಡುಕೊಳ್ಳುವ ಹಾಗಿರಲಿಲ್ಲ. ಚೀನ ಮತ್ತು ಭಾರತಗಳಿಂದ ಬಂದ ವಸ್ತುಗಳ ಗುಣಮಟ್ಟದ ಬಗ್ಗೆ ಇಲ್ಲಿನ ಉದ್ಯಮಿಗಳಲ್ಲಿ ಬಹಳ ಸಂಶಯವಿತ್ತು.

ಭಾರತದಲ್ಲಿದ್ದಾಗ ಅಲ್ಲಿ ತಯಾರಾದ ಅನೇಕ ಯಂತ್ರಗಳನ್ನು ತಾಂತ್ರಿಕವಾಗಿ ತುಲನೆ ಮಾಡಿದ ನನಗೆ, ನಮ್ಮ ದೇಶದಲ್ಲಿ ತಯಾರಾದ ಉತ್ಪನ್ನಗಳ ಗುಣಮಟ್ಟದ ಬಗ್ಗೆ ತಕ್ಕ ಮಟ್ಟಿಗೆ ಭರವಸೆ ಇತ್ತು. ಹೀಗಾಗಿ ಭಾರತದಿಂದ ಹೊಸದಾಗಿ ಬಂದ ನನಗೆ ಇಲ್ಲಿನ ಜನರ ಸಂಶಯ ಬಹಳ ಉತ್ಪ್ರೇಕ್ಷೆಯದೆನಿಸುತ್ತಿತ್ತು. ಆದರೆ ಇಲ್ಲಿನ ಕೆಲವು ಎಂಜಿನೀಯರುಗಳು ತಾವು ಭಾರತೀಯ ಉತ್ಪನ್ನಗಳನ್ನು ಕೊಂಡು ಮೋಸಹೋಗಿದ್ದರ ಬಗ್ಗೆ ಹೇಳಿದ್ದರು. ಅದೇ ರೀತಿ ಚೀನಿ ಉತ್ಪನ್ನಗಳ ಗುಣಮಟ್ಟದ ಬಗ್ಗೆಯೂ ದುರಭಿಪ್ರಾಯವೇ ಬೆಳೆದುಕೊಂಡಿತ್ತು.

ಸಿಂಗಪುರದಲ್ಲಿ ಜಿಎಸ್ಟಿ ಹೇಗಿದೆ, ಯಾರಿಗೆ ಲಾಭವಾಗುತ್ತಿದೆ?ಸಿಂಗಪುರದಲ್ಲಿ ಜಿಎಸ್ಟಿ ಹೇಗಿದೆ, ಯಾರಿಗೆ ಲಾಭವಾಗುತ್ತಿದೆ?

ಹೀಗಾಗಿ ನಾವು ಯುರೋಪು, ಜಪಾನ್ ಮತ್ತು ಅಮೇರಿಕದ ಯಂತ್ರ ಮತ್ತು ವಸ್ತುಗಳನ್ನಷ್ಟೇ ಕೊಂಡು ಕೊಳ್ಳುತ್ತಿದ್ದೆವು. ಆದರೆ ಕಳೆದ ಎರಡು ಮೂರು ವರ್ಷಗಳಲ್ಲಿ ನಾನು ಕೆಲಸ ಮಾಡುವ ವಲಯ (Sector) ಹಿನ್ನಡೆತವನ್ನು ಎದುರಿಸುತ್ತಿದೆ. ಹೀಗಾಗಿ ವಲಯದ ಎಲ್ಲ ಕಂಪನಿಗಳು ಉಳಿತಾಯ ಮಾರ್ಗ ಅನುಸರಿಸುತ್ತಿವೆ. ಆದುದರಿಂದ ನಿಧಾನವಾಗಿ ಈ ಕಂಪನಿಗಳು ಭಾರತ ಮತ್ತು ಚೀನದಂತಹ ದೇಶಗಳಲ್ಲಿ ತಯಾರಾದ ವಸ್ತುಗಳನ್ನು ಕೊಳ್ಳಲು ಮುಂದಾಗುತ್ತಿವೆ. ಆದರೂ ಇಲ್ಲಿನ ಎಂಜಿನೀಯರುಗಳ ಮನಸ್ಸಿನಲ್ಲಿ ಸಂಶಯ ಹೆಡೆಯಾಡುತ್ತಿರುವುದು ಎದ್ದು ಕಾಣುತ್ತದೆ.

Why India is still lagging behind other countries?

ನನ್ನ ಕೆಲಸದ ನಿಮಿತ್ತವಾಗಿ ನಾನು ಅನೇಕ ಯಂತ್ರ ಸಾಮಗ್ರಿಗಳನ್ನು ಉತ್ಪಾದಿಸುವ ಕಂಪನಿಗಳ ಮಾರಾಟ ಪ್ರತಿನಿಧಿಗಳನ್ನು ಭೇಟಿ ಮಾಡಬೇಕಾಗುತ್ತದೆ. ಕೆಲವು ಕಾಲದ ಹಿಂದೆ ಒಬ್ಬ ಚೀನಾ ದೇಶದ ಮಾರಾಟ ಪ್ರತಿನಿಧಿಯೊಡನೆ ನನ್ನ ಮೀಟಿಂಗು ಇತ್ತು. ಎಲ್ಲ ತಾಂತ್ರಿಕ ಮಾತುಕತೆಗಳಾದ ನಂತರ ಹಾಗೆಯೇ ಅವನ ಜೊತೆ ಮಾತನಾಡುತ್ತಿದ್ದಾಗ ನಮ್ಮ ಮಾತುಕತೆ ಉತ್ಪಾದನೆಗಳ ಗುಣಮಟ್ಟದ ಕಡೆಗೆ ತಿರುಗಿತು.

ಆಗ ಅವನು "ಕೆಲವೇ ವರ್ಷಗಳ ಹಿಂದೆ ವಿಶ್ವದ ಇತರ ಜನ ಚೀನದ ಉತ್ಪಾದನೆಗಳ ಗುಣಮಟ್ಟದ ಬಗ್ಗೆ ನಗಾಡುತ್ತಿದ್ದರು. ಈಗಲೂ ಚೀನದಲ್ಲಿ ತಯಾರಾದ ಉತ್ಪನ್ನಗಳ ಗುಣಮಟ್ಟವನ್ನು ಕುರಿತು ನಂಬಿಕೆ ಕಡಿಮೆ ಎಂಬುದು ನನಗೆ ಗೊತ್ತು. ಆದರೆ ನಾವು ಆ ಸಂಶಯವನ್ನು ಹೋಗಲಾಡಿಸಲು ಬಹಳ ಶ್ರಮಿಸುತ್ತಿದ್ದೇವೆ" ಎಂದು ಹೇಳಿದನು. ಮೀಟಿಂಗಿನಲ್ಲಿ ನಮ್ಮ ತಾಂತ್ರಿಕ ಪ್ರಶ್ನೆಗಳಿಗೆ ಆತನು ಸಮರ್ಪಕವಾಗಿ ಉತ್ತರ ಕೊಡುತ್ತಿದ್ದುದನ್ನು ಕಂಡಿದ್ದೆನು. ಅವನ ಉತ್ತರಗಳಲ್ಲಿ ನನಗೆ ಪ್ರಾಮಾಣಿಕತೆ ಎದ್ದು ಕಾಣುತ್ತಿದ್ದುದರಿಂದ ನನಗೆ ಅವನ ಮಾತಿನ ಮೇಲೆ ನಂಬಿಕೆಯಾಗಿತ್ತು.

ಸಿಂಗಪುರದ ಸಾರಿಗೆ ಸಂಪರ್ಕ ಸೂಪರೋ ಸೂಪರು!ಸಿಂಗಪುರದ ಸಾರಿಗೆ ಸಂಪರ್ಕ ಸೂಪರೋ ಸೂಪರು!

ವಿಶ್ವದ ಬಹುರಾಷ್ಟೀಯ ಕಂಪನಿಗಳು "ಬೆಲೆ ನಿಯಂತ್ರಣ (Cost Control)" ಮಾರ್ಗವನ್ನು ಅನುಸರಿಸುತ್ತಿದ್ದು, ಈ ಪರಿಸ್ಥಿತಿಯ ಲಾಭವನ್ನು ಚೀನದ ಕಂಪನಿಗಳು ಪಡೆಯಲು ಸರ್ವ ಸನ್ನದ್ಧವಾಗಿರುವುದು ನನಗೆ ಆ ಚೀನೀ ಮಾರಾಟ ಪ್ರತಿನಿಧಿಯೊಂದಿಗಿನ ಮಾತುಕತೆಯಲ್ಲಿ ಕಂಡು ಬಂದಿತು. ನನ್ನ ಇತರ ಚೀನಿ ಕಂಪನಿಗಳ ಜೊತೆಗಿನ ಮಾತುಕತೆಗಳಿಂದ ಅವು ಕೇವಲ ಕಡಿಮೆ ಬೆಲೆಯ ಆಧಾರದ ಮೇಲೆಯೇ ಸ್ಪರ್ಧಿಸುತ್ತಿಲ್ಲ. ಅದರ ಜೊತೆಯೇ ವಿಶ್ವದ ಉತ್ತಮ ಪ್ರತಿಸ್ಪರ್ಧಿ ಕಂಪನಿಗಳ ಜೊತೆ ಸ್ಪರ್ಧೆ ನಡೆಸಲು ತಮ್ಮ ಗುಣಮಟ್ಟವನ್ನು ಮೇಲಕ್ಕೆ ಎತ್ತರಿಸಲು ಮುನ್ನುಗ್ಗುತ್ತಿವೆ ಎಂದೆನಿಸುತ್ತಿದೆ.

Why India is still lagging behind other countries?

ಕಳೆದ ಎರಡು ದಶಕದಲ್ಲಿ ಚೀನದಲ್ಲುಂಟಾದ ವ್ಯಾಪಕ ಕೈಗಾರಿಕೀಕರಣದ ಫಲವಾಗಿ ಚೀನದ ಅನೇಕ ಕಂಪನಿಗಳು ಇಂದು ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿವೆ. ಎಲೆಕ್ಟ್ರಾನಿಕ್ ಉಪಕರಣಗಳ ತಯಾರಕರಾದ "ಹುಆ ವೆಯಿ", "ಲೆನೋವಾ", ಮತ್ತು "ಸಿಯಾ ಓಮಿ" ಯಂತಹ ಕಂಪನಿಗಳು ಇಂದು ಜಗತ್ತಿನ ಸರ್ವೋಚ್ಛ ಕಂಪನಿಗಳ ಜೊತೆ ಸ್ಪರ್ಧಿಸುತ್ತಿವೆ. ಇದೇ ರೀತಿ ಚೀನದ "Infrastructure" ದೇಶದುದ್ದಕ್ಕೂ ಅದ್ಭುತ ಎನಿಸುವ ಹಾಗೆ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಿವೆ.

ನಾನು ಭೇಟಿ ಮಾಡಿದ ಮಾರಾಟ ಪ್ರತಿನಿಧಿ ಚೀನದ ಉತ್ತರದ ಮೂಲೆಯಲ್ಲಿರುವ ಡಾಲಿಯನ್ ಎಂಬ ನಗರದಿಂದ ಬಂದವನಾಗಿದ್ದ. ಡಾಲಿಯನ್ ಚೀನದ ಇಪ್ಪತ್ತಾರನೇ ದೊಡ್ಡ ಶಹರ. ಅವನು ತನ್ನ ಶಹರದ ಬಗ್ಗೆ ಹೇಳುತ್ತ ಅಲ್ಲಿ ನಾಲ್ಕು ಮೆಟ್ರೋ ಲೈನುಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನೂ ಹಲವಾರು ಮೆಟ್ರೋ ಲೈನುಗಳು ನಿರ್ಮಾಣದ ಹಂತದಲ್ಲಿವೆ ಎಂದು ತಿಳಿಸಿದ. ಅಲ್ಲಿ ಟ್ರ್ಯಾಮ್ ವ್ಯವಸ್ಥೆ ಹಲವಾರು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೇ ನಗರ ಬಸ್ ಸಾರಿಗೆ ವ್ಯವಸ್ಥೆ ಬಹಳ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಡಾಲಿಯನ್ ನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಉತ್ತಮ ಬಂದರು ವ್ಯವಸ್ಥೆಯನ್ನು ಹೊಂದಿದೆ ಎಂದು ಕೂಡ ತಿಳಿಸಿದ.

ವಾಕ್ ಸ್ವಾತಂತ್ರ್ಯ ನಮ್ಮ ದೇಶದ ಗೌರವಕ್ಕಿಂತ ಹೆಚ್ಚೆ?ವಾಕ್ ಸ್ವಾತಂತ್ರ್ಯ ನಮ್ಮ ದೇಶದ ಗೌರವಕ್ಕಿಂತ ಹೆಚ್ಚೆ?

ಬರೀ ಬೀಜಿಂಗ್ ಮತ್ತು ಷಾಂಘಾಯಿಗಳ ಬೆಳವಣಿಗೆಯನ್ನು ಕುರಿತು ಕೇಳಿದ್ದ ನನಗೆ ಅವನ ಮಾತುಗಳಿಂದ ತಿಳಿದ ಅಂಶವೇನೆಂದರೆ, ಚೀನ ವೇಗವಾಗಿ ಬೆಳೆಯುತ್ತಿರುವುದಲ್ಲದೇ, ತನ್ನ ಬೆಳವಣಿಗೆಯನ್ನು ಸಮರ್ಪಕವಾಗಿ ವಿಕೇಂದ್ರೀಕರಿಸಿದೆ. ತನ್ನ ವಿವಿಧ ನಗರಗಳನ್ನು ಒಂದಕ್ಕೊಂದು ಜೋಡಿಸಿದೆಯಲ್ಲದೇ ನಗರಗಳ ಒಳಗಿನ ಸಾರಿಗೆ ವ್ಯವಸ್ಥೆಯನ್ನು ಕೂಡ ವೇಗವಾಗಿ ಅಭಿವೃದ್ಧಿಗೊಳಿಸುತ್ತಿದೆ. ಹೀಗಾಗಿ ಬರೀ ಬೀಜಿಂಗ್ ಮತ್ತು ಷಾಂಘಾಯಿಗಳಂತಹ ಮಹಾನಗರಗಳಷ್ಟೇ ಅಲ್ಲ, ಎರಡನೇ ಶ್ರೇಣಿಯ ನಗರಗಳಲ್ಲಿ ಕೂಡ ಕೈಗಾರಿಕೀಕರಣವನ್ನು ಶರವೇಗದಿಂದ ಕೈಗೊಳ್ಳುತ್ತಿದೆ.

ಅದಕ್ಕಿಂತ ಹೆಚ್ಚು ಗಮನಿಸಬೇಕಾದ ಅಂಶವೇನೆಂದರೆ, ಅಂತರಾಷ್ಟೀಯ ಮಟ್ಟದಲ್ಲಿ ಸ್ಪರ್ಧಿಸಬೇಕಾದರೆ ತನ್ನ ಸಿದ್ಧ ವಸ್ತುಗಳ ಗುಣಮಟ್ಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲೆತ್ತಬೇಕೆಂದು ಅಲ್ಲಿನ ಉತ್ಪಾದಕರಿಗೆ ಮತ್ತು ತಂತ್ರಜ್ಞರಿಗೆ ಮನವರಿಕೆಯಾಗುತ್ತಿದೆ ಎಂಬುದು.

ನಮ್ಮ ದೇಶದ ಪರಿಸ್ಥಿತಿಯನ್ನು ಇದಕ್ಕೆ ತುಲನೆ ಮಾಡಿದರೆ? ಎರಡು ವಿಷಯಗಳಲ್ಲಿ ನಾವು ವ್ಯತ್ಯಾಸವನ್ನು ಕಾಣಬಹುದು. ಮೊಟ್ಟ ಮೊದಲನೆಯದಾಗಿ ದೇಶದ ಮೂಲಭೂತ ಸೌಕರ್ಯಗಳು, ಎಂದರೆ ಅತ್ಯಾಧುನಿಕ ರಸ್ತೆ, ರೈಲು, ವಿಮಾನ ಸಂಚಾರ ವ್ಯವಸ್ಥೆ ಮತ್ತು ಬಂದರುಗಳು ಮುಂತಾದ ಸೌಲಭ್ಯಗಳ ಕೊರತೆ. ಎರಡನೆಯದಾಗಿ ನಮ್ಮ ಕುಂದು ಕೊರತೆಗಳನ್ನು ಸುಧಾರಿಸುವತ್ತ ನಾವು ತೋರಿಸುವ ಮನೋಭಾವ.

ಬ್ರಿಟಿಷರಿಗೆ ಭಾರತ ಕಳ್ಳರಿಗೆ ಕಂಡುಬಂದ ಖಜಾನೆ!ಬ್ರಿಟಿಷರಿಗೆ ಭಾರತ ಕಳ್ಳರಿಗೆ ಕಂಡುಬಂದ ಖಜಾನೆ!

ಮೂಲಭೂತ ಸೌಕರ್ಯಗಳತ್ತ ನೋಡಿದರೆ ಡಾಲಿಯನ್ ತರಹದ ಎರಡನೇ ಶ್ರೇಣಿಯ ನಗರಗಳ ಮಾತು ಹಾಗಿರಲಿ. ಬೆಂಗಳೂರಿನಂತಹ ಮೊದಲ ಶ್ರೇಣಿಯ ನಗರಗಳಲ್ಲಿಯೇ ಇನ್ನೂ ಮೆಟ್ರೋ ರೈಲಿನ ವ್ಯವಸ್ಥೆ ಪೂರ್ಣಗೊಂಡಿಲ್ಲ. ಬೆಂಗಳೂರು ತನ್ನ IT ಉತ್ಪನ್ನಗಳಿಗಾಗಿ ಜಗತ್ತಿನಲ್ಲಿಯೇ ಪ್ರಸಿದ್ಧವಾದ ನಗರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಮೂಲಭೂತ ಸೌಕರ್ಯಗಳಲ್ಲಿ ಬೆಂಗಳೂರು ಚೀನದ ಎರಡನೇ ಶ್ರೇಣಿಯ ನಗರಗಳಿಗಿಂತ ದಶಕಗಳಷ್ಟು ಹಿಂದಿದೆ ಎಂಬುದರಲ್ಲಿ ಸಂಶಯವಿಲ್ಲ.

ಬೆಂಗಳೂರಿನಷ್ಟೇ ದೊಡ್ಡದಾದ ವುಹಾನ್ ನಗರದಲ್ಲಿ ಹನ್ನೆರಡು ಕಾರ್ಯನಿರತ ಮೆಟ್ರೋ ಲೈನುಗಳಿವೆ. ಅವುಗಳಲ್ಲಿ ಮೊಟ್ಟ ಮೊದಲನೆಯ ಲೈನಿನ ನಿರ್ಮಾಣ ಶುರುವಾಗಿದ್ದು 2000ರಲ್ಲಿ. ಕೇವಲ ನಾಲ್ಕು ವರ್ಷಗಳಲ್ಲಿ ಮೊದಲ ಲೈನು ಕಾರ್ಯನಿರ್ವಹಿಸಲು ಆರಂಭಿಸಿತು. ಮುಂದಿನ ಹದಿನಾಲ್ಕು ವರ್ಷಗಳಲ್ಲಿ ಹನ್ನೊಂದು ಲೈನುಗಳು ನಿರ್ಮಾಣವಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದವು. ನಮ್ಮ ಬೆಂಗಳೂರಿನ ಮೆಟ್ರೋ ಲೈನಿನ ನಿರ್ಮಾಣ ಶುರುವಾಗಿದ್ದು 2006ರಲ್ಲಿ. ಇಲ್ಲಿಯವರೆಗೆ ಕೇವಲ ಎರಡು ಲೈನುಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದ ಮೂರು ಲೈನುಗಳು ಶುರುವಾಗಲು ಇನ್ನೂ ಅನೇಕ ವರ್ಷಗಳವರೆಗೆ ಕಾಯಬೇಕು. ಕೇವಲ ಬೆಂಗಳೂರು ಮಾತ್ರವಲ್ಲ. ಉಳಿದ ನಗರಗಳ ಕಥೆಯೂ ಇದೇ ರೀತಿಯಾಗಿದೆ ಅಲ್ಲವೆ?

ಎರಡನೆಯದಾಗಿ, ನಮ್ಮನ್ನು ನಾವು ಸತತವಾಗಿ ಸುಧಾರಿಸಿಕೊಳ್ಳುತ್ತಿರಬೇಕು ಎಂಬ ಮನೋಭಾವದ ಕೊರತೆ. ಚೀನದ ಕಂಪನಿಗಳು ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವತ್ತ ದಾಪುಗಾಲಿಡುತ್ತಿದ್ದರೆ, ನಾವು ಇನ್ನೂ ಆಮೆವೇಗದಲ್ಲಿ ನಡೆಯುತ್ತಿದ್ದೇವೆ ಎಂದು ನನ್ನ ಅನಿಸಿಕೆ. ನಾವಿನ್ನೂ ನಮ್ಮ "ಚಲ್ತಾ ಹೈ" ಮನೋಭಾವದಿಂದ ಹೊರಗೆ ಬಂದಿಲ್ಲ ಎಂದು ಭಾಸವಾಗುತ್ತದೆ. ಉದಾಹರಣೆಗೆ ಭಾರತ ಸಾವಯವ ಆಹಾರ ಪದಾರ್ಥಗಳ ಉತ್ಪಾದನೆ ಮತ್ತು ರಫ್ತಿಗೆ ಹೆಸರುವಾಸಿ. ಆದರೆ ಇತ್ತೀಚೆಗೆ ಭಾರತದ ಸಂಸ್ಥೆಯೊಂದು ಸಾವಯವ ಕೃಷಿ ಪದಾರ್ಥಗಳ ರಫ್ತಿನಲ್ಲಿ ಭಾರತದ ಉತ್ಪಾದಕರು ಮಾಡುತ್ತಿರುವ ಮೋಸವನ್ನು ಬಯಲಿಗೆಳೆದಿದೆ. ಕೃಷಿ ಉತ್ಪನ್ನಗಳನ್ನು ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿ ಬೆಳೆಸಿದರೂ ಅವುಗಳನ್ನು ಸಾವಯವ ಪದಾರ್ಥಗಳು ಎಂದು ತೋರಿಸಿ ರಫ್ತು ಮಾಡುವ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ ಎಂದು ಹೇಳಿದೆ.

ಈ ತರಹದ ಮೋಸ ಹೊಸದೇನಲ್ಲ. ಕೆಲ ವರ್ಷಗಳ ಹಿಂದೆಯೇ ಯುರೋಪಿನ ದೇಶಗಳು ಭಾರತದ ಮಾವಿನ ಹಣ್ಣುಗಳನ್ನು ನಿಷೇಧಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಮ್ಯಾನೇಜ್ ಮೆಂಟ್ ಚಿಂತಕ ಮತ್ತು ಬರಹಗಾರ ವಿ. ರಘುನಾಥನ್ ಅವರು ತಮ್ಮ "Games Indians Play" ಎಂಬ ಪುಸ್ತಕದಲ್ಲಿ ಇಂತಹ ಅನೇಕ ಉದಾಹರಣೆಗಳನ್ನು ಕೊಟ್ಟಿದ್ದಾರೆ. ಅವರ ಪ್ರಕಾರ, ಅಲ್ಪಾವಧಿಯ ದಿಢೀರ್ ಲಾಭಕ್ಕಾಗಿ ದೀರ್ಘಾವಧಿಯ ದೀರ್ಘಕಾಲೀನ ಲಾಭವನ್ನು ಉಪೇಕ್ಷಿಸುವದು ನಾವು ಭಾರತೀಯರ ಲಕ್ಷಣ.

ನನಗನಿಸುವ ಮಟ್ಟಿಗೆ ನಮ್ಮ ಸಾರ್ವತ್ರಿಕ ಬೆಳವಣಿಗೆಗೆ ಇವೆರಡು ಅಂಶಗಳು ಬಾಧಕವಾಗಿವೆ. ಮೊದಲನೆಯದಾದ, ಮೂಲಭೂತ ಸುಧಾರಣೆಗಳತ್ತ ನಮ್ಮ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆಯಾದರೂ, ಅದರ ಗತಿ ಇನ್ನೂ ಆಮೆ ವೇಗದ್ದು. ರಾಜಕೀಯ ಸಂಕಲ್ಪ ಶಕ್ತಿಯಿಂದ ಮಾತ್ರ ಅದರ ಗತಿಯನ್ನು ಗಣನೀಯ ಹೆಚ್ಚಿಸಬಹುದು. ಆದರೆ ಎರಡನೆಯದಾದ, ಸತತವಾಗಿ ಸುಧಾರಣೆಗೊಳ್ಳುವ ಮನೋಭಾವ ನಾವು ಭಾರತೀಯರೆಲ್ಲರ ಮನಸ್ಸಿನಲ್ಲಿಯೇ ಹುಟ್ಟಬೇಕು. ಎಂದು ನಾವೆಲ್ಲ ನಮ್ಮ "ಚಲ್ತಾ ಹೈ" ಮನೋಭಾವಕ್ಕೆ ಕೊಕ್ಕೆ ನೀಡುತ್ತೇವೋ ಅಂದು ನಮ್ಮ ದೇಶ ಮತ್ತು ಸಮಾಜ ಕೂಡ ಗುಣಮಟ್ಟದ ಉಚ್ಛಸ್ಥರದತ್ತ ದಾಪುಗಾಲಿಡಲು ತೊಡಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

English summary
Though India is on the way to become super power and country with better economy, why India is still lagging behind other countries? In developing infrastructure we are still slow and we don't think about improving all the time. Writes Vasant Kulkarni from Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X