ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್ ಜರ್ಮನಿಯಂತೆ ಆಗಲು ಭಾರತಕ್ಕೇಕೆ ಸಾಧ್ಯವಾಗಿಲ್ಲ?

By ವಸಂತ ಕುಲಕರ್ಣಿ
|
Google Oneindia Kannada News

ನಾನೀಗ ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಜರ್ಮನಿಯ ದೊಡ್ಡ ಕಂಪನಿಯೊಂದರ ಪ್ರೊಜೆಕ್ಟ್ ನಡೆಯುತ್ತಿದೆ. ಹೀಗಾಗಿ ನಮಗೆ ಅನೇಕ ಜರ್ಮನ್ ಜನರ ಜೊತೆ ಕೆಲಸ ಮಾಡುತ್ತಿದ್ದೇನೆ. ನನಗೆ ಕಂಡು ಬಂದ ವಿಷಯವೇನೆಂದರೆ ಜರ್ಮನ್ ಜನ ಕೆಲಸದಲ್ಲಿ ಕರಾರುವಾಕ್ಕು. ನಡೆ ಮತ್ತು ನುಡಿಗಳಲ್ಲಿ ಎದ್ದು ಕಾಣುವ ಖಚಿತತೆ ಮತ್ತು ಅವರು ಯಾವುದೇ ರೀತಿಯ ಅನಿಶ್ಚಿತತೆಯನ್ನು ಸಹಿಸುವವರಲ್ಲ.

ಹಿಂದೆ ನಾನು ಜಪಾನೀಯರ ಕಂಪನಿಯೊಂದರಲ್ಲಿ ಐದು ವರ್ಷ ಕೆಲಸ ಮಾಡಿದ್ದೆ. ಅಲ್ಲದೇ ಜಪಾನಿನಲ್ಲಿ ಸುಮಾರು ಮೂರು ತಿಂಗಳು ಕೆಲಸ ಮಾಡಿದ್ದೇನೆ ಕೂಡ. ಜಪಾನೀಯರು ಕೆಲಸದಲ್ಲಿ ತುಂಬಾ ಏಕಾಗ್ರತೆವುಳ್ಳವರು ಮತ್ತು ಶಿಸ್ತಿನವರು. ಅವರ ಕೆಲಸದಲ್ಲಿ ಎದ್ದು ಕಾಣುವ ಅಂಶವೆಂದರೆ ನಿಖರತೆ ಮತ್ತು ಗುಣಮಟ್ಟ. ಆದರೆ ಜಪಾನೀಯರಾಗಲಿ ಅಥವಾ ಜರ್ಮನ್‍ರಾಗಲಿ ಬುದ್ಧಿಶಕ್ತಿಯಲ್ಲಿ ನಮಗಿಂತ ಹೆಚ್ಚಿನವರೇನಲ್ಲ ಎಂದೆನಿಸುತ್ತದೆ. ಅಲ್ಲದೇ ನಾವು ತುಂಬಾ ಶ್ರಮಪಟ್ಟು ಕೆಲಸ ಮಾಡುತ್ತೇವೆ ಕೂಡಾ. [ಸ್ಮಾರ್ಟ್ ಕಾರ್ಡ್ ಕುರಿತು ಮತ್ತಷ್ಟು ಸ್ವಾರಸ್ಯಕರ ಸಂಗತಿ]

Why India is lagging behind Japan, Germany in growth

ಆದರೂ ನಾವೆಲ್ಲ ವರ್ಷಗಳಿಂದ ಅಲ್ಲಲ್ಲ, ದಶಕಗಳಿಂದ ಕೇಳುತ್ತಿರುವ ಪ್ರಶ್ನೆಗಳು ಮತ್ತೆ ಮತ್ತೆ ನಮ್ಮನ್ನು ಕಾಡುತ್ತವೆ. ನಮ್ಮ ದೇಶಗಳು ಸುಮಾರು ಏಕಕಾಲದಲ್ಲಿ ಅವನತಿಯ ಒಡಲಿನಿಂದ ಹೊರಹೊಮ್ಮಿದವು. ಆದರೂ ಈ ದೇಶಗಳು ಅದು ಹೇಗೆ ಇಷ್ಟೊಂದು ಬೇಗ ಬೆಳೆದು ಜಗತ್ತಿನಲ್ಲಿ ಮುಂದುವರೆದ ದೇಶಗಳಾದವು? ನಾವೇಕೆ ಅವರಿಗಿಂತ ಇಷ್ಟೊಂದು ಹಿಂದುಳಿದೆವು?

ಈ ಕೆಳಗಿನ ಪಟ್ಟಿಯಲ್ಲಿ ನಾನು ಸುಮಾರು ಅಷ್ಟೇ ವಿಸ್ತೀರ್ಣ ಮತ್ತು ಜನಸಂಖ್ಯೆಗಳನ್ನು ಹೊಂದಿದ ಮಹಾರಾಷ್ಟ್ರ ರಾಜ್ಯವನ್ನು ಈ ದೇಶಗಳಿಗೆ ಹೋಲಿಸುತ್ತಿದ್ದೇನೆ. [ನೋಟ್ ಬ್ಯಾನ್, ಐಟಿ ದಾಳಿ, ಮನಿ ಲಾಂಡ್ರಿಂಗ್ ಗೆ 7 ವಿಧಾನಗಳು]

Why India is lagging behind Japan, Germany in growth
ದೇಶ/ರಾಜ್ಯ ವಿಸ್ತೀರ್ಣ ಜನಸಂಖ್ಯೆ ಜಿಡಿಪಿ (GDP)
ಜಪಾನ್ 377 ಸಾವಿರ ಚದುರ ಕಿ ಮೀ 12 ಕೋಟಿ 4.4 ಟ್ರಿಲಿಯನ್ ಡಾಲರುಗಳು
ಜರ್ಮನಿ 357 ಸಾವಿರ ಚದುರ ಕಿ ಮೀ 8.2 ಕೋಟಿ 3.371 ಟ್ರಿಲಿಯನ್ ಡಾಲರುಗಳು
ಮಹಾರಾಷ್ಟ್ರ 300 ಸಾವಿರ ಚದುರ ಕಿ ಮೀ 11 ಕೋಟಿ 0.3 ಟ್ರಿಲಿಯನ್ ಡಾಲರುಗಳು

ಜರ್ಮನಿಗೆ ಹೋಲಿಸಿದರೆ ಮಹಾರಾಷ್ಟ್ರದ GDP ಸುಮಾರು ಹತ್ತು ಪಟ್ಟು ಕಡಿಮೆ ಮತ್ತು ಜಪಾನಿಗೆ ಹೋಲಿಸಿದರೆ ಅದು ಸುಮಾರು ಹದಿನೈದು ಪಟ್ಟು ಕಡಿಮೆ.

Why India is lagging behind Japan, Germany in growth
ಮಹಾರಾಷ್ಟ್ರ ನಮ್ಮ ದೇಶದ ಅತ್ಯಂತ ಮುಂದುವರೆದ ರಾಜ್ಯಗಳಲ್ಲಿ ಒಂದು. ಸಾಮಾಜಿಕವಾಗಿ ವಿವಿಧತೆಯನ್ನು ಹೊಂದಿದ್ದರೂ, ಭಾಷೆಯಲ್ಲಿ ಏಕತೆ ಮತ್ತು ರಾಜಕೀಯ ಪ್ರಜ್ಞೆಯನ್ನು ಹೊಂದಿದ ರಾಜ್ಯ. ಈ ರಾಜ್ಯ ಕೂಡ ಇವೆರಡು ದೇಶಗಳ ಅರ್ಧದಷ್ಟಾದರೂ ಬೆಳವಣಿಗೆ ಹೊಂದಲು ಸಾಧ್ಯವಾಗಲಿಲ್ಲ. ಕೆಳಗೆ ನಮ್ಮ ಕರ್ನಾಟಕವನ್ನು ಏಷ್ಯಾದ ಇನ್ನೊಂದು ಮುಂದುವರೆದ ದೇಶವಾದ ದಕ್ಷಿಣ ಕೊರಿಯದೊಂದಿಗೆ ಹೋಲಿಸುತ್ತಿದ್ದೇನೆ. ಇವೆರಡೂ ಜನಸಂಖ್ಯೆ ಮತ್ತು ವಿಸ್ತೀರ್ಣಗಳಲ್ಲಿ ಹೆಚ್ಚು ಕಡಿಮೆ ಸಮಾನ ರೂಪದ್ದಾಗಿವೆ:
ದೇಶ/ರಾಜ್ಯ ವಿಸ್ತೀರ್ಣ ಜನಸಂಖ್ಯೆ ಜಿಡಿಪಿ (GDP)
ದಕ್ಷಿಣ ಕೊರಿಯ 219 ಸಾವಿರ ಚದುರ ಕಿ ಮೀ 7.5 ಕೋಟಿ 1.305 ಟ್ರಿಲಿಯನ್ ಡಾಲರುಗಳು
ಕರ್ನಾಟಕ 192 ಸಾವಿರ ಚದುರ ಕೀ ಮೀ 6.1 ಕೋಟಿ 0.115 ಟ್ರಿಲಿಯನ್ ಡಾಲರುಗಳು

ದಕ್ಷಿಣ ಕೊರಿಯದ GDP ಕರ್ನಾಟಕದ GDPಗಿಂತ ಸುಮಾರು 12 ಪಟ್ಟು ದೊಡ್ಡದು. ನಾನು ದಕ್ಷಿಣ ಕೊರಿಯದಲ್ಲಿ ಸುಮಾರು ಆರು ತಿಂಗಳು ಕೆಲಸ ಮಾಡಿದ್ದೇನೆ. ದಕ್ಷಿಣ ಕೊರಿಯನ್ ಜನ ಕೂಡ ತುಂಬಾ ಪರಿಶ್ರಮಿಗಳು. ಇಂದು ನಮಗೆಲ್ಲರಿಗೂ ಗೊತ್ತಿರುವ ಸ್ಯಾಮ್ ಸಂಗ್ ಮತ್ತು ಹ್ಯೂಂಡೈಗಳಂತಹ ವಿಶ್ವ ವಿಖ್ಯಾತ ಕಂಪನಿಗಳು ಕೊರಿಯದ ಮೂಲದ ಕಂಪನಿಗಳು.

1945ರಲ್ಲಿ ಜಪಾನೀಯರಿಂದ ಸ್ವಾತಂತ್ರ್ಯ ಪಡೆದು, ನಂತರ ಭಯಾನಕವಾದ ಅಂತರಿಕ ಯುದ್ಧವನ್ನು ಅನುಭವಿಸಿ ಇಂದು ವಿಶ್ವದ ಅಗ್ರಗಣ್ಯ ದೇಶವಾಗಿ ಹೊರಹೊಮ್ಮಿದ ಈ ಪುಟ್ಟ ದೇಶ ನಮಗೆಲ್ಲರಿಗೂ ಮಾದರಿ.

ನಾವು ಭಾರತೀಯರು ಕೂಡ ಸಾಮಾನ್ಯವಾಗಿ ಬುದ್ಧಿವಂತರು, ಪರಿಶ್ರಮಿಗಳು ಮತ್ತು ಸ್ಪರ್ಧಾತ್ಮಕ ಮನೋಭಾವನೆಯುಳ್ಳವರು. ಆದರೂ ಅದು ಹೇಗೆ ನಾವು ಹಿಂದುಳಿದೆವು? ನಮ್ಮದೇಶ ದೊಡ್ಡದು. ಅಪಾರ ಜನಸಂಖ್ಯೆ ಹೊಂದಿದ್ದಲ್ಲದೇ, ಭಾಷೆ, ಧರ್ಮ ಮತ್ತು ಜಾತಿಗಳಿಂದೊಡಗೂಡಿ ತುಂಬಾ ಸಂಕೀರ್ಣವಾದದ್ದು. ಈ ದೇಶಗಳಿಗಿಂತ ನೂರು ಪಟ್ಟು ಹೆಚ್ಚು ವಿವಿಧತೆಯುಳ್ಳದ್ದು. ಆದರೆ ಈ ಕಾರಣಗಳಷ್ಟೇ ನಾವು ಹಿಂದುಳಿಯಲು ಕಾರಣವೇ? ಅಥವಾ ಇನ್ನೇನಾದರೂ ಕಾರಣಗಳಿವೆಯೇ?

ಈ ಪ್ರಶ್ನೆ ನನ್ನಂತೆ ವಿಚಾರಿಸುವ ಅನೇಕರನ್ನು ಕಾಡುತ್ತಿದೆ ಎಂಬುದು ನನಗೆ ಗೊತ್ತು. ನಮ್ಮ ದೇಶವನ್ನು ಬಡತನ, ಅಸ್ಪೃಶ್ಯತೆ, ಅಸಮಾನತೆ, ಭಯೋತ್ಪಾದನೆ, ಅನಕ್ಷರತೆ ಮುಂತಾದ ತೀವ್ರ ಸಮಸ್ಯೆಗಳು ಕಾಡುತ್ತಿವೆ. ಆದರೆ ಈ ಸಮಸ್ಯೆಗಳು ಸ್ವಯಂಕೃತಾಪರಾಧಗಳು. ನಮ್ಮ ಭಾರತ ಬಡ ದೇಶವಲ್ಲ. ಸಂಪನ್ಮೂಲಗಳಲ್ಲಿ ನಾವು ಶ್ರೀಮಂತರು. ಆದರೆ ನಮ್ಮ ಶ್ರೀಮಂತ ದೇಶದಲ್ಲಿ ಅನೇಕ ಬಡವರು ವಾಸಿಸುತ್ತಾರೆ. ಅಸ್ಪೃಶ್ಯತೆ, ಅಸಮಾನತೆ ಮತ್ತು ಅನಕ್ಷರತೆಗಳನ್ನು ಒದ್ದೋಡಿಸಲು ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ. ಭಯೋತ್ಪಾದನೆ ಬಹುಶಃ ಒಂದು ರೋಗಲಕ್ಷಣ.

ಸ್ವಾತಂತ್ರ್ಯಾನಂತರ ನಾವು ತುಳಿದ ದಾರಿ ತಪ್ಪಾಯಿತೇ? ನಮ್ಮ ಸಿದ್ಧಾಂತ ದೂರದೃಷ್ಟಿಹೀನವಾಗಿತ್ತೇ? ನಮ್ಮ ನಾಯಕರನೇಕರು ನೀತಿಗೆಟ್ಟವರಾಗಿ ಭೃಷ್ಟಾಚಾರವನ್ನು ಬೆಳೆಯಲು ಬಿಟ್ಟರೇ? ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಗ್ಧ ಜನರಲ್ಲಿ ಒಡಕು ಸೃಷ್ಟಿ ಮಾಡಲು ಇದ್ದ ಬಿರುಕುಗಳನ್ನು ಇನ್ನೂ ದೊಡ್ದದಾಗಿ ಬೆಳೆಯಲು ಬಿಟ್ಟರೇ? ಅಶಿಸ್ತು, ಅನಕ್ಷರತೆ ಮತ್ತು ಜನಸಂಖ್ಯೆಯಂತಹ ಸಮಸ್ಯೆಗಳನ್ನು ನಿವಾರಿಸಲು ಪರಿಣಾಮಕಾರಿ ಯೋಜನೆಗಳನ್ನು ಹಾಕಿಕೊಳ್ಳಲಿಲ್ಲವೇ? ಅಥವಾ ಮೂಲತಃ ನಾವು ಭಾರತೀಯರು ಸ್ವಾರ್ಥಿಗಳೇ? ನಾವು ನಿಜವಾದ ದೇಶಭಕ್ತರಲ್ಲದೇ ನಮ್ಮ ಸ್ವಂತಕ್ಕಾಗಿ ಎಂತಹ ನೀಚ ಮತ್ತು ದೇಶದ್ರೋಹಿ ಕೆಲಸಗಳನ್ನು ಮಾಡುತ್ತೇವೆಯೆ? ಅಥವಾ ಈ ಎಲ್ಲ ಕಾರಣಗಳ ಒಟ್ಟು ಮೊತ್ತ ನಮ್ಮ ಸ್ಥಿತಿಗೆ ಕಾರಣವೇ? ಭಾರತೀಯರಾದ ನಾವು ಈ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಂಡು ಎಚ್ಚರದಿಂದ ಹೆಜ್ಜೆಯಿಡುವ ದಿನಗಳು ಎದುರಾಗಿವೆ.

ನನ್ನ ಭಾರತೀಯ ಮಿತ್ರನೊಬ್ಬ ನಮ್ಮ ಜಪಾನೀ ಸಹೋದ್ಯೋಗಿಗೆ ಅದು ಹೇಗೆ ಜಪಾನೀಯರು ಕೇವಲ ನಾಲ್ಕು ದಶಕಗಳಲ್ಲಿ ಒಂದು ಮುಂದುವರೆದ ರಾಷ್ಟ್ರವಾಗಿ ಹೊರಹೊಮ್ಮಿದರು ಎಂದು ಕೇಳಿದ್ದಕ್ಕೆ, ಆ ಜಪಾನೀಯ ಹೇಳಿದ್ದು ಹೀಗೆ. "ಒಬ್ಬ ಭಾರತೀಯ ಬಹುಶಃ ಒಬ್ಬ ಜಪಾನಿಗಿಂತ ಹೆಚ್ಚು ಸಮರ್ಥ. ಆದರೆ ಇಬ್ಬರು ಜಪಾನೀಯರು ಕೂಡಿದರೆ ಮೂವರು ಭಾರತೀಯರಿಗಿಂತ ಹೆಚ್ಚು ಸಮರ್ಥರು. ಒಂದೇ ವಾಕ್ಯದಲ್ಲಿ ನಮ್ಮ ದೌರ್ಬಲ್ಯವನ್ನು ಇಷ್ಟು ಪರಿಣಾಮಕಾರಿಯಾಗಿ ಎತ್ತಿ ತೋರಿದ ಈ ವಾಕ್ಯ ನಮಗೆಲ್ಲರಿಗೂ ದಾರಿದೀಪವಾಗಬಲ್ಲುದೇ? ನಮ್ಮಲ್ಲಿ ಒಗ್ಗಟ್ಟನ್ನು ಮೂಡಿಸಲು ಸಹಾಯ ಮಾಡಬಹುದೇ?

English summary
Why India is not able to match the growth of Japan, Germany, Korea even though India has talent, man power? What can be done to match other countries? Vasant Kulkarni analyses the situation in India in comparison with other grown countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X