ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ನಮ್ಮ ಪೂರ್ವಾಗ್ರಹಗಳ ಕೈದಿಗಳು, ನಾವು ವಿತಂಡವಾದಿಗಳು!

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಹಲವು ವರ್ಷಗಳ ಹಿಂದೆ ನನ್ನ ಒಬ್ಬ ಸಹೋದ್ಯೋಗಿ ಧೂಮ್ರಪಾನಿಯಾಗಿದ್ದ. ಒಂದು ರೀತಿಯಲ್ಲಿ ಚೈನ್ ಸ್ಮೋಕರ್ ಎನ್ನಬಹುದು. ನಮ್ಮಲ್ಲಿ ಯಾರಾದರೂ ಅವನ ಜೊತೆ ಧೂಮ್ರಪಾನ ಉಂಟು ಮಾಡುವ ಹಾನಿಯನ್ನು ಕುರಿತು ಮಾತನಾಡಿ ಧೂಮ್ರಪಾನವನ್ನು ನಿಲ್ಲಿಸು ಎಂದು ಹೇಳಿದರೆ ಸಾಕು, ಶುರುವಾಗುತ್ತಿತ್ತು ಅವನ ಧೂಮ್ರಪಾನ ವಿಜ್ಞಾನ ಮತ್ತು ಪ್ರವಚನ.

ಅವನು ಮನುಷ್ಯ ಗಳಿಸುವ ರೋಗನಿರೋಧಕ ಶಕ್ತಿಯ ಉದಾಹರಣೆಯೊಂದಿಗೆ ಆರಂಭಿಸುತ್ತಿದ್ದ. ಅವನ ಪ್ರಕಾರ, ಮನುಷ್ಯ ಹೆಚ್ಚು ಹೆಚ್ಚು ರೋಗಗಳನ್ನು ಹರಡುವ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳಿಗೆ ತುತ್ತಾದರೆ ಅವನಲ್ಲಿ ಹೆಚ್ಚು ಹೆಚ್ಚು ರೋಗನಿರೋಧಕ ಶಕ್ತಿ ಉಂಟಾಗುತ್ತದೆ. ಅದರಂತೆಯೇ ಹೆಚ್ಚು ಹೆಚ್ಚು ಧೂಮ್ರಪಾನ ಮಾಡುವುದರಿಂದ ಅವನಲ್ಲಿ ಧೂಮ್ರಪಾನದ ಹಾನಿಯ ನಿರೋಧಕ ಶಕ್ತಿ ಉಂಟಾಗುತ್ತದೆ!

ನಂಬಿಕೆಗಳ ಸುತ್ತ ಶಾಲಾ ದಿನಗಳ ಮಧುರ ನೆನಪುಗಳುನಂಬಿಕೆಗಳ ಸುತ್ತ ಶಾಲಾ ದಿನಗಳ ಮಧುರ ನೆನಪುಗಳು

ಅವನ ಈ ವಿತಂಡವಾದ ನಮಗೆ ನಗು ತರಿಸುತ್ತಿತ್ತು. ನಾವೆಲ್ಲ ಸಹೋದ್ಯೋಗಿಗಳು ಜೋರಾಗಿ ಗೊಳ್ಳನೇ ನಕ್ಕರೆ ಅವನಿಗೆ ಸಿಟ್ಟು ಬರುತ್ತಿತ್ತು. ಅವನಿಗೆ ತನ್ನ ಈ ಧೂಮ್ರ ನಿರೋಧಕ ಶಕ್ತಿಯ ಸಿದ್ಧಾಂತದ ಬಗ್ಗೆ ಅಪಾರ ನಂಬಿಕೆಯಿತ್ತು. ಅವನು ಅನೇಕ ಚೇನ್ ಸ್ಮೋಕರ್‌ಗಳು ನೂರು ವರ್ಷ ಬದುಕಿರುವುದರ ಉದಾಹರಣೆಗಳನ್ನು ನಮ್ಮ ಮುಂದೆ ಪಠಿಸುತ್ತಿದ್ದ. ತನ್ನ ಸಿದ್ಧಾಂತದ ಮೇಲೆ ಅಷ್ಟೊಂದು ಗಾಢ ನಂಬಿಕೆ! ನಮಗೆ ನಗಬೇಕೋ ಅಳಬೇಕೋ ತಿಳಿಯುತ್ತಿರಲಿಲ್ಲ. ಹೀಗಾಗಿ ಸುಮ್ಮನಾಗಿ ಬಿಡುತ್ತಿದ್ದೆವು. ಅವನು ವಿಜಯೋತ್ಸವದ ನಗೆ ಪತಾಕೆಯನ್ನು ಹಾರಿಸುತ್ತಿದ್ದ.

ಇದನ್ನು ದೃಢೀಕರಣ ಪಕ್ಷಪಾತ ಅಂತಾರೆ

ಇದನ್ನು ದೃಢೀಕರಣ ಪಕ್ಷಪಾತ ಅಂತಾರೆ

ಮನಃಶಾಸ್ತ್ರದಲ್ಲಿ ಇದಕ್ಕೆ Confirmation Bias (ದೃಢೀಕರಣ ಪಕ್ಷಪಾತ) ಎಂದು ಕರೆಯುತ್ತಾರೆ. ತನ್ನ ಮನಸ್ಸಿನಲ್ಲಿ ಆಗಲೇ ಮನೆಮಾಡಿರುವ ನಂಬಿಕೆಗಳು ಅಥವಾ ಕಲ್ಪನೆಗಳನ್ನೇ ಮತ್ತೆ ಮತ್ತೆ ದೃಢೀಕರಿಸುವಂತಹ ಮಾಹಿತಿಗಳನ್ನೇ ಹುಡುಕುವ, ತಮಗೆ ಬೇಕಾದಂತೆಯೇ ಅರ್ಥೈಸಿಕೊಳ್ಳುವ ಮತ್ತು ಪುಷ್ಟೀಕರಿಸುವ ಮನುಷ್ಯನ ಪ್ರವೃತ್ತಿಯನ್ನು Confirmation Bias (ದೃಢೀಕರಣ ಪಕ್ಷಪಾತ) ಎಂದು ಕರೆಯುತ್ತಾರೆ. ಮನಸ್ಸಿನಲ್ಲಿ ಮನೆ ಮಾಡಿಕೊಂಡಿರುವ ಗಾಢ ಆಕಾಂಕ್ಷೆಗಳ ಪ್ರಭಾವವೇ ಈ Confirmation Bias (ದೃಢೀಕರಣ ಪಕ್ಷಪಾತ). ಈ ಗಾಢ ಆಕಾಂಕ್ಷೆಗಳ ಜಾಲ ಅದೆಷ್ಟು ಬಲಶಾಲಿ ಎಂದರೆ, ಮನುಷ್ಯ ತಾನು ನಂಬಿದ ಸಂಗತಿಗಳನ್ನು ಪುಷ್ಟೀಕರಿಸುವ ಸಾಕ್ಷ್ಯಾಧಾರಗಳನ್ನು ಮಾತ್ರ ಹುಡುಕಿ ಉಪಯೋಗಿಸುತ್ತಾನೆ ಹಾಗೂ ಅವುಗಳಿಗೆ ವಿರುದ್ಧವಾದ ಸಾಕ್ಷ್ಯಾಧಾರಗಳನ್ನು ತಿರಸ್ಕರಿಸುತ್ತಾನೆ ಅಥವಾ ನಿರ್ಲಕ್ಷಿಸುತ್ತಾನೆ. ಯಾವ ಮಾಹಿತಿಯು ನಮಗೆ ಖುಷಿ ನೀಡುತ್ತದೆಯೋ ಮತ್ತು ಯಾವುದು ನಮ್ಮ ಪೂರ್ವಾಗ್ರಹಗಳನ್ನು ದೃಢೀಕರಿಸುತ್ತದೆಯೋ ಅದನ್ನು ಮಾತ್ರ ಆಯ್ದುಕೊಳ್ಳುತ್ತೇವೆ. ಇದರ ಅರ್ಥ ನಾವು ನಮ್ಮ ಪೂರ್ವಾಗ್ರಹಗಳ ಕೈದಿಯಾಗಿದ್ದೇವೆ ಎಂದರೆ ತಪ್ಪೇನಿಲ್ಲ.

ಪೂರ್ವಾಗ್ರಹಗಳು ನಮ್ಮಲ್ಲಿ ಬೇರುಬಿಟ್ಟಿವೆ

ಪೂರ್ವಾಗ್ರಹಗಳು ನಮ್ಮಲ್ಲಿ ಬೇರುಬಿಟ್ಟಿವೆ

ಈ ಪಕ್ಷಪಾತ ನಮ್ಮ ದಿನನಿತ್ಯದ ನಡವಳಿಕೆಯಲ್ಲಿ ಕೂಡ ಎದ್ದು ಕಾಣುತ್ತದೆ. ಮಿತ್ರರೊಬ್ಬರಿಗೆ ಅನೇಕ ಬಾರಿ ಫೋನ್ ಮಾಡಿದಾಗ ಅವರು ಫೋನ್ ಎತ್ತಿಕೊಳ್ಳದಿದ್ದರೆ? ಸ್ವಾಭಾವಿಕವಾಗಿ ನಮ್ಮ ಮನಸ್ಸು ಅವರು ನಮ್ಮನ್ನು Avoid ಮಾಡುತ್ತಿದ್ದಾರೆಯೇ ಅಥವಾ ಅವರಿಗೇನಾದರೂ ಅಪಾಯವಾಗಿದೆಯೇ ಎಂದೆಲ್ಲಾ ಯೋಚಿಸತೊಡಗುತ್ತದೆ. ಅಷ್ಟೇ ಅಲ್ಲ, ಆ ತರಹದ ವಿಚಾರಗಳನ್ನು ಮನಸ್ಸು ನಂಬಲು ಆರಂಭಿಸುತ್ತದೆ ಮತ್ತು ಅದಕ್ಕೆ ಬೇಕಾದ ಕಾರಣಗಳನ್ನು ಹುಡುಕಲು ತೊಡಗುತ್ತದೆ. ಇದಷ್ಟೇ ಅಲ್ಲ, ಈ ಪಕ್ಷಪಾತ ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಹುಟ್ಟಿನಿಂದಲೇ ಮನುಷ್ಯ ತನ್ನ ಇತಿಹಾಸ, ಸಮಾಜ ಮತ್ತು ಸಂಸ್ಕೃತಿಗಳ ಪ್ರಭಾವದಿಂದ ಕೆಲವು ಪೂರ್ವಾಗ್ರಹಗಳನ್ನು ಬೆಳೆಸಿಕೊಂಡಿರುತ್ತೇವೆ. ಈ ಪೂರ್ವಾಗ್ರಹಗಳು ನಮ್ಮಲ್ಲಿ ಬೇರುಬಿಟ್ಟ ನಂಬಿಕೆಗಳಾಗಿರುತ್ತವೆ. ನಮ್ಮ ಮನಸ್ಸು ನಮ್ಮ ನಂಬಿಕೆಗಳನ್ನು ದೃಢೀಕರಿಸಲು ಬೇಕಾದ ಎಲ್ಲ ಸಾಕ್ಷಾಧಾರಗಳನ್ನು ಹುಡುಕಿಕೊಳ್ಳುತ್ತದೆ ಮತ್ತು ಅದಕ್ಕೆ ವ್ಯತಿರಿಕ್ತವಾದ ಎಲ್ಲ ತಥ್ಯಗಳನ್ನು ನಿರ್ಲಕ್ಷಿಸುತ್ತದೆ.

ಟಿವಿ ಚರ್ಚೆಗಳಲ್ಲಿ ದಿನನಿತ್ಯ ನೋಡುತ್ತೇವೆ

ಟಿವಿ ಚರ್ಚೆಗಳಲ್ಲಿ ದಿನನಿತ್ಯ ನೋಡುತ್ತೇವೆ

ನಮ್ಮ ಟಿವಿ ಪರದೆಗಳಲ್ಲಿಂದು ನಡೆಯುವ ಚರ್ಚೆಗಳನ್ನು ನೋಡಿದರೆ ಈ Confirmation Biasನ ಪಾತ್ರ ಎದ್ದು ಕಾಣುತ್ತದೆ. ಅದರಲ್ಲಿ ಭಾಗವಹಿಸುವ ಎಲ್ಲ ತಜ್ಞರು ತಂತಮ್ಮ ನಂಬಿಕೆಗಳನ್ನು ಬಲವಾಗಿ ನಂಬಿರುತ್ತಾರೆ ಮತ್ತು ಅದನ್ನು ಪ್ರತಿಪಾದಿಸಲು ಅನೇಕ ಉದಾಹರಣೆಗಳು ಮತ್ತು ತರ್ಕಗಳನ್ನು ಉಪಯೋಗಿಸುತ್ತಾರೆ. ನಮ್ಮ ಮನಸ್ಸು ಯಾವ ಪಕ್ಷವನ್ನು ನಂಬಿರುತ್ತದೋ ಆ ವಾದ ನಮಗೆ ಅಪ್ಯಾಯಮಾನವೆನಿಸುತ್ತದೆ ಮತ್ತು ಅವರ ಪಕ್ಷ ನಮಗೆ ಹೆಚ್ಚು ಪ್ರಬಲವಾಗಿ ಕಾಣತೊಡಗುತ್ತದೆ.

ಜಗಳ ಹಚ್ಚಿ ಮೋಜು ನೋಡುವುದು

ಜಗಳ ಹಚ್ಚಿ ಮೋಜು ನೋಡುವುದು

ಇಂದು ಇದೇ Confirmation Biasನಿಂದಾಗಿ ನಮ್ಮ ದೇಶ ಸೆಕ್ಯೂಲರ್ ಮತ್ತು ನಾನ್ ಸೆಕ್ಯೂಲರ್ ಬಣಗಳಾಗಿ ವಿಂಗಡಿಸಲ್ಪಟ್ಟಿದೆ. ತಮ್ಮ ತಮ್ಮ ನಂಬಿಕೆಗಳನುಸಾರವಾಗಿ ಎರಡೂ ಬಣಗಳು ತಮ್ಮ ವಿರೋಧಿಗಳು ದೇಶಕ್ಕೆ ಅಪಾಯ ಎಂದು ಬಲವಾಗಿ ನಂಬುತ್ತವೆ. ಎರಡೂ ಬಣಗಳಲ್ಲಿ ತೀವ್ರವಾದಿಗಳಿಗಿಂತ ಸೌಮ್ಯವಾದಿಗಳೇ ಹೆಚ್ಚಾಗಿರುವುದು ಯಾರಿಗೂ ಕಾಣುವುದಿಲ್ಲ. ಎರಡೂ ಬಣಗಳ ಬೆಂಬಲಿಗರಲ್ಲಿ ಅಧಿಕಾಧಿಕ ಜನರಿಗೆ ಹೇಗಾದರೂ ಮಾಡಿ ದೇಶ ಮತ್ತು ಪ್ರಜೆಗಳ ಉದ್ಧಾರವೇ ಬೇಕಾಗಿರುತ್ತದೆ ಎಂಬುದು ಇಬ್ಬರಿಗೂ ಗೊತ್ತಾಗುವುದಿಲ್ಲ. ಅವರವರ ನಂಬಿಕೆಗಳ ಕುದುರೆಯ ಮೇಲೆ ಯಾವುದನ್ನೂ ನಂಬದ ಪುಢಾರಿಗಳು ಸವಾರಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಮತ್ತು ಅವರನ್ನು ಪರಸ್ಪರ ವಾಗ್ಯುದ್ಧಕ್ಕೋ, ಕೈ ಕೈ ಮಿಲಾಯಿಸುವುದಕ್ಕೋ ಪ್ರೋತ್ಸಾಹಿಸಿ ತಾವು ಮಾತ್ರ ಮೋಜು ನೋಡುತ್ತಾರೆ ಎಂಬುದು ಹೆಚ್ಚಿನ ಜನರಿಗೆ ತಿಳಿಯುವುದೇ ಇಲ್ಲ.

ಎಲ್ಲ ತಪ್ಪುಕಲ್ಪನೆಗಳ ತಾಯಿ

ಎಲ್ಲ ತಪ್ಪುಕಲ್ಪನೆಗಳ ತಾಯಿ

ಆದುದರಿಂದ ಈ Confirmation Bias ಅನ್ನು ರಾಲ್ಫ್ ಡೊಬೆಲ್ಲಿ ತಮ್ಮ "Art of Thinking Clearly" ಎಂಬ ಪುಸ್ತಕದಲ್ಲಿ "Mother of all misconceptions" ಎಂದು ಕರೆಯುತ್ತಾರೆ. ಇದರಿಂದಲೇ ಸಮಾಜದಲ್ಲಿ ಕೆಲವು ಕುರುಡು ಅಭಿಪ್ರಾಯಗಳು ಮತ್ತು ಮೂಢನಂಬಿಕೆಗಳು ಉಳಿದು ಬೆಳೆಯುತ್ತವೆ. ಹೆಚ್ಚಾಗಿ ಈ ಕುರುಡು ನಂಬಿಕೆಗಳು ಸಮಾಜವನ್ನು ಅವನತಿಗೇ ಎಳೆಯುತ್ತದೆ ಎಂಬುದು ಸತ್ಯ. ಎರಡನೇ ಮಹಾಯುದ್ಧ ಕಾಲದಲ್ಲಿ ಜ್ಯೂಯಿಶ್ ಜನಾಂಗದ ವಿರುದ್ಧ ಹಿಟ್ಲರ್ ಮತ್ತು ಅವನ ಪಕ್ಷ ಬೆಳೆಸಿದ ಸುಳ್ಳು ಅಭಿಪ್ರಾಯದಿಂದ ಮಿಲಿಯಗಟ್ಟಲೇ ಜನರ ಆಹುತಿಯಾಗಲಿಲ್ಲವೇ? ಈಗಲೂ ಪಾಕಿಸ್ತಾನದ ಇತಿಹಾಸ ಪುಸ್ತಕಗಳಲ್ಲಿ ಗಜನಿ ಮಹಮ್ಮದ್‍ನ ದಾಳಿಯ ಮೊದಲು ಭಾರತ ಕತ್ತಲು ಖಂಡವಾಗಿತ್ತು ಎಂದೇ ಬಿಂಬಿಸಿ ಅಲ್ಲಿಯ ಜನರ ಬ್ರೇನ್ ವಾಶ್ ಮಾಡುತ್ತಿಲ್ಲವೇ? ಇಂತಹ ಅನೇಕ ಉದಾಹರಣೆಗಳನ್ನು ನಾವು ಕಾಣಬಹುದು.

ಸುಳ್ಳಿನ ಗಾಳಿಗೋಪುರ ಕಟ್ಟಲು ಪ್ರೇರೇಪಣೆ

ಸುಳ್ಳಿನ ಗಾಳಿಗೋಪುರ ಕಟ್ಟಲು ಪ್ರೇರೇಪಣೆ

ಜನರ ತಿಳಿವಳಿಕೆಯ ಮೇಲೆ ಮಾಯೆಯನ್ನು ಹರಡಿ ಒಂದು ರೀತಿಯಲ್ಲಿ Confirmation Bias ಕಟುವಾದ ವಾಸ್ತವಿಕತೆಯಿಂದ ಜನರನ್ನು ಕ್ಷಣಿಕವಾಗಿಯೇ ಆಗಲಿ, ಪಾರುಮಾಡುತ್ತದೆ ಎನ್ನಬಹುದು. ಆದರೆ ಅದು ನಮ್ಮನ್ನು ಸುಳ್ಳಿನ ಗಾಳಿಗೋಪುರ ಕಟ್ಟಲು ಕೂಡ ಪ್ರೇರೇಪಿಸುತ್ತದೆ ಎಂಬುದೂ ಸತ್ಯ. ಈ ಮೊದಲೇ ಹೇಳಿದಂತೆ ಈ ಗಾಳಿಗೋಪುರಗಳು ಸಮಾಜದಲ್ಲಿ ಚಂಡಮಾರುತಗಳನ್ನು ಎಬ್ಬಿಸಿ ಸರ್ವನಾಶ ಮಾಡುವ ತಾಕತ್ತನ್ನು ಹೊಂದಿರುತ್ತವೆ ಎಂಬುದು ಇತಿಹಾಸದಲ್ಲಿ ಸಿದ್ಧವಾದ ಸಂಗತಿ. ಆದುದರಿಂದ ಈ Confirmation Biasನ ವಿರುದ್ಧ ಹೋರಾಡುವುದು ಮುಖ್ಯವಾಗಿದೆ. ಮದುವೆ, ಚುನಾವಣೆ, ಆರೋಗ್ಯ, ವೃತ್ತಿ, ಬಂಡವಾಳ ಹೂಡಿಕೆಯಂತಹ ಎಲ್ಲ ಮುಖ್ಯ ನಿರ್ಣಯಗಳಲ್ಲಿ ಜನಸಾಮಾನ್ಯರಾದ ನಾವು ನಮ್ಮಲ್ಲಿರುವ ನಂಬಿಕೆಗಳನ್ನು ಪ್ರಶ್ನಿಸಿಕೊಳ್ಳುವುದು ಮುಖ್ಯವಾಗಿದೆ. ಈ ನಂಬಿಕೆಗಳು ನಮಗೆಷ್ಟೇ ಪ್ರಿಯವಾದರೂ ಆಗಾಗ್ಗೆ ಅವುಗಳ ಪುನರ್ವಿಮರ್ಶೆ ಮಾಡಿಕೊಳ್ಳುವುದು ನಮ್ಮ ಮತ್ತು ಸಮಾಜದ ಒಟ್ಟಾರೆ ಬೆಳವಣಿಗೆಗೆ ಆರೋಗ್ಯಕರ.

(ರಾಬರ್ಟ್ ಡೊಬೆಲ್ಲಿ ಅವರ "Art of Thinking Clearly" ಎಂಬ ಪುಸ್ತಕದ "Murder your darlings" ಎಂಬ ಅಧ್ಯಾಯದಿಂದ ಪ್ರೇರಿತ).

English summary
What you think is right may actually be wrong. But, still believe what they think is right. This is called Confirmation Bias. It is the tendency to interpret new evidence as confirmation of one's existing beliefs or theories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X