ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಏಕೆ ಹೊರಟು ಹೋದಿರಿ?

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

Recommended Video

ನಾನು ಕಂಡ ಕರ್ನಾಟಕದ ಕನಸು ನನಸಾಗುವುದೆ? | Oneindia Kannada

ಕಳೆದ ಬಾರಿ ಭಾರತ ದೇಶಕ್ಕೆ ಹೋದಾಗ, ಅಲ್ಲಿ ನನ್ನ ಮಿತ್ರರೊಂದಿಗೆ ಹೀಗೆಯೇ ಮಾತನಾಡುತ್ತಿದ್ದಾಗ, ಅಲ್ಲಿಯೇ ಹುಟ್ಟಿ ಬೆಳೆದು ತಮ್ಮ ಜೀವನವನ್ನು ಕಳೆದ ಪರಿಚಿತರೊಬ್ಬರು ಕೇಳಿದರು? "ಒಳ್ಳೆಯ ಅಂಕ ಗಳಿಸಿ ಎಂಜಿನೀಯರ್ ಆದ ನಿಮಗೆ ಭಾರತದಲ್ಲಿಯೇ ಉತ್ತಮ ನೌಕರಿ ದೊರೆಯಲಿಲ್ಲವೇ? ಇಲ್ಲಿ ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಏಕೆ ಹೊರಟು ಹೋದಿರಿ?"

ಅವರ ಈ ಪ್ರಶ್ನೆ ನನ್ನನ್ನು ಸ್ವಲ್ಪ ಗೊಂದಲಕ್ಕೀಡು ಮಾಡಿತು. ಪ್ರಶ್ನೆ ಸರಳವಾಗಿತ್ತು ಮತ್ತು ನೇರವಾಗಿತ್ತು. ಅದರಲ್ಲಿ ಯಾವುದೇ ಕುಹಕವಿರಲಿಲ್ಲ. ಆದರೂ ನನ್ನಲ್ಲಿ ಅವರಿಗೆ ಹೇಳಲು ತತ್ ಕ್ಷಣವಾದ ಉತ್ತರವೊಂದು ಹೊಳೆಯಲಿಲ್ಲ. ಅನೇಕ ಸ್ವಂತದ ಅನುಭವಗಳು, ಮತ್ತಿತರ ಅನಿವಾಸಿ ಮಿತ್ರರ ಅನಿಸಿಕೆಗಳು ಮತ್ತು ಅನುಭವಗಳು ನನ್ನ ಮನಃಪಟಲದಲ್ಲಿ ಸುಳಿದು ಹೋದರೂ, ಅದು ಹೀಗೆಯೇ ಎಂಬ ಖಚಿತ ಉತ್ತರ ಹೊಳೆಯಲಿಲ್ಲ.

ದೊಡ್ಡ ಕನಸು ಕಾಣುವವರಿಗೆ ಅಲ್ಪತನ ಇರುವುದಿಲ್ಲ!ದೊಡ್ಡ ಕನಸು ಕಾಣುವವರಿಗೆ ಅಲ್ಪತನ ಇರುವುದಿಲ್ಲ!

ಸ್ವಲ್ಪ ಯೋಚಿಸಿ, ಹಣ ಮತ್ತು ಮುಂದುವರೆದ ವಿದೇಶಿ ನೆಲದಲ್ಲಿ ವಾಸಿಸುವ ಅವಕಾಶದ ಸೆಳೆತ ನನ್ನನ್ನು ಸ್ವದೇಶದ ನೆಲ ಬಿಡಲು ಪ್ರೇರಿಸಿದವು ಎಂಬ ಕಟು ಸತ್ಯವನ್ನು ಸ್ಪಷ್ಟವಾಗಿಯೇ ಹೇಳಿದೆ. ಈಗ ಭಾರತದಲ್ಲಿಯೂ ಒಳ್ಳೆಯ ಸಂಬಳದ ಕೆಲಸಗಳು ದೊರೆಯುತ್ತಿವೆ ತಾನೇ? ಮತ್ತೆ ಹಿಂದಿರುಗುವ ಯೋಚನೆ ಮಾಡಬಹುದಲ್ಲ? ಎಂಬ ಮುಂದಿನ ಪ್ರಶ್ನೆ ಕೂಡ ನನ್ನನ್ನು ನಿರುತ್ತರನನ್ನಾಗಿಸಿತು.

Why did you go to foreign country leaving everything behind?

ನಾನು 1992ರಲ್ಲಿ ನನ್ನ ಎಂಜಿನೀಯರಿಂಗ್ ಶಿಕ್ಷಣ ಮುಗಿಸಿ ಹೊರ ಬಂದಾಗ ಧುತ್ತನೇ ನನ್ನ ಮುಂದೆ ಎರಗಿದ ಪ್ರಶ್ನೆ ಮುಂದೇನು ಮಾಡುವುದು? ಅಂದಿನ ದಿನಗಳಲ್ಲಿ ಸಣ್ಣ ನಗರ, ಪಟ್ಟಣಗಳಲ್ಲಿ ಎಂಜಿನೀಯರಿಂಗ್ ಮುಗಿಸಿದ ಎಲ್ಲ ಯುವಕರು ಕೆಲಸದ ಹುಡುಕಾಟಕ್ಕೆ ಧಾವಿಸುತ್ತಿದ್ದುದು ಬೆಂಗಳೂರು, ಪುಣೆ ಮತ್ತು ಮುಂಬಯಿಗಳಂತಹ ಊರುಗಳಿಗೆ. ಇಂದೂ ಪರಿಸ್ಥಿತಿಯೇನು ಹೆಚ್ಚು ಬದಲಾಗಿಲ್ಲ ಬಿಡಿ.

ಇಂದಿಗೂ ನಮ್ಮ ಆಡಳಿತ, ಈ ಬೃಹತ್ ಪ್ರಮಾಣದ ಗುಳೆ ಹೋಗುವುದನ್ನು ಸ್ವಲ್ಪವಾದರೂ ಕಡಿಮೆ ಮಾಡುವುದರಲ್ಲಿ ವಿಫಲವಾಗಿದೆ. ಈ ಚಿಕ್ಕ ನಗರ ಪಟ್ಟಣಗಳು ನಿವೃತ್ತ ವಯಸ್ಕರ ವಿಶ್ರಾಂತಿ ತಾಣಗಳಾಗಿವೆ. ಅಂದು ನನ್ನ ಮುಂದೆ ಕೂಡ ಬೇರೆ ಪರ್ಯಾಯವಿರಲಿಲ್ಲ. ನನಗೇನೋ ಮುಂದೆ ಓದಿ, ಸಂಶೋಧನೆ ಮತ್ತು ಅಧ್ಯಾಪನಗಳಲ್ಲಿ ತೊಡಗಿಸಿಕೊಳ್ಳುವ ಮನಸ್ಸಿತ್ತು. ಆದರೆ ಚಿಕ್ಕಂದಿನಿಂದ ಅನುಭವಿಸಿದ ಕೊರತೆಗಳಿಂದ ಹೊರಬಂದು ನಾವಿರುವುದಕ್ಕಿಂತ ಸ್ವಲ್ಪವಾದರೂ ಮೇಲಿನ ಸ್ತರಕ್ಕೆ ಹೋಗುವ ಆಕಾಂಕ್ಷೆ ನನ್ನನ್ನು ದೂರದ ಗುಜರಾತಿನಲ್ಲಿ ದೊರೆತ ರಿಲಾಯನ್ಸ್ ಇಂಡಸ್ಟ್ರೀಸ್‍ನ ಉದ್ಯೋಗವನ್ನು ಆಯ್ಕೆ ಮಾಡುವಂತೆ ಪ್ರೇರೇಪಿಸಿತು.

ನಾನು ಕಂಡ ಕರ್ನಾಟಕದ ಕನಸು ನನಸಾಗುವುದೆ?ನಾನು ಕಂಡ ಕರ್ನಾಟಕದ ಕನಸು ನನಸಾಗುವುದೆ?

ಮುಂದೆ ರಿಲಾಯನ್ಸ್ ಮತ್ತು L&T ಗಳಂತಹ ಪ್ರಸಿದ್ಧ ಕಂಪನಿಗಳಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಕೆಲಸ ಮಾಡಿದೆ. ಮದುವೆಯಾಗಿ, ತಂದೆಯಾಗಿ ನನ್ನ ವೈಯುಕ್ತಿಕ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಂಡರೂ ಹತ್ತು ವರ್ಷಗಳ ಎಂಜಿನೀಯರಂಗ್ ನೌಕರಿ ನಮ್ಮ ಸ್ತರದಲ್ಲಿ ಅಂತಹ ಮಹತ್ತರ ಬದಲಾವಣೆಯನ್ನೇನೂ ತರಲಿಲ್ಲ. ಸೈಕಲ್‍ನಿಂದ ಸ್ಕೂಟರ್ ಗೆ ಬಡ್ತಿ ಪಡೆದಿದ್ದೆ ಅಷ್ಟೆ.

Why did you go to foreign country leaving everything behind?

ಸಾಫ್ಟ್ ವೇರ್ ಎಂಜಿನೀಯರುಗಳಾದ ಮತ್ತು ಸಾಫ್ಟವೇರ್ ಪ್ರಪಂಚಕ್ಕೆ ವಲಸೆ ಹೋದ ನಮ್ಮ ಮಿತ್ರರು ಅಂದಿನ ರೂಢಿಯಂತೆ ಅಮೇರಿಕಕ್ಕೆ ವಲಸೆ ಹೋಗಿದ್ದು ಕೇಳಿದಾಗಲೊಮ್ಮೆ ನಾನು ನನ್ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ನೌಕರಿಗೆ ಜೋತು ಬಿದ್ದದ್ದು ತಪ್ಪಾಯಿತೇನೋ ಎನ್ನುವ ಭಾವನೆ ಮೂಡಿಸುತ್ತಿದ್ದವು.

ನಾನು ಕೆಲಸ ಮಾಡುತ್ತಿದ್ದ ಕ್ಷೇತ್ರವಾದ ತೈಲ ಶುದ್ಧೀಕರಣದಲ್ಲಿ ವಿದೇಶಕ್ಕೆ ಹೋಗುವುದೆಂದರೆ ಅರೇಬಿಯ ದೇಶಗಳಿಗೆ ಹೋಗುವುದು. ಅಲ್ಲಿ ಹೋಗಬೇಕಾದರೆ ಅಂದು ಕನಿಷ್ಠ ಹತ್ತು ವರ್ಷದ ಅನುಭವ ಬೇಕಾಗಿತ್ತು. ಅಲ್ಲದೇ ಸಾಫ್ಟ್ ವೇರ್ ಮಿತ್ರರು ಅಮೇರಿಕದಂತಹ ದೇಶಗಳಿಗೆ ಹೋಗುವಾಗ ಅರೇಬಿಯ ದೇಶಗಳಿಗೆ ಹೋಗುವುದು ಅಂದು ಅಷ್ಟೇನು ಆಕರ್ಷಕ ಅನಿಸಲಿಲ್ಲ. ಅಂತಹ ಸಂದರ್ಭದಲ್ಲಿ ದಕ್ಷಿಣ ಕೊರಿಯಕ್ಕೆ ಹೋಗುವ ಅವಕಾಶ ದೊರೆತದ್ದು ಒಂದು ಅಪೂರ್ವವಾದ ಸುಯೋಗ ಎನಿಸಿತು. ಅಲ್ಲಿಯವರೆಗೆ ಆಮೆ ಗತಿಯಲ್ಲಿ ಏರುತ್ತಿದ್ದ ನನ್ನ ಸಂಬಳ ಧಿಡೀರ್ ಹತ್ತು ಪಟ್ಟು ಹೆಚ್ಚಾಗಿದ್ದು ಅದೂ ಡಾಲರ್ ನಲ್ಲಿ ಅಂದ ಮೇಲೆ ಅಪೂರ್ವ ಸುಯೋಗವೇ ಅಲ್ಲವೇ?

ಕೇವಲ ಆರು ತಿಂಗಳು ಕೊರಿಯಾದಲ್ಲಿದ್ದೆ. ಕೊರಿಯಾ ಬಹಳ ಮುಂದುವರೆದ ಸುಂದರ ದೇಶ. ಆದರೆ ಭಾಷೆಯ ತೊಂದರೆ, ಸಸ್ಯಾಹಾರಿ ಊಟಕ್ಕೆ ಪರದಾಟ ಮತ್ತು ಸ್ವದೇಶದಿಂದ, ಸ್ವಜನದಿಂದ ಅಷ್ಟೊಂದು ದೂರವಿರುವುದು ಬಹಳ ಕಠಿಣವಾಯಿತು. ಅಷ್ಟರಲ್ಲಿಯೇ ಸಿಂಗಪುರದಿಂದ ನೌಕರಿಗೆ ಕರೆ ಬಂದಿತು. ಅಲ್ಲಿಂದ ಸಿಂಗಪುರಕ್ಕೆ ಹಾರಿದೆ. ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾದವು. ಕೆಲಸದಲ್ಲಿ ಒಳ್ಳೆಯ ಹೆಸರು ಮತ್ತು ಬಡ್ತಿಗಳು ದೊರೆತವು. ವರುಷಕ್ಕೊಮ್ಮೆ ಎರಡು ಮೂರು ವಾರಗಳ ರಜೆಗೆ ಮನೆಗೆ ಹೋಗುತ್ತಿದ್ದೆ. ವರ್ಷಕ್ಕೆ ಮೂರು ತಿಂಗಳು ನನ್ನ ತಂದೆ ತಾಯಿ ಇಲ್ಲಿಗೆ ಬಂದು ನಮ್ಮ ಜೊತೆ ಇರುತ್ತಿದ್ದರು. ಯಶಸ್ಸಿನ ನಶೆಯೋ ಅಥವಾ ಕೆಲಸದ ಒತ್ತಡವೋ ಒಟ್ಟಿನಲ್ಲಿ ಅಲ್ಲಿಂದ ಮುಂದೆ ಹದಿನೈದು ವರ್ಷಗಳು ಹೇಗೆ ಕಳೆದವು ಎಂಬುದೇ ತಿಳಿಯಲಿಲ್ಲ.

ನಲವತ್ತರ ಆಚೆಗೆ ದೇಹದೊಂದಿಗೆ ಮನಸ್ಸಿನಲ್ಲಿಯೂ ಅನೇಕ ಬದಲಾವಣೆಗಳುಂಟಾಗ ತೊಡಗುತ್ತವಂತೆ. ಅಲ್ಲಿಯವರೆಗೆ ಬರೀ ಕೇಳಿದ್ದೆ. ಅನುಭವಿಸತೊಡಗಿದ ಮೇಲೆ ಅರಿವು ಮೂಡತೊಡಗಿತು. ಮಿಡಲ್ ಕ್ಲಾಸಿನ ಕೆಳಗಿನ ಸ್ತರದಿಂದ ತಪ್ಪಿಸಿಕೊಂಡು ಮೇಲಿನ ಸ್ತರಕ್ಕೇರಲು ಮತ್ತು ಅಂದಿನ ಯುವಕರ ಕನಸಾದ ಮುಂದುವರೆದ ಫಾರಿನ್ ದೇಶವೊಂದನ್ನು ಸೇರಿ ಬದುಕಲು ಸಾಕಷ್ಟು ಹೋರಾಡಿದ್ದೆ. ಈ ಹೋರಾಟದಲ್ಲಿ ಅದೆಷ್ಟು ಗಳಿಸಿದೆನೋ ಅದೆಷ್ಟು ಕಳೆದುಕೊಂಡೆನೋ ಗೊತ್ತಿಲ್ಲ. ಅನೇಕ ಬಾರಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಅನಿಸುತ್ತದೆ. ವಯಸ್ಸಿನ ಏರಿಕೆಯೊಂದಿಗೆ ದೇಹದ ಇಳಿತ ಆರಂಭವಾಗುವುದೇನೋ ಸಹಜ. ಆದರೆ ಮನಸ್ಸಿನ ಪಕ್ವತೆ ಕೂಡ ಹೆಚ್ಚಾಗುತ್ತದೆ ಎಂಬುದೂ ಅಷ್ಟೇ ಸತ್ಯ. ನಾವಲ್ಲಿಯವರೆಗೆ ನಡೆದುಬಂದ ದಾರಿಯನ್ನು ಮತ್ತೊಮ್ಮೆ ಅವಲೋಕಿಸತೊಡಗುತ್ತೇವೆ.

ನಿಜ ಹೇಳಬೇಕೆಂದರೆ ಅನೇಕ ಬಾರಿ ನನ್ನ ಮಿತ್ರ ಕೇಳಿದ ಪ್ರಶ್ನೆಯನ್ನು ನಾನೇ ಅನೇಕಬಾರಿ ಕೇಳಿಕೊಂಡಿದ್ದೇನೆ. ನನ್ನ ದೇಶವನ್ನು ಮತ್ತು ಅಲ್ಲಿ ದೊರಕಿದ್ದ ನೌಕರಿಯನ್ನು ಬಿಟ್ಟು ನಾನೇಕೆ ಹೊರಗೆ ಬಂದೆ? ನಾನಿದ್ದ ನೌಕರಿ ನಿಜವಾಗಿಯೂ ಉತ್ತಮವಾದ ನೌಕರಿಯಿತ್ತಾ? ನನ್ನಂತಹ ಅಕುಟಿಲ ವ್ಯಕ್ತಿಗೆ ಇಲ್ಲಿ ದೊರೆತಂತಹ ಮಾನ್ಯತೆ ಮತ್ತು ಬಡ್ತಿ ಅಲ್ಲಿ ದೊರೆಯುವ ಸಾಧ್ಯತೆ ಇತ್ತೇ? ಈ ಪ್ರಶ್ನೆಗಳನ್ನು ಕೂಡ ಅನೇಕ ಬಾರಿ ಕೇಳಿಕೊಂಡಿದ್ದೇನೆ. ಪ್ರಾಮಾಣಿಕವಾಗಿ ಪ್ರತಿ ಬಾರಿ ನನಗೆ ಋಣಾತ್ಮಕ ಉತ್ತರವೇ ದೊರೆತಿದೆ.

ಮೊದಲ ಬಾರಿಗೆ ನಾನು ಕೆಲಸ ಮಾಡುತ್ತಿದ್ದ ಭಾರತದಲ್ಲಿನ ಸಂಸ್ಥೆಯೊಂದು ನನ್ನನ್ನು ಹೊರಗಿನ ದೇಶವೊಂದರ ತಮ್ಮ ಸಹಭಾಗಿ ಸಂಸ್ಥೆಯಲ್ಲಿ ಕೆಲಸ ಮಾಡಲು ಕಳುಹಿಸುವಾಗ ನನ್ನ ಮೇಲೆ ದೊಡ್ಡ ಉಪಕಾರ ಮಾಡುವವನಂತೆ ನನ್ನ ಮ್ಯಾನೇಜರ್ "ನಿನ್ನನ್ನು ಅಲ್ಲಿಗೆ ಹೆಚ್ಚಿನ ತರಬೇತಿಗೆ ಕಳುಹಿಸುತ್ತಿದ್ದೇವೆ. ಆದ ಕಾರಣ ನೀನು ಐದು ವರ್ಷಗಳ ಬಾಂಡ್ ಕೊಡಬೇಕಾಗುತ್ತದೆ" ಎಂದು ಸತ್ಯದ ತಲೆಯ ಮೇಲೆ ಹೊಡೆಯವಂತೆ ಸುಳ್ಳನ್ನು ಘಂಟಾಘೋಷವಾಗಿ ಯಾವುದೇ ಅಳುಕಿಲ್ಲದೇ ಹೇಳಿದ್ದು ಇನ್ನೂ ಹಸಿರಾಗಿಯೇ ಉಳಿದಿದೆ. ಬಹುಶಃ ನಮ್ಮ ದೇಶದ ಸಂಸ್ಥೆಗಳಲ್ಲಿ ಸರಾಗವಾಗಿ ಕೆಲಸ ಮಾಡಿ ಮೇಲೇರುವ Street Smartness ನನ್ನಲ್ಲಿರಲಿಲ್ಲ ಎನ್ನಬಹುದು ಕೂಡ.

ಹಳೆಯದರ ಮತ್ತು ಹೊಸತಿನ ಕವಲುದಾರಿಯಲ್ಲಿ ನಿಂತ ನನ್ನಂತಹ ಅನೇಕರು ತಮ್ಮ ತಮ್ಮ ದಾರಿಯನ್ನು ಕುರಿತು ಅವಲೋಕನ ಮಾಡುತ್ತಿರಬಹುದು. ನನ್ನಂತೆಯೇ ತನ್ನವರೆಲ್ಲರನ್ನೂ ಬಿಟ್ಟೂ ದೂರ ಸರಿದ ಸಂದರ್ಭಗಳನ್ನು ಕುರಿತು ಮತ್ತು ಅಲ್ಲಿಂದ ಕವಲೊಡೆದ ತಮ್ಮ ಜೀವನವನ್ನು ಕುರಿತು ಯೋಚಿಸುತ್ತಿರಬಹುದು. ದೂರದ ದೇಶದಲ್ಲೆಲ್ಲೋ ಕಟ್ಟಿಕೊಂಡ ಬದುಕನ್ನು ಬಿಟ್ಟು ತಿರುಗಿ ಮತ್ತೆ ತಮ್ಮವರೆಡೆಗೆ ಹೇಗೆ ವಾಪಸ್ಸಾಗುವುದು ಎಂಬುದರ ಬಗ್ಗೆ ಮತ್ತು ಹಾಗೆ ಮಾಡಿದರೆ ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ತೀವ್ರವಾಗಿ ಯೋಚಿಸುತ್ತಿರಬಹುದು. ಆದರೆ ಅವರವರ ನಿರ್ಣಯಗಳನ್ನು ಅವರರವರು ಮಾತ್ರ ತಲುಪಬಲ್ಲರು. ಅವರ ಹಣೇಬರಹಕ್ಕೆ ಅವರೇ ಹೊಣೆಗಾರರು ಅಲ್ಲವೇ?

English summary
Why did you go to foreign country leaving everything behind? Did not you get good job in India? These are some of the questions very difficult to answer. Every Indian working in foreign countries will get a chance to introspect himself and find the truth. So, Vasant Kulkarni has done it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X