ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಗೂ ಜವಾನನಿಗೂ ಒಂದೇ ಸಂಬಳ ಸಿಗುವಂತಾದಾಗ!

ನಮಗೆ ಗಿಡ ಏರುವ ಚಿರತೆಗಳೂ ಬೇಕು ಮತ್ತು ನೀರಲ್ಲಿ ಈಜಾಡುವ ಮೀನುಗಳೂ ಬೇಕು. ಆಕಾಶದಲ್ಲಿ ಹಾರಾಡುವ ಪಕ್ಷಿಗಳೂ ಬೇಕು ಮತ್ತು ನೆಲದಡಿಯನ್ನು ಸಂಶೋಧಿಸುವ ಕೀಟಗಳೂ ಬೇಕು. ಇದು ನಿಜವಾದ ಅರ್ಥದಲ್ಲಿ ಜಾರಿಗೊಳಿಸಿದ ಸರ್ವ ಸಮಾನತೆ ಮಾತ್ರ ಸಾಧ್ಯ.

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಥಾಮಸ್ ಅಲ್ವಾ ಎಡಿಸನ್ ನಮಗೆಲ್ಲ ಒಬ್ಬ ಹೆಸರಾಂತ ಸಂಶೋಧಕ ಎಂಬುದು ಗೊತ್ತು. ಲೈಟ್ ಬಲ್ಬ್, ಫೋನೋಗ್ರಾಫ್, ರಬ್ಬರ್ ಇತ್ಯಾದಿಗಳನ್ನು ಸಂಶೋಧಿಸಿದ ಈತನ ಜೀವನ ಎಲ್ಲರಿಗೂ ಒಂದು ಸ್ಫೂರ್ತಿ. ಒಬ್ಬ ಡಿಸ್‍ಲೆಕ್ಸಿಕ್ ಮಗುವಾಗಿದ್ದರಿಂದ ಚಿಕ್ಕಂದಿನಲ್ಲಿ ಈತನಿಗೆ ಕಲಿಯುವುದರಲ್ಲಿ ಬಹಳಷ್ಟು ಕಷ್ಟವಾಗಿದ್ದು ಕೂಡಾ ನಮ್ಮಲ್ಲನೇಕರಿಗೆ ಗೊತ್ತಿರುವ ಸಂಗತಿಯೇ.

ಆಗಿನ ಕಾಲದಲ್ಲಿ ಡಿಸ್‍ಲೆಕ್ಸಿಯಾ ರೋಗದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಹೀಗಾಗಿ ಡಿಸ್‍ಲೆಕ್ಸಿಯಾ ಹೊಂದಿರುವ ಮಕ್ಕಳನ್ನೆಲ್ಲ ದಡ್ಡರು, ಹೆಡ್ಡರು, ಕಲಿಯಲು ಅಸಮರ್ಥರು ಎಂದೇ ವರ್ಗೀಕರಿಸಲಾಗುತ್ತಿತ್ತು. ಅದೇ ರೀತಿಯಾಗಿ ಎಡಿಸನ್ ಅವರನ್ನು ಕೂಡ ಅವರು ಓದುತ್ತಿದ್ದ ಶಾಲೆಯಲ್ಲಿ ಹಾಗೆಯೇ ಕರೆದರು. ನಮ್ಮ ದೇಶದಲ್ಲಿ ಕೂಡ ತೀರ ಇತ್ತೀಚಿನವರೆಗೂ ಇಂಥದೊಂದು ರೋಗವಿದೆ ಮತ್ತು ಅದಕ್ಕೆ ಚಿಕಿತ್ಸೆ ಸಾಧ್ಯ ಎಂದು ಅನೇಕರಿಗೆ ಗೊತ್ತೇ ಇರಲಿಲ್ಲ. ಈ ರೋಗದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಿದ್ದಕ್ಕೆ ಅಮೀರ್ ಖಾನ್ ಅವರಿಗೆ ಧನ್ಯವಾದ ಹೇಳಲೇಬೇಕು.

When will wage disparity end?

ಆದರೆ ಎಡಿಸನ್ ಅವರ ತಾಯಿ ಒಬ್ಬ ಅಸಾಧಾರಣ ವ್ಯಕ್ತಿಯಾಗಿದ್ದಳು. ಸ್ವತಃ ಶಿಕ್ಷಕಿಯಾಗಿದ್ದ ಅವಳಿಗೆ ಬಹುಶಃ ಸಾಂಪ್ರದಾಯಿಕ ಶಿಕ್ಷಣದಲ್ಲಿ ತನ್ನ ಮಗನ ಅಸಮರ್ಥತೆಯ ಅರಿವಿತ್ತು. ಜೊತೆ ಜೊತೆಗೆ ಅವನಲ್ಲಿ ಹುದುಗಿದ್ದ ಅಸಾಧಾರಣ ಸಾಮರ್ಥ್ಯದ ಬಗ್ಗೆ ತಿಳಿದಿತ್ತು. ಹೀಗಾಗಿ "ಗೊಂದಲವುಳ್ಳ ಅಸಮರ್ಥ ಹುಡುಗ" ಎಂದು ಅವನ ಶಾಲೆಯ ಶಿಕ್ಷಕರು ಅವನ ಮುಂದೆಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಾಗ ಅವಳು ಭಾವಾವೇಶದಿಂದ ವಿರೋಧಿಸಿದಳು.

ತನ್ನ ಮಗನಿಗೆ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಕಲಿಯುವುದು ಕಷ್ಟವಾಗುತ್ತಿರಬಹುದು, ಆದರೆ ಅವನು ತನ್ನ ವಯಸ್ಸಿನ ಅನೇಕ ಹುಡುಗರಿಗಿಂತ ಹೆಚ್ಚಿನ ಬುದ್ಧಿಮತ್ತೆಯುಳ್ಳವನು. ಆದುದರಿಂದ ಅವನಿಗೆ ನಾನೇ ಮನೆಯಲ್ಲಿ ಶಿಕ್ಷಣ ನೀಡುತ್ತೇನೆ ಎಂದು ಘೋಷಿಸಿದಳು. ಇಷ್ಟೆಲ್ಲ ಅವನ ಮುಂದೆಯೇ ನಡೆದಾಗ, ತನ್ನ ಶಿಕ್ಷಕರ ಅವಹೇಳನೆಯಿಂದ ಕುಗ್ಗಿ ಹೋದ ಎಡಿಸನ್, ತನ್ನ ತಾಯಿ ತನ್ನ ಮೇಲಿಟ್ಟ ಭರವಸೆಯಿಂದ ತನ್ನ ಕೀಳರಿಮೆಯನ್ನು ಕೊಡವಿ ನಿಂತ. ಇತಿಹಾಸದಲ್ಲಿ ಯಾರೂ ಮಾಡಲಾಗದಷ್ಟು ಕೆಲಸ ಮಾಡಿ ಅವಳ ಭರವಸೆಯನ್ನು ಸಾಕಾರಗೊಳಿಸಿದ.

When will wage disparity end?

ಮುಂದೆ ಈ ಘಟನೆಯನ್ನು ಕುರಿತು "ನನ್ನ ತಾಯಿ ನನ್ನನ್ನು ಒಬ್ಬ ಮನುಷ್ಯನನ್ನಾಗಿಸಿದಳು. ಅವಳು ನನ್ನಲ್ಲಿಟ್ಟ ಭರವಸೆ ನನ್ನ ಜೀವನದ ಆಶಾ ಕಿರಣವಾಯಿತು. ನನ್ನಲ್ಲೇ ನಾನು ಅವಳನ್ನು ಎಂದೂ ನಿರಾಶೆಗೊಳಿಸಬಾರದು ಎಂದು ನೂರು ಬಾರಿ ಹೇಳಿಕೊಂಡೆ" ಎಂದು ಹೇಳಿಕೊಂಡಿದ್ದಾನೆ. ಅಂದು ಅವಳು ಶಾಲಾ ಶಿಕ್ಷಕರ ಅಭಿಪ್ರಾಯಕ್ಕೆ ಮಣಿದು ತನ್ನ ಮಗನನ್ನು ಅಂದಿನ ಸಾಂಪ್ರದಾಯಿಕ ಶಿಕ್ಷಣವಾದ ಭಾಷಾಭ್ಯಾಸ, ವ್ಯಾಕರಣ, ರೇಖಾಗಣಿತ ಇತ್ಯಾದಿಗಳ ಕಂಠಪಾಠ ಮತ್ತು ಹೆಣಗಾಟಕ್ಕೆ ಬಿಟ್ಟಿದ್ದರೆ ಇಂದು ಎಡಿಸನ್ ಅನೇಕ ಅದ್ಭುತ ಸಂಶೋಧನೆಗಳ ಕರ್ತೃ ಎಂದು ಪ್ರಸಿದ್ಧರಾಗಿರುತ್ತಿರಲಿಲ್ಲ.

ಮುಖ್ಯವಾಗಿ ಎಡಿಸನ್ ಅವರ ಕಥೆ ನಮಗೆ ಇಂದೂ ಪ್ರಸ್ತುತ ಎನಿಸುತ್ತದೆ. ಮಕ್ಕಳ ಆಸಕ್ತಿ ಏನು, ಯಾವುದರಲ್ಲಿ ಅವರಿಗೆ ಸ್ವಾಭಾವಿಕ ಒಲವಿದೆ ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಆದರೆ ಇಂದಿಗೂ ನಮ್ಮ ಸಮಾಜದಲ್ಲಿ ಮಕ್ಕಳೆಲ್ಲರೂ ಎಂಜಿನೀಯರೋ ಅಥವಾ ಡಾಕ್ಟರೋ ಆಗಬೇಕು ಎಂದು ಕೊಳ್ಳುತ್ತಿದ್ದಾರೆ. ಇಂದಿಗೂ ಕಂಪ್ಯೂಟರ್ ಎಂಜಿನೀಯರ್ ಆದರೆ ಮಾತ್ರ ತಮ್ಮ ಜೀವನ ಸುಖಮಯವಾಗಿರುತ್ತದೆ ಎಂಬ ಭಾವನೆ ಮಕ್ಕಳಿಗೂ ಮತ್ತು ಅವರ ಪಾಲಕರಿಗೂ ಇದೆ. ತಾವು ಕಷ್ಟ ಪಟ್ಟಿದ್ದು ಸಾಕು, ತಮ್ಮ ಮಕ್ಕಳ ಜೀವನ ಮಾತ್ರ ಸುಗಮವಾಗಿರಲಿ ಎಂಬ ಭಾವನೆ ಬಹುತೇಕ ಎಲ್ಲ ಮಧ್ಯಮ ವರ್ಗದ ಪಾಲಕರಿಗೆ ಇರುತ್ತದೆ. ಇದಕ್ಕೆ ನಾನೂ ಹೊರತಲ್ಲ. ಆದರೆ ಕೇವಲ ಎಂಜಿನೀಯರಿಂಗ್ ಅಥವಾ ಮೆಡಿಕಲ್ ಮಾತ್ರ ಜೀವನವನ್ನು ಸುಗಮಗೊಳಿಸಬಲ್ಲವೇ?

When will wage disparity end?

ಮೂಲಭೂತ ವಿಜ್ಞಾನದ ಕ್ಷೇತ್ರಗಳಿಲ್ಲವೇ? ಕಲೆ ಮತ್ತು ವಾಣಿಜ್ಯ ಕ್ಷೇತ್ರಗಳಿಲ್ಲವೇ? ಬ್ಯಾಂಕುಗಳು ಮತ್ತು ಆರ್ಥಿಕ ವಲಯದಲ್ಲಿ ಅನೇಕ ವೃತ್ತಿಗಳಿವೆಯಲ್ಲ? ಅರ್ಥಶಾಸ್ತ್ರ, ಮನಃಶಾಸ್ತ್ರ, ಪ್ರವಾಸೋದ್ಯಮ, ವಕಾಲತ್ತು, ವಾಸ್ತುಶಿಲ್ಪ, ಶಿಕ್ಷಣ, ಚಿತ್ರಕಲೆ, ಸಂಗೀತ ಮತ್ತು ನಟನೆ, ಜಾಹೀರಾತು ವ್ಯವಹಾರ, ಮಾರ್ಕೆಟಿಂಗ್, ಪತ್ರಿಕೋದ್ಯಮ ಇತ್ಯಾದಿ ಇತ್ಯಾದಿ ಅನೇಕ ಪರ್ಯಾಯ ವೃತ್ತಿಗಳಿವೆಯಲ್ಲ?

ಎಲ್ಲರೂ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನೀಯರ್ ಆಗ ಹೊರಟರೆ ಈ ವೃತ್ತಿಗಳು ಅನೇಕ ಪ್ರತಿಭಾವಂತರನ್ನು ಕಳೆದುಕೊಳ್ಳಬಹುದಲ್ಲವೇ? ಆದರೆ ಈ ವಿಷಯದಲ್ಲಿ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವುದು ಹೇಗೆ? ಎಲ್ಲಕ್ಕಿಂತ ಮುಖ್ಯವಾಗಿ ಈ ವೃತ್ತಿಗಳಲ್ಲಿ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನೀಯರ್‌ಗಳಿಗೆ ದೊರಕುವಷ್ಟು ಸಂಬಳ ದೊರಕುವದೇ? ಈ ವೃತ್ತಿಗಳಲ್ಲಿ ತಮ್ಮ ಮಕ್ಕಳ ಬದುಕು ಸುಖವಾಗಿರಬಹುದೇ ಎಂಬ ಆತಂಕ ಅನೇಕ ಪಾಲಕರಿಗಿದೆ. ಮಕ್ಕಳಿಗೂ ತಮ್ಮ ಜೀವನದಲ್ಲಿ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನೀಯರ್‌ಗಳಿಗೆ ದೊರಕುವಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಮತ್ತು ಹಣ ಹಾಗೂ ಹೆಸರು ಮಾಡುವ ಅವಕಾಶಗಳು ದೊರೆಯುವವೇ ಎಂಬ ಪ್ರಶ್ನೆಗಳು ಇರುವದು ಸಹಜ.

When will wage disparity end?

ನಮ್ಮ ದೇಶದಲ್ಲಿ ಅಥವಾ ಅಭಿವೃದ್ಧಿ ಹೊಂದುತ್ತಿರುವ ಅನೇಕ ದೇಶಗಳಲ್ಲಿ ವ್ಯಾವಸಾಯಿಕವಾಗಿ ಮತ್ತು ಸಂಬಳದಲ್ಲಿ ಬಹು ದೊಡ್ಡ ಅಸಮಾನತೆ ಇದೆ. ಇದರಿಂದ ಮೇಲು ಕೀಳು ಎಂಬ ಭೇದಭಾವ ತುಂಬಾ ಹೆಚ್ಚಾಗಿದೆ. ಅಮೇರಿಕ ಮತ್ತು ಇಂಗ್ಲೆಂಡುಗಳಲ್ಲಿ ಕೆಲಸ ಮಾಡಿ ಮಿಲಿಯಗಟ್ಟಲೇ ಹಣ ಸಂಪಾದಿಸುವ ಕಂಪ್ಯೂಟರ್ ಎಂಜಿನಿಯರ್ ಆದರೆ ಅವರಿಗೆ ಪ್ರಥಮ ಆದ್ಯತೆ ಮತ್ತು ಇತರರನ್ನು ಕೀಳಾಗಿ ಕಾಣುವ ಸಮಾಜದ ಈ ರೋಗ ಕೂಡ ಒಂದು ರೀತಿಯಲ್ಲಿ ಈ "Herd mentality"ಗೆ ಕಾರಣವಾಗಿದೆ. ಅಲ್ಲದೇ ದೈಹಿಕ ಪರಿಶ್ರಮದ ವೃತ್ತಿ (Blue collared jobs)ಗಳನ್ನು ಕೀಳಾಗಿ ಕಾಣುವ ಮತ್ತು ಕೇವಲ white coller ವೃತ್ತಿಗಳನ್ನು ಮಾತ್ರ ಗೌರವಿಸುವ ನಮ್ಮ ಪ್ರವೃತ್ತಿ ಕೂಡ ನಮ್ಮ ಅಸಮಾನತೆಯ ಪದ್ಧತಿಯ ಲಕ್ಷಣ. ಈ ಕಾರಣದಿಂದ ಅನೇಕ ಗೌರವಯುತ ಮತ್ತು ದೇಶದ ಏಳಿಗೆಗೆ ಕಾರಣವಾಗುವ ಅನೇಕ ವೃತ್ತಿಗಳಿಂದ ನಮ್ಮ ಮಕ್ಕಳನ್ನು ನಾವು ದೂರ ಇಡುತ್ತಿದ್ದೇವೆ.

ನಾನು ಕೆಲಸಮಾಡಿದ ನಾರ್ವೆ ದೇಶದಲ್ಲಿ ಅಲ್ಲಿಯ ಸಹೋದ್ಯೋಗಿಯೊಬ್ಬ ಅಲ್ಲಿಯ ಕಂಪನಿಯಲ್ಲಿ ಕೆಲಸ ಮಾಡುವ ಕಾವಲು ಅಧಿಕಾರಿಯ (Secuity officer) ಸಂಬಳಕ್ಕೂ, ಕಂಪನಿಯ CEOನ ಸಂಬಳಕ್ಕೂ ಅಷ್ಟು ದೊಡ್ಡ ವ್ಯತ್ಯಾಸವಿಲ್ಲ ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು. ಅದಕ್ಕೆ ಅವನು ಸ್ಕಾಂಡಿನೇವಿಯ ದೇಶಗಳಲ್ಲಿ (ನಾರ್ವೆ, ಸ್ವೀಡನ್, ಫಿನ್ ಲ್ಯಾಂಡ್, ಡೆನ್ಮಾರ್ಕ್ ಇತ್ಯಾದಿ) ಸರ್ವ ಸಮಾನತಾವಾದಕ್ಕೆ (Egalitarianism) ಬಹಳ ಪ್ರಾಮುಖ್ಯತೆ ಇದೆ ಎಂದು ಹೇಳಿ, ಉದಾಹರಣೆಗೆ ತಮ್ಮ ದೇಶದ ರಾಜ ಇತರ ಪ್ರಜೆಗಳಂತೆ ಅನೇಕ ಬಾರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುತ್ತಾರೆ ಎಂದು ಹೇಳಿ, ಅಲ್ಲಿನ ರಾಜ ಮೆಟ್ರೋ ರೈಲಿನಲ್ಲಿ ಎಲ್ಲರ ಜೊತೆ ಕುಳಿತು ಪ್ರಯಾಣಿಸುವ ಫೋಟೋವೊಂದನ್ನು ತೋರಿಸಿದ!

ನಮ್ಮ ವೃತ್ತಿಗಳಲ್ಲಿರುವ ಈ ಆರ್ಥಿಕ ಅಸಮಾನತೆಯಿಂದ ನಾವು ಇನ್ನೂ ಅನೇಕ ಪ್ರಮುಖ ಕ್ಷೇತ್ರಗಳಿಗೆ ಪ್ರತಿಭಾವಂತರನ್ನು ಆಕರ್ಷಿಸಲು ಅಸಮರ್ಥರಾಗುತ್ತಿದ್ದೇವೆ. ಇದರಿಂದ ದೇಶದ ಸರ್ವತೋಮುಖ ಪ್ರಗತಿಗೆ ವ್ಯತ್ಯಯ ಉಂಟಾಗುತ್ತಿದೆ. ನಮ್ಮ ದೇಶ ಕೇವಲ ಇಂಜಿನೀಯರುಗಳು ಮತ್ತು ಕಂಪ್ಯೂಟರ್ ವಿಜ್ಞಾನಿಗಳನ್ನು ತಯಾರಿಸುವ ಕಾರ್ಖಾನೆಯಾಗಬಾರದು ಮತ್ತು ಮಕ್ಕಳ ಆಸಕ್ತಿಯನ್ನು ಪರಿಗಣಿಸದೇ ಅವರಲ್ಲಿ ಕೀಳರಿಮೆ ಉಂಟು ಮಾಡುವ ಈ ಮನೋಸ್ಥಿತಿಯನ್ನು ತೊಡೆದು ಹಾಕಬೇಕಾಗಿದೆ.

ವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೈನ್ ಅವರ ಉಕ್ತಿಯೊಂದು ಹೀಗಿದೆ. "Everybody is a genius. But if you judge a fish by its ability to climb a tree, it will live its whole life believing that it is stupid". ನಮ್ಮ ದೇಶದ ಸರ್ವತೋಮುಖ ಏಳಿಗೆಗೆ ನಮಗೆ ಗಿಡ ಏರುವ ಚಿರತೆಗಳೂ ಬೇಕು ಮತ್ತು ನೀರಲ್ಲಿ ಈಜಾಡುವ ಮೀನುಗಳೂ ಬೇಕು. ಆಕಾಶದಲ್ಲಿ ಹಾರಾಡುವ ಪಕ್ಷಿಗಳೂ ಬೇಕು ಮತ್ತು ನೆಲದಡಿಯನ್ನು ಸಂಶೋಧಿಸುವ ಕೀಟಗಳೂ ಬೇಕು. ಇದು ಕೇವಲ ನಿಜವಾದ ಅರ್ಥದಲ್ಲಿ ಜಾರಿಗೊಳಿಸಿದ ಸರ್ವ ಸಮಾನತೆ(Egalitarianism)ಯಿಂದ ಮಾತ್ರ ಸಾಧ್ಯ.

English summary
Everybody is a genius. But if you judge a fish by its ability to climb a tree, it will live its whole life believing that it is stupid - Albert Einstein. When will wage disparity end? When are we going to think that everyone is a genius? An article by Vasant Kulkarni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X