• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಶಸ್ಸು ಅಂದ್ರೇನು? ಯಶಸ್ಸಿನ ಗುಟ್ಟು ಬಲ್ಲವರು ಯಾರು?

By ವಸಂತ ಕುಲಕರ್ಣಿ, ಸಿಂಗಪುರ
|

ನಾವು ಚಿಕ್ಕವರಿದ್ದಾಗ ಅನೇಕ ಹಿರಿಯರಿಂದ ಕೇಳುತ್ತಿದ್ದ ಆಶೀರ್ವಾದವೆಂದರೆ "ದೊಡ್ಡ ಯಶಸ್ಸು ಗಳಿಸು, ಮುಂದೆ ಬಾ". ನಾವು ಬೆಳೆದು ಹೈ ಸ್ಕೂಲಿನಲ್ಲಿ ಓದುತ್ತಿದ್ದಾಗ ಎಂಜಿನೀಯರೋ , CAಯೋ ಅಥವಾ ಡಾಕ್ಟರೋ ಆಗುವುದು ಎಂದರೆ ಯಶಸ್ಸು ಗಳಿಸುವುದು ಎಂಬ ಭಾವನೆ ಪ್ರಚಲಿತದಲ್ಲಿತ್ತು. ನಾವು ಎಂಜಿನೀಯರಿಂಗ್ ಮುಗಿಸಿ ಕೆಲವು ವರ್ಷಗಳಾದ ಮೇಲೆ, ಒಮ್ಮೆಲೇ ಸಾಫ್ಟ್ ವೇರ್ ಎಂಜಿನೀಯರ್ ಆಗಿ ಅಮೆರಿಕಕ್ಕೆ ಹೋಗುವುದೆಂದರೆ ದೊಡ್ಡ ಯಶಸ್ಸು ಗಳಿಸಿದಂತೆ ಎಂಬ ಮಾತು ಚಲಾವಣೆಗೆ ಬಂದಿತು.

ನನಗೆ ನೆನಪಿದೆ. ಅಂದಿನ ಅನೇಕ ಕನ್ಯಾ ಪಿತೃಗಳಿಗೆ ತಮ್ಮ ಮಗಳನ್ನು ಅಮೆರಿಕದಲ್ಲಿರುವ ವರನಿಗೆ ಕೊಟ್ಟರೆ ದೊಡ್ಡದೊಂದು ಸಾಧನೆ ಮಾಡಿ ಧನ್ಯರಾದ ಭಾವನೆ ಬರುತ್ತಿತ್ತು. ಅದರಲ್ಲಿಯೂ ಆ ಮಗಳು ಕೂಡ ಎಂಜಿನೀಯರ್ ಆದರೆ ಮುಗಿದೇ ಹೋಯಿತು! ಭಾರತದಲ್ಲಿಯೇ ಕೆಲಸ ಮಾಡುತ್ತಿದ್ದ ನಮ್ಮಂತಹ ಬಡಪಾಯಿ Non IT ಎಂಜಿನೀಯರುಗಳಿಗೆ ಕ್ಯಾರೇ ಎನ್ನುವವರಿರಲಿಲ್ಲ. ಕಾಲಕ್ರಮೇಣ ಮತ್ತೆ ಯಶಸ್ಸಿನ ಪರಿಭಾಷೆ ಬದಲಾಗುತ್ತಿದೆ. ಮತ್ತು ಮುಂದೆಯೂ ಬದಲಾಗುತ್ತಲೇ ಇರುತ್ತದೆ. ಆದರೆ ಮನುಷ್ಯ ಮಾತ್ರ ಯಶಸ್ಸಿನ ಜಾಡು ಹಿಡಿದು ಸಾಗುತ್ತಲೇ ಇರುತ್ತಾನೆ.

ಇಂದಿನ ಈ ಜೆಟ್ ಯುಗದಲ್ಲಿ ನಾವೆಲ್ಲ ಯಶಸ್ಸಿನ ಹಿಂದೆ ಸಾಗುತ್ತಿಲ್ಲ, ಓಡುತ್ತಿದ್ದೇವೆ ಎಂಬುದು ಸರ್ವವಿದಿತ. ಯಶಸ್ಸಿಗೆ ನಾವೆಲ್ಲ ನಮ್ಮದೇ ಆದ ಒಂದು ನಿರೂಪಣೆಯನ್ನು ಕೊಟ್ಟಿರುತ್ತೇವೆ ಮತ್ತು ಅದನ್ನು ಗಳಿಸಲು ಶತ ಪ್ರಯತ್ನ ಮಾಡುತ್ತಿರುತ್ತೇವೆ. ಅನೇಕರಿಗೆ ಯಶಸ್ಸೆಂದರೆ ಹೇರಳವಾಗಿ ಹಣ ಗಳಿಸಿ, ವೈಭವದ ಜೀವನ ನಡೆಸುವುದಾದರೆ, ಮತ್ತೆ ಹಲವರಿಗೆ ಹಣ ಮತ್ತು ಕೀರ್ತಿಗಳೆರಡನ್ನೂ ಗಳಿಸುವುದಾಗಿರುತ್ತದೆ. ಕೆಲವರಿಗೆ ತಮ್ಮ ಅಯ್ಕೆ ಮಾಡಿದ ಕ್ಷೇತ್ರದಲ್ಲಿ ಅಭೂತಪೂರ್ವ ಜ್ಞಾನ ಗಳಿಸಿ ಸಂಶೋಧನೆ ಮಾಡುವುದು ಯಶಸ್ಸಾದರೆ ಇನ್ನೂ ಹಲವರಿಗೆ ಜನರನ್ನು ಮುನ್ನಡೆಸುವ ಸಾಮಾಜಿಕ ಕಾರ್ಯದಲ್ಲಿ ಉನ್ನತಿ ಗಳಿಸುವುದು ಯಶಸ್ಸಾಗುತ್ತದೆ. ಒಟ್ಟಿನಲ್ಲಿ ಈ ಯಶಸ್ಸಿಗೆ ಹಲವಾರು ಮುಖಗಳು.

ಆದರೆ ಕೆಲವರು ಮಾತ್ರ ಯಶಸ್ಸಿನ ಉತ್ತುಂಗಕ್ಕೇರಿ ಸಮಾಜಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ. ಅನೇಕರು ಸರ್ವ ಪ್ರಯತ್ನ ಮಾಡಿದರೂ ಯಶಸ್ಸಿನ ಶಿಖರವೇರಲು ಸಾಧ್ಯವಾಗುವುದಿಲ್ಲ. ಆಗ ನಮ್ಮಲ್ಲಿ ಅನೇಕರಿಗೆ ಯಶಸ್ಸು ಗಳಿಸಲು ಪ್ರಯತ್ನ ಮುಖ್ಯವೋ ಅಥವಾ ಅದೃಷ್ಟ ಮುಖ್ಯವೋ ಎಂಬ ಜಿಜ್ಞಾಸೆ ಉಂಟಾಗುವುದು ಸಹಜ. ಆದರೆ ಇದರಲ್ಲಿ ಎಷ್ಟು ಸತ್ಯ? ಕೇವಲ ಅದೃಷ್ಟ ಜನರನ್ನು ಯಶಸ್ಸಿನ ಶೃಂಗಕ್ಕೇರಿಸಲು ಸಾಧ್ಯವೇ? ಅಥವಾ ಕೇವಲ ಮನುಷ್ಯ ಪ್ರಯತ್ನ ಮಾತ್ರದಿಂದ ಯಶಸ್ಸನ್ನು ಗಳಿಸಲು ಸಾಧ್ಯವಾಗಬಲ್ಲದೇ? ಹಾಗಿದ್ದರೆ ಅದೇಕೆ ಎಷ್ಟೋ ಜನ ಪ್ರತಿಭಾವಂತ ಪ್ರಯತ್ನವಾದಿಗಳು ಅಸಫಲರಾಗುತ್ತಾರೆ? ಅಥವಾ ಯಶಸ್ಸಿನ ವಿಜಯಮಾಲೆ ಕೇವಲ ಕೆಲವು ಅದೃಷ್ಟವಂತ ಪ್ರಯತ್ನವಾದಿಗಳಿಗೆ ಮಾತ್ರ ಒಲಿಯುತ್ತದೆಯೋ?

ಪ್ರಖ್ಯಾತ ಉದ್ಯಮಿ ಮತ್ತು ವರ್ಜಿನ್ ಅಟ್ಲಾಂಟಿಕ್ ವಿಮಾನ ಸಂಸ್ಥೆಯ ಮಾಲಿಕ ರಿಚರ್ಡ್ ಬ್ರಾನ್‍ಸನ್‍ನ ಪ್ರಕಾರ, ಸಾಮಾನ್ಯರಿಗೆ ಅದೃಷ್ಟವಂತ ಎಂದು ತೋರುವ ಯಶಸ್ವೀ ಜನ, ತಮ್ಮ ನಿಜ ಜೀವನದಲ್ಲಿ ತುಂಬಾ ಹಟ ಹಿಡಿದು ಭಗೀರಥ ಪ್ರಯತ್ನ ಮಾಡುವ ಪ್ರಯತ್ನಶೀಲರಲ್ಲದೇ, ತುಂಬಾ ಸಾಹಸಿಕ ಮತ್ತು ರಿಸ್ಕ್ ತೆಗೆದುಕೊಳ್ಳುವವರಾಗಿರುತ್ತಾರೆ. ಅವರು ಅಸಫಲರಾಗಲು ಹಿಂಜರಿಯುವುದಿಲ್ಲ ಮತ್ತು ಹೊಸ ದಾರಿ ಹಿಡಿಯಲು ಹಿಂತೆಗೆಯುವುದಿಲ್ಲ. ಆದುದರಿಂದಲೇ ಯಶಸ್ಸಿನ ವಿಜಯಮಾಲೆ ಅವರ ಕೊರಳಿಗೇರುತ್ತದೆ. ಅವರ ಪ್ರಕಾರ, ನಿಜ ಜೀವನದಲ್ಲಿ ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಡುವ "Play it safe" ಎಂಬ ಮನೋಭಾವನೆಯುಳ್ಳವರಿಗಿಂತ ಈ ಸಾಹಸಿಕರು ಯಶಸ್ಸಿನ ಮೆಟ್ಟಲೇರುವುದು ಹೆಚ್ಚು ಸಹಜ ಮತ್ತು ಸಾಧ್ಯ.

ಒಟ್ಟಿನಲ್ಲಿ ಕೇವಲ ಅದೃಷ್ಟ ಅಥವಾ ಕೇವಲ ಪ್ರತಿಭೆ ಅಥವಾ ಕೇವಲ ಶತ ಪ್ರಯತ್ನಗಳು ಮಾತ್ರ ನಮ್ಮನ್ನು ಯಶಸ್ಸಿನ ಮೆಟ್ಟಿಲೇರಿಸಲು ಸಾಧ್ಯವಾಗದೇ ಇರಬಹುದು. ಈ ಎಲ್ಲ ಅಂಶಗಳ ಸರಿಯಾದ ಮಿಶ್ರಣ ಹೊಂದಿದ ಮತ್ತು ಅದಕ್ಕೂ ಹೆಚ್ಚು ಉದ್ದೇಶಪೂರ್ವಕವಾಗಿ ರಿಸ್ಕ್ ತೆಗೆದುಕೊಳ್ಳುವ ಸಾಹಸಿಗಳಿಗೆ ಮಾತ್ರ ನಿಜವಾದ ಯಶಸ್ಸು ದೊರೆಯುವುದು. ಇದಕ್ಕೆ ರಿಚರ್ಡ್ ಬ್ರಾನ್‍ಸನ್ ಅವರೇ ಒಂದು ಉತ್ತಮ ಉದಾಹರಣೆ. ನಮ್ಮವರೇ ಆದ ಧೀರೂಭಾಯಿ ಅಂಬಾನಿ ಕೂಡ ಒಬ್ಬ ಉತ್ತಮ ಉದಾಹರಣೆ ಅಲ್ಲವೇ?

ಆದರೆ ಯಶಸ್ಸು ಕೇವಲ ಪ್ರಖ್ಯಾತ ಉದ್ಯಮಿಯೋ, ಕ್ರಿಕೆಟ್ಟಿಗನೋ, ಹಣವಂತನೋ ಅಥವಾ ನಟನೋ ಆದರೆ ಮಾತ್ರ ದೊರಕುತ್ತದೆ ಎಂಬುದು ತಪ್ಪು ಪರಿಕಲ್ಪನೆ. ಸಮಾಜದಲ್ಲಿ ಯಶಸ್ಸಿನ ಪರಿಭಾಷೆ ಬದಲಾಗಬೇಕಿದೆ. ಹಣ ಮತ್ತು ಕೀರ್ತಿಗಳೆರಡೂ ಇಲ್ಲದೇ ಯಶಸ್ವಿಯಾಗಬಹುದು ಎಂಬ ಪರಿಭಾಷೆ ಚಲಾವಣೆಗೆ ಬರಬೇಕಾಗಿದೆ.

ಧೀರೂಭಾಯಿ ಅಂಬಾನಿ ಅವರಂತಹ ಉದ್ದಿಮೆದಾರರಂತೆ ಮಂಗಳಯಾನ ಯೋಜನೆಯನ್ನು ಯಶಸ್ವಿಯಾಗಿ ನೆರವೇರಿಸಿದ ನಮ್ಮ ದೇಶದ ವಿಜ್ಞಾನಗಳೂ ಕೂಡ ಯಶಸ್ಸನ್ನು ಸಾಧಿಸಿದವರೇ ಅಲ್ಲವೇ? ಈ ವಿಜ್ಞಾನಿಗಳು ಹಣ ಮಾತು ಖ್ಯಾತಿಯನ್ನು ಗಳಿಸದೇ ಇರಬಹುದು. ಆದರೆ ಯಶಸ್ವಿಗಳಂತೂ ಹೌದು. ಅದೇ ರೀತಿ ವೈದ್ಯಕೀಯ, ಎಂಜಿನೀಯರಿಂಗ್, ವಿವಿಧ ಕಲೆಗಳು ಇತ್ಯಾದಿ ಕಾರ್ಯಕ್ಷೇತ್ರಗಳಲ್ಲಿ ಅಪಾರ ಪ್ರಾವೀಣ್ಯತೆ ಗಳಿಸಿದವರೂ ಕೂಡ ಯಶಸ್ವಿಗಳು ಅಲ್ಲವೇ?

ಮನುಷ್ಯ ಯಾವುದೇ ಕಾರ್ಯಕ್ಷೇತ್ರವನ್ನು ಆಯ್ದುಕೊಳ್ಳಲಿ. ಅದರಲ್ಲಿ ಅವನ ಮನಸ್ಸಿಗೆ ತೃಪ್ತಿಯಾಗುವಷ್ಟು ಪ್ರಾವೀಣ್ಯತೆ ಬಂದರೆ ಅವನೊಬ್ಬ ಯಶಸ್ವಿ ಮನುಷ್ಯ ಎಂತಲೇ ಅರ್ಥ. ಯಾರಿಗಾದರೂ ತಾನೊಂದು ಕ್ಷೇತ್ರದಲ್ಲಿ ಸಾಕಷ್ಟು ನಿಪುಣ್ಯತೆ ಗಳಿಸಿ ಸಮಾಜದ ಒಟ್ಟಾರೆ ಅಭಿವೃದ್ಧಿಗೆ ತಕ್ಕ ಮಟ್ಟಿನ ಕೊಡುಗೆ ನೀಡಿದ್ದೇನೆ ಎಂಬ ಸಂತೃಪ್ತಿ ಬಂದರೆ ಸಾಕು. ಆತನೊಬ್ಬ ಯಶಸ್ವೀ ಮನುಷ್ಯ ಎಂಬ ಭಾವನೆ ಸಮಾಜದಲ್ಲಿ ಬೆಳೆಯಬೇಕಾಗಿದೆ. ದಿನಗಳೆದಂತೆ ಸಮಾಜ ಇನ್ನಷ್ಟು ಪರಿಪಕ್ವತೆ ಪಡೆದು ಕ್ರಮೇಣ ಖ್ಯಾತಿ ಮತ್ತು ಶ್ರೀಮಂತಿಕೆಯ ಮರೀಚಿಕೆಯ ಹಿಂದೆ ಓಡುವುದು ಕಡಿಮೆಯಾಗುತ್ತದೆ ಎಂಬ ಆಶಾವಾದ ನನ್ನದು.

English summary
What is success? Who can be called as successful person? One who makes more money or one who succeeds with money? Richard Branson says, Do not be embarrassed by your failures, learn from them and start again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X