ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊತ್ತಿರುವುದು ಮರಳಿನ ಕೇವಲ ಒಂದು ಕಣದಷ್ಟು!

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಹಿಂದೊಮ್ಮೆ ಒಬ್ಬ ದೊಡ್ಡ ವಿಜ್ಞಾನಿಯನ್ನು ಯಾರೋ ಅವರ ಜ್ಞಾನವನ್ನು ಕುರಿತು ಹೊಗಳಿದಾಗ ಅವರು ಹೇಳಿದರಂತೆ "ಜ್ಞಾನ ಎಂಬುದು ಇಡೀ ಜಗತ್ತಿನ ಎಲ್ಲ ಸಮುದ್ರ ತಟಗಳ ಒಟ್ಟಾರೆ ಮರಳಾದರೆ, ನನಗೆ ಗೊತ್ತಿರುವುದು ಮರಳಿನ ಕೇವಲ ಒಂದು ಕಣದಷ್ಟೇ".

ಇದು ಆ ಮಹಾ ವಿಜ್ಞಾನಿಯ ನಮ್ರತೆಯನ್ನು ತೋರಿಸುತ್ತದೆ. ಒಬ್ಬ ಮಹಾಜ್ಞಾನಿಯ ಮುಖ್ಯ ಲಕ್ಷಣವೆಂದರೆ ಆತನಿಗೆ ತನ್ನ ಮಿತಿಯ ಅರಿವು ಇರುತ್ತದೆ ಮತ್ತು ಆ ಅರಿವು ನಮ್ರತೆಯನ್ನು ಕಲಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅರಿಯಬೇಕಾದುದರ ಆಗಾಧತೆ ತಿಳಿದು ಬರುತ್ತದೆ. ಇಂದು ನಾವೆಷ್ಟೇ ಪ್ರಗತಿಯನ್ನು ಸಾಧಿಸಿದ್ದರೂ, ನಮ್ಮ ಭೂಮಿ ಮತ್ತು ಇತರ ಗ್ರಹ ತಾರೆಗಳ ಬಗ್ಗೆ ಅಪಾರ ಜ್ಞಾನವನ್ನು ಗಳಿಸಿದ್ದರೂ, ಅಣು ಮತ್ತು ಪರಮಾಣುಗಳ ಬಗ್ಗೆ ಅಸಾಧ್ಯ ಶೋಧನೆಗಳನ್ನು ನಡೆಸಿದ್ದರೂ, ಈ ಜಗತ್ತಿನ ಬಗ್ಗೆ ನಮ್ಮ ಅರಿವು ಇನ್ನೂ ಅತ್ಯಲ್ಪ ಅಷ್ಟೇ.[ಪ್ರತಿಯೊಬ್ಬ ವಿದ್ಯಾರ್ಥಿ ಓದಲೇಬೇಕಾದ ಲೇಖನವಿದು]

ನಮ್ಮ ಭೂಮಿಯ ಒಟ್ಟು ಆಯುಷ್ಯ 4.5 ಬಿಲಿಯನ್ ವರ್ಷಗಳು ಎಂದು ಅಂದಾಜು. ಜೀವಿಗಳು ಉದಯಿಸಿದ್ದು ಸುಮಾರು 3.8 ಬಿಲಿಯನ್ ವರ್ಷಗಳ ಹಿಂದೆಯೇ ಆಗಿದ್ದರೂ, ಆ ಜೀವಿಗಳು ಏಕಕೋಶದ ಜೀವಿಗಳಾಗಿದ್ದುವಷ್ಟೇ. ಬಹುಕೋಶ ಜೀವಿಗಳು ಉದ್ಭವಿಸಿದ್ದು ಸುಮಾರು 1.6 ಬಿಲಿಯನ್ ವರ್ಷಗಳ ನಂತರ. ಮನುಷ್ಯ ಜೀವಿ ಪ್ರಕಟವಾಗಿದ್ದು ಸುಮಾರು 0.2 ಮಿಲಿಯನ್ (2 ಲಕ್ಷ) ವರ್ಷಗಳ ಹಿಂದೆಯಷ್ಟೇ. ಅದರಲ್ಲೂ ನಮ್ಮ ಆಧುನಿಕ ಮಾನವ ಎಂದರೆ ಹೋಮೋ ಸೇಪಿಯನ್ಸ್ ನ ಆಗಮನವಾಗಿದ್ದು 70 ಸಾವಿರ ವರ್ಷಗಳ ಹಿಂದೆ ಎಂದು ಅಂದಾಜು ಮಾಡಲಾಗಿದೆ.

ಜ್ಞಾನದ ಉತ್ಖನನದ ಆರಂಭ

ಜ್ಞಾನದ ಉತ್ಖನನದ ಆರಂಭ

ಹೋಮೋ ಸೇಪಿಯನ್ಸ್ ನ ಉದಯದೊಂದಿಗೆ ಜ್ಞಾನದ ಉತ್ಖನನ ಆರಂಭವಾಯಿತು ಎಂದುಕೊಂಡರೆ ಭೂಮಿಯ ಸುಮಾರು 4.5 ಬಿಲಿಯನ್ ವರ್ಷಗಳ ಇರುವಿಕೆಯಲ್ಲಿ ಅರಿವಿನ ಅರಸುವಿಕೆ ಶುರುವಾಗಿದ್ದು ತೀರ ಇತ್ತೀಚೆಗೆ. ಅದರಲ್ಲೂ ವೈಜ್ಞಾನಿಕ ಕ್ರಾಂತಿಯಾಗಿದ್ದು ಗೆಲಿಲಿಯೋನ ಜನನದೊಂದಿಗೆ ಎಂದುಕೊಂಡರೆ ಅದು ಚುರುಕುಗೊಂಡಿದ್ದು ಕೇವಲ ಇತ್ತೀಚಿನ ನಾನೂರು ವರ್ಷಗಳಲ್ಲಿ. ಆಧುನಿಕ ಭೌತ ವಿಜ್ಞಾನದ ಜನನದೊಂದಿಗೆ ಆ ವೇಗ ಇನ್ನೂ ಉತ್ಕರ್ಷಗೊಂಡಿದ್ದು ಈಚಿನ ಸುಮಾರು 50 ವರ್ಷಗಳಲ್ಲಿ.

ತಿಳಿದಿದ್ದಕ್ಕಿಂತ ತಿಳಿಯದಿದ್ದುದೇ ಹೆಚ್ಚು

ತಿಳಿದಿದ್ದಕ್ಕಿಂತ ತಿಳಿಯದಿದ್ದುದೇ ಹೆಚ್ಚು

ಬಿಲಿಯಗಟ್ಟಲೇ ವಯೋಮಾನ ಹೊಂದಿದ ಈ ಜಗತ್ತಿನ ಇತಿಹಾಸವನ್ನು ನೋಡಿದರೆ ನಮ್ಮ ಅರಿವಿನ ಇತಿಹಾಸ ತೀರ ಚಿಕ್ಕದು. ನಾವು ತಿಳಿದಿದ್ದಕ್ಕಿಂತ ತಿಳಿಯದಿದ್ದುದೇ ಹೆಚ್ಚು. ಮುಖ್ಯವಾಗಿ ಈ ಜಗತ್ತು ಏಕೆ ಅಸ್ತಿತ್ವದಲ್ಲಿದೆ ಎಂಬುದೇ ಗೊತ್ತಿಲ್ಲ. ನಾನು ಚಿಕ್ಕವನಿದ್ದಾಗ ಕೇಳಿದ್ದು ಈ ಜಗತ್ತು ಭಗವಂತನ ಲೀಲೆ ಎಂದು ಮಾತ್ರ. ಭಗವಂತ ತನ್ನ ಲೀಲೆಗೆ ಈ ತರಹದ ಸಂಕೀರ್ಣ ಜಗತ್ತನ್ನು ಏಕೆ ಸೃಷ್ಟಿಸಿದ ಎಂಬ ನನ್ನ ಮನಸ್ಸಿನಲ್ಲಿದ್ದ ಪ್ರಶ್ನೆಯನ್ನು ಅಂದು ನಾನು ಕೇಳಲಿಲ್ಲ. ಅದರ ಬದಲಿಗೆ ವಿಜ್ಞಾನದಲ್ಲಿ ಈ ಪ್ರಶ್ನೆಗೆ ಉತ್ತರವನ್ನು ಹುಡುಕತೊಡಗಿದೆ.[ಪ್ರಧಾನಿಗೂ ಜವಾನನಿಗೂ ಒಂದೇ ಸಂಬಳ ಸಿಗುವಂತಾದಾಗ!]

ಅಂಥದೊಂದು ಮಹಾ ವಿಸ್ಫೋಟ ಏಕೆ ಉಂಟಾಯಿತು

ಅಂಥದೊಂದು ಮಹಾ ವಿಸ್ಫೋಟ ಏಕೆ ಉಂಟಾಯಿತು

ವಿಜ್ಞಾನ ಈ ಜಗತ್ತು ಹೇಗೆ ಉಂಟಾಯಿತು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದೆ. ಈ ಜಗತ್ತು ಅಸ್ಥಿರವಾದ ಶೂನ್ಯದಿಂದ ಹಠಾತ್ತಾಗಿ ಉಂಟಾದ ದೊಡ್ಡದೊಂದು ಸಿಡಿತದಿಂದ (Big Bang) ಸೃಷ್ಟಿಯಾಯಿತು ಎಂದು ಹೇಳುತ್ತಿದೆ ಇಂದಿನ ನಮ್ಮ ವಿಜ್ಞಾನ. ಆದರೆ, ಶೂನ್ಯದಲ್ಲಿ ಅಂಥದೊಂದು ಮಹಾ ವಿಸ್ಫೋಟ ಏಕೆ ಉಂಟಾಯಿತು ಎಂಬುವುದು ಇನ್ನೂ ಬ್ರಹ್ಮ ರಹಸ್ಯ. ಅಂತಹ ಮಹಾ ವಿಸ್ಫೋಟದಿಂದ ಉಂಟಾದ ಈ ಜಗತ್ತಿನಲ್ಲಿ ನಮ್ಮ ಶಾಂತ, ಶೀತಲ ಭೂಮಿ ಏಕೆ ಸೃಷ್ಟಿಯಾಯಿತು ಮತ್ತು ಅದರಲ್ಲಿ ನಮ್ಮಂತಹ ಜೀವಿಗಳು ಏಕೆ ಜನ್ಮ ತಾಳಿದವು? ಏನಿದರ ಅರ್ಥ, ಎಂಬುದರ ಬಗ್ಗೆ ವಿಜ್ಞಾನಿಗಳು ಮತ್ತು ತತ್ವ ಜ್ಞಾನಿಗಳು ಇಂದಿಗೂ ಹುಡುಕುತ್ತಿದ್ದಾರೆ.

ಯಾವುದದು ಅಜ್ಞಾತ ನಿಗೂಢ ಶಕ್ತಿ?

ಯಾವುದದು ಅಜ್ಞಾತ ನಿಗೂಢ ಶಕ್ತಿ?

ಮಹಾ ವಿಸ್ಫೋಟದ ನಂತರ ನಮ್ಮ ಜಗತ್ತು ಹಿಗ್ಗುತ್ತಿದೆ ಎಂದು ತಿಳಿದು ಬಂದಿದೆ. ಈ ಹಿಗ್ಗುವಿಕೆಗೆ ಕಾರಣವಾದ ಶಕ್ತಿ ಗುರುತ್ವಾಕರ್ಷಣ ಶಕ್ತಿ ಹಾಗೂ ಅದರ ಜೊತೆ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಇನ್ನೊಂದು ಅಜ್ಞಾತ ಶಕ್ತಿ ಎಂದು ನಮ್ಮ ಭೌತ ವಿಜ್ಞಾನ ಹೇಳುತ್ತದೆ. ಆ ಅಜ್ಞಾತ ಶಕ್ತಿಗೆ ನಿಗೂಢ ಶಕ್ತಿ (Dark Energy) ಎಂದು ಹೆಸರಿಡಲಾಗಿದೆ. ಈ ನಿಗೂಢ ಶಕ್ತಿಯ ಜೊತೆ ನಿಗೂಢ ದ್ರವ್ಯ (Dark Matter) ಕೂಡ ಅಸ್ತಿತ್ವದಲ್ಲಿದೆ ಎಂದು ವಿಜ್ಞಾನಿಗಳು ಅನುಮಾನ ಪಟ್ಟಿದ್ದಾರೆ.

ಗೊತ್ತಿಲ್ಲದಿರುವುದು ಶೇ.95ರಷ್ಟು!

ಗೊತ್ತಿಲ್ಲದಿರುವುದು ಶೇ.95ರಷ್ಟು!

ಈ ನಿಗೂಢ ಶಕ್ತಿ ಮತ್ತು ನಿಗೂಢ ದ್ರವ್ಯಗಳನ್ನು ಕುರಿತು ಏನೂ ತಿಳಿದು ಬಂದಿಲ್ಲ. ಅವುಗಳ ಇರುವಿಕೆಯನ್ನು ಭೌತ ವಿಜ್ಞಾನ ಮತ್ತು ಗಣಿತದ ಸಮೀಕರಣಗಳು ಮಾತ್ರ ಹೇಳುತ್ತವೆ. ಆದರೆ ಅವುಗಳನ್ನು ಯಾರೂ ಕಂಡಿಲ್ಲ ಮತ್ತು ಅವುಗಳ ಗುಣ ಲಕ್ಷಣಗಳನ್ನು ಇನ್ನೂ ದೃಢಪಡಿಸಿಲ್ಲ. ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ, ಈ ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಎನರ್ಜಿಗಳು ಒಟ್ಟಿಗೆ ಸುಮಾರು 95 ಪ್ರತಿಶತದಷ್ಟು ಮತ್ತು ನಮಗೆ ತಿಳಿದ ಉಳಿದ ಶಕ್ತಿ ಮತ್ತು ದ್ರವ್ಯಗಳು ಕೇವಲ 5 ಪ್ರತಿಶತ ಮಾತ್ರ! ಈ ಜಗತ್ತಿನಲ್ಲಿ ನಾವು ಕಾಣುವ ಗ್ರಹ, ತಾರೆ ಮತ್ತು ಆಕಾಶಗಂಗೆಗಳಲ್ಲಿ ಕಾಣ ಬರುವ ಶಕ್ತಿ ಮತ್ತು ದ್ರವ್ಯಗಳ ಒಟ್ಟು ಮೊತ್ತ 5 ಪ್ರತಿಶತ ಮಾತ್ರ! ಎಂದರೆ ಜಗತ್ತಿನ ಅಧಿಕತಮ ಶಕ್ತಿ ಮತ್ತು ದ್ರವ್ಯಗಳ ಬಗ್ಗೆ ನಮಗೆ ಏನೇನೂ ತಿಳಿದಿಲ್ಲ!

ಜೀವವನ್ನು ಸೃಷ್ಟಿ ಮಾಡುವ ಸಾಮರ್ಥ್ಯ

ಜೀವವನ್ನು ಸೃಷ್ಟಿ ಮಾಡುವ ಸಾಮರ್ಥ್ಯ

ಅಲ್ಲದೇ ಈ ಜಗತ್ತಿನಲ್ಲಿರುವ ಜೀವ ವೈವಿಧ್ಯಗಳ ಬಗ್ಗೆ ನಮಗೆ ತಿಳಿದಿದ್ದು ತೀರಾ ಅಲ್ಪವೇ. ಜೀವ ಜಗತ್ತಿನ ಮೂಲಭೂತ ಕಣಗಳನ್ನುಕುರಿತು ಸಾಕಷ್ಟು ತಿಳಿದಿದೆಯಾದರೂ ನಾವಿನ್ನೂ ಹೊಸ ಜೀವವನ್ನು ಸೃಷ್ಟಿ ಮಾಡುವ ಸಾಮರ್ಥ್ಯವನ್ನು ಪಡೆದಿಲ್ಲ. ಅದಲ್ಲದೇ ಎಲ್ಲ ಜೀವಜಗತ್ತಿನ ಪರಸ್ಪರ ಅವಲಂಬನೆಗಳ ರಹಸ್ಯಗಳನ್ನು ಇನ್ನೂ ಅರಿಯಬೇಕಾಗಿದೆ. ಜೀವವೆಂಬ ಸಂಕೀರ್ಣ ಸಮೀಕರಣದ ಉತ್ತರವನ್ನು ಕಂಡು ಹಿಡಿಯಬೇಕಾಗಿದೆ. ನಾವೇ ಜೀವಿಗಳಾಗಿ ಈ ಸಂಕೀರ್ಣ ಸಮೀಕರಣದ ಅತ್ಯಲ್ಪ ಅಂಶವಾಗಿದ್ದುಕೊಂಡು ನಾವು ಈ ಸಮೀಕರಣದ ಉತ್ತರವನ್ನು ಕಂಡು ಹಿಡಿಯಬಲ್ಲೆವೆ? ಕಲ್ಲು ತನ್ನನ್ನು ತಾನೆ ಕೊರೆದುಕೊಂಡು ಸುಂದರ ಮೂರ್ತಿಯಾಗಬಲ್ಲದೇ? ಸೀಮಿತ ಜೀವಿಗಳಾದ ನಾವು ನಮ್ಮ ಸೀಮಿತ ಇರುವಿಕೆಯಲ್ಲಿ ಅನಂತ, ಅಪರಿಮಿತವನ್ನು ತಿಳಿದುಕೊಳ್ಳಬಲ್ಲೆವೆ?

ತಮಸೋಮಾ ಜ್ಯೋತಿರ್ಗಮಯ

ತಮಸೋಮಾ ಜ್ಯೋತಿರ್ಗಮಯ

ಒಟ್ಟಿನಲ್ಲಿ ನಮಗೆ ತಿಳಿಯದ ಸಂಗತಿಗಳೇ ಅನೇಕ. ಪ್ರತಿ ಬಾರಿ ನಾವು ಎಷ್ಟು ತಿಳಿದುಕೊಳ್ಳುತ್ತೇವೆಯೋ, ನಮಗೆ ಇನ್ನೂ ತಿಳಿದುಕೊಳ್ಳುವುದು ಬಹಳಷ್ಟಿದೆ ಎಂಬ ಅರಿವಾಗುತ್ತದೆ. ಆದರೆ ಈ ತಿಳಿಯದಿರುವ ರಹಸ್ಯಗಳೇ ಮನುಷ್ಯನನ್ನು ನಡೆಸುತ್ತಿರುವ ದಾರಿದೀಪಗಳು. ಮತ್ತು ಅರಿಯದುದನ್ನು ಅರಿತುಕೊಳ್ಳಲು ಬೇಕಾದ ಜಿಜ್ಞಾಸೆಯನ್ನು ಪ್ರಕೃತಿಯೇ ನಮ್ಮಲ್ಲಿ ತುಂಬಿದೆ ಅಲ್ಲವೇ? ಅತ್ಯಂತ ಸಂಕೀರ್ಣವಾದ ಈ ಜಗತ್ತೆಂಬ ಅನಂತವಾದ ಸಮೀಕರಣದ ಅನಂತವಾದ ಉತ್ತರಗಳಲ್ಲಿ ಹಲವಾರು ಉತ್ತರಗಳನ್ನು ಕಂಡು ಹಿಡಿಯುತ್ತ ಹಿಡಿಯುತ್ತ ಮನುಷ್ಯ ಕತ್ತಲಿನಿಂದ ಬೆಳಕಿನೆಡೆಗೆ ನಡೆಯಬೇಕಾಗಿದೆ. ಅದೇ ಮನುಷ್ಯನಿಗೆ ಪ್ರಕೃತಿ ದೇವತೆ ಕೊಟ್ಟ ಆದೇಶ. ತಮಸೋಮಾ ಜ್ಯೋತಿರ್ಗಮಯ ಎಂದರೆ ಇದೇ ತಾನೇ?

English summary
What do we know about the universe? It is only 5 percent. Rest of it still unknown. Scientists are always exploring or digging the universe to find the hidden facts. Universe itself is an amazing thing. Vasant Kulkarni from Singapore writes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X