ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಚಗುಳಿತನ ಸಹಿಸದ ಸಿಂಗಪುರ, ಮಲೇಶಿಯಾ ಮತದಾರರು

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ನಾನು ಸಿಂಗಪುರದಲ್ಲಿ ಮೂರು ಚುನಾವಣೆಗಳನ್ನು ನೋಡಿದ್ದೇನೆ. 2011ರ ಚುನಾವಣೆ ತುಂಬಾ ನೆನಪಿನಲ್ಲಿಡುವಂತಹ ಚುನಾವಣೆ. ಮೊತ್ತ ಮೊದಲ ಬಾರಿಗೆ ಇಲ್ಲಿಯ ಆಡಳಿತಾರೂಢ ಪಕ್ಷ ಒಂದು ದೊಡ್ಡ ಜಿಲ್ಲೆಯಲ್ಲಿ ಸೋಲು ಕಂಡಿತು. 2006-07ರಿಂದ ಶುರುವಾದ ಆರ್ಥಿಕ ಏರಿಕೆಯಿಂದ ಉಂಟಾದ ಔದ್ಯಮಿಕ ಚಟುವಟಿಕೆಗಳಿಗಾಗಿ ಹೊರದೇಶಗಳಿಂದ ಅನೇಕ ಜನ ವಲಸೆ ಬಂದರು. ಸ್ವಲ್ಪವೇ ಸಮಯದಲ್ಲಿ ಅನೇಕ ಜನ ಹೊರಗಿನಿಂದ ಬಂದಿದ್ದರಿಂದ ಜನ ಸಂದಣಿ ಹೆಚ್ಚಾಗಿ ಅದರ ಪ್ರಭಾವ ಇಲ್ಲಿನ ಸಂಚಾರ ವ್ಯವಸ್ಥೆ, ವಸತಿ ಇತ್ಯಾದಿಗಳ ಮೇಲಾಗಿ ಜನರಲ್ಲಿ ಅಸಂತೋಷ ಮನೆ ಮಾಡಿತು. ಆದುದರಿಂದ ಆಡಳಿತ ಪಕ್ಷ ಸ್ವಲ್ಪ ಮಟ್ಟಿಗೆ ಹಿನ್ನಡೆ ಅನುಭವಿಸಿತು.

ಇದರ ಪರಿಣಾಮವಾಗಿ ಚುನಾವಣೆಗಳ ನಂತರ ಇಲ್ಲಿನ ಸರಕಾರ ಅನೇಕ ತಿದ್ದುಪಡಿಗಳನ್ನು ಮಾಡಿತು. ವಲಸೆಯ ಮೇಲೆ ಅನೇಕ ನಿಯಂತ್ರಣ ಹಾಕಿತು ಅಲ್ಲದೇ, ಅನೇಕ ಹೊಸ ವಸತಿ ನಿರ್ಮಾಣ ಯೋಜನೆಗಳನ್ನು ಹಾಕಿಕೊಂಡಿತು. ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿ ಅದರಲ್ಲಿಯ ವ್ಯತ್ಯಯಗಳನ್ನು ಕಡಿಮೆ ಮಾಡಿತು. ಸರಕಾರದ ತ್ವರಿತ ಮತ್ತು ಫಲಪ್ರದ ಕೆಲಸ ಅಸಮಾಧಾನವನ್ನು ಶಮನಗೊಳಿಸುವಲ್ಲಿ ಸಫಲವಾಯಿತು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಪ್ರಜೆಗಳ ಅಸಮಾಧಾನಕ್ಕೆ ಸರಕಾರ ಸ್ಪಂದಿಸಿದ ರೀತಿ.

ಚುನಾವಣೆಯೆಂಬ ರೋಚಕ ಪತ್ತೆದಾರಿ ಕಾದಂಬರಿ!ಚುನಾವಣೆಯೆಂಬ ರೋಚಕ ಪತ್ತೆದಾರಿ ಕಾದಂಬರಿ!

ಇತ್ತೀಚೆಗೆ ಪಕ್ಕದ ಮಲಯೇಶಿಯದಲ್ಲಿ ಚುನಾವಣೆ ನಡೆಯಿತು. ಅರವತ್ತೊಂದು ವರ್ಷಗಳ ನಂತರ ಅಧಿಕಾರಾರೂಢ ಬಾರಿಸಾನ್ ನ್ಯಾಷನಲ್ ಪಕ್ಷ ಸೋಲನ್ನನುಭವಿಸಿತು. ಮಲಯೇಶಿಯದ ಸ್ವಾತಂತ್ರ್ಯದ ನಂತರ ಬಾರಿಸಾನ್ ನ್ಯಾಷನಲ್ ಅಧಿಕಾರಕ್ಕೆ ಬಂದು ಮಲಯೇಶಿಯಕ್ಕೆ ಸತತವಾಗಿ ಸ್ಥಿರ ಸರಕಾರವನ್ನು ನೀಡಿತ್ತು. ಮಹಾಥಿರ್ ಮೊಹಮದ್ ಅವರಂತಹ ಶಕ್ತಿಶಾಲಿ ನಾಯಕ ತಮ್ಮನ್ನು ದೇಶದ ಅತ್ಯಂತ ಜನಪ್ರಿಯ ಪ್ರಧಾನಿಯನ್ನಾಗಿಸಿದ ತಮ್ಮದೇ ಪಕ್ಷವಾದ ಬಾರಿಸಾನ್ ನ್ಯಾಷನಲ್ ಪಕ್ಷದ ವಿರುದ್ಧ ನಿಂತು, ವಿರೋಧಿ ಪಕ್ಷದ ನಾಯಕರಾಗಿ, ತೊಂಬತ್ತೆರಡರ ಇಳಿ ವಯಸ್ಸಿನಲ್ಲಿ ಚುನಾವಣೆ ಎದುರಿಸಿ ಅಭೂತಪೂರ್ವ ಜಯ ಗಳಿಸಿದರು. ಮತ್ತೊಮ್ಮೆ ಪ್ರಧಾನಿಯಾದರು. ಮಹಾಥಿರ್ ಅವರು ಕಳೆದ ಕೆಲವು ವರ್ಷಗಳಿಂದ ಮಲಯೇಶಿಯದಲ್ಲಿ ನಡೆಯುತ್ತಿದ್ದವೆನ್ನಲಾದ ಅವ್ಯವಹಾರಗಳನ್ನು ಕುರಿತು ಕಟುವಾಗಿ ಟೀಕಿಸುತ್ತಿದ್ದರು.

Voters in Singapore, Malasia have zero tolerance for corruption

ಒನ್ ಮಲಯೇಶಿಯ ಡೆವಲಪ್‍ಮೆಂಟ್ ಬೆರ್ಹಾಡ್ ಎಂಬ ಸರಕಾರಿ ಕಂಪನಿಯಲ್ಲಿ ನಡೆದವೆನ್ನಲಾದ ಬಹುಕೋಟಿ ಮೊತ್ತದ ಅವ್ಯವಹಾರಗಳಲ್ಲಿ ಮಲಯೇಶಿಯದ ಅಂದಿನ ಪ್ರಧಾನ ಮಂತ್ರಿ ನಜೀಬ್ ರಜಾಕ್ ಅವರೂ ಶಾಮೀಲಾಗಿದ್ದರು ಎಂಬ ಆಪಾದನೆ ಮಾಡಿದ ಮಹಾಥಿರ್ ಸರಕಾರದಲ್ಲಿನ ಲಂಚಕೋರತನವನ್ನು ಎದುರಿಸಲು ಖುದ್ದಾಗಿ ಕಣಕ್ಕಿಳಿದರು. ಮಹಾಥಿರ್ ಅವರ ಸ್ವಂತ ಜನಪ್ರಿಯತೆಯ ಜೊತೆ ಜೊತೆಗೆ ಲಂಚಕೋರತನದ ವಿರುದ್ಧ ಅಲ್ಲಿನ ಪ್ರಜೆಗಳ ರೋಷ ಅಲ್ಲೊಂದು ಐತಿಹಾಸಿಕ ಬದಲಾವಣೆಯನ್ನುಂಟು ಮಾಡಿತು.

ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಏಕೆ ಹೊರಟು ಹೋದಿರಿ?ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಏಕೆ ಹೊರಟು ಹೋದಿರಿ?

ಮಲಯೇಶಿಯ ಒಂದು ಹೊಸದಾಗಿ ಅಭಿವೃದ್ದಿ ಹೊಂದಿದ ದೇಶ. ಸ್ವಾತಂತ್ರಾನಂತರ ಬಾರಿಸಾನ್ ನ್ಯಾಷನಲ್ ಪಕ್ಷ ಬಹಳ ಉತ್ತಮ ಕೆಲಸ ಮಾಡಿ ದೇಶವನ್ನು ಅಭಿವೃದ್ದಿಯ ಪಥಕ್ಕೆ ತಂದಿತ್ತು. ಅಂತಹ ಪಕ್ಷವನ್ನು ಅಲ್ಲಿಯ ಜನರು ಇಂದು ಸಾರಾಸಗಟಾಗಿ ತಿರಸ್ಕರಿಸಿದ್ದನ್ನು ನೋಡಿದರೆ ಮಲಯೇಶಿಯದ ಆಡಳಿತಕ್ಕಿಂತ ಅಲ್ಲಿಯ ಜನ ಲಂಚಕೋರತನದ ವಿರುದ್ಧ "Zero tolerance" ಅನ್ನು ಹೊಂದಿದ್ದಾರೆಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಮಹಾಥಿರ್ ಕೂಡ ಎರಡನೇ ಬಾರಿಗೆ ಪ್ರಧಾನಿಯಾದ ತಕ್ಷಣ ಭ್ರಷ್ಟಾಚಾರದ ವಿರುದ್ಧ ಶಕ್ತಿಶಾಲಿ ತನಿಖೆಯನ್ನು ಆರಂಭಿಸಿದ್ದಾರೆ ಮತ್ತು ಶೀಘ್ರಾತಿಶೀಘ್ರದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸುವ ಭರವಸೆ ನೀಡಿದ್ದಾರೆ.

Voters in Singapore, Malasia have zero tolerance for corruption

2014ರಲ್ಲಿ ನಮ್ಮ ದೇಶದ ಜನ ಕೂಡ ಇದೇ ಲಂಚಕೋರತನದ ವಿರುದ್ಧ ಮತ ಚಲಾಯಿಸಿದ್ದರು. Scamಗಳ ನಂತರ ಬಂದ Scamಗಳ ಸರಮಾಲೆಯಿಂದ ಮತ್ತು ಹದಗೆಡುತ್ತಿದ್ದ ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯಿಂದ ರೋಸಿ ಹೋಗಿ ಪ್ರಜೆಗಳು Stabilityಗಿಂತ ಸ್ವಚ್ಛ ಆಡಳಿತವನ್ನು ಬಯಸಿ ಬದಲಾವಣೆಯನ್ನು ತಂದರು. ಹಾಲಿ ಸರಕಾರ ಭ್ರಷ್ಟಾಚಾರದ ವಿರುದ್ಧ ಅನೇಕ ಕ್ರಮಗಳನ್ನು ಕೈಗೊಂಡಿದೆಯಾದರೂ ಅನೇಕ ಭ್ರಷ್ಟಾಚಾರಿಗಳು ದೇಶದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಇನ್ನೂ ಕೆಲವರು ರಾಜಾರೋಷವಾಗಿ ಎದೆ ತಟ್ಟಿಕೊಂಡು ತಿರುಗುತ್ತಿದ್ದಾರೆ. ಭ್ರಷ್ಟಾಚಾರದ ವಿಚಾರಣೆಗಳು ನ್ಯಾಯಾಂಗದ ದೀರ್ಘ ವ್ಯವಹಾರಗಳಲ್ಲಿ ನೆನೆಗುದಿಗೆ ಬಿದ್ದು ತಡಕಾಡುತ್ತಿವೆ. ನನಗನಿಸುವ ಮಟ್ಟಿಗೆ ಇದಕ್ಕೆ ಕಾರಣ, ನಮ್ಮ ಆಡಳಿತದಲ್ಲಿ ಸಿಂಗಪುರ ಅಥವಾ ಮಲಯೇಶಿಯದಲ್ಲಿ ಕಂಡು ಬರುವ ಬಿಗಿ ಇಲ್ಲದಿರುವುದು. ಭ್ರಷ್ಟಾಚಾರಿಗಳು ಮತ್ತೆ ಮತ್ತೆ ಇಲ್ಲಿ ಆರಿಸಿ ಬರುವುದನ್ನು ನೋಡಿದರೆ, ಅಲ್ಲಿರುವಂತೆ ನಮ್ಮ ಜನ ಲಂಚಕೋರತನದ ವಿರುದ್ಧ "Zero tolerance" ಅನ್ನು ಹೊಂದಿಲ್ಲ ಎಂದು ಭಾಸವಾಗುತ್ತದೆ.

ದೊಡ್ಡ ಕನಸು ಕಾಣುವವರಿಗೆ ಅಲ್ಪತನ ಇರುವುದಿಲ್ಲ!ದೊಡ್ಡ ಕನಸು ಕಾಣುವವರಿಗೆ ಅಲ್ಪತನ ಇರುವುದಿಲ್ಲ!

ಭಾರತಕ್ಕೆ ಸ್ವಾತಂತ್ರ್ಯ ನೀಡುವ ವಿಷಯದ ಮೇಲೆ ಮಾತನಾಡುತ್ತ ಇಂಗ್ಲೆಂಡಿನ ಅಂದಿನ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಅವರು "ಭಾರತಕ್ಕೆ ಸ್ವಾತಂತ್ರ್ಯ ನೀಡಿದ ಮೇಲೆ ಅಲ್ಲಿನ ಅಧಿಕಾರ ವಂಚಕರು ಮತ್ತು ರೌಡಿಗಳ ಕೈಯಲ್ಲಿ ಹೋಗುತ್ತದೆ. ಕೀಳು ಜನರು ಭಾರತದ ಮುಖಂಡರಾಗುತ್ತಾರೆ. ಅವರು ಮಧುರವಾಗಿ ಮಾತನಾಡುತ್ತಾರೆ ಆದರೆ ಹೃದಯದಲ್ಲಿ ಅವಿವೇಕವನ್ನು ತುಂಬಿಕೊಂಡಿರುತ್ತಾರೆ. ತಮ್ಮಲ್ಲಿಯೇ ಅಧಿಕಾರಕ್ಕಾಗಿ ಜಗಳವಾಡುವ ಅವರ ಈ ಸ್ವಾರ್ಥದಲ್ಲಿ ಭಾರತದ ಭವಿಷ್ಯ ಅಂಧಕಾರದಲ್ಲಿ ಮುಳುಗುತ್ತದೆ. ಮುಂದೊಂದು ದಿನ ಭಾರತದಲ್ಲಿ ಸ್ವಚ್ಛವಾದ ಗಾಳಿ ಮತ್ತು ನೀರಿಗೆ ಕೂಡಾ ತೆರಿಗೆ ಕಟ್ಟಬೇಕಾಗುತ್ತದೆ" ಚರ್ಚಿಲ್ ಅವರ ಈ ಭವಿಷ್ಯವಾಣಿ ಈಗ ನಿಜವಾಗುತ್ತ ನಡೆದಿದೆ ಎಂದೆನಿಸುವುದಿಲ್ಲವೇ?

ಅಮೇರಿಕದ ರಾಯಭಾರಿ ಗೇಲ್‍ಬ್ರೇದ್ ಅವರು ನಮ್ಮ ದೇಶವನ್ನು "Functioning Anarchy" ಎಂದು ಕರೆದಿದ್ದರು. ನಮ್ಮ ದೇಶದೊಡನೆಯೇ ಅಥವಾ ಅದರ ನಂತರ ಸ್ವಾತಂತ್ರ್ಯ ಪಡೆದ ಅನೇಕ ದೇಶಗಳು ಇಂದು ಮುಂದುವರೆದ ದೇಶವಾಗುವತ್ತ ದಾಪುಗಾಲಿಟ್ಟಿವೆ. ಆ ದೇಶಗಳಲ್ಲಿ ಪ್ರಗತಿಯತ್ತ ಕರೆದೊಯ್ಯುವ ಯೋಜನೆಗಳನ್ನು ಮತ್ತು ವ್ಯವಸ್ಥೆಗಳನ್ನು ಜಾರಿಗೊಳಿಸಿ ಅವುಗಳನ್ನು ಶಿಸ್ತಿನಿಂದ ಪಾಲಿಸುತ್ತಾರೆ. "ಆದರೆ ನಮ್ಮ ದೇಶದಲ್ಲಿ ನಾವು ವ್ಯವಸ್ಥೆಗಳನ್ನು ಜಾರಿಯೂಗೊಳಿಸುವುದಿಲ್ಲ ಮತ್ತು ತಪ್ಪಿ ಜಾರಿಗೊಳಿಸಿದ್ದನ್ನು ಪಾಲಿಸುವುದೂ ಇಲ್ಲ" ಎಂದು ಹೇಳುತ್ತಾರೆ ಪ್ರೊ. ವಿ. ರಘುನಾಥನ್ ತಮ್ಮ "Games Indians Play" ಎನ್ನುವ ಪುಸ್ತಕದಲ್ಲಿ.

ನಮ್ಮಲ್ಲಿಯ ಅವಗುಣಗಳ ಬಗ್ಗೆ ಈಗ ಮಾತನಾಡುವುದು, ಬರೆಯುವುದೂ ಕೂಡ ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗುತ್ತಿದೆ. ನಾವೇನು ಮಾಡಿದರೂ ಮಾತನಾಡಿದರೂ ಅವನತಿಯತ್ತ ಸಾಗುತ್ತಿರುವ ನಮ್ಮ ಪುರಾತನ ದೇಶ ತನ್ನ ದಿಕ್ಕನ್ನು ಬದಲಿಸುವುದಿಲ್ಲ ಎಂಬ ನಿರಾಶಾಜನಕ ಮನಃಪ್ರವೃತ್ತಿ ಹೆಡೆಯೆತ್ತುತ್ತದೆಯಾದರೂ, ಕೃಷ್ಣನ "ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ" ಎಂಬ ಹಿತವಚನ ನೆನಪಾಗಿ ಮನಸ್ಸು ಗೆಲುವಾಗುತ್ತದೆ.

English summary
Voters in Singapore and Malasia have zero tolerance for corruption. They will kick out any government which indulges in corruption. When will our India become like that? Writes Vasant Kulkarni from Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X