ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿನಮ್ರತೆಯ ಸಾಕಾರ ಮೂರ್ತಿ, ರಸಾಯನ ಶಾಸ್ತ್ರಜ್ಞ ವೆಂಕಟೇಶಮೂರ್ತಿ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಮಾಲಿನ್ಯ ಎಂದ ಕೂಡಲೆ ನಮ್ಮ ಗಮನಕ್ಕೆ ಬರುವುದು ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ. ಆದರೆ, ಈ-ತ್ಯಾಜ್ಯದಿಂದಾಗುವ ಮಾಲಿನ್ಯದ ಬಗ್ಗೆ ನಾವೆಷ್ಟು ತಲೆಕೆಡಿಸಿಕೊಂಡಿದ್ದೇವೆ. ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ರಿಸೈಕಲ್ ಮಾಡದಿದ್ದರೆ ಪರಿಸರ ಶೀಘ್ರವಾಗಿ ಕಲುಷಿತಗೊಂಡು, ಭೂಮಿ, ನೀರು ಮತ್ತು ಗಾಳಿ ವಿಷಪೂರಿತಗೊಂಡು ಬರಲಿರುವ ಪೀಳಿಗೆಗಳ ವಾಸಕ್ಕೆ ಅಯೋಗ್ಯವಾಗುತ್ತದೆ, ಪರಿಸರ ಮಾಲಿನ್ಯದಿಂದುಂಟಾಗುವ ಪ್ರಳಯದತ್ತ ನಾವು ಹೆಜ್ಜೆ ಹಾಕುತ್ತಿದ್ದೇವೆ ಎಂದು ಎಚ್ಚರಿಸಿದ್ದಾರೆ ಸಿಂಗಪುರದಲ್ಲಿ ನೆಲೆನಿಂತಿರುವ ಕನ್ನಡಿಗ, ಖ್ಯಾತ ರಸಾಯನ ಶಾಸ್ತ್ರಜ್ಞ, ಉದ್ಯಮಿ ವೆಂಕಟೇಶಮೂರ್ತಿ (ವೆಂಕಿ). ಅವರ ಸಾಧನೆ, ಕನಸು, ಪರಿಸರ ಕಾಳಜಿಯ ಬಗ್ಗೆ ವಸಂತ ಕುಲಕರ್ಣಿ ಬರೆದಿದ್ದಾರೆ.

***
"ಪರಿಸರದಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯಗಳು ಹೇಗಾಗುತ್ತವೆ ಎಂಬುದು ಇಂದು ಅನೇಕರಿಗೆ ತಿಳಿದ ವಿಷಯ. ಆದರೆ ಹಳೆಯ ಎಲೆಕ್ಟ್ರಾನಿಕ್ ಉಪಕರಣಗಳಿಂದ ಉಂಟಾಗುವ ಮಾಲಿನ್ಯ ಇನ್ನೂ ಹೆಚ್ಚು ಅಪಾಯಕಾರಿ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲದ ವಿಷಯ ಕುಲಕರ್ಣಿ ಅವರೆ, ಸರಿಯಾದ ತಂತ್ರಜ್ಞಾನದ ಬಳಕೆಯಿಂದ ಈ ತ್ಯಜಿಸಲ್ಪಟ್ಟ ಎಲೆಕ್ಟ್ರಾನಿಕ್ ಉಪಕರಣಗಳಿಂದ ಅಮೂಲ್ಯ ವಸ್ತುಗಳನ್ನು ಬೇರ್ಪಡಿಸಬಹುದು. ಶೇಕಡಾ 98% ರಷ್ಟು ವಸ್ತುಗಳನ್ನು ಈ ತ್ಯಾಜ್ಯ ಎಲೆಕ್ಟ್ರಾನಿಕ್ ಉಪಕರಣಗಳಿಂದ ಮರುಬಳಕೆ ಮಾಡಬಹುದು. ಹೀಗೆ ಮಾಡುವುದರಿಂದ ಈ ಎಲೆಕ್ಟ್ರಾನಿಕ್ ಉಪಕರಣಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಜನರಲ್ಲಿ ಈ ತಿಳಿವಳಿಕೆ ಇಲ್ಲದಿರುವುದೇ ಇಂದಿನ ದುರ್ದೈವವಾಗಿದೆ. ಈ ಅರಿವನ್ನು ಹರಡುವುದಕ್ಕಾಗಿಯೇ ನಾನು ಪರಿಶ್ರಮಿಸುತ್ತಿರುವುದು."

ಬದುಕಿನ ದಿಕ್ಕನ್ನೇ ಬದಲಿಸಿದ ಹಿರಣ್ಯಕೇಶಿ ದಂಡೆ ಮೇಲಿನ ಸಂಕೇಶ್ವರ ಬದುಕಿನ ದಿಕ್ಕನ್ನೇ ಬದಲಿಸಿದ ಹಿರಣ್ಯಕೇಶಿ ದಂಡೆ ಮೇಲಿನ ಸಂಕೇಶ್ವರ

ಹೀಗೆಂದು ನುಡಿದವರು ಸಿಂಗಪುರದಲ್ಲಿ ನೆಲೆನಿಂತ ಕನ್ನಡಿಗ, ಖ್ಯಾತ ರಸಾಯನಶಾಸ್ತ್ರಜ್ಞ, ಉದ್ಯಮಿ ವೆಂಕಟೇಶಮೂರ್ತಿಯವರು. ತಮ್ಮ ವೃತ್ತಿಯ ಬಗ್ಗೆ ಪ್ರಾಮಾಣಿಕತೆ, ಮತ್ತು ಈ ಭೂಮಿಯ ಉಳಿವಿನ ಬಗ್ಗೆ ಕಳಕಳಿ ಅವರ ಧ್ವನಿಯಲ್ಲಿ ತುಂಬಿತ್ತು.

Venkatesha Murthy - E-waste management specialist

ಹಿಂದಿನ ಭಾನುವಾರ ಅವರೊಂದಿಗೆ ಮುಂಜಾವಿನ ಉಪಹಾರ ಮಾಡುವ ಸದವಕಾಶ ನನಗೆ ದೊರಕಿತ್ತು. ಅವರೊಂದಿಗೆ ಮಾತನಾಡುತ್ತ ಅವರ ಕೆಲಸ ಮತ್ತು ಬದುಕಿನ ಬಗ್ಗೆ ಅನೇಕ ವಿಷಯಗಳು ತಿಳಿದುಬಂದವು.

ಚಿಕ್ಕಮಗಳೂರಿನಲ್ಲಿ ವ್ಯಾಸಂಗ : ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಜನಿಸಿದ ವೆಂಕಟೇಶಮೂರ್ತಿಯವರ ತಂದೆ ಹಾಲಪ್ಪ ಹೆಗ್ಡೆ, ತಾಯಿ ನಾಗಮ್ಮ. ಚಿಕ್ಕಂದಿನಲ್ಲಿಯೇ ಅವರು ತಂದೆಯನ್ನು ಕಳೆದುಕೊಂಡರು. ಸಾಮಾನ್ಯ ಮಧ್ಯಮವರ್ಗದ ಕುಟುಂಬವಾದರೂ ತಾಯಿಗೆ ಮಗನನ್ನು ಓದಿಸುವ ಛಲ. ಮನೆಯವರ ಪ್ರೋತ್ಸಾಹದ ಬಲದಲ್ಲಿ ಉತ್ಸಾಹದಿಂದ ಓದಿದ ವೆಂಕಟೇಶಮೂರ್ತಿ, ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡಿ ಕುವೆಂಪು ವಿಶ್ವವಿದ್ಯಾಲಯದಿಂದ ಇಂಡಸ್ಟ್ರಿಯಲ್ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು.

ಕರ್ನಾಟಕದಲ್ಲಿ ಕನ್ನಡಾಭಿಮಾನದ ಪುನರುಜ್ಜೀವನದ ರೋಚಕ ಕಥೆಕರ್ನಾಟಕದಲ್ಲಿ ಕನ್ನಡಾಭಿಮಾನದ ಪುನರುಜ್ಜೀವನದ ರೋಚಕ ಕಥೆ

ಎಚ್ಎಂಟಿಯಲ್ಲಿ ಉದ್ಯೋಗ : ಕೆಲಕಾಲ ಉಪನ್ಯಾಸಕರಾಗಿ ಕೆಲಸ ಮಾಡಿದ ಮೇಲೆ ಬೆಂಗಳೂರಿನ ಪ್ರತಿಷ್ಠಿತ ಎಚ್ ಎಂ ಟಿ ಕಂಪನಿಯಲ್ಲಿ ಅಧಿಕಾರಿಯಾಗಿ ಸೇರ್ಪಡೆಯಾದರು. ಅಲ್ಲಿರುವಾಗಲೇ ಸುರತ್ಕಲ್‍ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಕರ್ನಾಟಕದಿಂದ Process Metallurgy ವಿಷಯದಲ್ಲಿ ಎಮ್ ಟೆಕ್ ಪದವಿ ಪಡೆದರು. ಈ ಅವಧಿಯಲ್ಲಿ ವಾಚುಗಳಲ್ಲಿ ಬಂಗಾರದ ಬದಲು ಬೇರೆ ಲೋಹಗಳನ್ನು ಬಳಸಿದರೆ ಹೆಚ್ಚು ಬಾಳಿಕೆ ಬರುತ್ತದೆ ಎಂದು ತಮ್ಮ ಸಂಶೋಧನೆಯ ಮೂಲಕ ತೋರಿಸಿಕೊಟ್ಟರು. ಅಲ್ಲಿದ್ದಾಗ ಗುಣಮಟ್ಟ ಪರೀಕ್ಷೆಯಲ್ಲಿ ತಿರಸ್ಕರಿಸಲ್ಪಟ್ಟ ವಾಚುಗಳಿಂದ ಚಿನ್ನವನ್ನು ಪರಿಷ್ಕರಿಸಿ ಹೊರತೆಗೆಯುವ ಬಗ್ಗೆ ಸಂಶೋಧಿಸಿ ಯಶಸ್ವಿಯಾದರು.

Venkatesha Murthy - E-waste management specialist

ವೆಂಕಟೇಶಮೂರ್ತಿಯವರ ಪರಿಣಿತಿಯನ್ನು ಗಮನಿಸಿದ ಎಚ್ ಎಮ್ ಟಿ ಮಾನವ ಸಂಪನ್ಮೂಲ ಇಲಾಖೆ ಇವರನ್ನು ಇತರ ತಂತ್ರಜ್ಞರಿಗೆ ತರಬೇತಿ ನೀಡುವ ಕೆಲಸವನ್ನು ವಹಿಸಿತು. ಅಲ್ಲಿರುವಾಗ ಅವರು ವಿಶ್ವ ಸಂಸ್ಥೆಯ ಅಂಗವಾದ ಯೂನಿಫ್ ಸಂಸ್ಥೆ ಏರ್ಪಡಿಸಿದ ಅಂತಾರಾಷ್ಟ್ರೀಯ ಸೆಮಿನಾರಿನಲ್ಲಿ ಓಝೋನ್ ಪದರನ್ನು ಕುರಿತು ಅವರು ಮಂಡಿಸಿದ ಪ್ರಬಂಧ ವಿಜ್ಞಾನಲೋಕದ ಗಮನ ಸೆಳೆಯಿತು. ಪರಿಸರ ಮಾಲಿನ್ಯದ ಅವರ ಜ್ಞಾನದಿಂದ ಪ್ರಭಾವಿತರಾಗಿ ಸಿಂಗಪುರದ ಸಿಟಿರಾಯ ಎಂಬ ಕಂಪನಿಯೊಂದು ಅವರನ್ನು ಸಂಪರ್ಕಿಸಿತು. 1995ರಲ್ಲಿ ಆ ಕಂಪನಿಯಲ್ಲಿ ಪ್ರೊಜೆಕ್ಟ್ ಮ್ಯಾನೇಜರ್ ಎಂದು ಸೇರಿಕೊಂಡ ವೆಂಕಟೇಶಮೂರ್ತಿ ಅವರು ಜಪಾನ್‍ನಲ್ಲಿ ಇ-ವೇಸ್ಟ್ ಮ್ಯಾನೇಜ್‍ಮೆಂಟ್ ಮೇಲೆ ಹೆಚ್ಚಿನ ತರಬೇತಿ ಪಡೆದುಕೊಂಡು ಬಂದರು.

ಸಿಂಗಪುರದಲ್ಲಿ ಇ-ವೇಸ್ಟ್ ರೀಸೈಕ್ಲಿಂಗ್ ಘಟಕ ಸ್ಥಾಪನೆ : ಸಿಂಗಪುರದಲ್ಲಿ ಏಶಿಯಾದಲ್ಲಿಯೇ ಪ್ರಪ್ರಥಮ ಬಾರಿಗೆ ಸುಮಾರು ಮೂವತ್ತು ಕೋಟಿ ವೆಚ್ಚದಲ್ಲಿ ಇ-ವೇಸ್ಟ್ ರೀಸೈಕ್ಲಿಂಗ್ ಘಟಕವನ್ನು ಸ್ಥಾಪಿಸಲು ಕಾರಣಕರ್ತರಾದರು. ಮುಂದೆ ಕೇವಲ ಒಂದೇ ವರ್ಷದಲ್ಲಿ ಸಿಟಿರಾಯ ಕಂಪನಿ ಸುಮಾರು 150 ಕಿಲೋ ಗ್ರಾಂ ಬಂಗಾರ ಮತ್ತು ಅದಕ್ಕೂ ಹೆಚ್ಚು ಬೆಳ್ಳಿ, ಪ್ಲಾಟಿನಂ ಮತ್ತು ತಾಮ್ರಗಳಂತಹ ಬೆಲೆಬಾಳುವ ಲೋಹಗಳನ್ನು ಎಲೆಕ್ಟ್ರಾನಿಕ್ಸ್ ವೇಸ್ಟ್ ನಿಂದ ಬೇರ್ಪಡಿಸಿತು, ಮುಂದಿನ ಮೂರು ವರ್ಷಗಳಲ್ಲಿ ಅದರ ವಹಿವಾಟು ಸುಮಾರು ಸಾವಿರ ಕೋಟಿಗಳಿಗೆ ಏರಿತು. ವೆಂಕಟೇಶಮೂರ್ತಿಯವರು ತಮ್ಮ ಜ್ಞಾನ ಮತ್ತು ಕಾರ್ಯದಕ್ಷತೆಗಳಿಂದ ಕಂಪನಿಯ ಮಲೇಶಿಯಾ ಸ್ಥಾವರದ ನಿರ್ದೇಶಕರಾಗಿ ಬಡ್ತಿ ಪಡೆದರು.

ಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರ

2004ರಲ್ಲಿ ವೆಂಕಟೇಶಮೂರ್ತಿ ಮತ್ತು ಕೆಲವು ಹಿರಿಯ ಅಧಿಕಾರಿಗಳು ಕಂಪನಿಯಿಂದ ಹೊರಬಂದು "ಸಿಮೆಲಿಯಾ" ಎಂಬ ಕಂಪನಿಯನ್ನು ಸ್ಥಾಪಿಸಿದರು. ಅಲ್ಲಿ ಕೆಲವು ಕಾಲ ಕಾರ್ಯ ನಿರ್ವಹಿಸಿದ ನಂತರ ವೆಂಕಟೇಶಮೂರ್ತಿ ತಮ್ಮದೇ ಆದ "ವ್ಯಾನ್ಸ್ ಕೆಮಿಸ್ಟ್ರಿ" ಎಂಬ ಕಂಪನಿಯನ್ನು ಸ್ಥಾಪಿಸಿದರು. ಶರವೇಗದಿಂದ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಭಾರತದಲ್ಲಿ ಕೂಡ ಇ-ವೇಸ್ಟ್ ರೆಸೈಕ್ಲಿಂಗ್‍ನ ಸುಪ್ತ ಸಾಧ್ಯತೆಗಳನ್ನು ಮನಗಂಡು ಬೆಂಗಳೂರಿನಲ್ಲಿ ತಮ್ಮ ಕಂಪನಿಯ ಘಟಕವನ್ನು ಸ್ಥಾಪಿಸಿದ್ದಾರೆ. ದೇಶದ ಇತರೆಡೆ ಕೂಡ ಘಟಕಗಳನ್ನು ಸ್ಥಾಪಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

Venkatesha Murthy - E-waste management specialist

ಮಾಲಿನ್ಯದಿಂದ ಪರಿಸರ ಪ್ರಳಯ : ಅಗಾಧವಾದ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಅಸಾಮಾನ್ಯ ವೇಗದಿಂದ ಹೆಚ್ಚಾಗುತ್ತಿದೆ. ಆದುದರಿಂದ ತ್ಯಾಜ್ಯಗೊಂಡ ಎಲೆಕ್ಟ್ರಾನಿಕ್ ವಸ್ತುಗಳನ್ನು ಸರಿಯಾಗಿ ರಿಸೈಕಲ್ ಮಾಡದಿದ್ದರೆ ದೇಶದ ಪರಿಸರ ಶೀಘ್ರವಾಗಿ ಕಲುಷಿತಗೊಂಡು ದೇಶದ ಭೂಮಿ, ನೀರು ಮತ್ತು ಗಾಳಿ ವಿಷಪೂರಿತಗೊಂಡು ಬರಲಿರುವ ಪೀಳಿಗೆಗಳ ವಾಸಕ್ಕೆ ಅಯೋಗ್ಯವಾಗುತ್ತದೆ ಎಂದು ಕಳಕಳಿಯಿಂದ ನುಡಿಯುತ್ತಾರೆ. ಈ ವಿಚಾರದಲ್ಲಿ ದೇಶದ ಆಡಳಿತ ವರ್ಗ ಎಚ್ಚೆತ್ತುಕೊಳ್ಳದಿದ್ದರೆ ನಾವು ಪರಿಸರ ಮಾಲಿನ್ಯದಿಂದುಂಟಾಗುವ ಪ್ರಳಯದತ್ತ ಹೆಜ್ಜೆ ಹಾಕುತ್ತಿದ್ದೇವೆ ಎಂದು ಎಚ್ಚರಿಸುತ್ತಾರೆ.

ಅಮೆರಿಕ, ಯುರೋಪ್ ಮತ್ತು ಜಪಾನ್‍ಗಳನ್ನು ಒಳಗೊಂಡಂತೆ ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ವೆಂಕಟೇಶಮೂರ್ತಿ ಸರಕಾರಗಳ, ವಿಶ್ವವಿದ್ಯಾಲಯಗಳ ಆಹ್ವಾನದ ಮೇರೆಗೆ ಕೀ ನೋಟ್ ಭಾಷಣಗಳನ್ನು ಮಾಡಿದ್ದಾರೆ, ಸೆಮಿನಾರುಗಳನ್ನು ನೀಡಿದ್ದಾರೆ. ಚರ್ಚಾಕೂಟ ಮತ್ತು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ವಿಶ್ವದಾದ್ಯಂತ ಅನೇಕ ಪ್ರತಿಷ್ಠಿತ ಪರಿಸರ ಸಂಸ್ಥೆಗಳ ಗೌರವ ಸದಸ್ಯತ್ವವನ್ನು ಪಡೆದಿದ್ದಾರಲ್ಲದೇ, ಅನೇಕ ಸಂಸ್ಥೆಗಳ ಗೌರವ ನಿರ್ದೇಶಕ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ಸಂಸ್ಥೆಗಳಲ್ಲಿ ಅಮೆರಿಕ ಮೂಲದ ಪ್ರತಿಷ್ಠಿತ "Sustainable Electronics Recycling International (SERI)" ಮತ್ತು ಸಿಂಗಪುರದ "Waste Management and Recycling Association of Singapore (WMRAS)"ಗಳು ಕೆಲವು.

ಮನುಷ್ಯನ ವೈಚಾರಿಕ ಜಗತ್ತನ್ನು ಶ್ರೀಮಂತಗೊಳಿಸಿದ ನಾಸ್ತಿಕ ಸಿದ್ಧಾಂತಮನುಷ್ಯನ ವೈಚಾರಿಕ ಜಗತ್ತನ್ನು ಶ್ರೀಮಂತಗೊಳಿಸಿದ ನಾಸ್ತಿಕ ಸಿದ್ಧಾಂತ

ಅರಸಿಕೊಂಡು ಬಂದ ಪ್ರಶಸ್ತಿಗಳು : ಅವರ ಕೆಲಸದ ಮಹತ್ವವನ್ನು ಕಂಡು ವಿಶ್ವದ ಅನೇಕ ಸಂಘ ಸಂಸ್ಥೆಗಳು ಅವರನ್ನು ಪುರಸ್ಕರಿಸಿವೆ. ಅವರಿಗೆ 2013ರಲ್ಲಿ ಪ್ರತಿಷ್ಠಿತ "NRI of the year" ಪುರಸ್ಕಾರ ದೊರೆಯಿತು. ಇದೇ ತಿಂಗಳ ಮೊದಲ ವಾರದಲ್ಲಿ ಕನ್ನಡ ಸಂಘ (ಸಿಂಗಪುರ)ವು ಅವರಿಗೆ "ಸಿಂಗಾರ ಸಾಧನ" ಪುರಸ್ಕಾರವನ್ನು ನೀಡಿ ಗೌರವಿಸಿತು. ಇನ್ನೂ ಅನೇಕ ಪುರಸ್ಕಾರ ಮತ್ತು ಗೌರವಗಳನ್ನು ಪಡೆದ ವೆಂಕಟೇಶಮೂರ್ತಿ ಮಾತ್ರ ವಿನಯಮೂರ್ತಿ. ವಿಶ್ವದಾದ್ಯಂತ ಮನ್ನಣೆ ಪಡೆದ ತಂತಜ್ಞನಾದರೂ ಎಲ್ಲರೊಂದಿಗೆ ಒಂದಾಗಿ ಬೆರೆಯುತ್ತಾರೆ. ಯಾವುದೇ ಹಮ್ಮು ಬಿಮ್ಮುಗಳಿರದೇ ಎಲ್ಲರನ್ನೂ ಗೌರವದಿಂದ ಮಾತನಾಡಿಸುತ್ತಾರೆ.

Venkatesha Murthy - E-waste management specialist

ಸೌಜನ್ಯತೆಯ ಸಾಕಾರಮೂರ್ತಿ : ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ನನ್ನ ಮತ್ತು ಅವರ ಪರಿಚಯ ಅಷ್ಟೊಂದು ಇರಲಿಲ್ಲ. ಅವರೊಬ್ಬ ಉದ್ಯಮಿ ಎಂದು ಮಾತ್ರ ನನಗೆ ಗೊತ್ತಿತ್ತು. ಅಲ್ಲದೇ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಒಂದೆರಡು ಬಾರಿ ಮಾತನಾಡಿರಬೇಕು ಅಷ್ಟೆ. ಒಂದು ದಿನ ನಾನು ರಸ್ತೆ ಬದಿಯಲ್ಲಿ ನಿಂತು ಟ್ಯಾಕ್ಸಿಗಾಗಿ ಕಾಯುತ್ತಿದ್ದೆ. ಕಾರೊಂದು ನನ್ನ ಮುಂದೆ ಬಂದು ನಿಂತಿತು. ವೆಂಕಟೇಶಮೂರ್ತಿ ಅವರು ಇಣುಕಿ "ಬನ್ನಿ ಕುಲಕರ್ಣಿ ಅವರೇ, ಎಲ್ಲಿಗೆ ಹೋಗಬೇಕಾಗಿದೆ? ಡ್ರಾಪ್ ಕೊಡುತ್ತೇನೆ ಬನ್ನಿ" ಎಂದು ಎಷ್ಟೋ ದಿನಗಳ ಮಿತ್ರರಂತೆ ಕರೆದರು. ದೊಡ್ಡ ಉದ್ಯಮಿಯಾದ ಇವರು ಇಷ್ಟೊಂದು ಆತ್ಮೀಯವಾಗಿ ಕರೆದದ್ದನ್ನು ನೋಡಿದ ಮೇಲೆ 'ತುಂಬಿದ ಕೊಡ ತುಳುಕುವುದಿಲ್ಲ' ಎಂಬ ಉಕ್ತಿಯ ಸೂಕ್ತ ಉದಾಹರಣೆ ಇವರು ಎನಿಸಿತು.

ಮೊನ್ನೆ ಕನ್ನಡ ಸಂಘ (ಸಿಂಗಪುರ)ದ ಪ್ರಶಸ್ತಿ ಬಂದ ನಂತರ ನಾನು ಅವರಿಗೆ ಅಭಿನಂದನೆ ಸಂದೇಶ ಕಳಿಸಿದ್ದೆ. ನಂತರ ಭೇಟಿಯಾದಾಗ "ನಿಮ್ಮ ಸಾಧನೆಗಳ ಮೇಲೆ ಒಂದು ಲೇಖನ ಬರೆಯಬೇಕಾಗಿದೆ" ಎಂದು ಹೇಳಿದಾಗ ಒಪ್ಪಿಕೊಂಡರು. ಆದರೆ ಕಳೆದ ಭಾನುವಾರ ನಾವು ಭೇಟಿಯಾದಾಗ ತಮ್ಮ ಸಾಧನೆಗಳ ಬಗ್ಗೆ ಹೇಳಿಕೊಳ್ಳುವುದಕ್ಕೆ ಸಂಕೋಚ ಪಟ್ಟುಕೊಂಡ ಅವರು, ಪರಿಸರದ ಬಗ್ಗೆ ಮತ್ತು ಪರಿಸರದ ಉಳಿವಿಗಾಗಿ ಆವಿಷ್ಕೃತಗೊಂಡ ಹೊಸ ಹೊಸ ತಂತ್ರಜ್ಜಾನಗಳನ್ನು ಕುರಿತು ಹೆಚ್ಚು ಮಾತನಾಡಿದರು. ಕೊನೆಗೆ ನಾನೇ "ಸರ್, ನನಗೆ ನಿಮ್ಮ ವೈಯುಕ್ತಿಕ ಸಾಧನೆಗಳ ಬಗ್ಗೆ ಪರಿಚಯ ಬೇಕು. ಅದರ ಬಗ್ಗೆ ಬರೆಯಬೇಕಾಗಿದೆ" ಎಂದು ಕೇಳಬೇಕಾಯಿತು!

Venkatesha Murthy - E-waste management specialist

ತಾಯ್ನಾಡಿಗಾಗಿ ತುಡಿತ : ವೆಂಕಟೇಶಮೂರ್ತಿ ಅವರ ಶ್ರೀಮತಿ, ಅನುಪಮಾ ಅವರು ಕೂಡ ಒಬ್ಬ ರಸಾಯನ ಶಾಸ್ತ್ರಜ್ಞೆ. ತಮ್ಮ ಬಿಎಸ್ ಸಿ ಪದವಿಯಲ್ಲಿ ಸ್ವರ್ಣ ಪದಕ ಗಳಿಸಿದ ಪ್ರತಿಭಾವಂತೆ. ವೆಂಕಟೇಶಮೂರ್ತಿ ಅವರ ಮಗ ನಿಹಾರ್ ತನ್ನ ಹನ್ನೆರಡನೇ ತರಗತಿ ಮುಗಿಸಿ ಈಗ ಸಿಂಗಪುರದ ಕಡ್ಡಾಯ ಮಿಲಿಟರಿ ಪ್ರಶಿಕ್ಷಣವಾದ ನ್ಯಾಷನಲ್ ಸರ್ವೀಸ್ ಸೇರಿದ್ದಾನೆ. ಅವರ ಮಗಳು ಸುನಿಧಿ ಇದೀಗ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದಾಳೆ.

Globe Trotter ಆಗಿರುವ ವೆಂಕಟೇಶಮೂರ್ತಿ ತಾಯ್ನಾಡನ್ನು ಮಾತ್ರ ತಮ್ಮ ಹೃದಯದಲ್ಲಿರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಸಂಸ್ಥೆಯ ಘಟಕವೊಂದನ್ನು ಸ್ಥಾಪಿಸಿದ್ದಲ್ಲದೇ, ಮಲೆನಾಡಿನ ತಮ್ಮ ಊರಿನಲ್ಲಿ ಅನೇಕ ಶಾಲೆ, ಕಾಲೇಜು ಮತ್ತು ಆಸ್ಪತ್ರೆಗಳಿಗೆ ದಾನ ದತ್ತಿಗಳನ್ನು ನೀಡಿದ್ದಾರೆ. ಅನೇಕ ಭಾರತೀಯ ಎಂಜಿನೀಯರುಗಳು ಮತ್ತು ಕರಕುಶಲ ಕರ್ಮಿಗಳಿಗೆ ಸಿಂಗಪುರದಲ್ಲಿ ಉದ್ಯೋಗ ಕಲ್ಪಿಸಿದ್ದಾರೆ.

ಮಲೆನಾಡಿನ ಮೂಲೆಯೊಂದರಲ್ಲಿ ಜನಿಸಿ ಅತ್ಯಾಧುನಿಕ ತಂತ್ರಜ್ಞಾನವನ್ನು ಕುರಿತು ಆಳವಾಗಿ ಅಭ್ಯಸಿಸಿ, ಆ ತಂತ್ರಜ್ಞಾನದಿಂದ ಜಗತ್ತಿಗೇ ಉಪಯೋಗವಾಗುವಂತಹ ಕೆಲಸ ಮಾಡಿ ಇಂದು ಜಗತ್ತಿನ ಶ್ರೇಷ್ಠ ವಿಶೇಷಜ್ಞರಲ್ಲೊಬ್ಬನಾಗಿ ಹೊರಹೊಮ್ಮಿರುವ ವೆಂಕಟೇಶಮೂರ್ತಿ ಅವರ ಜೀವನ, ಸಾಧನೆ ಮತ್ತು ಚಿಂತನೆಗಳು ಎಲ್ಲ ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಸ್ಫೂರ್ತಿಯ ಮತ್ತು ಹೆಮ್ಮೆಯ ವಿಷಯ.

English summary
Venkatesha Murthy (Venky), E-Waste Managment Expert. Founder & CEO of Vans Chemistry, Singapore. He was awarded 'NRI of the Year' hosted by TIMES NOW- ICICI in 2014. His strong drive towards environmental sustainability prompted VANS as a company to adopt the highest standards of pollution control and health safety standards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X