ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾವ ಯಾನದ ಕಿಂದರಿ ಜೋಗಿ ಉಪಾಸನಾ ಮೋಹನ್

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಕನ್ನಡದ ಸಂಗೀತ ಜಗತ್ತಿನಲ್ಲಿ ಸುಗಮ ಸಂಗೀತ ತೀರ ಹೊಸದಾದರೂ, ಅದರ ಸ್ಥಾನ ಚಿರಾಯು. ಕನ್ನಡ ಕವಿಗಳ ಕಾವ್ಯಹಕ್ಕಿಗಳಿಗೆ ಸಂಗೀತದ ರೆಕ್ಕೆ ಜೋಡಿಸಿದ್ದು ಸುಗಮ ಸಂಗೀತ. ಆ ಮೂಲಕ ಕನ್ನಡ ಕಾವ್ಯ ಜನರ ಮನದ ಗೂಡುಗಳಿಗೆ ತಲುಪುವಂತೆ ಮಾಡಿದ್ದು ಸುಗಮ ಸಂಗೀತ.

ಕನ್ನಡಿಗರೆಲ್ಲರಲ್ಲಿ ತಮ್ಮ ಭಾಷೆಯ ಮೇಲಿನ ಭಕ್ತಿಯನ್ನು ಎಚ್ಚರಿಸಿದ ಗೀತೆ, ಹುಯಿಲಗೋಳ ನಾರಾಯಣರಾಯರು ಬರೆದ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಹಾಡು ನಮ್ಮ ನಾಡಿನ ಜನಮನವನ್ನು ತಲುಪಿದ್ದು ಕನ್ನಡ ಸುಗಮ ಸಂಗೀತದ ಪಿತಾಮಹರೆನಿಸಿದ ಪಿ. ಕಾಳಿಂಗರಾಯರ ಸಿರಿ ಕಂಠದ ಮೂಲಕ. ಲಿಂಕ್

ರಾಮ್ ಪ್ರಸಾದ್ ಬಿಸ್ಮಿಲ್ ಜನ್ಮದಿನ ಯಾಕೆ ನೆನಪಾಗಲಿಲ್ಲ?ರಾಮ್ ಪ್ರಸಾದ್ ಬಿಸ್ಮಿಲ್ ಜನ್ಮದಿನ ಯಾಕೆ ನೆನಪಾಗಲಿಲ್ಲ?

Upasana Mohan, talented singer, song writer, composer and teacher

ಕಾಳಿಂಗರಾಯರು ಕುವೆಂಪು, ಬೇಂದ್ರೆ ಮತ್ತು ಗೋಪಾಲಕೃಷ್ಣ ಅಡಿಗರಂತಹ ಮಹಾನ್ ಕವಿಗಳ ರಚನೆಗಳಿಗೆ ಸಂಗೀತ ಸಂಯೋಜಿಸಿ ಜನರ ಹೃದಯಕ್ಕೆ ತಲುಪಿಸಿದರು. ಮುಂದೆ ಅವರ ಹಾದಿಯನ್ನು ಅನುಸರಿಸಿ ಮೈಸೂರು ಅನಂತ ಸ್ವಾಮಿ, ಬಾಳಪ್ಪ ಹುಕ್ಕೇರಿ, ಎಚ್ ಆರ್ ಲೀಲಾವತಿ, ಸಿಎಸ್ ಅಶ್ವತ್ಥ್, ಶಿವಮೊಗ್ಗ ಸುಬ್ಬಣ್ಣ, ರಾಜೂ ಅನಂತಸ್ವಾಮಿ ಮತ್ತು ಜಿವಿ ಅತ್ರಿ ಅವರಂತಹ ಅನೇಕ ಮಹನೀಯರು ಈ ನಿಟ್ಟಿನಲ್ಲಿ ಅಪಾರ ಸಾಧನೆ ಮಾಡಿ ಕನ್ನಡ ಭಾವಗೀತೆಗಳಿಗೆ ಸಂಗೀತ ಗಂಗೆಯನ್ನೆರೆದು ಕನ್ನಡ ನೆಲದಲ್ಲಿ ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಿದ್ದಾರೆ.

ಆಧುನಿಕ ಸುಗಮ ಸಂಗೀತದಲ್ಲಿ ಎದ್ದು ಕಾಣುವ ಹೆಸರು ಜೆ. ಮೋಹನ್. ತಮ್ಮ ಉಪಾಸನಾ ಸಂಸ್ಥೆಯ ಮೂಲಕ ಕನ್ನಡಿಗರ ಮನೆ ಮನೆಗೂ ತಲುಪಿ ಅವರ ಮನವನ್ನು ಗೆದ್ದ ಜೆ.ಮೋಹನ್, "ಉಪಾಸನಾ ಮೋಹನ್" ಎಂದೇ ಹೆಸರು ಪಡೆದ ಅಪಾರ ಪ್ರತಿಭೆಯ ಸಂಯೋಜಕ, ಗಾಯಕ ಮತ್ತು ಶಿಕ್ಷಕ.

Upasana Mohan, talented singer, song writer, composer and teacher

ಮೋಹನ್ ಅವರು ಜನಿಸಿದ್ದು ಮೈಸೂರಿನಲ್ಲಿ. ತಂದೆ ಜಯರಾಮ್ ಮತ್ತು ತಾಯಿ ಭಾಗ್ಯಲಕ್ಷ್ಮಿ. ಮಂಡ್ಯದ ತಮ್ಮ ತಾತನ ಮನೆಯಲ್ಲಿ ಕರ್ನಾಟಕ ಸಂಗೀತ ಕೇಳುತ್ತಲೇ ಬೆಳೆದ ಮೋಹನ್ ತಮ್ಮ ಎಲೆಕ್ಟ್ರಾನಿಕ್ಸ್ ಡಿಪ್ಲೋಮಾ ಮುಗಿಸಿ ಬೆಂಗಳೂರಿಗೆ ಬಂದರು. ಶ್ರೀವತ್ಸ ಅವರಲ್ಲಿ ಕರ್ನಾಟಕ ಸಂಗೀತದ ಶಿಕ್ಷಣ ಪಡೆದ ಮೋಹನ್, ಪಂಡಿತ್ ಗೋವಿಂದ ರೊಟ್ಟಿ ಅವರ ಹತ್ತಿರ ಹಿಂದೂಸ್ತಾನಿ ಸಂಗೀತ ಶಿಕ್ಷಣ ಪಡೆದರು.

ಹಿಂದೂಸ್ತಾನಿ ದಿಗ್ಗಜರನ್ನು ಬೆಳೆಸಿದ ಪುಣ್ಯನೆಲ ಬೆಳಗಾವಿಹಿಂದೂಸ್ತಾನಿ ದಿಗ್ಗಜರನ್ನು ಬೆಳೆಸಿದ ಪುಣ್ಯನೆಲ ಬೆಳಗಾವಿ

ಬೆಂಗಳೂರಿನಲ್ಲಿ ಫಿಲಿಪ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ ಅವರಿಗೆ ಸುಗಮ ಸಂಗೀತದ ಹೆಸರಾಂತ ಸಂಯೋಜಕ ಜಿವಿ ಅತ್ರಿ ಅವರ ಪರಿಚಯ ಆಯಿತು. ಈ ಭೇಟಿ ಮೋಹನ್ ಅವರಲ್ಲಿ ಒಂದು ಸ್ಪಷ್ಟ ಹಾದಿಯನ್ನು ಹುಟ್ಟು ಹಾಕಿತು. ಮೊದಲು ಜಿವಿ ಅತ್ರಿಯವರ "ಸಂಗೀತ ಗಂಗಾ" ಶಾಲೆಯಲ್ಲಿ ಸುಗಮ ಸಂಗೀತ ಕಲಿಯಲಾರಂಭಿಸಿದ ಮೋಹನ್, ನಂತರ ಅದೇ ಶಾಲೆಯಲ್ಲಿ ಪ್ರಾಧ್ಯಾಪಕ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ತಮ್ಮ ಗುರು ಅತ್ರಿ ಅವರ ಬಗ್ಗೆ ಮೋಹನ್ "ತಾವು ಒಬ್ಬ ಕಲಾವಿದನಾಗಿ ಬೆಳೆಯಲು ಅತ್ರಿ ಅವರ ಕೊಡುಗೆ ಅಪಾರ" ಎಂದು ಭಕ್ತಿಯಿಂದ ಹೇಳಿಕೊಳ್ಳುತ್ತಾರೆ.

ಅವರ ಸಂಗೀತದ ಉಪಾಸನೆ ಅಲ್ಲಿಗೆ ನಿಲ್ಲಲಿಲ್ಲ. 1999ರ ಜೂನ್ ತಿಂಗಳಲ್ಲಿ ಮೋಹನ್ ತಮ್ಮದೇ ಆದ ಸುಗಮ ಸಂಗೀತದ ಶಾಲೆ "ಉಪಾಸನಾ"ವನ್ನು ಆರಂಭಿಸಿದರು. ಅಲ್ಲಿಂದ ಶುರುವಾದ ಅವರ ಸಂಗೀತ ರಸಧಾರೆ ಅನೇಕ ಭಾವಗೀತೆಗಳ ಹೊಳೆಯನ್ನೇ ಹರಿಸಿತು. "ಬಾ ಬಾ ಓ ಬೆಳಕೇ", "ಉಪಾಸನಾ", "ದೇವ ನಿನ್ನ ಬೇಡುವೆ", ಮೇಘ ವಿನ್ಯಾಸ", "ಯಾರಿವಳೀ ಬೆಳದಿಂಗಳು", "ಪ್ರೇಮ ಪ್ರಣತಿ" ಇತ್ಯಾದಿಗಳನ್ನೊಳಗೊಂಡು, ಇತ್ತೀಚಿಗೆ ಬಿಡುಗಡೆಯಾದ ಖ್ಯಾತ ಗಾಯಕ ಪಂಚಮ್ ಹಳಿಬಂಡಿಯವರ "ಪಂಚಮದಿಂಚರ" ಧ್ವನಿ ಸುರುಳಿಯವರೆಗೆ ನಲವತ್ತೈದು ಧ್ವನಿ ಸುರುಳಿಗಳನ್ನು ಹೊರ ತಂದಿದ್ದಾರೆ.

ವೃತ್ತಿಯಲ್ಲಿ ಒಬ್ಬ ಪರ್ಫೆಕ್ಷನಿಸ್ಟ್ ಆಗಬೇಕಾದರೆ...ವೃತ್ತಿಯಲ್ಲಿ ಒಬ್ಬ ಪರ್ಫೆಕ್ಷನಿಸ್ಟ್ ಆಗಬೇಕಾದರೆ...

Upasana Mohan, talented singer, song writer, composer and teacher

ಅವರು ಪ್ರಸಿದ್ಧ ಕವಿಗಳ ಕವಿತೆಗಳಿಗೆ ಸಂಗೀತ ಸಂಯೋಜನೆ ಮಾಡಿ ಅವುಗಳನ್ನು ಜನಪ್ರಿಯಗೊಳಿಸಿದ್ದಾರೆ. ಅನೇಕ ಉದಯೋನ್ಮುಖ ಕವಿಗಳ ರಚನೆಗಳಿಗೆ ಸಂಗೀತ ಅಳವಡಿಸಿ ಅವರಿಗೊಂದು ವೇದಿಕೆಯನ್ನು ಕಲ್ಪಿಸಿದ್ದಾರೆ. ಅನೇಕ ಹೊಸ ಹಾಡುಗಾರರಿಗೆ ಅವಕಾಶ ಕೊಟ್ಟಿದ್ದಾರೆ. ತಮ್ಮ ಸಂಸ್ಥೆಯಿಂದ ಅನೇಕ ಮಕ್ಕಳಿಗೆ ಭಾವಗೀತೆಗಳನ್ನು ಕಲಿಸಿ ಅವರನ್ನು ದೊಡ್ಡ ಸಂಗೀತಗಾರರನ್ನಾಗಿ ಮಾರ್ಪಾಟುಗೊಳಿಸಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯ ಜನಮನದಿಂದ ದೂರ ಸರಿಯುತ್ತಿರುವಂತೆ ಕಾಣುತ್ತಿರುವ ಇಂದಿನ ದಿನಗಳಲ್ಲಿ ತಮ್ಮ "ಮನೆಯಂಗಳದಲ್ಲಿ ಸುಗಮ ಸಂಗೀತ" ಕಾರ್ಯಕ್ರಮದ ಮೂಲಕ ಕನ್ನಡ ಭಾವಗೀತೆಗಳನ್ನು ಜನಗಳ ಮನೆಯಂಗಳದಲ್ಲಿ ಮೊಳಗಿ ಅವರ ಮನದಂಗಳಲ್ಲಿ ಸದಾ ಉಳಿಯುವಂತೆ ಮಾಡುವ ಭಗೀರಥ ಪ್ರಯತ್ನದಲ್ಲಿ ತೊಡಗಿದ್ದಾರೆ.

ಇಲ್ಲಿಯವರೆಗೆ ಸುಮಾರು ನಾನೂರಕ್ಕೂ ಹೆಚ್ಚು ಭಾವಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿ, ಅಶ್ವತ್ಥ್ ನಂತರದ ಪೀಳಿಗೆಯ ಸಂಯೋಜಕರಲ್ಲಿ ಅತಿ ಹೆಚ್ಚು ಭಾವಗೀತೆಗಳನ್ನು ಸಂಯೋಜಿಸಿ ಮುಂಚೂಣಿಯ ಕಲಾವಿದರೆಂದು ಹೆಸರಾಗಿದ್ದಾರೆ. 70ಕ್ಕೂ ಹೆಚ್ಚು ಭಾವಗೀತೆಗಳ ಕಲಿಕಾ ಶಿಬಿರಗಳನ್ನು ನಡೆಸಿ ಸುಮಾರು 10 ಸಾವಿರಕ್ಕೂ ಮಿಗಿಲು ಮಕ್ಕಳಿಗೆ ಭಾವಗೀತೆಗಳ ಬಗ್ಗೆ ಒಲವು ಮೂಡಿಸಿದ್ದಾರೆ.

Upasana Mohan, talented singer, song writer, composer and teacher

2005ರಲ್ಲಿ ಆಕಾಶವಾಣಿ ಶ್ರೋತ್ರ ಬಳಗದ "ವರ್ಷದ ಸಂಯೋಜಕ ಪ್ರಶಸ್ತಿ", 2006ರಲ್ಲಿ ಮಂಡ್ಯದ ಬ್ರಾಹ್ಮಣ ಸಂಘದ "ವರ್ಷದ ಗಾಯಕ ಪ್ರಶಸ್ತಿ", 2008ರ ಶೃಂಗೇರಿ ಮಠ ಮತ್ತು ಜಿವಿ ಅತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಅವರ "ವರ್ಷದ ಗಾಯಕ ಪ್ರಶಸ್ತಿ", 2009ರ ಪಂಚಾಮೃತ ಸಂಗೀತ ಶಾಲೆಯವರ "ಉತ್ತಮ ಸಂಯೋಜಕ ಪ್ರಶಸ್ತಿ" ಮತ್ತು 2015ರಲ್ಲಿ ಮೈಸೂರಿನ ಗುರುಕೃಪಾ ಸಂಗೀತ ಶಾಲೆಯವರ "ವಾರ್ಷಿಕ ಪ್ರಶಸ್ತಿ"ಗಳನ್ನು ಒಳಗೊಂಡು ಹತ್ತು ಹಲವು ಪ್ರಶಸ್ತಿಗಳನ್ನು ಪಡೆದ ಉಪಾಸನಾ ಮೋಹನ್, ಒಬ್ಬ ಉತ್ತಮ ಬರಹಗಾರ ಕೂಡ. "ಸುಗಮ ಸಂಗೀತ ಲೋಕದ ದಿಗ್ಗಜರು" ಎಂಬ 27 ಸುಗಮ ಸಂಗೀತದ ಸಾಧಕರ ಸ್ಥೂಲ ಪರಿಚಯ ಕೊಡುವ ಕೃತಿಯನ್ನು ರಚಿಸಿದ್ದಾರೆ ಮತ್ತು ತಾವು ಸಂಗೀತ ನೀಡಿದ 365 ಪ್ರಸಿದ್ಧ ಕವಿಗಳ ಕವನಗಳನ್ನು ಸಂಪಾದಿಸಿ "ಉಪಾಸನಾ" ಎಂಬ ಸಂಕಲನವನ್ನು ಹೊರ ತಂದಿದ್ದಾರೆ.

ಕಳೆದ ಮೂರು ವರ್ಷಗಳಿಂದ ಜೂನ್ ತಿಂಗಳಲ್ಲಿ ಸಿಂಗಪುರಕ್ಕೆ ಆಗಮಿಸಿ ಭಾವ ಗೀತೆಯ ಶಿಬಿರವನ್ನು ನಡೆಸಿಕೊಟ್ಟು ಇಲ್ಲಿಯೂ ಅನೇಕ ಶಿಷ್ಯರು ಮತ್ತು ಸ್ನೇಹಿತರನ್ನು ಸಂಪಾದಿಸಿದ ಈ ಸಹೃದಯದ ಸಂಗೀತಗಾರ ತಮ್ಮ ಸ್ನೇಹಭಾವದಿಂದ ಸಿಂಗನ್ನಡಿಗರ ಮನವನ್ನು ಸೂರೆಗೊಂಡಿದ್ದಾರೆ. ನಾನೊಬ್ಬ ಹವ್ಯಾಸೀ ಬರಹಗಾರನಾದರೂ ನನ್ನ ಮತ್ತು ನನ್ನ ಮಿತ್ರ ವೆಂಕಟ್ ಅವರ ಕವನಗಳನ್ನು ಮೆಚ್ಚಿ, ಪ್ರೋತ್ಸಾಹಿಸಿ ಕೆಲವು ಆಯ್ದ ಕವನಗಳಿಗೆ ಸಂಗೀತ ಸಂಯೋಜಿಸಿ ಕಳೆದ ವರ್ಷ "ಪ್ರೇಮ ಪ್ರಣತಿ" ಎಂಬ ದ್ವನಿ ಸುರುಳಿಯನ್ನು ಹೊರ ತಂದಿದ್ದು ಹೊಸ ಬರಹಗಾರರನ್ನು ಬೆಳಕಿಗೆ ತರಲು ಅವರು ನಡೆಸುತ್ತಿರುವ ಪ್ರಯತ್ನದ ಕುರುಹು.

ಎಚ್ಎಸ್ ವೆಂಕಟೇಶ ಮೂರ್ತಿ, ಗೋಪಾಲ ಕೃಷ್ಣ ಅಡಿಗ, ಬಿಆರ್ ಲಕ್ಷ್ಮಣರಾವ್ ಮುಂತಾದ ಪ್ರಸಿದ್ಧ ಕವಿಗಳ ಕವನಗಳನ್ನುಆಳವಾಗಿ ಅಭ್ಯಸಿಸಿ ಎಂದು ಕರೆ ನೀಡುತ್ತಲೇ, ಬರಹದಲ್ಲಿ ನಿಮ್ಮದೇ ಆದ ಮಾರ್ಗವನ್ನು ಕಂಡು ಹಿಡಿದು ಸ್ವಂತಿಕೆಯನ್ನು ಬೆಳೆಸಿಕೊಳ್ಳಿ ಎಂದು ಮಾರ್ಗದರ್ಶನ ಮಾಡುತ್ತಾರೆ. "ಕಲಾವಿದ ನಿಂತ ನೀರಾಗಬಾರದು, ಹೊಸದೇನೋ ಒಂದರ ಹುಡುಕಾಟದಲ್ಲಿ ಸದಾ ತೊಡಗಿರಬೇಕು, ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕು" ಎಂದು ಮೇಲಿಂದ ಮೇಲೆ ಹೇಳುತ್ತಿರುತ್ತಾರೆ. ಭಾವ ಯಾನದ ಈ ಕಿಂದರಿ ಜೋಗಿ ಅನೇಕ ಹೊಸ ಹೊಸ ಕವನಗಳನ್ನು ಬೆಳಕಿಗೆ ತಂದು ಕನ್ನಡಿಗರ ಮೇಲೆ ತಮ್ಮ ಗಾರುಡಿಯನ್ನು ಹೀಗೆಯೇ ಬೀರುತ್ತಿರಲಿ ಎಂದು ನನ್ನ ಹಾರೈಕೆ.

English summary
Upasana Mohan is one of the talented singers, composers Karnataka has seen in recent times. He has been imparting music to students through his Upasana Music school in Bengaluru. Vasant Kulkarni from Singapore writes about the garudiga of Sugama Sangeeta. ಭಾವ ಯಾನದ ಕಿಂದರಿ ಜೋಗಿ ಉಪಾಸನಾ ಮೋಹನ್
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X