ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರು, ನಾನು ಯಾರು ಎಂಬ ಹುಡುಕಾಟ- ಬ್ರಹ್ಮಾಂಡ ಕುತೂಹಲ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಸಾಮಾನ್ಯವಾಗಿ ಸೂಕ್ಷ್ಮಗ್ರಾಹಿ ಮನುಷ್ಯರೆಲ್ಲರೂ ತಮ್ಮ ಜೀವನದ ಹಾದಿಯಲ್ಲಿ ದೈನಂದಿನ ಕಾರ್ಯಕ್ರಮಗಳ ನಡುವೆ ಮಗ್ನವಾದಾಗ ಕೂಡ ಅನೇಕ ಬಾರಿ ತನ್ನ ಅಸ್ತಿತ್ವದ ಕಾರಣದ ಬಗ್ಗೆ ಯೋಚಿಸುತ್ತಾರೆ ಎನ್ನುವದು ಸ್ವಾಭಾವಿಕ.

ತಾನೇಕೆ ಹುಟ್ಟಿದೆ? ಈ ಜೀವನದ ಮುಖ್ಯ ಕಾರಣವೇನು? ಅದೇಕೆ ಈ ಜಗತ್ತಿನಲ್ಲಿ ಇಷ್ಟೊಂದು ಜೀವ ವೈವಿಧ್ಯವಿದೆ? ಈ ಜಗತ್ತು ಹೀಗೇಕಿದೆ? ಈ ಜಗತ್ತು ಉದಿಸಲು ಕಾರಣವೇನು? ಈ ಬೃಹತ್ ಬ್ರಹ್ಮಾಂಡದ ಒಂದು ಚಿಕ್ಕ ಕಣಕ್ಕಿಂತಲೂ ಅಲ್ಪನಾದ ತನ್ನ ಸ್ಥಾನ ಏನಿದೆ? ಎಂಬ ಅನೇಕ ಬಗೆಹರಿಯದ ಪ್ರಶ್ನೆಗಳು ಸೂಕ್ಷ್ಮ ಸ್ವಭಾವದ ಮನುಷ್ಯರನ್ನು ಕಾಡುವುದು ಸಹಜ.

ಇಂತಹ ಪ್ರಶ್ನೆಗಳೇ ಮನುಷ್ಯನ ನಿರಂತರ ಸಂಶೋಧನೆಯ ಮೂಲ ಎಂದು ಹೇಳಬಹುದು. ಅನಾದಿ ಕಾಲದಿಂದಲೂ ಮಾನವ ಈ ಪ್ರಶ್ನೆಗಳನ್ನು ಕೇಳುತ್ತ ಮತ್ತು ಅವುಗಳಿಗೆ ಉತ್ತರ ಹುಡುಕುತ್ತ ಜ್ಞಾನದ ಅನೇಕ ಶಾಖೆಗಳನ್ನು ಸೃಷ್ಟಿಸಿದ್ದಾನೆ. ಬಗೆಹರಿಯದ ಈ ಸಮಸ್ಯೆಗಳಿಗೆ ಹೊಸದೊಂದು ವ್ಯಾಖ್ಯಾನವನ್ನು ಮನುಷ್ಯ ಮಾಡಿದಾಗಲೆಲ್ಲ ಒಂದು ಹೊಸ ಸಿದ್ಧಾಂತ, ಮತ ಅಥವಾ ಜ್ಞಾನದ ಹೊಸ ವಿಭಾಗವೊಂದು ಸೃಷ್ಟಿಯಾಗಿದೆ.

ಯಶಸ್ಸು ಅಂದ್ರೇನು? ಯಶಸ್ಸಿನ ಗುಟ್ಟು ಬಲ್ಲವರು ಯಾರು?ಯಶಸ್ಸು ಅಂದ್ರೇನು? ಯಶಸ್ಸಿನ ಗುಟ್ಟು ಬಲ್ಲವರು ಯಾರು?

ನಮ್ಮ ಭೌತಿಕ ಜಗತ್ತಿನ ಸೃಷ್ಟಿ ಮತ್ತು ರಚನೆಯನ್ನು ತಿಳಿದುಕೊಂಡರೆ ಈ ಪ್ರಶ್ನೆಗಳಿಗೆ ಉತ್ತರ ಹೊಳೆಯಬಹುದೆಂದುಕೊಂಡ ಮನುಷ್ಯರು ಮಾಡಿದ ಅಭ್ಯಾಸ, ಚಿಂತನೆ ಮತ್ತು ಸಂಶೋಧನೆಗಳಿಂದ ಇಂದಿನ ವಿಜ್ಞಾನದ ಸೃಷ್ಟಿಯಾಯಿತು. ಕ್ರಮಬದ್ಧ ಪ್ರಯೋಗಗಳು ಮತ್ತು ತರ್ಕಬದ್ಧ ಸಂಶೋಧನೆಗಳಿಂದ ವಿಜ್ಞಾನ ಬೆಳೆದು ಜಗತ್ತಿನ ಹಾದಿಯನ್ನೇ ಬದಲಿಸಿತು.

ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತು ಯೋಚಿಸುವ ದಿಕ್ಕನ್ನೇ ಬದಲಿಸಿದೆ. ಪುರಾತನ ಕಾಲದಿಂದ ಜನ ಜೀವನದಲ್ಲಿ ಹಾಸುಹೊಕ್ಕಾದ ನಂಬಿಕೆಗಳ ಬುನಾದಿಯನ್ನೇ ಅಲುಗಾಡಿಸಿಬಿಟ್ಟಿದೆ. ಆದರೆ ವಿಜ್ಞಾನದ ಈ ಉದಯ, ಹಳೆಯ ವಿಚಾರಗಳನ್ನೆಲ್ಲಾ ಧಿಕ್ಕರಿಸಿ ಎಲ್ಲವನ್ನೂ ವಿಜ್ಞಾನದ ಮಸೂರದಿಂದಲೇ ನೋಡುವ ಹೊಸ ಗುಂಪೊಂದನ್ನೇ ಸೃಷ್ಟಿಸಿದೆ.

ಪುರಾತನವಾದ ಎಲ್ಲ ಆಚರಣೆಗಳು, ನಂಬುಗೆಗಳು ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಪುರಾತನ ಕಾಲದಿಂದ ಬಳುವಳಿಯಾಗಿ ಬಂದ ತತ್ವಜ್ಞಾನ ಮತ್ತು ಅಧ್ಯಾತ್ಮಗಳನ್ನು ಈ ಗುಂಪು ಸಾರಾಸಗಟಾಗಿ ತಿರಸ್ಕರಿಸುತ್ತದೆ.

Unanswered questions and mysterious Universe

ಈ ಗುಂಪಿಗೆ ಸೇರಿದ ಕೆಲವು ವಿಜ್ಞಾನಿಗಳ ಪ್ರಕಾರ ನಮ್ಮ ಈ ಜಗತ್ತು ತನ್ನಿಂತಾನೇ ಮಥಿಸಿ ಉದಿಸಿದ ಭೌತ ದ್ರವ್ಯಗಳ ಒಂದು ಸಂಕೀರ್ಣ ಗುಂಪು. ಜೀವ, ಪ್ರಜ್ಞೆ ಮತ್ತು ಬುದ್ಧಿ ಮುಂತಾದವುಗಳು ಈ ಜಗತ್ತಿನ ವಿಕಾಸದಲ್ಲಿ ಉಂಟಾದ ಆಕಸ್ಮಿಕಗಳೇ ಹೊರತು ಅತಿಲೌಕಿಕ ಶಕ್ತಿಯೊಂದು (ದೇವರು) ಸೃಷ್ಟಿಸಿದ್ದಲ್ಲ.

ಜಗತ್ತಿನ ಎಲ್ಲ ಆಗುಹೋಗುಗಳನ್ನು ವಿಜ್ಞಾನದ ಮೂಲಕ ಸರಳವಾಗಿ ವಿವರಿಸಬಹುದು. ಅದೇಕೆ? ಇಂದಿನ ನಮ್ಮ ಜಗತ್ತಿನ ಅನನ್ಯ ಅಂಶವಾದ ಜೀವವನ್ನೇ ವಿಜ್ಞಾನದ ಮೂಲಕ ಸೃಷ್ಟಿಸಬಹುದು ಎಂಬುದು ಇವರ ದೃಢ ನಂಬಿಕೆ. ವಿಜ್ಞಾನದ ತರ್ಕಕ್ಕೆ ಸಿಗಲಾರದ ವಿಷಯ ಯಾವುದೂ ಇಲ್ಲ ಎಂಬುದು ಅವರ ಖಡಾಖಂಡಿತ ಅಭಿಪ್ರಾಯ.

ಋಣಾತ್ಮಕ ಮನೋಸ್ಥಿತಿಯಿಂದ ಮುಕ್ತರಾಗುವುದು ಹೇಗೆ?ಋಣಾತ್ಮಕ ಮನೋಸ್ಥಿತಿಯಿಂದ ಮುಕ್ತರಾಗುವುದು ಹೇಗೆ?

ಆದರೆ, ಸ್ವಲ್ಪ ಆಳವಾಗಿ ಯೋಚಿಸಿದರೆ ಇಂದಿನ ಇಷ್ಟೊಂದು ಮುಂದುವರೆದ ವಿಜ್ಞಾನದ ಹೊಳಹಿಗೆ ಸಿಗಲಾರದ ವಿಷಯಗಳು ಅನೇಕ ಎಂಬುದು ಸಾಮಾನ್ಯರಾದ ನಮಗೆ ಅನಿಸುತ್ತದೆ. ಅದು ಹೇಗೆ ಸಂತಾನೋತ್ಪತ್ತಿ ಮಾಡುವ ಜೀವ ಸೃಷ್ಟಿಯಾಯಿತು? ಅದು ಹೇಗೆ ಈ ಜೀವಕ್ಕೆ ತನ್ನ ಇರುವಿಕೆಯ ಬಗ್ಗೆ ಪ್ರಜ್ಞೆ ಉಂಟಾಯಿತು? ಅದೇಕೆ ಜೀವನದಲ್ಲಿ ಇಷ್ಟೊಂದು ಆಕಸ್ಮಿಕಗಳಾಗುತ್ತವೆ? ಜಡವಸ್ತುಗಳ ಕುರಿತಾಗಿ ಇರುವ ನಿಯಮಗಳಷ್ಟು ನಿಖರತೆ ಮತ್ತು ಸರಳತೆ ಜೀವ ವಿಜ್ಞಾನದಲ್ಲಿ ಏಕಿಲ್ಲ? ಈ ಎಲ್ಲ ವಿಷಯಗಳು ನಮ್ಮ ವಿಜ್ಞಾನಕ್ಕಿರುವ ಇತಿಮಿತಿಗಳನ್ನು ತೋರಿಸುತ್ತವೆ.

ಈ ವಿಷಯವಾಗಿ ನಾನು ಬರೆಯುತ್ತಿರುವಾಗಲೇ ನಮ್ಮ ಸಿಂಗಪುರ ಕನ್ನಡಿಗರ ವಾಟ್ಸ್ಯಾಪ್ ಗುಂಪಿನಲ್ಲಿ ಡಿವಿಜಿಯವರ ಈ ಕಗ್ಗ ಹರಿದು ಬಂದಿತು:

ಭೌತವಿಜ್ಞಾನಿ ರವಿತಾರೆಧರೆಗಳ ಚಲನ|

ರೀತಿ ವೇಗವನಳೆದು ಶಕ್ತಿಗಳ ಗುಣಿಪನ್||

ಪ್ರೀತಿ ರೋಷಗಳನವನಳೆವನೇನ್? ಅವ್ಯಕ್ತ|

ಚೇತನವನರಿವನೇಂ? - ಮಂಕುತಿಮ್ಮ||

ಭೌತ ವಿಜ್ಞಾನಿಗಳು ಸೂರ್ಯ, ಚಂದ್ರ, ನಕ್ಷತ್ರಗಳ ವೇಗ ಮತ್ತು ದಿಕ್ಕುಗಳನ್ನಳೆದು ಶಕ್ತಿಯನ್ನು ಲೆಕ್ಕ ಹಾಕುತ್ತಾರೆ. ಆದರೆ ಅವರಿಗೆ ಪ್ರೀತಿ ಮತ್ತು ರೋಷಗಳಂತಹ ಅಮೂರ್ತ ಭಾವನೆಗಳನ್ನು ಅಳೆಯಲು ಬರುವುದೇ? ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನೆಲ್ಲಾ ಆವರಿಸಿದ ಮತ್ತು ನಮ್ಮ ಇರುವಿಕೆಗೆ ಕಾರಣವಾದ ಜೀವ ಚೈತನ್ಯವನ್ನು ಕುರಿತು ಭೌತ ವಿಜ್ಞಾನಿ ಅರಿತಿದ್ದಾನೆಯೇ ಎಂದು ಪ್ರಶ್ನಿಸುತ್ತಾರೆ ದಿವ್ಯ ಕವಿ ಡಿವಿಜಿ. ಡಿವಿಜಿ ಅವರ ಈ ಪ್ರಶ್ನೆ ವಿಜ್ಞಾನದ ಸೀಮಿತತೆಯನ್ನು ಎತ್ತಿ ತೋರಿಸಿದಂತಿದೆ.

ಡಿವಿಜಿ ಈ ಪ್ರಶ್ನೆ ಕೇಳಿ ಎಪ್ಪತ್ತೈದು ವರ್ಷಕ್ಕೂ ಮಿಕ್ಕಿತು. ಈ ಎಪ್ಪತ್ತೈದು ವರ್ಷಗಳಲ್ಲಿ ಮನುಷ್ಯ ಚಂದ್ರನಂಗಳದಲ್ಲಿ ಆಡಿ, ಮಂಗಳ ಗ್ರಹಕ್ಕೆ ಸವಾಲು ಹಾಕಿದ್ದಾನೆ. ಸೌರ ಮಂಡಲದ ಹೊರಗೆ ತನ್ನ ಯಂತ್ರ ಪ್ರತಿನಿಧಿಗಳನ್ನು ಕಳುಹಿಸಿದ್ದಾನೆ. ತನ್ನ ಮನೆಯಲ್ಲಿಯೇ ಕುಳಿತು ಸಾವಿರಾರು ಮೈಲು ದೂರದ ತನ್ನ ಬಂಧುಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಾನೆ. ಆದರೆ ಇನ್ನೂ ತನ್ನಲ್ಲಿಯೇ ಅಡಕವಾಗಿರುವ ಚೈತನ್ಯದ ಬಗ್ಗೆ ತಿಳಿದುಕೊಳ್ಳಲು ಮನುಷ್ಯನಿಗೆ ಸಾಧ್ಯವಾಗಿಲ್ಲ.

ತನ್ನ ಮನಸ್ಸಿನ ಆಳಕ್ಕಿಳಿಯಲು ಸಾಧ್ಯವಾಗಿಲ್ಲ. ಅದರ ಮೇಲೆ ವಿಜಯ ಸಾಧಿಸುವುದಂತೂ ದೂರದ ಮಾತು.

ಆದರೆ, ನಿಧಾನವಾಗಿ ವಿಜ್ಞಾನ ಪ್ರಗತಿ ಸಾಧಿಸಿದಂತೆ, ಜಗತ್ತಿನ ಭವ್ಯತೆ ಮತ್ತು ಅದರ ಅನಂತತೆಯ ಅರಿವು ವಿಜ್ಞಾನಿಗಳಿಗೆ ಮತ್ತು ಅವರ ಮೂಲಕ ಜನ ಸಾಮಾನ್ಯರಿಗೆ ಆಗುತ್ತ ಹೋದಂತೆ, ಜಗತ್ತಿನ ಮೂಲೆಯಲ್ಲಿಯ ಕಣವೊಂದರಲ್ಲಿ ವಾಸಿಸುತ್ತಿರುವ ಅತೀ ಸೂಕ್ಷ್ಮ ಜಂತುಗಳಾದ ನಮ್ಮ ಇತಿಮಿತಿಯ ಅರಿವು ನಮಗಾಗುತ್ತಲಿದೆ.

ಎಲ್ಲ ಸಂಶೋಧನೆಗಳು ಮತ್ತು ಅವುಗಳಿಂದ ಉತ್ಪತ್ತಿಯಾದ ಸಿದ್ಧಾಂತಗಳಿಂದ ನಮಗೆ ತಿಳಿದು ಬಂದುದೇನೆಂದರೆ ಈ ಜಗತ್ತಿನಲ್ಲಿ ನಾವು ನೋಡುವ, ಅನುಭವಿಸುವ ಮತ್ತು ಅಳೆಯುವ ಎಲ್ಲವೂ ನಮಗೆ ಗೊತ್ತಿರುವ 5% ದ್ರವ್ಯ ಮತ್ತು ಶಕ್ತಿಗಳಿಗೆ ಸಂಬಂಧಿಸಿದ್ದು. ಉಳಿದ 95%ಅನ್ನು ನಮ್ಮ ವಿಜ್ಞಾನಿಗಳು Dark Energy (ಅಜ್ಞಾತ ಶಕ್ತಿ) ಮತ್ತು Dark matter (ಅಜ್ಞಾತ ದ್ರವ್ಯ) ಎಂದು ಕರೆಯುತ್ತಾರೆ.

ಇವೆರಡೂ ಅಜ್ಞಾತ ಎಂದರೆ ಅವುಗಳ ಬಗ್ಗೆ ಏನೇನೂ ತಿಳಿದಿಲ್ಲ. ಒಟ್ಟಿನಲ್ಲಿ ನಮಗೆ ಗೊತ್ತಿರದ ಅಂಶ ಈ ಜಗತ್ತಿನಲ್ಲಿ 95% ರಷ್ಟು ಇದೆ ಎಂದು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ ಎಂದಾಯಿತು.

ಕೇನೋಪನಿಷತ್ತಿನ ಒಂದು ಶ್ಲೋಕ ಹೀಗೆ ಹೇಳುತ್ತದೆ:

ನ ತತ್ರ ಚಕ್ಷುರ್ಗಚ್ಛತಿ ನ ವಾಗ್ ಗಚ್ಛತಿ ನೋ ಮನಃ|

ನ ವಿದ್ಮ ನ ವಿಜಾನೀಮೋ ಯಥೈತದನುಶಿಷ್ಯಾತ್||

ಅನ್ಯ ದೇವ ತದ್ ವಿದಿತಾದಥೋ ಅವಿದಿತಾದಧಿ|

ಇತಿ ಶುಶ್ರುಮ ಪೂರ್ವೇಷಾಂ ಯೇ ನಸ್ತದ್ವ್ಯಾ ಚಚಕ್ಷಿರೇ||

ಯಾವುದು ಕಣ್ಣುಗಳಿಗೆ, ಕಿವಿಗಳಿಗೆ, ಮನಸ್ಸಿಗೆ ಅತೀತವಾದ ಮತ್ತು ಮತ್ತೊಬ್ಬರಿಗೆ ಕಲಿಸಲಾಗದ, ಮತ್ತೊಬ್ಬರಿಂದ ಕಲಿಯಲಾಗದ, ನಾವು ತಿಳಿದಿರುವುದಕ್ಕಿಂತ ಬೇರೇಯೇ ಆದ ಮತ್ತು ಅಜ್ಞಾತಕ್ಕಿಂತ ಅತೀತವಾದುದೋ ಅದೇ ಆತ್ಮ ಎಂದು ಈ ಶ್ಲೋಕದ ಅರ್ಥ. ನಮ್ಮ ಒಳಗಿನ ಆತ್ಮವೇ ನಮ್ಮ ತಿಳಿವಳಿಕೆಗೆ ಎಟುಕದ್ದು ಎಂದ ಮೇಲೆ ಆತ್ಮಾತೀತವಾದ ಪರಮಾತ್ಮ ತತ್ವ ನಮಗೆ ಅಥವಾ ನಾವೇ ಸೃಜಿಸಿದ ವಿಜ್ಞಾನಕ್ಕೆ ಎಟುಕಬಹುದೇ?

ಈ ಪ್ರಶ್ನೆಗೆ ಮನುಷ್ಯನಲ್ಲಿ ಆಳವಾಗಿ ನೆಲೆಸಿದ ಅನ್ವೇಷಣಾ ಮನೋಭಾವವೇ ಉತ್ತರ ಹುಡುಕಬಹುದು ಅಲ್ಲವೇ?

English summary
There are lot of unanswered questions in the universe. Because of that it is very interesting. Here is the beautiful article by One India columnist Vasanth Kulakarni about human nature, universe and other questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X