ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕನ್ನಡಾಭಿಮಾನದ ಪುನರುಜ್ಜೀವನದ ರೋಚಕ ಕಥೆ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

4ನೇ ಮೇ, 1905ರಲ್ಲಿ ಧಾರವಾಡದ ಶ್ರೀಮಂತ ವಕೀಲರೊಬ್ಬರು ಹಂಪಿಯ ಬಳಿಯ ಆನೆಗೊಂದಿಗೆ ಭೇಟಿ ನೀಡಿದ್ದರು. ಅಲ್ಲಿಯವರೆಗೆ ಕರ್ನಾಟಕದ ವಿಜಯನಗರ ಸಾಮ್ರಾಜ್ಯವನ್ನು ಕುರಿತು ಹೆಚ್ಚೇನೂ ಗೊತ್ತಿರದ ವಕೀಲರಲ್ಲಿ ಅಂದಿನ ಹಾಳು ಹಂಪೆಯ ದಿವ್ಯ ದರ್ಶನ ಹೊಸದೊಂದು ಸ್ಫುರಣವನ್ನುಂಟು ಮಾಡಿತು. ಅದನ್ನು ಕುರಿತು ಅವರು ಬರೆದಿದ್ದು ಹೀಗೆ:

ದೀಪಾವಳಿ ವಿಶೇಷ ಪುರವಣಿ

"ನಮ್ಮ ವಿಜಯನಗರವು, ಅಲ್ಲಿ ಪ್ರತ್ಯಕ್ಷವಾಗಿಯೂ, ವಿಸ್ತಾರವಾಗಿಯೂ ನನ್ನ ಮುಂದೆ ಬಿದ್ದಿದೆ. ಆ ದಿವಸದ ದರ್ಶನವು ನನ್ನ ಮನದಲ್ಲಿ ವಿದ್ಯುತ್ತಿನ ಸಂಚಾರವನ್ನು ಮಾಡಿಸಿತು. ಚಲನಚಿತ್ರಪಟದಲ್ಲಿ ವಿದ್ಯುದ್ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡಿತು. ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿಧ ತರಂಗಗಳಿಗೆ ಇಂಬುಗೊಟ್ಟಿತು. ಹೃದಯ ಸಮುದ್ರವು ಅಲ್ಲೋಲ ಕಲ್ಲೋಲವಾಯಿತು. ಆ ದಿವಸವು ನನ್ನ ಜೀವನ ಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು". ಈ ವಕೀಲರು ಹೀಗೆ ಬರೆದು ಸುಮ್ಮನೆ ಕೂಡಲಿಲ್ಲ. ಮುಂದೆ ಬೇಲೂರು, ಹಳೇಬೀಡು, ಬದಾಮಿ, ಪಟ್ಟದಕಲ್ಲು, ಐಹೊಳೆ, ಲಕ್ಕುಂಡಿ, ಅಣ್ಣೀಗೇರಿ, ಬಂಕಾಪುರ, ಲಕ್ಷ್ಮೇಶ್ವರ ಮುಂತಾದ ಕರ್ನಾಟಕದ ಐತಿಹಾಸಿಕ ಸ್ಥಳಗಳಿಗೆ ಭೇಟಿ ಮಾಡಿದರು.

ಕನ್ನಡ ಭಾಷೆಯ ಗುಣಮಟ್ಟವನ್ನು ಹೆಚ್ಚಿಸುವುದೇ ಕನ್ನಡದ ಅಭಿವೃದ್ಧಿಕನ್ನಡ ಭಾಷೆಯ ಗುಣಮಟ್ಟವನ್ನು ಹೆಚ್ಚಿಸುವುದೇ ಕನ್ನಡದ ಅಭಿವೃದ್ಧಿ

ಈ ಭೇಟಿಗಳೊಂದಿಗೆ ಅವರ ಮನದಲ್ಲಿ ಸ್ಫುರಣಗೊಂಡಿದ್ದ ಹೊಳಹು ಸ್ಪಷ್ಟವಾಯಿತು. ಈ ಅರಿವಿನ ಫಲವೇ "ಕರ್ನಾಟಕ ಗತ ವೈಭವ" ಎಂಬ ಅದ್ಭುತ ಪುಸ್ತಕ. ಹಂಪೆಯ ಅವಶೇಷಗಳಿಂದ ಪ್ರೇರಿತರಾಗಿ ಕರ್ನಾಟಕದಾದ್ಯಂತ ಐತಿಹಾಸಿಕ ತಾಣಗಳನ್ನು ಭೇಟಿ ಮಾಡಿ, ಕರ್ನಾಟಕದ ಗತವೈಭವವನ್ನು ಆಧುನಿಕ ಕಾಲದಲ್ಲಿ ಮತ್ತೆ ಬಿತ್ತರಿಸಿ ಕನ್ನಡಿಗರಲ್ಲಿ ತಮ್ಮ ನಾಡಿನ ಬಗ್ಗೆ ಹೆಮ್ಮೆ ಬೆಳೆಯುವಂತಹ ಮಹಾನ್ ಕಾರ್ಯವನ್ನು ಕೈಗೊಂಡ ಆ ವಕೀಲರೇ "ಕರ್ನಾಟಕ ಕುಲ ಪುರೋಹಿತ" ಎಂದು ಖ್ಯಾತನಾಮರಾದ ಶ್ರೀ ಆಲೂರು ವೆಂಕಟರಾಯರು.

ಮೊನ್ನೆಯಷ್ಟೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದ್ದೇವೆ. ಕೇವಲ ನವೆಂಬರ್ ಒಂದರಂದು ಕನ್ನಡ ಮತ್ತು ಕರ್ನಾಟಕವನ್ನು ನೆನೆದುಕೊಂಡು ಉಳಿದಂತೆ ನಮ್ಮ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮಗ್ನರಾಗಿ ಬಿಡುವ ನಾವು ಕೇವಲ ಕೆಲವೇ ದಶಕಗಳ ಹಿಂದೆ ಯಾವ ಹೀನಾಯ ಸ್ಥಿತಿಯಲ್ಲಿ ಇದ್ದೆವು. ಅಂತಹ ಆ ಸ್ಥಿತಿಯಿಂದ ಇಂದಿನ ಏಕೀಕೃತ ಕರ್ನಾಟಕದಂತಹ ಸ್ಥಿತಿಗೆ ಹೇಗೆ ತಲುಪಿದೆವು ಮತ್ತು ಅದಕ್ಕೆ ಕಾರಣಕರ್ತರಾದ ಮಹನೀಯರು ಯಾರು ಎಂಬುದನ್ನು ತಿಳಿದುಕೊಳ್ಳುವುದಲ್ಲದೇ ನಮ್ಮ ಮುಂದಿನ ಪೀಳಿಗೆಗಳಿಗೂ ತಿಳಿಸಿ ಹೇಳುವುದು ಅನಿವಾರ್ಯವಾಗಿದೆ. ಅಂತಹ ಮಹನೀಯರಲ್ಲಿ ಆಲೂರು ವೆಂಕಟರಾಯರು ಅಗ್ರಗಣ್ಯರು. ಆಲೂರು ವೆಂಕಟರಾಯರ ಜೀವನ ಚರಿತ್ರೆಯನ್ನು ಒಂದು ರೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಾಭಿಮಾನದ ಪುನರುಜ್ಜೀವನದ ಕಥೆಯೆಂದೇ ಹೇಳಬಹುದು.

ಕನ್ನಡ ಕುಲ ಪುರೋಹಿತ - ಆಲೂರ ವೆಂಕಟರಾಯರು ಕನ್ನಡ ಕುಲ ಪುರೋಹಿತ - ಆಲೂರ ವೆಂಕಟರಾಯರು

1880ರ ಜುಲೈ 12ರಂದು ಬಿಜಾಪುರದಲ್ಲಿ ಜನಿಸಿದ ಆಲೂರು ವೆಂಕಟರಾಯರ ತಂದೆ ಧಾರವಾಡದ ಬಳಿಯ ಆಲೂರಿನ ಭೀಮರಾಯರು. ತಾಯಿ ಭಾಗೀರಥಿಬಾಯಿ. ಭೀಮರಾಯರು ಜಮೀನುದಾರ ಮನೆತನದವರು. ಅಲ್ಲದೇ ಅಂದಿನ ಬ್ರಿಟಿಷ ಸರಕಾರದಲ್ಲಿ ಶಿರಸ್ತೇದಾರರಾಗಿ ಕೆಲಸ ಮಾಡುತ್ತಿದ್ದವರು. ಹೀಗಾಗಿ ಅವರದು ಶ್ರೀಮಂತ ಮನೆತನ ಎಂದೇ ಹೇಳಬಹುದು. ಪ್ರಾಥಮಿಕ ಶಿಕ್ಷಣವನ್ನು ವಿವಿಧ ಊರುಗಳಲ್ಲಿ ಪೂರೈಸಿದ ವೆಂಕಟರಾಯರು ಪುಣೆ ನಗರದ ಫರ್ಗ್ಯೂಸನ್ ಕಾಲೇಜಿನಲ್ಲಿ ಡಿಗ್ರಿ ಪಡೆದು ಮುಂಬಯಿಯಲ್ಲಿ ಎಲ್ ಎಲ್ ಬಿ ಗಳಿಸಿ ಧಾರವಾಡಕ್ಕೆ ಬಂದು ವಕೀಲಿ ವೃತ್ತಿಯನ್ನು ಆರಂಭಿಸಿದರು.

True Kannadiga should not forget Alur Venkatarao

ಅಂದಿನ ದಿನಗಳಲ್ಲಿ ವಾಯುವ್ಯ ಕರ್ನಾಟಕ ಪ್ರಾಂತ್ಯವನ್ನು ದಕ್ಷಿಣ ಮರಾಠಾ ಪ್ರದೇಶವೆಂದು ಗುರುತಿಸುತ್ತಿದ್ದರು. ಶುದ್ಧ ಕನ್ನಡ ಪ್ರದೇಶವಾದ ಈ ಪ್ರಾಂತ್ಯದ ಆಡಳಿತ ಮರಾಠಿಯಲ್ಲಿಯೇ ನಡೆಯುತ್ತಿತ್ತು. ಕನ್ನಡ ಮನದ ಜನತೆಯ ಮೇಲೆ ಅನ್ಯಭಾಷೆಯನ್ನು ಹೇರಲಾಗಿತ್ತು. ಕನ್ನಡ ಮಕ್ಕಳು ತಮ್ಮ ಪ್ರಾಥಮಿಕ ಶಾಲೆಯನ್ನು ಮರಾಠಿ ವಿದ್ಯಾಲಯಗಳಲ್ಲಿ ಕಲಿಯಬೇಕಾಗುತ್ತಿತ್ತು. ಹೆಚ್ಚಿನ ವಿದ್ಯೆಗೆ ಶುದ್ಧ ಮರಾಠಿ ನಗರಗಳಾದ ಪುಣೆ, ಮುಂಬೈಗಳಿಗೆ ಹೋಗಬೇಕಾಗುತ್ತಿತ್ತು. ಬ್ರಿಟಿಷರ ಆಡಳಿತ ಮತ್ತು ಮರಾಠಿಯ ಪ್ರಾಬಲ್ಯದಿಂದ ಕನ್ನಡದ ಜನ ತಮ್ಮ ಕನ್ನಡತನವನ್ನು ಮರೆತು ಹೋಗಿದ್ದರು. ಒಂದು ರೀತಿಯಲ್ಲಿ ಅಭಿಮಾನಶೂನ್ಯರಾಗಿದ್ದರು.

ವೆಂಕಟರಾಯರು ಪುಣೆಯಲ್ಲಿರುವಾಗ ಲೋಕಮಾನ್ಯ ಟಿಳಕ, ವೀರ ಸಾವರ್ಕರ್ ಮತ್ತು ಸೇನಾಪತಿ ಬಾಪಟ್ ಮುಂತಾದ ದೇಶಭಕ್ತರ ಸಂಪರ್ಕಕ್ಕೆ ಬಂದರು. ಲೋಕಮಾನ್ಯ ಟಿಳಕರಂತೂ ಆಲೂರು ವೆಂಕಟರಾಯರ ಆರಾಧ್ಯ ದೈವವಾಗಿದ್ದರು. ಪುಣೆಯಿಂದ ಧಾರವಾಡಕ್ಕೆ ಮರಳಿದ ಮೇಲೆ ಆಲೂರು ವೆಂಕಟರಾಯರು ಕ್ರಮೇಣ ಅಂದಿನ ಮುಂಬಯಿ ಕರ್ನಾಟಕ ಪ್ರಾಂತ್ಯದಲ್ಲಿ ಕನ್ನಡ ಭಾಷೆಗೆ ಆಗುತ್ತಿದ್ದ ಅನ್ಯಾಯವನ್ನು ಗಮನಿಸಿದರು. ಮಹಾರಾಷ್ಟ್ರದಲ್ಲಿ ಮರಾಠಾ ರಾಜರು ಮತ್ತು ಪೇಶ್ವಾಯಿಗಳ ಇತಿಹಾಸಕ್ಕೆ ಅಲ್ಲಿನ ಜನರು ಕೊಡುತ್ತಿದ್ದ ಮಹತ್ವವನ್ನು ಗಮನಿಸಿದರು. ಆದರೆ ಚಾಲುಕ್ಯ, ರಾಷ್ಟ್ರಕೂಟ ಮತ್ತು ವಿಜಯನಗರ ಮುಂತಾದ ಉಜ್ವಲ ಇತಿಹಾಸವುಳ್ಳ ಕನ್ನಡ ಪ್ರದೇಶದ ಇತಿಹಾಸ ನೇಪಥ್ಯಕ್ಕೆ ಸರಿದುಹೋಗಿದ್ದುದನ್ನು ಗಮನಿಸಿದರು. ಅದೇ ಸಮಯದಲ್ಲಿ ಅವರಿಗೆ ಆನೆಗೊಂದಿ ಮತ್ತು ಹಂಪೆಗೆ ಹೋಗುವ ಅವಕಾಶ ಒದಗಿ ಬಂದಿತು.

ಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರ

ಅಲ್ಲಿಂದ ಬಂದ ನಂತರ ಕರ್ನಾಟಕದ ಭವ್ಯ ಇತಿಹಾಸ ಅವರ ಕಣ್ಣ ಮುಂದೆ ಮೆರೆಯತೊಡಗಿತು. ಕನ್ನಡ ಜನತೆ ತಮ್ಮ ಭವ್ಯ ಇತಿಹಾಸವನ್ನು ಮರೆತು ಹೋಗಿದ್ದನ್ನು ನೋಡಿ ಅವರು ಮರುಗಿದರು. ಹೇಗಾದರೂ ಮಾಡಿ ಕನ್ನಡಿಗರಲ್ಲಿ ತಮ್ಮ ಪ್ರದೇಶ, ಭಾಷೆ, ಸಾಹಿತ್ಯ, ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅಭಿಮಾನವನ್ನು ಮತ್ತೆ ಹುಟ್ಟಿಸಲು ಕಂಕಣಬದ್ಧರಾದರು. ಅದೇ ಸಮಯದಲ್ಲಿ ಭಾರತದ ವೈಸ್ ರಾಯ್ ಆಗಿದ್ದ ಲಾರ್ಡ್ ಕರ್ಜನ್ ಬಂಗಾಲವನ್ನು ವಿಭಜಿಸುವ ಹುನ್ನಾರ ಮಾಡಿದನು. ಈ ಸಮಯದಲ್ಲಿ ಉಂಟಾದ ವಂಗಭಂಗ ಚಳವಳಿಯ ಸಮಯಕ್ಕೆ ಇಡೀ ಬಂಗಾಲದ ಜನತೆ ಒಂದಾಗಿ ಹುಲಿಯಂತೆ ಹೋರಾಟ ನಡೆಸಿದ್ದನ್ನು ನೋಡಿದ ವೆಂಕಟರಾಯರಲ್ಲಿ ಕರ್ನಾಟಕದ ಜನತೆ ಕೂಡ ಒಂದು ದಿನ ಹೀಗೆಯೇ ಒಂದಾಗಲು ಹೋರಾಟ ಮಾಡಬಹುದು ಎಂಬ ಭರವಸೆ ಮೊಳೆಯಿತು. ಅಲ್ಲಿಂದ ಕನ್ನಡದ ಕೆಲಸ ಅವರ ಉಸಿರಾಯಿತು. ತನು ಮನ ಧನದಿಂದ ಅವರು ನಿರಂತರವಾಗಿ ಕನ್ನಡ ಸೇವೆಯಲ್ಲಿ ತೊಡಗಿಸಿಕೊಂಡರು.

ವಾಗ್ಭೂಷಣ ಎಂಬ ಮಾಸಪತ್ರಿಕೆಯ ಸಂಪಾದಕತ್ವವನ್ನು ವಹಿಸಿದರು. 1908ರಲ್ಲಿ ಕರ್ನಾಟಕ ಗ್ರಂಥ ಪ್ರಸಾದಕ ಮಂಡಲಿಯನ್ನು ಸ್ಥಾಪಿಸಿದರು. ರಾಷ್ಟ್ರೀಯ ಶಾಲೆಯನ್ನು ಸ್ಥಾಪಿಸಿದರು. ಕರ್ನಾಟಕ ಇತಿಹಾಸ ಮಂಡಳಿಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಕರ್ನಾಟಕ ಸಭೆಯನ್ನು ಸ್ಥಾಪಿಸಿದರು. ಒಟ್ಟಿನಲ್ಲಿ ವಾಯುವ್ಯ ಕರ್ನಾಟಕದಲ್ಲಿ ಕನ್ನಡದ ಭವ್ಯ ಇತಿಹಾಸದ ಬಗ್ಗೆ, ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಬಗ್ಗೆ ಜನಜಾಗೃತಿಯನ್ನು ಮೂಡಿಸಲು ಶ್ರಮಿಸಿದರು.

ನನ್ನ ಶಾಸ್ತ್ರೀಯ ಗಾಯನದ ಮೊದಲ ಗುರು ಮೊಹಮ್ಮದ್ ರಫಿ ನನ್ನ ಶಾಸ್ತ್ರೀಯ ಗಾಯನದ ಮೊದಲ ಗುರು ಮೊಹಮ್ಮದ್ ರಫಿ

ಕ್ರಮೇಣ ಅವರು "ಕರ್ನಾಟಕದಲ್ಲಿ ಭಾರತವಿದೆ" ಎನ್ನುವ ವಿಶಿಷ್ಟ ತತ್ವವನ್ನು ಪ್ರತಿಪಾದಿಸಿ ನಾಡಿಗೆ ಕರ್ನಾಟಕತ್ವದ ಬೀಜಮಂತ್ರವನ್ನು ಉಪದೇಶಿಸಿದರು. ಎಲ್ಲ ಕನ್ನಡ ಭಾಷೆಯನ್ನು ಮಾತನಾಡುವ ಪ್ರಾಂತ್ಯಗಳನ್ನು ಒಂದುಗೂಡಿಸಿ ಒಂದೇ ಪ್ರದೇಶವನ್ನು ಮಾಡಬೇಕು ಎಂದು ಕರೆ ಕೊಟ್ಟು ಅದಕ್ಕಾಗಿ ಶ್ರಮಿಸಿದವರಲ್ಲಿ ಆಲೂರು ವೆಂಕಟರಾಯರೇ ಮೊದಲಿಗರು. ಸರ್ ಎಂ ವಿಶ್ವೇಶ್ವರಯ್ಯನವರನ್ನು ಕಂಡು ಕನ್ನಡ ಭಾಷಿಕರಿಗೆ ಒಂದು ಸಾಹಿತ್ಯ ಸಂಸ್ಥೆಯ ಅಗತ್ಯವಿದೆ ಎಂದು ಮನವರಿಕೆ ಮಾಡಿ ಕೊಡುವಲ್ಲಿ ಯಶಸ್ವಿಯಾದರು. ಇದರ ಫಲವೇ ಇಂದು ನಾವೆಲ್ಲ ಅಭಿಮಾನ ಪಡುವ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು.

16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು "ಕರ್ನಾಟಕತ್ವವೆಂದರೆ ಕೇವಲ ದೇಶಾಭಿಮಾನವಲ್ಲ, ಕೇವಲ ಭಾಷಾಭಿಮಾನವಲ್ಲ, ಕೇವಲ ಇತಿಹಾಸಾಭಿಮಾನವಲ್ಲ. ಇವೆಲ್ಲವುಗಳನ್ನು ಒಳಗೊಂಡ ಪರಿಶುದ್ಧ ಭಾವನೆ" ಎಂದು ಘೋಷಿಸಿದರು. 1916ರಲ್ಲಿ ಅವರ ಅಭೂತಪೂರ್ವ ಗ್ರಂಥ 'ಕರ್ನಾಟಕ ಗತವೈಭವ'ದ ಪ್ರಕಟಣೆಯಾಯಿತು. ಈ ಪುಸ್ತಕ ಬಹಳ ಜನಪ್ರಿಯವಾಯಿತು. ಖ್ಯಾತ ಕಾದಂಬರಿಕಾರ ಅ ನ ಕೃಷ್ಣರಾಯರಂತಹ ಮಹನೀಯರು ಈ ಪುಸ್ತಕದಿಂದ ಪ್ರೇರಿತರಾದರು. ಮುಂದೆ ಕರ್ನಾಟಕತ್ವದ ಸೂತ್ರಗಳು, ಕರ್ನಾಟಕತ್ವದ ವಿಕಾಸ, ಕರ್ನಾಟಕ ವೀರರತ್ನಗಳು ಮುಂತಾದ ನಾಡು ನುಡಿಗಳ ಬಗೆಗಿನ ಗ್ರಂಥಗಳನ್ನು ಬರೆದು ಪ್ರಕಟಿಸಿದರು. ಕನ್ನಡದ ಕೈಂಕರ್ಯದಲ್ಲಿ ಅವರ ಅಪಾರ ಕೊಡುಗೆಯನ್ನು ಕಂಡ ಹೈದರಾಬಾದ್ ನಗರದ ಕನ್ನಡಿಗರು 1935ರಲ್ಲಿ ಅವರನ್ನು ಸನ್ಮಾನಿಸಿ "ಕರ್ನಾಟಕ ಕುಲಪುರೋಹಿತ" ಎಂಬ ಸಾರ್ಥಕ ಬಿರುದನ್ನು ನೀಡಿದರು.

ನಮ್ಮಲ್ಲಿ ಕರ್ಣನೂ ಇದ್ದಾನೆ, ಧರ್ಮನಿಷ್ಠ ವಿದುರನೂ ಇದ್ದಾನೆ ನಮ್ಮಲ್ಲಿ ಕರ್ಣನೂ ಇದ್ದಾನೆ, ಧರ್ಮನಿಷ್ಠ ವಿದುರನೂ ಇದ್ದಾನೆ

ದೇಶ ಸ್ವತಂತ್ರವಾದರೂ ಅಲೂರು ವೆಂಕಟರಾಯರ ಕನಸಿನ ಕರ್ನಾಟಕ ಇನ್ನೂ ಉದಯವಾಗಿರಲಿಲ್ಲ. ಆಲೂರು ವೆಂಕಟರಾಯರು ತಮ್ಮ ಸತತ ಪರಿಶ್ರಮದಿಂದ ಕನ್ನಡ ನಾಡಿನ ಚಳವಳಿಯನ್ನೇ ಹುಟ್ಟು ಹಾಕಿದ್ದರು. ಅವರ ಮತ್ತು ಕನ್ನಡದ ಕಾರ್ಯಕ್ಕೆ ತಮ್ಮನ್ನೇ ಸಮರ್ಪಿಸಿದ ಅನೇಕ ಮಹನೀಯರ ಪರಿಶ್ರಮದಿಂದ 1956ರ ನವೆಂಬರ್ 1ರಂದು ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ಏಕೀಕೃತ ಕರ್ನಾಟಕದ ಉಗಮವಾಯಿತು. ತಮ್ಮ ಜೀವಮಾನದಲ್ಲಿಯೇ ತಮ್ಮ ಕನಸು ಸಾಕಾರವಾದದ್ದನ್ನು ನೋಡಿ ಧನ್ಯರಾದ ಆಲೂರು ವೆಂಕಟರಾಯರು 1964ರ ಫೆಬ್ರವರಿ 25ರಂದು ದೈವಾಧೀನರಾದರು.

ನಾಡು, ನುಡಿಗಳ ಗೌರವಕ್ಕಾಗಿ ತಮ್ಮ ಇಡೀ ಜೀವಮಾನವನ್ನೇ ಗಂಧದಂತೆ ತೇಯ್ದ ಆಲೂರು ವೆಂಕಟರಾಯರಂತಹ ಮಹನೀಯರನ್ನು ಕನ್ನಡ ರಾಜ್ಯೋತ್ಸವದ ಪರ್ವದಂದು ನಾವು ಕನ್ನಡಿಗರೆಲ್ಲರೂ ನೆನಪು ಮಾಡಿಕೊಳ್ಳುತ್ತೇವೆ, ಮಾಡಿಕೊಳ್ಳಲೂ ಬೇಕು. ಆದರೆ ರಾಜ್ಯೋತ್ಸವದಂದು ನೆನಪು ಮಾಡಿಕೊಂಡು ಮುಂದೆ ಪೂರಾ ಮರೆತುಬಿಡುತ್ತೇವೆ. ಅವರ ಶ್ರಮ ಮತ್ತು ತ್ಯಾಗದಿಂದ ಮರುಜನ್ಮ ಪಡೆದ ನಮ್ಮ ನಾಡು ಮುಂದೆಂದೂ ಮತ್ತೆ ಸ್ವಾತಂತ್ರ್ಯಪೂರ್ವದಲ್ಲಿದ್ದ ದುಃಸ್ಥಿತಿಗೆ ತಲುಪದಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಅವರು ನೆನಪು ಮಾಡಿಕೊಟ್ಟ ಕರ್ನಾಟಕದ ಗತ ವೈಭವವನ್ನಷ್ಟೇ ಅಲ್ಲ, ಅದನ್ನು ಮರಳಿ ತರಲು ಶ್ರಮಿಸಿದ ಮಹಾನ್ ಚೇತನಗಳ ಜೀವನ ಇತಿಹಾಸವನ್ನು ಕೂಡ ನಾವು ಮರೆಯಬಾರದು. ಇಲ್ಲದಿದ್ದರೆ ಯಾರು ಇತಿಹಾಸವನ್ನು ಮರೆಯುವರೋ ಅವರಿಗೆ ಅಂತಹುದೇ ಇತಿಹಾಸವನ್ನು ಮರುಕಳಿಸುವ ಭಯಂಕರ ಶಿಕ್ಷೆ ಕಾದಿರುತ್ತದೆ.

English summary
True Kannadiga should not forget Alur Venkatarao and his contribution to unify all Kannadiagas in Karnataka. Because of his efforts Karnataka state was formed and all the Kannadigas were united. Vasant Kulkarni from Singapore remembers him on the occasion of Kannada Rajyotsava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X