ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮಲ್ಲಿ ಕರ್ಣನೂ ಇದ್ದಾನೆ, ಧರ್ಮನಿಷ್ಠ ವಿದುರನೂ ಇದ್ದಾನೆ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಮಹಾಭಾರತದ ಎಲ್ಲ ಪಾತ್ರಗಳು ಅವುಗಳ ಗುಣ ಮತ್ತು ಅವಗುಣಗಳಿಂದ ನಮ್ಮನ್ನು ಆಕರ್ಷಿಸುತ್ತವೆ. ಅಲ್ಲದೇ ಅವುಗಳ ವಾಸ್ತವತೆಯಿಂದ ನಮ್ಮ ಮನಸ್ಸಿಗೆ ತೀವ್ರ ಹತ್ತಿರವಾಗುತ್ತವೆ ಮತ್ತು ಸಾರ್ವಕಾಲಿಕ ಎನಿಸತೊಡಗುತ್ತವೆ. ಅನೇಕ ಪಾತ್ರಗಳಲ್ಲಿ ಕಂಡು ಬರುವ ಮಾನವ ಸಹಜ ದೌರ್ಬಲ್ಯಗಳು ಮತ್ತು ಅಸುರಕ್ಷತೆಗಳು ಅನೇಕ ಬಾರಿ ನಮ್ಮಲ್ಲಿ ಅವರ ಮೇಲೆ ಅನುಕಂಪ ಉಂಟುಮಾಡಿದರೆ, ಇತರ ಪಾತ್ರಗಳಲ್ಲಿ ಕಂಡು ಬರುವ ಧರ್ಮಪರತೆ, ನ್ಯಾಯ ಪರತೆ ಮತ್ತು ಮನೋಬಲಗಳು ಅವನ್ನು ನಮ್ಮ ಆದರ್ಶಗಳನ್ನಾಗಿಸುತ್ತವೆ. ಭೀಮಸೇನನ ಶೌರ್ಯ ಮತ್ತು ಉದಾರತೆಗಳು ಮನಸ್ಸನ್ನು ಸೆಳೆದರೆ, ಕುಂತಿಯ ಜಾಣ್ಮೆ ಮತ್ತು ಭೀಷ್ಮರ ತ್ಯಾಗಗಳು ಹೃದಯವನ್ನು ತಟ್ಟುತ್ತವೆ.

ಕರ್ಣ ಮತ್ತು ವಿದುರ. ಮಹಾಭಾರತದ ಈ ಮಹತ್ವದ ವ್ಯಕ್ತಿಗಳು ತಮ್ಮ ಸೂಕ್ಷ್ಮ ಸಂವೇದನಾಶೀಲ ಮನೋಭಾವನೆಯಿಂದ ಜನರ ಮನಃಪಟಲದಲ್ಲಿ ಸದಾ ಉಳಿಯುತ್ತಾರೆ. ಕರ್ಣ ತನ್ನೆಲ್ಲ ಸದ್ಗುಣಗಳ ನಡುವೆಯೂ ದುರ್ಜನರ ಸಂಗಕ್ಕೆ ಸಿಲುಕಿ ದುರ್ಗುಣಗಳನ್ನು ರೂಢಿಸಿಕೊಂಡು ನರಳಿ ಕೊನೆಗೆ ದುರಂತ ನಾಯಕನೆನಿಸಿದರೆ, ವಿದುರ ಅದೇ ದುರ್ಜನರ ನಡುವೆ ಬದುಕಿದ್ದರೂ ತನ್ನತನವನ್ನು ಬಿಡದೇ ಭಗವಾನ್ ಶ್ರೀಕೃಷ್ಣನ ಕೃಪೆಗೆ ಪಾತ್ರನಾಗುತ್ತಾನೆ. ಇಬ್ಬರ ಜೀವನದಲ್ಲಿ ಕೆಲವು ಸಮಾನತೆಗಳಿದ್ದರೂ, ಇಬ್ಬರ ಮನೋಭಾವನೆ ಮತ್ತು ಜೀವನದ ಗುರಿಗಳು ಅದೆಷ್ಟು ವಿರುದ್ಧವಾಗಿದ್ದವು?

ಭಾರತದ ಇತಿಹಾಸದ ದಿಕ್ಕನ್ನೇ ಬದಲಿಸಿದ ಆ ಮಹಾನ್ ಯುದ್ಧಗಳುಭಾರತದ ಇತಿಹಾಸದ ದಿಕ್ಕನ್ನೇ ಬದಲಿಸಿದ ಆ ಮಹಾನ್ ಯುದ್ಧಗಳು

ಕರ್ಣ, ಸೂರ್ಯನಿಂದ ಕುಂತಿಯಂತಹ ಪ್ರಭಾವಶಾಲಿ ಕ್ಷತ್ರಿಯ ಕುಲದಲ್ಲಿ ಹುಟ್ಟಿದರೂ, ದುರದೃಷ್ಟದಿಂದ ಹುಟ್ಟಿದಾಕ್ಷಣ ತಾಯಿಯಿಂದ ದೂರವಾಗಿ ಸಾರಥಿಯೊಬ್ಬನ ಮನೆಯಲ್ಲಿ ಬೆಳೆಯುತ್ತಾನೆ. ಅಲ್ಲಿ ಅವನಿಗೆ ತನ್ನ ಸಾಕು ತಂದೆ ತಾಯಿಯಿಂದ ಅಪಾರ ಪ್ರೀತಿ ವಾತ್ಸಲ್ಯಗಳು ದೊರೆತರೂ ತನ್ನ ಕೆಳಸ್ತರದಿಂದ ಕೀಳರಿಮೆ ಬೆಳೆಸಿಕೊಳ್ಳುತ್ತಾನೆ. ಅವನಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕ ಅವಕಾಶಗಳು ಸಿಕ್ಕಲ್ಲಿಲ್ಲವಾದ್ದರಿಂದ ತನ್ನ ಸುತ್ತಲಿನ ಸಮಾಜದಲ್ಲಿಯ ಅಸಮಾನತೆಗಳಿಂದ ರೋಷಗೊಳ್ಳುತ್ತಾನೆ. ಉನ್ನತ ಮಟ್ಟದ ವಿದ್ಯೆ ದೊರೆತಿದ್ದರೂ ತನ್ನ ಋಣಾತ್ಮಕ ನಿಲುವುಗಳಿಂದಾಗಿ ದುರ್ಯೋಧನನಂತಹ ದುಷ್ಟರ ಸಂಗದತ್ತ ಆಕರ್ಷಿತನಾಗುತ್ತಾನೆ. ಅವನ ಎಲ್ಲ ದುಷ್ಟ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಾನೆ. ವಿನಾಕಾರಣ ಪಾಂಡವರತ್ತ ದ್ವೇಷ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಾನೆ. ಇದೇ ಅವನನ್ನು ಅವನತಿಗೆ ಎಳೆದೊಯ್ಯುತ್ತದೆ. ತನ್ನ ಕೊನೆ ಕ್ಷಣದಲ್ಲಿ ತನ್ನನ್ನು ಕೊಲ್ಲಲು ಅರ್ಜುನನನ್ನು ಪ್ರೇರೇಪಿಸಿದ ಕೃಷ್ಣನನ್ನು ಪ್ರಶ್ನಿಸಿದಾಗ, ಕೃಷ್ಣ ಕರ್ಣನ ಎಲ್ಲ ಕುಕೃತ್ಯಗಳ ಪಟ್ಟಿಯನ್ನು ಆತನ ಮುಂದೆ ಇರಿಸುತ್ತಾನೆ. ಆಗ ಕರ್ಣ ನಿರುತ್ತರನಾಗುತ್ತಾನೆ.

There is Karna and Vidura in everyone of us

ವಿದುರ ಕೂಡ ಸಮಾಜದ ಕೆಳಸ್ತರದಿಂದ ಬಂದವನೇ. ಅರಮನೆಯಲ್ಲಿಯೇ ಹುಟ್ಟಿ ಬೆಳೆದರೂ, ಅರಸು ಮನೆತನದ ದಾಸಿಗೆ ಹುಟ್ಟಿದವನು ವಿದುರ. ಹಾಗೆ ನೋಡಿದರೆ ಕರ್ಣ ಸೂತ ಪುತ್ರ, ಸೂತ ಎಂದರೆ ಬ್ರಾಹ್ಮಣ ಹೆಣ್ಣು ಮತ್ತು ಕ್ಷತ್ರಿಯ ಗಂಡಿಗೆ ಜನಿಸಿದವನು. ಕರ್ಣನ ಸಾಕು ತಂದೆ ಅಧಿರಥ ಸೂತ. ವಿದುರನ ತಾಯಿ ದಾಸಿ. ಹೀಗಾಗಿ ವಿದುರನ ಸ್ಥಾನ ಕರ್ಣನಿಗಿಂತಲೂ ಕೆಳಗಿನ ಸ್ತರ ಎಂದು ಆಗ ಪರಿಗಣಿಸಲ್ಪಡುತ್ತಿತ್ತು. ಆದರೂ ವಿದುರ ಕೌರವ ರಾಜ್ಯದ ಪ್ರಧಾನ ಮಂತ್ರಿಯಾಗಿ ನಿಯೋಜಿಸಲ್ಪಟ್ಟು ತನ್ನ ನಿಷ್ಠುರ ಧಾರ್ಮಿಕ ನಿಲುವಿನಿಂದ ಬಹಳ ಎತ್ತರಕ್ಕೆ ಬೆಳೆದು ನಿಲ್ಲುತ್ತಾನೆ.

'ನಾನು' ಎಂಬ ಅಹಂಕಾರದ ಮಿಥ್ಯೆಯ ಕತ್ತಲೆ, ಮಾಯದ ಪರದೆ!'ನಾನು' ಎಂಬ ಅಹಂಕಾರದ ಮಿಥ್ಯೆಯ ಕತ್ತಲೆ, ಮಾಯದ ಪರದೆ!

ಅಣ್ಣನಾದ ಧೃತರಾಷ್ಟ್ರನಿಗೆ ಧರ್ಮ ಬೋಧೆ ಮಾಡುತ್ತಲೇ ಅವನನ್ನು ಅಂಧ ಪ್ರೀತಿಯಿಂದ ಹೊರಗೆಳೆಯಲು ಪ್ರಯತ್ನಿಸುತ್ತಿದ್ದ ವಿದುರ. ದುರ್ಯೋಧನನ ದುಷ್ಟ ಅಂತರಂಗವನ್ನು ಅರಿತರೂ ಅವನನ್ನು ಕೆಟ್ಟತನದಿಂದ ಹೊರಗೆಳೆಯಲು ತನ್ನಿಂದಾದಷ್ಟು ಯತ್ನಿಸಿದನು. ಪಾಂಡವರನ್ನು ದುರ್ಯೋಧನನ ಕುಕೃತ್ಯಗಳಿಂದ ರಕ್ಷಿಸಿದನು. ದ್ರೌಪದಿಯ ವಸ್ತ್ರಹರಣದ ಸಮಯದಲ್ಲಿ ಕೌರವರನ್ನು ವಿರೋಧಿಸಿ ತನ್ನ ಮಂತ್ರಿ ಪದವಿಯನ್ನು ತ್ಯಜಿಸಿದನು. ಆದರೆ ದೃತರಾಷ್ಟ್ರನ ಒತ್ತಾಯದಿಂದ ಮತ್ತೆ ಕೆಲಸವನ್ನು ಮುಂದುವರೆಸಬೇಕಾಯಿತು. ತನ್ನ ಜೀವಮಾನದುದ್ದಕ್ಕೂ ಯಾವುದೇ ಋಣದ ಹಂಗಿಲ್ಲದೇ ಕೇವಲ ಧರ್ಮದ ಪಥದಲ್ಲಿ ನಡೆದವನು ವಿದುರ. ಆದುದರಿಂದ ವಿದುರ ಯಮಧರ್ಮನ ಅಂಶ ಎಂದು ಹೇಳುತ್ತಾರೆ. ತನ್ನ ಕೆಳಸ್ತರದ ಹುಟ್ಟಿನಿಂದಾಗಲಿ ಅಥವಾ ಧೃತರಾಷ್ಟ್ರ ಮತ್ತು ದುರ್ಯೋಧನರಂತಹ ಕೆಟ್ಟ ಜನರ ಮಧ್ಯದಲ್ಲಿದ್ದರೂ ವಿದುರನ ಸಾತ್ವಿಕ ಶಕ್ತಿ ಅಚಲವಾಗಿತ್ತು.

ಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರ

ವಿದುರನ ಈ ಸತ್ವಗುಣ ಭಗವಾನ್ ಶ್ರೀಕೃಷ್ಣನನ್ನು ಆತನತ್ತ ಸೆಳೆದು ತಂದಿತು. ಯುಧಿಷ್ಠಿರನಿಂದ ಸಂಧಾನಕ್ಕೆಂದು ನಿಯಮಿತನಾಗಿ ಕೃಷ್ಣ ಹಸ್ತಿನಾಪುರಕ್ಕೆ ಬಂದಾಗ ಅವನನ್ನು ತನ್ನತ್ತ ಸೆಳೆದುಕೊಳ್ಳಲು ದುರ್ಯೋಧನ ಆತನಿಗೆ ಅನೇಕ ಅಮಿಷಗಳನ್ನೊಡ್ಡಿದನು. ಆದರೆ ಅದಾವುದನ್ನೂ ಲಕ್ಷಿಸದೇ ಕೃಷ್ಣ ವಿದುರನ ಮನೆಯತ್ತ ನಡೆದನು. ಈ ಘಟನೆಯನ್ನು ಪುರುಂದರ ದಾಸರು ತಮ್ಮ "ವಿದುರನ ಭಾಗ್ಯವಿದು, ಪದುಮಜಾಂಡ ತಲೆದೂಗಿದನಿದಕೋ" ಎಂಬ ಪದದಲ್ಲಿ ಚಿತ್ರಿಸಿ ವಿದುರನ ಭಕ್ತಿಯನ್ನು ಕೊಂಡಾಡಿದ್ದಾರೆ.

There is Karna and Vidura in everyone of us

ಕೊನೆಗೆ ವಿದುರ ಕುರುಕ್ಷೇತ್ರ ಯುದ್ಧದ ನಂತರ ಗೃಹಸ್ಥಾಶ್ರಮವನ್ನು ತ್ಯಜಿಸಿ ಅರಣ್ಯಕ್ಕೆ ಹೋಗುತ್ತಾನೆ. ಅಲ್ಲಿ ದೀರ್ಘಕಾಲ ತಪಸ್ಸು ಮಾಡಿ ಕೊನೆಗೆ ದೇಹವನ್ನು ತ್ಯಜಿಸಿ ಮೋಕ್ಷವನ್ನು ಪಡೆಯುತ್ತಾನೆ. ಕೊನೆಯ ಕ್ಷಣದಲ್ಲಿ ಅವನನ್ನು ನೋಡಲು ಹೋದ ಯುಧಿಷ್ಠಿರನಲ್ಲಿ ವಿದುರನ ತೇಜಸ್ಸು ವಿಲೀನವಾಗುತ್ತದೆ. ಹೀಗೆ ಧರ್ಮರಾಜನಿಗೆ ಧರ್ಮದ ಪ್ರತೀಕವಾದ ವಿದುರ ತನ್ನೆಲ್ಲ ಸಾತ್ವಿಕ ಶಕ್ತಿಯನ್ನು ಧಾರೆಯೆರೆಯುತ್ತಾನೆ.

ಅಪ್ರತಿಮ ಸೇನಾನಿ ಲಚಿತ್ ಬೋರ್ ಫುಕಾನ್ ಬಗ್ಗೆ ನಿಮಗೆಷ್ಟು ಗೊತ್ತು?ಅಪ್ರತಿಮ ಸೇನಾನಿ ಲಚಿತ್ ಬೋರ್ ಫುಕಾನ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ಎರಡು ಪಾತ್ರಗಳು ಅದು ಹೇಗೆ ವ್ಯಕ್ತಿಯ ಋಣಾತ್ಮಕ ಅಥವಾ ಧನಾತ್ಮಕ ಮನೋಧರ್ಮಗಳು ಅವನನ್ನು ಹೇಗೆ ಅವನತಿ ಅಥವಾ ಉನ್ನತಿಗೆ ಕರೆದುಕೊಂಡು ಹೋಗಬಹುದು ಎಂಬುದರ ಪ್ರತೀಕವಾಗಿವೆ. ಈ ಅವನತಿ ಅಥವಾ ಉನ್ನತಿಗೆ ಅವರ ಹುಟ್ಟಿನ ಸ್ಥಿತಿಗತಿಗಳು ಕಾರಣವಾಗುವುದಿಲ್ಲ. ಕೇವಲ ಅವರ ಮನೋಧರ್ಮ ಮತ್ತು ನಿಲುವುಗಳು ಅವರನ್ನು ಅವರವರ ಲಕ್ಷ್ಯವನ್ನು ತಲುಪಿಸುತ್ತವೆ ಎಂಬುದು ಕರ್ಣ ಮತ್ತು ವಿದುರರ ಜೀವನಗಳಿಂದ ಸ್ಪಷ್ಟವಾಗುತ್ತದೆ ಎಂದು ನನ್ನ ಅನಿಸಿಕೆ. ನಮ್ಮ ಮನಸ್ಸಿನ ಆಳದತ್ತ ಇಣುಕಿ ನೋಡಿದಾಗ ನಮಗೆ ಕರ್ಣ ಮತ್ತು ವಿದುರರಿಬ್ಬರೂ ಕಾಣ ಸಿಗುತ್ತಾರೆ. ತಪ್ಪು ದಾರಿಯತ್ತ ಆಕರ್ಷಣೆಗೊಳ್ಳುವ ಕರ್ಣನನ್ನು ನಾವು ಪ್ರೇರೇಪಿಸುತ್ತೇವೋ ಅಥವಾ ಕಷ್ಟವಾದರೂ ಕೇವಲ ಒಳ್ಳೆಯ ಮಾರ್ಗದತ್ತ ಒಲಿಯುವ ವಿದುರನನ್ನು ನಾವು ಮೇಲೇಳಗೊಡುತ್ತೇವೋ ಎಂಬುದು ನಮ್ಮ ಜೀವನದ ಧ್ಯೇಯವನ್ನು ನಿರ್ಧರಿಸುತ್ತದೆ ಅಲ್ಲವೇ?

English summary
There is Karna and Vidura in everyone of us. Both are very important characters in Mahabharata. Karna followed the wrong path and Vidura followed the right dharma, even though he was born to a dasi. We have to decide who do we want to follow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X