• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವರಲ್ಲಿ ನಂಬಿಕೆಯಿದೆಯೆ? ಎಲ್ಲಿದ್ದಾನೆ, ಯಾವ ಸ್ವರೂಪದಲ್ಲಿದ್ದಾನೆ?

By ವಸಂತ ಕುಲಕರ್ಣಿ, ಸಿಂಗಪುರ
|

(ಕಳೆದವಾರದ ನಾಸ್ತಿಕತೆಯ ಮೇಲಿನ ಲೇಖನವನ್ನು ಓದಿದ ಒನ್ಇಂಡಿಯ ಕನ್ನಡದ ಸಹಸಂಪಾದಕ ಪ್ರಸಾದ ನಾಯಿಕ ಅವರು, ಆಸ್ತಿಕತೆಯ ಮೇಲೆ ಕೂಡಾ ಅಂತಹುದೇ ಲೇಖನವನ್ನು ಬರೆಯಿರಿ ಎಂದು ನನ್ನನ್ನು ಪ್ರೇರೇಪಿಸಿದರು. ಅದರ ಫಲವೇ ಈ ಲೇಖನ. ನಾನು ಅಲ್ಲಲ್ಲಿ ಓದಿ, ಕೇಳಿ ತಿಳಿದುಕೊಂಡು ನನ್ನ ತಿಳುವಳಿಕೆಯ ಮಟ್ಟಿಗೆ ಬರೆದಿದ್ದೇನೆ. ತಪ್ಪೇನಾದರೂ ಇದ್ದರೆ ಮನ್ನಿಸಿ ಎಂದು ಓದುಗವರ್ಗಕ್ಕೆ ಕೇಳಿಕೊಳ್ಳುತ್ತೇನೆ. ಈ ವಿಷಯದಲ್ಲಿ ನನ್ನ ಅಭ್ಯಾಸ ಮಾತ್ರ ಮುಂದುವರೆಯುತ್ತದೆ).

ಮನುಷ್ಯರಿಗೆ ದೇವರಲ್ಲಿ ನಂಬಿಕೆ ಮನುಷ್ಯನಷ್ಟೇ ಹಳೆಯದು ಎನ್ನಬಹುದು. ಮಾನವನ ವಿಕಾಸದ ಮೊದಲ ದಿನಗಳಲ್ಲಿ ಮನುಷ್ಯ ಪ್ರಕೃತಿಯ ಶಕ್ತಿಗಳಾದ ಮಳೆ, ಮಿಂಚು, ಗಾಳಿ, ಅರಣ್ಯ, ಬೆಂಕಿ, ಆಕಾಶ ಮಾತು ಆಕಾಶಕಾಯಗಳನ್ನು ಕಂಡು ಬೆರಗಾಗಿ ಅವುಗಳು ಮಾನವಾತೀತ ಶಕ್ತಿಗಳಾದ್ದರಿಂದ ಅವುಗಳಿಗೆ ದೈವತ್ವವನ್ನು ಕಲ್ಪಿಸಿ ಪೂಜಿಸತೊಡಗಿದರು. ನಿಧಾನವಾಗಿ ಮನುಷ್ಯ ಈ ಪ್ರಾಕೃತಿಕ ಶಕ್ತಿಗಳ ಹಿಂದೆ ದೊಡ್ಡದೊಂದು ಶಕ್ತಿ ಇರಲೇಬೇಕೆಂದು ತರ್ಕಿಸಿ ಆ ಶಕ್ತಿಗೆ ದೇವರು ಎಂದು ಕರೆದು ಪೂಜಿಸತೊಡಗಿದ. ಪುರಾತನ ಗ್ರೀಕ್ ಮತ್ತು ಭಾರತೀಯ ಧರ್ಮಗಳಲ್ಲಿ ಪ್ರಕೃತಿ ಪೂಜೆಯನ್ನು ಸ್ಪಷ್ಟವಾಗಿ ಕಾಣಬಹುದು.

ಮನುಷ್ಯನ ವೈಚಾರಿಕ ಜಗತ್ತನ್ನು ಶ್ರೀಮಂತಗೊಳಿಸಿದ ನಾಸ್ತಿಕ ಸಿದ್ಧಾಂತ

ಭಾರತದಲ್ಲಿ ಮಳೆಯನ್ನು ಪ್ರತಿನಿಧಿಸುವ ಇಂದ್ರ, ಗಾಳಿಯನ್ನು ಪ್ರತಿನಿಧಿಸುವ ವಾಯು, ಬೆಳಕನ್ನು ಪ್ರತಿನಿಧಿಸುವ ಅಗ್ನಿ ಮತ್ತು ಅಂತರಿಕ್ಷದಲ್ಲಿನ ಸೂರ್ಯ ಮತ್ತು ಚಂದ್ರರು ದೇವರುಗಳಾಗಿದ್ದರು. ಅದೇ ಗ್ರೀಕ್ ಪುರಾಣಗಳಲ್ಲಿ ದೇವತೆಗಳ ರಾಜನಾದ ಜೀಯಸ್ ಆಕಾಶವನ್ನು ಪ್ರತಿನಿಧಿಸುತ್ತಾನೆ. ಪೊಸೆಡಿಯೋನ್ ಸಮುದ್ರ ಮತ್ತು ಭೂಕಂಪಗಳನ್ನು ಪ್ರತಿನಿಧಿಸುತ್ತಾನೆ ಮತ್ತು ಹೆಲಿಯೋಸ್ ಸೂರ್ಯನನ್ನು ಪ್ರತಿನಿಧಿಸುತ್ತಾನೆ. ಹೀಗೆ ನಮ್ಮಲ್ಲಿರುವಂತೆ ಇನ್ನೂ ಅನೇಕ ದೇವತೆಗಳು ಗ್ರೀಕ್ ಪುರಾಣಗಳಲ್ಲಿ ಕಂಡು ಬರುತ್ತಾರೆ. ನಮ್ಮಲ್ಲಿರುವಂತೆ ಗ್ರೀಕ್ ದೇಶದಲ್ಲಿ ಕೂಡ ಅವರ ದೇವರುಗಳಿಗೆ ಅನೇಕ ದೇವಾಲಯಗಳನ್ನು ಕಟ್ಟಿಸಿದ್ದರು. ಅದೇ ರೀತಿಯಾಗಿ ಪುರಾತನ ಈಜಿಪ್ತ್ ಮತ್ತು ರೋಮ್‍ಗಳಲ್ಲಿ ಕೂಡ ಬಹು ದೇವತಾ ಉಪಾಸನೆ ಜಾರಿಯಲ್ಲಿತ್ತು.

ಈ ಎಲ್ಲ ಆಸ್ತಿಕ ಮತಗಳು ಸಮಾಜದ ಮೇಲೆ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದಂತೆ, ಈ ಎಲ್ಲ ಪುರಾತನ ನಾಗರಿಕತೆಗಳಲ್ಲಿ ಅನೇಕ ಬಗೆಯ ತಿದ್ದುಪಡಿಗಳು ಈ ಮತಗಳಿಗೆ ಕಾಲಿಟ್ಟವು. ಅಲ್ಲಿನ ಅನೇಕ ತತ್ವಜ್ಞಾನಿಗಳು ಹಲವಾರು ಪುರಾಣಗಳನ್ನು ಮತ್ತು ನಿಯಮಗಳನ್ನು ಜಾರಿಗೆ ತಂದರು. ಅನೇಕರು ಈ ಮತಗಳ ಸಿದ್ಧಾಂತಗಳನ್ನು ಪ್ರಶ್ನಿಸತೊಡಗಿದರು. ಕ್ರಮೇಣ ದೇವರ ಇರುವಿಕೆ(ಆಸ್ತಿಕ) ಮತ್ತು ಇಲ್ಲದಿರುವಿಕೆ(ನಾಸ್ತಿಕ)ಗಳ ಬಗ್ಗೆ ಮಾನವ ಸಮಾಜದಲ್ಲಿ ಅನೇಕ ಸಿದ್ಧಾಂತಗಳು ಬೆಳಕಿಗೆ ಬಂದವು. ವಿವಿಧ ಪ್ರದೇಶಗಳಲ್ಲಿ ನೆಲೆಸಿದ ಮನುಷ್ಯ ಸಂಕುಲದಿಂದ ಬೇರೆ ಬೇರೆ ಆಸ್ತಿಕ ಸಿದ್ಧಾಂತಗಳು ಹೊರಹೊಮ್ಮಿದವು. ಮುಖ್ಯವಾಗಿ ಅವುಗಳನ್ನು ಪಾಶ್ಚಿಮಾತ್ಯ ಮತ್ತು ಪೂರ್ವಾತ್ಯ ಸಿದ್ಧಾಂತಗಳೆಂದು ವಿಂಗಡಿಸಬಹುದು.

ಜಗತ್ತಿನ ರಹಸ್ಯ ಸ್ಪಷ್ಟವಾಗಿ ಹೇಳಬಲ್ಲ ಸಿದ್ಧಾಂತ ಯಾವುದು?

ಪಾಶ್ಚಿಮಾತ್ಯ ಆಸ್ತಿಕ ಮತದ ಮೂಲ ಜುಡಾಯಿಸಂ ಎಂದು ನನಗನಿಸುತ್ತದೆ. ಜುಡಾಯಿಸಂ ಮತ್ತು ನಂತರ ಬಂದ ಇತರ ಸೆಮಿಟಿಕ್ ಮತಗಳ ಮುಖ್ಯ ಸಿದ್ಧಾಂತ ದೇವರು ಮತ್ತು ಜೀವರ ನಡುವಿನ ಭೇದ. ನನಗೆ ಗೊತ್ತಿರುವಂತೆ ಎಲ್ಲ ಸೆಮಿಟಿಕ್ ಮತಗಳ ಪ್ರಕಾರ ದೇವರು ಒಬ್ಬನೇ. ಇಡೀ ಜಗತ್ತು ದೇವರ ಸೃಷ್ಟಿ ಮತ್ತು ಯಾವಾಗಲೂ ದೇವರ ಅಧೀನದಲ್ಲಿದೆ. ದೇವರಿಗೆ ಯಾವುದೇ ರೂಪ, ಆಕಾರಗಳಿಲ್ಲ. ಜೀವಿಗಳು ತಮ್ಮ ಕರ್ಮಗಳನ್ನು ಮಾಡಲು ಸ್ವತಂತ್ರವಾಗಿದ್ದು, ದೇವರು ಜೀವಿಗಳನ್ನು ಅವರ ಮರಣದ ನಂತರ ಅವರು ಗಳಿಸಿದ ಪಾಪ ಪುಣ್ಯಗಳ ಆಧಾರದ ಮೇಲೆ ಶಿಕ್ಷಿಸುತ್ತಾನೆ. ಅಲ್ಲದೇ ಎಲ್ಲ ಸೆಮಿಟಿಕ್ ಮತಗಳಲ್ಲಿ ಒಬ್ಬ ಧರ್ಮ ಪ್ರವರ್ತಕ ಮತ್ತು ಒಂದು ಪವಿತ್ರ ಪುಸ್ತಕ ಇದ್ದು, ಅವು ಜನರನ್ನು ಸರಿಯಾದ ಮಾರ್ಗದಲ್ಲಿ ನಡೆಯಲು ಸಹಾಯವಾಗುತ್ತದೆ. ಸೆಮಿಟಿಕ್ ಮತಗಳು ಯುರೋಪು, ಮಧ್ಯ ಪ್ರಾಚ್ಯ ದೇಶಗಳಲ್ಲಿ ಹಬ್ಬಿ ಅಲ್ಲಿಂದ ಅಮೆರಿಕ, ಆಫ್ರಿಕಾ ಮತ್ತಿತರ ದೇಶಗಳಿಗೆ ಹರಡಿತು.

ಇನ್ನು ಭಾರತದಲ್ಲಿ ಮುಖ್ಯವಾಗಿ ಆರು ಆಸ್ತಿಕ ದರ್ಶನಗಳಿವೆ. ಗೌತಮರ ನ್ಯಾಯ, ಕಣಾದರ ವೈಶೇಷಿಕ, ಪತಂಜಲಿಯ ಯೋಗ, ಕಪಿಲರ ಸಾಂಖ್ಯ, ಜೈಮಿನಿಯ ಮೀಮಾಂಸೆ ಮತ್ತು ವೇದವ್ಯಾಸರ ವೇದಾಂತ, ಇವುಗಳೇ ಆ ಆರು ದರ್ಶನಗಳು. ಅಜ್ಞಾನದ ವಿನಾಶ ಮತ್ತು ಅವುಗಳಿಂದ ಉತ್ಪನ್ನವಾಗುವ ದುಃಖ ಮತ್ತು ಸಂಕಟಗಳ ಪರಿಹಾರ ಹಾಗೂ ಜ್ಞಾನ, ಸ್ವಾತಂತ್ರ್ಯ ಮತ್ತು ಮುಕ್ತಿಯನ್ನು ಗಳಿಸುವುದು ಈ ಷಡ್ದರ್ಶನಗಳ ಮುಖ್ಯ ಗುರಿ.

ಈ ಆರು ದರ್ಶನಗಳಲ್ಲಿ ನ್ಯಾಯ ಮತ್ತು ವೈಶೇಷಿಕಗಳು ಪರಸ್ಪರ ಪೂರಕ. ಇವುಗಳು ಜಗತ್ತಿನ ರಚನೆಯನ್ನು ಕುರಿತು ಅನುಭವದ ಆಧಾರದ ಮೇಲೆ ವಿಶ್ಲೇಷಣೆ ಮಾಡುತ್ತವೆ. ಅದು ಹೇಗೆ ದೇವರು ಜಗತ್ತಿನ ರಚನೆಯನ್ನು ಪರಮಾಣು ಮತ್ತು ಅಣುಗಳಿಂದ ಮಾಡಿದ್ದಾನೆ ಮತ್ತು ಅದು ಹೇಗೆ ಅವುಗಳ ಅಭ್ಯಾಸದಿಂದ ಪರಮಾತ್ಮನ ಬಗ್ಗೆ ತಿಳಿದುಕೊಳ್ಳಬಹುದು ಎಂಬುದನ್ನು ಕುರಿತು ತಿಳಿಸುತ್ತವೆ. ಸಾಂಖ್ಯ ಮತ್ತು ಯೋಗಗಳು ಪರಸ್ಪರ ಪೂರಕ. ಅವು ಭಾರತೀಯ ಜನರ ಮನೋವಿಜ್ಞಾನವನ್ನು ಕುರಿತು ಆಳವಾದ ಸಿದ್ಧಾಂತಗಳನ್ನು ಮಂಡಿಸಿವೆ. ಅವುಗಳು ಅದು ಹೇಗೆ ಮನುಷ್ಯ ತನ್ನ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ನಿರ್ವಿಕಲ್ಪ ಸಮಾಧಿಯನ್ನು ಸಾಧಿಸಬಹುದು ಎಂಬುದನ್ನು ಹೇಳಿಕೊಡುತ್ತವೆ. ಮೀಮಾಂಸೆ ಮತ್ತು ವೇದಾಂತಗಳು ಪರಸ್ಪರ ಪೂರಕ. ಅವುಗಳು ಜೀವಾತ್ಮ ಮತ್ತು ಪರಮಾತ್ಮರ ನಡುವಿನ ಭೇದಾಭೇದಗಳನ್ನು ಕುರಿತು ಆಳವಾದ ಚರ್ಚೆ ಮಾಡುತ್ತವೆ ಮತ್ತು ಮಾನವನು ಆಳವಾದ ಅಧ್ಯಯನ ನಡೆಸಿ ಅಜ್ಞಾನವನ್ನು ದೂರಿಕರಿಸಿ ಮುಕ್ತಿಯತ್ತ ಸಾಗಬಹುದು ಎಂಬುದನ್ನು ಮಂಡಿಸಿವೆ.

ವೇದಾಂತ ದರ್ಶನ ಭಾರತೀಯ ಅಧ್ಯಾತ್ಮ ಮತ್ತು ಆಸ್ತಿಕ ಪರಂಪರೆಯ ಮೂಲ ಎನ್ನಬಹುದು. ಈ ವೇದಾಂತವನ್ನು ಮೂಲವನ್ನಾಗಿಟ್ಟುಕೊಂಡು ಮೂವರೂ ಆಚಾರ್ಯರು ತಮ್ಮ ತಮ್ಮ ಸಿದ್ಧಾಂತಗಳನ್ನು ಮಂಡಿಸಿದರು. ಶಂಕರ ಭಗವತ್ಪಾದರ ಅದ್ವೈತ "ಕೇವಲ ಪರಮಾತ್ಮವೊಂದೇ ಸತ್ಯ. ಉಳಿದೆಲ್ಲವೂ ಮಾಯೆ. ಪರಬ್ರಹ್ಮವು ಸರ್ವಾಂತರ್ಯಾಮಿ ಮತ್ತು ಸರ್ವಾತೀತವಾದರೆ ಜೀವವು ಪರಬ್ರಹ್ಮದ ಒಂದು ಅಂಶ. ಮೋಕ್ಷವೆಂದರೆ ಜೀವ ಬ್ರಹ್ಮದಲ್ಲಿ ವಿಲೀನವಾಗುವುದು" ಎಂದು ಪ್ರತಿಪಾದಿಸುತ್ತದೆ. ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ "ಪರಮಾತ್ಮ ಸಗುಣ ಮತ್ತು ಸಾಕಾರ. ಈ ಜಗತ್ತು ಬ್ರಹ್ಮ ಶಕ್ತಿಯ ಪರಿಣಾಮ. ಜೀವ ಈಶ್ವರ ಶೇಷ. ಮೋಕ್ಷವೆಂದರೆ ಭಗವಂತನ ಸಾಮೀಪ್ಯ ಪಡೆದು ಅದೇ ಆನಂದವನ್ನು ಅನುಭವಿಸುವುದು" ಎಂದು ಮಂಡಿಸುತ್ತದೆ. ಆಚಾರ್ಯ ಮಧ್ವರ ದ್ವೈತ "ಜೀವಾತ್ಮ ಪರಮಾತ್ಮ ಬೇರೆ ಬೇರೆ. ಎರಡೂ ಸತ್ಯ. ಪರಮಾತ್ಮ ಸಗುಣ ಮತ್ತು ಸಾಕಾರನಾದರೆ, ಜೀವ ಪರಮಾತ್ಮನ ಅನುಚರ. ಜೀವಾತ್ಮನ ಮೋಕ್ಷವೆಂದರೆ ಪರಮಾತ್ಮನ ಸಾಮೀಪ್ಯ ಪಡೆದು ತನ್ನ ಸ್ವಂತದ ಉತ್ತುಂಗವನ್ನು ತಲುಪುವುದು" ಎಂದು ಘೋಷಿಸುತ್ತದೆ.

ಆಧುನಿಕ ವಿಜ್ಞಾನದ ಪ್ರಗತಿ ನಾಸ್ತಿಕತೆಯ ಪ್ರಸಾರಕ್ಕೆ ಅನುವು ಮಾಡಿಕೊಟ್ಟಿತೋ, ಹಾಗೆಯೇ ಆಸ್ತಿಕತೆಗೆ ಕೂಡ ಹೊಸ ದಿಕ್ಕನ್ನು ತೋರಿಸಿತು ಎಂದು ನನಗನಿಸುತ್ತದೆ. ಈ ವಿಶಾಲ ಜಗತ್ತಿನ ಅನಂತತೆ ಮತ್ತು ಕ್ವಾಂಟಮ್ ಸಿದ್ಧಾಂತಗಳಲ್ಲಿ ಭಾರತೀಯ ತತ್ವಜ್ಞಾನದ ಹೊಳಹನ್ನು ಅನೇಕ ವಿಜ್ಞಾನಿಗಳು ಕಂಡಿದ್ದಾರೆ. ಹೇಸನ್ ಬರ್ಗ್, ಶ್ರೋಡಿಂಗರ್, ಓಪನ್ ಹೈಮರ್ ಅವರಂತಹ ವಿಜ್ಞಾನಿಗಳು ವೇದಾಂತವನ್ನು ಅಭ್ಯಸಿಸುತ್ತಿದ್ದರು ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ವಿಜ್ಞಾನವೇ ಆಗಲಿ, ತತ್ವಜ್ಞಾನವೇ ಆಗಲಿ, ಅವುಗಳ ಮುಖ್ಯ ಗುರಿ ಈ ಜಗತ್ತಿನ ಅರಿವು, ಸತ್ಯಾನ್ವೇಷಣೆ. ಈ ಗುರಿಯತ್ತ ಪ್ರಾಮಾಣಿಕವಾಗಿ ಸಾಗಲು ಜಿಜ್ಞಾಸೆ ಮತ್ತು ಮುಕ್ತ ಮನಸ್ಸುಗಳು ಎಲ್ಲಕ್ಕಿಂತ ಮುಖ್ಯ. ಇಂತಹ ಮುಕ್ತ ಮನಸ್ಸಿದ್ದುದರಿಂದಲೇ ನಮ್ಮ ಭಾರತೀಯ ವೈಚಾರಿಕ ಜಗತ್ತು ಚಾರ್ವಾಕನ ಶುದ್ಧ "materialism" ನಿಂದ ಹಿಡಿದು, ವೇದಾಂತದ ಶುದ್ಧ ಅಧ್ಯಾತ್ಮದವರೆಗೆ ಎಲ್ಲ ಬಗೆಯ ವೈಚಾರಿಕ ಪರಂಪರೆಗಳನ್ನು ಹುಟ್ಟುಹಾಕಿದೆ. ಇಂತಹ ಭವ್ಯ ಪರಂಪರೆಯ ಮುಂದುವರಿಕೆಗೆ ಅದೇ ಬಗೆಯ ಜಿಜ್ಞಾಸೆ ಮತ್ತು ಮುಕ್ತ ಮನಸ್ಸುಗಳು ಇನ್ನು ಮುಂದೂ ಬೇಕು. ಮುಂಬರುವ ದಿನಗಳಲ್ಲಿ ನಾವು ನಮ್ಮ ಸಂಕುಚಿತ ಮನೋಭಾವನೆಯ ಸಲಾಖೆಗಳನ್ನು ಕಳಚಿ ಮತ್ತೆ ನಾವು ನಮ್ಮ ಜಿಜ್ಞಾಸು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಿಯೇ ಹೋಗುತ್ತೇವೆ ಎಂಬುದು ನನ್ನ ದೃಢವಾದ ನಂಬಿಕೆ.

ಆಕರಗಳು:

1. ಶ್ರೀಮದ್ಭಗವದ್ಗೀತಾ ತಾತ್ಪರ್ಯನಿರ್ಣಯ ಅಥವಾ ಜೀವನಧರ್ಮಯೋಗ : ಡಿ ವಿ ಗುಂಡಪ್ಪ.

2. "The Darshanas: An Introduction to Hindu Philosophy" by Shubhamoy Das in

https://www.thoughtco.com/the-darshanas-an-introduction-to-hindu-philosophy-1770582

English summary
Theistic evolution, theistic evolutionism, evolutionary creationism or God-guided evolution are views that regard religious teachings about God as compatible with modern scientific understanding about biological evolution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X