ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದಮಾಮಾದ ಚೆಂದದ ಪೌರಾಣಿಕ ಕಥೆಗಳ ಯುಗಾಂತ್ಯ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಚಿಕ್ಕವನಿದ್ದಾಗ ಅನೇಕ ಪುರಾಣದ ಕಥೆಗಳನ್ನು ಓದುತ್ತಿದ್ದೆ ಅಥವಾ ಕೇಳುತ್ತಿದ್ದೆ. ಟಿವಿ, ಮೋಬೈಲು ಮತ್ತು ಅಂತರ್ಜಾಲಗಳು ಇರದ ಆ ದಿನಗಳಲ್ಲಿ ಚಂದಮಾಮ ನಮ್ಮ ಪುರಾಣದ ಕಥೆಗಳ ಮೂಲ ಆಕರವಾಗಿತ್ತು. ಚೆಂದದ ಚಿತ್ರಗಳೊಂದಿಗೆ ಮೂಡಿ ಬರುತ್ತಿದ್ದ ವಿವಿಧ ಕಥೆಗಳಿಗಾಗಿ ನಾವು ಪ್ರತಿ ತಿಂಗಳ ಕೊನೆಯಲ್ಲಿ ಕಾತುರದಿಂದ ಕಾಯುತ್ತಿದ್ದೆವು.

ಚಂದಮಾಮದ ಸಂಚಿಕೆಗಳಲ್ಲಿ ಅರಳುತ್ತಿದ್ದ ವೀರ ಹನುಮಾನ್, ದೇವಿ ಭಾಗವತ, ವಿಘ್ನೇಶ್ವರ ಪುರಾಣ ಇತ್ಯಾದಿ ಪುರಾಣ ಕಥೆಗಳಲ್ಲಿಯ ಪಾತ್ರಗಳು ನನಗಂತೂ ತುಂಬಾ ಆತ್ಮೀಯವಾಗಿ ಬಿಡುತ್ತಿದ್ದವು. ಕೆಲವು ಪಾತ್ರಗಳಂತೂ ಮನವನ್ನು ಕಲಕಿ ಅಂತರಂಗದ ಪಟಲದಲ್ಲಿ ಚಿರವಾಗಿ ಉಳಿದುಬಿಟ್ಟಿವೆ. ಸುನೀತಿಯ ಮಗ ಧೃವ, ವಾಜಶ್ರವಸನ ಮಗ ನಚಿಕೇತ, ರಿಚಿಕ ಮುನಿಯ ಮಗ ಶುನಶ್ಯೇಪ, ವೃತ್ರಾಸುರ, ಅಂಬರೀಷ ಮಹಾರಾಜ ಮತ್ತು ನಹುಷ ಚಕ್ರವರ್ತಿ. ಯಯಾತಿ, ದೇವಯಾನಿ ಮತ್ತು ಶರ್ಮಿಷ್ಠೆಯರ ಕಥೆಗಳೂ ಕೂಡ ಮನಃಪಟಲದಲ್ಲಿ ಸದಾ ಅರಳಿರುವ ಪಾತ್ರಗಳು.[ಸಿಂಗಪುರದಲ್ಲಿಯೂ ಇಣುಕುತ್ತಿದೆ ಉದ್ಯೋಗದ ಅಭದ್ರತೆ!]

ಧೃವನ ಕಥೆಯನ್ನು ಓದಿದಾಗ, ಅದು ಹೇಗೆ ಉತ್ಥಾನ ಪಾದ ತನ್ನ ದೊಡ್ಡ ಮಗನಾದ ಧೃವ ಮತ್ತು ಅವನ ತಾಯಿಯನ್ನು ಕಡೆಗಣಿಸಿ ಚಿಕ್ಕ ಮಗನಾದ ಉತ್ತಮ ಮತ್ತು ಅವನ ತಾಯಿ ಸುರುಚಿಯನ್ನು ಆದರಿಸುತ್ತಿದ್ದ ಎಂಬುದು ಬಿಡಿಸಲಾಗದ ಯಕ್ಷ ಪ್ರಶ್ನೆಯಾಗಿತ್ತು. ತಂದೆಯ ತೊಡೆಯ ಮೇಲೆ ಕುಳಿತ ಧೃವನನ್ನು ಕಿತ್ತೆಸೆದ ಸುರುಚಿಯ ಮೇಲೆ ತಡೆಯಲಾರದಷ್ಟು ಕೋಪ! ತನ್ನ ಭವಿಷ್ಯವನ್ನು ದೇವರಿಂದಲೇ ಸರಿಪಡಿಸುವ ಸಂಕಲ್ಪವನ್ನು ಹೊತ್ತು ಘೋರವಾದ ಕಾನನಕ್ಕೆ ಹೊರಟು ನಿಂತ ಧೃವನ ಮೇಲೆ ವಾತ್ಸಲ್ಯ, ಕರುಣೆ. ಅಲ್ಲದೇ ಅದು ಹೇಗೆ ಚಿಕ್ಕ ಬಾಲಕ ಹುಲಿ ಸಿಂಹಗಳಂತಹ ಕ್ರೂರ ಪ್ರಾಣಿಗಳಿರುವ ದಟ್ಟಾರಣ್ಯದಲ್ಲಿ ತಪಸ್ಸು ಮಾಡುತ್ತಾನೋ ಎಂಬಂತಹ ಅನುಕಂಪ. ಕೊನೆಗೆ ಧೃವನ ತಪಸ್ಸು ಫಲಿಸಿ ಅವನು ರಾಜನಾಗಿ ಅನಂತರ ತಾರಾ ಲೋಕದಲ್ಲಿ ಧೃವ ತಾರೆಯಾಗಿ ಅಜರಾಮರನಾದ ಅವನ ಬಗ್ಗೆ ಅಪಾರ ಅಭಿಮಾನ!

ಋಷಿಯಾದ ವಾಜಶ್ರವಸ ಬರಡು ಆಕಳುಗಳನ್ನು ದಾನ ಮಾಡಿ ಪುಣ್ಯ ಸಂಪಾದನೆ ಮಾಡಿಕೊಳ್ಳಬೇಕೆಂದುಕೊಂಡಾಗ ನಮಗೆ ಅವನ ಮೇಲೆ ಈಗಿನ ಜನಸೇವೆಯ ಮುಖವಾಡ ಹೊತ್ತು ಅಧಿಕಾರಕ್ಕೆ ಕಚ್ಚಾಡುತ್ತಿರುವ ರಾಜಕಾರಣಿಗಳ ಮೇಲೆ ಬರುವಂತಹ ವ್ಯಂಗ್ಯ ನಗು ಬರುತ್ತಿತ್ತು. ಅವನ ಈ ಸುಳ್ಳನ್ನು ಹೊರಗೆಳೆದು ಸರಿದಾರಿಗೆ ತರಲು ಬಯಸುವ ಅವನ ಮಗ ನಚೀಕೇತ ವಾಜಶ್ರವಸನನ್ನು ನನ್ನನ್ನು ಯಾರಿಗೆ ದಾನ ಮಾಡುತ್ತೀಯಾ ಎಂದು ಕೇಳಿದಾಗ, ನಚಿಕೇತನ ನ್ಯಾಯಪರತೆಗೆ ಮನಸ್ಸು ತಲೆಬಾಗಿತ್ತು.[ಸ್ವಾರ್ಥ ಮೀರಿದ ದೇಶಪ್ರೇಮವಿದ್ದರೆ ಮಾತ್ರ ಇಂಥ ಅದ್ಭುತ ಸಾಧ್ಯ!]

ನಿನ್ನನ್ನು ಯಮನಿಗೆ ದಾನ ಮಾಡುತ್ತೇನೆ ಎಂದು ಕೋಪದಿಂದ ನುಡಿದ ತಂದೆಯ ದುರಹಂಕಾರಕ್ಕೆ ಮನದಲ್ಲಿ ಜಿಗುಪ್ಸೆ ಮೂಡುತ್ತಿತ್ತು. ತಂದೆಯ ಮಾತಿನಂತೆಯೇ ಯಮನಿಗೆ ತನ್ನನ್ನು ಸಮರ್ಪಿಸಲು ಹೊರಟು ನಿಂತ ನಚೀಕೇತನ ಧೈರ್ಯ ಬಾಡಿದ ಮನವನ್ನು ಉತ್ತೇಜಿಸಿತ್ತು. ಕೊನೆಗೆ ಯಮನಿಂದಲೇ ಜೀವನದ ರಹಸ್ಯವನ್ನು ಕುರಿತು ಬೋಧನೆ ಪಡೆದು ಮಹಾಜ್ಞಾನಿಯಾದ ನಚಿಕೇತ ಮನದಲ್ಲಿ ಸದಾಕಾಲ ಚಿರಾಯುವಾಗಿ ನಿಂತಿದ್ದ.

ಅಂಬರೀಷ ಮಹಾರಾಜನಿಗೆ ಯಜ್ಞಪಶುವಾಗಿ ಹೋಗಲು ಒಪ್ಪಿಕೊಂಡ ಶುನಶ್ಯೇಪನ ಕಥೆಯಂತೂ ನನ್ನನ್ನು ಅತಿಯಾಗಿ ವ್ಯಾಕುಲಗೊಳಿಸಿದ ಕಥೆ. ಅಶ್ವಮೇಧ ಯಾಗದ ಕುದುರೆಯನ್ನು ದೇವರಾಜ ಇಂದ್ರನ ತಂತ್ರದಿಂದ ಕಳೆದುಕೊಂಡ ಅಂಬರೀಷನಿಗೆ ಯಜ್ಞ ಫಲವನ್ನು ಪಡೆಯಲು ಕುದುರೆಯನ್ನು ಹುಡುಕಬೇಕಾಗಿತ್ತು ಅಥವಾ ಅದರ ಬದಲಾಗಿ ಒಬ್ಬ ಲಕ್ಷಣವಂತ ಮುನಿಕುಮಾರನನ್ನು ಬಲಿಕೊಡಬೇಕಾಗಿತ್ತು. ಎಷ್ಟು ಹುಡುಕಿದರೂ ಕುದುರೆ ಸಿಗದೆ ಹೋದಾಗ ಲಕ್ಷಣವಂತ ಮುನಿಕುಮಾರನನ್ನು ಹುಡುಕುತ್ತಾ ತನ್ನ ಬಾಗಿಲಿಗೆ ಬಂದ ಅಂಬರೀಷನಿಗೆ ತನ್ನ ಹಿರಿಯ ಕುಮಾರನನ್ನು ಕೊಡಲು ರಿಚಿಕ ಮುನಿ ಒಪ್ಪಲಿಲ್ಲ. ಕಿರಿಯ ಪುತ್ರನನ್ನು ಕೊಡಲು ತಾಯಿ ಒಪ್ಪಲಿಲ್ಲ.[ಪ್ರತಿಯೊಬ್ಬ ವಿದ್ಯಾರ್ಥಿ ಓದಲೇಬೇಕಾದ ಲೇಖನವಿದು]

ಪರಿಸ್ಥಿತಿಯನ್ನು ಅರಿತು ತಾನು ಯಜ್ಞಪಶುವಾಗಲು ಮುಂದೆ ಬಂದ ಮಧ್ಯಮ ಕುಮಾರ ಶುನಶ್ಯೇಪ ಹೊರಟು ನಿಂತಾಗ ಆತನನ್ನು ತಡೆಯದ ತಂದೆ ತಾಯಿಗಳ ಬಗ್ಗೆ ಅಪಾರ ಸಿಟ್ಟು ಉಕ್ಕಿತ್ತು. ತನ್ನ ಕುಟುಂಬದ ಒಳಿತಿಗೆ ತನ್ನನ್ನು ತಾನು ಬಲಿಪಶುವಾಗಿ ಸಮರ್ಪಿಸಿದ ಶುನಶ್ಯೇಪನ ತ್ಯಾಗ ಅಚ್ಚರಿಗೊಳಿಸಿತ್ತು. ಮಾರ್ಗ ಮಧ್ಯದಲ್ಲಿ ಶುನಶ್ಯೇಪನಿಗೆ ವಿಶ್ವಾಮಿತ್ರ ಮುನಿಗಳ ದರ್ಶನವಾಯಿತು. ಇನ್ನೂ ಚಿಕ್ಕ ಬಾಲಕನಾದ ಶುನಶ್ಯೇಪನನ್ನು ಕಂಡು ಮರುಗಿ ಅವನನ್ನು ಬಲಿಪಶುವಾಗುವುದರಿಂದ ರಕ್ಷಿಸಲು ಪವಿತ್ರ ಮಂತ್ರವನ್ನು ಉಪದೇಶಿಸಿದ ಬ್ರಹ್ಮರ್ಷಿ ವಿಶ್ವಾಮಿತ್ರರ ಅಪಾರ ವಾತ್ಸಲ್ಯವನ್ನು ಕಂಡು ಕಣ್ಣಲ್ಲಿ ನೀರು ಬಂದಿತ್ತು. ಅದರಂತೆಯೇ ಯಜ್ಞ ಬಲಿಯಾಗುವುದರಿಂದ ತಪ್ಪಿಸಿಕೊಂಡುದಲ್ಲದೇ ಇಂದ್ರದೇವನ ಕರುಣೆಗೆ ಪಾತ್ರನಾದ ಶುನಶ್ಯೇಪನ ಬಗ್ಗೆ ಅಪಾರ ಅಭಿಮಾನ ಮೂಡಿತ್ತು.

ವೀರ ಹನುಮಾನ್ ಓದುವಾಗಲಂತೂ ಹನುಮಂತನ ಸಾಹಸಗಳು ನನ್ನನ್ನು ರೋಮಾಂಚಗೊಳಿಸುತ್ತಿದ್ದವು. ಹನುಮಂತ ಈ ಕಾಲದ ಎಲ್ಲ ಸೂಪರ್ ಮ್ಯಾನ್ ಮತ್ತು ಹೀ ಮ್ಯಾನ್‍ಗಳಿಗಿಂತ ದೊಡ್ಡ ಸೂಪರ್ ಹೀರೋ ಎಂದೆನಿಸುತ್ತದೆ. ಆತನಲ್ಲಿ ಸಾಹಸವಿದೆ, ಸದ್ಗುಣವಿದೆ, ವಿನಯವಿದೆ ಅಲ್ಲದೆ ಜ್ಞಾನವಿದೆ. ಈ ಕಥೆಗಳಲ್ಲದೇ ಇನ್ನೂ ಅನೇಕ ಸಾಹಸ ಕಥೆ, ನೀತಿಕಥೆ, ಸಾಮಾಜಿಕ ಕಥೆ ಇತ್ಯಾದಿಗಳನ್ನು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಚೌಕಟ್ಟಿನಲ್ಲಿ ಚಂದಮಾಮ ನಮಗೆ ದೊರಕಿಸುತ್ತಿತ್ತು. ಅಂತಹ ಅನೇಕ ಮರೆಯಲಾರದ ಕಥೆಗಳನ್ನು ಚಿಕ್ಕವನಾದ ನನಗೆ ಹೇಳಿದ ಚಂದಮಾಮ ನನ್ನ ಮನದಲ್ಲಿ ಅಚ್ಚಳಿಯದೇ ನಿಂತಿದ್ದಾನೆ.

ಅಂದು ಆ ಎಲ್ಲ ಕಥೆಗಳನ್ನು ಓದುವಾಗ ಅವು ನಮ್ಮ ಮುಂದೆಯೇ ನಡೆಯುತ್ತಿವೆಯೇನೋ ಎಂಬಂತಹ ತಾದಾತ್ಮ್ಯತೆ ನಮಗೆ, ಈ ಕಥೆಗಳು ಚಂದಮಾಮದ ಪುಟಗಳಿಂದ ತಲೆಯೆತ್ತಲಾರದಷ್ಟು ನಮ್ಮನ್ನು ಏಕಾಗ್ರಗೊಳಿಸುತ್ತಿದ್ದವು. ಆದರೆ ಇಂದು ಸ್ಮಾರ್ಟ್ ಫೋನುಗಳು, ಕಂಪ್ಯೂಟರ್‍ಗಳು ಮತ್ತು ಅಂತರ್ಜಾಲ ಇಂದಿನ ಕಾಲದ ಮಕ್ಕಳನ್ನು ಓದುವುದರಿಂದ ಮತ್ತು ಅದರ ಮೂಲಕ ಈ ಕಥೆಗಳಿಂದ ವಿಮುಖಗೊಳಿಸಿವೆ.

ಇಂದು ಓದುವುದೂ ಕಡಿಮೆಯಾಗಿದೆ ಮತ್ತು ಈ ತರಹದ ಪಾರಂಪರಿಕ ಕಥೆಗಳನ್ನು ಹೇಳುವವರೂ ಕಡಿಮೆಯಾಗಿದ್ದಾರೆ. ಆಧುನಿಕ ತಂತ್ರಜ್ಞಾನದ ಮುತ್ತಿಗೆ ನಮ್ಮ ಮಕ್ಕಳನ್ನು ನಮ್ಮ ದೇಶದ ಅಮೋಘ ಪರಂಪರೆಯಿಂದ ವಂಚಿತಗೊಳಿಸುತ್ತಿವೆಯೇನೋ ಎನಿಸುತ್ತದೆ. ಕೆಲವು ಸುಂದರ ಕಥೆಗಳನ್ನು ಕಾರ್ಟೂನು ಚಿತ್ರಗಳ ಮೂಲಕ ಮಕ್ಕಳಿಗೆ ತಲುಪಿಸುವ ಪ್ರಯತ್ನವನ್ನು ಮಾಡಲಾಗಿದೆಯಾದರೂ, ಕಥೆಗಳ ಭಾವ ಮತ್ತು ಆಳವನ್ನು ಈ ಚಿತ್ರಗಳಿಗೆ ಮುಟ್ಟಲು ಸಾಧ್ಯವಾಗಿಲ್ಲ ಎಂದು ನನ್ನ ಅನಿಸಿಕೆ.

ಭಾವನೆಗಳ ಅಭಿವ್ಯಕ್ತಿಯಲ್ಲಿ ತೀರ ಸಪ್ಪೆ ಎನಿಸಿದ, ಕೇವಲ ಸಾಹಸವೊಂದೇ ಲಕ್ಷ್ಯವಾಗಿರುವ ಇಂದಿನ ಸೂಪರ್‍ ಹೀರೋ ಕಥೆಗಳು ನಮ್ಮ ಮಕ್ಕಳ ಕಲ್ಪನಾ ಶಕ್ತಿಯನ್ನು ತೀರ ಸಪ್ಪೆಗೊಳಿಸಿದೆ. ಅಲ್ಲದೇ ನಮ್ಮ ವೈಚಾರಿಕ ಪರಂಪರೆಯನ್ನು ಕೂಡ ಪಾಶ್ಚಾತ್ಯೀಕರಣದತ್ತ ಕರೆದೊಯ್ಯುತ್ತಿದೆ ಎಂಬ ನೋವು. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಯಾಂತ್ರಿಕವಾಗಿರುವ ನಮ್ಮ ಬರಡು ಜೀವನದಲ್ಲಿ ಮತ್ತೊಮ್ಮೆ ಈ ಅದ್ಭುತ ಕಥೆಗಳು ಸಿಂಚನಗೊಳಿಸುತ್ತಿದ್ದ ಭಾವನೆಗಳ ಬಿಂದುಗಳನ್ನು ನಾವು ಕಾಣಬಹುದೇ? ನಿರಾಶಾವಾದಿ ಮಿದುಳು ಅಸಾಧ್ಯ ಎನ್ನುತ್ತಿದೆಯಾದರೂ, ಆಶಾವಾದಿ ಹೃದಯ ಅಂತಹ ಓಯಸಿಸ್ ಒಂದರ ನಿರೀಕ್ಷೆಯಲ್ಲಿದೆ.

English summary
Where are Chandamamas, mythological books which would tell the tales of Mahabharata, Ramayan? The soothing experience of reading mythology stories in comic books is totally lost in the era of computers. Vasant Kulkarni hopes our children of present generation would get to read such stories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X