ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಇತಿಹಾಸದ ದಿಕ್ಕನ್ನೇ ಬದಲಿಸಿದ ಆ ಮಹಾನ್ ಯುದ್ಧಗಳು

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಬಿಳಿ ಹಂಸಗಳನ್ನು ಅನೇಕರು ಪ್ರತ್ಯಕ್ಷವಾಗಿ ನೋಡಿದ್ದಾರೆ. ಆದರೆ ಕಪ್ಪು ಹಂಸಗಳು? ಬಹಳ ವಿರಳ ಅಲ್ಲವೇ? ಆಸ್ಟ್ರೇಲಿಯಾ ಖಂಡವನ್ನು ಯುರೋಪಿನ ನಾವಿಕರು ಮುಟ್ಟುವ ತನಕ ಈ ಜಗತ್ತಿನಲ್ಲಿ ಕಪ್ಪು ಹಂಸಗಳು ಇಲ್ಲವೇ ಇಲ್ಲ, ಎಲ್ಲ ಹಂಸಗಳು ಬಿಳಿ ಬಣ್ಣದ್ದೇ ಎಂದು ಜಗತ್ತಿನ ಜನರು ತಿಳಿದುಕೊಂಡಿದ್ದರಂತೆ. ಆಸ್ಟ್ರೇಲಿಯದಲ್ಲಿ ಪ್ರಪ್ರಥಮ ಬಾರಿಗೆ ಕಪ್ಪು ಹಂಸವನ್ನು ನೋಡಿದ ಮೇಲೆ ಸಾವಿರಾರು ವರ್ಷಗಳಿಂದ ಬೆಳೆದು ಬಂದಿದ್ದ ಈ ತಿಳಿವಳಿಕೆ ನುಚ್ಚು ನೂರಾಯಿತು.

ಇದರರ್ಥ ಕೇವಲ ಒಂದೇ ಒಂದು ಹೊಚ್ಚ ಹೊಸ ಘಟನೆ ನಮ್ಮ ಸಾಮೂಹಿಕ ಜ್ಞಾನಕ್ಕೆ ಆಘಾತ ನೀಡಿ ಇತಿಹಾಸದ ದಿಕ್ಕನ್ನೇ ಬದಲಿಸಬಹುದು. ಇಂತಹ ಮಹತ್ತರ ಪರಿಣಾಮವನ್ನುಂಟು ಮಾಡುವ ಘಟನೆಗಳನ್ನು ನಸೀಮ್ ನಿಕೊಲಾಸ್ ತಾಲಿಬ್ ಎಂಬ ಅರ್ಥ ಶಾಸ್ತ್ರಜ್ಞ ಮತ್ತು ಲೇಖಕ ತಮ್ಮ "The Black Swan- The Impact of Highly Improbable" ಎಂಬ ಜಗತ್ಪ್ರಸಿದ್ಧ ಪುಸ್ತಕದಲ್ಲಿ "Black Swan ಘಟನೆಗಳು" ಎಂದು ವರ್ಣಿಸಿದ್ದಾರೆ.

ಅಪ್ರತಿಮ ಸೇನಾನಿ ಲಚಿತ್ ಬೋರ್ ಫುಕಾನ್ ಬಗ್ಗೆ ನಿಮಗೆಷ್ಟು ಗೊತ್ತು?ಅಪ್ರತಿಮ ಸೇನಾನಿ ಲಚಿತ್ ಬೋರ್ ಫುಕಾನ್ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದ ಇತಿಹಾಸದತ್ತ ಇಣುಕಿ ನೋಡಿದಾಗ, ಇಂತಹ ಕೆಲವು ಅತ್ಯಂತ ಮಹತ್ವದ ಘಟನೆಗಳನ್ನು ಕಾಣಬಹುದು. ಈ ಘಟನೆಗಳನ್ನು ನಮ್ಮ ಇತಿಹಾಸದ ಸಂಕ್ರಮಣ ಕಾಲಗಳು ಎನ್ನಬಹುದು. ಈ ಘಟನೆಗಳು ಆಗದಿದ್ದರೆ, ಏನಾಗುತ್ತಿತ್ತು? ಎಂಬ ಪ್ರಶ್ನೆ ಕುತೂಹಲಕಾರಿಯಾದ ವಾದ ವಿವಾದಗಳನ್ನು ಮುಂದಿಡುತ್ತದೆ. ಉದಾಹರಣೆಗೆ, ಅಶೋಕ ಕಳಿಂಗ ಯುದ್ಧವನ್ನೇ ಮಾಡದಿದ್ದರೆ?

The incidents that changed the track of Indian history

ಅಶೋಕ ಕಳಿಂಗ ಯುದ್ಧದಲ್ಲಿ ಉಂಟಾದ ಸಾವು ನೋವುಗಳನ್ನು ಕಂಡು ಮನನೊಂದು ಬುದ್ಧನ ಅಹಿಂಸಾ ಮಾರ್ಗವನ್ನು ಒಪ್ಪಿಕೊಂಡು "ಚಂಡಾಶೋಕ" ಎಂಬ ಸ್ಥಿತಿಯಿಂದ "ದೇವಾನಾಂಪ್ರಿಯ" ಅಶೋಕನಾಗಿ ಪರಿವರ್ತನೆಗೊಂಡಿದ್ದು ನಮ್ಮ ಇತಿಹಾಸದ ಒಂದು ಮಹತ್ತರ ತಿರುವು. ಈ ಆಶೋಕನಿಂದಲೇ ಬೌದ್ಧ ಧರ್ಮ ಟಿಬೆಟ್, ಶ್ರೀಲಂಕಾ, ಅಫಘಾನಿಸ್ತಾನ, ಗ್ರೀಸ್ ದೇಶಗಳಲ್ಲದೇ, ಇಂದಿನ ಮಯಾನ್ಮಾರ್ (ಬರ್ಮಾ) ಮತ್ತು ಇತರ ದಕ್ಷಿಣ ಪೂರ್ವ ದೇಶಗಳಿಗೆ ಹಬ್ಬಿತು. ಅಲ್ಲಿಂದ ಮುಂದೆ ಚೀನ, ಕೊರಿಯಾ ಮತ್ತು ಜಪಾನ್‍ಗಳಿಗೂ ಹಬ್ಬಿತು. ಬೌದ್ಧ ಧರ್ಮದೊಂದಿಗೆ ಭಾರತೀಯ ಸಂಸ್ಕೃತಿ ಈ ದೇಶಗಳಿಗೆ ಹಬ್ಬಿತು. ಈ ಉನ್ನತ ಸಂಸ್ಕೃತಿ ಇಂದಿಗೂ ಅನೇಕ ದೇಶಗಳಲ್ಲಿ ಎದ್ದು ಕಾಣುತ್ತದೆ. ಅಶೋಕನ ಆಡಳಿತ ಜಗತ್ತಿನ ಮೇಲೆ ಸಾಮಾನ್ಯ ಜನರು ಊಹಿಸದಷ್ಟು ಪ್ರಭಾವವನ್ನು ಬೀರಿತು. ಇವೆಲ್ಲದಕ್ಕೂ ಕಾರಣವಾದ ಕಳಿಂಗ ಯುದ್ಧವೇ ಆಗಿರದಿದ್ದರೆ? ಇಡೀ ಜಗತ್ತಿನ ಇತಿಹಾಸವೇ ಬೇರೆಯಾಗಿರುತ್ತಿತ್ತು ಅಲ್ಲವೇ? ಕಳಿಂಗ ಯುದ್ಧ ಅಶೋಕನನ್ನು ಈ ರೀತಿಯಾಗಿ ಪರಿವರ್ತಿಸುತ್ತದೆ ಎಂದು ಅವನ ಯಾವ ಸಮಕಾಲೀನರೂ ಯೋಚಿಸಿರಲಿಕ್ಕಿಲ್ಲ.

ಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರ ಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರ

ಅದರಂತೆಯೇ ನಮ್ಮ ಇತಿಹಾಸದ ದಿಕ್ಕನ್ನೇ ಬದಲಿಸಿದ ಮೊದಲನೇ ಮತ್ತು ಎರಡನೇ ತರೈನ್ ಯುದ್ಧಗಳೇ ನಡೆದಿರದಿದ್ಧರೆ, ಅಥವಾ ಅವುಗಳ ಪರಿಣಾಮ ಬೇರೊಂದಾಗಿದ್ದರೆ? ಮೊದಲನೇ ತರೈನ್ ಯುದ್ಧದಲ್ಲಿ ಅಫ್ಘಾನಿಸ್ತಾನದ ಘೋರಿ ಮೊಹಮ್ಮದ್ ಭಾರತದ ಪೃಥ್ವಿರಾಜನಿಂದ ಸೋಲು ಅನುಭವಿಸಿ ತನ್ನ ದೇಶಕ್ಕೆ ಹಿಂದಿರುಗಿದ. ಪೃಥ್ವಿರಾಜ ಅವನನ್ನು ಸೋಲಿಸಿದರೂ, ಕ್ಷಮಿಸಿ ಅವನ ದೇಶಕ್ಕೆ ಮರಳಲು ಅನುವು ಮಾಡಿಕೊಟ್ಟನಂತೆ. ಧರ್ಮ ಯುದ್ಧದಲ್ಲಿ ನಂಬಿಕೆ ಇಟ್ಟ ಪೃಥ್ವಿರಾಜ ತನ್ನನ್ನು ಕ್ಷಮಿಸಿ ಜೀವ ಸಹಿತ ಹೋಗಲು ಬಿಟ್ಟರೂ, ಘೋರಿ ಮೊಹಮ್ಮದ್ ಅವನನ್ನು ಕ್ಷಮಿಸಲಿಲ್ಲ. ತನ್ನ ಸೋಲಿನ ಪ್ರತೀಕಾರ ಮಾಡಲು ಮತ್ತೊಮ್ಮೆ ಬಲವಾದ ಸೇನೆಯೊಂದಿಗೆ ಹಿಂದಿರುಗಿ, ಎರಡನೇ ತರೈನ್ ಯುದ್ಧದಲ್ಲಿ ಯಾವುದೇ ಸೂಚನೆಯಿಲ್ಲದೇ ಸೂರ್ಯೋದಯಕ್ಕೂ ಮುಂಚೆ ಪೃಥ್ವಿರಾಜನ ಸೇನೆಯ ಮೇಲೆ ದಾಳಿ ಮಾಡಿ ಅವನನ್ನು ಸೋಲಿಸಿ, ಪೃಥ್ವಿರಾಜನನ್ನು ಬಂಧಿಸಿ ನಂತರ ಕೊಂದು ಹಾಕಿದ. ಈ ಯುದ್ಧದಲ್ಲಿ ಪೃಥ್ವಿರಾಜನ ಬದಲು ಘೋರಿ ಮೊಹಮ್ಮದ್ ಸತ್ತು ಹೋಗಿದ್ದರೆ? ಭಾರತದ ಇತಿಹಾಸ ಸಂಪೂರ್ಣವಾಗಿ ಬದಲಾಗಿರುತ್ತಿತ್ತಲ್ಲವೆ? ಸ್ವತಃ ಪೃಥ್ವಿರಾಜನೇ ಹೀಗಾಗುತ್ತದೆ ಎಂದು ಯೋಚಿಸಿರಲಿಕ್ಕಿಲ್ಲ.

ಅದೇ ರೀತಿಯಾಗಿ ಮೊದಲ ಪಾಣಿಪತ್ ಯುದ್ಧದಲ್ಲಿ ಬಾಬರ್ ನ ಬದಲಿಗೆ ಇಬ್ರಾಹಿಂ ಲೋಧಿ ಗೆದ್ದಿದ್ದರೆ? ಮೊಘಲರು ಭಾರತಕ್ಕೆ ಕಾಲಿಡುತ್ತಲೇ ಇರಲಿಲ್ಲ. ಅಕ್ಬರ್ ಬಾದಶಹನ ಮಹಾನ್ ಆಡಳಿತವನ್ನಾಗಲಿ, ಔರಂಗಜೇಬನ ಅಸಹಿಷ್ಣು ಆಡಳಿತವನ್ನಾಗಲಿ ಭರತ ಭೂಮಿ ನೋಡುತ್ತಿರಲಿಲ್ಲ. ಹಾಗೆಯೇ ಎರಡನೇ ಪಾಣಿಪತ್ ಯುದ್ಧದಲ್ಲಿ ಹೇಮು ಅಕ್ಬರನ ವಿರುದ್ಧ ಗೆದ್ದಿದ್ದರೆ? ಮೊಗಲರ ಸಾಮ್ರಾಜ್ಯ ಭಾರತದಲ್ಲಿ ಹರಡುತ್ತಲೇ ಇರಲಿಲ್ಲ. ಹೇಮುವಿನ ಯುದ್ಧ ಕೌಶಲದ ಅರಿವಿದ್ದ ಯಾರೂ ಅಂದು ಹೀಗಾಗಬಹುದು ಎಂದು ನಂಬಿರಲಿಕ್ಕಿಲ್ಲ.

The incidents that changed the track of Indian history

ಮೂರನೆಯ ಪಾಣಿಪತ್ ಯುದ್ಧದ ಫಲಿತಾಂಶವಂತೂ ನಮ್ಮ ಇತಿಹಾಸದ ಅತ್ಯಂತ ದುಃಖಕರ ತಿರುವು. ಸದಾಶಿವ ಭಾವುನ ನೇತೃತ್ವದಲ್ಲಿ ಅತ್ಯಂತ ಪ್ರಬಲ ಸ್ಥಿತಿಯಲ್ಲಿದ್ದ ಮರಾಠರ ಸೇನೆ ಅಫಘಾನಿಸ್ತಾನದ ಅಹಮದ್ ಶಾ ಅಬ್ದಾಲಿಯ ಸೇನೆಯಿಂದ ಸೋತಿದ್ದು ಅತ್ಯಂತ ದುರ್ದೈವದ ಸಂಗತಿ. ಈ ಹೀನಾಯವಾದ ಸೋಲಿನಿಂದ ಮರಾಠಾ ರಾಜ್ಯ ಮೇಲೇಳಲೇ ಇಲ್ಲ. ಅತ್ತ ಬಂಗಾಲದ ಪ್ಲಾಸಿ ಕದನದಲ್ಲಿ ರಾಬರ್ಟ್ ಕ್ಲೈವ್‍ ಬಂಗಾಲದ ನವಾಬ ಸಿರಾಜುದ್ದೌಲನನ್ನು ಕುತಂತ್ರದಿಂದ ಸೋಲಿಸಿದನು. ಹೀಗಾಗಿ ಈ ಎರಡು ಯುದ್ಧಗಳ ಪ್ರತಿಕೂಲ ಪರಿಣಾಮ ಭರತ ಭೂಮಿಯನ್ನು ಬ್ರಿಟಿಷರ ಆಳ್ವಿಕೆಗೆ ಒಳಪಡಿಸಿತು. ಈ ಎರಡೂ ಯುದ್ಧಗಳಲ್ಲಿ ಪರಿಣಾಮ ವಿರುದ್ಧವಾಗಿದ್ದರೆ? ಮರಾಠರು ಇನ್ನೂ ಬಲಶಾಲಿಗಳಾಗಿ ಇಡೀ ಭಾರತವನ್ನು ಆಳುತ್ತಿದ್ದರೇನೋ? ಅಥವಾ ಬಂಗಾಲದ ನವಾಬ ಗೆದ್ದಿದ್ದರೆ, ಬ್ರಿಟಿಷರು ಆಗಲೇ ಭಾರತವನ್ನು ಬಿಟ್ಟು ಓಡಿ ಬಿಡುತ್ತಿದ್ದರೇನೋ? ಪ್ರಬಲ ಮರಾಠರಾಗಲಿ, ಸಂಖ್ಯೆಯಲ್ಲಿ ಬಲಶಾಲಿಯಾಗಿದ್ದ ಸಿರಾಜುದ್ದೌಲನಾಗಲಿ ಯುದ್ಧಗಳ ಪರಿಣಾಮ ಹೀಗಾಗಬಹುದು ಎಂದು ಅಂದುಕೊಂಡಿರಲಿಲ್ಲ.

ಒಟ್ಟಿನಲ್ಲಿ ಈ ಐತಿಹಾಸಿಕ ಸಂಕ್ರಮಣ ಕಾಲಗಳು ನಮ್ಮ ದೇಶದ ಇತಿಹಾಸದ ಮಟ್ಟಿಗೆ Black Swan ಘಟನೆಗಳು. ನಾನಿಲ್ಲಿ ನಮ್ಮ ಇತಿಹಾಸದ ಎಲ್ಲ Black Swan ಘಟನೆಗಳನ್ನು ಪಟ್ಟಿ ಮಾಡಿಲ್ಲ. ಆದರೆ ನಮ್ಮ ಇತಿಹಾಸದ ದಿಕ್ಕನ್ನು ಈ ಘಟನೆಗಳು ಸಂಪೂರ್ಣವಾಗಿ ಬದಲಿಸಿಲ್ಲ ಎನ್ನುವುದಂತೂ ಸತ್ಯ. ಮುಖ್ಯವಾಗಿ ಈ ಘಟನೆಗಳು ಸಾಮಾನ್ಯವಾಗಿ ಉಂಟಾಗುವ ಘಟನೆಗಳಿಗಿಂತ ವಿಪರೀತವಾಗಿದ್ದವು. ಮನುಷ್ಯನು ಸಾಮಾನ್ಯವಾಗಿ ಭವಿಷ್ಯದ ಬಗ್ಗೆ ಬಹಳ ಆಶಾವಾದಿಯಾಗಿರುತ್ತಾನೆ. ಹೀಗಾಗಿ ಭೂತಕಾಲದಲ್ಲಿ ನಡೆದ ಘಟನೆಗಳ ಫಲಿತಾಂಶದ ಆಧಾರದ ಮೇಲೆ ಭವಿಷ್ಯವನ್ನು ಕುರಿತು ದೃಢ ನಂಬಿಕೆಗಳನ್ನು ಬೆಳೆಸಿಕೊಂಡಿರುತ್ತಾನೆ. ಆದರೆ ಅಂತಹ ನಂಬಿಕೆಗಳನ್ನು ನುಚ್ಚು ನೂರು ಮಾಡುವ ಘಟನೆಗಳು ಈ Black Swan ಘಟನೆಗಳು. ಈ ವಿದ್ಯಮಾನ ಸಮಾಜದಲ್ಲಿ ಪ್ರಚಲಿತವಾಗಿರುವ ಜ್ಞಾನ ಅಥವಾ ತಿಳಿವಳಿಕೆ ಅದೆಷ್ಟು ನಾಜೂಕಾದದ್ದು ಎಂಬುದನ್ನು ವಿಷದಗೊಳಿಸುತ್ತದೆ.

ತಾಲಿಬ್ ಅವರ ಪ್ರಕಾರ ಈ Black Swan ಘಟನೆಗಳು ಬಹಳ ಅಪರೂಪದ ಘಟನೆಗಳು, ಆದರೆ ಅವುಗಳ ಪರಿಣಾಮಗಳು ಮಹತ್ತರವಾದದ್ದು. ಅಲ್ಲದೇ ಈ ಘಟನೆಗಳು ನಡೆಯುತ್ತಿರುವಾಗ ಅವುಗಳ ಬಗ್ಗೆ ಗೊತ್ತಾಗುವುದಿಲ್ಲ. ಅವುಗಳ ಮಹತ್ವ ಮತ್ತು ಪರಿಣಾಮ ಈ ಘಟನೆಗಳಾದ ನಂತರವೇ ತಿಳಿಯುತ್ತದೆ. ನಾನು ಈ ಬಗ್ಗೆ ಬರೆಯುತ್ತಿರುವಾಗಲೇ, ನಮ್ಮ ವಿಶ್ವವನ್ನೇ ಬದಲಿಸ ಬಲ್ಲ Black Swan ಘಟನೆ ನಡೆಯುತ್ತಿರಬಹುದು. ಆದರೆ ನಮಗೆ ಅವುಗಳ ಅರಿವು ಇರುವುದಿಲ್ಲ. ಅದೃಷ್ಟವೋ ಅಥವಾ ದುರಾದೃಷ್ಟವೋ ಗೊತ್ತಿಲ್ಲ, ಆದರೆ ಈ ಘಟನೆಗಳು ಇತಿಹಾಸಕ್ಕೆ ಮಹತ್ತರ ತಿರುವು ನೀಡಿದ ಘಟನೆಗಳು ಎಂದು ನಮಗರ್ಥವಾಗುವುದು ದೂರದ ಭವಿಷ್ಯದಲ್ಲಿಯೇ.

English summary
Had Kaling war not happened? Had Prithviraj not forgiven Mohammad Ghori? There are several such incidents that have changed the trajectory of Indian history. Writes Vasant Kulkarni from Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X