ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ತತ್ವಜ್ಞಾನಿ ರುಯಿಜ್‍ನ ನಾಲ್ಕು ಒಪ್ಪಂದಗಳು

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ನಾನು ರುಯಿಜ್‍ನ ಹೆಸರನ್ನು ಕೇಳಿದ್ದು ಕೆಲವು ವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಆಫೀಸಿನ ಹಿರಿಯ ಮಿತ್ರರೊಬ್ಬರಿಂದ. ಆಗಾಗ್ಗೆ ಕೆಲವು ವಿಷಯಗಳನ್ನು ಕುರಿತು ಚರ್ಚಿಸುವದು ನಮ್ಮ ರೂಢಿಯಾಗಿತ್ತು.

ಅಂತಹ ಒಂದು ಚರ್ಚೆಯಲ್ಲಿ, ಅವರಿಂದ ನನಗೆ ಮೆಕ್ಸಿಕೋದ New Age Spiritualist and Healer ಡಾನ್ ಮಿಗ್ವೆಲ್ ರುಯಿಜ್‍ನ ಮತ್ತು ಅವನ ತತ್ವಗಳ ಬಗ್ಗೆ ತಿಳಿದು ಬಂದಿತು. ಮೆಕ್ಸಿಕೋದ ಗ್ರಾಮೀಣ ಪ್ರದೇಶದ ಬಡ ಕುಟುಂಬವೊಂದರಲ್ಲಿ ಜನಿಸಿದ ರುಯಿಜ್ ವೃತ್ತಿಯಿಂದ ವೈದ್ಯ. ಆದರೆ ಒಂದು ಭಯಂಕರ ಅಪಘಾತದಲ್ಲಿ ಬದುಕಿ ಉಳಿದ ನಂತರ ತನ್ನ ವೈದ್ಯ ವೃತ್ತಿಯನ್ನು ಬಿಟ್ಟು ತನ್ನ ತಾಯಿಯಿಂದ ಮೆಕ್ಸಿಕೋದ ಪುರಾತನ ಟೋಲ್ಟೆಕ್ ಸಂಸ್ಕೃತಿ ಮತ್ತು ತತ್ವಜ್ಞಾನವನ್ನು ಕಲಿಯಲು ಆರಂಭಿಸಿದ.[ಪ್ರತಿಯೊಬ್ಬ ವಿದ್ಯಾರ್ಥಿ ಓದಲೇಬೇಕಾದ ಲೇಖನವಿದು]

ಮುಂದಿನ ಅನೇಕ ವರ್ಷಗಳ ತನ್ನ ಕಲಿಕೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು 1997ರಲ್ಲಿ "Four Agreements" ಎಂಬ ಪುಸ್ತಕವೊಂದನ್ನು ಪ್ರಕಟಿಸಿದ. ಡಾನ್ ಮಿಗ್ವೆಲ್ ರುಯಿಜ್ ಜನರನ್ನು ತಮ್ಮೊಂದಿಗೆ ತಾವೇ ನಾಲ್ಕು ಒಪ್ಪಂದಗಳನ್ನು ಮಾಡಿಕೊಳ್ಳಲು ಹೇಳುತ್ತಾನೆ. ಈ ಒಪ್ಪಂದಗಳೇನೆಂದರೆ:

1) ನಾವು ಮಾತನಾಡುವಾಗ ಶಬ್ದಗಳನ್ನು ತುಂಬಾ ಪ್ರಾಮಾಣಿಕತೆಯಿಂದ ಉಪಯೋಗಿಸಬೇಕು (Be impeccable with your word).
2) ನಾವು ಯಾವುದನ್ನೂ ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳಬಾರದು (Don't take anything personally)
3) ಕೇವಲ ಊಹೆಗಳನ್ನು ಮಾಡಿಕೊಳ್ಳಬಾರದು (Don't make assumptions)
4) ಯಾವಾಗಲೂ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಬೇಕು (Always do your best)

ಶಬ್ದಗಳನ್ನು ಪ್ರಾಮಾಣಿಕತೆಯಿಂದ ಉಪಯೋಗಿಸಬೇಕು

ಶಬ್ದಗಳನ್ನು ಪ್ರಾಮಾಣಿಕತೆಯಿಂದ ಉಪಯೋಗಿಸಬೇಕು

ಬಿಟ್ಟ ಬಾಣ ಮತ್ತು ಮಾತನಾಡಿದ ಶಬ್ದಗಳು ಮರಳಿ ಬರಲಾರವು. ಆದ್ದರಿಂದ ಯಾವದೇ ಶಬ್ದಗಳನ್ನು ಉಪಯೋಗಿಸುವಾಗ ಪ್ರಾಮಾಣಿಕರಾಗಿರುವದು ಹಿತಕಾರಿ. ನಿರ್ಲಕ್ಷ್ಯದಿಂದ ಇತರರಿಗೆ ನೋವುಂಟು ಮಾಡುವದರ ಬದಲು ಮೌನವೇ ಉಚಿತ. ಭಗವದ್ಗೀತೆ ಇದನ್ನೇ ಹೀಗೆ ಹೇಳುತ್ತದೆ:

ಅನುದ್ವೇಗಕರಮ್ ವಾಕ್ಯಮ್, ಸತ್ಯಂ ಪ್ರಿಯಹಿತಂ ಚ ಯಾತ್|
ಸ್ವಾಧ್ಯಾಯಭ್ಯಾಸನಂ ಚೈವ, ವಾಙ್ಮಯಂ ತಪ ಉಚ್ಯತೇ|

ಇದರ ಭಾವಾನುವಾದವೇನೇಂದರೆ ಹಿತಕರವಾದ, ಸತ್ಯವಾದ, ನೋವುಂಟುಮಾಡದ ಮತ್ತು ಸತ್ಕೃತಿಗಳನ್ನು ಓದಲು ಬಳಸುವ ಮಾತುಗಳು ವಾಙ್ಮಯ ತಪ ಎನಿಸುವವು. ಅಂದರೆ ಮಾತಿನಲ್ಲಿ ಸತ್ಯ, ಹಿತ ಮತ್ತು ಪ್ರಾಮಾಣಿಕತೆಯಿದ್ದರೆ ಅದೊಂದು ತಪಸ್ಸೇ ಸರಿ. ಮಾತನ್ನು ಅಂಕೆಯಿಡಲು ಸಾಧ್ಯವಿಲ್ಲದಿದ್ದರೆ, "ಮೌನ ಬಂಗಾರ"ವೇ ಸರಿ. ಆದರೆ ನಮ್ಮ ಶಬ್ದಪ್ರಿಯ ಸಮಾಜದಲ್ಲಿ ಮೌನವಾಗಿರಲು ಸಾಧ್ಯವೇ ಇಲ್ಲ ಅಲ್ಲವೇ? ಆದುದರಿಂದ ರುಯಿಜ್‍ನ ಒಪ್ಪಂದವನ್ನು ಅನುಸರಿಸುವುದು ತುಂಬಾ ಹಿತಕಾರಿ. ಬಸವಣ್ಣನವರು 'ನುಡಿದರೆ ಮುತ್ತಿನ ಹಾರದಂತಿರಬೇಕು' ಎಂದಿದ್ದು ಕೂಡ ಈ ಒಪ್ಪಂದವನ್ನೇ ಧ್ವನಿಸುವಂತಿದೆ ಅಲ್ಲವೇ?

ಯಾವುದನ್ನೂ ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳಬಾರದು:

ಯಾವುದನ್ನೂ ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳಬಾರದು:

ಯಾವುದನ್ನೇ ಮನಸ್ಸಿಗೆ ಅತಿಯಾಗಿ ಹಚ್ಚಿಕೊಳ್ಳುವದು ನಮ್ಮ ಮನಸ್ಸಿನ ದುರ್ಬಲತೆ ಮತ್ತು ನಮ್ಮಲ್ಲಿ ಅಡಕವಾದ ಮೋಹವನ್ನು ಎತ್ತಿ ತೋರಿಸುತ್ತದೆ. ಅದಕ್ಕೇ ಕೃಷ್ಣ ಭಗವದ್ಗೀತೆಯಲ್ಲಿ ರಾಜಾ ಜನಕನಂತೆ ನಿರ್ಲಿಪ್ತನಾಗಿ ಕರ್ಮಯೋಗಿಯಾಗಲು ಆದೇಶಿಸುತ್ತಾನೆ. 'ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ' ಎಂಬ ಅತ್ಯಂತ ಪ್ರಸಿದ್ಧ ಶ್ಲೋಕ ನಮ್ಮನ್ನು ಫಲಾಪೇಕ್ಷೆಯಿಲ್ಲದೇ ನಮ್ಮ ನಮ್ಮ ಕರ್ತವ್ಯಗಳನ್ನು ಅನುಸರಿಸಲು ಪ್ರೇರೇಪಿಸುತ್ತದೆ.[ಸಿಂಗಪುರದಲ್ಲಿಯೂ ಇಣುಕುತ್ತಿದೆ ಉದ್ಯೋಗದ ಅಭದ್ರತೆ!]

ಕೇವಲ ಊಹೆಗಳನ್ನು ಮಾಡಿಕೊಳ್ಳಬಾರದು:

ಕೇವಲ ಊಹೆಗಳನ್ನು ಮಾಡಿಕೊಳ್ಳಬಾರದು:

ಇನ್ನು ರುಯಿಜ್‍ನ ಮೂರನೇ ಒಪ್ಪಂದ ಹೇಳುವಂತೆ ಊಹಾಪೋಹಗಳಿಂದಾಗುವ ಅನಾಹುತಗಳು ಸರ್ವ ವಿದಿತ. ರುಯಿಜ್‍ನ ಪ್ರಕಾರ ಊಹನೆಗಳ ಮುಖ್ಯ ಋಣಾತ್ಮಕ ಅಂಶವೆಂದರೆ ಜನರು ಊಹೆಗಳನ್ನು ನಂಬತೊಡಗುತ್ತಾರೆ ಮತ್ತು ಅವುಗಳನ್ನು ಪ್ರಶ್ನಿಸಲು ಮುಂದಾಗುವದಿಲ್ಲ. "ಎಲ್ಲಿ ಸ್ಪಷ್ಟತೆ ಇರುವುದಿಲ್ಲವೋ, ಅಲ್ಲಿ ಪ್ರಶ್ನಿಸಲು ಹಿಂಜರಿಯಬೇಡಿ. ಅಸ್ಪಷ್ಟ ವಿಷಯಗಳಿಂದಾಗುವ ಮುಂದಿನ ಅನಾಹುತಗಳನ್ನು ತಪ್ಪಿಸಲು, ಈಗಲೇ ಸ್ಪಷ್ಟೀಕರಣ ಕೇಳಿ" ಎಂದು ರುಯಿಜ್ ಒತ್ತಾಯ ಮಾಡುತ್ತಾನೆ.

 ಯಾವಾಗಲೂ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಬೇಕು:

ಯಾವಾಗಲೂ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಬೇಕು:

ಯಾವುದಕ್ಕೂ ತೀರ ಅಂಟಿಕೊಳ್ಳದೇ, ನಮ್ಮ ಕೆಲಸ ಕರ್ತವ್ಯಗಳಲ್ಲಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮವಾದುದನ್ನು ಮಾಡುತ್ತ ಹೋಗಬೇಕು. ಸ್ವಾಮಿ ಶಿವಾನಂದರು ಜನರನ್ನು ಕಾಯಾ, ವಾಚಾ, ಮನಸಾ ನಿಷ್ಠೆಯಿಂದ ಕರ್ಮವನ್ನು ಮಾಡಲು ಪ್ರೇರೇಪಿಸುತ್ತಾರೆ. ಅವರು "ನಿಷ್ಠೆಯಿಂದ ಆತ್ಮ ವಿಶ್ವಾಸ ಗಳಿಸಬಹುದು, ಅದರಿಂದ ಸೋಲನ್ನು ಗೆಲ್ಲಬಹುದು ಮತ್ತು ಆತ್ಮ ಸಾಕ್ಷಾತ್ಕಾರದ ಮಾರ್ಗದಲ್ಲಿರುವ ಅಡೆ ತಡೆಗಳನ್ನು ಮೆಟ್ಟಿ ನಿಲ್ಲಬಹುದು" ಎಂದು ಹೇಳಿದ್ದಾರೆ.[ವೃತ್ತಿಯಲ್ಲಿ ಒಬ್ಬ ಪರ್ಫೆಕ್ಷನಿಸ್ಟ್ ಆಗಬೇಕಾದರೆ..]

ಈ ಒಪ್ಪಂದ ಜಾರಿಗೆ ತರುವುದು ತುಂಬಾ ಕಷ್ಟ

ಈ ಒಪ್ಪಂದ ಜಾರಿಗೆ ತರುವುದು ತುಂಬಾ ಕಷ್ಟ

ಈ ನಾಲ್ಕೂ ಒಪ್ಪಂದಗಳು ತಿಳಿದುಕೊಳ್ಳಲು ಬಹಳ ಸುಲಭ. ಆದರೆ ಯಾವಾಗಲೂ ತಪ್ಪದೇ ಅವುಗಳನ್ನು ಜಾರಿಗೆ ತರುವುದು ತುಂಬಾ ಕಷ್ಟ. ಆದುದರಿಂದ ರುಯಿಜ್ ಅದನ್ನು ಸಾಧಿಸಲು ಸತತವಾಗಿ ಅಭ್ಯಾಸ ಮಾಡಲು ಪ್ರೇರೇಪಿಸುತ್ತಾನೆ. ಈ ನಾಲ್ಕು ಒಪ್ಪಂದಗಳ ಮೂಲ ಮೆಕ್ಸಿಕೋದ ಪುರಾತನ ತತ್ವಜ್ಞಾನವಾದರೂ ಅವು ಇಂದಿನ ನಮ್ಮ ಆಧುನಿಕ ಬದುಕಿಗೂ ಕೂಡ ಅಷ್ಟೇ ಪ್ರಸ್ತುತ ಅಲ್ಲವೇ? ಅವುಗಳ ಈ ನಿತ್ಯ ಸತ್ಯ ನನ್ನನ್ನು ಮುಖ್ಯವಾಗಿ ಆಕರ್ಷಿಸಿತು. ಅಲ್ಲದೇ ನಮ್ಮ ಭಾರತೀಯ ತತ್ವಜ್ಞಾನ ಮತ್ತು ನೀತಿಗಳಿಗೆ ತುಂಬಾ ಹತ್ತಿರವಾದದ್ದು ಎನಿಸಿತು.

ಪ್ರಖರ ಬೆಳಕನ್ನು ಹರಡುವ ಒಪ್ಪಂದಗಳು

ಪ್ರಖರ ಬೆಳಕನ್ನು ಹರಡುವ ಒಪ್ಪಂದಗಳು

ಎಲ್ಲ ಮಹಾನ್ ತತ್ವಜ್ಞಾನಿಗಳಂತೆ ರುಯಿಜ್ ಕೂಡ ಕೆಲವು ಸಾಮಾನ್ಯ, ಆದರೆ ಸಾರ್ವಕಾಲಿಕ ಸತ್ಯಗಳನ್ನು ನಮ್ಮ ಮುಂದೆ ಇಟ್ಟಿದ್ದಾನೆ. ಅವುಗಳನ್ನು ಅನುಸರಿಸಬಲ್ಲೆವೇ ಎಂಬುದು ನಮ್ಮ ಮುಂದಿನ ಮುಖ್ಯ ಪ್ರಶ್ನೆ. ಆದರೆ ಈ ಸತ್ಯಗಳು ನಮ್ಮ ಮುಂದೆ ಪ್ರಖರವಾದ ಬೆಳಕನ್ನು ಹರಡಿ ನಮ್ಮ ದಾರಿ ಸುಗಮವಾಗುವಂತೆ ನೋಡಿಕೊಳ್ಳುತ್ತವೆ ಎಂಬುದು ಸರ್ವಮಾನ್ಯ.

English summary
Don Miguel Ángel Ruiz (born 1952), better known as Don Miguel Ruiz, is a Mexican author of Toltec spiritualist and neoshamanistic texts. His most famous book, The Four Agreements, was published in 1997 and has sold around 5.2 million copies in the U.S. and has been translated into 38 languages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X