ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತಾಪಮಾನ ಹೀಗೇ ಏರುತ್ತಿದ್ದರೆ ಜಗತ್ಪ್ರಳಯ ಗ್ಯಾರಂಟಿ!

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಕೆಲವು ವರ್ಷಗಳ ಹಿಂದೆ ಕೆಲವು ವಿಜ್ಞಾನಿಗಳು ಒಂದು ಪ್ರಯೋಗವನ್ನು ಮಾಡಿದರು. ಒಂದು ಕಪ್ಪೆಯನ್ನು ಕುದಿಯುವ ನೀರಿನ ಪಾತ್ರೆಯಲ್ಲಿ ಎಸೆದಾಗ ಅದು ತ್ವರಿತವಾಗಿ ನೀರಿನಿಂದ ಹೊರಗೆ ಹಾರಿ ತನ್ನ ಪ್ರಾಣ ಉಳಿಸಿಕೊಂಡಿತಂತೆ.

ಪ್ರಯೋಗದ ಮುಂದಿನ ಹಂತದಲ್ಲಿ ಅಂತಹುದೇ ಒಂದು ಕಪ್ಪೆಯನ್ನು ದೊಡ್ಡದೊಂದು ಪಾತ್ರೆಯಲ್ಲಿ ನೀರು ತುಂಬಿ ಅದರಲ್ಲಿ ಬಿಟ್ಟರು. ಆ ಪಾತ್ರೆಯನ್ನು ಒಂದು ಸ್ಟೋವ್‍ನ ಮೇಲಿಟ್ಟು ನಿಧಾನವಾಗಿ ಕಾಯಿಸತೊಡಗಿದರು. ಕಪ್ಪೆ ಶೀತಲ ರಕ್ತದ ಪ್ರಾಣಿಯಾದುದರಿಂದ ಅದು ತನ್ನ ದೇಹದ ಉಷ್ಣತೆಯನ್ನು ಕಾಯುತ್ತಿರುವ ನೀರಿನೊಂದಿಗೆ ನಿಧಾನವಾಗಿ ಹೊಂದಾಣಿಕೆ ಮಾಡಿಕೊಳ್ಳತೊಡಗಿತು.

ನೀರು ನಿಧಾನವಾಗಿ ಕಾದು ನೀರಿನ ತಾಪಮಾನ ಸಾಕಷ್ಟು ಹೆಚ್ಚಾದರೂ ಕೂಡ ಕಪ್ಪೆ ತನ್ನನ್ನು ತಾನು ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸಿತೇ ಹೊರತು ಮುಂಬರುತ್ತಿರುವ ಅಪಾಯವನ್ನು ಗ್ರಹಿಸಲಿಲ್ಲ. ನೀರು ಕುದಿಯಲು ಆರಂಭಿಸಿದಾಗ ತನ್ನ ಶಕ್ತಿಯನ್ನೆಲ್ಲ ಪರಿಸರಕ್ಕೆ ಹೊಂದಿಕೊಳ್ಳಲು ವ್ಯಯ ಮಾಡಿದ ಕಪ್ಪೆಗೆ ಅಪಾಯದಿಂದ ಪಾರಾಗಲು ಬೇಕಾಗುವಷ್ಟು ಶಕ್ತಿಯಿರದೆ ತಾನೂ ಸಹ ನೀರಿನಲ್ಲಿ ಕುದಿದು ಪ್ರಾಣ ಕಳೆದುಕೊಂಡಿತಂತೆ!

The effects of climate change and global warming

ಈ ಪ್ರಯೋಗವನ್ನು ವ್ಯವಹಾರ ನಿರ್ವಹಣಾ (business management) ಶಾಸ್ತ್ರದ ಒಂದು ಭಾಗವಾದ ಬದಲಾವಣೆ ನಿರ್ವಹಣೆ (Change management)ಯಲ್ಲಿ ಮುಂಬರುವ ಬದಲಾವಣೆಗಳನ್ನು ಪೂರ್ವದಲ್ಲಿಯೇ ಗ್ರಹಿಸಿಕೊಳ್ಳದಿದ್ದರೆ ಉದ್ದಿಮೆ ಸಂಸ್ಥೆಗಳ ಗತಿ ಏನಾಗುತ್ತದೆ ಎಂಬುದನ್ನು ಸ್ಫುಟಗೊಳಿಸಲು ಉಪಯೋಗಿಸುತ್ತಾರೆ. ಆದರೆ ಈ ಪ್ರಯೋಗವನ್ನು ನಾವು ಈ ಜಗತ್ತು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆಯಾದ ಭೂಮಿಯ ತಾಪಮಾನ ಏರಿಕೆ (Global warming)ಗೆ ಕೂಡ ಅನ್ವಯಿಸಬಹುದು. ಈ ತಾಪಮಾನ ಏರಿಕೆಯ ಬಗ್ಗೆ ಈಗಲೇ ಕ್ರಮ ಕೈಗೊಳ್ಳದಿದ್ದರೆ ನಮ್ಮ ಗತಿ ಕೂಡಾ ಈ ಕಪ್ಪೆಯಂತೆಯೇ ಆಗುತ್ತದೆ ಎಂಬುದು ಇದರ ಅರ್ಥ. ಅಮೆರಿಕದ ನಾಸಾ ಸಂಸ್ಥೆಯ ಪ್ರಕಾರ ಭೂಮಿಯ ಸರಾಸರಿ ತಾಪಮಾನ ಕಳೆದ ಒಂದು ಶತಮಾನದಲ್ಲಿ 0.8 ಡಿಗ್ರಿ ಸೆಲ್ಸಿಯಸ್‍ನಷ್ಟು ಹೆಚ್ಚಾಗಿದೆ.

ಭೂಮಿಯ ತಾಪಮಾನ ಹೆಚ್ಚಾಗಲು ಪ್ರಮುಖ ಕಾರಣವೆಂದರೆ "ಹಸಿರುಮನೆ ಪರಿಣಾಮ (Green House Effect)". ಸೂರ್ಯನ ಕಿರಣಗಳು ಭೂಮಿಯ ವಾತಾವರಣದ ಮೂಲಕ ಹೋಗುವಾಗ ಭೂಮಿಯ ಉಷ್ಣತೆಯನ್ನು ಹೆಚ್ಚಿಸುತ್ತವೆ. ಆದರೆ ಭೂಮಿ ಈ ಶಾಖವನ್ನು ಮತ್ತೆ ಅಂತರಿಕ್ಷಕ್ಕೆ ಪ್ರಸರಿಸುತ್ತದೆ. ಈ ರೀತಿಯ ಮರು ಪ್ರಸರಣ ಭೂಮಿಯ ಉಷ್ಣತೆಯ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಆದರೆ ನೀರಿನ ಹಬೆ, ಇಂಗಾಲದ ಡೈ ಆಕ್ಸೈಡ್, ಮೀಥೇನ್, ಮತ್ತು ನೈಟ್ರಸ್ ಆಕ್ಸೈಡ್‍ನಂತಹ ಕೆಲವು ಅನಿಲಗಳು ಈ ಉಷ್ಣತೆಯನ್ನು ಹೀರಿಕೊಂಡು ಭೂಮಿಯ ಉಷ್ಣತಾ ಮಟ್ಟವನ್ನು ಹೆಚ್ಚಿಸುತ್ತವೆ. ಇದನ್ನೇ ಹಸಿರುಮನೆ ಪರಿಣಾಮ ಎನ್ನುವುದು. ಪರಿಸರ ಮಾಲಿನ್ಯ, ಪೆಟ್ರೋಲ್ ಪದಾರ್ಥಗಳ ಬಳಕೆ, ಅರಣ್ಯ ನಾಶ ಮುಂತಾದ ಮಾನವನ ಚಟುವಟಿಕೆಗಳಿಂದ ಈ ಅನಿಲಗಳ ಪ್ರಮಾಣ ಸ್ವಾಭಾವಿಕ ಮಟ್ಟಕ್ಕಿಂತ ಬಹಳಷ್ಟು ಏರಿದೆ ಹಾಗೂ ಇನ್ನೂ ಏರುತ್ತಲಿದೆ.

ಈ ಉಷ್ಣತೆಯ ಮಟ್ಟ ಇನ್ನೂ ಹೆಚ್ಚಿಗೆ ಏರಿದರೆ ಕೆಳಗಿನ ಪರಿಣಾಮಗಳು ಉಂಟಾಗುತ್ತವೆ:

* ಭೂಮಿಯ ಉಷ್ಣತೆ ಹೆಚ್ಚಿ ಕೆಲವು ಕಡೆಗೆ ಹವಾಮಾನ ವೈಪರೀತ್ಯಗಳಾಗಬಹುದು. ಎಂದರೆ ಕೆಲವು ಕಡೆಗೆ ತೀರ ಹೆಚ್ಚು ಬಿಸಿಲೇರಿದರೆ ಮತ್ತೆ ಕೆಲವು ಕಡೆಗೆ ತೀವ್ರ ಚಳಿಯುಂಟಾಗಬಹುದು. ವಿಪರೀತ ಮಳೆಯಾಗಿ ಪ್ರವಾಹವನ್ನುಂಟುಮಾಡಬಹುದು. ದೈತ್ಯ ಬಿರುಗಾಳಿ ಮತ್ತು ಸುಂಟರಗಾಳಿಗಳಾಗಿ ಅನೇಕ ಕಡೆಗೆ ಧನ ಮತ್ತು ಜನ ಹಾನಿಯುಂಟಾಗಬಹುದು.

* ಭೂಮಿಯ ಹಿಮನದಿಗಳು ಮತ್ತು ಹಿಮಾಚ್ಛಾದಿತ ಶಿಖರಗಳು ಕರಗಿ ಸಮುದ್ರ ಸೇರಿ, ಸಮುದ್ರದ ಮಟ್ಟವೇರಿ ಅನೇಕ ಸಮುದ್ರದಂಚಿನ ಮಹಾನಗರಗಳು ನೀರಲ್ಲಿ ಮುಳುಗಬಹುದು. ಮಾಲ್ದೀವ್ಸ್‍ನಂತಹ ಸುಂದರವಾದ ದ್ವೀಪಗಳು ನೀರು ಪಾಲಾಗಬಹುದು.

* ಹವಾಮಾನ ವೈಪರೀತ್ಯ ಮತ್ತು ಹೆಚ್ಚಿನ ಉಷ್ಣತೆಗಳ ಪರಿಣಾಮದಿಂದ ಭೂಮಿಯಲ್ಲಿರುವ ಸ್ವಾಭಾವಿಕ ಬೆಳೆಗಳ ನಾಶವಾಗಿ ತೀವ್ರವಾದ ಆಹಾರ ಕೊರತೆಯುಂಟಾಗಬಹುದು.

* ಹೆಚ್ಚಿನ ಉಷ್ಣತೆಯಿಂದ ಭೂಮಿಯ ಜೀವ ವೈವಿಧ್ಯದಲ್ಲಿ ತೀವ್ರ ಬದಲಾವಣೆಯಾಗಬಹುದು. ಅನೇಕ ಜೀವಿಗಳ ಅವನತಿಯುಂಟಾದರೆ ಇನ್ನೂ ಅನೇಕ ಕ್ರಿಮಿ ಕೀಟಗಳ ಸಂಖ್ಯೆಯಲ್ಲಿ ಅಸಾಮಾನ್ಯ ಬೆಳವಣಿಗೆಯುಂಟಾಗಬಹುದು.

* ಈ ರೀತಿಯ ಏರುಪೇರುಗಳಿಂದ ಇಡೀ ಮಾನವ ಕುಲ, ರೋಗ ರುಜಿನಗಳು ಮತ್ತು ಆಹಾರ ಕೊರತೆಯಿಂದ ಬಳಲಿ ಮಾನವ ಸಂಕುಲವೇ ನಾಶವಾಗಬಹುದು.

The effects of climate change and global warming

ಸಿಂಗಪುರದ Gardens by the Bayಯಲ್ಲಿರುವ Cloud Forest Domeನಲ್ಲಿ ಭೂಮಿಯ ತಾಪಮಾನ ಏರಿಕೆಯ ಪರಿಣಾಮಗಳನ್ನು ಕುರಿತು ಒಂದು ಸುಂದರವಾದ ಲಘು ಚಿತ್ರವೊಂದನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಭೂಮಿಯ ಉಷ್ಣತೆ ಹೆಚ್ಚಾಗತೊಡಗಿದರೆ ಆಗುವ ಅಲ್ಲೋಲಕಲ್ಲೋಲಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಈ ಚಿತ್ರದ ಪ್ರಕಾರ, ಜಗತ್ತಿನ ತಾಪಮಾನ ಸರಾಸರಿ ಕೇವಲ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ ಸಾಕು ಜಗತ್ತಿನಲ್ಲಿ ಪ್ರಳಯ ಖಂಡಿತ.

ಈಗಾಗಲೇ ನಾವು ಈ ಹವಾಮಾನ ವೈಪರೀತ್ಯದ ವಿವಿಧ ಪರಿಣಾಮಗಳನ್ನು ಕಾಣುತ್ತಿದ್ದೇವೆ. ವಿಶ್ವದ ಅನೇಕ ಭಾಗಗಳಲ್ಲಿ ಉಷ್ಣತೆಯ ಮಟ್ಟ ತನ್ನ ಇಲ್ಲಿಯವರೆಗಿನ ಸಾಮಾನ್ಯ ಮಟ್ಟಕ್ಕಿಂತ ಮಹತ್ತರವಾಗಿ ಹೆಚ್ಚಾಗಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಅಲ್ಲದೇ ಮಳೆಯ ಕೊರತೆ ಎಂದಿಗಿಂತ ಹೆಚ್ಚಾಗಿ ನೀರಿನ ಅಪಾರ ಕೊರತೆಯನ್ನು ಎದುರಿಸುತ್ತಿದ್ದೇವೆ. ಕಳೆದ ವರ್ಷದಲ್ಲಿಯೇ ಬಿಸಿಲಿನ ಪ್ರಕೋಪದಿಂದ ಅನೇಕ ಜನ ಮತ್ತು ಜಾನುವಾರುಗಳ ಪ್ರಾಣಹಾನಿಯುಂಟಾಗಿತ್ತು. ನೀರಿನ ಅಭಾವದಿಂದ ಅನೇಕ ಪ್ರದೇಶಗಳಿಗೆ ನೀರಿನ ಸರಬರಾಜು ಮಾಡಲು ರೈಲುಗಳನ್ನು ಬಳಸಲಾಗಿತ್ತೆಂಬುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯೇ.

ಹಿಂದೆಂದೂ ನೀರಿನ ಅಭಾವವನ್ನು ಎದುರಿಸದ ಪ್ರದೇಶಗಳಲ್ಲಿ ಕೂಡ ಈ ಸಮಸ್ಯೆಯುಂಟಾಗಿದ್ದನ್ನು ನೋಡಿದರೆ, ನಾವು ಈ ಭೂಮಿಯ ತಾಪಮಾನ ಏರಿಕೆಯ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಬೇಕಾಗಿದೆ.

ಈ ಬಾರಿ ಕೂಡ ಬಿಸಿಲು ತನ್ನ ಪ್ರತಾಪವನ್ನು ಆಗಲೇ ತೋರಿಸುತ್ತಿದೆ. ನನ್ನ ಊರು ಬೆಳಗಾವಿ ಎತ್ತರದಲ್ಲಿ (ಸಮುದ್ರ ಮಟ್ಟಕ್ಕಿಂತ ಸುಮಾರು 780 ಮೀ ಎತ್ತರ) ಇರುವುದರಿಂದ ತನ್ನ ಹವಾ ನಿಯಂತ್ರಿತ ವಾತಾವರಣಕ್ಕೆ ಪ್ರಸಿದ್ಧ. ಆದರೆ ಈ ಬಾರಿ ಬೆಳಗಾವಿಯಲ್ಲಿ ಕೂಡ ಮಾರ್ಚ್ ತಿಂಗಳಲ್ಲಿಯೇ ಬಿಸಿಲು 38 ಡಿಗ್ರಿ ಸೆಲ್ಸಿಯಸ್‍ಗೆ ತಲುಪಿದೆ. ಮೊನ್ನೆ ಮನೆಗೆ ಫೋನ್ ಮಾಡಿದಾಗ ನನ್ನ ತಂದೆ "ಈ ಸರೆ ಬೆಳಗಾಂವದಾಗ ಸುದ್ದಾ ಭಾಳ ಬಿಸಿಲು ಆಗ್ಯದ. ಮುಂಜಾನೆ ಸಹಾ ಹೊರಗ ಹೋಗಲಿಕ್ಕ ಆಗಂಗಿಲ್ಲ, ಅಷ್ಟ ಬಿಸಿಲು" ಎಂದು ಹೇಳಿದರು. ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಕೋಲಾಹಲವೆಬ್ಬಿಸಿದ ಬಿಸಿಲನ್ನು ಕುರಿತು "ಹಿಂದುಸ್ತಾನ್ ಟೈಮ್ಸ್" ಪತ್ರಿಕೆ ಈ ಬಾರಿ "March is the new May" ಎಂದು ಘೋಷಿಸಿದೆ. ಸಿಂಗಪುರದಲ್ಲಿ ಕೂಡ ಬಿಸಿಲು ರಣರಣವೆನ್ನುತ್ತಿದೆ.

ಆದರೆ ಮಾನವನ ಆಧುನಿಕ ಚಟುವಟಿಕೆಗಳಿಂದಲೇ ಜಗತ್ತಿನ ಆರ್ಥಿಕ ಪ್ರಗತಿ ಸಾಧ್ಯ ಎನ್ನುವುದು ಕೂಡ ಸತ್ಯ. ಆದುದರಿಂದ ಈ ಆರ್ಥಿಕ ಪ್ರಗತಿ ಮತ್ತು ತಾಪಮಾನ ಏರಿಕೆಯಿಂದ ಭೂಮಿಯ ರಕ್ಷಣೆಯ ನಡುವೆ ಒಂದು ಯುದ್ಧ ಆರಂಭವಾಗಿದೆ. ವಾಣಿಜ್ಯ ಉದ್ದಿಮೆಗಳು ಮತ್ತು ಸರಕಾರಗಳು ಏರುತ್ತಿರುವ ಜನಸಂಖ್ಯೆ ಮತ್ತು ಆಧುನಿಕತೆಯ ಬೇಡಿಕೆಗಳನ್ನು ಪೂರೈಸುವುದರಲ್ಲಿ ಹೆಚ್ಚು ಹೆಚ್ಚು ವ್ಯಸ್ತವಾಗಿದ್ದು, ತಮ್ಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿಲ್ಲ.

ಅಮೆರಿಕದಂತಹ ಮುಂದುವರೆದ ರಾಷ್ಟ್ರಗಳಲ್ಲದೇ, ಇನ್ನೂ ಪ್ರಗತಿ ಹೊಂದುತ್ತಿರುವ ಭಾರತ, ಚೀನದಂತಹ ರಾಷ್ಟ್ರಗಳು ಈ ಕಡಿವಾಣ ಹಾಕಿದರೆ ಉಂಟಾಗುವ ಆರ್ಥಿಕ ಅಸಮತೋಲನವನ್ನು ಎದುರಿಸಲು ಹಿಂಜರಿಯುತ್ತಿವೆ. ಆದರೆ ಜಗತ್ತಿನ ಉಳಿವು ಆರ್ಥಿಕ ಅಭಿವೃದ್ಧಿಗಿಂತ ಹೆಚ್ಚು ಮುಖ್ಯ. ಜಗತ್ತೇ ಇರದಿದ್ದರೆ ಆರ್ಥಿಕ ಪ್ರಗತಿ ಎಂಥದು? ಈ ವಿಷಯದಲ್ಲಿ ಸುಮ್ಮನೇ ಮೀನ ಮೇಷ ಎಣಿಸುತ್ತ ಕುಳಿತುಕೊಂಡರೆ ನಮ್ಮ ಪರಿಸ್ಥಿತಿ ಕೂಡ ಈ ಲೇಖನದ ಆರಂಭದಲ್ಲಿ ಹೇಳಿದ ಬೆಂದು ಹೋದ ಕಪ್ಪೆಯ ಹಾಗಾಗುತ್ತದೆ ಅಷ್ಟೇ.

English summary
The effects of climate change and global warming : Just imagine what would happen if temperature of the earth increases by 5 degree celcius! The beautiful earth may not be as it is now. So, this is the right time to think and save our mother earth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X