ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಸು ತುಂಬಿದ ಭಾರತೀಯ ಕ್ರೀಡಾಪಟುಗಳ ಸಾಧನೆ!

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಮೊನ್ನೆ ಕಾಮನ್ ವೆಲ್ತ್ ಪಂದ್ಯಾವಳಿ ಮುಗಿಯಿತು. ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಭಾರತದ ಪ್ರದರ್ಶನ ತೃಪ್ತಿಕರವಾಗಿತ್ತು. ಪಂದ್ಯಾವಳಿಯಲ್ಲಿ ಮೂರನೇ ಸ್ಥಾನ ಪಡೆದ ಭಾರತ 26 ಚಿನ್ನದ ಪದಕಗಳು, 20 ಬೆಳ್ಳಿ ಮತ್ತು 20 ಕಂಚಿನ ಪದಕಗಳನ್ನು ಪಡೆಯಿತು.

ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಬಾಕ್ಸಿಂಗ್, ಕುಸ್ತಿ, ಸ್ಕ್ವಾಷ್, ವೇಟ್ ಲಿಫ್ಟಿಂಗ್ ಮತ್ತು ಶೂಟಿಂಗ್‍ಗಳಲ್ಲಿ ಅನೇಕ ಚಿನ್ನದ ಪದಕ ಪಡೆಯುವುದರ ಮೂಲಕ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಧಾನವಾಗಿ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ವಿಷಯ ಎಲ್ಲ ಭಾರತೀಯರಿಗೂ ನೆಮ್ಮದಿ ತರುವಂತಹ ವಿಷಯ.

ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕಾಗಿ ಚಿನ್ನ ಗೆದ್ದ ವೀರರಿವರು

ಮೊದಲು ಕೇವಲ ಭಾಗವಹಿಸುವುದೇ ದೊಡ್ಡ ಮಾತು ಎಂದುಕೊಂಡು ಅತೀ ದೊಡ್ಡ ತಂಡಗಳು ಓಲಂಪಿಕ್ಸ್, ಏಷಿಯನ್ ಕ್ರೀಡಾಕೂಟ ಮತ್ತು ಕಾಮನ್ ವೆಲ್ತ್ ಪಂದ್ಯಾವಳಿಗಳಿಗೆ ಹೋಗಿ ಬರಿಗೈಯಲ್ಲಿ ವಾಪಸ್ ಬರುತ್ತಿದ್ದವು. ಆದರೆ ಭಾರತೀಯ ತಂಡ ಈಗ ಹಲವಾರು ಪದಕಗಳನ್ನು ಗೆದ್ದು ಬರುವಂತಹ ಸ್ಥಿತಿಗೆ ಬಂದಿದ್ದು ಭಾರತೀಯರೆಲ್ಲರಿಗೂ ಸಂತಸ ತಂದಿದೆ.

2014ರಲ್ಲಿ ನಡೆದ ಗ್ಲಾಸ್ಗೋ ಕಾಮನ್ ವೆಲ್ತ್ ಪಂದ್ಯಾವಳಿಯಲ್ಲಿ ಭಾರತ ಒಳ್ಳೆಯ ಪ್ರದರ್ಶನ ನೀಡಿ ಅರವತ್ತೈದು ಪದಕಗಳನ್ನು ಗೆದ್ದರೂ, ಚಿನ್ನದ ಪದಕಗಳ ಸಂಖ್ಯೆ ಕೇವಲ ಹದಿನೈದು ಆಗಿತ್ತು. ಆದರೆ ಗೋಲ್ಡ್ ಕೋಸ್ಟ್ ನಲ್ಲಿ ಭಾರತ 26 ಚಿನ್ನದ ಪದಕಗಳನ್ನು ಗೆದ್ದು ಸ್ಪರ್ಧಾತ್ಮಕ ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿದೆ. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‍ಗಳಂತಹ ಕ್ರೀಡಾ ಜಗತ್ತಿನ ದಿಗ್ಗಜರೊಂದಿಗೆ ಸ್ಪರ್ಧಿಸಿ ಚಿನ್ನದ ಪದಕಗಳನ್ನು ಪಡೆದಿದ್ದು ಮುಂದಿನ ಓಲಿಂಪಿಕ್ಸ್ ದೃಷ್ಟಿಯಿಂದ ನೋಡಿದಾಗ ಬಹಳ ಆಶಾದಾಯಕ ಎನಿಸುತ್ತದೆ.

ಕಾಮನ್ವೆಲ್ತ್ ನಲ್ಲಿ ಭಾರತದಿಂದ ಪದಕಗಳ ಕೊಳ್ಳೆ

ಕಾಮನ್ವೆಲ್ತ್ ನಲ್ಲಿ ಭಾರತದಿಂದ ಪದಕಗಳ ಕೊಳ್ಳೆ

ಈಗ ತಾನೇ ಮುಗಿದ ಕಾಮನ್ ವೆಲ್ತ್ ಪಂದ್ಯಾವಳಿಯಲ್ಲಿ ನನಗೆ ಸಂತಸ ತಂದ ವಿಷಯವೆಂದರೆ, ಭಾರತದಿಂದ ಅನೇಕ ಹದಿ ವಯಸ್ಸಿನ ಮಕ್ಕಳು ಭಾಗವಹಿಸಿ ಪದಕಗಳನ್ನು ಪಡೆದದ್ದು. 17 ವರ್ಷದ ಮೇಹುಲಿ ಘೋಷ್, ಹದಿನೈದು ವರ್ಷದ ಅನೀಷ್ ಭಾನ್‍ವಾಲಾ ಮತ್ತು ಅಷ್ಟೇ ವರ್ಷದ ಮನು ಭಾಕರ್ ಶೂಟಿಂಗ್‍ನಲ್ಲಿ ಮತ್ತು ಹದಿನೆಂಟು ವರ್ಷದ ದೀಪಕ್ ಲಾಥರ್ ವೇಟ್ ಲಿಫ್ಟಿಂಗ್‍ನಲ್ಲಿ ಮತ್ತು ಹತ್ತೊಂಬತ್ತು ವರ್ಷದ ದಿವ್ಯಾ ಕಕ್ರಾನ್ ಕುಸ್ತಿಯಲ್ಲಿ ಪದಕಗಳನ್ನು ಪಡೆದು ವಿಶ್ವದಾದ್ಯಂತ ಹರಡಿರುವ ಭಾರತೀಯರ ಮುಖದ ಮೇಲೆ ಸಂತೋಷದ ಹೊಳೆ ಹರಿಸಿದರು.

ನೆನಪು ತರುವ ಬೀಜಿಂಗ್ ಓಲಿಂಪಿಕ್ಸ್

ನೆನಪು ತರುವ ಬೀಜಿಂಗ್ ಓಲಿಂಪಿಕ್ಸ್

ಈ ಹದಿ ಹರೆಯದ ಹುರುಪಿನ ಕ್ರೀಡಾಪಟುಗಳನ್ನು ನೋಡಿದಾಗ ನನಗೆ ಬೀಜಿಂಗ್‍ನಲ್ಲಿ ನಡೆದ ಓಲಿಂಪಿಕ್ಸ್ ಕ್ರೀಡಾಕೂಟ ನೆನಪಾಗುತ್ತದೆ. ಆ ಓಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಚೀನ ಅನೇಕ ಹದಿ ಹರೆಯದ ಕ್ರೀಡಾಪಟುಗಳನ್ನು ಕಣಕ್ಕಿಳಿಸಿತು. ಈ ಭಯರಹಿತ ಹದಿವಯಸ್ಸಿನ ಸ್ಪರ್ಧಿಗಳು ಅಂದು ಕ್ರೀಡಾ ಜಗತ್ತಿನ ಸುಪರ್ ಪವರ್ ಎಂದು ಪರಿಗಣಿಸ್ಪಡುತ್ತಿದ್ದ ಅಮೇರಿಕ ಸಂಯುಕ್ತ ಸಂಸ್ಥಾನವನ್ನು ಹಿಂದಿಕ್ಕಿ ಚೀನವನ್ನು ಪದಕಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೆ ಏರಿಸಲು ಸಹಾಯ ಮಾಡಿದರು. ನಮ್ಮ ನವೀನ ಭಾರತದ ಈ ಮರಿ ಸಿಂಹಗಳು ಮುಂದೊಂದು ದಿನ ನಮ್ಮ ದೇಶವನ್ನು ಕೂಡ ಓಲಿಂಪಿಕ್ಸ್ ನಂತಹ ಕ್ರೀಡಾಕೂಟದಲ್ಲಿ ಚೀನದಂತೆ ಅಗ್ರ ಶ್ರೇಣಿಗೆ ಏರಿಸಬಲ್ಲರೆ?

48 ಚಿನ್ನದ ಪದಕಗಳೊಂದಿಗೆ ಪ್ರಥಮ ಸ್ಥಾನ

48 ಚಿನ್ನದ ಪದಕಗಳೊಂದಿಗೆ ಪ್ರಥಮ ಸ್ಥಾನ

1984ರಲ್ಲಿ ಮೊದಲ ಬಾರಿಗೆ ಓಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಚೀನ 15 ಚಿನ್ನದ ಪದಕಗಳನ್ನು ಗಳಿಸಿತ್ತು. ಮುಂದೆ ಕೇವಲ ಇಪ್ಪತ್ತು ವರ್ಷಗಳಲ್ಲಿ ಅಂದರೆ 2008ರ ಬೀಜಿಂಗ್ ಓಲಿಂಪಿಕ್ಸ್ ನಲ್ಲಿ 48 ಚಿನ್ನದ ಪದಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿತು. ಮುಂದಿನ ಎಲ್ಲ ಓಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಕೂಡಾ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಪಡೆದುಕೊಂಡಿದೆ. ಆದರೆ ಈ ಮಟ್ಟವನ್ನು ತಲುಪಲು ಚೀನ ಬಹಳ ದೊಡ್ಡ ಪ್ರಮಾಣದಲ್ಲಿ ಯೋಜನೆಯನ್ನೇ ಅನುಷ್ಠಾನಗೊಳಿಸಿತು ಎಂಬುದು ಎಷ್ಟು ಜನರಿಗೆ ಗೊತ್ತು?

ಕ್ರೀಡೆಗೆ ಮಿಲಿಯಗಟ್ಟಲೆ ಸುರಿಯುವ ಚೀನ

ಕ್ರೀಡೆಗೆ ಮಿಲಿಯಗಟ್ಟಲೆ ಸುರಿಯುವ ಚೀನ

ಚಿಕ್ಕ ಮಕ್ಕಳಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಹುಡುಕಿ ಅವರಿಗೆ ಚಿಕ್ಕ ವಯಸ್ಸಿನಿಂದಲೇ ತರಬೇತಿ ನೀಡಲು ರಾಷ್ಟ್ರದಾದ್ಯಂತ ಇನ್ನೂರು ವಿಶೇಷ ಕ್ರೀಡಾ ಶಾಲೆಗಳನ್ನು ಸ್ಥಾಪಿಸಿದೆ. ಈ ಸ್ಕೂಲುಗಳಲ್ಲಿ ಮಕ್ಕಳಿಗೆ ಸಾಮಾನ್ಯ ಪಠ್ಯದೊಂದಿಗೆ ಕ್ರೀಡೆಗಳಲ್ಲಿ ಕಠಿಣತಮ ತರಬೇತಿ ನೀಡುತ್ತಿದೆ. ಈ ಶಾಲೆಗಳಲ್ಲಿ ಎಲ್ಲ ತರಹದ ಅತ್ಯತ್ತಮ ಸೌಲಭ್ಯಗಳನ್ನು ಒದಗಿಸಿದೆ. ಈ ಶಾಲೆಯಲ್ಲಿ ತರಬೇತಿ ಪಡೆದ ಯುವ ಸ್ಪರ್ಧಿಗಳಲ್ಲಿ ಉತ್ತಮ ದರ್ಜೆ ಪಡೆದವರನ್ನು ಪ್ರಾದೇಶಿಕ ಕ್ರೀಡಾ ತಂಡಗಳಿಗೆ ಆಯ್ಕೆ ಮಾಡುತ್ತಾರೆ. ಈ ಪ್ರಾದೇಶಿಕ ಕ್ರೀಡಾ ತಂಡಗಳಲ್ಲಿ ಅತ್ಯುತ್ತಮರೆಂದು ಹೆಸರಾದವರನ್ನು ದೇಶವನ್ನು ಪ್ರತಿನಿಧಿಸಲು ಆಯ್ಕೆ ಮಾಡುತ್ತಾರೆ. ಈ ವಿಶೇಷ ಶಾಲೆಗಳಿಗಾಗಿ ಚೀನದ ಕೇಂದ್ರ ಸರಕಾರ ಮಿಲಿಯಗಟ್ಟಲೇ ಹಣ ಖರ್ಚು ಮಾಡುತ್ತದೆ. ಚೀನದ ಈ ಕ್ರೀಡಾ ವ್ಯವಸ್ಥೆ ಜರ್ಮನಿ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲೂ ಹರಡಿ ಪ್ರಖ್ಯಾತಿ ಪಡೆದಿದೆ.

ಸಿಂಗಪುರದಲ್ಲಿಯೂ ಕ್ರೀಡೆಗೆ ಪ್ರಾಮುಖ್ಯತೆ

ಸಿಂಗಪುರದಲ್ಲಿಯೂ ಕ್ರೀಡೆಗೆ ಪ್ರಾಮುಖ್ಯತೆ

ಸಿಂಗಪುರದಂತಹ ಚಿಕ್ಕ ದೇಶ ಕೂಡ ಕ್ರೀಡೆಗಳಿಗೆ ಅತ್ಯಂತ ಪ್ರಾಮುಖ್ಯತೆ ನೀಡಿ, ನಗರದ ಅನೇಕ ಬಡಾವಣೆಗಳಲ್ಲಿ ಕ್ರೀಡಾ ಸಂಕೀರ್ಣಗಳನ್ನು ಸ್ಥಾಪಿಸಿದೆ. ಈ ಸಂಕೀರ್ಣಗಳಲ್ಲಿ ಅನೇಕ ವಿಶ್ವಮಟ್ಟದ ಸೌಲಭ್ಯಗಳನ್ನು ಒದಗಿಸಿದೆ. ಪ್ರಜೆಗಳಲ್ಲಿ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಅಲ್ಲದೇ ಯುವ ಪೀಳಿಗೆಯಲ್ಲಿ ಪ್ರತಿಭಾವಂತರನ್ನು ಗುರುತಿಸಿ ತರಬೇತಿ ಕೊಡಲು 2004ರಲ್ಲಿ ಒಂದು ವಿಶೇಷ ಕ್ರೀಡಾ ಶಾಲೆಯನ್ನು ಆರಂಭಿಸಿದೆ. ಕೇವಲ ಹದಿಮೂರು ವರ್ಷಗಳಲ್ಲಿ ಈ ಶಾಲೆಯಲ್ಲಿ ತರಬೇತಿ ಪಡೆದ ಅನೇಕರು ಒಲಿಂಪಿಕ್ಸ್, ಏಶಿಯಾಡ್ ಮತ್ತ ಕಾಮನ್ವೆಲ್ತ್ ಪಂದ್ಯಾವಳಿಗಳಲ್ಲಿ ಪದಕಗಳನ್ನು ಪಡೆದಿದ್ದಾರೆ.

ಆದರೂ ಭಾರತೀಯರ ಮಹತ್ತರ ಸಾಧನೆ

ಆದರೂ ಭಾರತೀಯರ ಮಹತ್ತರ ಸಾಧನೆ

ನಮಗೆಲ್ಲರಿಗೂ ಗೊತ್ತಿರವಂತೆ ನಮ್ಮ ದೊಡ್ಡ ದೇಶದಲ್ಲಿ ಕ್ರೀಡಾ ಸೌಲಭ್ಯಗಳ ಬಹು ದೊಡ್ಡ ಮಟ್ಟದ ಕೊರತೆಯಿದೆ. ದೊಡ್ಡ ದೊಡ್ಡ ಮಹಾನಗರಗಳಲ್ಲಿ ಕೂಡ ಒಳ್ಳೆಯ ಕ್ರೀಡಾ ಸಂಕುಲಗಳಿಲ್ಲ. ಇದ್ದರೂ ಅವುಗಳಲ್ಲಿ ಒಳ್ಳೆಯ ಸೌಲಭ್ಯಗಳಿಲ್ಲ. ರಾಷ್ಟ್ರೀಯ ಮಟ್ಟದ ಕ್ರೀಡಾ ಸಂಸ್ಥೆಗಳಲ್ಲಿ ರಾಜಕಾರಣಿಗಳೋ ಅಥವಾ ಅವರ ಚೇಲಾಗಳೋ ಆಡಳಿತ ನಡೆಸಿ ಹದಗೆಡಿಸಿದ್ದಾರೆ. ಇಂತಹುದರಲ್ಲಿ ಚೀನದಂತಹ ಫಲಿತಾಂಶಗಳನ್ನು ಪಡೆಯುವುದು ಅಸಾಧ್ಯ. ಯಾವುದೇ ತರಹದ ಸೌಲಭ್ಯಗಳು ಮತ್ತು ಖಾಸಗಿ ಸಂಸ್ಥೆಗಳ ಪುರಸ್ಕಾರಗಳಿಲ್ಲದೇ ನಮ್ಮ ಕ್ರೀಡಾಪಟುಗಳು ಇಷ್ಟೊಂದು ಉತ್ತಮ ಪ್ರದರ್ಶನವನ್ನು ನೀಡಿದ್ದು ನಿಜಕ್ಕೂ ಒಂದು ಮಹತ್ತರವಾದ ಸಾಧನೆ.

ಬೇಕು ಕ್ರೀಡಾಪಟುಗಳಿಗೆ ಒಳ್ಳೆಯ ಧನ ಸಹಾಯ

ಬೇಕು ಕ್ರೀಡಾಪಟುಗಳಿಗೆ ಒಳ್ಳೆಯ ಧನ ಸಹಾಯ

ದ್ರೋಣಾಚಾರ್ಯ ಪುರಸ್ಕೃತ ಗೋಪಿ ಚಂದ್ ಅವರಂತಹವರ ವ್ಯಕ್ತಿಗತ ಸಾಧನೆಯೇ ಇಂತಹ ಉತ್ತಮ ಫಲಿತಾಂಶಗಳಿಗೆ ಕಾರಣ. ಕಳೆದ ಒಂದು ದಶಕದಿಂದ ನಿರಂತರವಾಗಿ ಉತ್ತಮ ಆಟ ಪ್ರದರ್ಶಿಸುತ್ತಿರುವ ಟೇಬಲ್ ಟೆನ್ನಿಸ್ ಪಟು ಶರತ್ ಕಮಲ್ ಕೂಡ ಈ ಬಾರಿಯ ಒಟ್ಟಾರೆ ಸಾಧನೆಯನ್ನು ನೋಡಿ, ಟೇಬಲ್ ಟೆನ್ನಿಸ್ ಪಟುಗಳಿಗೂ ಕೂಡ ಖಾಸಗೀ ಸಂಸ್ಥೆಗಳಿಂದ ಒಳ್ಳೆಯ ಧನ ಸಹಾಯ ದೊರಕಬಹುದು ಎಂಬ ಆಶಯ ವ್ಯಕ್ತ ಪಡಿಸಿದ್ದಾರೆ. ಹಾಗೆಯೇ ಆಗಲಿ ಎಂದು ನಮ್ಮಂತಹ ಅಭಿಮಾನಿಗಳ ಹಾರೈಕೆ. ಟೇಬಲ್ ಟೆನ್ನಿಸ್ ಮಾತ್ರವಲ್ಲ ಅತ್ಯುತ್ತಮ ಪ್ರದರ್ಶನ ಕೊಟ್ಟ ಎಲ್ಲ ಕ್ರೀಡಾಪಟುಗಳಿಗೂ ಒಳ್ಳೆಯ ಧನಸಹಾಯ ದೊರೆತು ಇತರರಿಗೂ ಕ್ರೀಡೆಗಳಿಗೆ ತಕ್ಕ ಮನ್ನಣೆ ದೊರೆಯಲಿ ಎಂಬ ಆಶಯ.

ಓಲಿಂಪಿಕ್ಸ್ ನಲ್ಲಿಯೂ ಚಿನ್ನದ ಕೊಳ್ಳೆ ಹೊಡೆಯಲಿ

ಓಲಿಂಪಿಕ್ಸ್ ನಲ್ಲಿಯೂ ಚಿನ್ನದ ಕೊಳ್ಳೆ ಹೊಡೆಯಲಿ

ಎಲ್ಲಕ್ಕಿಂತ ಮುಖ್ಯವಾಗಿ ಭಾರತ ಸರಕಾರ ಎಚ್ಚೆತ್ತುಕೊಂಡು ಚೀನದಂತಹ ವ್ಯಾಪಕವಾದ ಕ್ರೀಡಾ ವ್ಯವಸ್ಥೆಯನ್ನು ಹಮ್ಮಿಕೊಳ್ಳಬೇಕು. ಒಳ್ಳೆಯ ಸೌಲಭ್ಯಗಳನ್ನು ದೇಶದ ಮೂಲೆ ಮೂಲೆಗಳಲ್ಲಿ ಒದಗಿಸಬೇಕು. ಕ್ರೀಡೆಗಳಲ್ಲಿ ಪ್ರತಿಭಾವಂತರಿಗೆ ಅವರ ಭವಿಷ್ಯದ ಉಪಜೀವನದ ಬಗ್ಗೆ ಯೋಚನೆ ಮಾಡದಂತೆ ತಕ್ಕ ಯೋಜನೆಗಳನ್ನು ರೂಪಿಸಬೇಕು. ಹೀಗಾದಾಗ ಮಾತ್ರ ನಮ್ಮ ಕ್ರೀಡಾ ಪಟುಗಳು ಓಲಿಂಪಿಕ್ಸ್ ಮಟ್ಟದಲ್ಲಿ ಪದಕ ಪಡೆಯುವ ಮಟ್ಟವನ್ನು ತಲುಪುತ್ತಾರೆ. ಇಲ್ಲದಿದ್ದರೆ ಓಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಕೆಳಗಿನ ಸ್ಥಾನಕ್ಕೇ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.

English summary
Stupendous performance by young Indian Sports people at Commonwealth Games. They have made all the Indians all over the world proud. If Indian government provides more facilities, coaches, training, India can go several miles, writes Vasant Kulkarni from Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X