ದುರ್ಯೋಧನನ ಹೆಸರು ಕೇಳುತ್ತಿದ್ದಂತೆ ಆತನ ಕಣ್ಣಲ್ಲಿ ನೀರು ಬಂದಿದ್ದೇಕೆ?

By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ಅದೊಂದು ಊರು. ಅಲ್ಲೊಂದು ಭವ್ಯ ಗುಡಿ. ಗುಡಿಯಲ್ಲಿ ಅಂದು ಅನ್ನ ಸಂತರ್ಪಣೆ. ಸುತ್ತ ಮುತ್ತಲ ಪ್ರದೇಶಗಳಿಂದ ದೇವರ ಪ್ರಸಾದಕ್ಕೆಂದು ಸಾವಿರಾರು ಜನರ ಆಗಮನ. ದೊಡ್ಡ ಪಂಕ್ತಿಯಲ್ಲಿ ಕುಳ್ಳಿರಿಸಿ ಜನರಿಗೆ ಊಟ ಬಡಿಸುತ್ತಿದ್ದರು. ಪಂಕ್ತಿಯೊಂದರಲ್ಲಿ ತನ್ನ ಚಿಕ್ಕ ಮಗುವನ್ನು ಬದಿಗೆ ಕೂಡಿಸಿಕೊಂಡು ಊಟಮಾಡಿಸುತ್ತಿದ್ದ ತಾಯಿಯೊಬ್ಬಳಿಗೆ ಊಟ ಮಾಡೆನೆಂದು ಹಟ ಮಾಡುತ್ತಿದ್ದ ಮಗು ಕಿರಿಕಿರಿಯುಂಟುಮಾಡುತ್ತಿತ್ತು.

ಅಂತಹ ಜನಸ್ತೋಮದಲ್ಲಿ ಹೇಗಾದರೂ ಮಾಡಿ ದೇವರ ಪ್ರಸಾದ ಮಗುವಿನ ಹೊಟ್ಟೆಗೆ ಬೀಳಲಿ ಎಂದು ಆಶಿಸಿದ್ದ ತಾಯಿಗೆ ಮಗುವಿನ ಹಟದಿಂದ ಸಂಕಟ. ಎಷ್ಟು ತಿಳಿ ಹೇಳಿದರೂ ಮಗು ಹಟ ಬಿಡಲಿಲ್ಲ ಮತ್ತು ಒಂದು ತುತ್ತನ್ನೂ ಉಣ್ಣಲಿಲ್ಲ. ದೇವರ ಪ್ರಸಾದವನ್ನು ತಿರಸ್ಕರಿಸಿದ ಮಗುವಿನ ತಾಯಿಗೆ ಭಯದ ಜೊತೆಗೆ ಮಗು ಹಸಿವಾದರೂ ಉಣ್ಣುತ್ತಿಲ್ಲ ಎಂಬ ಸಂಕಟ. ಆಗ ತಾಯಿ ಮಗುವಿಗೆ "ಹಟದಲ್ಲಿ ದುರ್ಯೋಧನನನ್ನು ಮೀರಿಸಿದವನು" ಎಂದು ಪರಿತಾಪದಿಂದ ಬೈಯುತ್ತಾಳೆ.

ಅಲ್ಲಿಯವರೆಗೂ ಏನೂ ಪ್ರತಿಕ್ರಿಯೆ ತೋರದೇ ಪಕ್ಕದಲ್ಲೇ ಕುಳಿತು ಉಣ್ಣುತ್ತಿದ್ದ ಅಜಾನುಬಾಹು ವ್ಯಕ್ತಿಯೊಬ್ಬ ಈ ಮಾತನ್ನು ಕೇಳಿಸಿಕೊಂಡಾಗ ಅವನ ಕಣ್ಣಲ್ಲಿ ನೀರು ಉಕ್ಕಿದವಂತೆ. ಅಂತಹ ದೊಡ್ಡ ಪಂಕ್ತಿಯೂಟದಲ್ಲಿ ಇದನ್ನು ಬೇರಾರು ಗಮನಿಸಿರಲಿಕ್ಕಿಲ್ಲ. ಆದರೆ ಮುಂದಿನ ಸಾಲಿನಲ್ಲಿ ಕುಳಿತು ಉಣ್ಣುತ್ತಿದ್ದ ತರುಣನೊಬ್ಬ ಇದನ್ನು ಗಮನಿಸಿ ಆಶ್ಚರ್ಯ ಪಟ್ಟ.

ಊಟ ಮುಗಿದ ತಕ್ಷಣ ತರುಣ, ಆ ವ್ಯಕ್ತಿಯನ್ನು ಹಿಂಬಾಲಿಸಿ ಕೇಳಿದನಂತೆ. "ಆ ತಾಯಿ ತನ್ನ ಮಗುವನ್ನು ದುರ್ಯೋಧನನನ್ನು ಮೀರಿಸಿದವನು ಎಂದು ಬೈದಾಗ ನಿಮಗೇಕೆ ದುಃಖವಾಯಿತು? ನಿಮಗೇನು ಸಂಬಂಧ?" ಎಂದಾಗ "ಏನೂ ಸಂಬಂಧವಿಲ್ಲ, ಹಾಗೆಯೇ ಏನೋ ನೆನಪಾಗಿ ಕಣ್ಣಲ್ಲಿ ನೀರು ಬಂತು" ಎಂದು ಹೇಳಿದರಂತೆ. ತರುಣನಿಗೆ ಸಮಾಧಾನವಾಗಲಿಲ್ಲ. ಮತ್ತೆ ಮತ್ತೆ ಕೇಳಿದಾಗ ಆ ಅಜಾನುಬಾಹು ವ್ಯಕ್ತಿ "ದುರ್ಯೋಧನನನ್ನು ಕುರಿತು ಹೀಗಂದಿದ್ದಕ್ಕೆ ನನಗೆ ಸಂಕಟವಾಯಿತು. ಅವನೆಂತಹವನೇ ಆದರೂ ನನಗೆ ಆತ್ಮೀಯ ಮಿತ್ರನಾಗಿದ್ದ. ನಾನು ಅಶ್ವತ್ಥಾಮ" ಎಂದು ಹೇಳಿದರಂತೆ. [ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯ ತರುವೆನು]

ತರುಣನಿಗೋ ಆಶ್ಚರ್ಯ. ಸಾವಿರಾರು ವರ್ಷಗಳ ಹಿಂದಿನ ಮಹಾಭಾರತದ ಅಶ್ವತ್ಥಾಮ ಕರ್ನಾಟಕದ ಈ ಊರಿನಲ್ಲಿ ಹೇಗೇ? ಅವನ ಅಚ್ಚರಿಯನ್ನು ತಿಳಿದವರಂತೆ ಅಶ್ವತ್ಥಾಮ ಆ ತರುಣನಿಗೆ ತಮ್ಮ ಚಿರಂಜೀವತ್ವವನ್ನು ನೆನಪಿಸಿ, ಇಲ್ಲಿಯವರೆಗೆ ಯಾರೂ ತಮ್ಮನ್ನು ಮಾತನಾಡಿಸಿದ್ದಿಲ್ಲ. ಈ ತರುಣ ಮಾತನಾಡಿಸಿದ್ದು ಆಕಸ್ಮಿಕವಲ್ಲ. ಯಾವುದೋ ದೊಡ್ಡ ಕೆಲಸ ಈ ತರುಣನಿಂದಾಗುವುದಿದೆ ಎಂದು ಅವನಿಗೆ ಹೇಳಿ, ಆ ಕೆಲಸ ಅವನಿಂದ ಸಮರ್ಪಕವಾಗಿ ನಡೆಯಲಿ ಎಂದು ಆಶೀರ್ವದಿಸಿದರಂತೆ. ಆ ತರುಣ ತಾನು ಮಹಾಭಾರತವನ್ನು ಕನ್ನಡದಲ್ಲಿ ಬರೆಯುವ ಸಂಕಲ್ಪ ಮಾಡಿದ್ದೇನೆ ಎಂದು ತಿಳಿಸಿದಾಗ, ಮಹಾಭಾರತದ ಕಥೆಯನ್ನು ತೀರ ಹತ್ತಿರದಿಂದ ಬಲ್ಲ ಅವರು ಆ ತರುಣನಿಗೆ ವಿಸ್ತಾರವಾಗಿ ಕಣ್ಣ ಮುಂದೆಯೇ ನಡೆದಂತೆ ಹೇಳಿದರಂತೆ.

ಆ ಊರು ಶೂರ್ಪಾಲಿ, ಈ ಗುಡಿ ಅಲ್ಲಿನ ನರಸಿಂಹ ದೇವಸ್ಥಾನ ಮತ್ತು ಆ ತರುಣ ಗದುಗಿನ ಹತ್ತಿರದ ಕೋಳಿವಾಡದ ಕರ್ಣಿಕ ನಾರಾಯಣಪ್ಪ. ಅಶ್ವತ್ಥಾಮಾಚಾರ್ಯರ ಆಶೀರ್ವಾದ ಪಡೆದ ನಂತರ ಮುಂದೆ ಕನ್ನಡ ಮೇರು ಕೃತಿ "ಕರ್ನಾಟ ಭಾರತ ಕಥಾ ಮಂಜರಿ" ಅಥವಾ ಗದುಗಿನ ಭಾರತವನ್ನು ಬರೆದು ಕನ್ನಡದ ಇತಿಹಾಸದಲ್ಲಿ ಕುಮಾರವ್ಯಾಸ ಎಂಬ ಹೆಸರಿನಿಂದ ಅಮರನಾದ.

ನಾನು ಚಿಕ್ಕವನಿದ್ದಾಗ ಕೇಳಿದ ಕಥೆ ಇದು. ಕನ್ನಡದ ಮಹಾನ್ ಕಾವ್ಯ ಕಥೆಯಾದ ಗದುಗಿನ ಭಾರತ ಮತ್ತು ಅದರ ಕರ್ತೃ ನಾರಣಪ್ಪನ ಮೇಲೆ ಹುಟ್ಟಿಕೊಂಡ ಅನೇಕ ದಂತ ಕಥೆಗಳಲ್ಲಿ ಇದೂ ಒಂದಿರಬಹುದು. ಅತ್ಯಂತ ಜನಪ್ರಿಯಗೊಂಡು, ಜನರ ಉಪಾಸನೆಯ ಸಾಧನವಾದ ಈ ಕೃತಿಯನ್ನು ಕುರಿತು ಕುವೆಂಪು ಹಾಡಿದ್ದು ಹೀಗಿದೆ: [ಕನ್ನಡ ಸಾಹಿತಿಗಳ ಅಲಿಯಾಸ್ ಹೆಸರು ಕಾವ್ಯನಾಮಗಳ್]

ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿವುದು, ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು

ಕುಮಾರವ್ಯಾಸ ಭಾರತವನ್ನು ಬರೆದದ್ದು ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಎಂದು ಹೇಳಲಾಗುತ್ತದೆ. ಮತ್ತೊಂದು ದಂತಕಥೆಯ ಪ್ರಕಾರ, ಸಾಕ್ಷಾತ್ ವೀರನಾರಾಯಣ ದೇವರೇ ಹೇಳಿದ್ದನ್ನು ಕುಮಾರವ್ಯಾಸ ಕನ್ನಡದಲ್ಲಿ ಕಾವ್ಯರೂಪದಲ್ಲಿ ಬರೆದನಂತೆ. ವೀರನಾರಾಯಣನೇ ಕನಸಿನಲ್ಲಿ ಬಂದು "ಗುಡಿಯಲ್ಲಿ ಒಂದು ಕಂಬದ ಕೆಳಗೆ ಕುಳಿತು ಬರೆಯಲು ಅನುವಾದಾಗ ನಿನಗೆ ಒಂದು ಧ್ವನಿ ಕೇಳಿಸುತ್ತದೆ. ಅದು ಕಥೆಯನ್ನು ಹೇಳುತ್ತದೆ. ಅದನ್ನು ಹಾಗೆಯೇ ನೀನು ಕನ್ನಡದಲ್ಲಿ ಕಾವ್ಯರೂಪದಲ್ಲಿ ಬರೆಯುತ್ತ ಹೋಗಬೇಕು, ಆದರೆ ಈ ಧ್ವನಿ ಎಲ್ಲಿಂದ ಬರುತ್ತದೆ ಎಂಬ ಕೆಟ್ಟ ಕುತೂಹಲಕ್ಕೆ ಒಳಗಾಗಿ ಪರೀಕ್ಷಿಸಲು ಬರಬಾರದು" ಎಂದು ಕರಾರನ್ನು ಹಾಕಿದನಂತೆ. ಇದಕ್ಕೆ ಒಪ್ಪಿಕೊಂಡ ಕುಮಾರವ್ಯಾಸ ಅದರಂತೆಯೇ ನಡೆದನಂತೆ.

ದೇವರೇ ಹೇಳಿದ ಕಥೆಯನ್ನು ಕನ್ನಡದಲ್ಲಿ ಭಾಮಿನಿ ಷಟ್ಪದಿಯಲ್ಲಿ ಬರೆದನಂತೆ. ಆದರೆ ಅವನು ಬರೆದದ್ದು ಕೇವಲ ಹತ್ತುಪರ್ವಗಳನ್ನು ಮಾತ್ರ. ಉಳಿದ ಎಂಟು ಪರ್ವಗಳನ್ನು ಬರೆಯಲಿಲ್ಲ. ಗದಾಯುದ್ಧದ ನಂತರ ಕುಮಾರವ್ಯಾಸನಿಗೆ ಕುತೂಹಲ ತಡೆಯಲಾಗಲಿಲ್ಲವಂತೆ. ನೋಡಲು ಹೋದ ನಾರಣಪ್ಪನಿಗೆ ವೀರನಾರಾಯಣ ದರ್ಶನವನ್ನೇನೋ ಕೊಟ್ಟ. ಆದರೆ ಕರಾರನ್ನು ಮುರಿದಿದ್ದರಿಂದ ಮುಂದಿನ ಕಥೆ ಹೇಳಲಿಲ್ಲ. ನಾರಣಪ್ಪನ ಕಾವ್ಯ ಸೆಲೆ ಬತ್ತಿ ಹೋಗಿ ಕನ್ನಡದ ಮೇರು ಕಾವ್ಯ ಅಲ್ಲಿಗೇ ಮುಗಿಯಿತಂತೆ.

ಒಟ್ಟಿನಲ್ಲಿ, ಕುಮಾರವ್ಯಾಸನ "ಕರ್ನಾಟ ಭಾರತ ಕಥಾ ಮಂಜರಿ" ಅಥವಾ ಗದುಗಿನ ಭಾರತ ಕನ್ನಡದ ಕಲಾ ಶ್ರೀಮಂತಿಕೆಯನ್ನು ಪ್ರತಿಧ್ವನಿಸುವ ಅಮೂಲ್ಯ ಕೃತಿ. ಕನ್ನಡ ಜನ ಮನದ ಸಂಸ್ಕೃತಿಯನ್ನು ಬೆಳಗಿದ ಅಪೂರ್ವ ಕೃತಿಗಳಲ್ಲಿ ಉಚ್ಚ ಸ್ಥಾನದಲ್ಲಿದೆ. ನಾವು ಚಿಕ್ಕವರಿದ್ದಾಗ ಈ ಕೃತಿಯನ್ನು ಕಲಿತದ್ದಕ್ಕಿಂತ ಹೆಚ್ಚು ಈ ಕೃತಿಯನ್ನು ಕುರಿತ ಕಥೆಗಳನ್ನು ಕೇಳಿದ್ದೇ ಹೆಚ್ಚು. ಕನ್ನಡ ಪಠ್ಯದಲ್ಲಿ ಎಷ್ಟು ಕಲಿತದ್ದೋ ಅಷ್ಟೇ. ಒಂದು ಕಾಲದಲ್ಲಿ ಭಾರತದ ಪಠಣ ಮನೆಮನೆಯಲ್ಲಿ ನಡೆಯುತ್ತಿತ್ತಂತೆ.

ಈಗಿನ ಸರ್ವಂ ಇಂಗ್ಲಿಷುಮಯಂ ಜಗತ್ತಿನಲ್ಲಿ ನಮ್ಮ ಕನ್ನಡ ಮತ್ತು ಅದರ ಅಮೂಲ್ಯ ರತ್ನಗಳ ಹೊಳಪಿಗೆ ಕುಂದು ಉಂಟಾಗಿದೆ. ನನ್ನ ಅನೇಕ ಕನ್ನಡ ಮಿತ್ರರು ಇಂಗ್ಲಿಷು ಮಾಧ್ಯಮದಲ್ಲಿ ಕಲಿತಿದ್ದುದರಿಂದ ಅವರಿಗೆ ಚಾರ್ಲ್ಸ್ ಡಿಕನ್ಸ್, ವರ್ಡ್ಸವರ್ತ್ ಮತ್ತು ಮಾರ್ಕ್ ಟ್ವೇನ್ ನಮ್ಮ ಕುಮಾರವ್ಯಾಸ, ಕುವೆಂಪು ಮತ್ತು ಬೇಂದ್ರೆಯವರಿಗಿಂತ ಹೆಚ್ಚು ಗೊತ್ತು. ಸ್ವಾತಂತ್ರ್ಯಾನಂತರದ ಎರಡು ಮೂರು ತಲೆಮಾರುಗಳ ಅನೇಕ ಕನ್ನಡಿಗರನ್ನು ನಮ್ಮ ಇಂಗ್ಲಿಷು ಮಾಧ್ಯಮದ ಹುಚ್ಚು ನಮ್ಮ ದೇಶದಲ್ಲೇ ವಿದೇಶೀಯರನ್ನಾಗಿ ಮಾರ್ಪಡಿಸಿದೆ. ಇನ್ನೂ ಕೆಲವರು ಮನೆಯ ಮಕ್ಕಳಿಗೆ ಇಂಗ್ಲಿಷು ಚೆನ್ನಾಗಿ ಬರಲೆಂದು ಮನೆಯಲ್ಲಿ ಕನ್ನಡ ಮಾತನಾಡುವುದನ್ನೇ ನಿಲ್ಲಿಸಿ ಕೇವಲ ಇಂಗ್ಲಿಷು ಮಾತನಾಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಇದು ಹುಚ್ಚಿನ ಅತಿರೇಕವೇ ಅಥವಾ ಸ್ವಂತಿಕೆಯ ದಿವಾಳಿಯೇ?

ಇದೇ ಜನವರಿ ತಿಂಗಳಿನಲ್ಲಿ ಕುಮಾರವ್ಯಾಸನ ಜಯಂತಿ ಬಂದು ಹೋಯಿತು. ಅದರ ನೆನಪು ಯಾರಿಗೂ ಬರದಿದ್ದುದು ವಿಷಾದಕರ. ಅವನ ಕೃತಿಯನ್ನಾದರೂ ಜನಪ್ರಿಯಗೊಳಿಸುವ ಕೆಲಸ ನಡೆಯುತ್ತಿದೆಯೋ ಗೊತ್ತಿಲ್ಲ. [ಕನ್ನಡ ಕಲಿತರೆ ಏನು ಲಾಭ ಎಂದು ಪ್ರಶ್ನೆ ಕೇಳುವವರಿಗೆ]

ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕಲಿಯಲಾಗಲಿ, ವಿದೇಶದಿಂದ ಬರುವ ಜ್ಞಾನವನ್ನು ಅರಿತುಕೊಳ್ಳಲು ಇಂಗ್ಲಿಷನ್ನು ಕಲಿಯುವದು ಮುಖ್ಯ. ಆದರೆ ಅದಕ್ಕಾಗಿ ಕನ್ನಡ ಕಲಿಯುವುದನ್ನೇ ನಿಲ್ಲಿಸಬೇಕೇ? ನಾನಿರುವ ಸಿಂಗಪುರದಲ್ಲಿ ಇಲ್ಲಿಯ ಸ್ಥಳೀಯ ಶಾಲೆಗಳಲ್ಲಿ ಇಂಗ್ಲಿಷಿನ ಜೊತೆ ಜೊತೆಗೆ ಮಾತೃಭಾಷೆಯನ್ನು ಕಲಿಯುವುದಕ್ಕೆ ಬಹಳ ಮಹತ್ವ ನೀಡಲಾಗುತ್ತದೆ. ಅಲ್ಲದೇ ಮಾತೃಭಾಷೆಯ ಮಟ್ಟ ಕೂಡ ಉಚ್ಚ ದರ್ಜೆಯದು. ನಮ್ಮ ಕರ್ನಾಟಕದಲ್ಲೇಕೆ ಹೀಗಾಗುತ್ತಿಲ್ಲ? ಇಂಗ್ಲಿಷಿನ ಜೊತೆ ಜೊತೆಗೆ ಕನ್ನಡ ಭಾಷೆಯ ಬೆಳವಣಿಗೆಗೆ ಪ್ರಾತಿನಿಧ್ಯ ನೀಡದಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಕುಮಾರವ್ಯಾಸ, ಲಕ್ಷ್ಮೀಶ, ರನ್ನ, ಪಂಪರ ಕಾವ್ಯಗಳು ನಮ್ಮ ಗತ ವೈಭವದ ಕುರುಹುಗಳಾಗಿ ಮಾತ್ರ ಉಳಿಯುತ್ತವೆ ಅಷ್ಟೇ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Why did that person shed tears when he heard about Duryodhana? Who is that person? An interesting anecdote from the pages of history of Karnataka by Vasant Kulkarni. He asks why no one remembered Kumaravyasa jayanti? What is the guarantee that present generation will study halegannada?
Please Wait while comments are loading...