ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಯೊಬ್ಬ ವಿದ್ಯಾರ್ಥಿ ಓದಲೇಬೇಕಾದ ಲೇಖನವಿದು

ಮಹಾನ್ ವ್ಯಕ್ತಿತ್ವಗಳು ತಮ್ಮ ಜೀವನದಲ್ಲಿ ಉಂಟಾಗುವ ಸೋಲಿನಿಂದ ಎದೆಗುಂದುವುದಿಲ್ಲ. ಬದಲಿಗೆ ಈ ಸೋಲುಗಳು ಅವರಿಗೆ ಗೆಲುವಿನ ಮೆಟ್ಟಿಲುಗಳಾಗಿ ಪರಿವರ್ತಿಸುತ್ತವೆ. ಅವರ ಈ "Never say die" ಎಂಬ ನಿಲುವಿನಿಂದಲೇ ಅವರಿಗೆ ಯಶಸ್ಸು ಒದಗಿ ಬರುತ್ತದೆ.

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಅದೊಂದು ಪ್ರಸಿದ್ಧ ವಿಶ್ವ ವಿದ್ಯಾಲಯ. ಅದರ ಚಲನಚಿತ್ರ ಕಲಾ ವಿಭಾಗದಲ್ಲಿ ಕಲಿಯುವುದು ಜಗತ್ತಿನ ಅನೇಕ ಪ್ರತಿಭಾವಂತ ಕಲಾ ವಿದ್ಯಾರ್ಥಿಗಳ ಕನಸಾಗಿತ್ತು. ಆ ಹುಡುಗ ಅಲ್ಲಿ ತನ್ನ ಅರ್ಜಿಯನ್ನು ಅಳುಕುತ್ತಲೇ ಸಲ್ಲಿಸಿದ. ಹುಡುಗನ ಅರ್ಜಿಯನ್ನು ನೋಡಿದ ಅಲ್ಲಿನ ದಾಖಲಾತಿ ಅಧಿಕಾರಿ ನಕ್ಕು ಬಿಟ್ಟ. ಹೈಸ್ಕೂಲಿನಲ್ಲಿ ಕೇವಲ "ಸಿ" ದರ್ಜೆಯನ್ನು ಪಡೆದು ಇಂತಹ ವಿಶ್ವವಿಖ್ಯಾತ ವಿದ್ಯಾಲಯದಲ್ಲಿ ದಾಖಲಾತಿ ಬಯಸುವುದು ಮೂರ್ಖತನವಲ್ಲವೇ?

ಆ ಅರ್ಜಿಯನ್ನು ನಿರಾಕರಿಸಿದ ಪತ್ರವನ್ನು ವಿದ್ಯಾರ್ಥಿಗೆ ಕಳುಹಿಸಿದ. ಮತ್ತೆ ಕೆಲವು ದಿನಗಳಲ್ಲಿ ಅದೇ ವಿದ್ಯಾರ್ಥಿಯ ಇನ್ನೊಂದು ಅರ್ಜಿ ಅವನ ಕೈ ಸೇರಿತು. ದಾಖಲಾತಿ ಅಧಿಕಾರಿಗೆ ಸ್ವಲ್ಪ ಆಶ್ಚರ್ಯವಾಯಿತು. ಕಳೆದ ಬಾರಿ ನಿರಾಕರಿಸಿದ್ದರೂ ಈ ಬಾರಿ ಮತ್ತೆ ಏಕೆ ಈ ಹುಡುಗ ಅರ್ಜಿ ಸಲ್ಲಿಸಿದ್ದಾನೆ ಎಂದು ಬೇಸರವೂ ಆಯಿತು. ಬೇಸರದಿಂದಲೇ ನಿರಾಕರಣೆಯ ಇನ್ನೊಂದು ಪತ್ರವನ್ನು ವಿದ್ಯಾರ್ಥಿಗೆ ಕಳುಹಿಸಿ ಕೊಟ್ಟ.

Steven Spielberg's inspiring success story

ಮತ್ತೆ ಸ್ವಲ್ಪ ದಿನಗಳಲ್ಲಿ ಅದೇ ಹುಡುಗನಿಂದ ಮತ್ತೊಂದು ಅರ್ಜಿ ಬಂದಾಗ ದಾಖಲಾತಿ ಅಧಿಕಾರಿಗೆ ಕೋಪ ಬಂದಿತು. ಈ ಬಾರಿ ಆತ ಹುಡುಗನಿಗೆ ಅವನು ಪಡೆದ "ಸಿ" ದರ್ಜೆಯನ್ನು ನೆನಪಿಸಿ ಅದರೊಂದಿಗೆ ತಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಮಹತ್ವವನ್ನು ಒತ್ತಿ ಹೇಳಿ, "ಸಿ" ದರ್ಜೆಯನ್ನು ಪಡೆದ ದಡ್ಡರಿಗೆ ತಮ್ಮ ಪ್ರಖ್ಯಾತ ವಿಶ್ವ ವಿದ್ಯಾಲಯದಲ್ಲಿ ಸ್ಥಾನವಿಲ್ಲ ಎಂದು ಪರೋಕ್ಷವಾಗಿ ಬಿಂಬಿಸಿದ. ಆ ನಂತರ ಆ ಹುಡುಗ ಮತ್ತೆ ಅರ್ಜಿಯನ್ನು ಸಲ್ಲಿಸುವುದನ್ನು ನಿಲ್ಲಿಸಿದ. ಕೆಲ ದಿನಗಳ ಮೇಲೆ ದಾಖಲಾತಿ ಅಧಿಕಾರಿಗೆ ಈ ವಿಷಯ ಮರೆತು ಹೋಯಿತು.

ಅನೇಕ ವರ್ಷಗಳ ನಂತರ ಒಮ್ಮೆ ಈ ಕರ್ತವ್ಯನಿಷ್ಠ ದಾಖಲಾತಿ ಅಧಿಕಾರಿಗೆ ವಿಶ್ವವಿದ್ಯಾಲಯದ ಕುಲಪತಿಗಳಿಂದ ಕರೆ ಬಂದಿತು. ಆ ರೀತಿ ಎಂದೂ ಅವನಿಗೆ ಕುಲಪತಿಗಳಿಂದ ಕರೆ ಬಂದಿರಲಿಲ್ಲ. ಸ್ವಲ್ಪ ಅಳುಕಿನಿಂದಲೇ ಅವರ ಹತ್ತಿರ ಲಗುಬಗೆಯಿಂದ ಹೋದ ಅವನಿಗೆ ಆಶ್ಚರ್ಯ ಕಾದಿತ್ತು. ಕುಲಪತಿಗಳು ಅವನಿಗೆ ಒಂದು ಗೌರವ ಪದವಿಯ ಮೇಲೆ ಹಸ್ತಾಕ್ಷರ ಮಾಡಲು ಹೇಳಿದರು. ಗೌರವ ಪದವಿಯ ಮೇಲೆ ಸಾಮಾನ್ಯವಾಗಿ ಕುಲಪತಿಗಳ ಹಸ್ತಾಕ್ಷರವಿರುತ್ತದೆ. ಅದರ ಬದಲಿಗೆ ಕೇವಲ ದಾಖಲಾತಿ ಅಧಿಕಾರಿಯಾದ ತನ್ನ ಹಸ್ತಾಕ್ಷರವೇಕೆ ಎಂದು ಕೇಳಿದಾಗ ಕುಲಪತಿಗಳು, ಪದವಿಯ ಪಡೆಯುವ ಮಹಾನ್ ವ್ಯಕ್ತಿಯೇ ಈ ದಾಖಲಾತಿ ಅಧಿಕಾರಿಯ ಹಸ್ತಾಕ್ಷರವಿದ್ದರೇ ಮಾತ್ರ ತಾನು ಪದವಿ ಸ್ವೀಕರಿಸುವುದಾಗಿ ಹೇಳಿದ್ದರಂತೆ.

Steven Spielberg's inspiring success story

ವಿಶ್ವವಿದ್ಯಾಲಯಕ್ಕೆ ಅಂತಹ ಮಹಾನ್ ವ್ಯಕ್ತಿಗೆ ಗೌರವ ಪದವಿ ಕೊಡುವ ಅವಕಾಶವನ್ನು ತಪ್ಪಿಸಿಕೊಳ್ಳಲು ಸುತರಾಂ ಇಷ್ಟವಿರಲಿಲ್ಲ. ಆದುದರಿಂದ ಈ ವಿಚಿತ್ರವಾದ ಶರತ್ತಿಗೆ ಒಪ್ಪಿಕೊಂಡಿದ್ದರು. ಆ ವಿಶ್ವ ವಿಖ್ಯಾತ ವ್ಯಕ್ತಿಗೂ ತಮಗೂ ಏನು ಸಂಬಂಧವೆಂದು ಅರ್ಥವಾಗದ ಆ ದಾಖಲಾತಿ ಅಧಿಕಾರಿ ಸ್ವಲ್ಪ ಅಚ್ಚರಿಯಿಂದಲೇ ಪದವಿಯ ಮೇಲೆ ಹಸ್ತಾಕ್ಷರ ಮಾಡಿದ್ದರು.

ನಂತರ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತ ಆ ವಿಶ್ವ ವಿಖ್ಯಾತ ವ್ಯಕ್ತಿ ಅನೇಕ ವರ್ಷಗಳ ಹಿಂದೆ ತಾವು ಮೂರು ಬಾರಿ ಈ ವಿಶ್ವ ವಿದ್ಯಾಲಯಕ್ಕೆ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದರೂ, ತಮ್ಮ "ಸಿ" ದರ್ಜೆಯಿಂದಾಗಿ ಇಲ್ಲಿ ಪ್ರವೇಶ ಪಡೆಯಲಾಗಲಿಲ್ಲ. ಆದುದರಿಂದಲೇ ತಮ್ಮಲ್ಲಿ ಒಂದು ಬಗೆಯ ಛಲ ಹುಟ್ಟಿತು. ತಮ್ಮ ವೃತ್ತಿಯಲ್ಲಿ ನಿಪುಣತೆ ಗಳಿಸಿ ವಿಶ್ವಖ್ಯಾತಿ ಪಡೆಯಲು ಈ ಪ್ರಸಂಗ ಪ್ರೇರಣೆಯಾಯಿತು. ಈಗ ಅದೇ ವಿಶ್ವವಿದ್ಯಾಲಯ ತಮಗೆ ಗೌರವ ಪದವಿ ನೀಡುವಂತೆ ಆಯಿತು. ಆದುದರಿಂದ ತಮಗೆ ಪ್ರವೇಶ ನಿರಾಕರಿಸಿದ ಅಧಿಕಾರಿಯಿಂದಲೇ ಇಷ್ಟೆಲ್ಲಾ ಆಗಿದ್ದರಿಂದ ಅವರಿಂದಲೇ ಪದವಿ ಪಡೆಯುವ ಇಚ್ಛೆ ಉಂಟಾಯಿತು ಎಂದು ಹೇಳಿದರು.

Steven Spielberg's inspiring success story

ಆ ವಿಶ್ವ ವಿಖ್ಯಾತ ವ್ಯಕ್ತಿ ಚಲನಚಿತ್ರ ದಿಗ್ದರ್ಶಕ ಸ್ಟೀವನ್ ಸ್ಪೀಲ್‍ಬರ್ಗ್. Jaws, ET (Extra-terrestrial), Indiana Jones series, Jurassic Park, Schindler's List ಮತ್ತು ಇನ್ನೂ ಅನೇಕ ಮಹಾನ್ ಚಿತ್ರಗಳನ್ನು ನಿರ್ದೇಶಿಸಿದ ಸ್ಟೀವನ್ ಸ್ಪೀಲ್‍ಬರ್ಗಗೆ ಒಂದು ಕಾಲದಲ್ಲಿ ತಮಗೆ ಬೇಕಾದ ವಿಶ್ವ ವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ ಎಂದರೆ ನಂಬಲಾಗುತ್ತದೆಯೇ? ಆದರೂ ಇದು ಸತ್ಯವಾದ ಅಂಶ. ಈ ಘಟನೆಯಿಂದ ತಿಳಿದು ಬರುವ ಮುಖ್ಯ ಅಂಶವೇನೆಂದರೆ, ಮಹಾನ್ ವ್ಯಕ್ತಿತ್ವಗಳು ತಮ್ಮ ಜೀವನದಲ್ಲಿ ಉಂಟಾಗುವ ಸೋಲಿನಿಂದ ಎದೆಗುಂದುವುದಿಲ್ಲ. ಬದಲಿಗೆ ಈ ಸೋಲುಗಳು ಅವರಿಗೆ ಗೆಲುವಿನ ಮೆಟ್ಟಿಲುಗಳಾಗಿ ಪರಿವರ್ತಿಸುತ್ತವೆ. ಅವರ ಈ "Never say die" ಎಂಬ ನಿಲುವಿನಿಂದಲೇ ಅವರಿಗೆ ಯಶಸ್ಸು ಒದಗಿ ಬರುತ್ತದೆ ಎನ್ನುವುದು ನಿತ್ಯ ಸತ್ಯ.

ಮಾರ್ಚ್, ಏಪ್ರಿಲ್ ತಿಂಗಳುಗಳು ಪರೀಕ್ಷಾ ತಿಂಗಳುಗಳು. ಇನ್ನು ಕೆಲವೇ ದಿನಗಳಲ್ಲಿ 10ನೆಯ ಮತ್ತು 12ನೇ ತರಗತಿಯವರಿಗೆ ಪರೀಕ್ಷೆಗಳು ಶುರುವಾಗುವುದುಂಟು. ಪರೀಕ್ಷೆ ಹತ್ತಿರ ಬಂದಂತೆ ವಿದ್ಯಾರ್ಥಿಗಳಿಗೆ ಆತಂಕ, ಸೋಲಿನ ಭಯ ಮತ್ತು ತಮ್ಮ ಸಾಮರ್ಥ್ಯದ ಮೇಲೆ ಅನುಮಾನ ಪಡುವುದು ಇತ್ಯಾದಿ ಋಣಾತ್ಮಕ ಭಾವನೆಗಳು ಬರುವುದುಂಟು. ಅಂತಹ ವಿದ್ಯಾರ್ಥಿಗಳು ಸ್ಟೀವನ್ ಸ್ಪೀಲ್‍ಬರ್ಗರ ಜೀವನದ ಈ ಘಟನೆಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು.

ಅವರಂತಹ ಮಹಾನ್ ವ್ಯಕ್ತಿ ಕೂಡ ಆರಂಭದಲ್ಲಿ ಸೋಲನ್ನು ಅನುಭವಿಸಿದರು. ಆದರೆ ಅಳುಕದೇ ಗುರಿಯತ್ತ ನುಗ್ಗಿ ಜೀವನದ ಮುಂದಿನ ಎಲ್ಲ ಪರೀಕ್ಷೆಗಳಲ್ಲಿ ವಿಜಯ ಸಂಪಾದಿಸಿದರು. ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯದ ಮೇಲೆ ಅಥವಾ ತಮ್ಮ ಕಠಿಣ ಪರಿಶ್ರಮದ ಮೇಲೆ ಅವರಿಗೆ ಸಂಶಯ ಉಂಟಾಗಲಿಲ್ಲ. ಆದುದರಿಂದಲೇ ಅವರು ಜಗತ್ತು ಕಂಡ ಒಬ್ಬ ಮಹಾನ್ ಚಲನಚಿತ್ರ ನಿರ್ದೇಶಕರಾಗಿ ಹೊರಹೊಮ್ಮಿದ್ದು. ಸೋಲಿನ ಭಯದಿಂದ ವಿದ್ಯಾರ್ಥಿಗಳು ಮುಕ್ತರಾಗಬೇಕು. ಎಷ್ಟೋ ಬಾರಿ ಸೋಲು ಗೆಲುವಿನ ದಾರಿಯನ್ನು ತೋರಿಸುವ ದಾರಿದೀಪವಾಗುತ್ತದೆ.

Steven Spielberg's inspiring success story

ಮುಖ್ಯವಾಗಿ ಎಲ್ಲ ವಿದ್ಯಾರ್ಥಿಗಳು ನೆನಪಿಡಬೇಕಾದ ಅಂಶವೆಂದರೆ, ಎಲ್ಲರಿಗೂ ತಮ್ಮದೇ ಆದ ವಿಷಯದಲ್ಲಿ ಆಸಕ್ತಿ, ಪ್ರತಿಭೆ ಮತ್ತು ಪರಿಣಿತಿ ಹೊಂದುವ ಸಾಮರ್ಥ್ಯವಿರುತ್ತದೆ. ಅವರದೇ ಆದ ಅಭ್ಯಾಸಕ್ರಮವಿರುತ್ತದೆ. ಅದಕ್ಕೆ ಅವರು ತಮ್ಮನ್ನು ತಾವು ಇತರರೊಂದಿಗೆ ಹೋಲಿಸಿ ಕೀಳರಿಮೆ ಬೆಳೆಸಿಕೊಳ್ಳುವುದು ತಪ್ಪು ಎಂಬ ಅರಿವು ಉಂಟಾಗಬೇಕು. ಕೆಲವರು ತಮಗಿಂತ ಹೆಚ್ಚು ಅಂಕಗಳನ್ನು ಗಳಿಸಿದರೆ ತಮ್ಮನ್ನು ತಾವು ಕಡಿಮೆ ಎಂದು ಭಾವಿಸಿಕೊಳ್ಳಬಾರದು.

ನಮ್ಮಲ್ಲಿ ಪ್ರಚಲಿತವಿರುವ ಪರೀಕ್ಷೆಗಳು ಕೆಲವು ವಿಷಯಗಳಿಗೆ ಮಾತ್ರ ಸೀಮಿತವಿರುತ್ತವೆ. ಅವು ನಮ್ಮ ಸರ್ವತೋಮುಖ ಪ್ರತಿಭೆಗಳನ್ನು ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಒರೆಗೆ ಹಚ್ಚುವ ಪರೀಕ್ಷೆಗಳಲ್ಲ. ಪ್ರತಿಭೆ, ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮ ಎಂದಿಗೂ ಕೈಕೊಡುವುದಿಲ್ಲ. ಒಮ್ಮೆ ದುರಾದೃಷ್ಟವಶಾತ್ ಸೋಲನ್ನನುಭವಿಸಿದರೂ, ಕೊನೆಗೆ ಯಶಸ್ಸು ದೊರೆಯುವುದು ಇವುಗಳಿಂದಲೇ. ಎದೆಗುಂದದೇ ಯಾವುದೇ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿದರೆ ಈ ಗುಣಗಳು ಯಶಸ್ಸಿನ ಮೆಟ್ಟಿಲು ಹತ್ತಿಸುತ್ತವೆ.

ಪರೀಕ್ಷೆಯ ಯಶಸ್ಸು ಜೀವನದ ಯಶಸ್ಸನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕು. ಶೈಕ್ಷಣಿಕ ಪರೀಕ್ಷೆ ಜೀವನದುದ್ದಕ್ಕೂ ಬರುವ ಅನೇಕ ಪರೀಕ್ಷೆಗಳ ಪೀಠಿಕೆಯಷ್ಟೇ. ಶುರುವಾಗಬೇಕಾಗಿರುವ ಮ್ಯಾರಥಾನ್‍ನ ಮೊದಲ ಹೆಜ್ಜೆಯಷ್ಟೇ. ಆರಂಭದಲ್ಲಿ ಉಂಟಾಗುವ ಸೋಲಿಗೆ ಎದೆಗುಂದಿ ಕಂಗೆಟ್ಟರೆ, ಜೀವನವೆಂಬ ಈ ಮ್ಯಾರಥಾನ್‍ಅನ್ನು ಯಶಸ್ವಿಯಾಗಿ ಮುಗಿಸುವುದು ಹೇಗೆ? ಆರಂಭದ ಹೆಜ್ಜೆಗಳು ತೊಡರಿದರೂ, ದಿಟ್ಟತನದಿಂದ ಮುಂದುವರೆದರೆ ಮಾತ್ರ ಗುರಿಯನ್ನು ತಲುಪಬಹುದು ಅಲ್ಲವೇ?

English summary
Hollywood director Steven Spielberg's inspiring success story. He was rejected entry into university for his poor marks. But, with dedication and determination he got entry into the university and excelled as an artist. Now, examinations are near students should not lose concentration and study hard to success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X