• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಗೆ ಸಾಧಿಸುವ ಪಾಕ್ ವಿರುದ್ಧ ಭಾರತ ಸ್ನೇಹಹಸ್ತ ಚಾಚಬೇಕೆ?

By ವಸಂತ ಕುಲಕರ್ಣಿ, ಸಿಂಗಪುರ
|

ನಾನು ಸಿಂಗಪುರಕ್ಕೆ ಬಂದ ಹೊಸತರಲ್ಲಿ ಒಮ್ಮೆ ನನ್ನ ಆಫೀಸಿನ ಹಿರಿಯ ಅಧಿಕಾರಿ(ಸಿಂಗಪುರದ ನಾಗರಿಕ)ಯೊಬ್ಬರು ತಮ್ಮ ಕಾರಿನಲ್ಲಿ ನನ್ನನ್ನು ಒಂದು ಕ್ಲೈಂಟ್ ಮೀಟಿಂಗಿಗೆ ಕರೆದೊಯ್ಯುತ್ತಿದ್ದರು. ಯಾವ ಕಾರಣಕ್ಕೋ ನಮ್ಮ ಮಾತುಕತೆ ಕಾಶ್ಮೀರದತ್ತ ಹೊರಳಿತು. ಭೂಮಿಯ ಮೇಲಿನ ಸ್ವರ್ಗ ಅದು ಎಂದು ಅವರು ಕೇಳಿದ್ದರು. ಕಾಶ್ಮೀರಕ್ಕೆ ಪ್ರವಾಸ ಹೋಗುವ ತಮ್ಮ ಆಸೆಯನ್ನು ಕುರಿತು ನನಗ ಹೇಳಿದಾಗ, ನಾನು ಅಲ್ಲಿಗೆ ಹೋಗಬೇಡಿ ಅದು ತುಂಬಾ ಅಪಾಯಕಾರಿ ಪ್ರದೇಶ, ಅದರ ಬದಲಿಗೆ ಹಿಮಾಚಲ ಪ್ರದೇಶದ ಕುಲು ಮನಾಲಿಗೋ ಅಥವಾ ಬಂಗಾಲದ ದಾರ್ಜೀಲಿಂಗ್ ಪ್ರದೇಶಕ್ಕೋ ಹೋಗಬಹುದು ಎಂಬ ಸಲಹೆ ನೀಡಿದೆ.

ಕಾಶ್ಮೀರದಲ್ಲಿನ ಅಂದಿನ ಅಪಾಯಕಾರಿ ಪರಿಸ್ಥಿತಿಯ ಬಗ್ಗೆ ಕೇಳಿದ್ದ ಅವರು ಭಯೋತ್ಪಾದನೆಯನ್ನು ಹತೋಟಿಯಲ್ಲಿಡುವ ಬಗ್ಗೆ ನನ್ನ ಅಭಿಪ್ರಾಯ ಏನು ಎಂದು ಕೇಳಿದರು. ಅನಿರೀಕ್ಷಿತವಾಗಿದ್ದ ಈ ಪ್ರಶ್ನೆಗೆ ತಡವರಿಸುತ್ತಲೇ ನಮ್ಮ ದೇಶದ ಭಯೋತ್ಪಾದನೆಗೆ ಪಕ್ಕದ ದೇಶದಿಂದ ಕುಮ್ಮಕ್ಕು ದೊರಕುತ್ತಿದೆ. ಆದುದರಿಂದ ಕಠಿಣ ಕ್ರಮದಿಂದ ಮಾತ್ರ ಅದನ್ನ ಹತ್ತಿಕ್ಕಬಹುದು ಎಂದು ಹೇಳಿದೆ.

ಕೋಟಿ ರೋಗಕ್ಕೆ ಮದ್ದಿರಬಹುದು, ಜಾತಿ ರೋಗಕ್ಕೆ ಔಷಧ ಇದೆಯಾ!

ಆಗ ಅವರು ನಗುತ್ತ, ಕಠಿಣ ಕ್ರಮಗಳ ಫಲಿತಾಂಶ ಯಾವಾಗಲೂ ತಾತ್ಕಾಲಿಕ. ಭಯೋತ್ಪಾದಕರು ಮತ್ತು ಅವರ ಒಡೆಯರನ್ನು ಮಾತುಕತೆಯ ಮೂಲಕ ಹೆಚ್ಚು ಹೆಚ್ಚು ಹೊತ್ತು ಮಗ್ನರಾಗಿರಿಸುವುದೇ ಉತ್ತಮ ಮಾರ್ಗ ಎಂದು ಹೇಳಿದರು. ಅದೆಷ್ಟು ದಿನ ಅವರನ್ನು ಹೀಗೆ ಮಗ್ನರಾಗಿರಿಸಬಹುದು? ಎಂದು ನಾನು ಕೇಳಿದಾಗ, ಅದೆಷ್ಟು ದಿನ ಸಾಧ್ಯವೋ ಅಷ್ಟು ದಿನ. ಹಿಂಸೆಯನ್ನು ಅದೆಷ್ಟು ದಿನ ಹತೋಟಿಯಲ್ಲಿಡಬಹುದೋ ಅಷ್ಟು ಒಳ್ಳೆಯದು ಎಂದರು.

ಎರಡೂ ದೇಶಗಳ ನಡುವೆ ಸ್ನೇಹ ಶಾಂತಿಗಳು ಉಂಟಾದರೆ ಪ್ರವಾಸೋದ್ಯಮ, ವ್ಯಾಪಾರ ಮುಂತಾದವು ವೃದ್ದಿಯಾಗಬಹುದಲ್ಲವೇ ಎಂದು ಹೇಳಿ, ದಕ್ಷಿಣ ಪೂರ್ವ ದೇಶಗಳ ನಡುವೆ ಅನೇಕ ಮನಸ್ತಾಪಗಳಿದ್ದರೂ, ಅವು ವ್ಯಾಪಾರ, ವ್ಯವಹಾರಗಳ ಮಧ್ಯೆ ಬರುವುದಿಲ್ಲ ಎಂದು ಉದಾಹರಣೆ ನೀಡಿದರು.

ನಾನು ಅಂದು ಮಾತು ಬೆಳೆಸಲಿಲ್ಲವಾದರೂ ಅವರ ಸಲಹೆ ನನಗೆ ಅಷ್ಟು ಹಿಡಿಸಿರಲಿಲ್ಲ. ಮನಸ್ಸಿನಲ್ಲಿಯೇ ನಮ್ಮ ದೇಶದ ಪರಿಸ್ಥಿತಿಯ ಬಗ್ಗೆ ತಿಳಿಯದವರು ಹೇಗೆ ಬೇಕೋ ಹಾಗೆ ಮಾತನಾಡಬಹುದು ಎನ್ನಿಸಿತಾದರೂ, ಅವರ ಮಾತಿನಲ್ಲಿ ಸತ್ಯಾಂಶ ಇದೆ ಎಂದೂ ಅನಿಸಿತು. ಆದರೆ ನಮ್ಮ ದೇಶದ ಇತಿಹಾಸದ ಅರಿವಿದ್ದ ನನಗೆ ಈ ಎರಡು ದೇಶಗಳ ನಡುವಿನ ಸ್ನೇಹದ ಬಗ್ಗೆ ಯೋಚಿಸುವುದು ಗಾಳಿ ಗೋಪುರವನ್ನು ಕಟ್ಟುವುದು ಎರಡೂ ಒಂದೇ ಎನಿಸಿತು.

ಪಾಕಿಸ್ತಾನ ಮತ್ತು ಕಾಶ್ಮೀರದ ವಿಚಾರದಲ್ಲಿ ಏಕಾಂಗಿಯಾಗಿದ್ದ ವಾಜಪೇಯಿ

ಅದಾದ ನಂತರ ಸುಮಾರು ಹದಿನೈದು ವರ್ಷಗಳು ಉರುಳಿವೆ. ಕಾಶ್ಮೀರದಲ್ಲಿ ನಮ್ಮ ಸರಕಾರ ಅನೇಕ ಬಗೆಯ ಪಟ್ಟುಗಳನ್ನು ಉಪಯೋಗಿಸಿ ನೋಡಿದೆ. ಕಾಶ್ಮೀರದ ಉಗ್ರವಾದಕ್ಕೆ ಪರೋಕ್ಷ ಕಾರಣವಾದ ಪಾಕಿಸ್ತಾನದ ಜೊತೆ ಸಂಬಂಧ ಸುಧಾರಿಸಲು ಅನೇಕ ಬಗೆಯ ತಿಪ್ಪರಲಾಗ ಹಾಕಿ ನೋಡಿದೆ. ಆದರೆ ಪ್ರತಿ ಬಾರಿ ಹಿನ್ನಡೆಯೇ ಕೈಗೆಟುಕಿದೆ. ಅಲ್ಲದೇ ಪ್ರತಿ ಬಾರಿ ಸಂಬಂಧ ಸುಧಾರಿಸುವ ಲಕ್ಷಣ ಕಂಡಾಗಲೆಲ್ಲ ಭಯೋತ್ಪಾದಕರು ಮತ್ತು ಅವರ ಪಾಕಿಸ್ತಾನಿ ಒಡೆಯರು ವಂಚನೆಯಿಂದ ಭಯೋತ್ಪಾದಕ ಕೃತ್ಯಗಳನ್ನು ಎಸಗಿ ಅದಕ್ಕೆ ಬ್ರೇಕ್ ಹಾಕಿದ್ದಾರೆ. ಪ್ರತಿ ಬಾರಿ ಒಂದು ಹೆಜ್ಜೆ ಮುಂದಿಟ್ಟು ಎರಡು ಹೆಜ್ಜೆ ಹಿಂದೆ ನಡೆಯುವ ಈ ಪ್ರಕ್ರಿಯೆಯಿಂದ ಬೇಸತ್ತ ನಮ್ಮ ದೇಶದ ಇಂದಿನ ಸರಕಾರ ಪಾಕಿಸ್ತಾನದ ಜೊತೆಗೆ ಯಾವುದೇ ಬಗೆಯ ಮಾತುಕತೆ ನಡೆಸುವ ಮುನ್ನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ಸಂಪೂರ್ಣ ನಿಲ್ಲಿಸುವ ಷರತ್ತನ್ನು ಹಾಕಿದೆ. ಸರಕಾರದ ಈ ಕಠಿಣ ಕ್ರಮ ಅನೇಕರ ಬೆಂಬಲ ಕೂಡಾ ಪಡೆದಿದೆ ಎನ್ನಿಸುತ್ತದೆ.

ನಾನು ಕೆಲವು ಬಾರಿ ನನ್ನಂತೆಯೇ ಹೊರ ದೇಶದಲ್ಲಿ ಕೆಲಸ ಮಾಡುವ ಪಾಕಿಸ್ತಾನಿ ಪ್ರಜೆಗಳನ್ನು ಭೇಟಿಯಾಗಿದ್ದೇನೆ. ಹೀಗೆ ಭೇಟಿಯಾದಾಗ ಅವರ ನಡವಳಿಕೆ ತುಂಬಾ ಗೌರವಪೂರ್ಣ ಮತ್ತು ಸ್ನೇಹಪೂರ್ಣವಾಗಿರುವುದನ್ನು ಕಂಡಿದ್ದೇನೆ. ಅನೇಕರು ಭಾರತೀಯರ ಜೊತೆ ಸೇರುವುದನ್ನು ಇಷ್ಟ ಪಡುವುದನ್ನೂ ನೋಡಿದ್ದೇನೆ. ನಾನು ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದಾಗ ಅಲ್ಲಿ ನನಗೊಬ್ಬ ಪಾಕಿಸ್ತಾನಿ ಟ್ಯಾಕ್ಸಿ ಡ್ರೈವರ್ ದೊರಕಿದ್ದ. ನಮ್ಮನ್ನು ಪ್ರೇಕ್ಷಣೀಯ ಸ್ಥಳಕ್ಕೆ ಕರೆದೊಯ್ಯುವಾಗ ಭಾರತ ಪಾಕಿಸ್ತಾನದ ನಡುವಿನ ವೈರತ್ವವನ್ನು ಕುರಿತು ತನ್ನ ಅಸಮಾಧಾನ ವ್ಯಕ್ತ ಪಡಿಸಿದ.

ಇಮ್ರಾನ್ ಪ್ರಧಾನಿಯಾಗುತ್ತಲೇ ಪಾಕ್ ಸರ್ಕಾರದ ಐತಿಹಾಸಿಕ ನಡೆ!

ಆಸ್ಟ್ರೇಲಿಯದಲ್ಲಿ ಭಾರತೀಯರು ಮತ್ತು ಪಾಕಿಸ್ತಾನಿಗಳು ಅನ್ಯೋನ್ಯರಾಗಿರುವುದನ್ನು ಉದಾಹರಣೆಯಾಗಿ ಕೊಡುತ್ತಾ, ಹೊರದೇಶದಲ್ಲಿ ಸ್ನೇಹಪೂರ್ಣರಾಗಿ ಬಾಳುವ ನಾವು ನಮ್ಮ ಪ್ರದೇಶದಲ್ಲಿಯೇ ಹಾಗೆ ಬಾಳಲು ಏಕೆ ಸಾಧ್ಯವಾಗುವುದಿಲ್ಲವೋ ಎಂದು ಖಿನ್ನನಾದ. ತಮ್ಮ ದೇಶದ ರಾಜಕಾರಣಿಗಳನ್ನು ಈ ಕಾರಣಕ್ಕಾಗಿ ದೂಷಿಸಿದ. ನಮ್ಮನ್ನು ಕೆಳಗೆ ಇಳಿಸುವಾಗ ನಮ್ಮಿಂದ ಹಣ ಪಡೆಯಲು ನಿರಾಕರಿಸಿದ. ನಾನೇ ಬಹಳ ಒತ್ತಾಯ ಮಾಡಿ ಹಣ ನೀಡಿದೆ.

ಅದೇ ರೀತಿಯಾಗಿ ಇಟಲಿಯಲ್ಲಿ ನನಗೆ ಭಾರತೀಯ ಮತ್ತು ಪಾಕಿಸ್ತಾನಿ ಮೂಲದ ವಿದ್ಯಾರ್ಥಿಗಳು ಸಿಕ್ಕರು. ಅವರು ಒಳ್ಳೇ ಸ್ನೇಹಿತರೆಂದು ತಿಳಿದ ಮೇಲೆ ಆಶ್ಚರ್ಯದೊಂದಿಗೆ ಸಂತೋಷವೂ ಆಯಿತು. ಈ ಎರಡೂ ಸಂದರ್ಭಗಳಲ್ಲಿ ನನಗೆ ನೆನಪಾದದ್ದು ನನ್ನ ಸಿಂಗಪುರದ ಹಿರಿಯ ಅಧಿಕಾರಿಯೊಂದಿಗಿನ ಆ ಮಾತು. ಆದರೂ ಅದರ ಜೊತೆಯೇ ಕೇವಲ ಧರ್ಮಾಂಧತೆಯ ಮೂಲಕ ವೈರತ್ವವನ್ನೇ ಉಳಿಸಿ ಬೆಳೆಸುವ ವಾತಾವರಣವನ್ನು ಸೃಷ್ಟಿಸಿಕೊಂಡ ನಮ್ಮ ದೇಶಗಳ ವಾಸ್ತವಿಕತೆ ಕೂಡ ನೆನಪಾಯಿತು.

ಇತ್ತೀಚೆಗೆ ಪಾಕಿಸ್ತಾನದಲ್ಲಿ ಕ್ರಿಕೆಟರ್ ಆಡಿ ಖ್ಯಾತಿ ಪಡೆದಿದ್ದ ಇಮ್ರಾನ್ ಖಾನ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯುತ್ತಲೇ ಅವರು ಭಾರತಕ್ಕೆ ಮತ್ತೆ ಮಾತುಕತೆ ಆರಂಭಿಸಿ ಶಾಂತಿ ಪ್ರಕ್ರಿಯೆಯನ್ನು ಮುಂದುವರೆಸಲು ಕೇಳಿಕೊಂಡಿದ್ದಾರೆ. ಇಮ್ರಾನ್ ಅವರ ಈ ಮಾತಿನಿಂದ ದೇಶದಲ್ಲಿನ ಅನೇಕ ಬುದ್ಧಿಜೀವಿಗಳಿಗೆ ಮತ್ತೆ ಜೀವ ಬಂದಂತಾಗಿ ಅದರ ಪರವಾಗಿ ಅನೇಕ ಶಬ್ದಗಳು ಏಳತೊಡಗಿವೆ. ಪಾಕಿಸ್ತಾನದ ಜೊತೆಗೆ Back channel diplomacy ಮತ್ತೆ ಶುರುವಾಗುವ ಲಕ್ಷಣಗಳು ಕಾಣುತ್ತಿವೆ.

ಈಗ ಆರ್ಥಿಕವಾಗಿ ತುಂಬಾ ದುರ್ಬಲವಾಗಿರುವ ಮತ್ತು ಸಾಲದ ಶೂಲೆಯಲ್ಲಿ ಸಿಲುಕಿರುವ ಪಾಕಿಸ್ತಾನವನ್ನು ರಕ್ಷಿಸಲು ಇಮ್ರಾನ್ ಖಾನ್ ಮತ್ತು ಅವರ ಮಿಲಿಟರಿ ಬಾಸ್‍ಗಳಿಗೆ ನಮ್ಮ ದೇಶದೊಂದಿಗೆ ಸಂಧಾನ ಒಂದು ಮಾರ್ಗವಾಗಿ ಕಂಡಿರಬಹುದು. ಆದರೆ ಹಿಂದೆ ಕೂಡಾ ಈ ತರಹದ ಅನೇಕ ಸಂದರ್ಭಗಳು ಉಂಟಾಗಿ ಸ್ನೇಹದ ಕೈ ಹಸ್ತ ಚಾಚಿದಾಗಲೆಲ್ಲ ಪಾಕಿಸ್ತಾನ ಪ್ರತಿ ಬಾರಿ ವಂಚನೆಯನ್ನೇ ಮಾಡಿದೆ ಎಂಬುದನ್ನು ನಮ್ಮ ದೇಶದ ಆಡಳಿತ ನೆನಪಿಟ್ಟುಕೊಳ್ಳಬೇಕು ಅಷ್ಟೆ.

ಇತಿಹಾಸವನ್ನು ಮರೆತವರು ಅದನ್ನು ಮತ್ತೆ ಪುನರಾವರ್ತಿಸುವ ಶಿಕ್ಷೆಗೆ ಒಳಪಡುತ್ತಾರೆ ಎಂದು ಹೇಳುತ್ತದೆ ಒಂದು ಆಂಗ್ಲ ನಾಣ್ಣುಡಿ. ಆದರೆ ಇತಿಹಾಸದಿಂದ ತಪ್ಪು ಪಾಠ ಕಲಿತವರು ಕೂಡ ಅದೇ ಶಿಕ್ಷೆ ಏಕೆ, ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಒಳಪಡುತ್ತಾರೆ ಎಂದು ನನಗೆ ಅನಿಸುತ್ತದೆ. ಈ ವಿಷಯದಲ್ಲಿ ನಮ್ಮ ಈ ಎರಡೂ ದೇಶಗಳು ಉತ್ತಮ ಉದಾಹರಣೆಗಳು. ಧಾರ್ಮಿಕ ವ್ಯತ್ಯಾಸವನ್ನು ಮುಂದಿಟ್ಟುಕೊಂಡು ನಮ್ಮಿಂದ ಬೇರ್ಪಟ್ಟ ಪಾಕಿಸ್ತಾನ ಇಂದಿಗೂ ಅದೇ ವಿಷಯದ ಮೇಲೆ ನಮ್ಮೊಂದಿಗೆ ಹಗೆ ಸಾಧಿಸುತ್ತಿದೆ.

ಚೀನದೊಂದಿಗೆ ಸೇರಿಕೊಂಡು ಕಾಶ್ಮೀರ ವಿಷಯವನ್ನು ನೆಪ ಮಾಡಿಕೊಂಡು ಕಾಲು ಕೆದರಿ ಜಗಳ ತೆಗೆಯುವುದು ಮತ್ತು ವಂಚನೆಯಿಂದ ಉಗ್ರಗಾಮಿ ಚಟುವಟಿಕೆ ನಡೆಸಿ ನಮ್ಮ ದೇಶದ ಪ್ರಜೆಗಳನ್ನು ಕೊಲ್ಲುವುದು ಅದರ ಹವ್ಯಾಸವಾಗಿ ಹೋಗಿದೆ. ವೈಯುಕ್ತಿಕವಾಗಿ ಪಾಕಿಸ್ತಾನೀಯರು ಒಳ್ಳೆಯವರೇ ಆಗಿರಬಹುದು. ಆದರೆ ಆ ಒಳ್ಳೆಯತನ ಅವರ ಮಿಲಿಟರಿ ಮತ್ತು ನಾಯಕರುಗಳಲ್ಲಿಲ್ಲ. ನಮ್ಮ ದೇಶಕ್ಕೆ ಅದೇ ನಾಯಕರುಗಳೊಂದಿಗೆ ವ್ಯವಹಾರ ಮಾಡಬೇಕಾಗುತ್ತದೆಯೇ ಹೊರತು ಅಲ್ಲಿನ ಸಾಮಾನ್ಯ ಜನರೊಂದಿಗೆ ಅಲ್ಲ. ಆದುದರಿಂದ ಈ ವಿಷಯದಲ್ಲಿ ತುಂಬಾ ಜಾಗರೂಕತೆಯಿಂದ ನಮ್ಮ ಆಡಳಿತ ಹೆಜ್ಜೆಯಿಡಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Why should India extend friendly hand to Pakistan, which has violated ceasefire along LoC again and again. Vasant Kulkarni from Singapore expresses his candid views and India and Pakistan relationship.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more