ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಕ್ ಸ್ವಾತಂತ್ರ್ಯ ನಮ್ಮ ದೇಶದ ಗೌರವಕ್ಕಿಂತ ಹೆಚ್ಚೆ?

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ನಮ್ಮ ದೇಶದಲ್ಲಿ ಒಬ್ಬ ವಿಚಾರವಾದಿ ಎಂದು ಎನ್ನಿಸಿಕೊಳ್ಳಬೇಕಾದರೆ ಯಾವುದೋ ಒಂದು ಮೃದು ಗುರಿ (Soft Target) ಒಂದನ್ನು ಗುರುತಿಸಿ ಅದರ ಬಗ್ಗೆ ಒಂದು ಕೆಟ್ಟ ಹೇಳಿಕೆ ನೀಡಿ ವಿವಾದವೊಂದನ್ನು ಸೃಷ್ಟಿಸಿ ಬಿಡಿ. ಸಾಕು!

ರಾತ್ರೋ ರಾತ್ರಿ ನೀವು ದೊಡ್ಡ ವಿಚಾರವಾದಿಯಾಗಿ ಗುರುತಿಸಲ್ಪಡುತ್ತೀರಿ. ದೇಶದ ಎಲ್ಲ ಪ್ರಮುಖ ಪತ್ರಿಕೆಗಳು ನಿಮ್ಮ ಹೇಳಿಕೆಯನ್ನು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಪ್ರಕಟಿಸಿಬಿಡುತ್ತವೆ. ದೇಶದ ಎಲ್ಲ ನ್ಯೂಸ್ ವಾಹಿನಿಗಳು ನಿಮ್ಮನ್ನು ತಮ್ಮ ಪ್ರೈಮ್ ಟೈಮ್ ನ್ಯೂಸ್‍ನಲ್ಲಿ ಚರ್ಚೆ ಮಾಡಲು ಆಹ್ವಾನ ನೀಡುತ್ತವೆ. ಯಾರಾದರೂ ನಿಮ್ಮ ಹೇಳಿಕೆಯನ್ನು ವಿರೋಧಿಸಿಬಿಟ್ಟರಂತೂ ಮುಗಿದೇ ಹೋಯಿತು! ನಿಮಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಖ್ಯಾತಿ(?)!

ಭಾಷಾ ಕಲಹದ ನಡುವೆ ಸೊರಗುತ್ತಿರುವ ಬೆಳಗಾವಿಭಾಷಾ ಕಲಹದ ನಡುವೆ ಸೊರಗುತ್ತಿರುವ ಬೆಳಗಾವಿ

ದೇಶದ ಮೂಲೆ ಮೂಲೆಗಳಿಂದ ವಿಚಾರ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯದ ಹರಿಕಾರರು ನಿಮ್ಮನ್ನು ವಿಚಾರವಾದದ ಜನಕರೆಂದೇ ಬಿಂಬಿಸಿ ದೊಡ್ದ ಮಟ್ಟಿನ ಪ್ರಚಾರ ನೀಡುತ್ತಾರೆ. ನಿಮ್ಮ ಹೋರಾಟವನ್ನು ಕುರಿತು ಅನೇಕ ಲೇಖನಗಳು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಆದರೆ ಇಲ್ಲಿ ಒಂದು ತಂತ್ರವಿದೆ. ನಿಮ್ಮ ಮೃದು ಗುರಿ ನಮ್ಮ ದೇಶದ ಸಂಸ್ಕೃತಿ, ಇತಿಹಾಸ, ದೇಶ ಪ್ರೇಮದ ವಿಚಾರಗಳು, ಸಂಪ್ರದಾಯಗಳು ಮತ್ತು ಪರಂಪರೆ ಇತ್ಯಾದಿಗಳನ್ನು ಕುರಿತು ಇರಬೇಕು!

Shortcut to become famous in India is very easy

ಅದರ ಬದಲು ನಮ್ಮ ದೇಶದ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಗಳನ್ನು ಕುರಿತು ಧನಾತ್ಮಕ ವಿಚಾರಗಳನ್ನು ನೀವೆಷ್ಟೇ ಸಂಶೋಧನೆಗಳನ್ನು ಮಾಡಿ ಪ್ರಕಟಿಸಿ, ನಿಮಗೆ ಎಳ್ಳಷ್ಟೂ ಪ್ರಚಾರ ಲಭಿಸುವುದಿಲ್ಲ. ಅದರ ಬದಲಿಗೆ ನೀವು ಕುಪ್ರಚಾರಕ್ಕೆ ಗುರಿಯಾಗುವ ಸಂಭವವೇ ಹೆಚ್ಚು.

ಅದೇಕೆ ಹೀಗೆ ಎಂದು ಯೋಚಿಸಿದ್ದೇನೆ. ಏಕೆ ನಮ್ಮ ದೇಶವನ್ನು ಕುರಿತು ಉಂಟಾಗುವ ಅಪಪ್ರಚಾರಕ್ಕೆ ಹೆಚ್ಚು ಪ್ರಚಾರ ದೊರಕುತ್ತದೆ? ನಮ್ಮ ವಾಕ್ ಸ್ವಾತಂತ್ರ್ಯ ನಮ್ಮ ದೇಶದ ಗೌರವಕ್ಕಿಂತ ಹೆಚ್ಚೇ? ಅದೇಕೆ ನಾವು ಕ್ಷುಲ್ಲಕ ಕಾರಣಗಳಿಗಾಗಿ ಅನೇಕ ವಿವಾದಗಳನ್ನು ಸೃಷ್ಟಿಸುತ್ತೇವೆ? ಅದೇಕೆ ಅನೇಕರು ತಾವು ದೊಡ್ಡ ವಿಚಾರವಾದಿಗಳೆಂದು ಬಿಂಬಿಸುತ್ತಲೇ ನಮ್ಮ ದೇಶದ ಜನತೆಯನ್ನು ಇನ್ನೂ ವಿಭಜಿಸಿ ಹೆಚ್ಚು ಹೆಚ್ಚಿನ ಒಡಕುಗಳನ್ನು ಸೃಷ್ಟಿಸುತ್ತಿದ್ದಾರೆ? ಅದೇಕೆ ನಮ್ಮ ಸಮಾಜದ ಒಡಕುಗಳನ್ನು ಮುಚ್ಚಿ ಹಾಕಿ ಎಲ್ಲ ಜನರನ್ನೂ ಒಂದಾಗಿಸುವಂತಹ ಪ್ರಯತ್ನಗಳು ನಡೆಯುತ್ತಿಲ್ಲ ಅಥವಾ ಅಂತಹ ಪ್ರಯತ್ನಗಳಿಗೆ ಬೆಂಬಲ ದೊರಕುತ್ತಿಲ್ಲ? ಪ್ರಶ್ನೆಗಳು ಹಲವಾರು! ಉತ್ತರಗಳು ಅಸ್ಪಷ್ಟ!

ಬ್ರಿಟಿಷರಿಗೆ ಭಾರತ ಕಳ್ಳರಿಗೆ ಕಂಡುಬಂದ ಖಜಾನೆ!ಬ್ರಿಟಿಷರಿಗೆ ಭಾರತ ಕಳ್ಳರಿಗೆ ಕಂಡುಬಂದ ಖಜಾನೆ!

ಮೊನ್ನೆ ನಮ್ಮ ದೇಶದಲ್ಲಿ ದೊಡ್ಡವರೊಬ್ಬರು ನಮ್ಮ ದೇಶದ ವರ್ಗವೊಂದನ್ನು ಕುರಿತು ತೀರ ಅವಹೇಳನಕಾರಿ ಮಾತುಗಳನ್ನು ಆಡಿದರು. ಈ ಕುರಿತು ನನಗೆ ಆಶ್ಚರ್ಯವೇನೂ ಆಗಲಿಲ್ಲ. ಆದರೆ ಎಂದಿನಂತೆ ಖೇದವಾಯಿತು ಅಷ್ಟೇ. ದೊಡ್ಡವರಾದವರು ಒಂದು ವರ್ಗದ ಬಗ್ಗೆ ಕ್ಷುಲ್ಲಕವಾಗಿ ಏಕೆ ಮಾತನಾಡಬೇಕು? ಐತಿಹಾಸಿಕ ತಪ್ಪುಗಳನ್ನು ಯಾವುದೋ ಒಂದು ವರ್ಗದ ಮೇಲೆ ಹಾಕಿ ಗೂಬೆ ಕೂರಿಸಿದರೆ ಅದರಿಂದ ಸಮಸ್ಯೆಯ ಪರಿಹಾರ ಆಗುತ್ತದೆಯೆ? ಅಷ್ಟಕ್ಕೂ ಅಂತಹ ತಪ್ಪುಗಳ ಕಾರಣಗಳ ಬಗ್ಗೆ ನಿಸ್ಪಕ್ಷಪಾತವಾದ ಸಂಶೋಧನೆ ನಮ್ಮ ದೇಶದಲ್ಲಿ ಆಗಿದೆಯೇ? ಆದರೆ ವಿವಾದಾತ್ಮಕ ಹೇಳಿಕೆ ಕೊಟ್ಟು ಯಾರು ಯಾರೋ ವಿಚಾರವಾದಿಗಳ ಪಟ್ಟ ಗಿಟ್ಟಿಸಿಕೊಳ್ಳುತ್ತಾರೆಂದರೆ, ಮೊದಲಿನಿಂದ ಇದೇ ಅಚ್ಚಿನಲ್ಲಿ ವಿಚಾರವಾದಿಗಳೆಂದು ಪ್ರಖ್ಯಾತರಾದವರು ಏನು ಬೇಕಾದರೂ ಹೇಳಬಹುದು ತಾನೇ? ಅವರಿಗೆ ಈ ವಿಷಯದಲ್ಲಿ ಅನಧಿಕೃತ ಲೈಸೆನ್ಸ್ ಸಿಕ್ಕಿರುತ್ತದೆ ಅಲ್ಲವೇ?

ಈ ವಿಚಾರದಲ್ಲಿ ನಮ್ಮ ದೇಶದ ಎಡ ಮತ್ತು ಬಲಪಂಥೀಯರಲ್ಲಿ "Holier than thou" ನಿಲುವು ಹೆಚ್ಚಾಗಿದೆ ಎಂದರೆ ತಪ್ಪೇನಿಲ್ಲ. ಎರಡೂ ಪಂಥದವರು ದೇಶದ ಕೆಟ್ಟ ಸಮಸ್ಯೆಗಳಿಗೆ ಒಬ್ಬರನ್ನೊಬ್ಬರು ತುಂಬಾ ತೀಕ್ಷ್ಣವಾಗಿ ದೂರುತ್ತಾರೆ. ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಯಾವುದೇ ಮಟ್ಟಕ್ಕೂ ಹೋಗುತ್ತಾರೆ. ಒಬ್ಬರ ಸ್ವಾತಂತ್ರ್ಯವನ್ನೊಬ್ಬರು ಕಟ್ಟಿ ಹಾಕಲು ಪ್ರಯತ್ನಿಸುತ್ತಾರೆ. ಹೀಗಾಗಿ ನಮ್ಮ ದೇಶದಲ್ಲಿ ತೀವ್ರ ಎಡ ಪಂಥಿಯೂ ಅಲ್ಲದ ಹಾಗೂ ತೀವ್ರ ಬಲ ಪಂಥಿಯೂ ಅಲ್ಲದ ಸಂತುಲಿತ, ಸಮಭಾವದ ವಿಚಾರಧಾರೆ ಸತ್ತು ಹೋಗುತ್ತಿದೆ ಎಂಬ ಅನಿಸಿಕೆ ತೀವ್ರವಾಗುತ್ತಿದೆ.

ಹೀಗಾಗಿ ಇತ್ತ ಬಲಪಂಥೀಯರಿಗೆ ಸಾಕ್ಷಿ ಮಹಾರಾಜ್‍ರವರ ತೀವ್ರವಾದಿ ಹೇಳಿಕೆಗಳು ಪ್ರಿಯವಾಗುತ್ತವೆಯೇ ಹೊರತು ಸ್ವಾಮಿ ವಿವೇಕಾನಂದರ ದೇಶವನ್ನು ಕಟ್ಟುವ ವಿಚಾರಗಳು ಪ್ರಿಯವಾಗುವುದಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರ ಸೌಮ್ಯವಾದ ತಿಳಿಯುವುದಿಲ್ಲ. ಅದರಂತೆಯೇ ಎಡಪಂಥೀಯ ತೀವ್ರವಾದಿಗಳಿಗೆ ಮಾವೋ ಉಗ್ರಗಾಮಿಗಳ ದೇಶವಿರೋಧಿ ಚಟುವಟಿಕೆಗಳು ಕೂಡ ಅಪ್ಯಾಯಮಾನ ಎನಿಸುತ್ತವೆ. ಅವರ ಬಗ್ಗೆ ಅನುಕಂಪ ಮೂಡುತ್ತವೆ. ಆದರೆ ರಾಮ ಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ ಮುಂತಾದವರ ಸಮಾಜವಾದಿ ವಿಚಾರಗಳು ಹಿನ್ನೆಲೆಗೆ ಸರಿಯುತ್ತವೆ.

ಸ್ವಾತಂತ್ರ್ಯ ವೀರರು ಕಂಡ ಕನಸಿನ ಭಾರತ ಇದೇನಾ?ಸ್ವಾತಂತ್ರ್ಯ ವೀರರು ಕಂಡ ಕನಸಿನ ಭಾರತ ಇದೇನಾ?

ಅದು ಹೇಗೆ ಈ ತೀವ್ರವಾದಿಗಳು ಇಷ್ಟೊಂದು ವಿಜೃಂಭಿಸುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತದೆ. ನಮ್ಮ ಮುಂದೆಯೇ ಅಣ್ಣಾ ಹಜಾರೆ, ಬಾಬಾ ಆಮ್ಟೆ, ವಿನೋಬಾ ಭಾವೆ ಮುಂತಾದ ಮಹನೀಯರು ಮಾಡಿದ ಕೆಲಸ ನೋಡಿದ್ದೇವೆ. ಅದು ಹೇಗೆ ಈ ಮಹಾತ್ಮರು ಸಮಾಜವನ್ನು ಒಂದುಗೂಡಿಸಲು ಪ್ರಯತ್ನಿಸಿದರು ಎಂಬುದರ ಉದಾಹರಣೆ ಇದೆ. ಅವರನ್ನು ನಾವು ಮರೆಯುತ್ತಿದ್ದೇವೆ. ಆದರೆ ದೇಶವನ್ನು ಒಡೆಯುತ್ತಿರುವ ಶಕ್ತಿಗಳಿಗೆ ನಮ್ಮಲ್ಲನೇಕರು ಬೆಂಬಲ ನೀಡುತ್ತಾರೆ. ಇತಿಹಾಸವನ್ನು ಮುಂದಿಟ್ಟುಕೊಂಡು ಇತಿಹಾಸ ಕಾಲದಲ್ಲಿ ಉಂಟಾದವು ಎಂದು ಹೇಳಲಾದ ತಪ್ಪುಗಳನ್ನು ಸರಿಪಡಿಸುವ ಬದಲು ಅದೇ ಇತಿಹಾಸವನ್ನು ಸಾಕ್ಷಿಯಾಗಿಟ್ಟುಕೊಂಡು ಒಬ್ಬರನ್ನೊಬ್ಬರು ತುಳಿಯಲು ಪ್ರಯತ್ನಿಸುತ್ತಾರೆ. ಇತಿಹಾಸದಿಂದ ಕಲಿಯಬೇಕೆ ಹೊರತು ಇತಿಹಾಸ ಕಾಲದ ತಪ್ಪುಗಳ ಪುನರಾವರ್ತನೆ ಮಾಡಬಾರದು ಅಲ್ಲವೇ?

ಇಂದು ನಮಗೆ ಬೇಕಾಗಿರುವುದು ಮಹಾತ್ಮಾ ಗಾಂಧಿ, ಗೋಪಾಲಕೃಷ್ಣ ಗೋಖಲೆ, ಸುಭಾಷಚಂದ್ರ ಬೋಸ್ ಮತ್ತು ಲೋಕಮಾನ್ಯ ಬಾಲಗಂಗಾಧರ ತಿಲಕರಂತಹವರ ಸಂತುಲಿತ ವಿಚಾರಧಾರೆ ಮತ್ತು ಅಷ್ಟೇ ಪ್ರಖರ ದೇಶಭಕ್ತಿ. ದೇಶದ ಜನರೆಲ್ಲರನ್ನು ಒಂದುಗೂಡಿಸಿ ದೇಶದ ಸರ್ವತೋಮುಖ ಬೆಳವಣಿಗೆಗೆ ಎಲ್ಲರನ್ನೂ ಪ್ರೇರೇಪಿಸುವ ಕೆಲಸದತ್ತ ಗಮನ ಕೊಡಬೇಕಾಗಿದೆ. ಈ ದಿಶೆಯಲ್ಲಿ ಇಂದು ಹರಡುತ್ತಿರುವ "ಒಡೆದು ಆಳು" ನೀತಿಯ ಹೊಸ ಕರಾಳ ಮುಖವನ್ನು ನಾವೆಲ್ಲರೂ ಗುರುತಿಸಬೇಕಾಗಿದೆ.

ದೇಶವನ್ನು ಒಗ್ಗೂಡಿಸುವ ಕೆಲಸ ಇಂದು ನಾಯಕರುಗಳೆನಿಸಿಕೊಂಡಿರುವವರಿಂದ ಆಗುತ್ತದೆಯೇ ಎನ್ನುವುದರ ಬಗ್ಗೆ ಸಂದೇಹ. ಇದಕ್ಕೆ ಜನಸಾಮಾನ್ಯರೇ ಮುಂದೆ ಬರಬೇಕು. ವಿಭಾಜಕ ಶಕ್ತಿಗಳ ವಿರುದ್ಧ ನಿರ್ಣಾಯಕ ನಿರ್ಧಾರ ಕೈಗೊಳ್ಳಬೇಕು. ಕ್ಷುಲ್ಲಕ ವಿವಾದಗಳನ್ನು ಸೃಷ್ಟಿಸಿ ದೇಶದ ಬೆಳವಣಿಗೆಯನ್ನು ಕುಂಠಿತಗೊಳಿಸುವ ಕುವಿಚಾರಗಳನ್ನು ತಿಪ್ಪೆಗೆಸೆದು, ಅವುಗಳನ್ನ ಸೃಷ್ಟಿಸುವವರನ್ನ ಸಂಪೂರ್ಣವಾಗಿ ನಿರ್ಲಕ್ಷಿಸಬೇಕು.

ತೀವ್ರವಾದ ಬಲಪಂಥೀಯ ವಿಚಾರಗಳು ರಾಷ್ಟ್ರಪ್ರೇಮವಲ್ಲ ಅಂತೆಯೇ ತೀವ್ರವಾದ ಎಡಪಂಥೀಯ ವಿಚಾರಗಳು ಕೂಡ ವಾಕ್ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಗಳನ್ನು ಪ್ರತಿನಿಧಿಸುವುದಿಲ್ಲ. ಯಾವುದೇ ವಿಧವಾದ ತೀವ್ರವಾದ ನಮ್ಮ ದೇಶದ ಸ್ಥಿತಿಯನ್ನು ಇನ್ನೂ ವಿಷಮಗೊಳಿಸುತ್ತದೆ. ಕೆಲವೇ ದಶಕಗಳ ಹಿಂದಿನ ದೇಶ ವಿಭಜನೆಯ ಕರುಣ ಕಥೆಯನ್ನು ನಾವೆಲ್ಲ ನೆನಪಿಸಿಕೊಂಡು ಮತ್ತೆಂದೂ ನಮ್ಮ ದೇಶ ಯಾವುದೇ ವಿಷಯಗಳಿಗಾಗಿ ಒಡೆಯದೇ ಇರುವುದನ್ನು ನೋಡಿಕೊಳ್ಳುವುದು ದೇಶದ ಸತ್ಪ್ರಜೆಗಳಾದ ನಮ್ಮ ಆದ್ಯ ಕರ್ತವ್ಯ.

English summary
What is the way to earn name and fame and to become intellectual overnight? Simply talk about negative things, lambast the people who are working for the development of the country. An article by Vasant Kulkarni, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X